Saturday, 23rd November 2024

ದೇಶಪ್ರೇಮವೇ ನಮ್ಮೆಲ್ಲರ ಧ್ಯೇಯವಾಗಲಿ

ಸರ್ವಧರ್ಮದ ಸಾರವೂ ಒಂದೇ ಎಂದ ಸೂಫಿ ಸಂತ

ವಿಶ್ವವಾಣಿ ಸಂವಾದದಲ್ಲಿ ಇಬ್ರಾಹಿಂ ಸುತಾರ್ ಅಭಿಮತ

ಬೆಂಗಳೂರು: ಧರ್ಮ ಯಾವುದಾಗಲೀ, ಜಾತಿ ಯಾವುದಾಗಲೀ ದೇಶ ಪ್ರೇಮ ಎಂಬುದು ದೇಶದ ಪ್ರತಿಯೊಬ್ಬ ಪ್ರಜೆಯ ಧ್ಯೇಯವಾಗಬೇಕು ಎಂದು ಸಂತ ಇಬ್ರಾಹಿಂ ಸುತಾರ್ ಅಭಿಪ್ರಾಯಪಟ್ಟರು.

ವಿಶ್ವವಾಣಿ ಕ್ಲಬ್ ಹೌಸ್ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಮಾತನಾಡಿದ ಅವರು, ಧರ್ಮ ಮತ್ತು ಜಾತಿಗಳ ಬಗ್ಗೆ ಜನರಲ್ಲಿರುವ ತಪ್ಪು ಕಲ್ಪನೆಗಳು, ದೇವರ ಸಾಕ್ಷಾತ್ಕಾರದ ಸಾಧನಗಳ ಕುರಿತು ಸಮಂಜಸ ಅಭಿಪ್ರಾಯಗಳನ್ನು ಹಂಚಿ ಕೊಂಡರು. ಮನುಷ್ಯ ಹನ್ನೆರಡು ತತ್ವಗಳನ್ನು ಅನುಸರಿಸುವ ಮೂಲಕ ಒಬ್ಬ ಉತ್ತಮ ಪ್ರಜೆಯಾಗಬಹುದು. ಅದರಲ್ಲಿ ಧರ್ಮ, ದೇವರು, ದೇಶ, ಜಾತಿ, ಕಾಯಕ, ನೀತಿಗಳನ್ನು ನಾವು ಯಾವ ರೀತಿಯಲ್ಲಿ ಅರಿತುಕೊಳ್ಳುತ್ತೇವೆ ಎಂಬುದು ನಮ್ಮ ಆಲೋಚನೆ ಮತ್ತು ಅನುಭವವನ್ನು ಅವಲಂಭಿಸಿರುತ್ತದೆ.

ಅದರಂತೆ ಸರ್ವಧರ್ಮಗಳ ಸಾರ ಎಂಬುದನ್ನು ಅರಿತು ಮುನ್ನಡೆಯುವುದು ಪ್ರತಿ ಮನುಜನ ಒಳಿತಿನ ಮಾರ್ಗ ಎಂದು ತಿಳಿಸಿದರು. ದೇವರು ಒಬ್ಬನೇ, ಆದರೆ ಅವನ ರೂಪಗಳು ಹಲವು ಎಂಬುದನ್ನು ಎಲ್ಲ ಮಹಾನ್ ಸಾಧಕರು ಹೇಳಿದ್ದಾರೆ. ಎಲ್ಲ ಧರ್ಮಗ್ರಂಥಗಳಲ್ಲಿ ಇದರ ಸಾರ ಒಂದೇ ಎಂದು ದಾಖಲಾಗಿದೆ. ಧರ್ಮ ಗಳಲ್ಲಿ ಯಾವುದೇ ಭೇದಭಾವಗಳಿಲ್ಲ. ಆದರೆ, ಅದರ ಅನುಷ್ಠಾನದಲ್ಲಿ ನಾವು ಸಫಲವಾಗಿಲ್ಲ. ಇದರಿಂದಾಗಿ ಕೆಲವೊಂದು ಸಮಸ್ಯೆಗಳನ್ನು ಸಮಾಜದಲ್ಲಿ ಕಾಣುತ್ತಿದ್ದೇವೆ ಎಂದರು.

ಎಲ್ಲ ಧರ್ಮಗಳಲ್ಲಿ ಇರುವ ಸಾರವನ್ನು ಎಲ್ಲರೂ ತಿಳಿದುಕೊಳ್ಳಬಹುದು. ತಿಳಿದುಕೊಳ್ಳುವ ಕಲೆಯಿಂದ ಎಲ್ಲವೂ ಗೊತ್ತಾಗು ತ್ತದೆ. ಕೆಲವೊಂದು ಧರ್ಮಗಳಲ್ಲಿ ಇದೆ ಎಂಬ ತಪ್ಪು ತಿಳಿವಳಿಕೆ ಕಡಿಮೆಯಾಗುತ್ತದೆ. ಹೀಗಾಗಿ, ಸರ್ವಧರ್ಮಗಳ ಸಾರವನ್ನು ತಿಳಿದುಕೊಳ್ಳುವ ಮನಸ್ಥಿತಿ ಎಲ್ಲರಿಗೂ ಬರಬೇಕು. ಆಗ ಸಮಾಜದಲ್ಲಿ ಸಾಮರಸ್ಯ ಮೂಡಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನ ಮಾಡಬಹುದು ಎಂದರು.

ಮಾನವೀಯತೆಯೇ ಮೊದಲ ಧರ್ಮವಾಗಲಿ: ಧರ್ಮಗಳ ಬಗ್ಗೆ ಅನೇಕ ವ್ಯಾಖ್ಯಾನವನ್ನು ಕಾಣಬಹುದು. ಮನುಷ್ಯನ ಏಳಿಗೆಗೆ ಶ್ರಮಿಸುವುದೇ ನಿಜವಾದ ಧರ್ಮ  ಎಂಬುದು ಧರ್ಮದ ಸರಳ ವ್ಯಾಖ್ಯಾನ.