Friday, 18th October 2024

ಆಡಳಿತ ವಿರೋಧಿ ಅಲೆಯ ಕಬ್ಬಿಣದ ಕಡಲೆ

ವರ್ತಮಾನ

maapala@gmail.com

ಆಡಳಿತ ವಿರೋಧಿ ಅಲೆ ಸೃಷ್ಟಿಸುವುದು ಅತ್ಯಂತ ಸುಲಭ. ಆದರೆ, ಈ ಅಲೆಯಿಂದ ತಪ್ಪಿಸಿಕೊಳ್ಳುವುದು ಅಥವಾ ಅಲೆ ಜೋರಾಗದಂತೆ
ತಡೆಯುವುದು ಕಷ್ಟಸಾಧ್ಯ. ಸದ್ಯ ರಾಜ್ಯದಲ್ಲಿ ಅಂತಹದ್ದೇ ಪರಿಸ್ಥಿತಿಯನ್ನು ಬಿಜೆಪಿ ಎದುರಿಸುತ್ತಿದೆ. ಅದಕ್ಕಿಂತ ಮುಖ್ಯವಾಗಿ ಆಡಳಿತ ವಿರೋಧಿ ಅಲೆ
ಎದುರಿಸಲು ಏನು ಮಾಡಬೇಕು ಎಂಬ ಯೋಚನೆಯನ್ನೂ ಪಕ್ಷ ಮಾಡಿದಂತೆ ಕಾಣಿಸುತ್ತಿಲ್ಲ.

ರಾಜಕೀಯ ಪಕ್ಷಗಳ ನಾಯಕರ ಮಧ್ಯೆ ಆರೋಪ-ಪ್ರತ್ಯಾರೋಪಗಳು ಹೆಚ್ಚಾಯಿತು ಎಂದರೆ ಸದ್ಯದಲ್ಲೇ ಚುನಾವಣೆ ಇದೆ ಎಂದು ಅರ್ಥ. ಅದರಲ್ಲೂ ಪ್ರತಿಪಕ್ಷಗಳು ಮಾಡುವ ಆರೋಪಗಳನ್ನು ನಿರಾಕರಿಸಿ ಆಡಳಿತ ವಿರೋಧಿ ಅಲೆ ತಪ್ಪಿಸುವುದು ಆಡಳಿತ ಪಕ್ಷಕ್ಕೆ ಅತಿ ದೊಡ್ಡ ಸವಾಲು. ಏಕೆಂದರೆ, ಆರೋಪ ಮಾಡುವುದು ಸುಲಭ. ಆದರೆ, ಅದನ್ನು ಸುಳ್ಳು ಎಂದು ಸಾಬೀತು ಪಡಿಸುವುದು ಅತ್ಯಂತ ಕಷ್ಟ ಮತ್ತು ಸಮಯ ಬೇಕಾಗುತ್ತದೆ. ಹಾಗೆಂದು ಆಡಳಿತ ಪಕ್ಷವೂ ಅಂತಹದ್ದೇ ಆರೋಪವನ್ನು ಪ್ರತಿಪಕ್ಷಗಳ ಮೇಲೆ ಮಾಡಿದರೆ, ನಾವು ತಪ್ಪು ಮಾಡಿದ್ದರೆ ಇಷ್ಟು ದಿನ ಏಕೆ ಸುಮ್ಮನಿದ್ದರು ಎಂಬ ಒಂದು ಪ್ರಶ್ನೆಯೊಂದಿಗೆ ಆರೋಪವನ್ನು ಸುಲಭವಾಗಿ ತಳ್ಳಿಹಾಕಲು ಅವಕಾಶವಿದೆ.

ಸದ್ಯ ರಾಜ್ಯದಲ್ಲಿ ಆಗುತ್ತಿರುವುದು ಇದುವೆ. ಕಳೆದ ನಾಲ್ಕಾರು ತಿಂಗಳಿನಿಂದ ಪ್ರತಿಪಕ್ಷಗಳು ಸೃಷ್ಟಿಸುತ್ತಿರುವ ಆಡಳಿತ ವಿರೋಧಿ ಅಲೆಯಿಂದ ಹೊರ ಬರುವುದು ಬಿಡಿ, ಆ ಅಲೆ ಹಬ್ಬದಂತೆ ತಡೆಯಲೂ ಬಿಜೆಪಿ ಪಡಿಪಾಟಲು ಪಡುವಂತಾಗಿದೆ. ಇನ್ನೇನು ಅಧಿಕಾರಕ್ಕೆ ಬಂದೇ ಬಿಟ್ಟೆವು  ಎಂಬ ಹುಮ್ಮಸ್ಸಿ ನಲ್ಲಿರುವ ಕಾಂಗ್ರೆಸ್ ಪ್ರತಿನಿತ್ಯ ಮಾಡುವ ಆರೋಪಗಳಿಗೆ ತಿರುಗೇಟು ನೀಡಲು ಕೂಡ ಹೋರಾಟ ಮಾಡಬೇಕಾಗಿದೆ. ಚುನಾವಣೆ ಸಮೀಪಿಸು ತ್ತಿರುವುದರಿಂದ ಆರೋಪಗಳಲ್ಲಿ ಎಷ್ಟು ಸತ್ಯಾಂಶವಿದೆ? ವೈಭವೀಕರಣವಿದೆ ಎಂಬಿತ್ಯಾದಿ ವಿಚಾರಗಳನ್ನು ವಿಶ್ಲೇಷಿಸಿ ಅದನ್ನು ಸುಳ್ಳು ಎಂದು ಸಾಬೀತುಪಡಿಸಲು ಕಾಲಾವಕಾಶವಿಲ್ಲ.

ಮೇಲಾಗಿ ಅಂತಹ ನಾಯಕತ್ವವೂ ರಾಜ್ಯದ ಆಡಳಿತಾರೂಢ ಬಿಜೆಪಿಯಲ್ಲಿ ಇಲ್ಲ. ಇದರಿಂದಾಗಿ ನನ್ನನ್ನು ಕಳ್ಳ ಎನ್ನುವ ನೀನೂ ಕಳ್ಳನೇ ಆಗಿದ್ದೆ ಎನ್ನುವ ಹಂತಕ್ಕೆ ಈ ಆರೋಪ-ಪ್ರತ್ಯಾರೋಪಗಳು ಬಂದು ನಿಂತಿವೆ. ಪಿಎಸ್‌ಐ ನೇಮಕ ಅಕ್ರಮ, 40 ಪರ್ಸೆಂಟ್ ಕಮಿಷನ್ ಆರೋಪ, ಉಪನ್ಯಾಸಕರ ನೇಮಕದಲ್ಲಿ ಅಕ್ರಮ, ಸರಕಾರದ ವಿವಿಧ ಕಾರ್ಯಕ್ರಮಗಳ ಅನುಷ್ಠಾದಲ್ಲಿ ಅವ್ಯವಹಾರ, ಕೋವಿಡ್ ಚಿಕಿತ್ಸೆಯಲ್ಲಿ ಲೂಟಿ, ಪೊಲೀಸ್ ವರ್ಗಾವಣೆ ದಂಧೆ, ಸರಕೌರಿ ನೌರರ ವರ್ಗಾವಣೆಯಲ್ಲಿ ಅಕ್ರಮ… ಹೀಗೆ ಕಾಂಗ್ರೆಸ್ ತನ್ನ ಬತ್ತಳಿಕೆಯಿಂದ ಸರಕಾರದ ವಿರುದ್ಧ ಪುಖಾನುಪುಂಖವಾಗಿ ಅಸಗಳನ್ನು ಬಿಡುತ್ತಲೇ ಇದೆ.

ಇದನ್ನು ಸರಕಾರ ನಿರಾಕರಿಸಬಹುದಾದರೂ ಆರೋಪಗಳನ್ನು ಸುಳ್ಳು ಎಂದು ಸಾಬೀತುಪಡಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸರಕಾರದ ವಿರುದ್ಧ ಜನಾಭಿಪ್ರಾಯ ಮೂಡುವ ಪರಿಸ್ಥಿತಿ ಎದುರಾಗಿದೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಬಿಜೆಪಿ ಸರಕಾರದ ವಿರುದ್ಧ ಮಾಡಿದ 40 ಪರ್ಸೆಂಟ್ ಕಮಿಷನ್ ಆರೋಪವೇ ಇದಕ್ಕೆ ಉದಾಹರಣೆ. ಸರಕಾರದ ಯೋಜನೆಗಳಲ್ಲಿ ಕಮಿಷನ್ ದಂಧೆ ಇಂದು-ನೆನ್ನೆಯದ್ದಲ್ಲ. ಮೊದಲಿನಿಂದಲೂ
ನಡೆದುಕೊಂಡು ಬಂದಿರುವಂತಹದ್ದು. ಕಮಿಷನ್ ದಂಧೆ ಇಲ್ಲದೆ ಸರಕಾರದ ಕಾಮಗಾರಿಗಳು ಸಮರ್ಪಕವಾಗಿ ಜಾರಿಗೆ ಬರುತ್ತದೆ ಎನ್ನುವುದಾದರೆ ಇಷ್ಟರಲ್ಲೇ ಕರ್ನಾಟಕ ಅಭಿವೃದ್ಧಿ ಯಿಂದ ನಳನಳಿಸುತ್ತಿತ್ತು.

ಆದರೆ, ಕೆಂಪಣ್ಣ ಮಾಡಿದ ಆರೋಪವನ್ನು ಅಸವಾಗಿ ಬಳಸಿಕೊಂಡು ಪ್ರತಿಪಕ್ಷ ಕಾಂಗ್ರೆಸ್ ಆಡಳಿತಾರೂಢ ಬಿಜೆಪಿ ಸರಕಾರದ ವಿರುದ್ಧ ಸಮರ ಸಾರಿದೆ. ಇದನ್ನು ಬಿಜೆಪಿ ಅಲ್ಲಗಳೆದು ಕಮಿಷನ್ ದಂಧೆ ನಡೆಯುತ್ತಿಲ್ಲ ಎಂದು ಹೇಳುತ್ತಿದ್ದರೂ ಆರೋಪದಷ್ಟು ಪ್ರಬಲವಾಗಿ ಸಮರ್ಥನೆ ಕೆಲಸ ಮಾಡುತ್ತಿಲ್ಲ. ಕಳೆದ ಹಲವು ತಿಂಗಳಿನಿಂದ ಕಾಂಗ್ರೆಸ್ ಇದೇ ಆರೋಪವನ್ನು ಪದೇ ಪದೆ ಪುನರಾವರ್ತನೆ ಮಾಡುತ್ತಿದ್ದರೂ ಇದುವರೆಗೆ ಅದಕ್ಕೆ ಸಮರ್ಪಕ ತಿರುಗೇಟು ನೀಡಲು ಸಾಧ್ಯವಾಗದೆ ಈಗಲೂ ಬಿಜೆಪಿ ಅದರಿಂದ ಆಗಿರುವ ಹಾನಿ ಸರಿಪಡಿಸಲು ಹೆಣಗಾಡುತ್ತಲೇ ಇದೆ.

ಕೆಲವೊಮ್ಮೆ ಇಂತಹ ಆರೋಪಗಳು ತೀರಾ ಬಾಲಿಶ ಎನಿಸುವುದೂ ಇದೆಯಾದರೂ ಅದರ ದುಷ್ಪರಿಣಾಮ ಆಡಳಿತ ಪಕ್ಷದ ಮೇಲೆ ಆಗುವುದು ಸಹಜ. ಇದಕ್ಕೆ ಸಾಕ್ಷಿ ಆಡಳಿತಾರೂಢ ಬಿಜೆಪಿ ವಿರುದ್ಧ ಕಾಂಗ್ರೆಸ್ ನೀಡಿರುವ ಪೊಲೀಸ್ ದೂರು. ಇತ್ತೀಚೆಗೆ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮತದಾರರಿಗೆ ಹಣ ಹಂಚುತ್ತಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಮಾತನಾಡುತ್ತಾ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಅವರು 3000 ರು. ಕೊಟ್ಟರೆ ನಾವು 6000 ರು. ಕೊಡುತ್ತೇವೆ ಎಂದು ಹೇಳಿದ್ದರು.

ಇದನ್ನೇ ಮುಂದಿಟ್ಟುಕೊಂಡು ಬಿಜೆಪಿ ವಿರುದ್ಧ ಕಾಂಗ್ರೆಸ್ ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ರಾಜ್ಯದಲ್ಲಿ 5 ಕೋಟಿ ಮತದಾರರಿದ್ದು, ಪ್ರತಿ ಮತದಾರರಿಗೆ 6000 ರು. ನೀಡುವ ಆಮಿಷವೊಡ್ಡಿರುವ ಬಿಜೆಪಿ, ಮುಂಬರುವ ಚುನಾವಣೆಯಲ್ಲಿ 30 ಸಾವಿರ ಕೋಟಿ ರು. ಖರ್ಚು ಮಾಡಲು ಹೊರಟಿದೆ. ಅಧಿಕಾರದಲ್ಲಿ ಸಂಗ್ರಹಿಸಿದ ಅಕ್ರಮ ಹಣವನ್ನು ಈ ರೀತಿ ಖರ್ಚು ಮಾಡುತ್ತಿದೆ. ಆದ್ದರಿಂದ ಈ ಕುರಿತು ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಹೇಳಲಾಗಿದೆ. ಪ್ರಕರಣ ದಲ್ಲಿ ರಮೇಶ್ ಜಾರಕಿಹೊಳಿ ಅವರೊಂದಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನೂ ಆರೋಪಿಗಳ ಸಾಲಿನಲ್ಲಿ ನಿಲ್ಲಿಸಲಾಗಿದೆ.

ಇದು ಉತ್ಪ್ರೇಕ್ಷೆಯಿಂದ ಕೂಡಿದ, ಯಾವುದೇ ದಾಖಲೆಗಳಿಲ್ಲದ, ಬಾಲಿಶ ದೂರಾಗಿರಬಹುದು. ಆದರೆ, ಆಡಳಿತ ಪಕ್ಷಕ್ಕೆ ಇದರಿಂದ ಸಮಸ್ಯೆಯಾಗುವು ದಂತೂ ಖಚಿತ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ವಿರುದ್ಧ ಬಿಜೆಪಿ, ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ (೨೦೨೩-೧೮) 35 ಸಾವಿರ ಕೋಟಿ ರು. ಹಣಕಾಸು ಅವ್ಯವಹಾರವಾಗಿದೆ ಎಂಬ ಆರೋಪ ಮಾಡಿದೆ. ಅಷ್ಟೇ ಅಲ್ಲ, ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ದಾಖಲಾಗಿದ್ದ 59 ಪ್ರಕರಣಗಳನ್ನು
ಲೋಕಾಯುಕ್ತರಿಗೆ ವಹಿಸುವುದಾಗಿ ಹೇಳಲಾಗಿದೆ. ಇದರ ಜತೆಗೆ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಹಲವು ಅಕ್ರಮಗಳನ್ನು ಬಿಜೆಪಿ ಪ್ರಸ್ತಾಪಿಸಿದೆ. ಇದಕ್ಕೆಲ್ಲಾ ಕಾಂಗ್ರೆಸ್ ನೀಡುವ ಉತ್ತರ, ‘ಬಿಜೆಪಿ ಸರಕಾರ ಬಂದು ಇಷ್ಟು ದಿನ ಏನು ಮಾಡುತ್ತಿದ್ದರು? ನಮ್ಮ ಸರಕಾರದಲ್ಲಿ ಅಕ್ರಮ ಆಗಿದ್ದರೆ ಮೊದಲೇ ಕ್ರಮ ಕೈಗೊಳ್ಳಬಹುದಿತ್ತಲ್ಲವೇ? ತನಿಖೆಗೆ ನಾವು ಸಿದ್ಧರಿದ್ದೇವೆ’ ಎನ್ನುವುದು. ಇಲ್ಲಿ ತನಿಖೆಗೆ ವಿಳಂಬ ಮಾಡಿದ್ದು ಬಿಜೆಪಿ ಸರಕಾರದ ತಪ್ಪು ಎಂಬ ಅಭಿಪ್ರಾಯ ಮೂಡುತ್ತಿದೆಯೇ ಹೊರತು ಕಾಂಗ್ರೆಸ್‌ಗೆ ಹೆಚ್ಚಿನ ತೊಂದರೆ ಆಗುತ್ತಿಲ್ಲ.

ಇಷ್ಟೆಲ್ಲಾ ಇದ್ದರೂ ಸರಕಾರದ ವಿರುದ್ಧ ಹೆಚ್ಚಾಗುತ್ತಿರುವ ಆಡಳಿತ ವಿರೋಧಿ ಅಲೆ ಎದುರಿಸಲು, ಅದು ಇನ್ನಷ್ಟು ತೀವ್ರ ಗೊಳ್ಳದಂತೆ ನೋಡಿಕೊಳ್ಳಲು ಬಿಜೆಪಿಯಿಂದ ಯಾವುದೇ ಕೆಲಸ ಆಗುತ್ತಿಲ್ಲ. ಕಾಂಗ್ರೆಸ್ ಕಾಲದಲ್ಲೂ ಇಂತಹ ಅಕ್ರಮ, ಅವ್ಯವಹಾರಗಳು ನಡೆಯುತ್ತಿದ್ದವು ಎಂಬ ಪ್ರತಿಹೇಳಿಕೆ ಹೊರತಾಗಿ ಇನ್ನೇನೂ ನಡೆಯುತ್ತಿಲ್ಲ. ಮೀಸಲು ಹೆಚ್ಚಳ, ಹೊಸ ದಾಗಿ ಮೀಸಲು ಕಲ್ಪಿಸುವುದು, ಹೊಸ ಘೋಷಣೆಗಳನ್ನು ಸರಕಾರ ನೀಡುತ್ತಿದ್ದರೂ ಅದು ಅಷ್ಟೊಂದು ಪರಿಣಾಮಕಾರಿಯಾದಂತೆ ಕಾಣಿಸುತ್ತಿಲ್ಲ. ಮುಖ್ಯಮಂತ್ರಿ, ಒಂದಿಬ್ಬರು ಸಚಿವರನ್ನು ಹೊರತುಪಡಿಸಿ ಇತರಾರೂ ಸರಕಾರವನ್ನು
ಗಟ್ಟಿಯಾಗಿ ಸಮರ್ಥಿಸಿಕೊಳ್ಳುತ್ತಿಲ್ಲ. ಇಲ್ಲಿ ಸರಕಾರ ಮತ್ತು ಆಡಳಿತ ಪಕ್ಷದ ನಡುವೆ ಸಮನ್ವಯತೆಯ ಕೊರತೆ ಎದ್ದು ಕಾಣುತ್ತಿದೆ. ನಮ್ಮ ಪರ ಪಕ್ಷ ನಿಲ್ಲುತ್ತಿಲ್ಲ ಎಂದು ಸರಕಾರ ಹೇಳಿದರೆ, ಪಕ್ಷದ ಮಾತು ಆಡಳಿತ ನಡೆಸುವವರು ಕೇಳುತ್ತಿಲ್ಲ ಎಂದು ನಾಯಕರು ಹೇಳಿಕೊಳ್ಳುವಂತಾಗಿದೆ.

ಹೀಗಾಗಿ ಹೆಚ್ಚುತ್ತಿರುವ ಆಡಳಿತ ವಿರೋಧಿ ಅಲೆಯಿಂದ ಹೊರಬರಲು ರಾಜ್ಯ ಬಿಜೆಪಿ ಪ್ರಧಾನಿ ನರೇಂದ್ರ ಮೋದಿ ಅವರನ್ನೇ ನೆಚ್ಚಿಕೊಂಡಂತೆ ಕಾಣುತ್ತಿದೆ. ಸದ್ಯದ ಮಟ್ಟಿಗೆ ರಾಜ್ಯ ಬಿಜೆಪಿಗೆ ಇರುವ ಏಕೈಕ ಆಶಾಕಿರಣ ಎಂದರೆ ಅದು ಪ್ರಧಾನಿ ನರೇಂದ್ರ ಮೋದಿ ಮಾತ್ರ. 2018ರ ವಿಧಾನಸಭೆ ಚುನಾವಣೆಯಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆ ಪ್ರಕರಣ, ಸರಕಾರದ ಜನ ವಿರೋಧಿ ನಿಲುವುಗಳನ್ನು ಇಟ್ಟುಕೊಂಡು ಬಿಜೆಪಿ ಸಾಕಷ್ಟು ಕೆಲಸ ಮಾಡಿದರೂ ನಿರೀಕ್ಷಿತ ಮಟ್ಟದಲ್ಲಿ ಆಡಳಿತ ವಿರೋಧಿ ಅಲೆ ಸೃಷ್ಟಿಸಲು ಸಾಧ್ಯವಾಗಲಿಲ್ಲ. ಆದರೆ, ಚುನಾವಣೆಗೆ ೨-೩ ತಿಂಗಳು ಇದೆ ಎನ್ನುವಾಗ ರಾಜ್ಯಕ್ಕೆ ಆಗಮಿಸಿದ್ದ ನರೇಂದ್ರ ಮೋದಿ ಆಗಿನ ಸರಕಾರದ ವಿರುದ್ಧ ಮಾಡಿದ್ದ 10 ಪರ್ಸೆಂಟ್ ಸರಕಾರದ ಆರೋಪ ಪಕ್ಷದ ಪಾಲಿಗೆ
ಅತ್ಯಂತ ಪರಿಣಾಮಕಾರಿಯಾಯಿತು. 80-90 ಸ್ಥಾನ ಗಳಿಸಬಹುದು ಎಂದು ನಿರೀಕ್ಷಿಸಿದ್ದ ಬಿಜೆಪಿಯ ಸ್ಥಾನಗಳ ಸಂಖ್ಯೆ 100ರ ಗಡಿ ದಾಟಿತು. ಈ ಬಾರಿಯೂ ಬಿಜೆಪಿ ಹೆಚ್ಚೆಂದರೆ 80-90 ಸ್ಥಾನ ಗಳಿಸಬಹುದು ಎಂದು ಪಕ್ಷದ ಆಂತರಿಕ ಸಮೀಕ್ಷೆಗಳು ಹೇಳುತ್ತಿವೆ. ಕೇಂದ್ರದಲ್ಲಿ ಬಿಜೆಪಿ ಸರಕಾರ ಇರುವುದರಿಂದ, ನರೇಂದ್ರ ಮೋದಿ ಪರ ಅಲೆ ರಾಜ್ಯದಲ್ಲೂ ಕಾಣಿಸುತ್ತಿರುವುದರಿಂದ ಮುಂಬರುವ ದಿನಗಳಲ್ಲಿ ಅವರೇ ನಮ್ಮನ್ನು ಮತ್ತೆ ಅಽಕಾರಕ್ಕೆ ತರಬಹು ದು ಎಂಬ ನಿರೀಕ್ಷೆಯೊಂದಿಗೆ ಬಿಜೆಪಿ ಕಾಯುವಂತಹ ಸ್ಥಿತಿ ಇದೆ.

ಲಾಸ್ಟ್ ಸಿಪ್: ನಿಮಗೆ ಹಣ ಕೊಡುತ್ತೇವೆ, ಉಚಿತ ಉಡುಗೊರೆ ನೀಡುತ್ತೇವೆ. ನಮಗೆ ಮತ ಕೊಡಿ… ನಮಗೆ ಮತ ನೀಡಿ, ನಿಮಗೆ ಹಣ, ಉಚಿತ ಸೌಲಭ್ಯ, ಕೊಡುಗೆ ಗಳನ್ನು ನೀಡುತ್ತೇವೆ. ಇದರಲ್ಲಿ ಆಮಿಷ ಯಾವುದು? ಭರವಸೆ ಯಾವುದು?