Sunday, 16th June 2024

ಹಸಿರು ಬರದ ಕುರಿತು ಮನವರಿಕೆ ಮಾಡಿ

ರಾಜ್ಯದಲ್ಲಿ ನೈರುತ್ಯ ಮುಂಗಾರು ಅವಧಿಯಲ್ಲಿ ಈ ವರ್ಷ ಶೇ.೨೫ರಷ್ಟು ಮಳೆ ಕೊರತೆಯಾಗಿದೆ. ಜೂನ್ ೧ರಿಂದ ಸೆಪ್ಟೆಂಬರ್
೩೦ ರವರೆಗಿನ ನಾಲ್ಕು ತಿಂಗಳಲ್ಲಿ ಒಟ್ಟು ೮೪೫ ಮಿ.ಮೀ ಮಳೆ ಸುರಿಯಬೇಕಿತ್ತು. ಆದರೆ, ೬೩೫ ಮಿ.ಮೀ ಅಷ್ಟೇ ಮಳೆಯಾಗಿದೆ. ಒಟ್ಟು ೨೩ ಜಿಲ್ಲೆಗಳಲ್ಲಿ ಮಳೆಯ ತೀವ್ರ ಅಭಾವ ಸೃಷ್ಟಿಯಾಗಿದೆ. ೪೦ ಲಕ್ಷ ಹೆಕ್ಟೇರ್‌ನಲ್ಲಿ ಬೆಳೆದ ಶೇ.೫೦ರಷ್ಟು ಬೆಳೆ ಹಾನಿಯಾಗಿದೆ.

ಅಂದರೆ ಸುಮಾರು ?೨೮ ಸಾವಿರ ಕೋಟಿ ಮೌಲ್ಯದ ಬೆಳೆ ಹಾನಿಯಾಗಿದೆ. ಆದರೂ ರಾಜ್ಯದ ಬಹುಭಾಗಗಳಲ್ಲಿ ಹಸಿರು ಹೊದಿಕೆ ಕಾಣುತ್ತಿದೆ. ಬೆಳೆ ಒಣಗಿಲ್ಲವಾದರೂ ಸಕಾಲಕ್ಕೆ ಮಳೆಯಾಗದೆ ಫಲ ಕಟ್ಟಿಲ್ಲ. ಫಸಲಿದೆ ಫಲವಿಲ್ಲ ಎಂಬ ವಿಚಿತ್ರ ಸನ್ನಿವೇಶ ಎದುರಾಗಿದೆ.

ಅ.೧೦ರೊಳಗೆ ಕೇಂದ್ರದ ನಿಯೋಗ ರಾಜ್ಯಕ್ಕೆ ಭೇಟಿ ನೀಡಲಿದೆ. ಬರ ಪರಿಹಾರ ಕೋರಿಕೆ ಪರಿಗಣಿಸುವ ಹಂತದಲ್ಲಿ ಶುಷ್ಕ ವಾತಾವರಣವನ್ನು ಪರಿಗಣಿಸಲಿದ್ದು, ಉಪಗ್ರಹ ಚಿತ್ರ ಗಳನ್ನು (ಸ್ಯಾಟಲೈಟ್ ಇಮೇಜ) ಪರಿಶೀಲಿಸಲಿದೆ. ಬೆಳೆ ಫಲ ಕಟ್ಟಲು ಬೇಕಾದ ನಿರಂತರ ಮಳೆಗಾಲದ ಬದಲಿಗೆ ಅಕಾಲಿಕವಾಗಿ ಬಂದ ಮಳೆಯಿಂದ ಭೂಮಿಯಲ್ಲಿ ತೇವಾಂಶ ವಿದ್ದು, ಸ್ಯಾಟಲೈಟ್ ಇಮೇಜ್‌ನಲ್ಲಿ ಹಸಿರು ಹೊದಿಕೆ ಸ್ಪಷ್ಟವಾಗಲಿದೆ. ಈ ಹಸಿರು ಬರವು ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ ನೆರವು ಪಡೆಯುವ ರಾಜ್ಯದ ಪ್ರಯತ್ನಕ್ಕೆ ಅಡ್ಡಿಯಾಗುವ ಆತಂಕ ಎದುರಾಗುವ ಸಾಧ್ಯತೆ ಇದೆ.

ರಾಜ್ಯದ ಪರಿಹಾರ ಕೋರಿಕೆ ಮನವಿ ಆಧರಿಸಿ ಅಧ್ಯಯನಕ್ಕಾಗಿ ಆಗಮಿಸುವ ಕೇಂದ್ರ ಅಧಿಕಾರಿಗಳ ತಂಡಕ್ಕೆ ಈ ವೈಜ್ಞಾನಿಕ ಮಾಹಿತಿಯನ್ನು ಒದಗಿಸಬೇಕಿದೆ. ಇಲ್ಲವಾದಲ್ಲಿ ಬೆಳೆ ಕಳೆದುಕೊಂಡಿರುವ ರೈತರಿಗೆ ಪರಿಹಾರ ಹಂಚುವುದು ಸಾಧ್ಯವಾಗುವುದಿಲ್ಲ. ರಾಜ್ಯ ಬಿಜೆಪಿ ಮುಖಂಡರು ಕೂಡ ಕೇಂದ್ರಕ್ಕೆ ರಾಜ್ಯದ ಪರಿಸ್ಥಿತಿ ಮನವರಿಕೆ ಮಾಡಿಕೊಡುವಲ್ಲಿ ರಾಜ್ಯ ಸರಕಾರಕ್ಕೆ ಬೆಂಬಲವಾಗಿ
ನಿಲ್ಲಬೇಕು. ಕರ್ನಾಟಕದಲ್ಲಿ ತಮ್ಮ ಸರಕಾರವಿಲ್ಲ ಎಂದು ಕೇಂದ್ರದ ಬಿಜೆಪಿ ಸರಕಾರ ಅನುದಾನ ಒದಗಿಸುವಲ್ಲಿ ಪಕ್ಷಪಾತ ನೀತಿ ಅನುಸರಿಸಬಾರದು.

ಅದೇ ರೀತಿ ಬಿಜೆಪಿ ಶಾಸಕರಿರುವ ಕ್ಷೇತ್ರಗಳಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲು ರಾಜ್ಯ ಸರಕಾರ ವಿಳಂಬ ಮಾಡಬಾರದು. ಪರಸ್ಪರ ಸಹಕರಿಸಿ ಜನತೆಯನ್ನು ಬರದ ಬವಣೆಯಿಂದ ಪಾರು ಮಾಡಬೇಕು.

Leave a Reply

Your email address will not be published. Required fields are marked *

error: Content is protected !!