Saturday, 27th July 2024

ಕಡಿವಾಣವಿಲ್ಲದ ಹುಚ್ಚು ಕುದುರೆಗಳು!

‘ಅಂಕುಶವಿಲ್ಲದ ಆನೆ, ಲಗಾಮು ಇಲ್ಲದ ಕುದುರೆ, ಹೆಂಡ ಕುಡಿದು ಚೇಳಿನಿಂದ ಕುಟುಕಿಸಿಕೊಂಡ ಕೋತಿ ಇವನ್ನು ಹಿಡಿಯುವುದು ಕಷ್ಟ’ ಎಂಬುದೊಂದು ಮಾತಿದೆ.

ಹಿರಿಯರ ಅಂಕೆಯಿಲ್ಲದೆ ಬೇಕಾಬಿಟ್ಟಿಯಾಗಿ ಹೆಜ್ಜೆಹಾಕುತ್ತಿರುವ ಇಂದಿನ ಕೆಲ ಯುವಜನರ ಧೋರಣೆ-ಧಾರ್ಷ್ಟ್ಯಗಳನ್ನು ನೋಡಿದಾಗೆಲ್ಲ ಈ ಮಾತು ನೆನಪಾಗುತ್ತದೆ. ಇದಕ್ಕೆ ಕಾರಣವಾಗಿದ್ದು ಮಾಹಿತಿ ತಂತ್ರಜ್ಞಾನ ನಗರಿ ಬೆಂಗಳೂರಿನಲ್ಲಿ ವರದಿಯಾಗಿರುವ ಒಂದು ಬೆಚ್ಚಿಬೀಳಿಸುವ ಪ್ರಕರಣ. ಇದು ಇಬ್ಬರು ಉದ್ಯೋಗಸ್ಥ ಯುವಪ್ರೇಮಿಗಳ ಕುರಿತಾದದ್ದು. ಪ್ರಿಯತಮನು ತನ್ನೊಂದಿಗೆ ಏಕಾಂತದ ಕ್ಷಣಗಳಲ್ಲಿದ್ದಾಗ ಸೆರೆಹಿಡಿದು ಇಟ್ಟುಕೊಂಡಿದ್ದ
ಛಾಯಾಚಿತ್ರ ಮತ್ತು ವಿಡಿಯೋಗಳನ್ನು ಆತನ ಮೊಬೈಲ್‌ನಿಂದ ಡಿಲೀಟ್ ಮಾಡಲು ಯತ್ನಿಸಿದ ಆತನ ಪ್ರೇಯಸಿಗೆ ಬರೋಬ್ಬರಿ ೧೩,೦೦೦ ಹುಡುಗಿ ಯರ ನಗ್ನಚಿತ್ರಗಳು ಅದರಲ್ಲಿ ಸಂಗ್ರಹವಾಗಿದ್ದು ಕಂಡು ಗಾಬರಿಯಾದ ನಿದರ್ಶನವಿದು. ಶೃಂಗಾರಕ್ಕೂ ಅಶ್ಲೀಲತೆಗೂ ನಡುವಿನ ವ್ಯತ್ಯಾಸ ಗೊತ್ತಿಲ್ಲದ ವಿಕ್ಷಿಪ್ತ ಮನಸ್ಸುಗಳು ತಲುಪಬಹುದಾದ ವಿಕೃತಿಯ ಪರಮಾವಧಿಯಿದು.

ಈ ಚಿತ್ರಸಂಗ್ರಹದಲ್ಲಿ, ಅವರಿಬ್ಬರೂ ಕಾರ್ಯನಿರ್ವಹಿಸುತ್ತಿದ್ದ ಸಂಸ್ಥೆಯ ಇನ್ನೂ ಕೆಲ ಹೆಣ್ಣುಮಕ್ಕಳ ಚಿತ್ರಗಳಿದ್ದವು ಎಂಬ ಮಾಹಿತಿ ಹೊರ ಬಿದ್ದಿರುವುದು ನೋಡಿದರೆ, ಆ ಯುವಕನಿಗೆ ಇದ್ದ ಉದ್ದೇಶವಾದರೂ ಏನಿರಬಹುದು ಎಂದು ತಲ್ಲಣಗೊಳ್ಳುವಂತಾಗುತ್ತದೆ. ಕಳೆದ ಕೆಲ ದಿನಗಳಿಂದ ಡೀಪ್ ಫೇಕ್ ಎಂಬ ತಂತ್ರಜ್ಞಾನದಿಂದ ಆಗಿರುವ ಎಡವಟ್ಟುಗಳನ್ನು ಬಿಡಿಸಿ ಹೇಳಬೇಕಿಲ್ಲ. ಹೀಗಾಗಿ, ಯಾರದ್ದೋ ದೇಹಕ್ಕೆ ಮತ್ಯಾರದ್ದೋ ಮುಖವನ್ನು ಹುದುಗಿಸಿ ಅಂತರ್ಜಾಲದಲ್ಲಿ ಹರಿಯಬಿಡುವ, ಬ್ಲ್ಯಾಕ್‌ಮೇಲ್ ಮಾಡುವ ಕುತ್ಸಿತ ಚಿಂತನೆ ಆ ಯುವಕನಿಗೆ ಏನಾದರೂ ಇತ್ತೇ? ಅಥವಾ ಆತ ಅಂಥ ಕಾರ್ಯಜಾಲದ ಭಾಗವಾಗಿರುವ ಸಾಧ್ಯತೆ ಇದೆಯೇ? ಎಂಬೆಲ್ಲಾ ಆಯಾಮಗಳ ಕಡೆಗೆ ತನಿಖಾ ಕಾರ್ಯವು ಒತ್ತುನೀಡಬೇಕಿದೆ.

ಹಿಂದೆ ಇದ್ದಂತೆ, ಶಾಲಾ ಕಾಲೇಜುಗಳಲ್ಲಿ ನೈತಿಕ ಶಿಕ್ಷಣಕ್ಕೆ ಹೆಚ್ಚಿನ ಒತ್ತುನೀಡಬೇಕು ಎಂಬ ದನಿ ದಿನಗಳೆದಂತೆ ತೀವ್ರವಾಗುತ್ತಿದೆ. ಮೇಲೆ ಉಲ್ಲೇಖಿ ಸಿರುವಂಥ ವಿಕೃತ ಘಟನೆಗಳು ಗಮನಕ್ಕೆ ಬಂದಾಗಲೆಲ್ಲ ಮನೆಯಲ್ಲಿನ ಹಿರಿಯರ ಅಂಕೆ ಮತ್ತು ನೈತಿಕ ಶಿಕ್ಷಣ ಅದೆಷ್ಟು ಅನಿವಾರ್ಯ ಎನಿಸುತ್ತದೆ. ಆದರೆ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟೋರ‍್ಯಾರು?

Leave a Reply

Your email address will not be published. Required fields are marked *

error: Content is protected !!