Friday, 20th September 2024

ಬೆಲೆ ಏರಿಕೆಯೊಂದಿಗೆ, ಆದಾಯವೂ ಹೆಚ್ಚಬೇಕು

ಉದ್ಯೋಗ ಹಾಗೂ ಆದಾಯ ನಷ್ಟದ ಈ ಕಾಲಘಟ್ಟದಲ್ಲಿ ಜನರಿಗೆ ನಿತ್ಯವೂ ಬೆಲೆ ಏರಿಕೆಯ ಬಿಸಿ ತಾಗುತ್ತಿದೆ. ಎಲ್‌ಪಿಜಿ ಸಿಲಿಂಡರ್, ತೈಲೋತ್ಪನ್ನ ಹಾಗೂ ವಿದ್ಯುತ್ ದರ ಏರಿಕೆಯಿಂದಾಗಿ ಸಾಮಾನ್ಯ ಜನರ ಜೀವನ ದುಬಾರಿಯಾಗಿದೆ. ಕೋವಿಡ್ ಸೃಷ್ಟಿಸಿರುವ ಅನಿಶ್ಚಿತ ಸ್ಥಿತಿ ನಿವಾರಣೆಯಾಗಿ, ಮಾರುಕಟ್ಟೆಯಲ್ಲಿ ಚಟುವಟಿಕೆಗಳು ಪೂರ್ಣ ಚೈತನ್ಯದೊಂದಿಗೆ ನಡೆಯಲು ಆರಂಭವಾದ ನಂತರದಲ್ಲಿ ಕೈಗೊಳ್ಳಬಹುದಾಗಿದ್ದ ಕೆಲವು ಕ್ರಮಗಳನ್ನು ಆಳುವ ವರ್ಗಗಳು, ಸಂಕಷ್ಟ ಕಾಲದಲ್ಲಿಯೇ ಕೈಗೊಳ್ಳುತ್ತಿವೆ.

ಜನರ ಆದಾಯದ ಸ್ಥಿತಿ ಎಲ್ಲಿಗೆ ತಲುಪಿದೆ ಎಂಬುದನ್ನೂ ಗಮನಿಸದೆಯೇ ತನ್ನ ವರಮಾನ ಕೊರತೆಯನ್ನು ಮಾತ್ರ ಸರಕಾರವು ಭರ್ತಿ ಮಾಡಿಕೊಳ್ಳಲು ಮುಂದಾಗುತ್ತಿದೆ. ನಿತ್ಯದ ಬದುಕಿನಲ್ಲಿ ಅತ್ಯಗತ್ಯವಾಗಿರುವ ಎಲ್‌ಪಿಜಿ ಸಿಲಿಂಡರ್ ಬೆಲೆ ಜನವರಿ 1 ರಿಂದ ಈವರೆಗೂ 190 ರು. ಹೆಚ್ಚಾಗಿದೆ. ವಿದ್ಯುತ್ ದರ ಏರಿಕೆಯನ್ನೂ ಇನ್ನೊಂದು ನಿದರ್ಶನವನ್ನಾಗಿ ಪರಿಗಣಿಸಬಹುದು. 2020 ಹಾಗೂ 2021ರಲ್ಲಿ ವಿದ್ಯುತ್ ಶುಲ್ಕವನ್ನು ಪ್ರತಿ ಯೂನಿಟ್‌ಗೆ ಒಟ್ಟು 70 ಪೈಸೆಯಷ್ಟು ಹೆಚ್ಚಿಸಲಾಗಿದೆ. ತೈಲ ಬೆಲೆಗಳೂ ಇದಕ್ಕೆ ಹೊರತಾಗಿಲ್ಲ.

ಲಾಕ್‌ಡೌನ್ ಪರಿಣಾಮದಿಂದ ಅನೇಕ ಬಡ, ಮಧ್ಯಮ ವರ್ಗದ ಕುಟುಂಬಗಳು ವೇತನದಲ್ಲಿ ಕಡಿತ ಅನುಭವಿ ಸುತ್ತಿವೆ. ಕೆಲ ಕುಟುಂಬಗಳು ಜೀವನೋಪಾಯ ವನ್ನೇ ಕಳೆದು ಕೊಂಡಿವೆ. ಅಂತಹ ಕುಟುಂಬಗಳ ಮೇಲೆ ಈ ಬೆಲೆ ಏರಿಕೆ ಯಾವ ರೀತಿ ಪರಿಣಾಮ ಬೀರಬಲ್ಲವು ಎಂಬುದನ್ನು ಸರಕಾರ ಯೋಚಿಸಬೇಕಿದೆ. ಪ್ರಜೆ ಬಡವ ನಾಗಿ ಇರುವಾಗ ಸರಕಾರಗಳು ಶ್ರೀಮಂತವಾಗಲು ಹೇಗೆ ಸಾಧ್ಯ? ಎಂಬುದನ್ನು ಆಳುವ ವರ್ಗ ಯೋಚಿಸ ಬೇಕಿದೆ. ಸರಕಾರಕ್ಕೆ ಆದಾಯ ಬರಬೇಕಾದರೆ ಪ್ರಜೆಗಳ ಜೇಬಲ್ಲಿ ಕಾಂಚಾಣ ಕುಣಿಯುತ್ತಿರಬೇಕು. ಜನರು ಮಾಡುವ ಖರ್ಚುಗಳಲ್ಲಿನ ಒಂದು ಭಾಗವು ತೆರಿಗೆಯ ರೂಪದಲ್ಲಿ ಸರಕಾರದ ಬೊಕ್ಕಸಕ್ಕೆ ಸಂದಾಯ ವಾಗುವ ಕಾರಣ ಅವರ ಆದಾಯ ಏರಿಕೆಯತ್ತಲೂ ಸರಕಾರ ಗಮನ ಹರಿಸಬೇಕಿದೆ.

ಮೂಲ ಸೌಕರ್ಯ ಯೋಜನೆಗಳಿಗೆ, ಅಭಿವೃದ್ಧಿ ಯೋಜನೆಗಳಿಗೆ ಹೂಡಿಕೆ ಮಾಡುವ ಮೂಲಕ ಕೋವಿಡ್ ಸಂಕಷ್ಟದಲ್ಲಿ ಉದ್ಯೋಗನಷ್ಟ ದಿಂದ ಬಳಲುತ್ತಿರು ವವರಿಗೆ ಜನರ ಕೈಗಳಿಗೆ ಕೆಲಸ ಕೊಡಿಸಿದರೆ ಜನರೂ ಕೈಬಿಚ್ಚಿ ಖರ್ಚು ಮಾಡುತ್ತಾರೆ. ಆಗ ಸರಕಾರದ ಆದಾಯವೂ ಹೆಚ್ಚುತ್ತದೆ. ಆಳುವ ವರ್ಗ ಬೆಲೆ ಏರಿಕೆಯತ್ತ ಮಾತ್ರ ಯೋಚಿಸದೇ, ಉದ್ಯೋಗ ನಷ್ಟವನ್ನು ಭರ್ತಿ ಮಾಡುವತ್ತಲೂ ಗಮನಹರಿಸಬೇಕಾದ ಅಗತ್ಯವಿದೆ.