Friday, 20th September 2024

ಪಿತೃಗಳಿಗೆ ಮೀಸಲಿಡುವ ಪಕ್ಷವೇ ಪಿತೃಪಕ್ಷ

 ಸಕಾಲಿಕ

ಶ್ರೀಗಣೇಶ ಭಟ್ಟ ಸಂಸ್ಕೃತ ಉಪನ್ಯಾಸಕರು

ನಮ್ಮ ಹಿಂದೂ ಧಾರ್ಮಿಕ ನಂಬಿಕೆಯ ಪ್ರಕಾರ ಈ ಮಾನವ ಶರೀರವು ಸ್ಥೂಲಶರೀರ,ಸೂಕ್ಷ್ಮ ಶರೀರ,ಹಾಗೂ ಕಾರಣಶರೀರ ಎಂಬ ಮೂರುಸ್ತರಗಳನ್ನು ಹೊಂದಿದೆ. ವ್ಯಕ್ತಿಯ ಹೊರನೋಟಕ್ಕೆ ಕಾಣುವ ಶರೀರವೇ ಸ್ಥೂಲ ಶರೀರ.

ಸೂಕ್ಷ್ಮ ಶರೀರವು ವ್ಯಕ್ತಿಯ ಒಳ ಶರೀರವಾಗಿದ್ದು, ಈ ಸೂಕ್ಷ್ಮ ಶರೀರವು ಪಂಚಕರ್ಮೇಂದ್ರಿಯ, ಪಂಚ ಜ್ಞಾನೇಂದಿಯ, ಪಂಚ ಪ್ರಾಣೇಂದ್ರಿಯ, ಪಂಚ ಮಹಾಭೂತಗಳ ಸತ್ತ್ವ, ಅಂತಃಕರಣ ಚತುಷ್ಟಯಗಳಾದ ಮನೋ, ಬುದ್ಧಿ, ಚಿತ್ತ, ಅಹಂಕಾರ ಹಾಗೂ
ಅವಿದ್ಯೆೆ, ಕಾಮ, ಕರ್ಮಗಳನ್ನು ಒಳಗೊಂಡಿರುವುದು.

ಇದರೊಳಗೆ ಕಾರಣ ಶರೀರವು ಇರುವುದು. ಈ ಕಾರಣ ಶರೀರವು ಸತ್ತ್ವ, ರಜ, ತಮ ಎಂಬ ಮೂರು ಗುಣಗಳನ್ನು ಒಳಗೊಂಡಿರು ತ್ತದೆ. ಇದೇ ಆತ್ಮನ ನೆಲೆಯಾಗಿರುವುದು. ಆತ್ಮವು ಸೂಕ್ಷ್ಮ ಮತ್ತು ಕಾರಣ  ಶರೀರದೊಂದಿಗೆ ಈ ಸ್ಥೂಲ ಶರೀರವನ್ನು ಬಿಟ್ಟು ತೆರಳುವುದೆ ಮರಣ. ಸ್ಥೂಲ ಶರೀರ ಬಿಟ್ಟ ಮೇಲೆ ಸೂಕ್ಷ್ಮ ಮತ್ತು ಕಾರಣ ಶರೀರ ಹೊಂದಿದ ಆತ್ಮವು ವಾಯವೀಯ ಅಥವಾ ಇಚ್ಛಾಮಯವಾಗಿರುವುದು ಹಾಗೂ ಮೋಕ್ಷದ ತನಕ ಶರೀರವನ್ನು ಬದಲಿಸುತ್ತಾ ಸಾಗುವುದು. ಮೋಕ್ಷದತ್ತ ಸಾಗುವ ಈ ಪಯಣ ದಲ್ಲಿ ತನ್ನ ಹಿಂದಿನ ಕರ್ಮಾನುಸಾರ ಸ್ವರ್ಗಾದಿ ಉಚ್ಛಗತಿ ಅಥವಾ ನರಕಾದಿ ಅಧೋಗತಿಗಳಲ್ಲಿ ಸುಖ-ದುಃಖ- ಭೋಗಗಳನ್ನು ಅನುಭವಿಸಿ,ಪುನಃ ಜನ್ಮ ತಳೆಯುವುದು.

ಹಾಗೆ ಜನ್ಮತಳೆಯವಾಗ, ಜೀವವು ತನಗೆ ಅನುಕೂಲ ಶರೀರವನ್ನು ಹುಡುಕುವುದು. ಅಲ್ಲಿಯ ತನಕ ಅದು ಪಿತೃಲೋಕದಲ್ಲಿ
ವಾಸಿಸುವುದು. ದೇವ-ಪಿತೃ-ಋಷಿ ಮುಂತಾದ ಸೂಕ್ಷ್ಮಶರೀ ರಧಾರಿಗಳಿಗೆ ಆಶೀರ್ವಾದ-ಶಾಪ ನೀಡುವ ಅಸೀಮ -ಅನೂಹ್ಯ ಕ್ಷಮತೆ ಇರುವುದು. ಆದರೆ ಇವರೆಲ್ಲಾ ಸ್ಥೂಲ ಶರೀರಧಾರಿಗಳು ನೀಡುವ ಅರ್ಪಣ- ತರ್ಪಣಗಳನ್ನು ಅವಲಂಬಿಸಿದ್ದಾರೆ.

ದೇವತೆಗಳು ಎಲ್ಲರಿಗೆ ಸಂಬಂಧಿಸಿವೆ. ಆದರೆ ನಮ್ಮ ವಂಶದ ಹಿತಸಾಧಕರಾದ ಪಿತೃಗಳು ನಮ್ಮ ಕುಟುಂಬಕ್ಕೆ ಮಾತ್ರ ಸಂಬಂಧಿ ಸಿದವುಗಳಾಗಿವೆ. ದೇವತೆಗಳನ್ನು ತೃಪ್ತಿಪಡಿಸಲು ಪೂಜೆ-ಪುನಸ್ಕಾರ ಮುಂತಾದ ದೇವತಾರಾಧನೆ ಮಾಡಿದರೆ, ಪಿತೃಗಳನ್ನು ತೃಪ್ತಿಪಡಿಸಲು ಶ್ರಾದ್ಧವನ್ನು ಮಾಡಲಾಗುತ್ತದೆ. ಗತಿಸಿದ ಪಿತೃಗಳನ್ನು ಉದ್ದೇಶಿಸಿ ಪಿಂಡದಾನ, ತಿಲತರ್ಪಣ, ಯಸಬಲಿಗಳನ್ನು ಶ್ರದ್ಧೆೆಯಿಂದ ಅರ್ಪಿಸುವುದಕ್ಕೆ ಶ್ರಾದ್ಧವೆಂದು ಹೆಸರು.

ನಮ್ಮ ಪರಂಪರೆಯಲ್ಲಿ ಭಾದ್ರಪದ ಕೃಷ್ಣಪಕ್ಷದ ಪಾಡ್ಯದಿಂದ ಮಹಾಲಯ ಅಮಾವಾಸ್ಯೆಯ ತನಕ ಒಟ್ಟು ಹದಿನೈದು ದಿನಗಳು
ಪಿತೃಗಳನ್ನು ತೃಪ್ತಿಪಡಿಸುವುದಕೋಸ್ಕರ ಮೀಸಲು. ಇದನ್ನೇ ಪಿತೃಪಕ್ಷ ಎಂದು ಆಚರಿಸುತ್ತಾ ಬಂದಿದ್ದೇವೆ. ಈ ದಿನಗಳಲ್ಲಿ ವಿಶೇಷ ದೇವತಾರಾಧನೆ ನಿಷಿದ್ಧ. ಒಂದು ವೇಳೆ ದೇವತಾರಧನೆ ಅನಿವಾರ್ಯ ಕಾರಣಗಳಿಂದ ಮಾಡಲಾಗದೆ ಇದ್ದರೆ, ಅಷ್ಟೇನೂ
ಅಪರಾಧವಲ್ಲ. ಆದರೆ ಪಿತೃಗಳ ಆರಾಧನೆ ಮಾಡಲೇಬೇಕು ಎಂದು ನಮ್ಮ ಸಂಪ್ರದಾಯಗಳು ದೇವತಾನಾಂಚ ದೇವತಮ್ ದೇವತೆಗಳಿಗಿಂತ ಪಿತೃಗಳಿಗೆ ಉಚ್ಚ ಸ್ಥಾನ-ಮಾನ ನೀಡಿವೆ.

ಬದುಕಿರುವ ಹಿರಿಯ ವ್ಯಕ್ತಿಯ ಮರಣಹೊಂದಿದ ತಂದೆ-ಅಜ್ಜ-ಮುತ್ತಜ್ಜ ಹಾಗೂ ತಾಯಿ-ಅಜ್ಜಿ- ಮುತ್ತಜಿಯರನ್ನು ಉದ್ದೇಶಿಸಿ ವರ್ಷ ವರ್ಷ ಆ ದಿನಗಳಂದು ಶ್ರಾದ್ಧಮಾಡಿದಾಗಿಯೂ ಪಿತೃಪಕ್ಷದಲ್ಲಿ ಮತ್ತೆ ಅವರನ್ನು ಉದ್ದೇಶಿಸಿ ತರ್ಪಣಾದಿಗಳನ್ನು
ನೀಡುವ ಉದ್ದೇಶವೇನು? ಎನ್ನುವ ಕುತೂಹಲ ಕೆಲವರಲ್ಲಿದೆ. ನಮ್ಮನ್ನು ಅಗಲಿದ ತಂದೆ-ತಾಯಿ.

ಅಣ್ಣ-ತಮ್ಮಂದಿರು, ಗುರು-ಹಿರಿಯರು, ಸ್ನೇಹಿತ ಹೀಗೆ ನಮ್ಮ ಜೀವನದಲ್ಲಿ ಪ್ರತ್ಯಕ್ಷ-ಪರೋಕ್ಷವಾಗಿ ಸಹಾಯ ಮಾಡಿದವರನ್ನು ದಿನನಿತ್ಯವೂ ಸ್ಮರಿಸಲಾಗುವುದಿಲ್ಲ. ಅದಕ್ಕೊಸ್ಕರ ಪಿತೃಪಕ್ಷದಲ್ಲಿ ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸುವ ಭಾಗವಾಗಿ ಪಿತೃಗಣಗಳ
ಆರಾಧನೆ ನಡೆಯುವುದು. ಪಿತೃಪಕ್ಷದಲ್ಲಿ ಪಿತೃಗಣವೇ ಭೂಮಿಗೆ ಬರುವುದು. ತಮ್ಮವರ ಸಮೀಪಕ್ಕೆ ಬಂದ ಅವು, ತಮ್ಮವರಿಂದ ಪಿಂಡದಾನ-ತರ್ಪಣ ಮುಂತಾದವುಗಳನ್ನು ಬಯಸುವರು ಎಂದು ಶ್ರಾದ್ಧಪ್ರಕಾಶವೇ ಮೊದಲಾದ ಗಂಥಗಳು ತಿಳಿಸಿವೆ.
ಆಷಾಢ್ಯಾ: ಪಂಚಮೇ ಪಕ್ಷೆ ಕನ್ಯಾಸಂಸ್ಥೆೆ ದಿವಾಕರೇ ಮೃತಾಹನಿ ಪಿತುರ್ಯೋ ವೈ ಶ್ರಾದ್ಧಂ ದಾಸ್ಯತಿ ಮಾನವಾಃ ತಸ್ಯ ಸಂವತ್ಸರಂ ಯಾವತ್ ಸಂತೃಪ್ತಾಾಃ ಪಿತರೋ ಧ್ರುವಮ್‌॥ (ನಿರ್ಣಯಸಿಂಧು) ನಮ್ಮ ಈ ಜನ್ಮಕ್ಕೆೆ ಕಾರಣರಾದ ಪಿತೃಗಳಿಗೆ ಕೃತಜ್ಞತೆ ಸಲ್ಲಿಸುವ ಭಾಗವಾಗಿ ನಿತ್ಯ-ನೈಮಿತ್ತಿಕ-ವಿಶೇಷಶ್ರಾದ್ಧವನ್ನು ಆಚರಿಸುವ ನಾವು ಕಾಂಕ್ಷಂತಿ ಕ್ಲಿಷ್ಟಾ ಅನ್ನಮಪ್ಯನ್ವಹಂ ಜಲಮ್‌ಎನ್ನುವಂತೆ ಈ ಪಿತೃಪಕ್ಷದಲ್ಲಿ ಪಿತೃಗಳು ತಮ್ಮವರಿಂದ ಪಿಂಡ- ತಿಲೋದಕಗಳನ್ನು ನಿರೀಕ್ಷಿಸುವರು.

ಯಾರು ಶೃದ್ಧೆಯಿಂದ ಪಿತೃಗಣವನ್ನು ಆರಾಧಿಸುತ್ತಾರೋ, ಅದರಿಂದ ಪಿತೃಗಣವು ಒಂದುವರ್ಷ ತೃಪ್ತಿಹೊಂದಿ ಆಯುಷ್ಯ, ಸಂತಾನ, ಸಂಪತ್ತು, ವಿದ್ಯೆೆ, ಸುಖ-ಭೋಗಗಳನ್ನು ಹರಸುವರು. ಮೃತಹೊಂದಿದ ತಮ್ಮ ತಂದೆತಾಯಿಯ ಶ್ರಾದ್ಧವನ್ನು ಹೆಣ್ಣುಮಕ್ಕಳೂ, ಮಕ್ಕಳಿಲ್ಲದ ವಿಧವೆ ತನ್ನ ಪತಿಯ ಶ್ರಾದ್ಧವನ್ನು ಹಾಗೂ ಎಲ್ಲಾ ನಾಲ್ಕು ವರ್ಣದವರಿಗೂ ಆ ದಿನಗಳಂದು ಶ್ರಾದ್ಧವನ್ನು ಮಾಡಲು,ಪಿತೃಪಕ್ಷದಲ್ಲಿ ತರ್ಪಣಾದಿಗಳನ್ನು ಮಾಡಲು ನಿರ್ಣಯ ಸಿಂಧು, ವರಾಹಪುರಾಣ ಮುಂತಾದ ಗ್ರಂಥಗಳಲ್ಲಿ ಹೇಳಿದೆ. ಪಿತೃಪಕ್ಷದ ಈ ದಿನಗಳಲ್ಲಿ ಎನೂ ಇಲ್ಲದ ಶ್ರಾದ್ಧಮಾಡಲು ಅಶಕ್ಯನಾದ ಬಡವನೂ ಸಹ ನದಿ-ಜಲಾಶಯ-ಸವ ುುದ್ರ-ತೀರ್ಥಕ್ಷೇತ್ರಗಳಿಗೆ ತೆರಳಿ, ಶೃದ್ಧೆೆಯಿಂದ ಪಿತೃಗಳನ್ನು ಉದ್ದೇಶಿಸಿ,ಒಂದು ಹನಿ ನೀರು ನೀಡಿದರೂ ಪಿತೃಗಳು ಆಶೀರ್ವದಿಸುವರು.

ಪಿತೃಪಕ್ಷದ ಈ ದಿನಗಳಲ್ಲಿ ಪ್ರಯಾಣದಲ್ಲಿರುವನು, ವನ-ಪರ್ವತ ಪ್ರದೇಶಗಳಲ್ಲಿ ಸಾಧನಶೀಲನಾದವನು ಅಥವಾ ಬೇರೆ ಅನಿವಾರ್ಯ ಕಾರಣದಿಂದ ಮಾಡಲು ಅಶಕ್ಯನಾದವನು, ಶ್ರದ್ಧೆೆಯಿಂದ ಪಿತೃಗಳನ್ನು ನೆನೆದು, ತನ್ನೆೆರೆಡೂ ಕೈಗಳನ್ನು ಮೇಲಕ್ಕೆತ್ತಿ ತನ್ನ ಅಸಹಾಯಕ ಸ್ಥಿತಿಯನ್ನು ಹೇಳಿಕೊಂಡು, ಭಕ್ತಿ-ಶೃದ್ಧೆೆಯನ್ನು ಸಮರ್ಪಿಸಿಕೊಂಡರೂ ಸಾಕು, ಅದರಿಂದಲೇ ಪಿತೃಗಳು ಪ್ರಸನ್ನರಾಗಿ ಆಶೀರ್ವದಿಸುವರು.

ಈ ದಿನಗಳಲ್ಲಿ ಗಯಾ-ಕಾಶಿ-ಪ್ರಯಾಗ-ಬದರಿ -ರಾಮೇಶ್ವರ-ಗೋಕರ್ಣಮುಂತಾದ ಕಡೆಗಳಲ್ಲಿ ಶ್ರಾದ್ಧವನ್ನು ಕೈಗಂಡರೂ ವಿಶೇಷ ಫಲವಿದೆ. ಪ್ರತಿಯೊಬ್ಬನೂ ಹುಟ್ಟಿನಿಂದಲೇ ದೇವ-ಋಷಿ- ಪಿತೃಋಣಗಳೊಂದಿಗೆ ಹುಟ್ಟುತ್ತಾನೆ. ಬದುಕಿರುವಾಗ, ತಂದೆ-ತಾಯಿಂದಿರ ಇಷ್ಟದಂತೆ ಬದುಕಿ, ವಯಸ್ಸಾದಂತೆ ಅವರ ಸೇವೆ ಮಾಡಿ, ಮರಣ ಹೊಂದಿದ ಮೇಲೆ ಶ್ರಾದ್ಧ ಮೊದಲಾದ ಪಿತೃಯಜ್ಞದ ಮೂಲಕ ಪಿತೃಋಣದ ವಿಮೋಚನೆಯಾಗುವುದು.

ತಮ್ಮ ಹೆತ್ತ ತಂದೆ-ತಾಯಿಯರನ್ನು ಬದುಕಿದ್ದಾಗ ಸೇವೆ ಮಾಡಿ,ಮರಣಾನಂತರ ಮೃತಹೊಂದಿದ ದಿನ ಹಾಗೂ ಪಿತೃಪಕ್ಷದಲ್ಲಿ ಶ್ರದ್ಧಾಯುಕ್ತವಾಗಿ ಶ್ರಾದ್ಧ ಕರ್ಮ ಮಾಡಿದಾಗ,ನಮ್ಮ ಸನಾತನ ಪರಂಪರೆಯ ಪ್ರಕಾರ ವ್ಯಕ್ತಿಯ ಜೀವನ ಸಾರ್ಥಕವಾಗುವುದು.