Friday, 20th September 2024

ರೈತ ಹೋರಾಟದ ಕಿಚ್ಚಿನ ರಣಂ

ಪ್ರಶಾಂತ್‌ ಟಿ.ಆರ್‌

ರೈತನೇ ದೇಶದ ಬೆನ್ನೆಲುಬು, ನಮ್ಮೆಲ್ಲರಿಗೂ ಅನ್ನದಾತ. ಆದರೂ ರೈತರ ಸಮಸ್ಯೆಗಳಿಗೆ ಪರಿಹಾರ ಇನ್ನೂ ಸಿಕ್ಕಿಲ್ಲ. ಹುಡುಕುವ ಪ್ರಯತ್ನವೂ ನಡೆದಿಲ್ಲ. ರೈತರ ಪರ ಸರಕಾರ ಎಂದು ಹೇಳುವ ರಾಜಕಾರಣಿಗಳು, ಸ್ವಾರ್ಥಕ್ಕಾಗಿ ರೈತರನ್ನು ಬಲಿಕೊಡುತ್ತಿದ್ದಾರೆ. ಇಷ್ಟಾದರೂ ಸರಕಾರಗಳು ರೈತರ ಸಮಸ್ಯೆಗಳಿಗೆ ಪರಿಹಾರ ನೀಡಲು ವಿಫಲವಾಗಿವೆ. ಇತ್ತೀಚಿನ ದಿನಗಳಲ್ಲಂತೂ, ರೈತರ ಜೀವ ಹಿಂಡುವ ಕಾಯ್ದೆ ಕಾನೂನುಗಳನ್ನು ತಂದು ಅವರಿಗೆ ಕಿರುಕುಳ ನೀಡಲಾಗುತ್ತಿದೆ. ಇವೆಲ್ಲಾ ಅಂಶಗಳನ್ನು ಹೊತ್ತು, ರೈತ ಸಮಸ್ಯೆಗಳನ್ನು ಬಿಂಬಿಸುವ ‘ರಣಂ’ ಚಿತ್ರ ತೆರೆಗೆ ಬಂದಿದೆ. ‘ರಣಂ’ ಟೈಟಲ್ ‌ನಲ್ಲೇ ಪಂಚಿಂಗ್ ಇದೆ. ರೈತ ಹೋರಾಟ ಕಿಚ್ಚು ಚಿತ್ರದಲ್ಲಿ ಹಾಸುಹೊಕ್ಕಾಗಿದೆ. ಇದರ ಜತೆಗೆ ಬಡವರ ನೋವಿನ ಧ್ವನಿಯಾಗಿಯೂ ಚಿತ್ರ ನಿಲ್ಲುತ್ತದೆ. ನಮ್ಮ ಅನ್ನದಾತರು ಚೆನ್ನಾಗಿರಬೇಕೆಂದು ಯುವಕರ ಪಡೆಯೊಂದು ರೈತರ ಪರ ಕಾಳಜಿವಹಿಸಿ ಹೋರಾಡುವುದೇ ‘ರಣಂ’ ಚಿತ್ರದ ಒನ್ ಲೈನ್ ಸ್ಟೋರಿಯಾಗಿದೆ.

ರಣಂ ಚಿತ್ರದಲ್ಲಿ ಯುವಸಾಮ್ರಾಟ್ ಚಿರಂಜೀವಿ ಸರ್ಜಾ ಪೊಲೀಸ್ ಖದರ್‌ನಲ್ಲಿ ಮಿಂಚಿದ್ದಾರೆ. ಸಮಾಜಘಾತುಕರನ್ನು ಮುಲಾಜಿಲ್ಲದೆ ಹೆಡೆಮುರಿ ಕಟ್ಟಿ, ನೊಂದವರಿಗೆ ನ್ಯಾಯ ಒದಗಿಸುವುದೇ ಈ ಯುವ ಪೊಲೀಸ್ ಅಧಿಕಾರಿಯ ಕರ್ತವ್ಯ ವಾಗಿರುತ್ತದೆ. ಈ ಪಾತ್ರದಲ್ಲಿ ಚಿರು ಗಮನಸೆಳೆಯುತ್ತಾರೆ.

‘ರಣಂ’ ಚಿರಂಜೀವಿ ಸರ್ಜಾ ನಟಿಸಿರುವ ಕೊನೆಯ ಚಿತ್ರ. ಚಿರು ಅವರೇ ತಮ್ಮ ಪಾತ್ರಕ್ಕೆ ದನಿ ನೀಡಿದ್ದಾರೆ. ಚಿರು ಇಲ್ಲವೆಂಬ ಕೊರಗು ಅವರ ಅಭಿಮಾನಿಗಳನ್ನು ಇನ್ನೂ ಕಾಡುತ್ತಿದ್ದು, ‘ರಣಂ’ ಚಿತ್ರದ ಮೂಲಕ ಮತ್ತೆ ಅವರನ್ನು ತೆರೆಯ ಮೇಲೆ ಕಣ್ತುಂಬಿಕೊಳ್ಳುವ ಅವಕಾಶ ಸಿಕ್ಕಿದೆ. ‘ರಣಂ’ ಚಿತ್ರದಲ್ಲಿ ಅತಿರಥ ಮಹಾರಥರ ತಂಡವೇ ಸೇರಿಕೊಂಡಿದೆ. ತೆಲುಗು ನಿರ್ದೇಶಕ ಸಮುದ್ರ ಸಾರಥ್ಯದಲ್ಲಿ ಚಿತ್ರ ಮೂಡಿಬಂದಿದೆ. ಇನ್ನು ‘ಯುವರಾಜ’, ‘ಬಹದ್ದೂರ್’, ‘ಭರ್ಜರಿ’ ಸಿನಿಮಾ ಗಳನ್ನು ನಿರ್ಮಾಣ ಮಾಡಿರುವ ಆರ್.ಶ್ರೀನಿವಾಸ್, ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ವರಲಕ್ಷೀ ಶರತ್‌ಕುಮಾರ್ ಈ ಚಿತ್ರದಲ್ಲಿ ಸಿಬಿಐ ಅಧಿಕಾರಿಯಾಗಿ ನಟಿಸಿದ್ದಾರೆ. ಭರ್ಜರಿ ಚೇತನ್ ಕುಮಾರ್ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದು, ರವಿಶಂಕರ್ ಸಂಗೀತದಲ್ಲಿ ಮಧುರವಾಗಿ ಮೂಡಿಬಂದಿವೆ. ಡಾ.ರವಿವರ್ಮ ಹಾಗೂ ಥ್ರಿಲ್ಲರ್‌ಮಂಜು ಅವರ ಸಾಹಸ ನಿರ್ದೇಶನವಿದೆ. ಬೆಂಗಳೂರು, ಚಿಂತಾಮಣಿ, ಮಡಿಕೇರಿ, ಬಳ್ಳಾರಿ, ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.

ಸತ್ಯಾಗ್ರಹಿಯ ಪಾತ್ರ ಖುಷಿ ಕೊಟ್ಟಿದೆ  ‘ಆ ದಿನಗಳು’ ಖ್ಯಾತಿಯ ಚೇತನ್ ನಿಜ ಜೀವನದಲ್ಲೂ ಹೋರಾಟಗಾರರಾಗಿ ಗುರುತಿಸಿ ಕೊಂಡಿದ್ದಾರೆ. ಬಡವರ ನೋವಿಗೆ ದನಿಯಾಗಿ ಅವರ ಪರನಿಂತಿದ್ದಾರೆ. ವಿಶೇಷ ಎಂದರೆ ಅದೇ ಚೇತನ್ ‘ರಣಂ’ ಚಿತ್ರದಲ್ಲಿಯೂ ಹೋರಾಟಗಾರನಾಗಿ ಕಾಣಿಸಿಕೊಂಡಿದ್ದಾರೆ. ಇಲ್ಲಿ ಸತ್ಯಾಗ್ರಹಿ ಪಾತ್ರದಲ್ಲಿ ಚೇತನ್ ಬಣ್ಣಹಚ್ಚಿದ್ದಾರೆ. ಈ ಪಾತ್ರ ಅವರಿಗೆ
ತೃಪ್ತಿ ತಂದಿದೆಯಂತೆ. ರೈತರಿಗಾಗುತ್ತಿರುವ ಅನ್ಯಾಯಗಳನ್ನು ಕಂಡು, ಕಪಟ ರಾಜಕಾರಣಿಗಳ ವಿರುದ್ಧ ಸಿಡಿದೇಳುವ ಪಾತ್ರವದು. ಹೋರಾಟಕ್ಕಾಗಿಯೇ ತಂಡವೊಂದನ್ನು ಕಟ್ಟಿ ದುಷ್ಟರ ವಿರುದ್ಧ ಸಮರ ಸಾರುತ್ತಾರೆ ಸತ್ಯಾಗ್ರಹಿ. ಚೇತನ್ ಅವರಿಗಾಗಿ ಅಪ್ಪಟ ಹೋರಾಟಗಾರ ಚಿಗುವೆರನ ಪಾತ್ರವನ್ನು ತೆರೆಯಲ್ಲಿ ಕಟ್ಟಕೊಡುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು.

ಈ ಪಾತ್ರದಲ್ಲಿ ಚೇತನ್,ನೀಳವಾದ ಕೇಶರಾಶಿಯಲ್ಲಿ, ಹೊಸ ಗೆಟಪ್‌ನಲ್ಲಿ ಮಿಂಚಿದ್ದಾರೆ, ಆ್ಯಕ್ಷನ್ ಮೂಲಕವೂ ಗಮನ ಸೆಳೆಯುತ್ತಾರೆ. ಚಿತ್ರದ ಟ್ರೇಲರ್ ಈಗಾಗಲೇ ಬಿಡುಗಡೆಯಾಗಿದ್ದು,ಅದರಲ್ಲಿನ ಡೈಲಾಗ್‌ಗಳು ಸಖತ್ ವೈರಲ್ ಆಗುತ್ತಿವೆ. ‘ರೈತನೆ ರಾಜ ಆಗಬೇಕು’. ‘ದೇಶಕ್ಕೆ ಅನ್ನ ನೀಡುವ ರೈತನಿಗೆ ಸಂಸತ್ತಿ ನಲ್ಲಿಯೂ ಪ್ರಾತಿನಿಧ್ಯ ಸಿಗಬೇಕು’. ಎಂಬ ಡೈಲಾಗ್‌ಗಳು ಸತ್ಯ ಎನಿಸಿವೆ, ಎಲ್ಲೆೆಡೆ ಮೊಳಗುತ್ತಿವೆ.

ಅನಾಧಿಕಾಲದಿಂದಲೂ ರೈತರಿಗೆ ಆಗುತ್ತಿರುವ ಅನ್ಯಾಯ, ದೇಶದಲ್ಲಿ ಬೀಡು ಬಿಟ್ಟಿರುವ ಭ್ರಷ್ಟಾಚಾರ, ಅದರ ವಿರುದ್ಧ ಹೋರಾಡುವ ಹೋರಾಟಗಾರರ ಸುತ್ತಲೇ ಕಥೆ ಸಾಗುತ್ತದೆ. ರೈತರು, ಯುವ ಹೋರಾಟಗಾರರು ಚಿತ್ರವನ್ನು ನೋಡಲೇಬೇಕು. ಚಿತ್ರದ ಮೂಲಕ ಅವರ ಹೋರಾಟಕ್ಕೆ ಒಂದಷ್ಟು ಪುಷ್ಟಿ ಸಿಗುತ್ತದೆ ಎಂಬುದು  ನನ್ನ ಅಭಿಮತ ಎನ್ನುತ್ತಾಾರೆ ಚೇತನ್.

ಚಿರು ಇಲ್ಲದ ದುಃಖ ಕಾಡುತ್ತಿದೆ
ಚಿತ್ರದಲ್ಲಿ ನನ್ನೊಂದಿಗೆ ಚಿರು ನಟಿಸಿದ್ದಾರೆ. ಚಿರು ನಾನು ಬಹು ವರ್ಷಗಳ ಸ್ನೇಹಿತರು. ನಾನು ಹೋರಾಟಗಾರನಾದರೆ , ಚಿರು ಪೊಲೀಸ್ ಅಧಿಕಾರಿ , ಅನ್ಯಾಯದ ವಿರುದ್ಧ ನಾನು ಸಿಡಿದೆದ್ದರೆ, ಹೋರಟಗಾರರನ್ನು ನಿಯಂತ್ರಿಸುವ, ಸಮಾಜದಲ್ಲಿ ಶಾಂತಿ ಸ್ಥಾಪಿಸಲು ಶ್ರಮಿಸುವ ಪಾತ್ರ ಚಿರು ಅವರದು. ತೆರೆಯಲ್ಲಿ ನಮ್ಮಿಬ್ಬರ ಕಿತ್ತಾಣ ನಡೆಯುತ್ತಲೇ ಇರುತ್ತದೆ. ಈ ಚಿತ್ರದಲ್ಲಿ ಚಿರು ಅದ್ಭುತ ವಾಗಿ ನಟಿಸಿದ್ದಾರೆ. ಆದರೆ ಅವರು ಇಲ್ಲ ಎನ್ನುವ ದುಃಖ ನನ್ನಲ್ಲಿದೆ.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ

https://www.facebook.com/Vishwavanidaily