Thursday, 14th November 2024

ಸಂಚಲನ ಮೂಡಿಸಬಹುದೆ ಹೊಸಬರ ದಂಡು

ಅವಲೋಕನ

ರಮಾನಂದ ಶರ್ಮಾ

ಇತ್ತೀಚೆಗೆ ನಡೆದ ಒಂದು ಕಿರುತೆರೆ ಪ್ರಶಸ್ತಿ ಸಮಾರಂಭದಲ್ಲಿ ವೀಕ್ಷಕರ ಗಮನ ಸೆಳೆದದ್ದು; ಪ್ರಶಸ್ತಿ ಯಾರು ಪಡೆದರು ಎನ್ನುವುದಕ್ಕಿಂತ ಪ್ರಶಸ್ತಿ ಪಟ್ಟಿಯಲ್ಲಿರುವ ಹೊಸಬರ ದಂಡು. ಒಂದೆರಡು ಹಳೆ ಮುಖಗಳು ಇದ್ದರೂ, ಹೊಸ ಮುಖಗಳೇ ಎದ್ದು ಕಾಣುತ್ತಿದ್ದವು.

ಪ್ರತಿಯೊಂದು ಪ್ರಶಸ್ತಿಯನ್ನೂ ಈ ಹೊಸ ಮುಖಗಳೇ ಬಾಚಿಕೊಳ್ಳುತ್ತಿದ್ದವು. ತೀರಾ ಇತ್ತೀಚಿನವರೆಗೆ ಕೇವಲ ಕೆಲವರೆ ನಿರಂತರ ವಾಗಿ ಪ್ರಶಸ್ತಿಗಳನ್ನು ಸ್ವೀಕರಿಸುತ್ತಿದ್ದನ್ನು ನೋಡಿದ ವೀಕ್ಷಕರಿಗೆ ಆಶ್ಚರ್ಯ ಕಾದಿತ್ತು ಮತ್ತು ಒಂದು ರೀತಿಯ ನವಿರಾದ ಹೊಸ ಅನುಭವ ಅಗುತ್ತಿತ್ತು. ಕಿರುತೆರೆಗೆ ಹೊಸತನ ಮತ್ತು ಹೊಸಬರು ದೊಡ್ಡ ಪ್ರಮಾಣದಲ್ಲಿ ದಾಳಿ ಇಟ್ಟದ್ದು, ಧಾರಾವಾಹಿಗಳಿಗೆ ವೀಕ್ಷಕರು ಹೆಚ್ಚಾಗುವುದರೊಂದಿಗೆ ಕಿರುತೆರೆ ಕಾರ್ಯಕ್ರಮಗಳಿಗೆ ಲವಲವಿಕೆ ನೀಡಿದೆ.

ಕಥೆ, ಚಿತ್ರಕಥೆ, ಸಂಭಾಷಣೆ, ಅಭಿನಯ, ನಿರ್ದೇಶನ, ನಿರ್ಮಾಣ ವೈಖರಿ, ಲೊಕೇಷನ್, ಉಡುಪುಗಳಲ್ಲಿ ನವನವೀನತೆ
ಕಾಣುತ್ತಿದೆ. ಧಾರಾವಾಹಿಗಳು ಎಂದರೆ ಮೂಗುಮುರಿಯುತ್ತಿದ್ದ ಮತ್ತು ಕ್ಲಾಸ್ ವೀಕಕ್ಷರು ಎಂದು ಸ್ವಯಂ ಹಣೆಪಟ್ಟಿ ಕಟ್ಟಿ ಕೊಂಡವರೂ ಕೂಡ ದೊಡ್ಡ ಪ್ರಮಾಣದಲ್ಲಿ ಡ್ರಾಯಿಂಗ್ ರೂಮ್‌ನಲ್ಲಿ ಎಲ್ಲರೊಡನೆ ಕುಳಿತು ಧಾರಾವಾಹಿ ವೀಕ್ಷಿಸುವ
ಮಟ್ಟಕ್ಕೆ ಬಂದಿದೆ.

ಕನ್ನಡ ಕಿರುತೆರೆ ಧಾರಾವಾಹಿಗಳು ಡಬ್ಬಾ ಎನ್ನುತ್ತಾ ಪರಭಾಷಾ ಧಾರಾವಾಹಿಗಳಿಗೆ ಚಂದಾದಾರರಾದ ಹಲವು ಸೆಲೆಬ್ರಿಟಿಗಳು ಮತ್ತು ಸ್ನೋಬಿಷ್ ಅಟಿಟ್ಯೂಡ್‌ನವರೂ ಕ್ರಮೇಣ ಕನ್ನಡದತ್ತ ಮುಖ ಮಾಡುತ್ತಿದ್ದಾರೆ. ಇಂದು ಕೆಲವರ ಧಾರಾವಾಹಿಗಳಿಗೆ ಮಾತ್ರ ಸೀಮಿತವಾಗಿದ್ದ ವೀಕ್ಷಕ ವರ್ಗ ಮತ್ತು ಟಿಆರ್‌ಪಿ ಕ್ರಮೇಣ ಇತರ ಧಾರಾವಾಹಿಗಳಿಗೂ ದೊರಕುತ್ತಿದೆ. ಹಾಗೆಯೇ ನಮ್ಮ ಧಾರಾವಾಹಿಗಳು ಇತರ ಭಾಷೆ ಧಾರಾವಾಹಿಗಳಿಗೆ ಯಾವುದೇ ದೃಷ್ಟಿಯಲ್ಲೂ ಕಡಿಮೆ ಇಲ್ಲ ಎನ್ನುವ ಮಾತುಗಳೂ ಕೇಳಿ ಬರುತ್ತಿವೆ.

ಹೊಸ ಹೊಸ ನಿರ್ಮಾಪಕರು ಇಂದು ಧಾರಾವಾಹಿ ನಿರ್ಮಾಣಕ್ಕೆ ಹೂಡಿಕೆ ಮಾಡಲು ಮುಂದಾಗುತಿದ್ದಾರೆ. ಮೀಡಿಯಾ ಮತ್ತು ಎಂಟರ್ ಟೇನ್ ವಿಶ್ಲೇಷಕರ ಪ್ರಕಾರ ಇದು ಈ ವಲಯದಲ್ಲಿ ಪ್ರವೇಶ ಮಾಡುತ್ತಿರುವ ಹೊಸಬರ ದೃಷ್ಟಿಕೋನದ ಪರಿಣಾಮ ಮತ್ತು ಬದಲಾವಣೆಯ ನಾಡಿಮಿಡಿತ ಹಿಡಿದು ಕಾರ್ಯ ನಿರ್ವಹಿಸುವ ಅವರ ಅಟಿಟ್ಯೂಡ್. ದಶಕಗಳಿಂದ ಕಿರುತೆರೆಯಲ್ಲಿ ಮಿಂಚುತ್ತಿರುವ ಹಲವು ಹಳಬರು ಕ್ರಮೇಣ ನೇಪಥ್ಯಕ್ಕೆ ಸರಿದು ಹೊಸಬರಿಗೆ ದಾರಿ ಬಿಡುತ್ತಿದ್ದಾರೆ.

ಕಿರುತೆರೆಯಲ್ಲಿ ಕಾಣುವ ಹೊಸ ನಟ – ನಟಿಯರನ್ನು ನೋಡಿದಾಗ, ಈ ಬದಲಾಣೆ ಇನ್ನೂ ಮೊದಲೇ ಬರಬಾರದಿತ್ತೆ ಎನಿಸ ದಿರದು. ಕ್ರಿಕೆಟ್‌ನಲ್ಲೂ ಹೊಸಬರ ದಂಡು ಸಂಚಲನ ಮೂಡಿಸಬಹುದೆ? ಹೊಸಬರ ಸದ್ದು ಜೋರಾಗಿ ಕೇಳುತ್ತಿರುವ ಇನ್ನೊಂದು ಕ್ಷೇತ್ರ ಕ್ರಿಕೆಟ್. ಹಳಬರ ಯಜಮಾನಿಕೆ ಕ್ರಮೇಣ ಹಿನ್ನೆಲೆಗೆ ಸರಿದು ಹೊಸಬರು ಮೇಲ್ಮೆ ಸಾಧಿಸುವ ಕುರುಹುಗಳು ಕಾಣುತ್ತಿವೆ.

ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಭಾರತದ ಅನನುಭವಿ ಎಳೆಯರ ಕ್ರಿಕೆಟ್ ತಂಡ ದೈತ್ಯ ಆಸ್ಟ್ರೇಲಿಯಾ ಟೀಮನ್ನು ಬಗ್ಗು ಬಡಿದಿರುವ ಪರಿ, ಭಾರತಿಯ ಕ್ರಿಕೆಟ್‌ನಲ್ಲಿ ಹೊಸಬರಿಗೆ ಅವಕಾಶ ಸಿಗಲಿ ಎನ್ನುವ ಕೂಗನ್ನು ಹುಟ್ಟು ಹಾಕಿದೆ. ಭಾರತದ ಕ್ರಿಕೆಟ್‌ನ ವೈಶಿಷ್ಟ್ಯ ವೆಂದರೆ ಕೆಲವರು ದೇವಸ್ಥಾನದ ಮೊಕ್ತೇಸರ ಮಂಡಳಿಯಲ್ಲಿ ಇರುವ ಅಜೀವ ಸದಸ್ಯರಂತೆ ಮುಂದುವರಿಯುತ್ತಾರೆ. ಅವರ ಸಾಧನೆಗಳ ಬಗೆಗೆ ವಿಶೇಷ ಚರ್ಚೆ ಯಾಗುವುದಿಲ್ಲ. ಅವರು ವೈಫಲ್ಯ ಕಂಡಾಗ ಅವರ ಹಿಂದಿನ ಯಾವುದೋ ಸಾಧನೆಗಳನ್ನು ಉಖಿಸಿ ಅವರನ್ನು ಟೀಂನಲ್ಲಿ ಇರಿಸಿಕೊಳ್ಳುತ್ತಾರೆ.

ಅದೇ ಹೊಸಬನೊಬ್ಬನು ಫೇಲಾದರೆ  ಅವರಿಗೆ ಕೂಡಲೇ ಗೇಟ್‌ಪಾಸ್ ಕೊಡುತ್ತಾರೆ. ಕ್ರಿಕೆಟ್‌ನಲ್ಲಿ ದಶಕ ಗಳಿಂದ ಆಡುತ್ತಲೇ ಇರುವವರು ಕೆಲವರಿದ್ದಾರೆ. ಅವರಿಗೆ ನಿವೃತ್ತಿ ಎನ್ನುವುದು ಇಲ್ಲ. ಅವರು ಬಯಸಿದಾಗಷ್ಟೇ ನಿವೃತ್ತಿ. ದುರ್ದೈವವೆಂದರೆ ಅವಕಾಶ ನೀಡಿದರೆ ಅವರು ಪುನಃ ಪ್ಯಾಡ್ ಕಟ್ಟಲು ರೆಡಿ ಇದ್ದಾರೆ ಮತ್ತು ಕೆಲವರು ಇವರ ಮುಂದುವರಿಕೆಗೆ ಕೈ ಎತ್ತುತ್ತಾರೆ. ಅಂತೆಯೇ ವರ್ಷಗಳ ಹಿಂದೆ ಕ್ರಿಕೆಟ್ ಆಟಗಾರರು ಆಡುವ ಎ ರೀತಿಯ ಪಂದ್ಯಗಳ ಮೇಲೆ ಗರಿಷ್ಟ ಮಿತಿಯನ್ನು ಹೇರಬೇಕು ಮತ್ತು ಅವರ ಆಡುವ ವಯಸ್ಸಿನ ಮೇಲೂ ಮಿತಿ ಇರಬೇಕು ಎನ್ನುವ ಸಲಹೆಯನ್ನು ಕೆಲವರು ನೀಡಿದ್ದರು.

ಆದರೆ ಕೆಲವು ಹಿತಾಸಕ್ತಿಗಳ ಮೇಲಾಟದಲ್ಲಿ ಇದನ್ನು ಮೊಗ್ಗಿನಲ್ಲಿಯೇ ಚಿವುಟಲಾಯಿತು ಮತ್ತು ಅದು ಮೇಲ್ಮೆ ಗೆ ಬರಲೇ ಇಲ್ಲ. ತಮ್ಮ ಸಾಧನೆಗಳಿಂದ ಆಯ್ಕೆ ಗಾರರ ಕದ ತಟ್ಟುವವರಿಗೆ ಸ್ಪಂದನೆ ಅಷ್ಟಾಗಿ ದೊರಕುವುದಿಲ್ಲ. ಐಪಿಎಲ್ ಎನ್ನುವ ಇನ್‌ಸ್ಟಂಟ್ ಕ್ರಿಕೆಟ್‌ನಿಂದಾಗಿ ಇಷ್ಟರ ಮಟ್ಟಿಗಾದರೂ, ಹೊಸಬರು ಕ್ರಿಕೆಟ್ ಮೈದಾನದಲ್ಲಿ ಕಾಣುತ್ತಿದ್ದಾರೆ.

ದೇಶದಲ್ಲಿ ಸಾಧಕರಿಗೆ ಮತ್ತು ಪ್ರತಿಭಾವಂತ ರಿಗೆ ಕಿಂಚಿತ್ತೂ ಕೊರತೆ ಇಲ್ಲ. ಆದರೆ ಅವರಿಗೆ ಅವಕಾಶ ದೊರಕುತ್ತಿಲ್ಲ. ಹಳಬರು ಮತ್ತು ಹಿರಿಯ ಹುಲಿಗಳು ಗಾಯಗೊಂಡು ಕುಳಿತಿರುವಾಗ, ಕ್ರಿಕೆಟ್ ಪಂಡಿತರು ಸಿಡ್ನಿ ಪಂದ್ಯ ಇದೊಂದು ಕಾಟಾಚಾರದ ಪಂದ್ಯ,
ಟೆಸ್ಟ್ ಕೈತಪ್ಪಿ ಹೋಗಿದೆ, formalitiesನ್ನು ಪೂರ್ಣಗೊಳಿಸಲು ಅಷ್ಟೇ ಪಂದ್ಯವನ್ನು ಆಡಬೇಕು ಎಂದು ಭಾಷ್ಯ ಬರೆದಿದ್ದರು.
ಕೊನೆಗೆ ಆಗಿದ್ದೇನು? ಈ ಪಂಡಿತರು ಮುಖದ ಮೇಲೆ ಮೊಟ್ಟೆ ಹೊಡೆಸಿಕೊಂಡರು.

ಹಿರಿಯ ಮತ್ತು ಹಳೆಯ ಆಟಗಾರರು ನಾಚಿಕೆ ಪಡುವಂತೆ, ತಮ್ಮನ್ನು ತಾವೇ ನಂಬದಂತೆ, ಬಾಲನ್ನು ಬೌಂಡರಿಗೆ ಎಸೆದು ಯಾವುದನ್ನೂ ಇಂಪಾಸಿಬಲ್ ಎಂದು ದೃಢವಾಗಿ ತಿಳಿಯ ಲಾಗಿತ್ತೋ ಅದನ್ನು ಪಾಸಿಬಲ್ ಎಂದು ಈ ಹೊಸಬರು ತೋರಿಸಿದರು. ಎರಡೂ ಇನ್ನಿಂಗ್ಸ್‌ನಲ್ಲಿ ಅವರು ತೋರಿಸಿದ ಸಾಧನೆ, ಇವರ ಆಟ ಆಕಸ್ಮಿಕ ವಾಗಿರಲಿಲ್ಲ ಎನ್ನುವುದನ್ನು ಎತ್ತಿ ತೋರಿಸುತ್ತದೆ.

ನಟರಾಜನ್, ವಾಷಿಂಗ್ಟನ್ ಸುಂದರ, ಪಂತ, ಚಿತೇಶ್ವರ್ ಪೂಜಾರ ಮೊದಲಾದ ಕ್ರಿಕೆಟ್ ಹಸುಳೆಗಳ ಆಟ ಪಟ್ಟಭದ್ರ ಆಟಗಾರರಿಗೆ ನಡುಕ ಹುಟ್ಟಿಸಿದೆ. ಕ್ರಿಕೆಟ್‌ನಲ್ಲಿ ತಮ್ಮ ದಿನಗಳು ಮುಗಿಯ ಬಹುದೇನೋ ಎನ್ನುವ ಆತಂಕದಲ್ಲಿ ಕಾಣಿಸುತ್ತಿzರೆ. ಕ್ರಿಕೆಟ್ ಆಯ್ಕೆ ಮಂಡಳಿ ತನ್ನ ಆಯ್ಕೆ ಮಾನದಂಡವನ್ನು ಬದಲಿಸಿ ಹೊಸಬರಿಗೆ ಅವಕಾಶ ನೀಡಬಹುದೇ ಎನ್ನುವ ಚಿಂತನೆ ಕ್ರಿಕೆಟ್ ಪ್ರಿಯರಲ್ಲಿ, ಅಭಿಮಾನಿಗಳಲ್ಲಿ ಮೊಳಕೆಯೊಡೆಯುತ್ತಿದೆ. ಹೊಸಬರು ಇಂದು ಸಾಧನೆ ಮತ್ತು ಭರವಸೆಯ ಬ್ಯಾಗ್‌ನೊಂದಿಗೆ ಅಯ್ಕೆ ಮಂಡಳಿಯ ಬಾಗಿಲನ್ನು ಜೋರಾಗಿ ತಟ್ಟುತ್ತಿದ್ದಾರೆ.

ಕ್ರಿಕೆಟ್ ಆಟ ಮತ್ತು ದೇಶವನ್ನು ಪ್ರತಿನಿಧಿಸುವುದು ಕೆಲವರ ಒಡ್ಡೋಲಗವಾಗುವುದು ನಿಲ್ಲಬಹುದೇ? ರಾಜಕೀಯದಲ್ಲೂ ಹೊಸಬರು ಮೆರೆಯಲಿ: ಕಿರುತೆರೆ ಮತ್ತು ಕ್ರಿಕೆಟ್‌ನಂತೆ ರಾಜಕೀಯದಲ್ಲಿಯೂ ಕೂಡಾ ಹೊಸಬರ ಪ್ರವೇಶ ಕಾಣಬೇಕಾಗಿದೆ. ದೇಶದ ರಾಜಕೀಯ ರಂಗವನ್ನು ಸೂಕ್ಷ್ಮವಾಗಿ ನೋಡಿದರೆ ರಾಜಕೀಯ ಆಧಿಕಾರವು ಕಳೆದ ಕೆಲವು ದಶಕಗಳಿಂದ ಕೆಲವರ ಸೊತ್ತಾಗಿರುವಂತೆ ಕಾಣುತ್ತದೆ.

ಕೆಲವರಂತೂ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಹೇಗಾದರೂ ಮಾಡಿ ಅಧಿಕಾರ ಹಿಡಿಯುತ್ತಾರೆ. ಒಮ್ಮೆ ಅಧಿಕಾರದ ಜುಟ್ಟು ಕೈಗೆ ದೊರಕಿದರೆ, ಅದು ಎಂದೆಂದಿಗೂ ಜಾರದಂತೆ ಜಾಗರೂಕವಾಗಿ ನೋಡಿಕೊಳ್ಳುತ್ತಾರೆ ಮತ್ತು ತಂತ್ರಗಾರಿಕೆ ಮಾಡುತ್ತಾರೆ. ನಾಲ್ಕು ಜನ ಹೊತ್ತೊಯ್ಯುವವರೆಗೆ ಅಥವಾ ತಮ್ಮವರು ತಮ್ಮ ಸ್ಥಾನಕ್ಕೆ ಬರುವವರೆಗೆ ಅಧಿಕಾರಕ್ಕೆ
ಅಂಟಿಕೊಳ್ಳುತ್ತಾರೆ.

ಅನುಭವದ ಮೂಸೆಯ ಹೆಸರಿನಲ್ಲಿ ಅಧಿಕಾರ ತಮ್ಮ ಹಕ್ಕು ಎಂದು ಹೇಳುತ್ತಾರೆ. ಮುಖ್ಯಪಾತ್ರ ದೊರಕಬಹುದು ಎಂದು ಹಲವರು ಕೋಡಂಗಿ ವೇಷ ಕುಣಿಯು ತ್ತಲೇ ಇರುತ್ತಾರೆ, ಅಗಳು ಬರಬಹುದು ಎನ್ನುವ ನಿರೀಕ್ಷೆಯಲ್ಲಿ ತಿಳಿ ಕುಡಿಯುತ್ತಾರೆ. ಯಾವುದೇ ಪಕ್ಷ ಆಧಿಕಾರಕ್ಕೆ ಬರಲಿ, ಅವೇ ಹಳೆ ಮುಖಗಳು ಅಧಿಕಾರದಲ್ಲಿ ಮಿಂಚುತ್ತಾರೆ.

ಅವರ ಖಾತೆಗಳು ಬದಲಾಗಬಹುದು ಮತ್ತು ಅವರ ಬಂಗಲೆಗಳು ಬದಲಾಗ ಬಹುದು, ಅವರು ಮಾತ್ರ ಸ್ಥಿರ ಬಂಡೆಯಾಗಿ ನಿಂತಿರುತ್ತಾರೆ. ಅಂತೆಯೇ ಆಡಳಿತದಲ್ಲಿ ಜಡತ್ವ ಮುಂದು ವರಿದು ಹೊಸ ಆಯಾಮಗಳಿಗೆ, ನವ ನವೀನತೆಗೆ, ಪುರೋಗಾಮಿ ಯೋಜನೆಗಳಿಗೆ ಅವಕಾಶ ದೊರಕುವುದಿಲ್ಲ. ಬದಲಾದ ಜಗತ್ತಿಗೆ ಇವರ ಆಡಳಿತ ವೈಖರಿ ಸ್ಪಂದಿಸುವುದಿಲ್ಲ. ಚುನಾವಣಾ ಸಮಯದಲ್ಲಿ ಟಿಕೆಟ್ ನೀಡುವಾಗ ಗೆಲ್ಲುವ ಕುದುರೆಯ ಹೆಸರಿನಲ್ಲಿ, ಅನುಭವ ದ ಕೊರತೆ ಹೆಸರಿನಲ್ಲಿ ಹೊಸಬರನ್ನು ತಡೆಯ ಲಾಗುತ್ತದೆ.

ಚುನಾವಣೆ ನಂತರ ಅನುಭವಿಗಳ ಸೇವೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಹೊಸಬರನ್ನು ಹೊರ
ನಿಲ್ಲಿಸಲಾಗುತ್ತದೆ. ಅವರನ್ನು ಬಾಯಿ ಮುಚ್ಚಿಸಲು you have a long way to godon’t be in hurry ಎಂದು ಉಪದೇಶಿಸ
ಲಾಗುತ್ತದೆ. ಇವರು ಹೈಕಮಾಂಡ್ ಭೂತದ ಭಯದ ಹೆಸರಿನ ಅಥವಾ ಪಕ್ಷ ನೀಡುವ ಭರವಸೆಯ ಬೆಳಕಿನ ಶಬರಿ ರಾಮನಿಗೆ ಕಾಯುವಂತೆ ಕಾಯುತ್ತಾರೆ. ಶಬರಿಗಾದರೂ ರಾಮನ ದರ್ಶನ ಆಗುತ್ತದೆ. ಆದರೆ, ಇವರಿಗೆ ಆ ಭಾಗ್ಯ ದೊರಕುವುದೇ ಇಲ್ಲ. ಆಡಳಿತಕ್ಕೆ ಚುರುಕು ಮುಟ್ಟಿಸಲು, ಜಡತ್ವಕ್ಕೆ ಬೈ ಹೇಳಲು, ತ್ವರಿತ ನಿರ್ಣಯ ತೆಗೆದುಕೊಳ್ಳಲು, ಹೊಸ – ಹೊಸ ಯೋಜನೆಗಳನ್ನು ತರಲು. ಓಬಿರಾಯನ ಕಾಲದ ಆಡಳಿತ ವ್ಯವಸ್ಥೆಗೆ ಕಾಯಕಲ್ಪ ನೀಡಲು, ಅಪೇಕ್ಷಿಸಿದ ಪ್ರಗತಿಯನ್ನು ಸಾಧಿಸಲು, ರಾಜಕಾರಣ ದಲ್ಲಿ ಹೊಸಬರು ಮುಖ್ಯ ವಾಗಿ ಯುವಕರ ದಂಡು ಇಂದಿನ ತುರ್ತು ಅವಶ್ಯಕತೆ.

ಯುವಕರು ಮತ್ತು ಹೊಸಬರು ಇಂದು ದೊಡ್ಡ ಸಂಖ್ಯೆಯಲ್ಲಿ ಆಸಕ್ತಿ ತೋರಿಸುತ್ತಿದ್ದು, ಹಳಬರು ತಮ್ಮ ಕಾಲ ಮುಗಿಯಿತೆಂದು ಸಂಘರ್ಷ ಇಲ್ಲದೆ ಇವರಿಗೆ ದಾರಿಬಿಟ್ಟು ತಮ್ಮ ದೊಡ್ಡ ತನವನ್ನು ತೋರಿಸುವ ಅನಿವಾರ್ಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ದೂಡಿ ಹೊರ ಹಾಕುವ ಮೊದಲು ಅಥವಾ ಚುನಾವಣೆಯಲ್ಲಿ ಮತದಾರರು ತಮ್ಮ ಅಜೆಂಡಾವನ್ನು ಕಾರ್ಯ ರೂಪಕ್ಕೆ ತರುವ ಮೊದಲು ದಾರಿ ಬಿಟ್ಟು ಕೊಟ್ಟರೆ, ಈ ಬೆಳವಣಿಗೆ ಬಹುಕಾಲ ಜನಮನದಲ್ಲಿ ಉಳಿಯುತ್ತದೆ.

ಹೊಸಬರ ಮತ್ತು ಯುವಕರ ದಾಳಿ ಸದ್ಯ ಕ್ರಿಕೆಟ್, ಕಿರು ಮತ್ತು ಹಿರಿತೆರೆ, ರಾಜಕೀಯ ರಂಗದಲ್ಲಿ ಗೋಚರಿಸುತ್ತಿದ್ದು, ಇದು
ಮುಂದಿನ ದಿನಗಳಲ್ಲಿ ಎಲ್ಲಾ ರಂಗಕ್ಕೂ ವಿಸ್ತರಿಸುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು.