ಒಂದೊಳ್ಳೆ ಮಾತು
ರೂಪಾ ಗುರುರಾಜ್
ಒಮ್ಮೆ, ಬುದ್ಧರ ಶಿಷ್ಯ ಒಂದು ಹೊಲದ ಪಕ್ಕದ ದಾರಿಯಲ್ಲಿ ನಡೆದು ಹೋಗುತ್ತಿದ್ದ. ದಾರಿಯ ಪಕ್ಕದಲ್ಲಿದ್ದ ಒಂದು ಹೊಲದಲ್ಲಿ ಒಬ್ಬ ಯುವಕ ಉಳುಮೆ ಮಾಡುತ್ತಿದ್ದ. ಇದ್ದಕ್ಕಿದ್ದಂತೆ ಅವನು ಉಳಿಮೆ ಮಾಡುತ್ತಿದ್ದ ನೇಗಿಲು ಹೊಲದ ಅಂಚಿನಲಿದ್ದ ಮೊಲದ ಗೂಡಿಗೆ ತಗುಲಿ, ಅದರ ಗೂಡು ಒಡೆದು ಮರಿಗಳು ಚೆಪಿಲ್ಲಿಯಾದವು.
ಕೂಡಲೇ ಆ ಮರಿಗಳ ತಾಯಿ, ಗಾಬರಿಯಿಂದ ಜಿಗಿದು ಓಡತೊಡಗಿತು. ಸ್ವಲ್ಪ ದೂರ ಹೋದ ತಕ್ಷಣ ತನ್ನ ಮರಿಗಳ ನೆನಪಾಗಿ ಅವುಗಳನ್ನು ರಕ್ಷಿಸಲು ಆತಂಕದಿಂದ ಹಿಂದಕ್ಕೆ ಓಡಿ ಬಂತು. ಆಗ ಉಳುಮೆ ಮಾಡುತ್ತಿದ್ದ ಯುವಕ ತನ್ನ
ಬಾರುಕೋಲಿನಿಂದ ಬೀಸುತ್ತ ಮೊಲವನ್ನು ಅಟ್ಟಿಸಿಕೊಂಡು ಹೋಗಿ ಅದನ್ನು ಹೊಡೆಯಲು ಪ್ರಯತ್ನಿಸಿದ.
ಇದನ್ನು ಗಮನಿಸಿದ ಬುದ್ಧರ ಶಿಷ್ಯ, ‘ಯಾಕೆ ಮಿತ್ರಾ? ಆ ಬಡಪಾಯಿ ಮೊಲ ಏನು ತಪ್ಪು ಮಾಡಿದೆ? ಅದನ್ನೇಕೆ ನೀನು ಕೊಲ್ಲಲು ಹೊರಟಿರುವೆ’ ಎಂದು ಕೇಳಿದ. ಆಗ ಆತ, ‘ಈ ಮೊಲ, ನನ್ನ ಜಮೀನಿನಲ್ಲಿ ವಾಸ ಮಾಡುತ್ತಿದೆ, ಅದಕ್ಕೆ ಅದನ್ನು ಓಡಿಸುತ್ತಿದ್ದೇನೆ. ಅದನ್ನು ಬಿಟ್ಟರೆ ಅದು ಇನ್ನೇನೂ ತಪ್ಪು ಮಾಡಿಲ್ಲ’ ಎಂದ.
ಆಗ ಬೌದ್ಧ ಬಿಕ್ಷು, ‘ಗೆಳೆಯ, ನೀನು ಬಹಳ ಧೈರ್ಯಶಾಲಿಯಲ್ಲವೇ? ಯಾರಾದರೂ, ನಿನ್ನ ತಂದೆ ತಾಯಿ ಮಕ್ಕಳು ಹಾಗೂ ನಿನ್ನ ಪ್ರೀತಿ ಪಾತ್ರರಾದವರನ್ನು ಕೊಂದುಹಾಕಿ ನಿನ್ನನ್ನು ಮಾತ್ರ ಉಳಿಸಿ, ನಿನ್ನ ದುಃಸ್ಥಿತಿಯನ್ನು ನೋಡಿ
ಅಣಕಿಸುವಂತ ಪರಿಸ್ಥಿತಿ ಈ ಮೊಲದ ಹಾಗೆ ನಿನಗೂ ಬಂದಿದ್ದರೆ, ಆಗ ನಿನಗೇನೆನಿಸುತ್ತಿತ್ತು? ನೀನೇ ಊಹೆ ಮಾಡಿಕೋ!’ ಎಂದ ಭಿಕ್ಷು. ಈಗ ಯುವಕನಿಗೆ ನಾಚಿಕೆಯಾಯಿತು, ಆತ ಇಂತಹ ವಿಚಾರಗಳಿಗೆ ಎಂದೂ ಕೂಡಾ
ತಲೆಕೆಡಿಸಿಕೊಂಡಿರಲಿಲ್ಲ. ಅದರ ಅರಿವು ಕೂಡಾ ಅವನಿಗೆ ಇರಲಿಲ್ಲ. ತನಗಿಂತ ದುರ್ಬಲರಾದ ಪ್ರಾಣಿಗಳ ಮೇಲೆ ಎಂದೂ ಕೂಡ ದಯೆ ತೋರಿಸುತ್ತಿರಲಿಲ್ಲ. ಅದು ಅವನ ತಪ್ಪಲ್ಲ, ಇದರ ಬಗ್ಗೆ ಅವನಿಗೆ ಸರಿಯಾದ ತಿಳುವಳಿಕೆ ಇರಲಿಲ್ಲ ಅಷ್ಟೇ.
ಈ ಬೌದ್ಧ ಬಿಕ್ಷುವಿನ ಬೇಟಿ, ಈ ಯುವಕನಿಗೆ ಒಂದು ನಿರ್ಣಾಯಕ ಸಂದರ್ಭವನ್ನು ಒದಗಿಸಿಕೊಟ್ಟಿತು. ತನ್ನ ಪೌರುಷ, ಧೈರ್ಯ, ತನ್ನ ಅನಿಯಂತ್ರಿತವಾದ ಶಕ್ತಿ ಪ್ರವಾಹ, ಸಮಾಜಕ್ಕೆ ಕೆಡುಕನ್ನು ಉಂಟು ಮಾಡುತ್ತದೆ ಎಂದವನಿಗೆ ಅರಿವಾಯಿತು.
ಬುದ್ಧರು, ಪ್ರಾಣಿಗಳ ವಿಷಯದಲ್ಲಿ ಹೇಗೆ ನಡೆದುಕೊಳ್ಳಬೇಕೆಂದು ಹೇಳಿರುವುದು ನಿನಗೆ ತಿಳಿದಿಲ್ಲವೇ? ಪ್ರಪಂಚದ ಎಲ್ಲ ಪ್ರಾಣಿಗಳೊಂದಿಗೆ ಮೈತ್ರಿಯಿಂದ ಇರುವುದು. ಅದನ್ನೇ ಅವರು, ಮೈತ್ರಿ ಧ್ಯಾನ ಎಂದಿರುವುದು. ಈ ಮೊಲವೂ ಕೂಡಾ ಪ್ರಪಂಚದಲ್ಲಿರುವ ಇತರ ಎಲ್ಲ ಜೀವಿಗಳಂತೆಯೇ ಬದುಕು ಸಾಗಿಸುತ್ತದೆ, ನೀನು ಅನುಭವಿಸುತ್ತಿರುವ ಕೋಮಲ ಭಾವನೆಗಳು ಅದಕ್ಕೂ ಇದೆ. ನಿನ್ನ ಹಾಗೆಯೇ, ಅದು ಕೂಡ ಬಾಲ್ಯ ಯೌವನ ವೃದ್ಧಾಪ್ಯ ಸಾವು ನೋವು ಗಳನ್ನು, ಅನುಭವಿಸುತ್ತದೆ.
ಎಲ್ಲ ಸಮಯದಲ್ಲಿಯೂ ನೀನು ಕೂಡಾ ಶಕ್ತಿವಂತನಾಗಿ ಆರೋಗ್ಯವಂತನಾಗಿಯೇ ಇರಲಿಲ್ಲ ಅಲ್ಲವೇ? ಕೆಲವು ವರ್ಷಗಳ ಹಿಂದೆ ನೀನು ಕೂಡಾ ಪುಟ್ಟ ಮಗು ಆಗಿದ್ದೆ, ನಿನ್ನ ಪ್ರೀತಿಯ ತಾಯಿಯ ಆರೈಕೆ, ನಿನ್ನ ತಂದೆಯ ಅಕ್ಕರೆ ಯ ರಕ್ಷಣೆ ಇಲ್ಲದೆ ಹೋಗಿದ್ದರೆ, ನೀನು ಇಂದು ಬದುಕಿರುತ್ತಿರಲಿಲ್ಲ ಎಂದ. ಈಗ ಮೊಲದ ಮರಿಗಳದ್ದು ಅದೇ ಪರಿಸ್ಥಿತಿ ಎಂದ. ಯುವಕ, ಬೌದ್ಧ ಬಿಕ್ಷುಗೆ ಕೈಮುಗಿಯುತ್ತ, ಪೂಜ್ಯರೇ ನೀವು ಬಹಳ ಒಳ್ಳೆಯ ಗುರುಗಳು, ನಾನು ನಿಮ್ಮಿಂದ ಇನ್ನೂ ಬಹಳಷ್ಟನ್ನು ಕಲಿಯಬೇಕೆಂದು ಸಂಕಲ್ಪ ಮಾಡಿದ್ದೇನೆ, ಎಂದು ಆ ಭಿಕ್ಷುಗೆ ಭಕ್ತಿಯಿಂದ ವಂದಿಸಿ, ಮುಂದೆ ಅವನನ್ನೇ ಅನುಸರಿಸಿದ.
ನಮ್ಮ ಮಕ್ಕಳಿಗೂ ಕೂಡ ನಾವು ಇಂತಹ ಬದುಕುವ ಕಲೆಗಳನ್ನ ಅವರ ಎಳೆವೆಯಿಂದಲೇ ಹೇಳಿಕೊಡಬೇಕು. ಗಿಡವಾಗಿ ಬಗ್ಗದ್ದು, ಮರವಾಗಿ ಬಗ್ಗೀತೇ ಎಂದು ಹೇಳುತ್ತಾರೆ. ಅಂತೆಯೇ ಬಾಲ್ಯದಲ್ಲಿ ನಾವು ಕೊಟ್ಟ ಸಂಸ್ಕಾರಗಳು ನಮ್ಮ ಮಕ್ಕಳನ್ನು ಶ್ರೇಷ್ಠ ವ್ಯಕ್ತಿಗಳಾಗಿ ರೂಪಿಸುತ್ತವೆ.
ಇದನ್ನೂ ಓದಿ: Roopa_Gururaj_Column: ಮುಂದಿಟ್ಟ ಹಾಲನ್ನು ತಿರಸ್ಕರಿಸಿದ ರಾಮಕೃಷ್ಣನ ಬೆಕ್ಕು