Saturday, 30th November 2024

ಹೆಚ್ಚುತ್ತಿರುವ ಕರೋನಾ: ರೈತರಲ್ಲಿ ಆತಂಕದ ಕಾರ್ಮೋಡ

 ರಕಾರಿಗೆ ಕೇರಳದಿಂದ ತಗ್ಗಿದ ಬೇಡಿಕೆ

ಬಹುತೇಕ ತರಕಾರಿಗಳ ಬೆಲೆಯಲ್ಲಿ ಇಳಿಕೆ

ವಿಶೇಷ ವರದಿ: ಕೆ.ಜೆ.ಲೋಕೇಶ್ ಬಾಬು

ಮೈಸೂರು: ವರ್ಷದಿಂದೀಚೆಗೆ ಕರೋನಾ ಮಹಾಮಾರಿಯ ಅಟ್ಟಹಾಸಕ್ಕೆ ತತ್ತರಿಸಿದ್ದ ಒಟ್ಟಾರೆ ವ್ಯವಸ್ಥೆ, ತದ ನಂತರದಲ್ಲಿ ಸುಧಾರಿಸಿಕೊಳ್ಳುವತ್ತ ಸಾಗಿದೆ ಎನ್ನುವ ಹೊತ್ತಿನಲ್ಲೇ ರೈತರ ಬದುಕಿನ ಮೇಲೆ ಮತ್ತೆ ಸವಾರಿ ಆರಂಭಿಸಿದೆ.

ಅಗತ್ಯ ವಸ್ತುಗಳ ಬೆಲೆ ಗಗನಮುಖಿಯಾಗಿರುವ ವೇಳೆ ಅಗತ್ಯ ವಸ್ತುಗಳ ಪೈಕಿ ಪ್ರಮುಖವೇ ಆದ ತರಕಾರಿ ಬೆಲೆ ಪಾತಾಳಕ್ಕೆ ಕುಸಿಯುತ್ತಾ ಸಾಗಿರುವುದು ರೈತರ ಬದುಕಿನ ಬರೆ ಎಳೆದಂತಾಗಿದೆ. ಮೈಸೂರು ಭಾಗದಲ್ಲಿ ರೈತರು ವಾರ್ಷಿಕ ಬೆಳೆ ಹೊರತು ಪಡಿಸಿ, ತರಕಾರಿ ಹಾಗೂ ಹೈನುಗಾರಿಕೆ ಮೇಲೆ ಅತಿ ಹೆಚ್ಚಾಗಿ ಅವಲಂಭಿಸಿದ್ದಾರೆ. ಆದರೆ, ಕರೋನಾ ಎಂಬ ಮಹಾಮಾರಿಯ ಎರಡನೇ ಅಲೆ ಮೈಸೂರು ಭಾಗದಲ್ಲಿ ಆರಂಭವಾಗಿರುವುದು ತರಕಾರಿ ಬೆಳೆಯುವ ರೈತರನ್ನು ಆತಂಕಕ್ಕೆ ದೂಡಿದೆ.

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಪ್ರಸ್ತುತ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆಯತ್ತ ಮುಖಮಾಡಿದ್ದರೆ, ತರಕಾರಿ ಬೆಲೆ ಮಾತ್ರ ಇಳಿ ಮುಖವಾಗಿರುವುದು ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಮಾತ್ರವಲ್ಲ, ಕೇರಳ ಮಾರುಕಟ್ಟೆಯನ್ನೇ
ನಂಬಿಕೊಂಡೇ ಇಲ್ಲಿನ ರೈತರು ಬೆಳೆಗಳನ್ನು ಬೆಳೆಯುತ್ತಿದ್ದು, ಕರೋನಾ ಎರಡನೇ ಅಲೆ ಕೇರಳದಲ್ಲಿ ತೀವ್ರವಾಗಿರುವ ಹಿನ್ನೆಲೆ ಯಲ್ಲಿ ವ್ಯಾಪಾರ ವಹಿವಾಟು ಭಾಗಶಃ ಕುಸಿತ ಕಂಡಿದೆ.

ಇದು ಮೈಸೂರು ಭಾಗದಿಂದ ಕೇರಳಕ್ಕೆ ಪೂರೈಕೆಯಾಗುತ್ತಿದ್ದ ತರಕಾರಿ ವ್ಯಾಪಾರ, ವಹಿವಾಟಿನ ಮೇಲೆ ಕೆಟ್ಟ ಪರಿಣಾಮ ಬೀರಿದೆ.
ಕರೋನಾ ಎರಡನೇ ಅಲೆಯ ನಂತರ ಮೈಸೂರು-ಕೇರಳ ನಡುವೆ ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ಸಂಚರಿಸುತ್ತಿದ್ದ ತರಕಾರಿ ವಾಹನಗಳ ಸಂಚಾರದಲ್ಲಿ ಭಾಗಶಃ ಕಡಿಮೆಯಾಗಿದೆ. ಕೇರಳದ ವರ್ತಕರು ಸಹ ಇಲ್ಲಿಗೆ ಬಂದು ಲಾರಿಗಳಲ್ಲಿ ತರಕಾರಿಯನ್ನು ಕೊಂಡೊಯ್ಯುತ್ತಿದ್ದರು. ಆದರೆ, ಇದೀಗ ಅವರ ಸುಳಿವು ಇಲ್ಲವಾಗಿರುವುದು ಈ ಭಾಗದ ರೈತರ ಬದುಕಿನ ಮೇಲೆ ಕರಿಛಾಯೆ
ಬೀರಿದೆ.

ಕರೋನಾ ಸೋಂಕು ಮತ್ತಷ್ಟು ಉಲ್ಬಣಗೊಂಡರೆ ತರಕಾರಿ ಪೂರೈಕೆ ಸಮಸ್ಯೆ ಮತ್ತಷ್ಟು ಬಿಗಡಾಯಿಸಲಿದ್ದು, ಕೇರಳಕ್ಕೆ ಪೂರೈಕೆ ಯಾಗುತ್ತಿದ್ದ ತರಕಾರಿ ಪ್ರಮಾಣ ಕಡಿಮೆಯಾಗಿರುವುದು ಒಂದೆಡೆಯಾದರೆ ಕರೋನಾ ಸೋಂಕಿನ ಹಿನ್ನೆಲೆಯಲ್ಲಿ ಜಿಲ್ಲೆಗೆ ಬರುತ್ತಿರುವ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಇಳಿಮುಖವಾಗಿದೆ.

ಕಳೆದ ವರ್ಷ ರೈತರು ಕರೊನಾದ ನಿರೀಕ್ಷೆ ಇಲ್ಲದ ಹಿನ್ನೆಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ತರಕಾರಿ ಬೆಳೆದಿದ್ದರು. ಆದರೆ, ಬೆಳೆದ ಬಹುತೇಕ ತರಕಾರಿಗಳಿಗೆ ಮಾರುಕಟ್ಟೆ ದೊರೆಯದೆ ಹೊಲದಲ್ಲಿಯೇ ನಾಶ ಮಾಡಿದ್ದರು. ಸಾಕಷ್ಟು ರೈತರು ಎಪಿಎಂಸಿಗೆ
ತಂದು ಸೂಕ್ತ ಬೆಲೆ ದೊರೆಯದೆ ಮಾರು ಕಟ್ಟೆೆಯಲ್ಲಿಯೇ ಸುರಿದು ಹೋದರು. ಕರೋನಾ ಎರಡನೇ ಅಲೆಯ ನಿರೀಕ್ಷೆಯಲ್ಲಿ ಇಲ್ಲದ ರೈತ ಈ ಬಾರಿಯೂ ಸಾಕಷ್ಟು ಪ್ರಮಾಣದಲ್ಲಿ ತರಕಾರಿ ಬೆಳೆದಿದ್ದಾರೆ. ಆದರೆ, ದಿನೇ ದಿನೆ ಸೋಂಕಿನ ಪ್ರಮಾಣ ಏರಿಕೆ ಕಾಣುತ್ತಿರುವುದು ರೈತರಲ್ಲಿ ಆತಂಕ ಮೂಡಿಸಲು ಪ್ರಾರಂಭಿಸಿದೆ.

ಬೆಲೆಯ ಏರಿಳಿತ: 2021ರ ಜನವರಿಯಲ್ಲಿ ಪ್ರತಿ ಕೆ.ಜಿ. ಬೀನ್ಸ್ ‌‌ಗೆ 50 ರು. ವಹಿವಾಟು ನಡೆದಿದ್ದು, ಇದೀಗ 20 ರು.ಗಳಿಗೆ ಕುಸಿದಿದೆ. ಕೇರಳದಲ್ಲಿ ಹೆಚ್ಚಾಗಿ ಬಳಕೆ ಮಾಡುವ ಪೈರ್ ಜನವರಿಯಲ್ಲಿ 40 ರು. ಇದ್ದ ಬೆಲೆ ಇದೀಗ 20 ರು.ಗೆ ಕುಸಿತ ಕಂಡಿದೆ. ಅದೇ
ರೀತಿ ಬೆಂಡೆ 35 ರಿಂದ 10 ರು.ಗೆ, ಗುಂಡು ಬದನೆ 10ರು.ನಿಂದ 5ರು.ಗೆ ಇಳಿಕೆ ಕಂಡಿದೆ. ಟೊಮ್ಯಾಟೊ ದರ ನಿರೀಕ್ಷಿತ ಮಟ್ಟದಲ್ಲಿ ಏರಿಕೆ ಕಾಣುತ್ತಿಲ್ಲ. ಜನವರಿಯಲ್ಲಿ 13 ರು. ಇದ್ದ ಟೊಮ್ಯಾಟೊ ದರ ಇದೀಗ 7 ರು.ಗೆ ಇಳಿಕೆ ಕಂಡಿದೆ.

***

ಮೈಸೂರು ಭಾಗದ ತರಕಾರಿ ಬೆಳೆಯುವ ರೈತರು ಕೇರಳ ಮಾರುಕಟ್ಟೆಯನ್ನೇ ಪ್ರಮುಖವಾಗಿ ಅವಲಂಭಿಸಿದ್ದು, ಕರೋನಾ ಕಾರಣದಿಂದಾಗಿ ತರಕಾರಿ ಬೆಳೆ ಪಾತಾಳಕ್ಕೆ ಕುಸಿದಿದೆ. ಆದಕಾರಣ, ರೈತರು ಮನೋಸ್ಥೈರ್ಯ ಕಳೆದುಕೊಳ್ಳದಂತೆ ರಾಜ್ಯ ಸರಕಾರ ಕೂಡಲೇ ತರಕಾರಿಗೆ ಸೂಕ್ತ ಬೆಲೆ ಒದಗಿಸಬೇಕು. ಈ ಮೂಲಕ ರೈತರ ಆತ್ಮಹತ್ಯೆೆ ತಪ್ಪಿಸಬೇಕು.

-ಬಡಗಲಪುರ ನಾಗೇಂದ್ರ ರಾಜ್ಯ ರೈತ ಸಂಘ ಅಧ್ಯಕ್ಷ

ಕೇರಳದಲ್ಲಿ ಕರೋನಾ ಸೋಂಕಿನ ಪ್ರಮಾಣ ಹೆಚ್ಚಿರುವ ಹಿನ್ನೆಲೆಯಲ್ಲಿ ತರಕಾರಿ ಬೇಡಿಕೆ ಕುಸಿತ ಕಾಣಲು ಪ್ರಾರಂಭವಾಗಿದೆ. ಕೇರಳಕ್ಕೆ ತರಕಾರಿ ಪೂರೈಸುತ್ತಿದ್ದ ವಾಹನಗಳ ಪೈಕಿ ಇದೀಗ ಶೇ.50ರಷ್ಟು ವಾಹನಗಳು ಮಾತ್ರ ಸಂಚರಿಸುತ್ತಿವೆ. ಕಳೆದ ಎರಡು ತಿಂಗಳಿನಿಂದ ತರಕಾರಿ ಪೂರೈಕೆ ಸ್ಥಗಿತಗೊಳಿಸಿದ್ದೇವೆ.

-ಕುರುಬೂರು ಶಾಂತಕುಮಾರ್, ರಾಜ್ಯ ಕಬ್ಬು ಬೆಳೆಗಾರರ ಸಂಘ ಅಧ್ಯಕ್ಷ