Saturday, 30th November 2024

V Somanna: ಜಾತಿ ಗಣತಿಗೆ ಕಾಂಗ್ರೆಸ್ ಪಕ್ಷದಲ್ಲಿಯೇ ವಿರೋಧ : ಸಚಿವ ಸೋಮಣ್ಣ

ತುಮಕೂರು: ಜಾತಿ ಗಣತಿ ವರದಿಗೆ ಈಗ ಕಾಂಗ್ರೆಸ್‌ನವರಿಂದಲೇ ವಿರೋಧ ವ್ಯಕ್ತವಾಗುತ್ತಿದೆ. ಹಾಗಾಗಿ ಮತ್ತೊಮ್ಮೆ ಜಾತಿ ಗಣತಿಯನ್ನು ವೈಜ್ಞಾನಿಕವಾಗಿ ನಡೆಸಿ ಜಾರಿ ಮಾಡಲಿ ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಇಂದಿಲ್ಲಿ ಒತ್ತಾಯಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿಪಕ್ಷಗಳಿಗಿಂತ ಸ್ವಪಕ್ಷ ದಲ್ಲಿಯೇ ವಿರೋಧಿಗಳು ಅಧಿಕವಾಗಿದ್ದಾರೆ. ಜಾತಿ ಗಣತಿ ವರದಿ ಸಿದ್ದಪಡಿಸಲು ಈಗಾಗಲೇ ನೂರಾರು ಕೋಟಿ ರೂ. ಖರ್ಚಾಗಿದೆ. ಮತ್ತೆ ಅಷ್ಟೊಂದು ಹಣವನ್ನು ಖರ್ಚು ಮಾಡಲು ಸಾಧ್ಯವಿಲ್ಲ ಎಂಬ ಮಾತನ್ನು ರಾಜ್ಯ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿಗಳು ಆಡುತ್ತಾರೆ. ಆದರೆ ಇಂತಹ ನೂರಾರು ಕೋಟಿ ರೂ.ಗಳನ್ನು ಯಾವುದಕ್ಕೂ ಖರ್ಚು ಮಾಡುವುದಿಲ್ಲವೇ ಎಂದು ಪ್ರಶ್ನಿಸಿದರು.

ಜಾತಿ ಗಣತಿ ವರದಿಯಲ್ಲಿ ಬದ್ಧತೆ ಇರಬೇಕು. ಯಾವುದೇ ಸಮುದಾಯಕ್ಕೂ ಅನ್ಯಾಯವಾಗಬಾರದು. ಆದ್ದರಿಂದ ಮತ್ತೊಮ್ಮೆ ಜಾತಿ ಗಣತಿ ನಡೆಸಿ ವರದಿ ಜಾರಿ ಮಾಡಲಿ ಎಂದರು.

ಕಾAಗ್ರೆಸ್‌ಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಮುನ್ನೆಲೆಗೆ ಬರುತ್ತಿರುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅದು ಕಾಂಗ್ರೆಸ್ ಪಕ್ಷದ ವಿಚಾರ. ನಾನು ಈಗಾಗಲೇ ಏನು ಹೇಳಬೇಕೋ ಅದನ್ನು ಹೇಳಿದ್ದೇನೆ ಎಂದರು.

ಪ್ರಧಾನಿ ನರೇಂದ್ರ ಮೋದಿಯವರು ದೇಶ ಭಕ್ತರು. ದೇಶದ ಅಭಿವೃದ್ಧಿ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲ ರಾಜ್ಯಗಳಲ್ಲೂ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಅವರು ಹೇಳಿದರು. ಕನ್ನಡ ದಲ್ಲೇ ರೈಲ್ವೆ ಇಲಾಖೆ ನೇಮಕಾತಿ ಪರೀಕ್ಷೆ ಬರೆಯಲು ನಾನು ಮಂತ್ರಿಯಾದ ಬಳಿಕ ಶ್ರಮ ವಹಿಸಿ ಕೆಲಸ ಮಾಡಿದ್ದೇನೆ. ಇದರಿಂದ ಕನ್ನಡಿಗ ಅಭ್ಯರ್ಥಿಗಳಿಗೆ ತುಂಬಾ ಅನುಕೂಲವಾಗಿದೆ ಎಂದರು.

ಜಮ್ಮು ಬಿಜೆಪಿಯ ಭದ್ರಕೋಟೆ. ಇಂದು ಬಿಜೆಪಿ ಸರಿಯಿಲ್ಲ ಎಂದು ಹೇಳುತ್ತಿದ್ದ ವರ್ಗದವರು ಇಂದು ಬಿಜೆಪಿ ಯನ್ನು ಬೆಂಬಲಿಸುತ್ತಿದ್ದಾರೆ. ಇದು ಪ್ರಧಾನಿ ಮೋದಿಯವರ ಅಭಿವೃದ್ಧಿಯ ಸಂಕೇತ ಎಂದರು.

ರತನ್ ಟಾಟಾ ನಿಧನಕ್ಕೆ ಸಂತಾಪ
ದೇಶದ ಖ್ಯಾತ ಉದ್ಯಮಿ ರತನ್ ಟಾಟಾ ಅವರ ನಿಧನಕ್ಕೆ ಕೇಂದ್ರ ಸಚಿವ ವಿ. ಸೋಮಣ್ಣ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ರತನ್ ಟಾಟಾ ಅವರು ಸಮಾಜದ ಸಾಮಾನ್ಯರು ಹೇಗೆ ಬದುಕಬೇಕು ಎಂಬುದನ್ನು ತಮ್ಮ ಉದ್ಯಮದ ಮೂಲಕ ತೋರಿಸಿಕೊಟ್ಟಿದ್ದಾರೆ. ಕೈಗಾರಿಕೋದ್ಯಮದ ಮೂಲಕ ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು. ಕೈಗಾರಿಕೆಗಳಿಗೆ, ಸಾಮಾನ್ಯರಿಗೆ ಅಂದು ಏನು ಓದದವರೂ ಜೀವನ ಮಾಡಬಹುದು ಎಂಬುದಕ್ಕೆ ಟಾಟಾ ಕಂಪೆನಿ ಶಕ್ತಿ ತುಂಬಿದೆ. ತನ್ನ ಸಾಮ್ರಾಜ್ಯ ಸಾಮಾನ್ಯರಿಗೆ ತಲುಪಬೇಕು ಎಂದು ನಿರ್ಧರಿಸಿ ದುಡಿದಿದ್ದಾರೆ. ದೇಶಕ್ಕೆ ಅವರು ನೀಡಿರುವ ಕೊಡುಗೆ ಸ್ಮರಣೀಯ ಎಂದರು.

ಇದನ್ನೂ ಓದಿ: V Somanna: ಕನ್ನಡಿಗರಿಗೆ ಸಿಹಿ ಸುದ್ದಿ- ರೈಲ್ವೆ ನೇಮಕಾತಿ, ಮುಂಬಡ್ತಿ ಪರೀಕ್ಷೆಗಳು ಕನ್ನಡದಲ್ಲಿ: ಸೋಮಣ್ಣ