Sunday, 10th November 2024

22 ಭಾಷೆಗಳಿಗೂ ಅಧಿಕೃತ ಭಾಷಾ ಸ್ಥಾನಮಾನ?

ಅಭಿವ್ಯಕ್ತಿ
ರಮಾನಂದ ಶರ್ಮಾ

ಹೀಗೊಂದು ಆಶಾಕಿರಣ ಹಿಂದಿಯೇತರರಲ್ಲಿ ಮುಖ್ಯವಾಗಿ ದಕ್ಷಿಣ ಭಾರತೀಯರಲ್ಲಿ ಮೂಡಿದೆ. ಕಳೆದ ಮಾರ್ಚ್ ತಿಂಗಳಿನಲ್ಲಿ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಪ್ರಕಟಿಸಿದ ‘ಪರಿಸರ ಪರಿಣಾಮ’ ಅಧ್ಯಯನ ವರದಿ ಕೇವಲ ಹಿಂದಿ ಮತ್ತು ಇಂಗ್ಲೀಷ್
ಭಾಷೆಯಲ್ಲಿದ್ದು, ಅದು ಸಕಲ ಭಾರತೀಯರ ಅವಗಾಹನೆ ಮತ್ತು ಅಧ್ಯಯನಕ್ಕೆೆ ದೇಶದ ಎಲ್ಲಾ 22 ಅನುಸೂಚಿತ ಭಾಷೆಗಳಲ್ಲೂ ಪ್ರಕಟಿಸಬೇಕು ಎಂದು ಕೆಲವು ಪರಿಸರವಾದಿಗಳು ಮತ್ತು ಇತರರು ದಿಲ್ಲಿ ಹೈಕೋರ್ಟ್ ಮೊರೆ ಹೋಗಿದ್ದರು.

ಹೈಕೋರ್ಟ್ ಈ ವರದಿಯನ್ನು ಎಲ್ಲಾ 22 ಭಾಷೆಗಳಲ್ಲೂ ಪ್ರಟಿಸಬೇಕು ಎಂದು ತೀರ್ಪು ನೀಡಿತ್ತು. ಸಂವಿಧಾನದ 343ನೇ ಪರಿಚ್ಚೇದದ ಪ್ರಕಾರ ಭಾರತದ ಅಧಿಕೃತ ಭಾಷೆಗಳು ಹಿಂದಿ ಮತ್ತು ಇಂಗ್ಲೀಷ್. ಅಂತೆಯೇ ಎಲ್ಲಾ 22 ಭಾಷೆಗಳಲ್ಲಿ ಇದನ್ನು ಪ್ರಕಟಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರಕಾರ ಆಕ್ಷೇಪ ವ್ಯಕ್ತಪಡಿಸಿತ್ತು. ಸಂವಿಧಾನದ 8ನೇ ಪರಿಚ್ಛೇದದಲ್ಲಿರುವ ಎಲ್ಲಾ ಭಾಷೆಗಳನ್ನೂ ಭಾರತ ಸರಕಾರದ ಅಧಿಕೃತ ಆಡಳಿತ ಭಾಷೆಯಾಗಿ ಬಳಸಬೇಕೆನ್ನುವ ಉಲ್ಲೇಖ ಸಂವಿಧಾನದಲ್ಲಿ ಇಲ್ಲ
ಎಂದೂ ವಾದಿಸಿತ್ತು. ಹಾಗೆಯೇ ಆಧಿಕೃತ ಭಾಷೆಗಳ ಕಾಯ್ದೆಯ ಸೆಕ್ಷನ್ 3ರಲ್ಲಿ ಕೇಂದ್ರ ಸರಕಾರದ ಎಲ್ಲಾ ಆದೇಶ, ನಿರ್ಣಯ, ನಿಯಮ, ಅಧಿಸೂಚನೆ ಮತ್ತು ಆಡಳಿತಾತ್ಮಕ ಮಾಹಿತಿಗಳನ್ನು ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಪ್ರಕಟಿಸಬೇಕು ಎನ್ನುವ
ನಿಬಂಧನೆ ಇದೆ ಎಂದು ನ್ಯಾಯಾಲಯಕ್ಕೆೆ ಮನವರಿಕೆ ಮಾಡಲು ಪ್ರಯತ್ನಿಸಿತ್ತು.

ಆದರೆ, ಈ ವಾದವನ್ನು ಒಪ್ಪದ ಸುಪ್ರೀಂ ಕೋರ್ಟ್, ಕೇಂದ್ರ ಸರಕಾರದ ಆದೇಶ ಅಥವಾ ಮಾಹಿತಿಗಳನ್ನು ಕೇವಲ ಇಂಗ್ಲೀಷ್ ಮತ್ತು ಹಿಂದಿ ಭಾಷೆಯಲ್ಲಿ ಪ್ರಕಟಿಸಿದರೆ ಕರ್ನಾಟಕ, ಮಹಾರಾಷ್ಟ್ರ ಮತ್ತು ನಾಗಾಲ್ಯಾಾಂಡ್‌ನಂಥ ರಾಜ್ಯಗಳ ಗ್ರಾಮೀಣ
ಪ್ರದೇಶದಲ್ಲಿರುವ ಜನರಿಗೆ ಹೇಗೆ ಅರ್ಥವಾಗುತ್ತದೆ ಎಂದು ಪ್ರಶ್ನಿಸಿದೆ. ಈಗ ತಂತ್ರಜ್ಞಾನ ತುಂಬಾ ಮುಂದುವರಿದಿದ್ದು, ಇಂಗ್ಲೀಷ್ ಮತ್ತು ಹಿಂದಿ ಭಾಷೆಯಲ್ಲಿರುವುದನ್ನು 22 ಅನುಸೂಚಿತ ಭಾಷೆಗಳಿಗೆ ಅನುವಾದಿಸಿ ಪ್ರಕಟಿಸುವುದು ಕಷ್ಟವಲ್ಲ.

ಸುಪ್ರೀಂ ಕೋರ್ಟ್‌ನ ತೀರ್ಪುಗಳೇ ಪ್ರಾದೇಶಿಕ ಭಾಷೆಗಳಿಗೆ ಅನುವಾದವಾಗುವ ಅವಕಾಶ ಇರುವಾಗ, ಈ ವರದಿಯನ್ನು ಸ್ಥಳೀಯ ಭಾಷೆಯಲ್ಲಿ ಅನುವಾದಿಸಲು ಏನು ತೊಂದರೆ ಎಂದು ಕೇಳಿತ್ತು. ಆದ್ದರಿಂದ 1963ರ ಅಧಿಕೃತ ಭಾಷೆಗಳ ಕಾಯ್ದೆಗೆ ತಿದ್ದುಪಡಿ ತರುವ ಬಗೆಗೆ ಪರಿಶೀಲಿಸಿ ಎಂದು ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆೆ ಅವರ ನ್ಯಾಯ ಪೀಠ ಕೇಂದ್ರ ಸರಕಾರಕ್ಕೆೆ ಸಲಹೆ ನೀಡಿದೆ. ಈ ಸಲಹೆ – ಸೂಚನೆ ಹಿಂದಿಯೇತರರಲ್ಲಿ, ಮುಖ್ಯವಾಗಿ ದಕ್ಷಿಣ ಭಾರತೀಯರಲ್ಲಿ ಮುಂದಿನ ದಿನಗಳಲ್ಲಿ ಭಾಷಾ ವಿಷಯದಲ್ಲಿ ತಾವೂ ರಾಷ್ಟ್ರೀಯ ಮುಖ್ಯವಾಹಿನಿಯಲ್ಲಿ ಸೇರಬಹುದು ಎನ್ನುವ ಆಶಾಭಾವನೆ ಮೂಡಿಸಿದೆ.

ಈ ನಿಟ್ಟಿನಲ್ಲಿ ಈವರೆಗೆ ಒಂದು ರೀತಿಯ ಪರದೇಶಿ ಭಾವನೆ ಹೊಂದಿದ್ದ ಹಿಂದಿಯೇತರರು ಸ್ವಲ್ಪ ನಿರಾಳರಾಗಬಹುದು.
ಭಾಷಾ ಸಮಾನತೆಗೆಗಾಗಿ ಸದಾ ಹೋರಾಡುತ್ತಿರುವ ದಕ್ಷಿಣ ರಾಜ್ಯಗಳ ಭಾವನೆಯನ್ನು ಎತ್ತಿ ಹಿಡಿದಿರುವ ಮಹತ್ವದ ಈ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆೆ ದೇಶದ ಸಂವಿಧಾನದ 8ನೇ ಪರಿಚ್ಛೇದದಲ್ಲಿರುವ 22 ಭಾಷೆಗಳಿಗೂ ಆಧಿಕೃತ
ಭಾಷೆಯ ಸ್ಥಾನ ನೀಡುವ ಬಗೆಗೆ ಪರಿಶೀಲನೆ ನಡೆಸುವಂತೆ ಸೂಚಿಸಿದ್ದು, ಇದನ್ನು ದೇಶಾದ್ಯಂತ, ಮುಖ್ಯವಾಗಿ ದಕ್ಷಿಣ ರಾಜ್ಯಗಳಲ್ಲಿ ಹೃತ್ಪೂರ್ವಕವಾಗಿ ಸ್ವಾಗತಿಸಲಾಗಿದೆ. ಈಗ ಚೆಂಡು ಕೇಂದ್ರ ಸರಕಾರದ ಅಂಗಳಕ್ಕೆೆ ಬಂದಿದೆ. ಈ ನಿಟ್ಟಿನಲ್ಲಿ ಮುಂದಿನ ಬೆಳವಣಿಗೆ ಸರಕಾರ ತೆಗೆದಕೊಳ್ಳುವ ಕ್ರಮದ ಮೇಲೆ ಅವಲಂಭಿಸಿದೆ. ಸಾಮಾನ್ಯವಾಗಿ ಕೇಂದ್ರ ಸರಕಾರ ಸುಪ್ರೀಂ ಕೋರ್ಟ್ ಸಲಹೆಯನ್ನು ಮಾನ್ಯ ಮಾಡುತ್ತದೆ. ಕೇಂದ್ರ ಸರಕಾರಕ್ಕೆೆ ರಾಜ್ಯಸಭೆ ಮತ್ತು ಲೋಕಸಭೆ ಎರಡರಲ್ಲೂ ಬಹುಮತ ಇರುವುದರಿಂದ ಸುಪ್ರೀಂ ಕೋರ್ಟ್ ಸೂಚಿಸಿದ ತಿದ್ದುಪಡಿ ಮಾಡಲು ದೊಡ್ಡ ಸಮಸ್ಯೆೆ ಆಗಲಾರದು.

ಆದರೆ ಇಂಥ ತಿದ್ದುಪಡಿಯನ್ನು ತರುವ ಇಚ್ಛಾಶಕ್ತಿ ಸರಕಾರ ತೋರಿಸಬಹುದೇ ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಕಾಣುತ್ತಿದೆ. ಸಂಸತ್ತಿನ ಎರಡೂ ಸದನಗಳಲ್ಲಿ ಸಾಕಷ್ಟು ಹೆಚ್ಚು ಸಂಖ್ಯೆೆಯಲ್ಲಿರುವ ಹಿಂದಿ ಭಾಷಿಕ ಸಂಸದರು ಇಂಥ ತಿದ್ದುಪಡಿಗೆ ಅವಕಾಶ ನೀಡಬಹುದೇ ಎನ್ನುವ ಗುಸು ಗುಸು ಕೇಳುತ್ತಿದೆ. ಈ ವರೆಗೆ ಅನುಭವಿಸುತ್ತಿದ್ದ ಆಧಿಕೃತ ಭಾಷೆ ಸ್ಥಾನಮಾನವನ್ನು ಅವರು ಹಿಂದಿಯೇತರ ಭಾಷೆಗಳೊಂದಿಗೆ ಹಂಚಿಕೊಳ್ಳಬಹುದೇ? ಈಗಿರುವ ಆಧಿಕೃತ ಭಾಷೆ ಸ್ಥಾನಮಾನದಿಂದ ಮುಂದೊಂದು ದಿನ ರಾಷ್ಟ್ರಭಾಷೆಗೆ ಬಡ್ತಿ ಪಡೆಯುವ ಅವರ ಉದ್ದೇಶಕ್ಕೆೆ ಇಂಥ ತಿದ್ದುಪಡಿ ಅಡೆತಡೆಯಾಗಬಹುದು ಎನ್ನುವ ಆತಂಕ ಅವರಲ್ಲಿ
ಇದೆ. ಕೇವಲ ಉತ್ತರ ಭಾರತಕ್ಕೆೆ ಸೀಮಿತವಾಗಿದ್ದ ಹಿಂದಿ ಭಾಷೆ ದೇಶಾದ್ಯಂತ ಈ ಮಟ್ಟಕ್ಕೆೆ ಪಸರಿಸಲು 1963ರ ಅಧಿಕೃತ ಭಾಷೆ ಕಾನೂನು ಕಾರಣ ಎನ್ನುವುದರಲ್ಲಿ ಸಂಶಯವಿಲ್ಲ.

ಸುಪ್ರೀಂ ಕೋರ್ಟ್ ಸಲಹೆಯಂತೆ ಸರಕಾರ ಎಲ್ಲಾ 22 ಭಾಷೆಗಳನ್ನು ಅಧಿಕೃತ ಭಾಷೆಯನ್ನಾಗಿ ಮಾಡಿದರೆ, ಅಧಿಕೃತ ಭಾಷೆಯ ಮೂಲಕ ಹಿಂದಿ ಭಾಷೆಯನ್ನು ಪರಿಚಯಿಸುವ ಮತ್ತು ಪಸರಿಸುವ ಕಾರ್ಯ ಲೋ ಗೇರ್‌ಗೆ ಬರುತ್ತದೆ ಮತ್ತು ಹಿಂದಿ ಭಾಷೆಯ ಮಹತ್ವ ಕ್ರಮೇಣ ಕ್ಷೀಣಿಸಬಹುದೆನೋ ಎನ್ನುವ ಸಂಶಯ ಅವರನ್ನು ಕಾಡುತ್ತಿದೆ. ತನ್ನ ಭಾಷೆಯುಲ್ಲಿ ವ್ಯವಹರಿಸುವ ಅನುಕೂಲ ಮತ್ತು ಅವಕಾಶ ಇರುವಾಗ ಸಾಮಾನ್ಯವಾಗಿ ಯಾರೂ ಹೊರಗಿನ ಭಾಷೆಗೆ ಮೊರೆ ಹೋಗುವುದಿಲ್ಲ. ಹಾಗೆಯೇ ಹಿಂದಿ ಹೇರಿಕೆ ಎನ್ನುವ ಕೂಗಿನ ವಾಲ್ಯೂಮ್ ಕೂಡಾ ಕಡಿಮೆಯಾಗಬಹುದು.

1963ರಲ್ಲಿ ಅಧಿಕೃತ ಭಾಷೆಗಳ ಕಾನೂನನ್ನು ಜಾರಿಮಾಡಿದಾಗಿನಿಂದ, ಈ ಕಾಯ್ದೆೆ ಬಗೆಗೆ ಅಪಸ್ವರ ಕೇಳುತ್ತಿತ್ತು. 22 ಅನುಸೂಚಿತ  ಭಾಷೆಗಳು ಇರುವಾಗ ಕೇವಲ ಇಂಗ್ಲೀಷ್ ಮತ್ತು ಹಿಂದಿ ಭಾಷೆಗಳಿಗೆ ಮಾತ್ರ ಈ ಅಧಿಕೃತ ಟ್ಯಾಗ್ ಸರಿಯೇ ಎನ್ನುವ ಆಕ್ರೋಶದ ಪ್ರಶ್ನೆ ಕೇಳುತ್ತಿತ್ತು. ಹಿಂದಿಯೇತರ ಭಾಷೆಗಳು ಮಲಮಕ್ಕಳೇ ಎಂದು ಕೇಳಲಾಗುತ್ತಿತ್ತು. ಇದು ತಾರತಮ್ಯದ ಮತ್ತು ಪಕ್ಷಪಾತ ತನದ ಧೋರಣೆಯೆಂದು ಹೇಳಲಾಗುತ್ತಿತ್ತು. ಇಂಗ್ಲೀಷ್ ಮತ್ತು ಹಿಂದಿ ಬಾರದವರನ್ನು ಎರಡನೇ ದರ್ಜೆಯವರೆಂದು
ನಡೆಸಿಕೊಳ್ಳುವ ರೀತಿ ಮತ್ತು ವರ್ಣಭೇದ ನೀತಿಯ ಇನ್ನೊೊಂದು ಅವತಾರ ಎನ್ನುವ ಮಟ್ಟಿಗೆ ಆಕ್ರೋಶ ಕಾಣುತ್ತಿತ್ತು.

ಹಿಂದಿಯೇತರ ರಾಜ್ಯಗಳಲ್ಲಿ ಇದರ ಬಗೆಗೆ ವಿರೋಧ ಸುಪ್ತವಾಗಿದ್ದರೆ, ತಮಿಳುನಾಡಿನಲ್ಲಿ ಇದು ತೀವ್ರವಾಗಿತ್ತು. ಬಹುಷಃ ಇದೇ ಕಾರಣಕ್ಕೋ ಏನೋ ಅವರು ದ್ವಿಭಾಷಾ ಸೂತ್ರಕ್ಕೆೆ ಗಟ್ಟಿಯಾಗಿ ಅಂಟಿಕೊಂಡರು. ಉಳಿದ ಹಿಂದಿಯೇತರ ರಾಜ್ಯಗಳು ಗೊಣಗುತ್ತಾ ಅದನ್ನು ಸ್ವೀಕರಿಸಿದರು. ಆಡಳಿತ ಮತ್ತು ವ್ಯವಹಾರವು ಜನತೆಯ ಭಾಷೆಯಲ್ಲಿರಬೇಕು ಎನ್ನುವ ಮೂಲಭೂತ ಆಶಯಕ್ಕೆೆ ಇದು ವಿರೋಧವಾಗಿದೆ ಎನ್ನುವ ಕೂಗು ನಿರಂತರವಾಗಿ ಕೇಳುತ್ತಲೇ ಇತ್ತು. ಇದರ ಕಹಿ ಅನುಭವ ಹೆಚ್ಚಾಗಿ ಕಾಣುವುದು ಕೇಂದ್ರ ಸರಕಾರದ ಉದ್ಯಮಗಳಲ್ಲಿ ಮತ್ತು ಕಚೇರಿಗಳಲ್ಲಿ ವ್ಯವಹರಿಸುವಾಗ. ಕೇಂದ್ರ ಸರಕಾರದ ಆಡಳಿತ ಭಾಷೆ ನಿಟ್ಟಿನಲ್ಲಿ ಇಂಗ್ಲೀಷ್ ಮತ್ತು ಹಿಂದಿಯೇತರರು, ಈ ಭಾಷೆಗಳ ತಿಳಿವಳಿಕೆಯಿಲ್ಲದವರು ಅನುಭವಿಸುವ ಅನನುಕೂಲ ಮತ್ತು ಕೆಲವು ಬಾರಿ ಅವಮಾನವನ್ನು ನೆನಪಿಸಿದಾಗ ಸುಪ್ರೀಂ ಕೋರ್ಟ್‌ನ ಈ ಸಲಹೆಯ ಹಿಂದಿನ ಉದ್ದೇಶ ತಿಳಿಯದಿರದು. ಸುಪ್ರೀಂ
ಕೋರ್ಟ್ ಅಧಿಕೃತ ಭಾಷೆಯ ಹೆಸರಿನಲ್ಲಿ ನಿರಂತರವಾಗಿ ಕೇಳಿ ಬರುತ್ತಿರುವ ವಿವಾದ ಮತ್ತು ಗೊಂದಲಗಳನ್ನು ಆಳವಾಗಿ ಮತ್ತು ವಿಸ್ತೃತವಾಗಿ ಅಭ್ಯಸಿಸಿರಬೇಕು. ಇತ್ತೀಚಿನ ದಿನಗಳಲ್ಲಿ ಬ್ಯಾಾಂಕುಗಳಲ್ಲಿ ಗ್ರಾಹಕರು ಅನುಭವಿಸುತ್ತಿರುವ ಭಾಷಾ ಸಂಬಂಧಿ ಗೊಂದಲ, ಘರ್ಷಣೆ, ವಿವಾದಗಳ ಪಟ್ಟಿಯನ್ನು ನೋಡಿದಾಗ ಈ ಸಲಹೆ ಎಷ್ಟು ಸಮಯೋಚಿತವಾಗಿದೆ ಮತ್ತು ಅರ್ಥಪೂರ್ಣವಾಗಿದೆ ಎನ್ನುವುದು ಅರ್ಥವಾಗುತ್ತದೆ. ಈ ನಿಟ್ಟಿನಲ್ಲಿ ಮಾಧ್ಯಮಗಳು ಬರೆದು ಸುಸ್ತಾಗಿವೆ.

ತಮಿಳುನಾಡು ಸಂಸದೆ ಕನಿಮೋಳಿಯವರಿಗೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ಹಿಂದಿ ಭಾಷೆ ತಿಳಿಯದು ಎಂದಿದ್ದಕ್ಕೆೆ, ಭದ್ರತಾ ಪಡೆಯ ಅಧಿಕಾರಿಯೊಬ್ಬರು ನೀವು ಭಾರತೀಯರಾ ಎಂದು ಪ್ರಶ್ನಿಸಿದ್ದು ಈ ನಿಟ್ಟಿನಲ್ಲಿ ತೀರಾ ಇತ್ತೀಚಿನ ವಿಷಾದದ ಘಟನೆ ಮತ್ತು ವಿವಾದ ಕೇಂದ್ರ ಆಯುಷ್ ಮಂತ್ರಿಗಳು ಹಿಂದಿ ಭಾರದವರು ಸಭೆಯಿಂದ ಹೊರ ಹೋಗಬಹುದು ಎಂದಿರುವುದು
ಎಲ್ಲಾ ಭಾಷೆಗಳನ್ನು ಅಧಿಕೃತ ಭಾಷೆ ಮಾಡುವುದಕ್ಕೆ  ಸಮರ್ಥನೆ ನೀಡುತ್ತಿದೆ. ಈ ಪುಣ್ಯಕ್ಕೆೆ ನಮಗೆ ಸ್ವಾತಂತ್ರ್ಯಬೇಕಿತ್ತೇ ಎಂದು ಸ್ಥಳೀಯ ಭಾಷೆಯಲ್ಲಿ ವ್ಯವಹರಿಸದ ಬ್ಯಾಾಂಕ್, ವಿಮಾ, ರೈಲು, ಅಂಚೆಕಚೇರಿ, ಇನ್‌ಕಂ ಟ್ಯಾಕ್‌ಸ್‌, ಸೇಲ್ ಟ್ಯಾಕ್‌ಸ್‌  ಮುಂತಾದ ಕೇಂದ್ರ ಸರಕಾರದ ಕಚೇರಿಗಳಲ್ಲಿ ಸ್ಥಳೀಯ ಭಾಷೆ ಮಾತ್ರ ಬಲ್ಲ ಸ್ಥಳೀಯರು ಹತಾಶೆಯಿಂದ ಉದ್ಗಾರ
ಎತ್ತುವುದು ನಿಲ್ಲಬಹುದು ಎನ್ನುವ ಆಶಾ ಭಾವನೆ ಕಾಣುತ್ತಿದೆ.

ಓದುಬರಹ ಬಲ್ಲವನಾದರೂ ಕೇಂದ್ರ ಸರಕಾರದ ಕಚೇರಿಗಳಲ್ಲಿ ಮತ್ತು ಉದ್ಯಮಗಳಲ್ಲಿ ಸಣ್ಣ ಕೆಲಸ ಮಾಡಿಸಿಕೊಳ್ಳಲು ಇಂಗ್ಲೀಷ್ ಮತ್ತು ಹಿಂದಿ ಭಾಷೆ ಬಲ್ಲವರ ಮರ್ಜಿ ಕಾಯುವ ದಾರುಣ ಸ್ಥಿತಿ ಅಂತ್ಯ ಕಾಣಬಹುದು. ನಗರ ಮತ್ತು ಪಟ್ಟಣಗಳಲ್ಲಿ ಹೇಗೋ ನಡೆದುಹೋಗುತ್ತದೆ. ಆದರೆ, ಗ್ರಾಮಾಂತರ ಪ್ರದೇಶಗಳಲ್ಲಿ ದಿನದಿಂದ ದಿನಕ್ಕೆೆ ದೊಡ್ಡ ಸಮಸ್ಯೆೆಯಾಗುತ್ತಿದೆ. ಆಡಳಿತ ದೊರೆಯ ಭಾಷೆಯಲ್ಲಿ ನಡೆಯದೇ ಪ್ರಜೆಯ ಭಾಷೆಯಲ್ಲಿ ನಡೆದಾಗ ಮಾತ್ರ ಆಡಳಿತದ ಫಲ ಫಲಾನುಭವಿಗಳಿಗೆ ದೊರಕುತ್ತದೆ ಎನ್ನುವ ಆಡಳಿತ ಶಾಸ್ತ್ರದ ಮೊದಲ ಪಾಠ ಅನಾವರಣಗೊಳ್ಳಬಹುದೇನೋ? ದೇಶದಲ್ಲಿರುವ ಭಾಷಾ ಗೊಂದಲ ಪೂರ್ಣವಾಗಿ ಅಲ್ಲದಿದ್ದರೂ ಸ್ವಲ್ಪವಾದರೂ ಶಮನಗೊಳ್ಳಬಹುದು.