Friday, 20th September 2024

ಪ್ರಧಾನಿ ನೆಹರುಗೆ ಅಂಥ ದುಸ್ಥಿತಿ ಬಂದಿದಾದರೂ ಏಕೆ?

ನೂರೆಂಟು ವಿಶ್ವ
ವಿಶ್ವೇಶ್ವರ ಭಟ್

ಪ್ರತಿ ಫೋಟೋವೂ ಒಂದು ಕತೆ ಹೇಳುತ್ತದೆ. ಒಳ್ಳೆಯ ಫೋಟೋಗಳಿರಬಹುದು, ಆದರೆ ಕೆಟ್ಟ ಫೋಟೋ ಎಂಬುದು ಇಲ್ಲವಂತೆ. ಹೀಗಾಗಿ ಯಾವ ಕಾರಣಕ್ಕೂ ಯಾವ ಫೋಟೋವನ್ನು ಬಿಸಾಡಬಾರದಂತೆ. ಹಳೆಯ ಫೋಟೋ, ಹಳೆಯ ವೈನಿದ್ದಂತೆ. ವರ್ಷ ಗಳು ಉರುಳಿದಂತೆ ಅದಕ್ಕೆ ಬೇಡಿಕೆ ಜಾಸ್ತಿ. ಇಂದು ತೆಗೆದ ನಿಮ್ಮ ಫೋಟೋವನ್ನು, ಇನ್ನು ಐವತ್ತು ವರ್ಷಗಳ ನಂತರ, ನೀವು ಎಷ್ಟು ಬೆಲೆಗಾದರೂ ಖರೀದಿಸುತ್ತೀರಿ.

ಕಾರಣ ಅದರ ಮಹತ್ವವೇನು ಎಂಬುದು ನಿಮಗೆ ಮಾತ್ರ ಗೊತ್ತು. ಯಾವುದೇ ಫೋಟೋವಿರಲಿ, ಅದು ಇತಿಹಾಸದ ಸಾಕ್ಷಚಿತ್ರವೂ ಹೌದು. ಹೀಗಾಗಿ ಏನನ್ನಾದರೂ ಬಿಸಾಡಬಹುದು, ಆದರೆ ಫೋಟೋವನ್ನಲ್ಲ. ಅದು ನಿಮ್ಮ ಸಂಗ್ರಹದಲ್ಲಿ, ಅದೆಷ್ಟೇ ಬೇಡವಾದ, ಪ್ರಯೋಜನಕ್ಕಿಲ್ಲದ ಫೋಟೋ ಎಂದು ಪರಿಗಣಿಸಿ ಕಸದಬುಟ್ಟಿಗೆ ಹಾಕಲು ನಿರ್ಧರಿಸಿದ ನಂತರವೂ, ಮತ್ತೊಮ್ಮೆ ಯೋಚಿಸಿ,
ಎತ್ತಿಟ್ಟುಕೊಳ್ಳಬಹುದಾದದ್ದೆಂದರೆ, ಫೋಟೋ ಮಾತ್ರ!

ನನ್ನ ಸಂಗ್ರಹವನ್ನು ಆರು ತಿಂಗಳಿಗೊಮ್ಮೆ ಕಡತಯಜ್ಞಕ್ಕೆ  ಒಳಪಡಿಸುತ್ತೇನೆ. ಪ್ರಯೋಜನಕ್ಕೆ ಬರಲಿಕ್ಕಿಲ್ಲವೆಂದು ಕೆಲವು
ಫೋಟೋಗಳನ್ನಾದರೂ ಬಿಸಾಡಬೇಕೆಂದು ನಿರ್ಧರಿಸಿ ಪುನಃ ಎತ್ತಿಟ್ಟುಕೊಳ್ಳುತ್ತೇನೆ. ಏನೇ ಆದರೂ ಅವನ್ನು ಬಿಸಾಡಲು
ಮನಸ್ಸು ಬರುವುದಿಲ್ಲ. ಕತ್ತು ಹಿಚುಕಿ ಸಾಯಿಸುತ್ತಿದ್ದೆನಾ ಎಂಬ ಅಪರಾಧಪ್ರಜ್ಞೆ ಕಾಡತೊಡಗುತ್ತದೆ. ಕಾರಣ ಪ್ರತಿ ಫೋಟೋ ಕ್ಕೂ ಜೀವವಿದೆ. ಅದರಲ್ಲಿರುವ ವ್ಯಕ್ತಿಗಳು ಸತ್ತಿರಬಹುದು. ಆದರೆ ಅವರು ಫೋಟೋದಲ್ಲಿ ಜೀವಂತವಾಗಿರುತ್ತಾರೆ,  ಏನೋ ಒಂದು ಕತೆ ಹೇಳುತ್ತಿರುತ್ತಾರೆ. ನಾವು ever young ಆಗಿರುವುದು ಅಲ್ಲಿ ಮಾತ್ರ. ಗತಿಸಿಹೋದ ದಿನಗಳಿಗೆ ರಿವರ್ಸ್ ಗಿಯರಿನಲ್ಲಿ ವಾಪಸ್ ಹೋಗುವುದು ಸಾಧ್ಯವಿದ್ದರೆ, ಅದು ಫೋಟೋದಲ್ಲಿ ಮಾತ್ರ.

ನಾನು ಸುಮಾರು ಹನ್ನೆರಡು ವರ್ಷಗಳ ಹಿಂದೆ, ಮುಂಬೈನ ಜನಪ್ರಿಯ ದೈನಿಕ ‘ಮಿಡ್ ಡೇ’ ಸಂಪಾದಕರಾಗಿದ್ದ ಖಾಲಿದ್ ಅನ್ಸಾರಿ ಅವರನ್ನು ಅವರ ಕಚೇರಿಯಲ್ಲಿ ಭೇಟಿಯಾಗಿದ್ದೆ. ರಾಷ್ಟ್ರಪತಿ ಡಾ.ಅಬ್ದುಲ್ ಕಲಾಂ ಜತೆ ಹದಿನಾರು ದಿನ ವಿದೇಶ ಪ್ರಯಾಣಕ್ಕೆ ಹೋದಾಗ, ಅನ್ಸಾರಿ ನಮ್ಮ ತಂಡದಲ್ಲಿದ್ದ ಹಿರಿಯ ಪತ್ರಕರ್ತರು. ಸ್ನೇಹಪರ ಮನಸ್ಸು ಅವರದು. ಅವರು ಪ್ರತಿ
ವರ್ಷ ತಮ್ಮ ಪತ್ರಿಕೆಯ ವಾರ್ಷಿಕೋತ್ಸವಕ್ಕೆ ನನ್ನನ್ನು ಆಹ್ವಾನಿಸುತ್ತಿದ್ದರು. ಅವರ ಕಚೇರಿಗೆ ಹೋದಾಗಲೆಲ್ಲ, ಸಹಿ ಮಾಡಿದ ಪುಸ್ತಕ ಅಥವಾ ಫ್ರೇಮ್ ಹಾಕಿದ ಫೋಟೋಗಳನ್ನು ಕೊಡುವುದು ಅವರ ಖಯಾಲಿ. ಒಮ್ಮೆ ನನಗೆ ಅವರು ಒಂದು ಅಪರೂಪದ ಫೋಟೋವನ್ನು ನೀಡಿದ್ದರು. ಅದು ನೆಹರು ಅವರ ಫೋಟೋ .

‘ಇದೊಂದು ಅಪರೂಪದ ಫೋಟೋ. ಇಂದಿರಾ ಗಾಂಧಿಯವರಿಗೆ ಈ ಫೋಟೋವನ್ನು ನಾನು ಕೊಟ್ಟಾಗ, ಅವರಿಗೆ ಬಹಳ ಖುಷಿಯಾಗಿತ್ತು.Very rare and unusual  ಎಂದು ಉದ್ಗರಿಸಿದ್ದರು. ಅದಾದ ನಂತರ ಈ ಫೋಟೋವನ್ನು ಅಚ್ಚು ಹಾಕಿಸಿ ನನ್ನ ಆತ್ಮೀಯರಿಗೆ ನೀಡಿದ್ದೇನೆ’ ಎಂದು ಅನ್ಸಾರಿ ಹೇಳಿದ್ದರು. ಈಗಲೂ ಇದು ನನ್ನ ಸಂಗ್ರಹದಲ್ಲಿರುವ ಅಮೂಲ್ಯ ಚಿತ್ರ. ಈ ಚಿತ್ರದ ಬಗ್ಗೆೆ ನಡೆದ ಚರ್ಚೆ, ವಾದ – ವಿವಾದಗಳು ಅವೆಷ್ಟೋ. ಈಗಲೂ ಈ ಚಿತ್ರ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗು ತ್ತಿರುತ್ತವೆ. ಪ್ರತಿ ಸಲ ಚರ್ಚೆಯಾದಾಗಲೂ ಹೊಸ ಹೊಸ ಅಂಶ, ಕತೆ, ಕಟ್ಟುಕತೆಗಳು ಹಾರಾಡುತ್ತವೆ. ಮೂರ್ನಾಲ್ಕು ದಿನ ಬಿಸಿಬಿಸಿ ಚರ್ಚೆಯಾಗಿ ವಿವಾದ ಮುಗಿಯುತ್ತದೆ. ಅದಾಗಿ ಒಂದೆರಡು ವರ್ಷಗಳ ನಂತರ, ಯಾರಿಗೋ ಈ ಫೋಟೋ ಸಿಗುತ್ತದೆ. ಅವರು ಹೊಸ ಥಿಯರಿ ಹೊಸೆದು ಸೋಷಿಯಲ್ ಮೀಡಿಯಾದಲ್ಲಿ ಬಿಡುತ್ತಾರೆ. ಮತ್ತೆ ವಾದ – ವಿವಾದ ಶುರು. ಆದರೆ ಯಾವ ಚರ್ಚೆಯೂ ತಾರ್ಕಿಕ ಅಂತ್ಯ ಕಾಣುವುದಿಲ್ಲ. ನೆಹರು ಪರ-ವಿರೋಧಿ ಗುಂಪಿನವರು ತಮ್ಮ ಮೂಗಿನ ನೇರಕ್ಕೆ ವಾದ ಮಂಡಿಸಿ, ಅಲ್ಲಿಂದ ನಿರ್ಗಮಿಸುತ್ತಾರೆ. ಯಾರಿಗೂ ಬೇರೆಯವರ ವಾದವನ್ನು ಕೇಳುವ ಮನಸ್ಸಾಗಲಿ, ಸಂಯಮವಾಗಲಿ ಇರುವುದಿಲ್ಲ. ಇಂಥ ವಾದಗಳೆಲ್ಲ ವೈಯಕ್ತಿಕ ನಿಂದನೆ, ಟೀಕೆಗಳಲ್ಲಿ ಅಂತ್ಯವಾಗುತ್ತದೆಯೇ ಶಿವಾಯ್, ಸತ್ಯದರ್ಶನ ಮಾಡಿಸುವುದಿಲ್ಲ.

ಈ ಫೋಟೋವನ್ನೊಮ್ಮೆ ಏಕಾಗ್ರತೆಯಿಂದ ನೋಡಿ. ಇದು ನೆಹರು ಪ್ರಧಾನಿಯಾಗಿದ್ದಾಗ ತೆಗೆದ ಫೋಟೋ ಎಂದು ಯಾರಾ ದರೂ ಹೇಳಬಹುದು. ಇನ್ನೂ ನಿಖರವಾಗಿ ಹೇಳಬೇಕೆಂದರೆ ಈ ಫೋಟೋ ತೆಗೆದಿದ್ದು 1962ರ ಜನೆವರಿಯಲ್ಲಿ. ಅಂದರೆ ನೆಹರು ನಿಧನರಾಗುವುದಕ್ಕಿಿಂತ ಎರಡು ವರ್ಷಗಳ ಮುನ್ನ. ಆ ದಿನಗಳಲ್ಲಿ ಪ್ರಧಾನಿಗೆ ಭದ್ರತೆ ಈಗಿನಷ್ಟು ಬಿಗಿಯಾಗಿರಲಿಲ್ಲ. ಹಾಗೆಂದು ಭದ್ರತೆ ಅಂದು ಸಡಿಲವಾಗಿಯೂ ಇರಲಿಲ್ಲ. ಆದರೂ ಪ್ರಧಾನಿ ಯವರನ್ನು ಹಿಂದಿನಿಂದ ಹೋಗಿ, ಎದೆಗೆ ಕೈಹಚ್ಚಿ ಎತ್ತುವುದು ತಮಾಷೆಯಲ್ಲ. ನೆಹರು ಸುತ್ತಮುತ್ತ ಇರುವವರು ಗೊಂದಲದಲ್ಲಿದ್ದಂತೆ ಕಾಣುತ್ತದೆ. ಸ್ವತಃ ನೆಹರು ಅವರೂ ಭಯಗ್ರಸ್ಥರಾದಂತೆ ಕಾಣುತ್ತಾರೆ.

ಕೋಪೋದ್ರಿಕ್ತ ಜನಜಂಗುಳಿಯಿಂದ ರಕ್ಷಿಸಲು ಗಾಂಧಿ ಟೋಪಿ ಧಾರಿಯೊಬ್ಬ ನೆಹರು ಅವರ ರಕ್ಷಣೆಗೆ ಧಾವಿಸಿದ್ದಿರಬಹುದು ಎಂದು ತಕ್ಷಣಕ್ಕೆ  ಅನಿಸುತ್ತದೆ. ಪ್ರಧಾನಿ ನೆಹರು ಅವರಿಗೆ ಅಂಥ ದಯನೀಯ ಸ್ಥಿತಿ ಬಂದಿದ್ದಾರೂ ಏಕೆ, ಹೇಗೆ? ಯಾರಾದರೂ
ಪ್ರಧಾನಿ ಯವರ ಮೈಮುಟ್ಟಿದರೆ, ಭದ್ರತಾ ಪಡೆಯವರು ಸುಮ್ಮನೆ ಬಿಡುತ್ತಾರಾ? ಹೀಗಿರುವಾಗ ಪ್ರಧಾನಿಯವರನ್ನು ಹಿಂದಿನಿಂದ ಹೋಗಿ ಒಬ್ಬ ಅನಾಮತ್ತು ಎತ್ತುತ್ತಾನೆಂದರೆ? ನಾಲ್ಕು ವರ್ಷಗಳ ಹಿಂದೆ, ಇದ್ದಕ್ಕಿದ್ದಂತೆ ಈ ಫೋಟೋ ಸೋಷಿಯಲ್ ಮೀಡಿಯಾ ದಲ್ಲಿ ಕಾಣಿಸಿಕೊಂಡಿತು.

ಅದ್ಯಾವನೋ ಮಹಾವೀರ ಮೆಹತಾ ಎಂಬಾತ ಈ ಫೋಟೋವನ್ನು ಟ್ವೀಟ್ ಮಾಡಿದ. ಅದು ಇದ್ದಕ್ಕಿದ್ದಂತೆ ಅಸಂಖ್ಯ ಟ್ವಿಟ್ಟಿಗರ ಗಮನವನ್ನು ಸೆಳೆಯಿತು. People thrash Nehru on China war failure ಎಂದು ಬರೆದಿದ್ದ. 1962ರಲ್ಲಿ ಚೀನಾದೊಂದಿಗಿನ ಯುದ್ಧದಲ್ಲಿ ಭಾರತ ಹಿನ್ನೆಡೆ ಅನುಭವಿಸಿದ್ದಕ್ಕೆ ಕೋಪೋದ್ರಿಕ್ತ ಪ್ರಜೆಗಳು ಪ್ರಧಾನಿ ನೆಹರುಗೆ ಥಳಿಸುತ್ತಿರುವ ಫೋಟೋವಿದು ಎಂದು ಅಡಿಶೀರ್ಷಿಕೆ ಬರೆದು ಪೋಸ್‌ಟ್‌ ಮಾಡಿದ. ಭಾರತ – ಚೀನಾ ಯುದ್ಧ ನಂತರ ತೆಗೆದ ಚಿತ್ರವಿದು ಎಂದು ಸ್ಪಷ್ಟವಾಗಿ ಬರೆದ.

ಈ ಮಹಾವೀರ ಮೆಹತಾನನ್ನು ಪ್ರಧಾನಿ ಮೋದಿ ಮತ್ತು ಕೇಂದ್ರ ಸಚಿವ ಪಿಯೂಷ್ ಗೋಯಲ್ ಫಾಲೋ ಮಾಡುತ್ತಿರುವುದು ಕೇವಲ ಆಕಸ್ಮಿಕವಾದರೂ, ಅದೊಂದೇ ಕಾರಣಕ್ಕೆ ಈ ವಿವಾದದ ಬೆಂಕಿಗೆ ತುಪ್ಪ ಸುರಿದಂತಾಯಿತು. ಇದು ಮೋದಿ ಪರೋಕ್ಷ ವಾಗಿ ಮಾಡಿಸುತ್ತಿರುವ ಕಿತಾಪತಿ ಎಂದು ಕಾಂಗ್ರೆಸ್ ಬೆಂಬಲಿಗರು, ನೆಹರುವಾದಿಗಳು ಕಿಡಿಕಾರಿದರು. ಇನ್ನು ಮೋದಿ ಭಕ್ತರಂತೂ ಈ ಫೋಟೋವನ್ನು ವೈರಲ್ ಮಾಡಿದರು ! ಒಂದು ವಾರ ಕಾಲ ಫುಲ್ ಜಟಾಪಟಿ.

ಹಾಗೆ ನೋಡುವುದಾದರೆ, 2014ರಲ್ಲಿಯೇ ‘ಔಟ್ ಲುಕ್’ ಮ್ಯಾಗಜಿನ್ ಈ ಫೋಟೋವನ್ನು ಪ್ರಕಟಿಸಿತ್ತು. ಆಗ ಯಾವ ವಿವಾದವೂ  ಎದ್ದಿರಲಿಲ್ಲ. ಈ ಫೋಟೋಕ್ಕೆ Braced for the worst: Nehru is prevented from plunging into a riotous crowd in 1962, before the war ಎಂದು ಅಡಿಶೀರ್ಷಿಕೆ ನೀಡಿತ್ತು. ಈ ಅಡಿಶೀರ್ಷಿಕೆಯೇ ಇಷ್ಟೆೆಲ್ಲಾ ರಾದ್ಧಾಾಂತಕ್ಕೆೆ ಕಾರಣವಾಯಿತಾ? ಇದ್ದರೂ ಇರಬಹುದು.

ಮ್ಯಾಗಜಿನ್ ಈ ಫೋಟೋವನ್ನು ಪ್ರಕಟಿಸಿದಾಗ ಏಳದ ವಿವಾದ, ಎರಡು ವರ್ಷಗಳ ನಂತರ, ಭುಗಿಲೆದ್ದಿತು. ‘ನೆಹರು ಬಗ್ಗೆ ದೇಶದ ಜನತೆಗೆ ಎಂಥ ಸಿಟ್ಟಿದೆ ಯೆನ್ನುವುದಕ್ಕೆೆ ಈ ಫೋಟೋವೇ ಸಾಕ್ಷಿ. ಪ್ರಧಾನಿ ಎಂಬುದನ್ನೂ ಲೆಕ್ಕಿಸದೇ ಜನ ಅವರಿಗೆ ಬಡಿದರು.
ಭದ್ರತಾ ಪಡೆಯ ಸಿಬ್ಬಂದಿ ಜೀವ ಉಳಿಸಿಕೊಳ್ಳಲು ಓಡಿಹೋದರು. ಕೊನೆಗೆ ಯಾವನೋ ನೆಹರು ರಕ್ಷಣೆಗೆ ಧಾವಿಸದಿದ್ದರೆ, ಅನಾಹುತವಾಗುತ್ತಿತ್ತು ಎಂದು ಲಕ್ಷಾಂತರ ಫಾಲೋವರು ಗಳನ್ನು ಹೊಂದಿದ ಬಿಜೆಪಿ ಬೆಂಬಲಿಗನೊಬ್ಬ ಟ್ವೀಟ್ ಮಾಡಿದ ನಂತರ, ವಿವಾದ ಮತ್ತಷ್ಟು ಕಾವು ಪಡೆಯಿತು. ‘ಇದು ಇಲ್ಲಿಯ ತನಕ ಕಾಂಗ್ರೆೆಸ್ ನಾಯಕರು ಬಚ್ಚಿಟ್ಟ ರಹಸ್ಯ’ ಎಂದು ಇನ್ಯಾ ರೋ ಟ್ವೀಟ್ ಮಾಡಿದರು.

ಅನಂತರ ಈ ಫೋಟೋದ ಮೇಲೆ ಅನೇಕ ವ್ಯಾಖ್ಯಾನಗಳಾದವು. ಆದರೆ ವಿವಾದ ಮಾತ್ರ ತಾರ್ಕಿಕ ಅಂತ್ಯ ಕಾಣಲಿಲ್ಲ. ಅದಾಗಿ ಎರಡು ವರ್ಷಗಳ ನಂತರ, ಅಂದರೆ 2018ರಲ್ಲಿ ಪುನಃ ಯಾರೋ ಈ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ತೇಲಿಬಿಟ್ಟರು. ಎರಡು ವರ್ಷಗಳ ಹಿಂದೆ ಈ ಫೋಟೋ ನೋಡದವರು, ಹೊಸ ವಿಷಯ ಸಿಕ್ಕಿತೆಂದು ಟ್ರೆೆಂಡ್ ಮಾಡಿದರು. ಚೀನಾ ಯುದ್ಧದಲ್ಲಿ ಭಾರತಕ್ಕೆ ಹಿನ್ನೆಡೆಯಾಗುವಂತೆ ಮಾಡಿದ ನೆಹರುಗೆ ಜನ ಹೊಡೆಯುತ್ತಿರುವ ದೃಶ್ಯ ಎಂಬ ಷರಾದ ಜತೆಗೆ, ಮತ್ತೊೊಂದು ಹೊಸ ವಾದ ಹುಟ್ಟಿಕೊಂಡಿತು.

ಅದೇನೆಂದರೆ, 1946ರಲ್ಲಿ ಶೇಕ್ ಅಬ್ದುಲ್ಲಾ ಪರವಾಗಿ ವಾದ ಮಾಡಲು ಕಾಶ್ಮೀರಕ್ಕೆ ಬಂದಿದ್ದ ನೆಹರು ಅವರನ್ನು ಅಂದಿನ ಸಂಸ್ಥಾನದ ಮಹಾರಾಜ ರಾಮ್ ಚಂದ್ರ ಕಾಕ್ ಅವರು ಬಂಧಿಸಿದರು ಎಂಬುದು. ಆದರೆ 1946 ರಲ್ಲಿ ತೆಗೆದ ಫೋಟೋದಲ್ಲಿ ನೆಹರುಗೆ ಇನ್ನೂ ವಯಸ್ಸಾಗಿರಲಿಲ್ಲ. ಈ ಫೋಟೋಕ್ಕೂ , ಆಗಿನ ಫೋಟೋಕ್ಕೂ ಸಾಕಷ್ಟು ವ್ಯತ್ಯಾಸ ಗಳಿರುವುದನ್ನು ಗಮನಿಸಬಹುದು. ಇದೊಂದೇ ಕಾರಣಕ್ಕೆ, ಕಾಶ್ಮೀರದ ರಾಜ ನೆಹರು ಬಂಧಿಸಿದ್ದ ಎಂಬ ವಾದ ಬಿದ್ದು ಹೋಯಿತು. ಆದರೆ ನೆಟ್ಟಿಗರು ಮಾತ್ರ ಸುಮ್ಮನಾಗಲಿಲ್ಲ.

ವೀಸಾ ಇಲ್ಲದೆ ಕಾಶ್ಮೀರ ಪ್ರವೇಶಿಸಿದ ನೆಹರು ಬಂಧನ ಎಂದು ಇನ್ಯಾರೋ ಬರೆದರು. ಫೇಸ್ ಬುಕ್‌ನಲ್ಲಿ ಬರೆದ ಈ Post ಇಪ್ಪತ್ತು ಸಾವಿರಕ್ಕಿಿಂತ ಹೆಚ್ಚು ಶೇರ್ ಆಯಿತು. ಈ ಚಿತ್ರದ ಸ್ವಾಮ್ಯವನ್ನು ಅಸೋಸಿಯೇಟೆಡ್ ಪ್ರೆಸ್ (ಎಪಿ) ಸಂಸ್ಥೆ ಹೊಂದಿತ್ತು. ಅದು ಈ ಫೋಟೋವನ್ನು ‘ನೆಹರು 1962’ ಎಂಬ ಶೀರ್ಷಿಕೆಯಡಿಯಲ್ಲಿ ವರ್ಗೀಕರಣ ಮಾಡಿ ಇಟ್ಟಿತ್ತು. ಈ ಚಿತ್ರದ ವಿವರ ನೀಡುವಂತೆ ಎಪಿಗೆ ಕೋರಿದಾಗ, ಅವರ ಬಳಿ ಅದಕ್ಕಿಿಂತ ಹೆಚ್ಚಿನ ವಿವರಗಳೇನೂ ಇರಲಿಲ್ಲ. ಆದರೆ ಈ ಫೋಟೋವನ್ನು ಆ ವರ್ಷದ ಜನೆವರಿಯಲ್ಲಿ ತೆಗೆದಿದ್ದು ಎಂಬ ಹೆಚ್ಚುವರಿ ಮಾಹಿತಿ ಸಿಕ್ಕಿತು.

ಈ ತಿಂಗಳಲ್ಲಿ ನಡೆದ ಪ್ರಮುಖ ಘಟನೆಗಳೇನು ಎಂಬ ಬಗ್ಗೆೆ ಹಳೆ ಪತ್ರಿಕೆಗಳನ್ನು ತೆಗೆದಾಗ, ಒಂದಷ್ಟು ಸಂಗತಿಗಳು ಹೊರಬಿದ್ದವು. ‘ಇಂಡಿಯನ್ ಎಕ್‌ಸ್‌‌ಪ್ರೆಸ್’ ಪತ್ರಿಕೆ  ಮುಖಪುಟದಲ್ಲಿ Pandemonium In Patna Congress  ಎಂಬ ಎಂಟು ಕಾಲಂ ಶೀರ್ಷಿಕೆ ಕೊಟ್ಟು ದೊಡ್ಡ ಸುದ್ದಿ ಮಾಡಿತ್ತು. ಲೀಡ್ ಹೆಡ್ ಲೈನ್ ಕೆಳಗೆ Open session adjourns amidst disorder, Crowds rush to dais, Many swoon, Nehru appeals in vain ಎಂಬ ಉಪಶೀರ್ಷಿಕೆಗಳನ್ನು ಬರೆಯಲಾಗಿತ್ತು. ಈ ಸುದ್ದಿಯ ಜತೆಗೆ ನೆಹರು ಅವರ ಭಾವಚಿತ್ರವನ್ನು ಪ್ರಕಟಿಸಲಾಗಿತ್ತು. (ಅವರನ್ನು ಅನಾಮತ್ತು ಎತ್ತಿಕೊಂಡು ಹೋಗುತ್ತಿರುವ ಫೋಟೋ ಅಲ್ಲ) ಅಂದು ಅಧಿವೇಶನದಲ್ಲಿ ನಿರೀಕ್ಷೆಗಿಂತ ಜಾಸ್ತಿ ಜನ ಸೇರಿದ್ದರು.

ಅವರೆಲ್ಲರೂ ನೆಹರು ಅವರನ್ನು ಸಮೀಪದಿಂದ ನೋಡಲು ಬಯಸಿದ್ದರು. ಅದೇ ಸಂದರ್ಭದಲ್ಲಿ ರೈತರು ತಮ್ಮ ಬೇಡಿಕೆಗಾಗಿ ಅಧಿವೇಶನ ನಡೆಯುತ್ತಿದ್ದ ಜಗದ ಸನಿಹವೇ ಪ್ರತಿಭಟನೆ ನಡೆಸುತ್ತಿದ್ದರು. ನೆಹರು ವೇದಿಕೆಗೆ ಬರುತ್ತಿದ್ದಂತೆ, ಜನ ಸಾಗರ ವೇದಿಕೆಯತ್ತ ನುಗ್ಗಲಾ ರಂಭಿಸಿತು. ತಮ್ಮ ಜೀವನದುದ್ದಕ್ಕೂ ಜನಜಂಗುಳಿಯನ್ನು ನಿಯಂತ್ರಿಸುವುದರಲ್ಲಿ ಪಾಂಗಿತರಾದ ನೆಹರು, ಧ್ವನಿವರ್ಧಕ ಹಿಡಿದು ಶಾಂತಚಿತ್ತರಾಗಿರುವಂತೆ, ಶಿಸ್ತನ್ನು ಪಾಲಿಸುವಂತೆ ಪದೇ ಪದೆ ಮನವಿ ಮಾಡಿಕೊಂಡರೂ ಪ್ರಯೋಜನ ವಾಗಲಿಲ್ಲ.

ಅಂದು ಜನಸಾಗರವನ್ನು ನಿಯಂತ್ರಿಸುವ ಅವರ ಸಾಮರ್ಥ್ಯಕ್ಕೆ ನಿಜವಾದ ಸವಾಲು ಎದುರಾಗಿತ್ತು. ಒಂದು ಸಂದರ್ಭದಲ್ಲಿ ನೆಹರು ತಮ್ಮ ತಾಳ್ಮೆ ಕಳೆದುಕೊಂಡರು. ಏನೋ ಅಚಾತುರ್ಯವಾಗಲಿದೆ ಎಂದು ಅವರಿಗೆ ಪಕ್ಕಾ ಆಯಿತು. ತಮ್ಮತ್ತ ಧಾವಿಸುತ್ತಿರುವ ಜನರನ್ನು ಜೋರಾಗಿ ತಳ್ಳಲಾರಂಭಿಸಿದರು. ಇನ್ನೊೊಂದು ಹೆಜ್ಜೆ ಮುಂದೆ ಹೋಗಿ ಮುಷ್ಠಿ ಬಿಗಿ ಹಿಡಿದು ಮೂರ್ನಾಲ್ಕು ಜನರಿಗೆ ಗುದ್ದಿದರು. ಭಾರತದ ಪ್ರಧಾನಿ ಅಕ್ಷರಶಃ ಬೀದಿ ಕಾಳಗಕ್ಕೆ ಇಳಿದವರಂತೆ ವರ್ತಿಸುತ್ತಿದ್ದರು.

ಈ ಹಂತದಲ್ಲಿ ಆಕ್ರೋಶಭರಿತ ನೆಹರು ಬೀಸಿದ ಗುದ್ದು ಅವರ ಭದ್ರತಾ ಪಡೆ ಸಿಬ್ಬಂದಿಗೆ ತಾಗಿತು. ವೇದಿಕೆಯಿಂದ ನೆಹರು ಮೂರ್ನಾಲ್ಕು ಮಂದಿಯನ್ನು ರಭಸದಿಂದ ನೂಕಿದ ಹೊಡೆತಕ್ಕೆ ಅವರನ್ನು ಮುಂಭಾಗದಲ್ಲಿದ್ದ ಜನ catch ಹಿಡಿದರು. ಇಡೀ ಸಭೆಯಲ್ಲಿ ಏನು ನಡೆಯುತ್ತಿದೆ ಎಂಬುದೇ ಗೊತ್ತಾಗುವಂತಿರಲಿಲ್ಲ. ಕಾಂಗ್ರೆಸ್ ಸೇವಾ ದಳ ಮತ್ತು ಗ್ರಾಮ ಪಂಚಾಯತ್ ಕಾರ್ಯಕರ್ತರು ನೆಹರು ರಕ್ಷಣೆಗೆ ಧಾವಿಸಿದರೂ, ಪರಿಸ್ಥಿತಿ ಹತೋಟಿಗೆ ಬರುವ ಲಕ್ಷಣ ಕಾಣಲಿಲ್ಲ. ತಮ್ಮ ಸುತ್ತ ಇದ್ದ ಇಬ್ಬರು ಕಾರ್ಯಕರ್ತರನ್ನು ನೂಕಿದ ನೆಹರು, ಜನಜಂಗುಳಿಯನ್ನು ನಿಯಂತ್ರಿಸುವಂತೆ ಹೇಳಿದರೂ, ಪ್ರಯೋಜನವಾಗಲಿಲ್ಲ.

ನೆಹರು ಅವರ ಸುರಕ್ಷತೆಗೆ ಅಪಾಯ ಎದುರಾಗುತ್ತಿದೆ ಎಂದು ಅಲ್ಲಿದ್ದವರಿಗೆ ಅನಿಸಿತು. ಆಗ ತಕ್ಷಣ ಕಾರ್ಯಕರ್ತನೊಬ್ಬ ಹಿಂದಿನಿಂದ ರಭಸದಿಂದ ಧಾವಿಸಿ, ನೆಹರು ಅವರನ್ನು ಅನಾಮತ್ತು ಎತ್ತಿಕೊಂಡು ವೇದಿಕೆಯ ಹಿಂಭಾಗಕ್ಕೆ ಕರೆದೊಯ್ದ! ಪ್ರಧಾನಿಯವರನ್ನು ಹಾಗೆ ಎತ್ತಿಕೊಂಡು ಹೋಗದಿದ್ದರೆ, ಏನೋ ಭಾನಗಡಿ ಆಗುತ್ತಿತ್ತು. ಇಂಥ ಘಟನೆಗೆ ದೇಶದ ಪ್ರಧಾನಿ ಹಿಂದೆಂದೂ ಸಾಕ್ಷಿಯಾಗಿರಲಿಲ್ಲ. ಈಗಂತೂ ಇಂಥ ಘಟನೆ ನಡೆಯುವುದು ಸಾಧ್ಯವೇ ಇಲ್ಲ.

ಈ ಎಲ್ಲಾ ಕಾರಣಗಳಿಂದ ಈ ಫೋಟೋಕ್ಕೆೆ ಎಲ್ಲಿಲ್ಲದ ಮಹತ್ವ. ದೇಶದ ಪ್ರಧಾನಿಯೊಬ್ಬ ಇಂಥ ಘಟನೆ ಅನುಭವಿಸಬೇಕಾಗಿ ಬಂದಿದ್ದು ದುರ್ದೈವವೇ ಸರಿ.