Saturday, 27th July 2024

ಜೋಡೆತ್ತುಗಳಿಗೆ ಅಗ್ನಿಪರೀಕ್ಷೆ ದೂರವಿಲ್ಲ

ಅಳೆದೂ ತೂಗಿ ಕೊನೆಗೂ ಬಿಜೆಪಿ ಹೈಕಮಾಂಡ್ ವಿಧಾನಸಭೆ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಮಾಜಿ ಡಿಸಿಎಂ ಆರ್.ಅಶೋಕ ಅವರನ್ನು ಆಯ್ಕೆ ಮಾಡಿದೆ. ಅಶೋಕ್ ಆಯ್ಕೆಯ ಬಗ್ಗೆ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಅಸಮಾಧಾನವಿದ್ದರೂ ಅದು ದೊಡ್ಡಮಟ್ಟದಲ್ಲಿ ಪಕ್ಷವನ್ನು ದೊಡ್ಡದಾಗಿ ಬಾಧಿಸಲಾರದು. ಹೀಗಾಗಿ ಅಶೋಕ ಆಯ್ಕೆಗೆ ಬಹುತೇಕರ ಸಮ್ಮತಿ ದೊರೆದಂತಾಗಿದೆ.

ಪ್ರತಿಪಕ್ಷ ನಾಯಕನ ಸ್ಥಾನ ಎಂಬುದೊಂದು ಬಹುಮುಖ್ಯ ಸಾಂವಿಧಾನಿಕ ಸ್ಥಾನ. ಪ್ರತಿಪಕ್ಷ ನಾಯಕನ ಸ್ಥಾನವೂ ಮುಖ್ಯಮಂತ್ರಿ ಸ್ಥಾನದಷ್ಟೇ ಮುಖ್ಯವಾದುದು. ಮುಖ್ಯಮಂತ್ರಿಗೆ ಇರುವ ಸೌಲಭ್ಯಗಳೂ ಅವರಿಗಿವೆ. ಪ್ರತಿಪಕ್ಷದ ನಾಯಕನೇ ಖಡಕ್ ಇಲ್ಲದಿದ್ದರೆ ಪ್ರತಿಪಕ್ಷವನ್ನು ಮುನ್ನಡೆಸುವವರೇ ಇಲ್ಲದಂತಾಗಿ, ಆಡಳಿತ ಪಕ್ಷಕ್ಕೆ ಮೂಗುದಾರವೂ ಇಲ್ಲದಂತಾಗುತ್ತದೆ. ರಾಜಧಾನಿಯ ಹಾಗೂ ಬಲಿಷ್ಠ ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕರೂ ಆಗಿರುವ ಅಶೋಕ ಅವರು ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಒಂದು ಘನತೆ ಹಾಗೂ ಚುರುಕುತನ ತರಬಲ್ಲರು ಎಂಬ ವಿಶ್ವಾಸ ಬಿಜೆಪಿ ಕಾರ್ಯ ಕರ್ತರಲ್ಲಿ ಮೂಡಿದೆ.

ಇಡೀ ಆಡಳಿತ ಪಕ್ಷದ ಕಾರ್ಯವೈಖರಿಯ ಮೇಲೆ ನಿಗಾ ಇಡುವುದು, ಅದು ತಪ್ಪಿದಾಗ ಅದನ್ನು ಟೀಕಿಸಿ ಎಚ್ಚರಿಸುವುದು, ಸದನದ ಒಳಗೂ ಹೊರಗೂ ಅದರ ಹಗರಣಗಳನ್ನು ಬಯಲಿಗೆ ಎಳೆಯುವುದು, ಅದಕ್ಕೆ ತನ್ನ ಪಕ್ಷದ ಶಾಸಕರನ್ನು ಸಜ್ಜುಗೊಳಿಸುವುದು ಇವೆಲ್ಲ ಪ್ರತಿಪಕ್ಷ ನಾಯಕನಿಗೆ ಮುಖ್ಯ. ಅದಕ್ಕಾಗಿ ಸಂಘಟನಾ
ಚಾತುರ್ಯ, ನಾಯಕತ್ವ ಗುಣದೊಂದಿಗೆ ಕಲಾಪಗಳಲ್ಲಿ ಮಾತನಾಡುವ ಚಾಕಚಕ್ಯತೆ ಹಾಗೂ ಮುತ್ಸದ್ಧಿತನವೂ ಬೇಕಾಗುತ್ತದೆ. ಆ ಎಲ್ಲ ಗುಣಗಳೂ ಅಶೋಕ ಅವರಲ್ಲಿದೆ. ಚುನಾವಣಾ ಸೋಲಿನ ಬಳಿಕ ಮಂಕಾದ ಬಿಜೆಪಿ ಬಿಜೆಪಿ ಕಾರ್ಯಕರ್ತರು, ಮಾಜಿ ಶಾಸಕರು ಮತ್ತು ಶಾಸಕರನ್ನು ಚೇತರಿಸಿಕೊಳ್ಳುವಂತೆ ಮಾಡುವ ಜವಾಬ್ದಾರಿ ಕೂಡ ಅಶೋಕ ಮೇಲಿದೆ.

ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಅಶೋಕ ಮತ್ತು ಬಿ.ವೈ.ವಿಜಯೇಂದ್ರ ಅವರಿಗೆ ಇನ್ನು ಬಹಳ ಸಮಯವೂ ಇಲ್ಲ. ನಾಲ್ಕಾರು ತಿಂಗಳು ಕಳೆಯುವುದರೊಳಗಾಗಿ ಲೋಕಸಭೆ ಚುನಾವಣೆ ನಡೆಯಲಿದ್ದು, ರಾಜ್ಯದಲ್ಲಿ ಕಳೆದ ಬಾರಿ ಗೆದ್ದ ಕ್ಷೇತ್ರಗಳಷ್ಟನ್ನಾದರೂ ಉಳಿಸಿಕೊಳ್ಳಲೇ ಬೇಕಿದೆ. ಹೀಗಾಗಿ ವಿಧಾನಸಭೆ ಪ್ರತಿಪಕ್ಷದ ನೇಮಕದ ಸಂಭ್ರಮದಲ್ಲೇ ಕಾಲ ಕಳೆಯುವುದರ ಬದಲು ಇಂದಿನಿಂದಲೇ ಅಶೋಕ ಮತ್ತು ವಿಜಯೇಂದ್ರ ಅವರು ಜೋಡೆತ್ತುಗಳಂತೆ ರಾಜ್ಯಾದ್ಯಂತ ಸುತ್ತಬೇಕಿದೆ.

Leave a Reply

Your email address will not be published. Required fields are marked *

error: Content is protected !!