ಶಿಶಿರ ಕಾಲ
shishirh@gmail.com
ಕೆಲವು ಮಕ್ಕಳು ಹುಟ್ಟಿನಿಂದಲೇ ಅಸಾಮಾನ್ಯರಾಗಿರುತ್ತಾರೆ. ಎಲ್ಲರೂ ಒಂದೇ, ಕಷ್ಟಪಟ್ಟರೆ ಏನನ್ನು ಬೇಕಾದರೂ ಸಾಧಿಸ ಬಹುದು ಎನ್ನುವುದು ಒಂದು ಮಟ್ಟಿಗೆ ಸತ್ಯ. ಆದರೆ ಈ ‘ಏನನ್ನೂ’ ಎಂಬುದರಲ್ಲಿ ಕೆಲ ಕಲಾಪ್ರಕಾರಗಳು ಸೇರಿಕೊಂಡಿರುವು ದಿಲ್ಲ. ಕೆಲವನ್ನು ಸಾಧಿಸಲು ಕೆಲವರಿಗೆ ತಿಪ್ಪರಲಾಗ ಹಾಕಿದರೂ ಆಗುವುದಿಲ್ಲ. ಸಂಗೀತ, ನೃತ್ಯ, ಚಿತ್ರಕಲೆ ಇತ್ಯಾದಿ ಕೆಲವರಿಗಷ್ಟೇ ಒಲಿಯುತ್ತವೆ.
ಮತ್ತೆ ಕೆಲವರು ಅದೆಷ್ಟೇ ಕಷ್ಟಪಟ್ಟರೂ ತಾಳ, ಲಯ, ರಾಗದ ಹಿಡಿತ ಸಿಗುವುದಿಲ್ಲ. ಒಬ್ಬರಿಗೆ ಕುಣಿತ ಸುಲಭ, ಇನ್ನೊಬ್ಬರಿಗೆ ಚಿತ್ರಕಲೆ ಹೀಗೆ. ಯಾವ ಕಲೆಯಲ್ಲೂ ಆಸಕ್ತಿಯಿಲ್ಲದೆ, ಓದಿನಲ್ಲಷ್ಟೇ ತೊಡಗಿಸಿಕೊಳ್ಳುವ ಮಕ್ಕಳದು ಬೇರೆ ಕೆಟಗರಿ. ಇಲ್ಲಿ ಯಾವುದು ಸರಿ, ಯಾವುದು ತಪ್ಪು ಎಂಬುದರ ಚರ್ಚೆ ಬೇಡ. ಆದರೆ ಕೆಲ ಮಕ್ಕಳಿಗಷ್ಟೇ ಯಾವುದೋ ಒಂದು ಕಲೆ ಸುಲಭದಲ್ಲಿ ಕೈಗೆ ಸಿಕ್ಕಿಬಿಡುತ್ತದೆ ಎನ್ನುವುದಷ್ಟೆ ವಿಷಯ.
ಅಂಥವರಿಗೆ ಸ್ವಲ್ಪ ಪ್ರೋತ್ಸಾಹ ಸಿಕ್ಕಿದರೆ, ಅವರ ಕಲೆಗೆ ಸಮಯ ವ್ಯಯಿ ಸುವ ತಂದೆ ತಾಯಿಯಿದ್ದರೆ, ಅಂಥವರು ಬಾಲ ಪ್ರತಿಭೆಯಾಗಿ, ಮುಂದೆ ಸ್ಟಾರ್ ಆಗಿ ಹೊರಹೊಮ್ಮುತ್ತಾರೆ. ಈ ಪ್ರತಿಭೆಗಳು ಲೋಕಲ್ ಹಂತದಲ್ಲೇ ಇದ್ದರೆ ಒಂದಿಷ್ಟು ಹೊಗಳಿಕೆ, ಹೋಲಿಕೆಯಲ್ಲಿ ಮುಗಿದುಹೋಗುತ್ತದೆ. ಆದರೆ ಒಮ್ಮೆ ಟಿವಿ-ರಿಯಾಲಿಟಿ ಶೋ ಹಂತಕ್ಕೆ ತಲುಪುವಷ್ಟು ಪ್ರತಿಭೆ ಯಿದ್ದರೆ ನಂತರದ್ದು ಸುಲಭದ ಹಾದಿಯಲ್ಲ. ಅದು ನಾವೆಯ ಪ್ರಯಾಣ. ಗಾಳಿ ಯಾವುದೇ ದಿಕ್ಕಿನಿಂದ ಬೀಸಬಹುದು, ಎಲ್ಲಿಗೂ ಒಯ್ಯಬಹುದು.
ದಡವೇ ಇಲ್ಲದಂತೆ ಮಾಡಿಬಿಡಬಹುದು, ದೊಂಬರಾಟದ ಪ್ರಯಾಣದ ಕೊನೆಯಲ್ಲಿ ಒಂದು ಸುಂದರ ಲೋಕಕ್ಕೆ, ಬದುಕಿಗೆ ಒಯ್ದು ನಿಲ್ಲಿಸಬಹುದು. ಪ್ರಯಾಣ ಮಾತ್ರ ಸುಲಭದ್ದಾಗಿರುವುದಿಲ್ಲ. ಇದೊಂದು ಬೇರೆಯದೇ ಲೋಕ. ಇದರಲ್ಲಿ ಮಕ್ಕಳ ಜತೆ
ಯಲ್ಲೇ ತಂದೆ ತಾಯಿ ಪ್ರಯಾಣಿಸಿದರೂ ಅಲ್ಲಿ ನಿಧಾನಕ್ಕೆ ತನ್ನ ನಾವೆಯನ್ನು ತಾನೇ ನಡೆಸಿಕೊಳ್ಳಲು ಆ ಮಗು ಬೆಳೆದಂತೆ ಸಿದ್ಧಪಡಿಸಿಕೊಳ್ಳಬೇಕು. ಗಾಳಿಯಿರಲಿ, ಬಿರುಗಾಳಿಯಿರಲಿ ಅದನ್ನು ತನಗೆ ಬೇಕಾದಂತೆ ಬಳಸಿಕೊಳ್ಳುವ ಚಾಕಚಕ್ಯತೆಯನ್ನು ಪ್ರತಿಭೆ ಬೆಳೆದಂತೆಲ್ಲ ಕಲಿಯಬೇಕು.
ಕಲೆಯೊಂದಿಗೆ ಈ ಬಣಬಣ್ಣದ ಬದುಕಿನ ವೇಗಕ್ಕೆ ಹೊಂದಿಕೊಳ್ಳುವ ಪ್ರತಿಭೆಯನ್ನೂ ಬೆಳೆಸಿಕೊಳ್ಳಬೇಕು. ಅದನ್ನು ಬೇರೆಯ ವರು ಕಲಿಸಲು ಸಾಧ್ಯವಿಲ್ಲ. ಅದು ಕೂಡ ಆಂತರ್ಯದಲ್ಲಿ ಹುಟ್ಟಬೇಕು- ಕಲೆಯಂತೆ. ಪ್ರತಿಭೆಯೊಂದೇ ಇದ್ದರೆ ಈ ಲೋಕದಲ್ಲಿ ಅತಂತ್ರವಾಗಿ ಬಿಡುವುದೇ ಜಾಸ್ತಿ. ಪ್ರತಿಭೆಯ ಜತೆ ತಂತ್ರಗಾರಿಕೆಯೂ ಮುಖ್ಯ. ಬ್ರಿಟ್ನಿ ಸ್ಪೀಯರ್ಸ್ ನನ್ನ ಮೆಚ್ಚಿನ ಗಾಯಕಿ. ಆಕೆ ಹಾಡನ್ನು ಬರೆದು, ಹಾಡಿ ಅದಕ್ಕೆ ಕುಣಿತ ಹಾಕಿ ಪ್ರೇಕ್ಷಕರನ್ನು ಮೋಡಿ ಮಾಡಬಲ್ಲ, ಪಾಪ್ ಲೋಕ ಕಂಡ ದೊಡ್ಡ ಸಾಧಕಿ. ಕೆಲವೊಂದು ಹಾಡಿಗೆ ವಯಸ್ಸಾಗುವುದೇ ಇಲ್ಲವಲ್ಲ ಅಂಥ ಹಲವು ಹಾಡು ಬರೆದು ಹಾಡಿದವಳು ಬ್ರಿಟ್ನಿ. ನಿಮಗೆ ಪಾಪ್ ಸಂಗೀತದತ್ತ ಒಲವಿದೆಯೆಂದರೆ ಅಲ್ಲಿ ಬ್ರಿಟ್ನಿಯು ಹಾಡುಗಳಿಗೆ ಒಂದಿಷ್ಟು ವಿಶೇಷ ಜಾಗವಿದ್ದೇ ಇರುತ್ತದೆ.
ಆಕೆಯ ಒಂದಿಷ್ಟು ಹಾಡುಗಳನ್ನು ಗುನುಗುತ್ತಲೇ ಇರುತ್ತೀರಿ. ಕೆಲವು ಹಾಡುಗಳಿಗೆ ಒಂದು ಅನನ್ಯ ಶಕ್ತಿಯಿರುತ್ತದೆ, ಅವು ಎಂದೂ ಬೋರ್ ಅನ್ನಿಸುವುದೇ ಇಲ್ಲ. ಪಾಪ್ ಸಂಗೀತದ ಗಂಧಗಾಳಿ ಇರದವರಿಗೂ ಬ್ರಿಟ್ನಿಯ ಹಾಡನ್ನು ಕೇಳಿದಾಗ, ತಾಳ ಹಾಕಿ ಒಂದಿಷ್ಟು ಹೊತ್ತು ಕೇಳಲೇಬೇಕೆನ್ನಿಸುತ್ತದೆ. ಆಕೆ ಬಾಲಪ್ರತಿಭೆ. ಅದೇನೋ ‘ಟಿಕ್ ಟಾಕ್’ ಮಾಡಿಕೊಂಡೋ ಅಸಡ್ಡಾಳ ಮಾತಾಡಿಕೊಂಡೋ ಬೆಳೆದವಳಲ್ಲ ಅಥವಾ ಆಕೆ ಇನ್ಯಾವುದೋ ರೀತಿಯ ಸುಲಭದ ಸಾಧನೆಯ ಪ್ರತಿಭೆಯಲ್ಲ.
ಆಕೆ ಪಾಪ್ ಸಂಗೀತದ ಯುವರಾಣಿಯಾಗಿ ಮೆರೆದವಳು. ಪಾಪ್ ಸಂಗೀತಪ್ರಿಯರ ಹೃದಯದಲ್ಲಿ ತನಗೆ ಯಾವತ್ತೋ ಒಂದು ಕಾಯಂ ಸ್ಥಾನ ಗಿಟ್ಟಿಸಿಕೊಂಡವಳು. ಅವಳು ಹುಟ್ಟಿದ್ದು ಅಮೆರಿಕದ ಒಂದು ಚಿಕ್ಕ ಊರಿನಲ್ಲಿ. ಅಮೆರಿಕನ್ ಹಳ್ಳಿಗಳೆಂದರೆ ಅವು ನಮ್ಮೂರಿನಂತೆ. ಅಲ್ಲಿ ಎಲ್ಲರಿಗೆ ಎಲ್ಲರೂ ಪರಿಚಯ. ಆಕೆ ಹುಟ್ಟು ಹಾಡುಗಾರ್ತಿ. ೩ನೇ ವಯಸ್ಸಿನ ಸ್ಟೇಜಲ್ಲಿ ಹಾಡಿದವಳು ಬ್ರಿಟ್ನಿ. ಹತ್ತು ವರ್ಷವಾಗುವಾಗಲೇ ಟಿವಿ ಷೋ ಒಂದರಲ್ಲಿ ಬ್ರಿಟ್ನಿ ಭಾಗ ವಹಿಸಿದ್ದಳು.
ಆಗ ಆಕೆ ಹಾಡಿದ ‘Love can build a bridge’ ಗೀತೆ ನೆರೆದಿದ್ದ ಸಭಿಕರನ್ನೆಲ್ಲ ಮೂಕವಿಸ್ಮಿತರನ್ನಾಗಿಸಿತ್ತು. ‘ಮಿಕ್ಕಿ ಮೌಸ್ ಕ್ಲಬ್’1955ರಿಂದಲೂ ನಡೆದುಕೊಂಡು ಬಂದ ಪ್ರತಿಷ್ಠಿತ ಅಮೆರಿಕನ್ ಟೆಲಿವಿಷನ್ ಷೋ. ಅಗಾಧ ಪ್ರತಿಭೆಯಿದ್ದ ಬ್ರಿಟ್ನಿಗೆ ಆ ಷೋದಲ್ಲಿ ಜಾಗ ದಕ್ಕಿಸಿಕೊಡಲು ಆಕೆ 8 ವರ್ಷವಿರುವಾಗಲೇ ಬ್ರಿಟ್ನಿಯ ತಾಯಿ ಕರೆದುಕೊಂಡು ಹೋಗಿದ್ದಳು. ಅಲ್ಲಿನ ತೀರ್ಪು ಗಾರರು ಬ್ರಿಟ್ನಿಯ ಪ್ರತಿಭೆಯನ್ನೇನೋ ಮೆಚ್ಚಿದರು, ಆದರೆ ತುಂಬ ಚಿಕ್ಕವಳೆಂಬ ಕಾರನಕ್ಕೆ ಅವಳನ್ನು ಆಯ್ಕೆ ಮಾಡಲಿಲ್ಲ.
ಬ್ರಿಟ್ನಿಯ ತಾಯಿಗೆ ಆಕೆಯ ಪ್ರತಿಭೆಯ ಅಗಾಧತೆ ತಿಳಿದಿತ್ತು. ಆ ರಿಯಾಲಿಟಿ ಷೋನಲ್ಲಿ ಸಿಕ್ಕ ಒಬ್ಬ ವ್ಯಕ್ತಿ ಹೇಳಿದಂತೆ ಅವಳನ್ನು ನ್ಯೂಯಾರ್ಕ್‌ನ ‘ಪ್ರೊಫೆಷನಲ್ ಪರ್ಫಾರ್ಮಿಂಗ್ ಆರ್ಟ್ಸ್ ಸ್ಕೂಲ್’ಗೆ ಕರೆದುಕೊಂಡು ಹೋಗಿ ಸೇರಿಸಿದಳು. ನ್ಯೂಯಾರ್ಕ್ ನಲ್ಲೇ ಒಂದು ಚಿಕ್ಕ ಅಪಾರ್ಟ್‌ಮೆಂಟ್ ಮಾಡಿಕೊಂಡು ಆಕೆಯ ಸಂಗೀತ ಕಲಿಕೆ ಮುಂದುವರಿಯಿತು. ಕ್ರಮೇಣ ಬ್ರಿಟ್ನಿ ಚಿಕ್ಕಪುಟ್ಟ ಜಾಹೀರಾತು, ಟಿವಿ ಧಾರಾವಾಹಿ ಗಳಲ್ಲಿ ನಟಿಸುವುದು, ಹಾಡುವುದೆಲ್ಲ ನಡೆಯಿತು. ನಂತರದಲ್ಲಿ ಬ್ರಿಟ್ನಿ ಅಲ್ಲಿನ ಸಂಗೀತ ನಿರ್ದೇಶಕರನ್ನು ಭೆಟ್ಟಿಯಾಗಿ ಅವಕಾಶಕ್ಕೆ ಕೋರಿದ್ದೂ ಆಯಿತು. ಆದರೆ ಅದಾಗಲೇ ಮಡೋನಾ, ಡೆಬ್ಬಿ ಗಿಬ್ಸನ್, ಟಿ-ನಿ ಮೊದಲಾದ ಘಟಾನುಘಟಿ ಸೋಲೋ ಹಾಡುಗಾರ್ತಿಯರು ಉತ್ತುಂಗದಲ್ಲಿದ್ದರು.
ಅವರೆಲ್ಲರ ನಡುವೆ ಈ ಪುಟ್ಟ, ಮುಗ್ಧಮುಖದ ಬ್ರಿಟ್ನಿ ಸರಿಹೊಂದುವುದಿಲ್ಲ ಎಂದು ಎಲ್ಲರೂ ತಿರಸ್ಕರಿಸುತ್ತ ಹೋದರು.
ಒಬ್ಬ ಮ್ಯೂಸಿಕ್ ಕಂಪನಿಯ ಮಾಲೀಕ ಮಾತ್ರ ಬ್ರಿಟ್ನಿಯಲ್ಲಿ ಹೊಸತನ ಕಂಡ. ಆಕೆಯ ಇಮೇಜ್ ಅನ್ನು ಇನ್ನೊಂದು ರೀತಿ ಯಲ್ಲಿ ತೋರಿಸಿ ಬೆಳೆಸಬಹುದಾದ ಒಂದು ವಿಶೇಷ ಅವಕಾಶದ ಹೊಳಹು ಆತನಿಗೆ ಕಂಡಿತ್ತು. ಪಾಪ್ ಸಂಗೀತದಲ್ಲಿ
ವೈಯಕ್ತಿಕ ಇಮೇಜ್ ಬಹಳ ಮುಖ್ಯ. ಅಲ್ಲಿಯವರಿಗೆ ಬಂದ ಪಾಪ್ ಗಾಯಕಿಯರ ಇಮೇಜ್ ಸೆಕ್ಸಿ, ಬೋಲ್ಡ್ ಎಂದಾಗಿತ್ತು.
ಆದರೆ ಬ್ರಿಟ್ನಿಯ ಮುಖ ಮುಗ್ಧ ಅಮೆರಿಕನ್ ಹುಡುಗಿಯ ಇಮೇಜ್‌ನದು.
ಅದಕ್ಕೆ ಒಂದಿಷ್ಟು ಮಸಾಲೆ ಹಾಕಿದರೆ ಖಂಡಿತ ಅವಳನ್ನು ಸ್ಟಾರ್ ಮಾಡಬಹುದು ಎನ್ನುವ ಪ್ರಾಪಂಚಿಕ ಸೂಕ್ಷ್ಮತೆಯನ್ನು ಮನಗಂಡ ಆ ಕಂಪನಿ ಅದೇ ಇಮೇಜ್ ಬಳಸಿಕೊಂಡು ಬ್ರಿಟ್ನಿಯ ಮೊದಲ ಮ್ಯೂಸಿಕ್ ಆಲ್ಬಮ್ ಅನ್ನು ಧ್ವನಿಮುದ್ರಿಸಿ ಬಿಡುಗಡೆ ಮಾಡಿತು. ಅದು ಅತ್ಯಂತ ಜನಪ್ರಿಯತೆ, ಮನ್ನಣೆ ಗಳಿಸಿತು. ಆ ಮ್ಯೂಸಿಕ್ ಪ್ರೊಡ್ಯೂಸರ್ ಅಂದುಕೊಂಡಂತೆ ಮುಗ್ಧ ಅಮೆರಿಕನ್ ಹುಡುಗಿಯ ಇಮೇಜ್ ಪಾಪ್ ಸಂಗೀತಪ್ರಿಯರಿಗೆಲ್ಲ ಇಷ್ಟವಾಯಿತು.
ಅದು ಪಾಪ್ ಸಂಗೀತದಲ್ಲಿ ಹೊಸ ಇಮೇಜ್. ಬಿಲ್ ಬೋರ್ಡ್- ಇದು ಅಮೆರಿಕನ್ ಸಂಗೀತಕ್ಕೆ ಮೀಸಲಾದ ಹೆಸರಾಂತ ಪತ್ರಿಕೆ. ಇದಕ್ಕೆ 125 ವರ್ಷದ ಇತಿಹಾಸವಿದೆ. ಆ ಪತ್ರಿಕೆ ಪ್ರತಿವಾರ ‘ಬಿಲ್ ಬೋರ್ಡ್ 200’ ಹೆಸರಿನಡಿ ಅತ್ಯಂತ ಒಳ್ಳೆಯ, ಜನಪ್ರಿಯ, ಟಾಪ್ ಅಮೆರಿಕನ್ ಹಾಡುಗಳನ್ನು ಚಾರ್ಟ್ ಮಾಡಿ ಪ್ರಕಟಿಸುತ್ತದೆ. ಅದರ ಇನ್ನೂರರ ಲಿಸ್ಟಿನಲ್ಲಿ ಕಾಣಿಸಿಕೊಳ್ಳುವು ದೆಂದರೆ ಅಮೆರಿಕನ್ ಸಂಗೀತ ಜಗತ್ತಿನವರಿಗೆಲ್ಲ ಕನಸಿನ ಮಾತು.
ಎಲ್ವಿಸ್ ಪ್ರೆಸ್ಲಿ, ಮೈಕೆಲ್ ಜಾಕ್ಸನ್, ಬೀಟಲ್ಸ ಇವರೆಲ್ಲ ಅಲ್ಲಿ ಮೊದಲ ಸ್ಥಾನದಲ್ಲಿ ಹಿಂದೆ ಕುಳಿತೆದ್ದವರು. ಮೊದಲ 50 ಸ್ಥಾನ ಘಟಾನುಘಟಿಗಳಿಗೇ ಮೀಸಲು. ಅಂಥ ಇತಿಹಾಸವುಳ್ಳ ಲಿಸ್ಟಿನಲ್ಲಿ ಬ್ರಿಟ್ನಿಯ ಎರಡನೇ ಹಾಡು ಹಲವು ವಾರ ಮೊದಲ ಸ್ಥಾನ ಕಾಯ್ದುಕೊಂಡಿತ್ತು. ಆಕೆಯ ಆಲ್ಬಮ್ ಜಗತ್ತಿನ ೧೫ ರಾಷ್ಟ್ರಗಳ ಟಾಪ್ ಲಿಸ್ಟಿನಲ್ಲಿ ಅಂದು ಕಾಣಿಸಿಕೊಂಡಿತ್ತು. ಮೊದಲ ಆಲ್ಬಮ್‌ನ ಧ್ವನಿಮುದ್ರಿಕೆಗಳು ಒಂದೇ ವರ್ಷದಲ್ಲಿ ೧ ಕೋಟಿಯಷ್ಟು ಮಾರಾಟವಾದವು ಎಂದರೆ ಉಳಿದದ್ದು ಅಂದಾಜಿಸಿ ಕೊಳ್ಳಿ.
ಆಕೆಗೆ ಆಗ ಕೇವಲ ೧೮ ವಯಸ್ಸು. ಖ್ಯಾತಿ, ಮಿಲಿಯನ್‌ಗಟ್ಟಲೆ ಹಣ, ಜನಪ್ರಿಯತೆ ಇವೆಲ್ಲ ತಡೆದುಕೊಳ್ಳಲಾಗದಷ್ಟು ಪ್ರಮಾಣ ದಲ್ಲಿ ಆಕೆಯದಾಯಿತು. ಇದೆಲ್ಲದರ ಮಧ್ಯೆ ಇನ್ನೊಬ್ಬ ಪ್ರತಿಭೆ ಜಸ್ಟಿನ್ ಟಿಂಬರ್ಲೇಕ್ ಜತೆ ಪ್ರೇಮಾಂಕುರವಾಯಿತು. ಆಗ ಅತಿಹೆಚ್ಚು ಸುದ್ದಿಯಲ್ಲಿದ್ದ ಜೋಡಿ ಅವರದು. ಆ ಪ್ರೇಮ ಜಾಸ್ತಿ ದಿನ ಮುಂದುವರಿಯಲಿಲ್ಲ. ಅದಾಗಲೇ ಪಾಪ್ ಜಗತ್ತಿನಲ್ಲಿ ‘ಅತ್ಯಂತ ಸಭ್ಯಳು’ ಎನ್ನುವ ಇಮೇಜ್ ಆಕೆಗಿಂತ ದೊಡ್ಡದಾಗಿ ಆಕೆಯ ಸುತ್ತ ಬೆಳೆದು ನಿಂತಿತ್ತು.
ಈ ಇಮೇಜನ್ನು ಆಕೆ ಹಾಳು ಮಾಡಿಕೊಳ್ಳುವಂತಿರಲಿಲ್ಲ. ಏಕೆಂದರೆ ಪಾಪ್ ಜಗತ್ತಿನಲ್ಲಿ ಹಾಡು, ಸ್ವರದಷ್ಟೇ ಇಮೇಜ್ ಮುಖ್ಯವಾಗುತ್ತದೆ. ಅಮೆರಿಕನ್ ಪಾಪ್ ಸಂಗೀತಗಾರರೆಲ್ಲ ಯಾವತ್ತೂ ಅತ್ಯಂತ ಪ್ರಭಾವಶಾಲಿಗಳು. ಆ ಸಮಯ
ದಲ್ಲಿನ ಉನ್ನತ ಪಾಪ್ ಸಂಗೀತಗಾರನಿಗೆ ಇಲ್ಲಿನ ಅಧ್ಯಕ್ಷನಿಗಿಂತ ಹೆಚ್ಚಿಗೆ ಪ್ರಭಾವ ಬೀರುವ ಶಕ್ತಿಯಿರುತ್ತದೆ. ಅಮೆರಿಕ
ಅಷ್ಟರಮಟ್ಟಿಗೆ ಪಾಪ್ ಸಂಗೀತವನ್ನು ನೆಚ್ಚಿಕೊಂಡ ದೇಶ.
2003-2004ರಲ್ಲಿ ಆಕೆಯ ಜನಪ್ರಿಯತೆ ಸ್ವಲ್ಪ ಕಡಿಮೆ ಯಾಗಿತ್ತು. ವೈಯಕ್ತಿಕ ಜೀವನದಲ್ಲಿ ಅದಾಗಲೇ ೨-೩ ಸಂಬಂ
ಧಗಳು ಮುರಿದುಬಿದ್ದಿದ್ದವು. ಯಥೇಚ್ಛ ಹಣದೊಂದಿಗೆ ತಡೆದುಕೊಳ್ಳಲಾಗದ ನೂರೆಂಟು ಮಾನಸಿಕ ಒತ್ತಡಗಳು ಆಕೆಯ ಸಂಗೀತದ ನಾವೀನ್ಯತೆಯ ಮೇಲೆ ಪರಿಣಾಮ ಬೀರತೊಡಗಿದ್ದವು. ಪಬ್ಲಿಕ್ ಇಮೇಜ್ ಅನ್ನು ಹಾಗೇ ಮುಂದುವರಿಸಿಕೊಂಡು ಹೋಗುವುದು ಆಕೆಗೆ ತೀರಾ ಕಷ್ಟವಾಗುತ್ತಿತ್ತು.
ಇದೆಲ್ಲದರ ನಡುವೆ ಆಕೆಗೆ ಸಹಜ ಜೀವನ, ಪ್ರೀತಿಸುವ ಹೃದಯ ಬೇಕೆನ್ನಿಸಿತ್ತು. ಆಕೆ ಆಗ ಹಾಡಿದ್ದೆಲ್ಲ ಸೂಪರ್ ಹಿಟ್
ಆಗಿ ಹಣವನ್ನೇನೋ ತಂದುಕೊಡುತ್ತಿತ್ತು; ಆದರೆ ಆಕೆಗೆ ಬದುಕು ಸಂಭಾಳಿಸಲು ಅಸಾಧ್ಯವೆನ್ನಿಸತೊಡಗಿತು. ಜನ
ಪ್ರಿಯತೆಯೇ ಹಾಗೆ. ಅದು ಸ್ವಲ್ಪ ಕಡಿಮೆಯಾಯಿತು ಎನಿಸಿ ಬಿಟ್ಟರೆ ಅಂಥ ಸೆಲೆಬ್ರಿಟಿಯ ಮಾನಸಿಕ ಸೀಮಿತ ಹಾದಿತಪ್ಪಿ
ಬಿಡುತ್ತದೆ. ಇದಕ್ಕೆ ಸಾಕಷ್ಟು ಉದಾಹರಣೆಗಳು ಹಿಂದಿ, ಕನ್ನಡ ಚಿತ್ರೋದ್ಯಮಗಳಲ್ಲಿ ಸಿಗುತ್ತವೆ. ಆಕೆಯಂತೆ ಆ ಸಮಯದಲ್ಲಿ
ಇನ್ನೊಬ್ಬ ಪಾಪ್ ತಾರೆ ಮಡೋನಾಗೂ ಜನಪ್ರಿಯತೆ ಕಡಿಮೆಯಾಗುತ್ತಿತ್ತು.
ಆಗ ಅವರಿಬ್ಬರು ಸೇರಿ ಒಂದು ಪ್ಲಾನ್ ಮಾಡಿದರು. ಒಂದು ಪ್ರತಿಷ್ಠಿತ ಸಭೆಯಲ್ಲಿ ಹಾಡುತ್ತ ಅವರಿಬ್ಬರೂ ಪರಸ್ಪರ ಚುಂಬಿಸಿ ಕೊಂಡರು. ಇದು ಜಗತ್ತಿನಲ್ಲ ಸುದ್ದಿಯಾಗಿ ಅವರಿಬ್ಬರೂ ಮತ್ತೆ ಇನ್ನಷ್ಟು ಜನಪ್ರಿಯರಾದರು. ಇದೆಲ್ಲದರ ನಡುವೆ ಬ್ರಿಟ್ನಿ ಒಬ್ಬನನ್ನು ಮದುವೆಯಾದಳು. ಆ ಮದುವೆ ಒಂದು ವರ್ಷವೂ ಬಾಳಲಿಲ್ಲ. ಅದು ಮುರಿದು ಬಿದ್ದ ಕೆಲವೇ ದಿನಗಳಲ್ಲಿ ತನ್ನ ಬಳಿ ಕೆಲಸಕ್ಕಿದ್ದ ಕೊರಿಯೋಗ್ರಾಫರ್‌ನನ್ನು ಬ್ರಿಟ್ನಿ ಮದುವೆಯಾದಳು. ಇಷ್ಟು ಅವಸರದಲ್ಲಿ ಆಕೆ ಇನ್ನೊಂದು ಮದುವೆಯಾಗಲು ‘ಗಟ್ಟಿ ಅಮೆರಿಕನ್ ಹೆಣ್ಣು’ ಎನ್ನುವ ತನ್ನ ಇಮೇಜನ್ನು ಉಳಿಸಿಕೊಳ್ಳುವ ಹಂಬಲವೇ ಜಾಸ್ತಿ ಇದ್ದಂತಿತ್ತು.
೩ ವರ್ಷದಲ್ಲಿ ೨ ಮಕ್ಕಳಾದವು, ವಿಚ್ಛೇದನವೂ ಆಯಿತು. ಆಗ ಆಕೆ ಮಾನಸಿಕವಾಗಿ ಸಂಪೂರ್ಣ ಕುಸಿದುಹೋಗಿದ್ದಳು. ಡ್ರಗ್ಸ್ ಸೇವನೆಯೂ ಶುರುವಾಗಿತ್ತು. ತನ್ನ ಚಿಕ್ಕ ಮಗುವನ್ನು ಎತ್ತಿಕೊಂಡು ಹೋಗುವಾಗ ಆಕೆ ಒಮ್ಮೆ ನೆಲಕ್ಕೆ ಬಿದ್ದದ್ದು ಡ್ರಗ್ಸ್ ಸೇವನೆಯ ಪರಿಣಾಮವೇ ಆಗಿತ್ತು. ಆಕೆಯ ಪ್ರತಿಯೊಂದು ನಡೆ-ನುಡಿ, ವೈಯಕ್ತಿಕ ಬದುಕು ಎಲ್ಲವೂ ಪತ್ರಿಕೆಗಳಲ್ಲಿ ಹೆಡ್‌ಲೈನ್ ಆಗುತ್ತಿದ್ದವು. ಕ್ರಮೇಣ ಮಾನಸಿಕ ಸಮಸ್ಯೆ, ಖಿನ್ನತೆ ಕಾಣಿಸಿಕೊಂಡಿತು.
ಬ್ರಿಟ್ನಿ ತನ್ನ ಜೀವನ ನಿರ್ವಹಣೆಗೆ ಅಸಮರ್ಥಳು ಎಂದು ಆಕೆಯ ತಂದೆ ಕೋರ್ಟ್‌ನಲ್ಲಿ ದಾವೆ ಹೂಡಿ ಆಕೆಯ ಸಂಪತ್ತನ್ನು, ಜೀವನವನ್ನು ನ್ಯಾಯಾಲಯದ ಮೂಲಕ ತನ್ನ ಸುಪರ್ದಿಗೆ ತೆಗೆದುಕೊಂಡ. ಅಮೆರಿಕದಲ್ಲಿ Conservatorship ಎಂಬ ಒಂದು ಕಾನೂನು ವ್ಯವಸ್ಥೆಯಿದೆ. ಅದು ಸಾಮಾನ್ಯವಾಗಿ, ವಯಸ್ಸಾಗಿ ಅರಳು ಮರಳಾದವರ ವ್ಯವಹಾರವನ್ನು ಮನೆಯ ವರು, ಅವರ ಮಕ್ಕಳು ವಿಧ್ಯುಕ್ತವಾಗಿ ಪಡೆಯುವುದಕ್ಕೆ ಇರುವ ಕಾನೂನು.
ಇದರ ಮೂಲಕ ೨೯ ವಯಸ್ಸಿನ ಬ್ರಿಟ್ನಿಯ ಸಂಪೂರ್ಣ ಸುಪರ್ದಿಯನ್ನು ಆಕೆಯ ತಂದೆ ಪಡೆದುಕೊಂಡ. ಅಲ್ಲಿಂದ ಮುಂದೆ ಆಕೆಯ ಸಂಪತ್ತನ್ನು ಬೇಕಾಬಿಟ್ಟಿ ಬಳಸಿಕೊಳ್ಳಲು ತಂದೆಯೇ ಮುಂದಾದ. ಮುಂದಿನ 10 ವರ್ಷ ಆಕೆಗೆ ಯಾವುದೇ ಸ್ವಾತಂತ್ರ್ಯವಿರಲಿಲ್ಲ. ಒಂದು ಫೋನ್ ಕರೆ ಮಾಡಬೇಕೆಂದರೂ ಆಕೆ ತಂದೆಯ ಒಪ್ಪಿಗೆ ಪಡೆಯಬೇಕಿತ್ತು. ಇದೆಲ್ಲದರಿಂದ ಇನ್ನಷ್ಟು ಕುಗ್ಗಿದಳು ಬ್ರಿಟ್ನಿ. ಹೀಗೆ, ಪಾಪ್ ಸಂಗೀತದ ರಾಣಿಯಾಗಿದ್ದ ಬ್ರಿಟ್ನಿ ತಂದೆಯ ಬಂಧನದಲ್ಲಿರಬೇಕಾಯಿತು. ಆಕೆಗೆ ಇದನ್ನೆಲ್ಲ ನಿಭಾಯಿಸಲು ಸಾಧ್ಯವಾಗುತ್ತಿರಲಿಲ್ಲ. ತೀರಾ ಬೇಕಾಬಿಟ್ಟಿಯಾಗಿರುವುದು, ಹೋದಲ್ಲಿ ಬಂದಲ್ಲಿ ಗಲಾಟೆ ಮಾಡುವುದು ಸಾಮಾನ್ಯವಾಯಿತು.
ಒಮ್ಮೆಯಂತೂ ಬಟ್ಟೆ ಅಂಗಡಿಯೊಂದಕ್ಕೆ ಹೋಗಿ ವಿವಸ್ತ್ರಳಾಗಿ ಅಂಗಡಿಯೆಲ್ಲ ಸುತ್ತಿದಳು. ಆಕೆ ಮಾನಸಿಕ ಸಮತೋಲನ ವನ್ನು ಸಂಪೂರ್ಣ ಕಳೆದುಕೊಂಡು ಹುಚ್ಚಿಯಾಗಿ ಬಿಟ್ಟಿದ್ದಳು. ಕೊನೆಗೂ ಕಳೆದ ವರ್ಷ, ಹನ್ನೊಂದು ವರ್ಷದ ನಂತರ ಆಕೆಯ ಮೇಲೆ ಕೋರ್ಟ್ ವಿಧಿಸಿದ್ದ ನಿರ್ಬಂಧಗಳು, ತಂದೆಯ ಹಿಡಿತ ಇವೆಲ್ಲ ಕೊನೆಯಾಗಿವೆ. ಈಗ ಬ್ರಿಟ್ನಿ ಮೊದಲಿ ನಂತಾಗಿದ್ದಾಳೆ. ಈ ವರ್ಷ ಪ್ರತಿಷ್ಠಿತ ರೆಕಾರ್ಡಿಂಗ್ ಕಂಪನಿಗಳ ಜತೆ ಹಲವು ಆಲ್ಬಮ್‌ಗಳಿಗೆ ಒಡಂಬಡಿಕೆ ಮಾಡಿಕೊಂಡಿದ್ದಾಳೆ. ಆದರೆ ಇಂಥ ಪ್ರತಿಭಾವಂತೆ ತನ್ನ ಜೀವನದ ಅತ್ಯಂತ ಮಹತ್ವದ ವಯಸ್ಸಿನಲ್ಲಿ ಬದುಕು ನಿಭಾಯಿಸಲು ಸಾಧ್ಯವಾಗದಂತೆ ಏನೆಲ್ಲ ಅವಾಂತರ ಮಾಡಿಕೊಂಡಳು ಎಂಬುದು ಎಲ್ಲ ಬಾಲಪ್ರತಿಭೆಗಳಿಗೆ, ಪಾಲಕರಿಗೆ ಒಂದು ಪಾಠವಾಗಿದೆ.
ಬಾಲಪ್ರತಿಭೆಗಳು, ಅವರ ತಂದೆ-ತಾಯಂದಿರು ಹೇಗೆ ಬದುಕಬೇಕು/ಬದುಕಬಾರದು ಎಂಬುದಕ್ಕೆ ಅತ್ಯಂತ ಒಳ್ಳೆಯ
ಉದಾಹರಣೆ ಬ್ರಿಟ್ನಿ ಸ್ಪೀಯರ್ಸ್. ಯಾವ ರೀತಿ ಟಿವಿಯ, ಈ ಬಣ್ಣದ ಬದುಕಿನ ಎಲ್ಲ ಸಲಕರಣೆಗಳನ್ನು ಬಳಸಿಕೊಂಡು
ಬೆಳೆಯಬಹುದು ಮತ್ತು ಅದು ಹುಟ್ಟುಹಾಕುವ ಖ್ಯಾತಿ ಹೇಗೆ ಪ್ರತಿಭೆಯೊಂದನ್ನು ಸಂಪೂರ್ಣ ನೆಲಕಚ್ಚಿಸಬಲ್ಲದು ಎಂಬು
ದಕ್ಕೂ ಬ್ರಿಟ್ನಿ ಉದಾಹರಣೆಯಾಗಿzಳೆ. ಪ್ರತಿಭೆಯ ಜತೆಜತೆಗೆ ಜೀವನವನ್ನು ಹೇಗೆ ನಡೆಸಿಕೊಳ್ಳಬೇಕು/ನಡೆಸಿಕೊಳ್ಳಬಾ
ರದು ಎಂಬುದಕ್ಕೂ ಇವಳೇ ಉದಾಹರಣೆ.
ಧ್ವನಿಮುದ್ರಿಕೆ ಮಾರಾಟದಲ್ಲಿ 15 ಗಿನ್ನಿಸ್ ದಾಖಲೆ, ಗ್ರಾಮಿ ಪ್ರಶಸ್ತಿ, ಹಾಲಿವುಡ್‌ನ ‘ವಾಕ್ ಆಫ್ ಫ್ರೇಮ್’ ಇವೆಲ್ಲವನ್ನೂ ಪಡೆದವಳು ಬದುಕನ್ನು ನಿಭಾಯಿಸುವಲ್ಲಿ ಸೋತದ್ದು, ನಂತರ ಅದನ್ನು ಮೀರಿ ಮೇಲೆದ್ದದ್ದು ಕೂಡ ಪಾಠವೇ. ಆಕೆಯ ಬದುಕಿನ
ಕಥೆಯನ್ನು ಪ್ರಕಟಿಸಲು ಪ್ರಕಾಶನ ಸಂಸ್ಥೆಯೊಂದು ಆಕೆಗೆ 15 ಮಿಲಿಯನ್ ಡಾಲರ್ ಸಂದಾಯ ಮಾಡಿದೆ. ಆ ಪುಸ್ತಕ
ಬಿಡುಗಡೆಯಾದಾಗ ಖಂಡಿತ ಓದಬೇಕು. ಏಕೆಂದರೆ, ಬ್ರಿಟ್ನಿಯ ಜೀವನ ಎಲ್ಲರಿಗೂ ಪಾಠವಾಗುವಂಥದ್ದು.