Saturday, 14th December 2024

ಮಾಲಿನ್ಯ ನಿಯಂತ್ರಣ ಚಿಂತನೆಗಿದು ಸಕಾಲ

ಪ್ರಸ್ತುತ ರಾಜ್ಯದಲ್ಲಿ ಲಾಕ್‌ಡೌನ್ ತೆರವುಗೊಳಿಸುವ ಬಗ್ಗೆ ಪ್ರಮುಖ ಚರ್ಚೆ ಏರ್ಪಟ್ಟಿದೆ. ಈ ವೇಳೆ ಲಾಕ್‌ಡೌನ್ ಸಂದರ್ಭದಲ್ಲಿ
ಉಂಟಾಗಿರುವ ಇತರ ಬೆಳವಣಿಗೆಗಳ ಮೇಲೂ ಗಮನಹರಿಸಬೇಕಿರುವುದು ಅವಶ್ಯ.

ಅವುಗಳಲ್ಲಿ ಮಾಲಿನ್ಯವೂ ಪ್ರಮುಖವಾದದ್ದು. ಲಾಕ್‌ಡೌನ್ ವೇಳೆ ರಾಜಧಾನಿಯಲ್ಲಿ ಶೇ.65ರಷ್ಟು ಮಾಲಿನ್ಯ ಪ್ರಮಾಣ
ಕ್ಷೀಣಿಸಿರುವುದಾಗಿ ತಜ್ಞರ ವರದಿ ತಿಳಿಸುತ್ತದೆ. ಕಾರ್ಖಾನೆಗಳ ಸ್ಥಗಿತ, ವಾಹನಗಳ ಸಂಚಾರ ಸ್ಥಗಿತದಿಂದ ಮಾಲಿನ್ಯ ಪ್ರಮಾಣ ಕಡಿಮೆಯಾಗಿದೆ. ಲಾಕ್‌ಡೌನ್ ನಂತರ ಈ ಪ್ರಮಾಣ ಮತ್ತೆ ಹೆಚ್ಚಾಗುವುದು ಸಹಜ. ಆದರೆ ದಿನೇ ದಿನೇ ಮಾಲಿನ್ಯ ಹೆಚ್ಚುತ್ತಾ ಸಾಗುವುದರಿಂದ ಜನರ ಉಸಿರಾಟದ ಮೇಲೆ ಬೀರಬಹುದಾದ ವ್ಯತಿರಿಕ್ತ ಪರಿಣಾಮಗಳ ಬಗ್ಗೆ ವಿಶ್ಲೇಷಿಸಲು ಇದು ಸುಸಂದರ್ಭ.

ರಾಜಧಾನಿಯನ್ನು ಸಿಲಿಕಾನ್ ಸಿಟಿ, ಐಟಿ ಸಿಟಿ ಜತೆಗೆ ಗ್ರೀನ್ ಸಿಟಿಯನ್ನಾಗಿಸುವುದು ಸಹ ಇಂದಿನ ಅನಿವಾರ್ಯತೆ. 2020ನೇ ಸಾಲಿನಲ್ಲಿ ಜಾರಿಗೊಳಿಸಲಾಗಿದ್ದ ಕರೋನಾ ಮೊದಲ ಹಂತದ ಲಾಕ್‌ಡೌನ್ ವೇಳೆ ತಜ್ಞರ ಅಭಿಪ್ರಾಯದ ಪ್ರಕಾರ ಶೇ.50ರಷ್ಟು ಮಾಲಿನ್ಯ ನಿಯಂತ್ರಣ ಉಂಟಾಗಿತ್ತು. ಇದೀಗ 2021ನೇ ಸಾಲಿನ ಲಾಕ್‌ಡೌನ್ ವೇಳೆ ಶೇ.65ರಷ್ಟು ನಿಯಂತ್ರಣವಾಗಿದೆ. ಈ ಬಾರಿ ಶೇ.15ರಷ್ಟು ಏರಿಕೆಯಾಗಿದೆ.

ರಾಜ್ಯದಲ್ಲಿ ಸಾಧ್ಯವಾದಷ್ಟು ಮಾಲಿನ್ಯ ನಿಯಂತ್ರಣಕ್ಕೆ ಆದ್ಯತೆ ದೊರೆಯದಿದ್ದರೆ, ಬೆಂಗಳೂರು ಮತ್ತೊಂದು ದೆಹಲಿಯಂತಾ ಗುವ ಸಾಧ್ಯತೆಯಿದೆ. ದೆಹಲಿಯಲ್ಲಿ ಮಾಲಿನ್ಯದ ಮಟ್ಟ ಅಗಾಗ್ಗೆ ಅಪಾಯಕಾರಿ ಸ್ಥಿತಿಯನ್ನು ತಲುಪುತ್ತಿರುವುದನ್ನು ಗಮನಿಸಿ ದಾಗ, ರಾಜಧಾನಿ ಬೆಂಗಳೂರಿನಲ್ಲೂ ಈಗಿನಿಂದಲೇ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು ಮುಖ್ಯ. ಬೆಂಗಳೂರು ಮಾತ್ರವಲ್ಲದೆ ಇಡೀ ರಾಜ್ಯದಲ್ಲಿಯೂ ವಾಯುಮಾಲಿನ್ಯ ನಿಯಂತ್ರಣಕ್ಕೆ ಆದ್ಯತೆ ನೀಡಬೇಕಿರುವುದು ಪ್ರಸ್ತುತ ಬಹುಮುಖ್ಯ ಅವಶ್ಯಕತೆ.