ದುಬೈ: ಸನ್‌ರೈಸರ‍್ಸ್ ವಿರುದ್ದ ಆರಂಭಿಕ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿ ಬಳಿಕ 2ನೇ ಪಂದ್ಯದಲ್ಲಿ ಹೀನಾಯ ಸೋಲಿನ ರುಚಿ ಕಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ 3ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ಸವಾಲು ಎದುರಿಸಲು ಸಜ್ಜಾಗಿದೆ.
ಕಿಂಗ್ಸ್ ಇಲೆವೆನ್ ಪಂಜಾಬ್ ಎದುರು 97 ರನ್ಗಳಿಂದ ಸೋತಿರುವ ಆರ್ಸಿಬಿ ಪುಟಿದೇಳುವ ತವಕದಲ್ಲಿದೆ. ಆರಂಭಿಕ 2 ಪಂದ್ಯ ಗಳಿಂದ 15 ರನ್ಗಳನ್ನಷ್ಟೇ ಪೇರಿಸಿರುವ ನಾಯಕ ವಿರಾಟ್ ಕೊಹ್ಲಿ ಫಾರ್ಮ್ ತಂಡಕ್ಕೆ ದೊಡ್ಡ ಚಿಂತೆಯಾಗಿದೆ.
ಉದ್ಘಾಟನಾ ಪಂದ್ಯದಲ್ಲಿ ಸೋತರೂ ಕೆಕೆಆರ್ ಎದುರು ಭರ್ಜರಿ ನಿರ್ವಹಣೆ ತೋರಿರುವ ಮುಂಬೈ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ. ಮೊದಲ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ್ದರೂ ಪಂಜಾಬ್ ವಿರುದ್ದ ನಿರಾಸೆ ಅನುಭವಿಸಿದ ಕರ್ನಾಟಕದ ಆರಂಭಿಕ ದೇವದತ್ ಪಡಿಕಲ್, ಸಿಕ್ಕ ಅವಕಾಶವನ್ನು ಸೂಕ್ತವಾಗಿ ಬಳಸಿಕೊಳ್ಳಬೇಕಿದೆ. ಎಬಿಡಿಗೂ ಸ್ಥಿರ ನಿರ್ವಹಣೆ ಅಗತ್ಯವಾಗಿದ್ದು, ತಂಡಕ್ಕೆ ವೇಗದ ಬೌಲಿಂಗ್ ವಿಭಾಗವೇ ದೊಡ್ಡ ಚಿಂತೆಯಾಗಿದೆ.
ಪಂಜಾಬ್ ವಿರುದ್ಧ ವಿಕೆಟ್ ಕೀಳದೆ 57 ರನ್ ಬಿಟ್ಟುಕೊಟ್ಟ ಡೇಲ್ ಸ್ಟೈನ್, ಡೆತ್ ಓವರ್ನಲ್ಲಿ ದುಬಾರಿಯಾಗಿದ್ದರು. ಆಲ್ರೌಂಡರ್ ಕ್ರಿಸ್ ಮಾರಿಸ್ ಪೂರ್ಣ ಪ್ರಮಾಣದಲ್ಲಿ ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ ಸ್ಟೈನ್ ಬದಲಿಗೆ ಇಸುರು ಉದಾನ ಕಣಕ್ಕಿಳಿಯುವ ಸಾಧ್ಯತೆಗಳಿವೆ. ಉಮೇಶ್ ಯಾದವ್ ಬದಲಿಗೆ ಮೊಹಮದ್ ಸಿರಾಜ್ ಆಡಬಹುದು. ಆಲ್ರೌಂಡರ್ ಮೊಯಿನ್ ಅಲಿ ಕಣಕ್ಕಿಳಿಯ ಬಹುದು. ಒಂದು ವೇಳೆ ಫಿಲಿಪ್ ಹೊರಗುಳಿದರೆ ಎಬಿ ಡಿವಿಲಿಯರ್ಸ್ ವಿಕೆಟ್ ಕೀಪಿಂಗ್ ಗ್ಲೌಸ್ ತೊಡಲಿದ್ದಾರೆ.
ಗೆಲುವಿನ ಹಳಿ ಏರಿರುವ ಮುಂಬೈ ಇಂಡಿಯನ್ಸ್ ತಂಡದಲ್ಲಿ ಬದಲಾವಣೆ ಸಾಧ್ಯತೆ ಕಡಿಮೆ. ಎರಡು ಪಂದ್ಯಗಳಿಗೆ ಅವಕಾಶ ಗಿಟ್ಟಿಸಿಕೊಂಡಿರುವ ಸೌರಭ್ ತಿವಾರಿ ಬದಲಿಗೆ ಇಶಾನ್ ಕಿಶನ್ ಅವಕಾಶ ಪಡೆದರೂ ಅಚ್ಚರಿ ಇಲ್ಲ. ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡದಿದ್ದರೂ ಬ್ಯಾಟಿಂಗ್ನಲ್ಲಿ ನ್ಯಾಯ ಒದಗಿಸುತ್ತಿದ್ದಾರೆ. ಈ ಪಂದ್ಯದಲ್ಲೂ ಕೇವಲ ಬೌಲರ್ ಆಗಿಯೇ ಪಾಂಡ್ಯ ಕಾರ್ಯ ನಿರ್ವಹಿಸಲಿದ್ದಾರೆ.