Saturday, 30th November 2024

ವಿಶ್ವವಾಣಿ ವಿಶೇಷ: ಅಂತ್ಯೋದಯ ಕಾರ್ಡ್‌‌ನ ಅಕ್ಕಿಗೂ ಬೀಳುತ್ತಾ ಕತ್ತರಿ ?

ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಕಾರ್ಡುದಾರರಿಗೆ ಉಚಿತವಾಗಿ ವಿತರಿಸಲಾಗುತ್ತಿರುವ ಅಕ್ಕಿ ಪ್ರಮಾಣ ವನ್ನು ಕಡಿತಗೊಳಿಸಿರುವ ಬೆನ್ನಲ್ಲೇ ಇದೀಗ ಅಂತ್ಯೋದಯ ಕಾರ್ಡ್‌ನ ಅಕ್ಕಿಯನ್ನೂ ಕಡಿತಗೊಳಿಸಲು ರಾಜ್ಯ ಸರಕಾರ ಮುಂದಾಗಿದೆ.

ರಾಜ್ಯದಲ್ಲಿ ಪ್ರಸ್ತುತ 7,69,570 ಅಂತ್ಯೋದಯ ಕಾರ್ಡುಗಳಿವೆ. ಪ್ರತಿ ತಿಂಗಳು ಫಲಾನುಭವಿಗಳಿಗೆ 35 ಕೆ.ಜಿ ಅಕ್ಕಿ ಉಚಿತವಾಗಿ ನೀಡಲಾಗುತ್ತಿದೆ. 35 ಕೆ.ಜಿ ಅಕ್ಕಿಯನ್ನು 15 ಕೆ.ಜಿಗೆ ಇಳಿಸಿ ಬದಲಾಗಿ 20 ಕೆ.ಜಿ ರಾಗಿ ನೀಡಲು ನಿರ್ಧರಿಸಲಾಗಿದೆ. ಏ.1ರಿಂದ ಈ ಹೊಸ ವ್ಯವಸ್ಥೆ ಜಾರಿಯಾಗಲಿದೆ ಎಂದು ಆಹಾರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಕೇಂದ್ರ ಸರಕಾರ ಊಟಕ್ಕೆ ಪರದಾಡುವ ಅತ್ಯಂತ ಕಡು ಬಡವರಿಗಾಗಿ ಅಂತ್ಯೋದಯ ಅನ್ನ ಯೋಜನೆಯನ್ನು 2002ರ ಆಗಸ್ಟ್‌‌ನಿಂದ ಜಾರಿಗೆ ತಂದಿದೆ.

ಬಡತನ ರೇಖೆಗಿಂತ ಅತ್ಯಂತ ಕೆಳಗಿನ ಕುಟುಂಬಗಳಾದ ಭೂರಹಿತ ಕೃಷಿ ಕಾರ್ಮಿಕರು, ವಿಧವಾ ಮುಖ್ಯಸ್ಥ ಕುಟುಂಬಗಳು, ಯಾವುದೇ ನಿರ್ದಿಷ್ಟ ವರಮಾನವಿಲ್ಲದ ಎಚ್‌ಐವಿ ಪೀಡಿತರು, ಬಾಧಿತ ಕುಟುಂಬಗಳು ಹಾಗೂ ವೃದ್ಧರು ಮುಖ್ಯಸ್ಥರಾಗಿರುವ ಕುಟುಂಬಗಳು ಈ ಯೋಜನೆಯಡಿ ಕಾರ್ಡುಗಳನ್ನು ಪಡೆದಿದ್ದಾರೆ. ಇಂತಹ ಫಲಾನುಭವಿಗಳನ್ನು ಗ್ರಾಮ ಪಂಚಾಯಿತಿಯವರು ಗ್ರಾಮ ಸಭೆಯಲ್ಲಿ ಫಲಾನುಭವಿಗಳನ್ನು ಗುರುತಿಸಿ ಶಿಫಾರಸ್ಸು ಮಾಡಿರುತ್ತಾರೆ. ಇದೀಗ ಸರಕಾರ ಏಕಾಏಕಿ ಅಕ್ಕಿಯನ್ನು ಕಡಿತ ಗೊಳಿಸಿದರೆ ಅವರಿಗೆ ತೊಂದರೆಯಾಗುತ್ತದೆ.

ಅನುದಾನ ಕಡಿತ: ಕಳೆದ ಬಾರಿ ಬಜೆಟ್ ನಲ್ಲಿ ಇಲಾಖೆಗೆ ನೀಡಿದ್ದ ಅನುದಾನವನ್ನು ಗಮನಿಸಿದರೆ ಈ ಬಾರಿ ಕಡಿಮೆ ಅನುದಾನ
ನೀಡಲಾಗಿದೆ. ಕಳೆದ ವರ್ಷ 2,668 ಕೋಟಿ ರು. ನೀಡಲಾಗಿತ್ತು. ಈ ಬಾರಿ 2,374 ಕೋಟಿ ರು. ಸಿಕ್ಕಿದೆ.

500-600 ಕೋಟಿ ರು. ಆರ್ಥಿಕ ಹೊರೆ: ಕಾರ್ಡುದಾರರಿಗೆ 2017ರ ಜೂನ್/ಜುಲೈನಲ್ಲಿ ಅಕ್ಕಿ ಪ್ರಮಾಣವನ್ನು 7 ಕೆ.ಜಿಗೆ
ಏರಿಸಿ 2 ಕೆ.ಜಿ ನೀಡುತ್ತಿದ್ದ ಗೋಧಿಯನ್ನು ಆಗಿನ ಸರಕಾರ ನಿಲ್ಲಿಸಿತ್ತು. ಅದರಂತೆ, ಅಲ್ಲಿಂದ 2020ರ ಮಾರ್ಚ್‌ವರೆಗೆ ಕಾರ್ಡು ದಾರರಿಗೆ 7 ಕೆ.ಜಿ ಅಕ್ಕಿ ನೀಡಲಾಗುತ್ತಿತ್ತು. ಆದರೆ, ಕೇಂದ್ರ ಸರಕಾರ ಪ್ರತಿ ಸದಸ್ಯನಿಗೆ ನೀಡುವ 5 ಕೆ.ಜಿ ಅಕ್ಕಿ ಜತೆಗೆ ಹೆಚ್ಚುವರಿಯಾಗಿ 2 ಕೆ.ಜಿ ಅಕ್ಕಿ ಸೇರಿಸಿ ಒಟ್ಟು 7 ಕೆ.ಜಿ ಅಕ್ಕಿ ನೀಡುವುದರಿಂದ ಪ್ರತಿ ವರ್ಷ ಸರಕಾರಕ್ಕೆ ಅಂದಾಜು 500-600 ಕೋಟಿ ರು. ಆರ್ಥಿಕ
ಹೊರೆಯಾಗುತ್ತಿತ್ತು.

ದಕ್ಷಿಣಕ್ಕೆ ರಾಗಿ, ಉತ್ತರಕ್ಕೆ ಜೋಳ: ಈಗಿನ ಸರಕಾರವು ಪ್ರತಿ ಸದಸ್ಯನಿಗೆ ನೀಡುತ್ತಿದ್ದ 7 ಕೆ.ಜಿ ಅಕ್ಕಿಯನ್ನು 5 ಕೆ.ಜಿಗೆ ಇಳಿಸಿ ಬದಲಾಗಿ 2 ಕೆ.ಜಿ ಗೋಧಿ ನೀಡಲಾಗುತ್ತಿತ್ತು. ಕಳೆದ ಏಪ್ರಿಲ್‌ನಿಂದ ಈ ನಿಯಮ ಜಾರಿಗೆ ಬಂದಿತ್ತು. ಆದರೆ, ಇದೀಗ ಮತ್ತೆ ಅನ್ನ ಭಾಗ್ಯ ಯೋಜನೆಯ ಅಕ್ಕಿ ಪ್ರಮಾಣ ಕಡಿತ ಮಾಡಿರುವ ಸರಕಾರ, ದಕ್ಷಿಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಪ್ರತಿ ಸದಸ್ಯನಿಗೆ 2 ಕೆ.ಜಿ ಅಕ್ಕಿ, 3 ಕೆ.ಜಿ ರಾಗಿ ಹಾಗೂ ಪ್ರತಿ ಕಾರ್ಡಿಗೆ 2 ಕೆ.ಜಿ ಗೋಧಿ ವಿತರಿಸಲಾಗುತ್ತಿದೆ.

ಅದೇ ರೀತಿ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಪ್ರತಿ ಸದಸ್ಯನಿಗೆ 2 ಕೆ.ಜಿ ಅಕ್ಕಿ, 3 ಕೆ.ಜಿ ಜೋಳ ಹಾಗೂ ಪ್ರತಿ ಕಾರ್ಡಿಗೆ 2 ಕೆ.ಜಿ ಗೋಧಿ ವಿತರಿಸಲು ನಿರ್ಧರಿಸಲಾಗಿದೆ. ಏ.1ರಿಂದ ಹೊಸ ವ್ಯವಸ್ಥೆ ಜಾರಿಗೆ ಬರಲಿದ್ದು, ಶೀಘ್ರ ಅಧಿಕೃತ ಆದೇಶ ಹೊರಬೀಳಲಿದೆ.

5 ಲಕ್ಷ ಮೆಟ್ರಿನ್ ಟನ್ ರಾಗಿ ಖರೀದಿ
ಫಲಾನುಭವಿಗಳಿಗೆ ರಾಗಿ ವಿತರಿಸಲು ಬೆಂಬಲ ಬೆಲೆ ಯೋಜನೆಯಡಿ ಅಂದಾಜು 5 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಸಲು
ತೀರ್ಮಾನಿಸಲಾಗಿದೆ. ಪ್ರತಿ ಕ್ವಿಂಟಲ್ ರಾಗಿಗೆ 3,290 ರು. ನಂತೆ ಈಗಾಗಲೇ ಶೇ.80ರಷ್ಟು ರಾಗಿ ಖರೀದಿಸಲಾಗಿದೆ. ಮಾ.31 ವರೆಗೆ
ಖರೀದಿ ಪ್ರಕ್ರಿಯೆ ನಡೆಯಲಿದೆ. ಇದೇ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ಖರೀದಿಸಿ ಸಂಗ್ರಹಿಸಲಾಗಿದೆ. ಆದರೆ, ಉತ್ತರ
ಕರ್ನಾಟಕ ಭಾಗದಲ್ಲಿ ಸರಿಯಾಗಿ ಬೆಳೆ ಬರದಿರುವ ಹಿನ್ನೆಲೆಯಲ್ಲಿ ಜೋಳ ಖರೀದಿಸಲು ಸಾಧ್ಯವಾಗಿಲ್ಲ. ಹಾಗಾಗಿ, ಸೂರ್ಯ ಕಾಂತಿ, ತೊಗರಿಬೇಳೆ, ಅಲಸಂದೆಕಾಳು ಹಾಗೂ ಕಡಲೆಕಾಳು ಖರೀದಿಸಲು ಆದ್ಯತೆ ನೀಡಲಾಗಿದೆ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.