Monday, 7th October 2024

Lalu Prasad Yadav: ಉದ್ಯೋಗಕ್ಕಾಗಿ ಭೂಮಿ ಹಗರಣ; ಲಾಲು ಪ್ರಸಾದ್‌ ಯಾದವ್‌ ಸೇರಿ 9 ಮಂದಿಗೆ ಜಾಮೀನು

Lalu Prasad Yadav

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣ (Land for job scam)ದಲ್ಲಿ ಆರೋಪಿಗಳಾಗಿರುವ ಬಿಹಾರದ ಮಾಜಿ ಮುಖ್ಯಮಂತ್ರಿ, ಆರ್‌ಜೆಡಿ ಮುಖಂಡ ಲಾಲು ಪ್ರಸಾದ್ ಯಾದವ್ (Lalu Prasad Yadav) ಮತ್ತು ಅವರ ಮಕ್ಕಳಾದ ತೇಜ್ ಪ್ರತಾಪ್ (Tej Pratap), ತೇಜಸ್ವಿ ಯಾದವ್ (Tejashwi Yadav) ಸೇರಿದಂತೆ ಇತರ 6 ಮಂದಿಗೆ ರೂಸ್ ಅವೆನ್ಯೂ ನ್ಯಾಯಾಲಯ ಸೋಮವಾರ ಜಾಮೀನು ನೀಡಿದೆ. ಈ ಮೂಲಕ 9 ಆರೋಪಿಗಳಿಗೆ ಜಾಮೀನು ಲಭಿಸಿದಂತಾಗಿದೆ. ಇವರನ್ನು ಬಂಧಿಸದೆ ಚಾರ್ಚ್‌ಶೀಟ್‌ ಸಲ್ಲಿಸಲಾಗಿತ್ತು.

ವಿಶೇಷ ನ್ಯಾಯಾಧೀಶ ವಿಶಾಲ್ ಗೋಗ್ನೆ ಅವರು ತಲಾ 1 ಲಕ್ಷ ರೂ.ಗಳ ವೈಯಕ್ತಿಕ ಬಾಂಡ್ ಮೇಲೆ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದ್ದಾರೆ. ಮುಂದಿನ ವಿಚಾರಣೆಯನ್ನು ಅಕ್ಟೋಬರ್ 25ಕ್ಕೆ ಮುಂದೂಡಲಾಗಿದೆ. ಈ ಹಿಂದೆ ನೀಡಿದ ಸಮನ್ಸ್ ಹಿನ್ನೆಲೆಯಲ್ಲಿ ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗಿದ್ದರು. ಆರೋಪಿಗಳ ವಿರುದ್ಧ ಸಲ್ಲಿಕೆಯಾದ ಪೂರಕ ಚಾರ್ಜ್‌ಶೀಟ್‌ ಅನ್ನು ಪರಿಗಣಿಸಿದ ನಂತರ ನ್ಯಾಯಾಧೀಶರು ಸಮನ್ಸ್ ಜಾರಿ ಮಾಡಿದ್ದರು.

ಅಂತಿಮ ವರದಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಆಗಸ್ಟ್ 6ರಂದು ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಸಿಬಿಐ ದಾಖಲಿಸಿದ ಎಫ್ಐಆರ್ ಆಧಾರದ ಮೇಲೆ ಇಡಿ ಪ್ರಕರಣವನ್ನು ದಾಖಲಿಸಿದೆ.

ತೇಜಸ್ವಿ ಯಾದವ್ ಪ್ರತಿಕ್ರಿಯೆ

“ಬಿಜೆಪಿ ರಾಜಕೀಯ ಪಿತೂರಿಯಲ್ಲಿ ತೊಡಗಿದೆ. ಕೇಂದ್ರ ತನಿಖಾ ಏಜೆನ್ಸಿಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಈ ಆರೋಪಕ್ಕೆ ಯಾವುದೇ ಆಧಾರವಿಲ್ಲ. ನಮ್ಮ ಗೆಲುವು ನಿಶ್ಚಿತʼʼ ಎಂದು ತೇಜಸ್ವಿ ಯಾದವ್ ಪ್ರತಿಕ್ರಿಯಿಸಿದ್ದಾರೆ.

ಏನಿದು ಪ್ರಕರಣ?

ಯುಪಿಎ–1 ಸರ್ಕಾರದ ಅವಧಿಯಲ್ಲಿ ಲಾಲು ಪ್ರಸಾದ್ ಅವರು ರೈಲ್ವೆ ಸಚಿವರಾಗಿದ್ದಾಗ ಉದ್ಯೋಗಕ್ಕಾಗಿ ಭೂಮಿ ಹಗರಣ ನಡೆದಿದೆ ಎನ್ನಲಾಗಿದೆ. 2004–2009ರ ಅವಧಿಯಲ್ಲಿ ಲಾಲು ಪ್ರಸಾದ್ ಯಾದವ್‌ ರೈಲ್ವೆ ಸಚಿವರಾಗಿದ್ದರು. ಈ ವೇಳೆ ರೈಲ್ವೆಯ ‘ಡಿ’ ಗ್ರೂಪ್ ಹುದ್ದೆಗೆ ಹಲವು ಮಂದಿಯನ್ನು ನೇಮಕ ಮಾಡಲಾಗಿತ್ತು. ಇದಕ್ಕಾಗಿ ಆಕಾಂಕ್ಷಿಗಳು ಲಾಲು ಪ್ರಸಾದ್‌ ಯಾದವ್ ಅವರ ಕುಟುಂಬದವರ ಹಾಗೂ ಎ.ಕೆ.ಇನ್ಫೋ ಸಿಸ್ಟಮ್ಸ್ ಪ್ರೈವೆಟ್ ಲಿಮಿಟೆಡ್ ಹೆಸರಿಗೆ ತಮ್ಮ ಭೂಮಿ ಬರೆದುಕೊಟ್ಟಿದ್ದರು ಎಂದು ಆರೋಪಿಸಲಾಗಿದೆ. ಜಾಹೀರಾತು ನೀಡದೆ ಅಥವಾ ಸಾರ್ವಜನಿಕರ ಗಮನಕ್ಕೂ ತರದೆ ತಮ್ಮ ನೆಚ್ಚಿನ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲಾಗಿದೆ. ಈ ನೇಮಕಾತಿಗಾಗಿ ಭಾರತೀಯ ರೈಲ್ವೆಯ ನಿಯಮಗಳು ಮತ್ತು ಕಾರ್ಯವಿಧಾನಗಳನ್ನು ಉಲ್ಲಂಘಿಸಲಾಗಿದೆ ಎಂದು ಇಡಿ ಲಾಲು ಪ್ರಸಾದ್‌ ಯಾದವ್‌ ಅವರ ಕುಟುಂಬದ ವಿರುದ್ಧ ಗಂಭೀರ ಆರೋಪ ಹೊರಿಸಿದೆ.

ಈ ಸುದ್ದಿಯನ್ನೂ ಓದಿ: Prem Chand Bairwa: ರಷ್ಯನ್‌ ಮಹಿಳೆ ಜೊತೆಗೆ ಹೋಟೆಲ್‌ನಲ್ಲಿ ಸಿಕ್ಕಿಬಿದ್ದ ರಾಜಸ್ಥಾನ ಡಿಸಿಎಂ? ಆರೋಪ ತಳ್ಳಿಹಾಕಿದ ಬಿಜೆಪಿ

ಭ್ರಷ್ಟಾಚಾರ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಮತ್ತು ಅವರ ಕುಟುಂಬದ 6 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಕೇಂದ್ರ ತನಿಖಾ ಸಂಸ್ಥೆ ಕಳೆದ ವರ್ಷ ವಶಪಡಿಸಿಕೊಂಡಿತ್ತು. ಅದಕ್ಕೂ ಮುನ್ನ ಉದ್ಯೋಗಕ್ಕಾಗಿ ಭೂಮಿ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಅವರನ್ನು ಪಾಟ್ನಾದ ಅವರ ನಿವಾಸದಲ್ಲಿ ವಿಚಾರಣೆ ನಡೆಸಿದ್ದರು. ಈ ವೇಳೆ ರಾಬ್ರಿ ದೇವಿ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳುತ್ತಿದ್ದು, ಇದು ದಾಳಿ ಅಥವಾ ಶೋಧವಲ್ಲ ಎಂದು ಸಿಬಿಐ ಮೂಲಗಳು ತಿಳಿಸಿದ್ದವು.