Thursday, 14th November 2024

Train Derail: ಮತ್ತೊಂದು ರೈಲು ಅಪಘಾತ; ಹಳಿ ತಪ್ಪಿದ ಸಿಕಂದರಾಬಾದ್-ಶಾಲಿಮಾರ್ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌

Train Derail

ಕೋಲ್ಕತ್ತಾ: ಸಿಕಂದರಾಬಾದ್-ಶಾಲಿಮಾರ್ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ (Secunderabad-Shalimar Superfast Express)ನ (ರೈಲು ಸಂಖ್ಯೆ 22850) ಕೆಲವು ಬೋಗಿಗಳು ಪಶ್ಚಿಮ ಬಂಗಾಳದ ಹೌರಾದ ನಲ್ಪುರ್ ನಿಲ್ದಾಣದ ಬಳಿ ಶನಿವಾರ (ನ. 9) ಬೆಳಗ್ಗೆ ಹಳಿ ತಪ್ಪಿವೆ. ಅದೃಷ್ಟವಶಾತ್‌ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಆಗ್ನೇಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಓಂಪ್ರಕಾಶ್ ಚರಣ್ ತಿಳಿಸಿದ್ದಾರೆ (Train Derail). ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ʼʼಕೋಲ್ಕತ್ತಾದಿಂದ 40 ಕಿ.ಮೀ. ದೂರದಲ್ಲಿರುವ ನಲ್ಪುರದ ನಿಲ್ದಾಣದ ಬಳಿ ಸಾಪ್ತಾಹಿಕ ವಿಶೇಷ ರೈಲು ಹಳಿ ತಪ್ಪಿದೆ. ಹಳಿ ತಪ್ಪಿದ 3 ಬೋಗಿಗಳ ಪೈಕಿ ಪಾರ್ಸೆಲ್ ವ್ಯಾನ್ ಕೂಡ ಸೇರಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ” ಎಂದು ಮೂಲಗಳು ತಿಳಿಸಿವೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ತನಿಖೆ ನಡೆಸುವುದಾಗಿ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ʼʼಬೆಳಗ್ಗೆ 5: 30ರ ವೇಳೆಗೆ ಈ ಅಪಘಡ ಸಂಭವಿಸಿದೆ. ಪ್ರಯಾಣಿಕರನ್ನು ಕೋಲ್ಕತ್ತಾಕ್ಕೆ ಕರೆದೊಯ್ಯಲು ಬಸ್ಸುಗಳ ವ್ಯವಸ್ಥೆ ಮಅಡಲಾಗಿದೆ. 1 ಪಾರ್ಸೆಲ್ ವ್ಯಾನ್ ಮತ್ತು 2 ಪ್ರಯಾಣಿಕರ ಬೋಗಿಗಳು ಹಳಿ ತಪ್ಪಿವೆ” ಎಂದು ಓಂಪ್ರಕಾಶ್ ಚರಣ್ ವಿವರಿಸಿದ್ದಾರೆ.

ಕೆಲವು ದಿನಗಳ ಹಿಂದೆ ತ್ರಿಪುರಾದ ಅಗರ್ತಲಾದಿಂದ ಮುಂಬೈಗೆ ತೆರಳುತ್ತಿದ್ದ ಎಕ್ಸ್‌ಪ್ರೆಸ್‌ ರೈಲಿನ ಎಂಜಿನ್ ಮತ್ತು ಏಳು ಬೋಗಿಗಳು ಅಸ್ಸಾಂನ ದಿಬೋಲಾಂಗ್ ನಿಲ್ದಾಣದಲ್ಲಿ ಹಳಿ ತಪ್ಪಿದ್ದವು. ಹಳಿ ತಪ್ಪಿದ ಬೋಗಿಗಳಲ್ಲಿ ರೈಲಿನ ಪವರ್ ಕಾರ್ ಕೂಡ ಸೇರಿದ್ದವು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಅವಘಡ ಸಂಭವಿಸಿದೆ.

12520 ಅಗರ್ತಲಾ-ಲೋಕಮಾನ್ಯ ತಿಲಕ್ ಟರ್ಮಿನಸ್ ಎಕ್ಸ್‌ಪ್ರೆಸ್‌ ಅ. 17ರಂದು ಬೆಳಗ್ಗೆ ಅಗರ್ತಲಾದಿಂದ ಹೊರಟಿತ್ತು. ಅಸ್ಸಾಂನ ಲುಮ್ಡಿಂಗ್-ಬದರ್ಪುರ್ ಬೆಟ್ಟದ ಬಳಿ ದುರ್ಘಟನೆ ಸಂಭವಿಸಿತ್ತು.

ಈ ಸುದ್ದಿಯನ್ನೂ ಓದಿ: Bullets Fired: ಚಲಿಸುತ್ತಿದ್ದ ರೈಲಿನ ಮೇಲೆ ಗುಂಡಿನ ದಾಳಿ; ತಪ್ಪಿದ ಭಾರಿ ಅನಾಹುತ