Thursday, 14th November 2024

ಇದು ಅಜ್ಞಾತವಾಗಿ ಸತ್ತ ನೆಹರು ’ಭಾವ’ನ ದುರಂತ ಕಥೆ !

ನೂರೆಂಟು ವಿಶ್ವ

ವಿಶ್ವೇಶ್ವರ ಭಟ್

ಲಾಕ್ ಡೌನ್ ಕಾಲದಲ್ಲಿ ಓದಬೇಕೆಂದು ಒಂದು ಪುಸ್ತಕವನ್ನು ಎತ್ತಿಟ್ಟುಕೊಂಡಿದ್ದೆ. ಆದರೆ ಕಾರಣಾಂತರಗಳಿಂದ ಓದಲು ಆಗಿರಲಿಲ್ಲ. ಈಜಿಪ್ತ್ ರಾಜಧಾನಿ ಕೈರೋಗೆ ಹೋದಾಗ, ಭಾರತ ರಾಯಭಾರ ಕಚೇರಿಯಲ್ಲಿದ್ದ ಅಧಿಕಾರಿಯೊಬ್ಬರು, ‘ಈ
ಈಜಿಪ್ತ್ ನಗರಕ್ಕೆ City of the Dead ಅಂತ ಕರೆಯುತ್ತಾರೆ. ಆದರೆ ಇಲ್ಲೊಬ್ಬ ಅದ್ಭುತ ವ್ಯಕ್ತಿ ಸತ್ತು ಅರವತ್ತೈದು ವರ್ಷಗಳಾದವು. ಆದರೆ ಆತ ಈಗಲೂ ಜೀವಂತ ಇದ್ದಾನೆ’ ಎಂದು ಹೇಳಿದ್ದರು.

ಅವರ ಮಾತು ಕೇಳಿ ಒಂದು ಕ್ಷಣ ನನಗೆ ಆಶ್ಚರ್ಯವಾಗಿತ್ತು. ಆಗ ಅವರು, ‘ಈಜಿಪ್ತಿನ ಪಿರಮಿಡ್ಡುಗಳಲ್ಲಿ ಮಮ್ಮಿಗಳನ್ನು ಇಟ್ಟಿದ್ದಾರೆ ತಾನೇ? ಹೀಗಾಗಿ ಈ ನಗರಕ್ಕೆ City of the Dead ಅಂತ ಕರೆಯುತ್ತಾರೆ. ಇಲ್ಲೊಬ್ಬ ಭಾರತದ ರಾಯಭಾರಿಯಿದ್ದರು. ಅವರು ಕರ್ತವ್ಯದಲ್ಲಿದ್ದಾಗಲೇ ಇಲ್ಲಿ ನಿಧನರಾದರು. ಅವರ ಹೆಸರು ಸಯ್ಯದ್ ಹುಸೇನ್. ಅವರು ಸತ್ತೇ ಅರವತ್ತೈದು ವರ್ಷ ಗಳಾದ್ದರಿಂದ ನೀವು ಅವರ ಹೆಸರನ್ನು ಕೇಳಿರುವ ಸಾಧ್ಯತೆ ಕಮ್ಮಿ.

ಇಂದಿಗೂ ಅವರ ನೆನಪಿನಲ್ಲಿ ಒಂದು ಸ್ಮಾರಕವಿದೆ. ನಿಮಗೆ ಸಮಯವಿದ್ದಿದ್ದರೆ ಕರೆದುಕೊಂಡು ಹೋಗುತ್ತಿದ್ದೆ’ ಎಂದು ಹೇಳಿ ದರು. ಅವರು ಹಾಗೆ ಹೇಳುತ್ತಿದ್ದಂತೆ, ನಾನು ‘ನೀವು ಮೋತಿಲಾಲ ನೆಹರು ಅಳಿಯ ಹುಸೇನ್ ಬಗ್ಗೆ ಹೇಳಿದ್ದು ತಾನೇ?’ ಎಂದು ಕೇಳಿದೆ. ಅದಕ್ಕೆ ಅವರು ‘ಹೌದು..ಹೌದು .. ಅವರೇ’ ಎಂದು ಹೇಳಿದರು. ಹಾಗೆಂದು ನನಗೆ ಹುಸೇನ್ ಬಗ್ಗೆ ಗೊತ್ತಿದ್ದುದೂ ಅಷ್ಟೇ. ಅಲ್ಲಿಂದ ಬರುವಾಗ, ನಮ್ಮಿಬ್ಬರ ಭೇಟಿಯ ನೆನಪಿನ ಕುರುಹುವಿಗೆಂದು ಆ ಅಧಿಕಾರಿ, ಒಂದು ಪುಸ್ತಕ ನೀಡಿದ್ದರು.

ಅದರ ಹೆಸರು – A Forgotten Ambassador in Cairo: The Life and Times of Syud Hossain.. ಕಳೆದ ಐದು ವರ್ಷಗಳಿಂದ ಈ ಪುಸ್ತಕವನ್ನು ಓದಬೇಕೆಂದರೂ ಆಗಿರಲಿಲ್ಲ. ಮೊನ್ನೆ ಇದನ್ನು ಓದಿ ಮುಗಿಸಿದಾಗ, ಒಂದು ಗಾಢವಾದ ವಿಷಾಧಭರಿತ ಪ್ರೇಮಕಥೆ
ಯನ್ನೋ, ಸಿನಿಮಾವನ್ನೋ ನೋಡಿದಂತಾಯಿತು. ಇದನ್ನು ಎನ್.ಎಸ್.ವಿನೋದ್ ಎಂಬುವವರು ಬರೆಯದಿದ್ದರೆ, ಹುಸೇನ್ ಕತೆಯೂ ಈಜಿಪ್ತಿನ ಮಮ್ಮಿಗಳಂತೆ ಅ ಉಳಿದು ಬಿಡುತ್ತಿತ್ತು. ಇಂಥ ಒಬ್ಬ ಅದ್ಭುತ ವ್ಯಕ್ತಿಯಿದ್ದ ಎಂಬುದೂ ಗೊತ್ತಾಗುತ್ತಿರಲಿಲ್ಲ ಮತ್ತು ಆ ಒಂದು ಅಮರ ಪ್ರೇಮ ಕಹಾನಿ ಬೆಳಕಿಗೇ ಬರುತ್ತಿರಲಿಲ್ಲ.

ನಿಮಗೆ ಸಯ್ಯದ್ ಹುಸೇನ್ ಬಗ್ಗೆ ಹೇಳಬೇಕು. ಅವರು 1888ರಲ್ಲಿ ಕೊಲ್ಕೊತಾದಲ್ಲಿ ಹುಟ್ಟಿದ್ದು. ಅವರ ತಂದೆ ನವಾಬ ಸಯ್ಯದ್ ಮೊಹಮ್ಮದ್ ಅಜಾದ್. ಅವರದು ಅತ್ಯಂತ ಶ್ರೀಮಂತ ಮತ್ತು ವಿಲಾಸಿ ಕುಟುಂಬ. ಹುಸೇನ್ ತಾಯಿ ಬಾಂಗ್ಲಾದೇಶದ ಫರೀದಪುರದ ನವಾಬ ಬಹದ್ದೂರ್ ಅಬ್ದುಲ್ ಲತೀಫ್ ಮಗಳು. ಹುಸೇನ್ ಮುತ್ತಾತ ಅಶ್ರಫ್ ಅಲಿಖಾನ್. ಆತ ಬಂಗಾಳದ ಅತ್ಯಂತ ಶ್ರೀಮಂತ ಜಮೀನುದಾರ. ಸಯ್ಯದ್ ಹುಸೇನ್ ಬಂಗಾರದ ಚಮಚವನ್ನು ಬಾಯಲ್ಲಿಟ್ಟುಕೊಂಡೇ ಹುಟ್ಟಿದವರು. ನೋಡಲು ಸ್ಪುರದ್ರೂಪಿ.

ಹಾವಭಾವ ಗಮನಿಸಿದರೆ, ನೋಡುತ್ತಲೇ ಇರಬೇಕು ಎಂದು ಅನಿಸುವಂಥ ಮೋಹಕ ವ್ಯಕ್ತಿತ್ವ. ಆರಂಭದ ದಿನಗಳಲ್ಲಿ ಅಲಿಘರ್ ‌ನಲ್ಲಿ ವಿದ್ಯಾಭ್ಯಾಸ ಮುಗಿಸಿ ಕೊಲ್ಕೊತಾದಲ್ಲಿ ಡೆಪ್ಯುಟಿ ಕಲೆಕ್ಟರ್ ಆಗಿ ಸೇರಿಕೊಂಡರು. ಆದರೆ ಅದು ಅವರಿಗೆ ಹೇಳಿ ಮಾಡಿಸಿದ ಕೆಲಸವಾಗಿರಲಿಲ್ಲ. ಹುಸೇನ್ ಅವರದು ಪಾದರಸದಂಥ ವ್ಯಕ್ತಿತ್ವ. ನಾಲ್ಕು ಜನರ ನಡುವೆ ಯಾವ ವಿಷಯದ ಕುರಿತಾದರೂ ಮಾತಾಡಿದರೆ, ತಲೆದೂಗಬೇಕು, ಅಂಥ ಮಾತು, ವಿಷಯ, ನಡೆವಳಿಕೆಯನ್ನು ರೂಢಿಸಿಕೊಳ್ಳಬೇಕು ಎಂಬುದು ಅವರ ಆಸೆಯಾಗಿತ್ತು. ಅದಕ್ಕೆ ಪೂರಕವಾಗಿ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಅವರು ಪ್ರಯತ್ನಿಸುತ್ತಿದ್ದರು.

ಬಾಲ್ಯದ ದಿನಗಳಿಂದಲೂ ಹುಸೇನ್ ಗೆ ಇಂಗ್ಲಿಷ್ ಭಾಷೆ ಸಹಜವಾಗಿ ಒಲಿದಿತ್ತು. ಅವರು ಇಂಗ್ಲಿಷಿನಲ್ಲಿ ನಿರರ್ಗಳವಾಗಿ ಮಾತಾಡ ಲಾರಂಭಿಸಿದರೆ, ಎಂಥವರನ್ನಾದರೂ ಮರುಳು ಮಾಡುತ್ತಿದ್ದರು. ಇಂಗ್ಲಿಷಿನಲ್ಲಿ ಮಾತೊಂದೇ ಅಲ್ಲ,  ಬರವಣಿಗೆಯೂ ಒಲಿದಿತ್ತು. ಇತಿಹಾಸ, ರಾಜಕೀಯ, ತತ್ವಶಾಸ್ತ್ರ, ಧರ್ಮ, ಕಲೆ, ಸಾಹಿತ್ಯ, ಅಂತಾರಾಷ್ಟ್ರೀಯ ವಿದ್ಯಮಾನಗಳು ಅವರಿಗೆ ಆಸಕ್ತ ವಿಷಯವಾಗಿದ್ದವು.

ಯಾವುದೇ ವಿಷಯದ ಬಗೆಗಾದರೂ, ಕೇಳುಗರನ್ನು ಸಮ್ಮೋಹನಗೊಳಿಸುವ ಚಾಕಚಾಕ್ಯತೆ ಒಲಿದಿತ್ತು. ಅದಕ್ಕೆ ಕಳಶಪ್ರಾಯವಾಗಿ ರೂಪ ಬೇರೆ. ಸಕಲ ಗುಣವೂ ಅವರಲ್ಲಿ ಸಂಪನ್ನಗೊಂಡಿತ್ತು. ಎಂಥವರನ್ನಾದರೂ ಸೂಜಿಗಲ್ಲಿನಂತೆ ಆಕರ್ಷಿಸುವ ಅಪರೂಪದ ವ್ಯಕ್ತಿ !

ಹುಸೇನ್ ಬಗ್ಗೆ ತಂದೆಗೆ ನೂರಾರು ಕನಸು. ಮಗನನ್ನು ಲಂಡನ್ನಿಗೆ ಕಳುಹಿಸಿ ಬ್ಯಾರಿಸ್ಟರ್ ಮಾಡಬೇಕು ಎಂಬುದು ಅವುಗಳಂದು. ಹುಸೇನ್‌ಗೆ ಇಪ್ಪತ್ತು ವರ್ಷಗಳಾದಾಗ, ತಂದೆಯ ಕೋರಿಕೆಯಂತೆ ಲಂಡನ್ನಿಗೆ ಹೊರಟರು. ಅಲ್ಲಿ ಪ್ರತಿಷ್ಠಿತ ಲಿಂಕನ್ ಇನ್ ಲಾ ಕಾಲೇಜನ್ನು ಸೇರಿಕೊಂಡರು. ಆದರೆ ಲಂಡನ್ನಿನ ಸಾಮಾಜಿಕ ಜೀವನಕ್ಕೆ ಮಾರು ಹೋದ ಹುಸೇನ್, ಏಳು ವರ್ಷಗಳಾದರೂ ಬ್ಯಾರಿಸ್ಟರ್ ಮುಗಿಸಲೇ ಇಲ್ಲ. ಲಂಡನ್ನಿನಲ್ಲಿ ಅವರು ಸಾಹಿತಿಗಳು, ಬುದ್ಧಿಜೀವಿಗಳು, ಚಿಂತಕರು, ಪತ್ರಕರ್ತರು, ರಾಜಕಾರಣಿಗಳ ಜತೆಗೆ ಕಳೆದಿದ್ದೇ ಹೆಚ್ಚು.

ಮೊದಲ ಮಹಾಯುದ್ಧದಿಂದ ಬ್ರಿಟನ್ ಅನೇಕ ಸ್ಥಿತ್ಯಂತರಗಳಿಗೆ ತುತ್ತಾಗಿತ್ತು. ಈ ಮಧ್ಯೆ ಭಾರತದಲ್ಲೂ ಅನೇಕ ಬೆಳವಣಿಗೆ ಗಳಾಗುತ್ತಿದ್ದವು. ಮಹಾತ್ಮ ಗಾಂಧಿ ಕೂಡ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಮರಳಿದ್ದರು. ಬ್ರಿಟಿಷ್ ಆಳ್ವಿಕೆ ಬಗ್ಗೆ ಎಡೆ ಅಸಹನೆ ಆಕ್ರೋಶ ಮುಗಿಲು ಮುಟ್ಟಿತ್ತು. ಇಂಥ ಸಂದರ್ಭದಲ್ಲಿ ಬ್ರಿಟನ್ನಿನಲ್ಲಿರುವುದಕ್ಕಿಂತ ಭಾರತಕ್ಕೆ ಮರಳುವುದೇ ಲೇಸು ಎಂದು ಹುಸೇನ್ ಅವರಿಗೆ ಅನಿಸಿತು.

ಮುಂಬೈಗೆ ಬಂದುಬಿಟ್ಟರು. ಬಂದವರೇ ಫಿರೋಜ್ ಶಾ ಮೆಹ್ತಾ ಅವರ ‘ಬಾಂಬೆ ಕ್ರಾನಿಕಲ್‌’ ಪತ್ರಿಕೆಗೆ ಅಸೋಸಿಯೇಟ್ ಎಡಿಟರ್ ಆಗಿ ಸೇರಿದರು. ಆಗ ಆ ಪತ್ರಿಕೆಗೆ ಬಿ.ಜಿ.ಹಾರ್ನಿಮನ್ ಸಂಪಾದಕರಾಗಿದ್ದರು. ಅವರು ಬ್ರಿಟಿಷ್ ಆಡಳಿತದ ವಿರುದ್ಧ ಬರೆಯುತ್ತಿದ್ದ ಸಂಪಾದಕೀಯ, ಲೇಖನಗಳು ಬಹಳ ಪ್ರಸಿದ್ಧ ವಾಗಿದ್ದವು. ಆದರೆ ಅವರು ಸಂಪಾದಕರಾಗಿ ಮುಂದುವರಿಯಲು ಬ್ರಿಟಿಷರು ಬಿಡಲಿಲ್ಲ. ಹಾರ್ನಿಮನ್ ಸಂಪಾದಕ ಹುದ್ದೆ ತೊರೆದಾಗ, ಬಂದವರೇ ಹುಸೇನ್.

ಆಗ ಅವರಿಗೆ ಇಪ್ಪತ್ತೊಂಬತ್ತು ವರ್ಷ. ಲಂಡನ್ನಿನ ಟ್ಯಾಬ್ಲಾಯ್ಡ್ ಪತ್ರಿಕೆಗಳಿಂದ ಪ್ರಭಾವಿತರಾಗಿದ್ದ ಹುಸೇನ್, ತಮ್ಮ ಪತ್ರಿಕೆಯ
ಸ್ವರೂಪವನ್ನೇ ಬದಲಿಸಿದರು. ಅನಿ ಬೆಸಂಟ್ ಅವರಿಗೆ ಆಪ್ತರಾದ ಹುಸೇನ್, ಹೋಮ್ ರೂಲ್ ಚಳವಳಿಯಲ್ಲಿ ಸಕ್ರಿಯರಾದರು.
ಹುಸೇನ್ ಬರಹಗಳಿಂದ ಪತ್ರಿಕೆ ಬಹುಬೇಗ ಪ್ರಸಾರವನ್ನು ಹೆಚ್ಚಿಸಿಕೊಂಡಿತಷ್ಟೇ ಅಲ್ಲ, ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ
ಮುಂಚೂಣಿಯಲ್ಲಿದ್ದ ನಾಯಕರ ಅಚ್ಚುಮೆಚ್ಚಿನ ಪತ್ರಿಕೆಯಾಯಿತು. ಬ್ರಿಟಿಷ್ ಆಡಳಿತ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಮೇಲೆ ಪ್ರಭಾವ ಬೀರುವ ಲೇಖಕ ಮತ್ತು ಸಂಪಾದಕರಾಗಿ ಬಹುಬೇಗ ಗುರುತಿಸಿಕೊಂಡರು.

ಈ ಕಾರಣದಿಂದ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಮೋತಿಲಾಲ್‌ ನೆಹರು ಸಂಪರ್ಕಕ್ಕೆ ಬಂದರು. ನೆಹರು ಆ ಕಾಲಕ್ಕೆ ‘ದಿ ಇಂಡಿ ಪೆಂಡೆಂಟ್’ ಎಂಬ ಇಂಗ್ಲಿಷ್ ಪತ್ರಿಕೆಯನ್ನು ಆರಂಭಿಸಿದ್ದರು. ಮೋತಿಲಾಲ ಅವರು ಹುಸೇನ್ ಬರಹ ಮತ್ತು ಸಂಪಾದಕತ್ವಕ್ಕೆ ಮಾರು ಹೋಗಿದ್ದರು. ಹೇಗಾದರೂ ಮಾಡಿ ತಮ್ಮ ಪತ್ರಿಕೆಗೆ ಅವರನ್ನು ಸೇರಿಸಿಕೊಳ್ಳಬೇಕು ಎಂದು ಅಂದು ಕೊಂಡಿದ್ದರು. ಈ ಪ್ರಸ್ತಾಪವನ್ನು ಹುಸೇನ್ ಮುಂದಿಟ್ಟಾಗ, ಅವರು ಅದನ್ನು ಸ್ವೀಕರಿಸಿದರು.

‘ದಿ ಇಂಡಿಪೆಂಡೆಂಟ್’ಗೆ ಹುಸೇನ್ ಪ್ರಧಾನ ಸಂಪಾದಕರಾಗಿ ಸೇರಿಕೊಂಡರು. ಅವರು ಸೇರಿದ ಆರು ತಿಂಗಳಲ್ಲಿ ಪತ್ರಿಕೆಯ
ಸ್ವರೂಪವೇ ಬದಲಾಗಿ ಹೋಯಿತು. ಹುಸೇನ್ ಬರೆಯುತ್ತಿದ್ದ ಮುಖಪುಟ ಸಂಪಾದಕೀಯಕ್ಕೆ ಓದುಗರು ಕಾದು ಕುಳಿತಿರು ತ್ತಿದ್ದರು. ಬ್ರಿಟಿಷ್ ಸರಕಾರದ ವಿರುದ್ಧ ಪ್ರತಿದಿನ ಒಂದಿಂದು ಲೇಖನ, ವರದಿಗಳಿರುತ್ತಿದ್ದವು. ಈ ಕಾರಣದಿಂದ ಮೋತಿಲಾಲ ಜತೆ ಹುಸೇನ್ ಒಡನಾಟ ಜಾಸ್ತಿಯಾಯಿತು. ಅವರು ಪ್ರತಿದಿನ ಮೋತಿಲಾಲರ ನಿವಾಸ ‘ಆನಂದ ಭವನ’ಕ್ಕೆ ಬರಲಾರಂಭಿಸಿದರು. ಇದೇ ಅವರ ಜೀವನಕ್ಕೆ ಮುಳುವಾಗಬಹುದು ಎಂದು ಯಾರೂ ಊಹಿಸಿರಲಿಲ್ಲ.

ಕೆಲವೊಮ್ಮೆ ‘ಆನಂದ ಭವನ’ಕ್ಕೆ ಹೋದಾಗ, ಮೋತೀಲಾಲರಿಗೆ ಕಾಯಬೇಕಾಗುತ್ತಿತ್ತು. ಆಗ ಕಣ್ಣಿಗೆ ಬಿದ್ದವಳೇ ಮೋತಿಲಾಲರ ಮಗಳು ಸ್ವರೂಪರಾಣಿ (ವಿಜಯಲಕ್ಷ್ಮಿ ಪಂಡಿತ್) ಇಬ್ಬರದೂ ಮೊದಲ ನೋಟದಲ್ಲಿ ಅರಳಿದ ಪ್ರೇಮ. ಆಗ ಅವಳಿಗೆ ಹತ್ತೊಂಬತ್ತು ವರ್ಷ. ಹುಸೇನ್ ಗೆ ಮೂವತ್ತೊಂದು ವರ್ಷ. ಇಬ್ಬರೂ ಮೋತಿಲಾಲ ಕಣ್ಣು ತಪ್ಪಿಸಿ ಓಡಾಡಲಾರಂಭಿಸಿದರು. ಪತ್ರಿಕೆಯ ನೆಪವಿಟ್ಟುಕೊಂಡು ರಾತ್ರಿ ಸಮಯದಲ್ಲಿ ಹುಸೇನ್ ಆನಂದ ಭವನಕ್ಕೆ ಬರಲಾರಂಭಿಸಿದರು.

ಇಬ್ಬರೂ ಪ್ರೀತಿಯನ್ನು ಗುಟ್ಟಾಗಿ ಇಡಲು ಪ್ರಯತ್ನಿಸಿ, ವಿಫಲರಾದರು. ವಿಷಯ ಮೋತಿಲಾಲರ ಕಿವಿಗೂ ಬಿತ್ತು. ಮನಸ್ಸು ಮಾಡಿದ್ದರೆ ಅವರು ಹುಸೇನ್ ಅವರನ್ನು ಕೆಲಸದಿಂದ ಕಿತ್ತು ಹಾಕಬಹುದಿತ್ತು. ಅದರ ಅಡ್ಡ ಪರಿಣಾಮ ಪತ್ರಿಕೆ ಮೇಲಾಗುತ್ತದೆ ಎಂಬ ಕಾರಣಕ್ಕೆ, ತಮ್ಮ ಮಗಳಿಗೆ ಬೇಗ ಗಂಡನ್ನು ಹುಡುಕಿದರು. ಒಂದು ದಿನ ಕಂಗಾಲಾದ ಸ್ವರೂಪ, ಹುಸೇನ್ ಮನೆಗೆ ಓಡಿ ಬಂದು, ‘ನನಗೆ ಬೇರೆ ಗಂಡನ್ನು ನೋಡಿದ್ದಾರೆ, ಆತ ಬ್ಯಾರಿಸ್ಟರ್ ರಂಜಿತ್ ಪಂಡಿತ್. ನಾವು ಒಂದೋ ಊರು ಬಿಟ್ಟು ಓಡಿ ಹೋಗೋಣ, ಇಲ್ಲವೇ ಈಗಲೇ ಮದುವೆಯಾಗೋಣ. ನಾನಂತೂ ನಿನ್ನ ಬಿಟ್ಟು ಬೇರೆ ಯಾರನ್ನೂ ಮದುವೆ ಆಗುವುದಿಲ್ಲ’ ಎಂದು ಹುಸೇನ್‌ಗೆ ಹೇಳಿದಳು. ಹುಸೇನ್ ಕೂಡ ಅದೇ ಮನಸ್ಥಿತಿಯಲ್ಲಿದ್ದರು.

ಇನ್ನು ಒಂದು ತಿಂಗಳು ಕಾದರೆ, ಸ್ವರೂಪರಾಣಿ ಮದುವೆ. ಬೇರೆ ದಾರಿಯಿರಲಿಲ್ಲ. ಪರಿಸ್ಥಿತಿಯ ಪರಿಣಾಮವನ್ನು ಲೆಕ್ಕಿಸದೇ,
ಹುಸೇನ್ ತಮ್ಮ ಮನೆಯಲ್ಲಿ ಮೌಲ್ವಿಗಳನ್ನು ಕರೆಯಿಸಿ, ಮುಸ್ಲಿಂ ಸಂಪ್ರದಾಯದಂತೆ, ಮೋತಿಲಾಲರ ಮಗಳನ್ನು (ಜವಾಹರ
ಲಾಲ ನೆಹರು ಸಹೋದರಿ) ಮದುವೆಯಾಗಿಬಿಟ್ಟರು! ಆ ಸಮಯದಲ್ಲಿ ಮೋತಿಲಾಲರು ಊರಿನಲ್ಲಿ ಇರಲಿಲ್ಲ. ಅವರು ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳಲೆಂದು ಲಾಹೋರಿಗೆ ಹೋಗಿದ್ದರು. ಈ ವಿಷಯ ಜವಾಹರಲಾಲ್ ನೆಹರು ಗಮನಕ್ಕೆ ಬಂದಿತು.

ಅವರಂತೂ ಸಹೋದರಿಯ ನಡೆಯಿಂದ ತೀವ್ರ ಕ್ರುದ್ಧರಾಗಿದ್ದರು. ಅವರು ತಕ್ಷಣ ವಿಷಯವನ್ನು ಮಹಾತ್ಮ ಗಾಂಧಿ ಗಮನಕ್ಕೆ ತಂದರು. ಹೇಗಾದರೂ ಮಾಡಿ ಸ್ವರೂಪರಾಣಿಯನ್ನು ಹುಸೇನ್ ಮನೆಯಿಂದ ಕರೆದುಕೊಂಡು ಬರುವಂತೆ ಸೂಚಿಸಿದರು. ಉಪಾಯ ಮಾಡಿ ನೆಹರು ತಮ್ಮ ತಂಗಿಯನ್ನು ಮನೆಗೆ ಕರೆಯಿಸಿದರು. ತಾವು ಬರುವವರೆಗೆ ಸ್ವರೂಪರಾಣಿಯನ್ನು ಗೃಹಬಂಧನ  ದಲ್ಲಿಡುವಂತೆ ಗಾಂಧೀಜಿ ಸೂಚಿಸಿದರು. ಮೋತಿಲಾಲರಂತೂ ‘ಆನಂದ ಭವನ’ಕ್ಕೆ ಬರುತ್ತಿದ್ದಂತೆ ವಿಷಯ ಕೇಳಿ ಚಿಂತಾಕ್ರಾಂತ ರಾದರು.

ಹುಸೇನ್ ಅವರನ್ನು ಒಬ್ಬ ಸಂಪಾದಕರನ್ನಾಗಿ ಇಷ್ಟಪಟ್ಟಿದ್ದರೂ ತಮ್ಮ ಅಳಿಯನನ್ನಾಗಿ ಸ್ವೀಕರಿಸಲು ಸುತರಾಂ ಸಿದ್ಧರಿರಲಿಲ್ಲ. ಈ ಸಂಬಂಧ ಮುರಿದು ಬೀಳುವಂತೆ ಮಾಡಬೇಕೆಂದು ಅವರೂ ಗಾಂಧೀಜಿ ಮುಂದೆ ಅಂಗಲಾಚಿದರು. ಗಾಂಧೀಜಿಗೂ ಈ ಸಂಬಂಧ ಇಷ್ಟವಿರಲಿಲ್ಲ. ಗಾಂಧೀಜಿ ಹುಸೇನ್ ಅವರನ್ನು ‘ಆನಂದ ಭವನ’ಕ್ಕೆ ಕರೆಯಿಸಿಕೊಂಡು ಬುದ್ಧಿ ಹೇಳಿದರು.

ಹುಸೇನ್‌ಗೆ ಆತ್ಮೀಯ ರಾದವರಿಂದಲೂ ಹೇಳಿಸಿದರು. ಮದುವೆಯಾದ ವಿಷಯವನ್ನು ಎಲ್ಲೂ ಬಾಯಿಬಿಡದಂತೆ ತಾಕೀತು ಮಾಡಿದರು. ಹುಸೇನ್ ಗಾಂಧೀಜಿಯವರನ್ನು ಪೂಜಿಸುವಷ್ಟು ಇಷ್ಟಪಡುತ್ತಿದ್ದರು. ಆದರೆ ಆ ಸಂದರ್ಭದಲ್ಲಿ ಅವರ ಮಾತು ಗಳನ್ನು ಕೇಳಿ ಕಂಗಾಲಾದರು. ಗಾಂಧೀಜಿ ಹುಸೇನ್ ಮೇಲೆ ಅಕ್ಷರಶಃ ಮಾನಸಿಕ ಒತ್ತಡ ಹೇರಿದ್ದರು. ಕೊನೆಗೆ ಗಾಂಧೀಜಿ ಮಾತಿಗೆ ಕಟ್ಟು ಬಿದ್ದು, ಸ್ವರೂಪರಾಣಿಯಿಂದ ದೂರವಾಗಲು ಒಪ್ಪಿದರು.

ಗಾಂಧೀಜಿ ಸ್ವರೂಪರಾಣಿಯನ್ನು ಕೆಲ ಕಾಲ ತಮ್ಮ ಸಬರಮತಿ ಆಶ್ರಮದಲ್ಲಿಟ್ಟುಕೊಂಡು, ಧಾರ್ಮಿಕವಾಗಿ ‘ಶುದ್ಧಿ’ ಕಾರ್ಯ ನೆರವೇರಿಸಿದರು. ಆಶ್ರಮದಲ್ಲಿ ನಾಲ್ಕು ತಿಂಗಳು ಇದ್ದು, ಎಲ್ಲವನ್ನೂ ಮರೆಯುವಂತೆ ಸ್ವರೂಪರಾಣಿಗೆ ಹೇಳಿದರು. ಆ ಪ್ರಕಾರ ಆಕೆಗೆ ಆಶ್ರಮದಲ್ಲಿ ಇರುವುದಕ್ಕೆ ಎಲ್ಲಾ ಅನುಕೂಲ ಮಾಡಿಕೊಟ್ಟರು. ಹುಸೇನ್ ಭಾರತದಲ್ಲಿದ್ದರೆ, ಆಕೆಯನ್ನು ಹೇಗಾದರೂ ಭೇಟಿಯಾಗಲು ಪ್ರಯತ್ನಿಸ ಬಹುದೆಂದು ದೇಶದಿಂದ ದೂರ ಕಳಿಸಲು ನಿರ್ಧರಿಸಿದರು.

ಉಪಾಯ ಮಾಡಿ, ಖಿಲಾಫತ್ ಚಳವಳಿಯ ವಕ್ತಾರರೆಂದು ವಿಶೇಷ ನಿಯೋಗದಲ್ಲಿ ಹುಸೇನ್ ಅವರನ್ನು ಬ್ರಿಟನ್‌ಗೆ ಕಳಿಸಿ ಬಿಟ್ಟರು. ಹೋಗುವಾಗ ಇನ್ನು ಯಾವ ಕಾರಣಕ್ಕೂ ಭಾರತಕ್ಕೆ ಬರಕೂಡದೆಂದು ಕಿವಿಮಾತು ಹೇಳಿ ಬೀಳ್ಕೊಟ್ಟರು. ಅತ್ತ ಹುಸೇನ್ ಲಂಡನ್ ತಲುಪಿದ ಸುದ್ದಿ ತಿಳಿಯುತ್ತಿದ್ದಂತೆ, ಇತ್ತ ‘ಆನಂದ ಭವನ’ದಲ್ಲಿ ಸ್ವರೂಪರಾಣಿಯ ಮದುವೆ ರಂಜಿತ್ ಪಂಡಿತ ನೊಂದಿಗೆ ಅದ್ಧೂರಿಯಾಗಿ ನೆರವೇರಿತು. ಸ್ವರೂಪರಾಣಿ, ‘ವಿಜಯಲಕ್ಷ್ಮಿ ಪಂಡಿತ’ ಆದಳು. ಅವರಿಬ್ಬರ ವಿವಾಹ ವಿಚ್ಛೇದನಕ್ಕೆ ಸಂಬಂಧಿಸಿದ ಕಾಗದ ಪತ್ರಗಳನ್ನು ನಾಶಪಡಿಸಲಾಯಿತು.

ಒಂದು ಪ್ರೇಮ ವಿವಾಹ ಹೇಳ ಹೆಸರಿಲ್ಲದೇ ಅಡಗಿಹೋಯಿತು. ಹುಸೇನ್‌ಗೆ ಲಂಡನ್ ಪರಿಚಿತ ನಗರವಾಗಿತ್ತು. ಆದರೂ ಅವರಿಗೆ ಅಲ್ಲಿ ಸುಮಾರು ಒಂದು ವರ್ಷ ವಾಸಿಸಲು ಗಾಂಧೀಜಿ ಸೂಚನೆ ಮೇರೆಗೆ ನೆಹರು ಏರ್ಪಾಟು ಮಾಡಿದ್ದರು. ಹುಸೇನ್ ಯಾವ ಕಾರಣಕ್ಕೂ ಭಾರತಕ್ಕೆ ವಾಪಸ್ ಬರದಿರಲಿ ಮತ್ತು ಅವಳನ್ನು ಮರೆಯಲಿ ಎಂಬುದು ಉದ್ದೇಶವಾಗಿತ್ತು. ಅದಾದ ಬಳಿಕವೂ, ನೆಹರು ತಮ್ಮ ಪ್ರಭಾವ ಬಳಸಿ ಹುಸೇನ್ ಸ್ವದೇಶಕ್ಕೆ ಮರಳದಂತೆ ಒತ್ತಡ ಹೇರಿದರು.

ಅನ್ಯ ಮಾರ್ಗವಿಲ್ಲದೇ ಹುಸೇನ್ ಅಮೆರಿಕಕ್ಕೆ ಹೋಗಿ ನೆಲೆಸಿದರು. ಅಮೆರಿಕದ ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸ ಮಾಡುತ್ತಾ, ರಾಜಕೀಯ ಸಭೆಗಳಲ್ಲಿ ಭಾಷಣ ಮಾಡುತ್ತಾ, ರಾಜತಾಂತ್ರಿಕ ವಲಯಗಳಲ್ಲಿ ಭಾರತದ ಪರ ಮಾತಾಡುತ್ತಾ, ಅಮೆರಿಕ ನಾಯಕರಿಗೆ ಭಾರತದ ವಿಷಯಗಳ ಬಗ್ಗೆ ಸಲಹೆ ನೀಡುತ್ತಾ, ಪತ್ರಿಕೆಗಳಿಗೆ ಲೇಖನ ಬರೆಯುತ್ತಾ, ಇಪ್ಪತ್ತೆರಡು ವರ್ಷಗಳನ್ನು ಕಳೆದರು. ಅಮೆರಿಕದ ಕೆಲವು ವಿಶ್ವವಿದ್ಯಾಲಯಗಳು ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಸನ್ಮಾನಿಸಿತ್ತು.

ಅಕಾಡೆಮಿಕ್ ವಲಯದಲ್ಲೂ ಹುಸೇನ್ ಗಮನ ಸೆಳೆದಿದ್ದರು. ಅವರನ್ನು ಅಮೆರಿಕದಲ್ಲಿರುವ ಭಾರತದ ಅಘೋಷಿತ ರಾಯಭಾರಿ’ ಎಂದು ಪರಿಚಯಿಸ ಲಾಗುತ್ತಿತ್ತು. ಈ ಅವಧಿಯಲ್ಲಿ ಅವರು ಭಾರತಕ್ಕೆ ಬಂದಿದ್ದು ಒಂದೇ ಒಂದು ಸಲ. ಅದೂ ಮೂರು ತಿಂಗಳ ಮಟ್ಟಿಗೆ. ಆ ಅವಧಿಯಲ್ಲಿ ಹುಸೇನ್, ಸುಭಾಷ್ ಬೋಸ್ ಅವರಿಗೆ ಹತ್ತಿರವಾದದ್ದನ್ನು ಕಂಡು, ಆದಷ್ಟು ಬೇಗ ಅಮೆರಿಕಕ್ಕೆ
ತೊಲಗುವಂತೆ ಸೂಚನೆ ಬಂದಿತು. ಹುಸೇನ್ ಪುನಃ ಅಮೆರಿಕಕ್ಕೆ ಬಂದುಬಿಟ್ಟರು.

ಈ ಮಧ್ಯೆ 1944ರಲ್ಲಿ ವಿಜಯಲಕ್ಷ್ಮಿ ಪಂಡಿತ್ ಗಂಡ ರಂಜಿತ್ ಪಂಡಿತ್ ನಿಧನರಾದರು. ಅವರ ಮಕ್ಕಳು ಉನ್ನತ ವ್ಯಾಸಂಗ ಕ್ಕೆಂದು ಅಮೆರಿಕದಲ್ಲಿ ನೆಲೆಸಿದ್ದರು. 1945ರಲ್ಲಿ ವಿಜಯಲಕ್ಷ್ಮಿ ಪಂಡಿತ್ ಅಮೆರಿಕಕ್ಕೆ ಬಂದು ನೆಲೆಸಿದರು. ಅಲ್ಲಿ ಹುಸೇನ್ – ವಿಜಯಲಕ್ಷ್ಮಿ ಪುನಃ ಭೇಟಿಯಾದರು. ಅಲ್ಲಿ ಅವರಿಬ್ಬರೂ ಅಮೆರಿಕದೆಡೆ ಸುತ್ತಿದರು. ಇದು ನೆಹರು ಕಿವಿಗೂ ಬಿತ್ತು. ಆದರೆ ಈ ಹಂತದಲ್ಲಿ ಅವರು ಏನೂ ಮಾಡುವಂತಿರಲಿಲ್ಲ.

’ಯಾರು ಏನೇ ಹೇಳಲಿ, ನೀನು ಭಾರತಕ್ಕೆ ಮರಳಬೇಕು’ ಎಂದು ವಿಜಯಲಕ್ಷ್ಮಿ ಹುಸೇನ್ ಗೆ ಹೇಳಿದಳು. ಭಾರತದ ವಿಭಜನೆಗೆ ಮಾತುಕತೆ ನಡೆಯುತ್ತಿದ್ದವು. ಈ ಸಂದರ್ಭದಲ್ಲಿ ಅಮೆರಿಕದಲ್ಲಿರುವುದಕ್ಕಿಂತ, ಭಾರತಕ್ಕೆ ಹೋಗಬೇಕು ಮತ್ತು ಸಕ್ರಿಯ ರಾಜ ಕಾರಣಕ್ಕಿಳಿಯಬೇಕೆಂದು ಹುಸೇನ್ ನಿರ್ಧರಿಸಿ ಭಾರತಕ್ಕೆ ಬಂದರು. ವಿಜಯಲಕ್ಷ್ಮಿ ಪಂಡಿತ್ ಮತ್ತು ಹುಸೇನ್  ಕಾರ್ಯಕ್ರಮ ಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು.

ಇದು ನೆಹರುಗೆ ನುಂಗಲಾರದ ತುತ್ತಾಗಿತ್ತು. ಆಗಾಗ ಪತ್ರಿಕೆಗಳಲ್ಲಿ ಈ ವಿಷಯ ಪ್ರಸ್ತಾಪವಾಗಿ ಮುಜುಗರವಾಗುತ್ತಿತ್ತು. ನೆಹರು ಒಂದು ಉಪಾಯ ಮಾಡಿದರು. ವಿಜಯ ಲಕ್ಷ್ಮಿಯನ್ನು ರಷ್ಯಾಕ್ಕೆ ರಾಯಭಾರಿಯಾಗಿ ಮತ್ತು ಹುಸೇನ್ ಅವರನ್ನು ಈಜಿಪ್ತ್‌ಗೆ ರಾಯಭಾರಿಯೆಂದು ಕಳುಹಿಸಿ ಅವರಿಬ್ಬರನ್ನು ದೂರ ಮಾಡಿ ಖಳನಾಯಕನ ಪಾತ್ರ ಮೆರೆದರು. ಆದರೂ ಒಮ್ಮೆ ವಿಜಯಲಕ್ಷ್ಮಿ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಪಾಲ್ಗೊಳ್ಳಲು ಹೋಗುವಾಗ, ಮಾರ್ಗ ಮಧ್ಯೆ ಕೈರೋದಲ್ಲಿ ನಾಲ್ಕು ದಿನ ಹುಸೇನ್ ಜತೆ ಇದ್ದಳು. ಅದೇ ಅವರ ಕೊನೆ ಭೇಟಿ.

ಅದಾಗಿ ಒಂದು ತಿಂಗಳಲ್ಲಿ ಹುಸೇನ್ ಹೃದಯಾಘಾತದಿಂದ, ತಮ್ಮ ಅರವತ್ತೊಂದನೇ ವಯಸ್ಸಿನಲ್ಲಿ ಕೈರೋದಲ್ಲಿ ಮೃತಪಟ್ಟರು.
ಹುಸೇನ್ ಗೆ ಸಕಲ ಸರಕಾರಿ ಗೌರವದಿಂದ ಅಂತಿಮ ಸಂಸ್ಕಾರ ನೆರವೇರಿಸಿ, ಸ್ಮಾರಕವನ್ನು ನಿರ್ಮಿಸುವಂತೆ, ವಿಜಯಲಕ್ಷ್ಮಿ
ಪಂಡಿತ್ ಒತ್ತಾಯ ಮಾಡಿದರು. ನೀನು ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳದಿದ್ದರೆ ಅವನ್ನೆಲ್ಲ ನೆರವೇರಿಸುವುದಾಗಿ ನೆಹರು
ಹೇಳಿದರು. ಹೀಗಾಗಿ ವಿಜಯಲಕ್ಷ್ಮಿ ಪಂಡಿತ್ ಹುಸೇನ್ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳಲಿಲ್ಲ. ನೆಹರು ಮನವಿಗೆ ಸ್ಪಂದಿಸಿದ ಈಜಿಪ್ತ್ ಸರಕಾರ ಹುಸೇನ್‌ಗೆ ಒಂದು ಸ್ಮಾರಕ ನಿರ್ಮಿಸಿತು.

ಅದು ಬಿಟ್ಟರೆ ಹುಸೇನ್ ಬದುಕಿದ್ದುದಕೆ ಬೇರೆ ಕುರುಹು ಗಳಿಲ್ಲ. ಹೀಗಾಗಿ ಯಾರೂ ಅವರನ್ನು ನೆನಪಿಸಿಕೊಳ್ಳುವುದಿಲ್ಲ. ಅವರು
ಮರೆತು ಹೋದ ರಾಯಭಾರಿ ಅಷ್ಟೇ ಅಲ್ಲ, ಪ್ರೇಮ ರಾಯಭಾರಿಯೂ ಹೌದು.