ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಬೀಸಿದ ಬಲವಾದ ಚಂಡಮಾರುತಕ್ಕಿಂತಲೂ ವೇಗವಾಗಿ ಅಪ್ಪಳಿಸಿದ ನ್ಯೂಜಿಲ್ಯಾಂಡ್‌ನ(IND vs NZ) ತ್ರಿವಳಿ ವೇಗಿಗಳ ಬಿಗು ಬೌಲಿಂಗ್ ದಾಳಿಗೆ ತತ್ತರಿಸಿರುವ ಟೀಮ್ ಇಂಡಿಯಾ, ಇಲ್ಲಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಕೇವಲ 46 ರನ್‌ಗೆ ಸರ್ವಪನ ಕಂಡಿದೆ. ಇದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಟೀಮ್ ಇಂಡಿಯಾ ದಾಖಲಿಸಿದ ಮೂರನೇ ಅತಿ ಕಡಿಮೆ ಮೊತ್ತದ ನಿದರ್ಶನ.
2020ರಲ್ಲಿ ಆಸ್ಟ್ರೇಲಿಯಾದ ಅಡಿಲೇಡ್ ಓವಲ್‌ನಲ್ಲಿ ನಡೆದ ಡೇ-ನೈಟ್ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್‌ನಲ್ಲಿ ಭಾರತ ತಂಡ ಕೇವಲ 36 ರನ್‌ಗಳಿಗೆ ಪತನವಾಗಿತ್ತು. ಇದು ಭಾರತದ ಕನಿಷ್ಠ ಮೊತ್ತವಾಗಿದೆ. ಇದಕ್ಕೂ ಮುನ್ನ 1974 ರಲ್ಲಿ ಭಾರತ ಲಾರ್ಡ್ಸ್‌ನಲ್ಲಿ ಕೇವಲ 42 ರನ್‌ಗೆ ಆಲೌಟ್ ಆಗಿತ್ತು.
ಬ್ಯಾಟಿಂಗ್ ಪರೇಡ್
ಮಳೆಯ ಕಾರಣ ಬುಧವಾರ ಆರಂಭವಾಗಬೇಕಿದ್ದ ಪಂದ್ಯ ದ್ವಿತೀಯ ದಿನವಾದ ಗುರುವಾರ ಆರಂಭವಾಯಿತು ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ನಾಟಕೀಯ ಕುಸಿತ ಕಂಡಿತು. ಕಿವೀಸ್‌ನ ಮೂವರು ವೇಗಿಗಳು ಸಂಘಟಿತ ಬೌಲಿಂಗ್ ದಾಳಿಯ ಮೂಲಕ ಭಾರತ ಎಲ್ಲ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಿದರು. ಐದು ಮಂದಿ ಬ್ಯಾಟರ್‌ಗಳು ಶೂನ್ಯಕ್ಕೆ ವಿಕೆಟ್ ಕೈಚೆಲ್ಲಿದರು. ವಿರಾಟ್ ಕೊಹ್ಲಿ, ಕೆ.ಎಲ್ ರಾಹುಲ್, ರವೀಂದ್ರ ಜಡೇಜಾ, ಸರ್ಫರಾಜ್ ಖಾನ್ ಮತ್ತು ಆರ್.ಅಶ್ವಿನ್ ಭಾರತದ ಬ್ಯಾಟಿಂಗ್ ಸರದಿಯಲ್ಲಿ ಶೂನ್ಯ ಸಂಪಾದಿಸಿದ ಬ್ಯಾಟರ್‌ಗಳು. ಊಟದ ವಿರಾಮಕ್ಕೆ 34 ರನ್‌ಗೆ 6 ವಿಕೆಟ್ ಕಳೆದುಕೊಂಡಿದ್ದ ಭಾರತ ಊಟ ಮುಗಿಸಿ ಆಡಲಿಳಿದ 10 ನಿಮಿಷದಲ್ಲಿ ಆಲೌಟ್ ಆಯಿತು.
ಭಾರತ ಪರ ಗರಿಷ್ಠ ಮೊತ್ತ ದಾಖಲಿಸಿದ್ದು ಪಂತ್ ಮಾತ್ರ. 2 ಬೌಂಡರಿ ನೆರವಿನಿಂದ 20 ರನ್ ಬಾರಿಸಿದರು. ಇವರನ್ನು ಹೊರತುಪಡಿಸಿದರೆ ಜೈಸ್ವಾಲ್ 13 ರನ್ ಗಳಿಸಿದರು. ಜಿದ್ದಿಗೆ ಬಿದ್ದವರಂತೆ ಬೌಲಿಂಗ್ ದಾಳಿ ನಡೆಸಿದ ಮ್ಯಾಟ್ ಹೆನ್ರಿ 5 ವಿಕೆಟ್ ಕಿತ್ತರೆ ವಿಲಿಯಂ ಒರ್ಕ 4 ವಿಕೆಟ್ ಉಡಾಯಿಸಿದರು. 10 ಓವರ್ಗಳಲ್ಲಿ 1 ವಿಕೆಟ್ ಕಳೆದುಕೊಂಡು ಕೇವಲ 10 ರನ್ ಕಲೆಹಾಕುವ ಮೂಲಕ 18 ವರ್ಷಗಳ ಬಳಿಕ ತವರಿನಲ್ಲಿ ಅತ್ಯಂತ ಕಳಪೆ ಆರಂಭ ಪಡೆದ ಕೆಟ್ಟ ದಾಖಲೆ ಬರೆಯಿತು.
ರೋಹಿತ್ 2 ರನ್ ಗಳಿಸಿದರೆ, ವಿರಾಟ್ ಕೊಹ್ಲಿ ಮತ್ತು ರಾಹುಲ್ ಖಾತೆ ತೆರೆಯದೆ ಶೂನ್ಯ ಸುತ್ತಿದರು. ರಾಹುಲ್‌ಗೆ ತವರು ಮೈದಾನವಾಗಿದ್ದರೂ ಕೂಡ ಇದರ ಲಾಭವೆತ್ತಲು ಸಾಧ್ಯವಾಗಲಿಲ್ಲ. ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ರನ್ ಮಳೆಯನ್ನೇ ಸುರಿಸಿದ್ದ ಮುಂಬೈ ಬ್ಯಾಟರ್ ಸರ್ಫರಾಜ್ ಖಾನ್ ಕೂಡ ಖಾತೆ ತೆರೆಯದೆ ನಿರಾಸೆ ಮೂಡಿಸಿದರು. ಕುತ್ತಿಗೆ ನೋವಿಗೆ ತುತ್ತಾಗಿದ್ದ ಶುಭ್‌ಮನ್ ಗಿಲ್‌ಗೆ ಈ ಪಂದ್ಯಕ್ಕೆ ವಿಶ್ರಾಂತಿ ನೀಡಲಾಯಿತು. ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್ ಕೂಡ ತಂಡಕ್ಕೆ ನೆರವಾಗುವಲ್ಲಿ ವಿಫಲರಾದರು. 63 ಎಸೆತ ಎದುರಿಸಿ ನಿಂತರೂ ಗಳಿಸಿದ್ದು 13 ರನ್. ಜಡೇಜಾ ಕೂಡ ಶೂನ್ಯಕ್ಕೆ ವಿಕೆಟ್ ಕೈಚೆಲ್ಲಿದರು.