Saturday, 23rd November 2024

ಗ್ರಾ.ಪಂ ಬೀಗ ಜಡಿದು ಪ್ರತಿಭಟನೆ

ಕೊಲ್ದಾರ: ತಾಲೂಕಿನ ರೋಣಿಹಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಸಮರ್ಪಕ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ ಎಂದು ಗ್ರಾಮ ಪಂಚಾಯತ ವ್ಯಾಪ್ತಿಯ ರೋಣಿಹಾಳ, ಹಳ್ಳದ ಗೆಣ್ಣೂರ, ಗರಸಂಗಿ, ಕುಬಕಡ್ಡಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಗ್ರಾಮ ಪಂಚಾಯತ ಕಾರ್ಯಾ ಲಯಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ರೋಣಿಹಾಳ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸಹಿತ ಅನೇಕ ಜ್ವಲಂತ ಸಮಸ್ಯೆ ಗಳಿದ್ದು ಪರಿಹಾರ ಕಲ್ಪಿಸಬೇಕಾದ ಜನಪ್ರತಿನಿಧಿ ಗಳು, ಅಧಿಕಾರಿಗಳು ಜನರ ಸಂಕಷ್ಟಕ್ಕೆ ಸ್ಪಂದನೆ ನೀಡುತ್ತಿಲ್ಲ ಎಂದು ರೈತ ಮುಖಂಡ ಸೋಮು ಬಿರಾದಾರ ಹರಿಹಾಯ್ದರು. ರೋಣಿಹಾಳ ಗ್ರಾಮದಲ್ಲಿ ಸಮರ್ಪಕ ಬೀದಿ ದೀಪ, ಕುಡಿಯುವ ನೀರು ಸಹಿತ ಅನೇಕ ಜ್ವಲಂತ ಸಮಸ್ಯೆಗಳಿವೆ ಎಂದು ಆಕ್ರೋಶವ್ಯಕ್ತಪಡಿಸಿದರು.

ಗ್ರಾಮದ ನೀರು ಸಂಪರ್ಕದ ಪೈಪ್‌ಲೈನ್ ಒಡೆದು ಕೊಳಚೆ ನೀರು ನಲ್ಲಿಯಲ್ಲಿ ಬರುತ್ತಿವೆ ಕೊಳಚೆ ನೀರು ಸೇವಿಸಿ ಗ್ರಾಮಸ್ಥರು ಕಾಯಿಲೆ ಬಿದ್ದರೆ ಯಾರು ಹೊಣೆ?. ಪರಿಹಾರಕ್ಕೆ ಸ್ಥಳೀಯ ಗ್ರಾಮ ಪಂಚಾಯಿತಿಗೆ ಸಂಪರ್ಕಿಸಿದರು ಅಧಿಕಾರಿಗಳಿಂದ ಸಕಾರಾತ್ಮಕ ಸ್ಪಂದನೆ ಸಿಗುತ್ತಿಲ್ಲ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.

ಪ್ರತಿಭಟನಾ ನಿರತ ಸ್ಥಳಕ್ಕೆ ತಾಲೂಕು ಪಂಚಾಯಿತ ಕಾರ್ಯನಿರ್ವಾಹಕ ಅಧಿಕಾರಿ ರವಿಕುಮಾರ ಹುಕ್ಕೇರಿ ಭೇಟಿ ನೀಡಿ ಪ್ರತಿಭಟಾನಿರತ ಗ್ರಾಮಸ್ಥರ ಮನವೊಲಿಸಿದರು, ಶೀಘ್ರದಲ್ಲಿಯೇ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು.

*

ಜನರಿಗೆ ಶುದ್ಧ ಹಾಗೂ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆಯ ಕಲ್ಪಿಸುವ ಮಹತ್ವಾಕಾಂಕ್ಷೆಯ ಜಲ ಜೀವನ ಮೀಷನ್ ಕಾಮಗಾರಿ ಕಳಪೆಯಾಗಿದೆ, ರೋಣಿಹಾಳ ಹಾಗೂ ಹಳ್ಳದಗೆಣ್ಣೂರ ಗ್ರಾಮದಲ್ಲಿ ಸಮರ್ಪಕವಾಗಿ ಪೈಪುಗಳನ್ನು ಅಳವಡಿಸಿಲ್ಲ, ಪೈಪಲೈನ್ ಮಾಡಲು ತೆಗೆದಿರುವ ತೆಗ್ಗುಗಳನ್ನು ಮುಚ್ಚದೆ ಬಿಟ್ಟಿದ್ದಾರೆ.
ಸೋಮು ಬಿರಾದಾರ ರೈತಸಂಘದ ತಾಲೂಕ ಅಧ್ಯಕ್ಷರು