ಹೈದರಾಬಾದ್: ಹೈದರಾಬಾದ್‌ನ ರಾಯದುರ್ಮಗಂ ಪ್ರದೇಶದಲ್ಲಿ ನಡೆದ ಶಾಕಿಂಗ್ ಘಟನೆಯೊಂದರಲ್ಲಿ (Hyderabad Shocker) 25 ವರ್ಷದ ಮಹಿಳೆಯೊಬ್ಬಳು ಅಪಾರ್ಟ್‌ಮೆಂಟ್ ಒಂದರಲ್ಲಿ ಶವವಾಗಿ ಪತ್ತೆಯಾಗಿದ್ದು, ಮೃತ ಮಹಿಳೆಯನ್ನು ಅಶ್ವಿತಾ ಸಿಂಗ್ ಎಂದು ಗುರುತಿಸಲಾಗಿದೆ. ಈಕೆಯನ್ನು 54 ವರ್ಷ ಪ್ರಾಯದ ಉದ್ಯಮಿಯೊಬ್ಬರು ಬಾಡಿಗೆ ತಾಯಿಯಾಗಲು ಕರೆದುಕೊಂಡು ಬಂದಿದದ್ದರು ಎಂಬ ವಿಚಾರವೂ ಇದೀಗ ಬಹಿರಂಗಗೊಂಡಿದೆ.
ಕಳೆದ ಮಂಗಳವಾರ (ನ. 26) ರಾತ್ರಿ ಸಮಯದಲ್ಲಿ ಈ ಮಹಿಳೆ ‘ಮೈ ಹೋಮ್ ಭೂಜಾ’ ಅಪಾರ್ಟಮೆಂಟ್‌ನ 9ನೇ ಮಹಡಿಯಿಂದ ಬಿದ್ದು ನಿಗೂಢವಾಗಿ ಸಾವನ್ನಪ್ಪಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇದೀಗ ತನಿಖೆ ಪ್ರಾರಂಭಿಸಿದ್ದಾರೆ. ಈ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಯೋ ಅಥವಾ ಕೊಲೆಯೋ ಎಂದು ಇನ್ನಷ್ಟೇ ತಿಳಿದುಬರಬೇಕಿದೆ.
ಪೊಲೀಸರು ಘಟನಾ ಸ್ಥಳಕ್ಕೆ ತಲುಪಿದ ಸಂದರ್ಭದಲ್ಲಿ, ಅಲ್ಲಿನ ದೃಶ್ಯ ಇದೊಂದು ಆತ್ಮಹತ್ಯೆ ಎಂಬುದನ್ನು ತೋರಿಸುತ್ತಿತ್ತು ಎಂದು ತಿಳಿದುಬಂದಿದೆ. ಪೊಲೀಸರಿಗೆ ಘಟನಾ ಸ್ಥಳದಲ್ಲಿನ ಬಾಲ್ಕನಿಯ ಕಂಬಿಗಳಲ್ಲಿ ಎರಡು ಸೀರೆಗಳು ಮತ್ತು ಒಂದು ದುಪ್ಪಟ ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆದರೆ ಆ ಮಹಿಳೆ ಇಲ್ಲಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿರಬಹುದಾಗಿರುವ ಸಾಧ್ಯತೆಗಳನ್ನೂ ಸಹ ಪೊಲೀಸರು ತಳ್ಳಿ ಹಾಕಿಲ್ಲ.
ಈ ಸಾಧ್ಯತೆಗಳ ಪ್ರಕಾರ, ಬಾಡಿಗೆ ತಾಯಿಯಾಗಲು ಬಂದಿದ್ದ ಮಹಿಳೆ ಸಿಂಗ್, ಉದ್ಯಮಿಯಿಂದ ಲೈಂಗಿಕ ಕಿರುಕುಳಕ್ಕೊಳಗಾಗಿದ್ದ ಸಂದರ್ಭದಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದ ಸಂದರ್ಭದಲ್ಲಿ ಈ ದುರಂತ ಸಂಭವಿಸಿರುವ ಸಾಧ್ಯತೆಗಳೂ ಇವೆ ಎನ್ನಲಾಗುತ್ತಿದೆ.
ಮೃತ ಮಹಿಳೆ ಕಳೆದ ಒಂದು ತಿಂಗಳಿಂದ ಈ ಉದ್ಯಮಿಯ ಫ್ಲ್ಯಾಟ್‌ನ ಒಂದು ಪ್ರತ್ಯೇಕ ಕೋಣೆಯಲ್ಲಿ ವಾಸಿಸುತ್ತಿದ್ದಳು ಎಂದು ತಿಳಿದುಬಂದಿದ್ದು, ಮಹಿಳೆಯ ಪತಿ ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯಂತೆ, ರಾಜೇಶ್ ಬಾಬು ಹೆಸರಿನ ಉದ್ಯಮಿ ಈಕೆಯನ್ನು ಬಾಡಿಗೆ ತಾಯಿಯಾಗಲು ಒಪ್ಪಿಸಿ ಬಳಿಕ ಆಕೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದನಂತೆ. ಇದೇ ಕಾರಣಕ್ಕೆ ಬೇಸತ್ತು ತನ್ನ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಇದೀಗ ಪೊಲೀಸರು ಉದ್ಯಮಿ ರಾಜೇಶ್ ಬಾಬು ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನಿಡಿದ್ದಾನೆಂದು ಕೇಸು ದಾಖಲಿಸಿ ತನಿಖೆ ಚುರುಕುಗೊಳಿಸಿದ್ದಾರೆ.
ಇದನ್ನೂ ಓದಿ: Actress Ramya: ಹ್ಯಾಪಿ ಬರ್ತ್ ಡೇ My Divu; ನಟಿ ರಮ್ಯಾಗೆ ಶುಭಾಶಯ ಹೇಳಿದ ಆ ಹುಡುಗ ಯಾರು?
ವರದಿಗಳ ಪ್ರಕಾರ ಉದ್ಯಮಿ ರಾಜೇಶ್ ಮತ್ತು ಆತನ ಪತ್ನಿಗೆ ಮಕ್ಕಳಿಲ್ಲದಿದ್ದ ಕಾರಣ ಅವರು ಅಶ್ವಿತಾ ಸಿಂಗ್‌ಗೆ 10 ಲಕ್ಷ ರೂ. ಆಫರ್ ನೀಡಿ ಆಕೆಯನ್ನು ತಮ್ಮ ಮಗುವಿಗೆ ಬಾಡಿಗೆ ತಾಯಿಯಾಗಲು ಒಪ್ಪಿಸಿದ್ದರು. ಆದರೆ ಸಿಂಗ್ ಸಾವನ್ನಪ್ಪಿದ ಸಂದರ್ಭದಲ್ಲಿ ಆಕೆ ಗರ್ಭಿಣಿಯಾಗಿರಲಿಲ್ಲ ಎಂದು ತಿಳಿದುಬಂದಿದೆ.
ಒಟ್ಟಿನಲ್ಲಿ, ತಮಗೊಂದು ಮಗುವನ್ನು ಪಡೆಯಲು ಹಣ ಚೆಲ್ಲಲು ಸಿದ್ದರಾಗಿದ್ದ ಉದ್ಯಮಿ ದಂಪತಿ ಮತ್ತು ಲಕ್ಷಗಟ್ಟಲೆ ಹಣದ ಆಸೆಗೆ ಬಿದ್ದು ಬಾಡಿಗೆ ತಾಯಿಯಾಗಲು ಒಪ್ಪಿದ್ದ ಬಡ ಮಹಿಳೆಯ ನಡುವಿನ ಈ ಸಂಬಂಧದಲ್ಲಿ ಇದೀಗ ಏನೋ ಒಂದು ‘ಗೊಂದಲ’ ಉಂಟಾಗಿ ಅಮಾಯಕ ಮಹಿಳೆಯ ಜೀವ ಹಾನಿಯೊಂದು ಸಂಭವಿಸಿದಂತಾಗಿದೆ.