Thursday, 14th November 2024

Belagavi News: ದಿನವೂ ಶಾಲೆಗೆ ಬಂದ ಮಕ್ಕಳಿಗೆ ವಿಮಾನಯಾನ ಭಾಗ್ಯ; ಹಾಜರಾತಿ ಹೆಚ್ಚಳಕ್ಕೆ ಬೆಳಗಾವಿ ಶಿಕ್ಷಕ ವಿಶೇಷ ಪ್ರಯೋಗ

Belagavi News

ಬೆಳಗಾವಿ: ಜಿಲ್ಲೆಯ ಶಾಲೆಯೊಂದರಲ್ಲಿ ಪ್ರತಿದಿನವೂ ತಪ್ಪದೇ ತರಗತಿಗೆ ಬಂದಿದ್ದ ಮಕ್ಕಳಿಗೆ ಬೆಳಗಾವಿಯಿಂದ ಹೈದರಾಬಾದ್‌ರೆಗೆ ವಿಮಾನದ ಪ್ರಯಾಣದ ಭಾಗ್ಯ ಲಭಿಸಿದೆ. ಈ ಮೂಲಕ ಕುಗ್ರಾಮದ (Belagavi News) ಮಕ್ಕಳ ವಿಮಾನ ಏರುವ ಕನಸನ್ನು ಬೆಳಗಾವಿ ತಾಲೂಕಿನ ಸೋನಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ನನಸು ಮಾಡಿದ್ದಾರೆ.

ಪ್ರಕಾಶ ದೇಯಣ್ಣವರ(57) ಎಂಬ ಶಿಕ್ಷಕ, ಮಕ್ಕಳಿಗೆ ವಿಮಾನಯಾನ ಭಾಗ್ಯ ಕಲ್ಪಿಸಿದ್ದಾರೆ. ಬೆಳಗಾವಿಯಿಂದ 11 ಕಿ.ಮೀ ದೂರದಲ್ಲಿರುವ ಸೋನಟ್ಟಿಯಲ್ಲಿ ಪರಿಶಿಷ್ಟ ಪಂಗಡದವರು ಮಾತ್ರ ಇದ್ದಾರೆ. ಆ ಗ್ರಾಮದ ಯಾವೊಬ್ಬ ವ್ಯಕ್ತಿಯೂ ವಿಮಾನ ಹತ್ತಿಲ್ಲ. ಇದೀಗ ಪ್ರಕಾಶ ದೇಯಣ್ಣವರ ಅವರು ತಮ್ಮ ನಾಲ್ಕು ತಿಂಗಳ ವೇತನದ ಒಟ್ಟು 2.10 ಲಕ್ಷ ರೂ.ಗಳನ್ನು ಹಣವನ್ನು ವಿಮಾನ ಪ್ರವಾಸಕ್ಕೆ ವಿನಿಯೋಗಿಸಿ, ವಿಮಾನಯಾನ ಮಾಡುವ ಮಕ್ಕಳ ಕನಸನ್ನು ಈಡೇರಿಸಿದ್ದಾರೆ. 17 ಮಕ್ಕಳು, ಮೂವರು ಶಿಕ್ಷಕರು ಮತ್ತು ಎಸ್‌ಡಿಎಂಸಿ ಅಧ್ಯಕ್ಷ ಸೇರಿ ಎಲ್ಲ 21 ಜನರ ವಿಮಾನಯಾನ, ಊಟ, ವಸತಿ ವೆಚ್ಚವನ್ನು ಅವರೇ ನೋಡಿಕೊಂಡಿದ್ದಾರೆ.

ವಿಮಾನಯಾನದ ಮೂಲಕ ಪ್ರವಾಸಕ್ಕೆ ತೆರಳಿದ್ದು, ಹೈದರಾಬಾದ್‌ನ ರಾಮೋಜಿರಾವ್ ಫಿಲ್ಮ್‌ ಸಿಟಿ, ಚಾರ್ ಮಿನಾರ್, ಪ್ರೊ ವರ್ಲ್ಡ್, ಗೋಲ್ಕೊಂಡ ಕೋಟೆ, ಸಲಾರ್ ಜಂಗ್ ವಸ್ತು ಸಂಗ್ರಹಾಲಯ ವೀಕ್ಷಿಸಿ, ಗ್ರಾಮಕ್ಕೆ ಮರಳಿದ್ದಾರೆ.

ಈ ಬಗ್ಗೆ ಶಿಕ್ಷಕ ಪ್ರಕಾಶ ದೇಯಣ್ಣವರ ಪ್ರತಿಕ್ರಿಯಿಸಿ, 1 ರಿಂದ 7ನೇ ತರಗತಿಯವರೆಗಿನ ಸೋನಟ್ಟಿ ಶಾಲೆಯಲ್ಲಿ ಮಕ್ಕಳ ಹಾಜರಾತಿ ಕಡಿಮೆ ಇತ್ತು. ಎಷ್ಟೇ ಪ್ರಯತ್ನಿಸಿದರೂ ಹಾಜರಾತಿ ಹೆಚ್ಚುತ್ತಿರಲಿಲ್ಲ. ಮಕ್ಕಳನ್ನು ಪಾಲಕರು ತಮ್ಮೊಂದಿಗೆ ಕೆಲಸದ ಸ್ಥಳಗಳಿಗೆ ಕರೆದೊಯ್ಯುತ್ತಿದ್ದರು. ಅದಕ್ಕೆ ನಾನೇ ಈ ಉಪಾಯ ಮಾಡಿದೆ ಎಂದು ತಿಳಿಸಿದ್ದಾರೆ.

ಶಾಲೆಗೆ ಯಾರು ಹೆಚ್ಚು ಹಾಜರಾತಿ ನೀಡುತ್ತಾರೋ, ಅವರನ್ನು ವಿಮಾನದ ಮೂಲಕ ಪ್ರವಾಸಕ್ಕೆ ಕರೆದೊಯ್ಯುವೆ ಎಂದು ಹೇಳಿದ್ದೆ. ಆ ದಿನದಿಂದ ಶಾಲೆಯ ಹಾಜರಾತಿ ಹೆಚ್ಚಾಯಿತು. ಹಾಜರಾತಿ ಹೆಚ್ಚಿರುವ 25 ಮಕ್ಕಳನ್ನು ಪ್ರವಾಸಕ್ಕೆ ಆಯ್ಕೆ ಮಾಡಿದೆ. ಅವರಲ್ಲಿ 17 ಮಕ್ಕಳು ವಿಮಾನದಲ್ಲಿ ಪ್ರವಾಸ ಮಾಡಿದ್ದಾರೆ ಎಂದರು.

ಈ ಸುದ್ದಿಯನ್ನೂ ಓದಿ | Viral Video: ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಶೇರ್‌ ಮಾಡಿ ಸೊಳ್ಳೆ ನಿವಾರಕ ಸೇವಿಸಿ ಆತ್ಮಹತ್ಯೆಗೆ ಯತ್ನ! ಯುವಕನ ಪ್ರಾಣ ಕಾಪಾಡಿದ ಪೊಲೀಸರು