ಚನ್ನಪಟ್ಟಣ: ಹದಿನೇಳು ಕೆರೆಗಳಿಗೆ ನೀರು ತುಂಬಿಸಿದ್ದೇನೆ ಎಂದು ಆ ವ್ಯಕ್ತಿ ಹೇಳುತ್ತಾರೆ. ಆದರೆ, ನೀರು ತುಂಬಿಸಲು ಮೂಲ ಕಾರಣವಾದ ಇಗ್ಗಲೂರು ಅಣೆಕಟ್ಟು ಕಟ್ಟಿಸಿದವರು ಯಾರಪ್ಪಾ? ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ (HD Deve Gowda), ಕಾಂಗ್ರೆಸ್ ಅಭ್ಯರ್ಥಿಯನ್ನು ನೇರವಾಗಿ ಪ್ರಶ್ನೆ ಮಾಡಿದ್ದಾರೆ. ಕ್ಷೇತ್ರದ (Channapatna By Election) ತಿಟ್ಟಮಾರನಹಳ್ಳಿ, ಮಾಕಳಿ, ನಾಗವಾರ, ಬೇವೂರು ಪ್ರದೇಶಗಳಲ್ಲಿ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅವರ ಪರ ಬಿರುಸಿನ ಪ್ರಚಾರ ನಡೆಸಿದ ಅವರು, ಸಿ.ಪಿ. ಯೋಗೇಶ್ವರ್ ವಿರುದ್ಧ ಕಿಡಿಕಾರಿದರು.
ಈ ಸುದ್ದಿಯನ್ನೂ ಓದಿ | R Ashok: ಅಬಕಾರಿ ಸಚಿವ ತಿಮ್ಮಾಪುರರಿಂದ ವಾರಕ್ಕೆ 18 ಕೋಟಿ ರೂ. ಹಫ್ತಾ ವಸೂಲಿ! ಆರ್. ಅಶೋಕ್ ಆರೋಪ
ಯೋಗೇಶ್ವರ್ ಅವರು ನಾನು ಭಗೀರಥ ಎಂದು ಹೇಳಿಕೊಂಡು ಎರಡು ಚುನಾವಣೆ ಮಾಡಿದರು? ನಾನು ಮುಖ್ಯಮಂತ್ರಿ ಆಗಿದ್ದಾಗ ಎಂಜಿನಿಯರ್ಗಳನ್ನು ಕರೆತಂದೆ. ಆಗ ರೂ. 150 ಕೋಟಿ ಬಿಡುಗಡೆ ಮಾಡಿದೆ. ತೆಪ್ಪದಲ್ಲಿ ಹೋಗಿ ಅಣೆಕಟ್ಟೆಯನ್ನು ಉದ್ಘಾಟನೆ ಮಾಡಿದ್ದೆ. ಅದನ್ನೆಲ್ಲವನ್ನು ತಾಲೂಕಿನ ಜನರು, ಎಂಜಿನಿಯರುಗಳು ಪ್ರತ್ಯಕ್ಷವಾಗಿ ನೋಡಿದ್ದಾರೆ. ಆಗಲೇ ನಾನು ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಿಸಿದೆ. ನನ್ನ ಬದ್ಧತೆ, ಚನ್ನಪಟ್ಟಣ, ರಾಮನಗರ ಜನರ ಉದ್ಧಾರಕ್ಕಾಗಿ ಇಗ್ಗಲೂರು ಜಲಾಶಯ ಕಟ್ಟಿಸಿದೆ. ಆಮೇಲೆ ಸದಾನಂದಗೌಡರು ಸಿಎಂ ಆಗಿದ್ದಾಗ ಹದಿನೇಳು ಕೆರೆಗಳಿಗೆ ನೀರು ತುಂಬಿಸಲು ಹಣ ಕೊಟ್ಟರು. ಅದು ಬಿಜೆಪಿ ಸರ್ಕಾರ, ಯೋಗೇಶ್ವರ್ ಮಾಡಿದ್ದು ಏನೂ ಇಲ್ಲ. ಹಾಗಾದರೆ ಈ ಯೋಗೇಶ್ವರ್ ಯಾಕೆ ಕಾಂಗ್ರೆಸ್ ಸರ್ಕಾರದಿಂದ ಈ ಕೆಲಸ ಮಾಡಿಸಲಿಲ್ಲ? ಎಂದು ಅವರು ಪ್ರಶ್ನಿಸಿದರು.
ಅವರು ಕೇವಲ ಬಾಯಿ ಮಾತಿನಲ್ಲಿ ಮಾತ್ರ ಭಗೀರಥ. ಕೃತಿಯಲ್ಲಿ ಅಲ್ಲ. ನಾನು, ಸದಾನಂದ ಗೌಡ ಕೃತಿಯಲ್ಲಿ ಮಾಡಿ ತೋರಿಸಿದ್ದೇವೆ. ಸುಳ್ಳು ಹೇಳಿಕೊಂಡು ತಿರುಗಾಡಬಾರದು. ಅವರಿಗೆ ಎಲ್ಲಾ ಪಕ್ಷಗಳು ಆಗಿ ಹೋಗಿವೆ ಎಂದು ಮಾಜಿ ಪ್ರಧಾನಿಗಳು ಗುಡುಗಿದರು.
ಚನ್ನಪಟ್ಟಣಕ್ಕೆ ಕುಡಿಯುವ ನೀರನ್ನು ಯಾರು ಕೊಟ್ಟಿದ್ದು? ಚನ್ನಪಟ್ಟಣ, ರಾಮನಗರಕ್ಕೆ ಕೆರೆಕಾಡನಹಳ್ಳಿಯಲ್ಲಿ ಬೆಂಗಳೂರಿಗೆ ಪಂಪ್ ಮಾಡುವ ನೀರನ್ನು ನಿಮಗೆ ಕೊಟ್ಟಿದ್ದೇನೆ. ನೀರು ಕೊಟ್ಟಿರುವ ವ್ಯಕ್ತಿ ನಾನು ನಿಮ್ಮಮುಂದೆ ಜೀವಂತವಾಗಿ ಇದ್ದೇನೆ. ಒಬ್ಬ ಸಾಮಾನ್ಯ ರೈತನ ಮಗ ಏನೇನು ಮಾಡಿದ್ದಾನೆ ಅಂತಾ ಒಂದು ಪುಸ್ತಕ ಮಾಡಿದ್ದಾರೆ, ಅದನ್ನು ಓದಿ ಎಂದು ಅವರು ಮನವಿ ಮಾಡಿದರು.
2 ರೂಪಾಯಿ ಬೆಲೆಯಲ್ಲಿ ಕೆಜಿ ಅಕ್ಕಿ ಕೊಟ್ಟವನು ನಾನು
ಐದು ಗ್ಯಾರಂಟಿ ಅಂತೆ. ಇದರಲ್ಲಿ ಒಂದು ಗ್ಯಾರಂಟಿಗೆ ತೊಂದರೆ ಇದೆ ಅಂತಾ ಒಬ್ಬ ಹೇಳ್ತಾನೆ. ಮೋದಿ ಅವರು ಪ್ರತಿ ವರ್ಷ ರೈತರ ಖಾತೆಗೆ ಹಣ ಜಮೆ ಮಾಡ್ತಾರೆ. ಎರಡು ರೂಪಾಯಿ ಅಕ್ಕಿ ಮೂರು ರೂಪಾಯಿಗೆ ಗೋದಿ ಸಕ್ಕರೆ ಕೊಟ್ಟ ವ್ಯಕ್ತಿ ನಿಮ್ಮಮುಂದೆ ಕೂತಿದ್ದೇನೆ. ಅನೇಕರು ಚಿಕ್ಕ ಹುಡುಗರು ಪುಸ್ತಕ ಓದಬೇಕು. ಈ ಗೌಡ ಏನು ಮಾಡಿದ್ದಾನೆ ಗೊತ್ತಾಗುತ್ತೆ. ಅಲಮಟ್ಟಿ ಸೇರಿ ಏಳು ಅಣೆಕಟ್ಟು ಕಟ್ಟಿದ್ದೇನೆ ಎಂದು ಅವರು ತಿಳಿಸಿದರು.
ಈ ಸುದ್ದಿಯನ್ನೂ ಓದಿ | KPSC Jobs: ಮೋಟಾರ್ ವೆಹಿಕಲ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ
ಕಾಂಗ್ರೆಸ್ ಶಾಸಕರು ಲೂಟಿ ಮಾಡಿ ಜೈಲು ಸೇರುತ್ತಿದ್ದಾರೆ
ಇವತ್ತು ಕಾಂಗ್ರೆಸ್ ಪಕ್ಷವನ್ನು ದೇಶದಿಂದ ಕಿತ್ತೆಸೆಯುವ ಕೆಲಸ ಆಗಬೇಕು. ಆ ಪಕ್ಷದಿಂದ ದೇಶಕ್ಕೆ ಒಳ್ಳೆಯದಾಗಿಲ್ಲ. ಕಾಂಗ್ರೆಸ್ ಶಾಸಕರು ಲೂಟಿ ಮಾಡಿ ಜೈಲು ಸೇರುತ್ತಿದ್ದಾರೆ. ಇದನ್ನೆಲ್ಲ ಮಾತನಾಡಲು ಯಾರು ಬೇಕು? ಇವಕ್ಕೆ ಕಡಿವಾಣ ಹಾಕಲು ಯುವಕರನ್ನು ಸೃಷ್ಟಿ ಮಾಡಬೇಕು. ಈಗಾಗಿ ನಿಖಿಲ್ ಕುಮಾರಸ್ವಾಮಿ ಅಂತಾ ಅಭ್ಯರ್ಥಿ ಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ತಿಳಿಸಿದರು.