ವಿಶ್ವವಾಣಿ ಕ್ಲಬ್ ಹೌಸ್ ಸಂವಾದ – 46
ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಬಾಯಿ ಚಪ್ಪರಿಸುವ ರೆಸಿಪಿಗಳ ರಸದೌತಣ ಗುಡ್ಡಾ ಭಟ್ಟ
ಸಿಹಿಕಹಿ ಚಂದ್ರು ಸೇರಿ ಅನೇಕ ಪಾಕ ಪ್ರವೀಣರು ಭಾಗಿ
ಬೆಂಗಳೂರು: ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಸೋಮವಾರ ಪಾಕಪ್ರವೀಣರದ್ದೇ ದರ್ಬಾರು. ಒಬ್ಬರಿಗಿಂತ ಒಬ್ಬರು ಪಾಕಶಾಸ್ತ್ರದ ಪ್ರತಿಯೊಂದು ವಿದ್ಯೆಯನ್ನು ರಸವತ್ತಾಗಿ ವಿವರಿಸುತ್ತಿದ್ದರೆ, ಕೇಳುಗರ ನಾಲಗೆಯಲ್ಲಿ ಲಾಲಾರಸ ಜಿನುಗಿದ್ದು ಸುಳ್ಳಲ್ಲ.
ವಿನೂತನ ಕಾರ್ಯಕ್ರಮಗಳ ಮೂಲಕ ವಿಶ್ವ ಪ್ರಸಿದ್ಧಿಯಾದ ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಸೋಮವಾರ ಅಡುಗೆ ಅರಮನೆಯಂತಹ ವಿಶಿಷ್ಟ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಅಡುಗೆ ಅರಮನೆ ಫೇಸ್‌ಬುಕ್ ಪೇಜ್ ಖ್ಯಾತಿಯ ಗುಡ್ಡಾಭಟ್ಟರು ಮತ್ತು ಅವರ ಜತೆಗಾರರ ಒಗ್ಗರಣೆಯ ಘಮಲು ಎಲ್ಲರನ್ನೂ ಸೆಳೆಯಿತು. ಈ ವಾಸನೆಗೆ ಮನಸೋತು ಮತ್ತಷ್ಟು ಅಡುಗೆ ಅತಿಥಿಗಳು ಸಂವಾದಕ್ಕೆ ಜತೆಯಾದರು.
ಉಪ್ಪಿಟ್ಟು ಮಾಡುವ ವಿಶಿಷ್ಟ ಕಲೆಯಿಂದ ಹಿಡಿದು, ವಿವಿಧ ತಿನಿಸುಗಳ ತಯಾರಿಕೆಯ ತರ್ಕಬದ್ಧ ಪಾಕಶಾಸ್ತ್ರ ವನ್ನು ಪರಿಪರಿಯಾಗಿ ವಿವರಿಸಿದರು. ಇದರ ಸವಿಯನ್ನು ಕೇಳುಗರು ತಾವಿದ್ದಲ್ಲಿಂದಲೇ ಚಪ್ಪರಿಸಿದರು. ಅಡುಗೆ ಅರಮನೆ ಖ್ಯಾತಿಯ ಗುಡ್ಡಾ ಭಟ್ಟರು ಮಾತನಾಡಿ, ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿಯ ಹೊಳಲು ಗ್ರಾಮ ದಲ್ಲಿ ಕೇಬಲ್ ಆಪರೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದೆ. ಜತೆಗೆ ರೈತನಾಗಿ, ಅನಂತಶಯನ ದೇವಾಲಯದ ಅರ್ಚಕನಾಗಿಯೂ ಕಾರ್ಯನಿರ್ವಹಿಸುತ್ತಿದ್ದೆ.
ಚಿಕ್ಕದಾದ ಕ್ಯಾಂಟೀನ್‌ನ ಪ್ರಾರಂಭ ಮಾಡಿದೆ. ಈಗ ಈ ಅಡುಗೆ ಅರಮನೆ ಅನ್ನುವ ಪೇಜ್‌ವರೆಗೂ ತಲುಪಿದ್ದೇನೆ. ಅಡುಗೆ ಕುರಿತಾದಂತೆ ಮುಂಚಿನಿಂದಲೂ ಆಸಕ್ತಿ ಇತ್ತು. ಆಹಾರವನ್ನು ಯಾವ ರೀತಿ ತಯಾರಿಸಬಹುದು ಅನ್ನುವ ಕುತೂಹಲಕ್ಕಾಗಿ ಅಡುಗೆ ತಯಾರಿ ಕಡೆ ಗಮನ ಹರಿಸಲು ಪ್ರಾರಂಭಿಸಿದೆ. ಅವಲಕ್ಕಿ, ಮಿರ್ಚಿ, ಉಪ್ಪಿಟ್ಟನ್ನು ಬಾಲ್ಯದ ಗೆಳೆಯರ ಜತೆಗೆ ಮಾಡುತ್ತಾ ಅಡುಗೆಯನ್ನು ಹವ್ಯಾಸವಾಗಿ ಮಾಡಿಕೊಂಡೆ ಎಂದು ತಿಳಿಸಿದರು.
ಮತ್ತೊಬ್ಬ ಪಾಕಪ್ರವೀಣ ಸಿಹಿಕಹಿ ಚಂದ್ರು ಮಾತನಾಡಿ, ಅಡುಗೆ ಮಾಡುವುದು ಒಂದು ಕೆಮಿಸ್ಟ್ರಿ. ಅಡುಗೆ ಮಾಡುವುದೇ ಒಂದು ಕಲೆ. ಅನ್ನ ಎನ್ನುವುದು ಲಕ್ಷ್ಮಿ ಯಿದ್ದಂತೆ. ಅದನ್ನು ಅನುಭವಿಸಿಕೊಂಡು ತಿನ್ನಬೇಕು. ಬಿಡದೇ ತಿನ್ನಬೇಕು. ಮನಸು ತುಂಬುವಷ್ಟು ತಿನ್ನಬೇಕು. ಹೊಟ್ಟೆ ಮನಸನ್ನು ಅರಳಿಸುತ್ತದೆ ಎಂದರು.
ಅದಕ್ಕಾಗಿ ಏನನ್ನು ತಿಂದರೂ ಅನುಭವಿಸಿಕೊಂಡು ತಿನ್ನಬೇಕು. ಇಂತಹ ಆಹಾರದ ವೆರೈಟಿಯನ್ನು ಪರಿಚಯಿಸಲು ಗುಡ್ಡಾ ಭಟ್ಟರು ಅಡುಗೆ ಅರಮನೆ ಆರಂಭಿ ಸಿರುವುದು ಉತ್ತಮ ಕಾರ್ಯ ಎಂದರು.
ತಾಯಿಯೇ ಕಾರಣ: ನನಗೆ ಅಡುಗೆಯ ಕಡೆ ಆಸಕ್ತಿ ಹೆಚ್ಚಲು ತಾಯಿಯೇ ಕಾರಣ. ಅವರು ಅಡುಗೆಯ ಕುರಿತಂತೆ ಮಾಡಿದ ಮಾರ್ಗದರ್ಶನಗಳಿಂದ ಯಾವ ಪದಾರ್ಥ ಬಳಸಿ ಯಾವ ಅಡುಗೆ ಮಾಡಬಹುದು ಎಂದು ತಿಳಿದುಕೊಂಡೆ. ಈ ರೀತಿ ಕೇಟರಿಂಗ್ ಆರಂಭಿಸಿದೆ. ಇದರ ಮುಖಾಂತರ ಅಡುಗೆಯ ಅನುಭವ ಮಾಡಿಕೊಂಡೆ. ಅಡುಗೆ ಮಾಡುವ ವಿಧಾನವನ್ನು ತಿಳಿದುಕೊಂಡು ತಮ್ಮನ ಮುಖಾಂತರ ಫೇಸ್‌ಬುಕ್ ಪೇಜ್‌ನಲ್ಲಿ ಇತರರಿಗೆ ತಿಳಿಯಪಡಿಸಿದೆ. ಆಗ ಇದ್ದದ್ದು ೨ಜಿ ಮೊಬೈಲ್.
ಅದರಲ್ಲೇ ಫೇಸ್‌ಬುಕ್‌ನಲ್ಲಿ ಹಾಕಲು ಪ್ರಾರಂಭಿಸಿದೆ. ಈ ಮೂಲಕ ಪರಿಚಿತರಾದವರು ವಸುಧಾ ಕೌತಾಲ್, ಸುಮಿತ್ರಾ ಕೈವಾರ ಹಾಗೂ ಶೈಲಜಾ ಭಟ್ ಕಾರ್ಕಳ. ಇವತ್ತಿಗೆ ರಾಜ್ಯದ ಯಾವುದೇ ಮೂಲೆಯಲ್ಲಿ ಅಡುಗೆಯ ಅನುಭವ ಹಂಚಿಕೊಳ್ಳಲು ಹಾಗೂ ಯಾವ ವಸ್ತುವಿನಿಂದ ಯಾವುದೆಲ್ಲಾ ವೆರೈಟಿ ತಯಾರಿಸಬಹುದು ಎಂಬುದನ್ನು ಈ ಪೇಜ್ ಮೂಲಕ ತಿಳಿಸಿಕೊಡಲು ಸಾಧ್ಯವಾಯಿತು.
ಅಡುಗೆ ಅರಮನೆ ಪೇಜ್ ಬಗ್ಗೆ; ಈ ಪೇಜ್ ನಲ್ಲಿ ಈಗಾಗಲೇ ೨,೧೭,೭೩೦ ರೆಸಿಪಿಗಳು ಶುದ್ಧ ಸಸ್ಯಾಹಾರಿಯಾಗಿದ್ದು, ೧.೩೫ ಸಾವಿರ ಸದಸ್ಯರು ಈ ಪೇಜ್‌ನ್ನು ಪ್ರೋತ್ಸಾಹಿಸುತ್ತಿದ್ದಾರೆ. ಕೇವಲ ಉತ್ತರ ಕರ್ನಾಟಕ ಮಾತ್ರವಲ್ಲದೇ ಎಲ್ಲ ಭಾಗದ ಅಡಿಗೆ ವೆರೈಟಿಯನ್ನೂ ಇಲ್ಲಿ ತಿಳಿಸಿಕೊಡಲಾಗುತ್ತಿದೆ. ೧೫೦ ಜನರೊಂದಿಗೆ
ಒಂದು ಶುದ್ಧ ಸಸ್ಯಾಹಾರಿ ಪೇಜ್ ಮಾಡೋಣ ಅನ್ನುವ ಯೋಜನೆಗೆ ಈ ಅಡುಗೆ ಅರಮನೆ ಯೋಜನೆ ಕಾರ್ಯರೂಪಕ್ಕೆ ಬರಲು ಕಾರಣವಾಗಿದೆ.
ಬಹುತೇಕ ಜನರಿರುವ ಈ ಪೇಜ್‌ನಲ್ಲಿ ಶೇ.೮೦ರಷ್ಟು ಮಹಿಳೆಯರಿದ್ದರೆ ಶೇ.೨೦ರಷ್ಟು ಪುರುಷರಿದ್ದಾರೆ. ಬಹುತೇಕ ಪುರುಷರೂ ವಿವಿಧ ಅಡುಗೆ ಮಾಡಿ ಪೇಜ್‌ನಲ್ಲಿ
ಹಾಕುತ್ತಾರೆ. ಎಲ್ಲರ ವಿಶ್ವಾಸ ಪಡೆದುಕೊಂಡು ಈ ಪೇಜ್ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ಪೇಜ್ ನಿರ್ವಹಣೆ ಕಷ್ಟ ಅನಿಸಿದಾಗ ಇನ್ನೊಂದಿಷ್ಟು ಜನರನ್ನು ಸೇರಿಸಿಕೊಂಡೆ. ಕೆಲವರನ್ನು ಅಡ್ಮಿನ್ ಮಾಡಿರುವೆ. ಹೀಗಾಗಿ ಯಶಸ್ವಿಯಾಗಿ ನಡೆದುಕೊಂಡು ಹೋಗುತ್ತಿದೆ ಎಂದರು.
ಡಾ.ರಾಜ್ ಅವರ ಅನ್ನಪ್ರೀತಿ
ಕನ್ನಡದ ಮೇರುನಟ ಡಾ.ರಾಜ್‌ಕುಮಾರ್ ಅವರಿಗೆ ಊಟದ ಮೇಲಿದ್ದ ಕಾಳಜಿಯ ಕುರಿತು ಮಾತನಾಡಿದ ಸಿಹಿಕಹಿ ಚಂದ್ರು, ಜಗ್ಗೇಶ್ ಮನೆಯ ಗೃಹಪ್ರವೇಶ
ಸಮಾರಂಭದಲ್ಲಿ ರಾಜ್‌ಕುಮಾರ್ ಅವರು ಆಕಸ್ಮಿಕವಾಗಿ ನನ್ನ ಪಕ್ಕ ಊಟಕ್ಕೆ ಕುಳಿತರು. ನನಗೆ ಬಹಳ ಸಂಕೋಚ. ನಾನು ತಿಂಡಿಪೋತ, ಹೆಚ್ಚು ತಿಂದರೆ ಅಣ್ಣಾವ್ರು ಏನಂದುಕೊಳ್ಳುತ್ತಾರೋ ಎಂದುಕೊಂಡು ಮುಜುಗರ ಪಡುತ್ತಿದ್ದೆ.
ಇದನ್ನು ಕಂಡ ಅವರು, ಖರ್ಜೂರದ ಹೋಳಿಗೆಯನ್ನು ಬಡಿಸುವಂತೆ ಹೇಳಿದರು. ಅವರೂ ಅಷ್ಟೇ ಆಸ್ಥೆಯಿಂದ ಸವಿದರು. ಕೊನೆಗೆ ಅವರು ಎಲೆಯಲ್ಲಿ ಒಂದು ಅಗಳು ಅನ್ನವನ್ನೂ ಬಿಡದೆ ಊಟ ಮಾಡಿದ್ದರು. ಅಂದಿನಿಂದ ನಾನು ಎಲೆಯ ಮೇಲೆ ಏನೇ ಹಾಕಿದರೂ ತಿಂದು ಮುಗಿಸುತ್ತೇನೆ. ಇದು ಅಣ್ಣಾವ್ರಿಂದ ನಾನು ಕಲಿತ ಅನ್ನ ಪ್ರೀತಿ ಎಂದು ಸಿಹಿ ಕಹಿ ಚಂದ್ರು ನೆನೆದರು.