ಪ್ರಸ್ತುತ
ರಂಗನಾಥ್ ಎನ್.ವಾಲ್ಮೀಕಿ
ಯಾವುದೇ ಒಂದು ಕಾರ್ಯಕ್ರಮ ಯಶಸ್ವಿಯಾಗಬೇಕಾದರೆ ನಿರೂಪಕರ ಪಾತ್ರ ಬಹಳ ಮುಖ್ಯವಾಗಿರುತ್ತದೆ. ಸಂಘಟಕರು ಬಹಳ ದಿನ ಶ್ರಮಿಸಿ ಕಾರ್ಯಕ್ರಮ ಸಿದ್ಧತೆ ಮಾಡಿರುತ್ತಾರೆ. ಆಹ್ವಾನ ಪತ್ರಿಕೆ, ಗಣ್ಯರ ಸ್ವಾಗತ , ವೇದಿಕೆ ನಿರ್ಮಾಣ ಎಲ್ಲ ಕಾರ್ಯಗಳು ಯಶಸ್ವಿಯಾದರೂ ಕಾರ್ಯಕ್ರಮ ಯಶಸ್ವಿ ಎನಿಸಿ ಬೇಕಾದರೆ ಗಣ್ಯರ ಮಾತುಗಳಂತೆ ಕಾರ್ಯಕ್ರಮ ನಿರೂಪಕರ ಪಾತ್ರವೂ ಮುಖ್ಯ.
ನಿರೂಪಣೆ ಹೇಗಿರಬೇಕು ಎಂದು ವಿಸ್ತಾರವಾಗಿ ಹೇಳುವ ಬದಲು ಅಪರ್ಣಾ ವಸ್ತಾರೆ ಅವರ ತರಹ ನಿರೂಪಣೆ ಇರಬೇಕು ಎಂದು ಒಂದೇ ಮಾತಲ್ಲಿ ಹೇಳಬಹುದು. ಅಪರ್ಣಾ ಕನ್ನಡ ನಾಡಿನ ಹೆಮ್ಮೆಯ ಅಪರೂಪದ ನಿರೂಪಕಿ. ಸ್ಪಷ್ಟ ಭಾಷೆ, ಮೃದುವಾದ ಇಂಪಾದ ಧ್ವನಿ, ಸಂದರ್ಭಕ್ಕೆ ತಕ್ಕಂತೆ ಪದಗಳ ಬಳಕೆ, ಧ್ವನಿಯ ಏರಿಳಿತ, ಹಾವ ಭಾವ ಸಭೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಚಾಕಚಕ್ಯತೆ ಎಲ್ಲವೂ ವಿಶೇಷ ವಿಭಿನ್ನ. ರಾಜ್ಯ ರಾಷ್ಟ್ರ ಮಟ್ಟದ ಅನೇಕ ದೊಡ್ಡ ದೊಡ್ಡ ಕಾರ್ಯಕ್ರಮಗಳನ್ನು ನಿರೂಪಿಸಿದ ಕೀರ್ತಿ ಅವರದು. ಬೆಂಗಳೂರಿನಲ್ಲಿ ನಿರಂತರವಾಗಿ ದೀಪಾವಳಿ ಹಬ್ಬದ ನಿಮಿತ್ತ ನಡೆದ ಕಾರ್ಯಕ್ರಮವನ್ನು ಸತತವಾಗಿ ಎಂಟು ಗಂಟೆ ನಿರೂಪಿಸಿದ ದಾಖಲೆ ಅವರದು.
ಎಂತದೇ ಕಾರ್ಯಕ್ರಮ ಇರಲಿ. ಲಕ್ಷ ಲಕ್ಷ ಸಭಿಕರು ಸೇರಿರಲಿ ಅಲ್ಲಿ ಅಪರ್ಣಾ ನಿರೂಪಕಿಯಾಗಿದ್ದರೆ ಆ ಕಾರ್ಯಕ್ರಮ ಯಶಸ್ವಿಯಾದಂತೆ ಅಷ್ಟೊಂದು ನಿರೂಪಣೆ ಕಲೆ ಅವರಿಗೆ ಒಲಿದಿತ್ತು. ಇಲ್ಲವೇ ಅವರೇ ಒಲಿಸಿಕೊಂಡಿದ್ದರು. ನಿರೂಪಕರಿಗೆ ಕಾರ್ಯಕ್ರಮದ ಉದ್ದೇಶದ ಅರಿವು ಸಮಯದ ಪ್ರಜ್ಞೆ
ಎರಡೂ ಅಗತ್ಯ. ಮುಖ್ಯವಾಗಿ ಅಲ್ಲಿ ಭಾಗವಹಿಸುವ ಗಣ್ಯರ ಹೆಸರುಗಳು ತಿಳಿದಿರಬೇಕು. ಸಂದರ್ಭಕ್ಕೆ ತಕ್ಕಂತೆ ಅನೇಕ ಬದಲಾವಣೆಗಳನ್ನು
ನಿರೂಪಕರು ತತಕ್ಷಣ ಮಾಡಬೇಕಾಗುತ್ತದೆ. ಅವುಗಳನ್ನು ನಿಭಾಯಿಸುವ ಜಾಣ್ಮೆ ಅಗತ್ಯ. ಅಲ್ಲದೇ ನಿರೂಪಣೆ ಊಟದ ಜೊತೆ ಉಪ್ಪಿಕಾಯಿಯಂತೆ ಇರಬೇಕು.
ಗಣ್ಯರ ಮಾತುಗಳನ್ನೇ ಮತ್ತೆ ಮತ್ತೇ ಹೇಳಿ ಸಮಯ ವ್ಯಯ ಮಾಡದೇ ಅಭಾಸವುಂಟಾಗದಂತೆ ಎಚ್ಚರ ವಹಿಸಬೇಕು. ನಿರೂಪಣೆಯು ಒಂದು ಕಲೆ. ಅಪರ್ಣಾ ಕನ್ನಡದ ಹೆಮ್ಮೆಯ ನಿರೂಪಕಿ ಎಂಬುದರಲ್ಲಿ ಮಾತಿಲ್ಲ. ಅಪರ್ಣಾ ಹಾಗೂ ಶಂಕರ ಪ್ರಕಾಶ ಜೋಡಿಯ ನಿರೂಪಣೆ ಕೇಳುವುದೇ ಕರ್ಣಾನಂದ. ಅಪರ್ಣಾ ಬಹುಮುಖ ಪ್ರತಿಭಾವಂತೆ. ನಟಿಯಾಗಿ, ಗಾಯಕಿಯಾಗಿ ಗುರುತಿಸಿಕೊಂಡ ಅವರು ನಿರೂಪಕಿಯಾಗಿ ತಮ್ಮದೇ ಛಾಪು
ಮೂಡಿಸಿದವರು. ಅವರ ಕನ್ನಡ ಮಾತುಗಳನ್ನು ಕೇಳುತ್ತಿದ್ದರೆ ಮತ್ತೆ ಮತ್ತೆ ಕೇಳಬೇಕು ಎನಿಸುತ್ತದೆ. ಅಸ್ಖಲಿತವಾದ ಮಾತಿನ ವಾಗ್ಝರಿ ಅವರದು.
ಸಂದರ್ಭಕ್ಕೆ ತಕ್ಕಂತೆ ಅವರು ಬಳಸುವ ಹಿತನುಡಿಗಳು, ಗಣ್ಯರ ಹೇಳಿಕೆಗಳು ಕವಿವಾಣಿಗಳು ಒಂದಕ್ಕಿಂತ ಒಂದು ವಿಶೇಷ ವಿಭಿನ್ನ. ಅವರು ಅಂತವು ಗಳನ್ನು ಯಾವತ್ತೂ ಬರೆದದ್ದು ನೋಡಿ ಓದುವರಲ್ಲ. ಅವುಗಳನ್ನು ನೋಡದೇ ಹೇಳುವುದರಲ್ಲಿ ನಿಸ್ಸಿಮರು. ಅವರ ನಿರೂಪಣಾ ಶೈಲಿ ಎಲ್ಲರೂ ನಿಬ್ಬೆರಗಾಗುವಂತೆ ಮಾಡುವುದು. ಅವರ ಜ್ಞಾನ ಸಂಪತ್ತು ಅಪಾರವಾದುದು. ನಿರೂಪಣೆ ಮಾಡಬೇಕು ಅದರಲ್ಲಿ ಯಶಸ್ವಿಯಾಗಬೇಕು ದೊಡ್ಡ ದೊಡ್ಡ ಕಾರ್ಯಕ್ರಮಗಳನ್ನು ನಿರೂಪಿಸಬೇಕು ಎಂಬಿತ್ಯಾದಿ ಕನಸು ಹೊತ್ತವರಿಗೆ ಅಪರ್ಣಾ ರೊಲ್ ಮಾಡೆಲ್ ಎಂದರೆ ತಪ್ಪಾಗದು. ಅವರು ಸಾವಿರಾರು ಕಾರ್ಯಕ್ರಮ ನಿರೂಪಿಸಿದ್ದಾರೆ.
ಎಲ್ಲವೂ ವಿಶೇಷ. ಅವರಿಂದ ನಿರೂಪಣೆ ಮಾಡಿಸಿಬೇಕು ಎಂಬ ಅಪೇಕ್ಷೆ ಹಲವರದು. ಆದರೆ ಅವರು ತುಂಬಾ ಕಾರ್ಯದ ಒತ್ತಡದಲ್ಲಿ ಇದ್ದಿದ್ದರಿಂದ ಕೆಲವು ಕಾರ್ಯಕ್ರಮ ನಿರಾಕರಿಸಿದ್ದು ಉಂಟು. ಇಂತಹ ನಿರೂಪಕಿ ಮಜಾ ಟಾಕೀಸ್‌ನಲ್ಲಿ ಹಾಸ್ಯ ನಟಿಯಾಗಿ ಕಾರ್ಯಕ್ರಮ ನೀಡಿದ್ದು ಇಲ್ಲಿ ಸ್ಮರಣೀಸ ಬಹುದು. ಅಲ್ಲದೇ ಅನೇಕ ರೇಡಿಯೋ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಉಪನ್ಯಾಸ ನೀಡಿದ್ದಾರೆ. ಅನೇಕ ಜಾಹೀರಾತು ನೀಡಿದ್ದಾರೆ. ಬೆಂಗಳೂರು ಮೆಟ್ರೋ ದಲ್ಲಿ ಪಯಣಿಸುವವರು ನಿತ್ಯ ಅಪರ್ಣಾ ಅವರ ಧ್ವನಿ ಕೇಳುತ್ತಾರೆ. ಮುಂದಿನ ನಿಲ್ದಾಣ ಬಯ್ಯಪ್ಪನಹಳ್ಳಿ. ನಿಧಾನವಾಗಿ ಇಳಿಯಿರಿ ಎಂಬ ಕಳಕಳಿಯ ಜಾಗೃತಿ ಆಸಕ್ತಿ ಧ್ವನಿ ಈಗಲೂ ಕೇಳುತ್ತಾರೆ. ಇಂತಹ ಅಪರೂಪದ ನಿರೂಪಕಿ ಇತ್ತೀಚಿಗಷ್ಟೇ ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿ ನಮ್ಮನ್ನು ಬಿಟ್ಟುಹೋಗಿದ್ದಾರೆ ಎಂಬ ಸುದ್ದಿಯನ್ನು ಅರಗಿಸಿಕೊಳ್ಳಲಾಗುತ್ತಿಲ್ಲ.
ಐವತ್ತರ ಆಸುಪಾಸಿನ ಚಿಕ್ಕವಯಸ್ಸು ಸದಾ ನಗುನಗುತಾ ಬಾಳಿದ ನಟನೆ ಮೂಲಕ ಇತರರನ್ನು ನಗಿಸಿದ. ನಿರೂಪಣೆ ಮೂಲಕ ಕನ್ನಡ ಪ್ರೇಮ ಹೆಚ್ಚಿಸಿದ ಕನ್ನಡ ನುಡಿದ ಅಭಿಮಾನ ಇಮ್ಮಡಿಸಿದ ನಾಡಿನ ಅಪರೂಪದ ನಿರೂಪಕಿ ಅಪರ್ಣಾ. ಅವರು ಇಂದು ನಮ್ಮೊಂದಿಗೆ ಇಲ್ಲ. ಅವರ ಕಾಯಕ, ಸಾಧನೆ, ಅವರ ಮಾತು, ಧ್ವನಿ ಎಲ್ಲವೂ ಕನ್ನಡಿಗರ ಜತೆ ಬೆರೆತಿದೆ. ನಿರೂಪಣೆ ಕಲೆಗೆ ಮೆರುಗು ತಂದ ಅಪರ್ಣಾ ಮತ್ತೇ ಹುಟ್ಟಿ ಬರಲಿ.