Friday, 18th October 2024

ಯಡ್ಯೂರಪ್ಪನವರ ಸೊಪ್ಪು ಮೇಲೋ, ಸಿದ್ದರಾಮಯ್ಯರ ಮಾಂಸಾಹಾರ ಮೇಲೋ!

ಅಭಿವ್ಯಕ್ತಿ

ಡಾ.ದಯಾನಂದ ಲಿಂಗೇಗೌಡ

೨೦೫೦ರ ಹೊತ್ತಿಗೆ ತೀವ್ರ ರೀತಿಯ ಆಹಾರ ಮತ್ತು ನೀರಿನ ಕೊರತೆಯನ್ನು ಎದುರಿಸಲಿದೆ. ಇದನ್ನು ಸರಿದೂಗಿಸಲು ಕಾಡುಗಳ ನಾಶ ಮಾಡಿ, ಆಹಾರ ಉತ್ಪಾದನೆಗೆ ಬಳಸುವ ಅನಿವಾರ್ಯತೆ ಎದುರಾಗಬಹುದು. ಕಾಡುಗಳ ನಾಶವೆಂದರೆ ಅನೇಕ ಜೀವ ವೈವಿಧ್ಯಗಳ ನಾಶ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು.

ಎಳ್ಳು – ಬೆಲ್ಲ’ ತಿನ್ನುವ ಸಂಕ್ರಾಂತಿ ದಿನ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗೋಮಾಂಸ ತಿನ್ನುವ ಹಂಬಲ ವ್ಯಕ್ತಪಡಿಸಿ ದ್ದಾರೆ. ಅಷ್ಟಕ್ಕೇ ನಿಲ್ಲದೆ’ ನಾನೇನು ಯಡಿಯೂರಪ್ಪ ತರ ಸೊಪ್ಪು ತಿನ್ನಬೇಕಾ? ನಾನು ಕುರಿ, ಕೋಳಿ, ಆಡಿನ ಮಾಂಸ ತಿನ್ನುತ್ತೇನೆ’ ಎಂದು ಹೇಳುವ ಮೂಲಕ ಬೆಂಬಲಿಗರಿಗೆ ಮಾಂಸಾಹಾರ ಸೇವನೆ ಸಸ್ಯಾಹಾರ ಸೇವನೆಗಿಂತ ಶ್ರೇಷ್ಠವೇನೋ ಎನ್ನುವ ಭಾವನೆ
ಮೂಡುವಂತೆ ಮಾಡಿದ್ದಾರೆ ಎಂದರೆ ತಪ್ಪಾಗಲಾರದು.

ಮಾಂಸಾಹಾರ ಮೇಲೋ, ಸಸ್ಯಾಹಾರ ಮೇಲೋ ಎಂಬ ವಾದ ತಾರ್ಕಿಕ ಅಂತ್ಯ ಕಾಣಲಾಗದ ವಿಷಯ. ಶಾಖಾಹಾರ ಸೇವಿಸು ವವರು, ಸಸ್ಯಹಾರವೇ ಮೇಲು ಎಂದುಕೊಂಡರೆ, ಮಾಂಸಪಂಥೀಯರು ಮಾಂಸಾಹಾರವೇ ಮೇಲು ಎಂದು ವಾದ ಮಾಡುತ್ತಾರೆ. ಅಲಿಪ್ತ ಮನಸ್ಥಿತಿಯ ಜನರಿಗೂ, ಅವರು ಯಾವ ಹಂತದಲ್ಲಿ ಯೋಚನೆ ಮಾಡುತ್ತಾರೆ ಎಂಬುದರ ಮೇಲೆ ಒಂದು ಆಹಾರ ಕ್ರಮ ಸರಿಯೆನಿಸಬಹುದು.

ಸಾಮಾನ್ಯವಾಗಿ ಆಹಾರ ಪದ್ಧತಿಯ ಬಗ್ಗೆ ಮೂರೂ ಹಂತದ ಮನಸ್ಥಿತಿಯಲ್ಲಿ ಯೋಚನೆ ಮಾಡಬಹುದು. ವೈಯಕ್ತಿಕ ಮಟ್ಟ ದಲ್ಲಿ ಯೋಚಿಸಿದಾಗ, ತನ್ನ ದೇಹಕ್ಕೆ ಅಗತ್ಯವಿರುವ ಎ ಪೋಷಕಾಂಶಗಳು ಯಾವ ಪದ್ಧತಿಯಲ್ಲಿ ಸುಲಭವಾಗಿ, ಕೈಗೆಟುಕು ವಂತೆ ಸಿಗುತ್ತವೆ ಎಂಬುದು. ಇದರಲ್ಲಿ ಕೈ – ರುಚಿ ಬಾಯ್ – ರುಚಿ ಅಂಶಗಳನ್ನು ಸೇವಿಸುವವನು ಪರಿಗಣಿಸುತ್ತಾನೆ. ಎರಡನೆಯ ಸಾಮಾಜಿಕ ಮಟ್ಟದಲ್ಲಿ ಯೋಚಿಸುವರು, ಆಹಾರ ಪದ್ಧತಿ ಅವರವರ ಹಕ್ಕು ಎಂದು ವಾದ ಮಂಡಿಸುತ್ತಾರೆ. ಇವರು ಯಾವುದೇ ಆಹಾರ ಸೇವನೆಯ ಒತ್ತಡ ಹೇರುವುದು ಅಥವಾ ನಿರಾಕರಿಸುವುದು ಅಪರಾಧ ಎಂದು ವಾದಿಸುತ್ತಾರೆ.

ಮೂರನೇ ಹಂತದ ಯೋಚನೆ ವೈಯಕ್ತಿಕ ಅಥವಾ ಸಾಮಾಜಿಕ ಹಂತವನ್ನು ಮೀರಿದ್ದು. ಇಡೀ ಭೂಮಿಯ ಜೀವ ಸಂಕುಲ ಉಳಿವಿಗೆ ಮತ್ತು ಪರಿಸರ ಮಾಲಿನ್ಯ ಸಂಬಂಧಿಸಿದ್ದು. ಯಾವ ಆಹಾರವನ್ನು ಮಾನವನು ಸೇವಿಸಿದರೆ ಪರಿಸರ  ಸ್ನೇಹಿಯಾಗಿ ರುತ್ತದೆ ಎಂಬುದು. ಭೂಮಿಯ ಉಳಿವಿಗೂ ಮನುಷ್ಯನ ಆಹಾರ ಸೇವನೆಗೂ ಸಂಬಂಧವಿದೆ ಎಂದು ಹೇಳಿದರೆ ನೀವು ಆಶ್ಚರ್ಯ ಪಡಬಹುದು.

ಇತ್ತೀಚಿನ ದಿನಗಳಲ್ಲಿ ಪ್ರಪಂಚದ ಎಲ್ಲಾ ಸರಕಾರಗಳಿಗೂ ಏರುತ್ತಿರುವ ಭೂಮಿಯ ತಾಪಮಾನ ಬಿಸಿ ತಟ್ಟುತ್ತಿದೆ. ಬರಿ ವಾಹನ ಗಳ ಹೊಗೆಯಿಂದ ಮತ್ತು ಕಾರ್ಖಾನೆಗಳಿಂದ ಭೂಮಿಯ ತಾಪಮಾನ ಹೇರಿಕೆಗುತ್ತಿದೆ ಎಂದು ನೀವು ಭಾವಿಸುವುದಾದರೆ ಅದು ಅರ್ಥ ಸತ್ಯ. ಆಗಾದರೆ ಮಾಂಸಾಹಾರಕ್ಕೂ, ಹವಾಮಾನ ಬದಲಾವಣೆಗೂ ಏನು ಸಂಬಂಧವೆಂದಿರಾ?. ಭೂಮಿಯ ತಾಪಮಾನ ಏರಿಕೆಗೆ ಕಾರಣ ಎಂದು ಗುರುತಿಸಲಾಗಿರುವ ಗ್ರೀನ್ ಹೌಸ್ ಅನಿಲಗಳನ್ನು ಹೊರಹೊಮ್ಮುವುದರಲ್ಲಿ ಮಾಂಸಾಹಾರ ಉದ್ಯಮ ಶೇ.14ರಷ್ಟು ಕೊಡುಗೆ ಕೊಟ್ಟಿದೆ.

ಜಗತ್ತಿನ ಎಲ್ಲ ವಾಹನಗಳಿಂದ ಬರುವ ಗ್ರೀನ್ ಹೌಸ್ ಅನಿಲಗಳಿಗಿಂತ, ಮಾಂಸಾಹಾರ ಉತ್ಪನ್ನದಿಂದ ಬರುವ ಗ್ರೀನ್ ಹೌಸ್ ಅನಿಲಗಳ ಕೊಡುಗೆ ಹೆಚ್ಚು ಎಂದರೆ ನಿಜವಾಗಲೂ ಆಶ್ಚರ್ಯ ಪಡುವಂಥ ವಿಷಯ. ಮಾಂಸಾಹಾರಕ್ಕಾಗಿ ಸಾಕುವ ಕುರಿ, ಕೋಳಿ, ದನ ಇವೆಲ್ಲವುಗಳು ಗ್ರೀನ್‌ಹೌಸ್ ಅನಿಲಗಳನ್ನು ನೇರವಾಗಿ ಹೊರ ಹಾಕುತ್ತವೆ. ಅಷ್ಟೇ ಅಲ್ಲದೇ ಮಾಂಸಾಹಾರ ಉದ್ಯಮ, ನೀರನ್ನು ಹೆಚ್ಚು ಬೇಡುತ್ತದೆ. ಒಂದು ಕೆಜಿ ಮಾಂಸ ಉತ್ಪಾದಿಸುವ ನೀರಿನಲ್ಲಿ, ಸುಮಾರು ಮೂರು ಕೆಜಿಯಷ್ಟು ಸಸ್ಯ ಆಹಾರ ಉತ್ಪಾದನೆ ಮಾಡಬಹುದಾಗಿದೆ.

ಪ್ರಪಂಚದ ಸದ್ಯದ ಜನಸಂಖ್ಯೆಯ ಬೆಳವಣಿಗೆ ಆಧಾರದಲ್ಲಿ, 2050ರ ಹೊತ್ತಿಗೆ ತೀವ್ರ ರೀತಿಯ ಆಹಾರ ಮತ್ತು ನೀರಿನ ಕೊರತೆ ಯನ್ನು ಎದುರಿಸಲಿದೆ. ಇದನ್ನು ಸರಿದೂಗಿಸಲು ಕಾಡುಗಳ ನಾಶ ಮಾಡಿ, ಆಹಾರ ಉತ್ಪಾದನೆಗೆ ಬಳಸುವ ಅನಿವಾರ್ಯತೆ ಎದುರಾಗಬಹುದು. ಕಾಡುಗಳ ನಾಶವೆಂದರೆ ಅನೇಕ ಜೀವ ವೈವಿಧ್ಯಗಳ ನಾಶ ಎಂಬುದನ್ನು ಇಲ್ಲಿ ನೆನಪಿಸಿ ಕೊಳ್ಳಬೇಕು. ಒಂದು ಅಂದಾಜಿನ ಪ್ರಕಾರ ಪ್ರಪಂಚದ ಎಲ್ಲರೂ ಮಾಂಸಾಹಾರಿಗಳಾದರೆ ಒಂದಲ್ಲ, ಕನಿಷ್ಠ ನಾಲ್ಕು ಭೂಮಿಯಾದರೂ ಬೇಕಾಗುತ್ತದೆ.

ಸಸ್ಯಗಳನ್ನು ಪ್ರಾಣಿಗಳಿಗೆ ತಿನ್ನಿಸಿ, ನಂತರ ಪ್ರಾಣಿ ಗಳನ್ನು ನಾವು ತಿನ್ನುವುದರ ಬದಲು, ನೇರವಾಗಿ ನಾವೇ ಸಸ್ಯಾಹಾರ ಸೇವಿಸಿದರೆ ಶೇಕಡಾ 70ರಷ್ಟು ಗ್ರೀನ್ ಹೌಸ್ ಅನಿಲವನ್ನು ಕಡಿಮೆ ಮಾಡಬಹುದು. ಅಷ್ಟೇ ಅಲ್ಲ ಸಾಕಷ್ಟು ಅಂತರ್ಜಲವನ್ನು ರಕ್ಷಿಸ ಬಹುದು. ನಮಗಿರುವುದು ಒಂದೇ ಭೂಮಿಯಾದ್ದರಿಂದ ಶತಾಯ ಗತಾಯ ಕಾರ್ಯ ಪ್ರವೃತ್ತರಾಗಬೇಕಾಗಿದೆ.

ಭೂಮಿಯ ಉಳಿವು ನಿರ್ಣಾಯಕ ಹಂತಕ್ಕೆ ಬಂದಿರುವುದು ಸ್ಪಷ್ಟ. ನಮ್ಮ ದೇಹಕ್ಕೆ ಏನು ಒಳ್ಳೆಯದು ಎನ್ನುವುದಕ್ಕಿಂತ, ಭೂಮಿಯ ಹವಾಮಾನಕ್ಕೆ ಏನು ಒಳ್ಳೆಯದು ಎಂದು ನಮ್ಮನ್ನೇ ನಾವು ಕೇಳಿಕೊಂಡು ಮುನ್ನಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ನೋಡುವುದಾದರೆ ಆಹಾರ ಜನರ ಹಕ್ಕು ಎಂದು ಸರಕಾರಗಳು ಕೈ ತೊಳೆದು ಕೊಳ್ಳುವ ಹಾಗಿಲ್ಲ. ಜನರನ್ನು ಸಸ್ಯಾಹಾರದ ಕಡೆ ವಾಲುವಂತೆ ಸರಕಾರದ ನೀತಿಗಳನ್ನು ರೂಪಿಸಬೇಕಾಗಿದೆ.

ತೀರಾ ಇತ್ತೀಚಿನವರೆಗೂ ಭಾರತದ ಆಹಾರ ಸೇವನೆ ಆರೋಗ್ಯಕರವಾಗಿಯೇ ಇತ್ತು. ಪಾಶ್ಚಿಮಾತ್ಯ ಅನುಕರಿಸುವ ಮನೋಭಾವ ದಿಂದ, ವಾಣಿಜ್ಯಕರಣ ಮತ್ತು ಸಾಮಾಜಿಕ ಬದಲಾವಣೆಗಳಿಂದ ಮಾಂಸಾಹಾರಿಗಳ ಸಂಖ್ಯೆ ಬೆಳೆದಿದೆ. ಸದ್ಯ ಆರೋಗ್ಯಕರ
ಆಹಾರ ಸೇವನೆಯಲ್ಲಿ ಭಾರತ ಶೇಕಡಾ 50 ಅಂಕ ಗಳಿಸಿದೆ. ಇದುವರೆಗೂ ಯಾವ ದೇಶಗಳೂ 65 ಅಂಕಕ್ಕಿಂತ ಹೆಚ್ಚು ಗಳಿಸಲು ಸಾಧ್ಯವಾಗಿಲ್ಲ.

ತಜ್ಞರು ಸಲಹೆ ಮಾಡಿರುವ ಪರಿಸರ ಸ್ನೇಹಿ ಆಹಾರ ಕ್ರಮದ ಬಗ್ಗೆ ತಿಳಿಯುವ ಮುನ್ನ ‘ಶುದ್ಧ ಶಾಖಾಹಾರಿಗಳು’ ಎಂದು ಯಾರು ಎನ್ನುವುದರ ಬಗ್ಗೆ ಸ್ಪಷ್ಟಪಡಿಸಿಕೊಳ್ಳೋಣ. ಮಾಂಸ ಮೊಟ್ಟೆ ಮತ್ತು ಯಾವುದೇ ಹಾಲಿನ ಉತ್ಪನ್ನವನ್ನು ಕೂಡ ಸೇವಿಸಿದವರು ಅವರನ್ನು ‘ಶುದ್ಧ ಸಸ್ಯಾಹಾರಿಗಳು (puru vegeterian)’ ಎನ್ನಬಹುದು. ಇನ್ನು ಸಸ್ಯಾಹಾರದ ಜತೆಗೆ ಹಾಲಿನ ಉತ್ಪನ್ನವನ್ನು ಸೇವಿಸುವವರನ್ನು ಲ್ಯಾಕ್ಟೋ – ವೆಜಿಟೇರಿಯನ್ ((lacto – vegetarian ) ಎಂದು ಕರೆಯುತ್ತಾರೆ.

ಹಾಲಿನ ಉತ್ಪನ್ನ ಜತೆಗೆ, ಮೊಟ್ಟೆ ತಿನ್ನುವವರಿಗೆ’ ವೊವೋ – ಲ್ಯಾಕ್ಟೋ – ವೆಜಿಟೇರಿಯನ್ (ovo – lacto – vegetarian) ಎನ್ನುತ್ತಾರೆ.
ಇನ್ನು ತಾವು ಮಾಂಸಾಹಾರಿಗಳು ಎಂದು ಕರೆದುಕೊಳ್ಳುವ ಎಲ್ಲರೂ, ಹುಲಿ ಸಿಂಹಗಳ ರೀತಿ ಸಂಪೂರ್ಣ ಮಾಂಸಾಹಾರಿಗಳು ಅಲ್ಲ. ಹುಲಿ ಸಿಂಹ ಗಳು ಹಸಿದುಕೊಂಡು ಸಾಯುತ್ತವೆಯೇ ಹೊರತು, ಹುಲ್ಲು ತಿನ್ನುವುದಿಲ್ಲ. ಪ್ರತಿದಿನವೂ ಮೂರೂ ಹೊತ್ತು ಮಾಂಸವನ್ನು ಸೇವಿಸುವ ವ್ಯಕ್ತಿಗಳನ್ನು, ಶುದ್ಧ ಮಾಂಸಹಾರಿಗಳು ಎನ್ನಬಹುದೇನೋ. ಒಂದೊತ್ತು ಮಾಂಸವನ್ನು ತಿನ್ನುವ, ದಿನಕ್ಕೊಮ್ಮೆ ತಿನ್ನುವ, ವಾರಕ್ಕೊಮ್ಮೆ ತಿನ್ನುವ, ಮಾಸಕ್ಕೊಮ್ಮೆ ತಿನ್ನುವ, ಹಬ್ಬ ಹರಿದಿನಗಳಲ್ಲಿ ಮಾಂಸ ಸೇವಿಸುವ, ಮನೆಯ ಹೊರಗಡೆ ಮಾತ್ರ ಮಾಂಸ ತಿನ್ನುವ ಹಲವಾರು ರೀತಿ ಯ ಮಾಂಸಾಹಾರಿಗಳು ಇದ್ಧಾರೆ.

ಇವರು ಮಿಶ್ರಾಹಾರಿಗಳು. ಪ್ರಮುಖವಾಗಿ ಸಸ್ಯಹಾರವನ್ನು ಸೇವಿಸಿ, ಅಪರೂಪಕ್ಕೊಮ್ಮೆ ಮಾಂಸಾಹಾರ ಸೇವಿಸುವರನ್ನು ‘ಫ್ಲೆಕ್ಸಿಟೆರಿಯನ್’ (flexitarian) ಎನ್ನುತ್ತಾರೆ. ಅತ್ಯುತ್ತಮ ಪರಿಸರ ಸ್ನೇಹಿ ಆಹಾರ ಕ್ರಮವೆಂದರೆ ‘ಸಸ್ಯಾಹಾರ’. ‘ಶುದ್ಧ ಸಸ್ಯಹಾರ’ ದಿಂದ ವಿಟಮಿನ್ ಬಿ 12 ಹೊರತು ಪಡಿಸಿ ಎಲ್ಲಾ ಅವಶ್ಯಕ ಪೋಷಕಾಂಶಗಳು ಮನುಷ್ಯನಿಗೆ ಸಿಗುತ್ತದೆ.

ಶುದ್ಧ ಸಸ್ಯಹಾರ ಸೇವಿಸುವರು ವಿಟಮಿನ್ ಬಿ 12 ಮಾತ್ರೆಗಳನ್ನು ಪ್ರತ್ಯೇಕವಾಗಿ ತೆಗೆದುಕೊಳ್ಳಬೇಕಾಗಬಹುದು. ಮೈ ಕಟ್ಟು ಬೆಳೆಸಿಕೊಳ್ಳಲು ಅಥವಾ ದಪ್ಪಗಾಗಲು ಮಾಂಸಾಹಾರ ಸೇವಿಸಲೇಬೇಕು ಎಂಬ ತಪ್ಪು ಕಲ್ಪನೆ ಇರುವವರು ಬಹುಶಃ ಕುದುರೆ ಅಥವಾ ಆನೆಯನ್ನು ನೋಡಿಲ್ಲವೇನೋ !

ಶುದ್ಧ ಸಸ್ಯಾಹಾರ ಸಾಧ್ಯವಾಗದವರಿಗೆ ಕೂಡ ತಜ್ಞರ ಸಲಹೆ ಇದೆ. ಮಾಂಸಾಹಾರ ಸೇವಿಸುವವರು ವಾರಕ್ಕೊಮ್ಮೆ ಮಾಂಸ ಸೇವಿಸಬಹುದು. ಮೀನು ಮತ್ತು ಕೋಳಿಯನ್ನು ಗರಿಷ್ಠ ವಾರಕ್ಕೆ ಎರಡು ಬಾರಿ ಮಾತ್ರ ಸೇವಿಸುವುದು ಪರಿಸರಕ್ಕೆ ಹೆಚ್ಚಿನ ಹಾನಿ
ಮಾಡುವುದಿಲ್ಲ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಮಾಂಸಾಹಾರದಲ್ಲಿ ‘ಕೆಂಪು ಮಾಂಸ ’ (Red meat) ಮತ್ತು ಸಂಸ್ಕರಿಸಿದ ಮಾಂಸಾಹಾರ ಬಗ್ಗೆ ಇಲ್ಲಿ ಉಲೇಖಿಸಬಹುದು.

ಕೆಂಪು ಮಾಂಸವೆಂದರೆ ಗೋಮಾಂಸ , ಹಂದಿ, ಕುರಿ/ಆಡಿನ ಮಾಂಸ. ವಿಶ್ವ ಆರೋಗ್ಯ ಸಂಸ್ಥೆಯಿಂದ ಪ್ರಕಟವಾಗಿರುವ ವರದಿ ಯಲ್ಲಿ ಈ ರೆಡ್ ಮೀಟ್ ಅನ್ನು 2ಬಿ ಗುಂಪಿನಲ್ಲಿ ಸೇರಿಸಿzರೆ . ಇವುಗಳನ್ನು 2ಬಿ ಗುಂಪಿಗೆ ಸೇರಿಸುವುದಕ್ಕೆ ಕಾರಣ ಇದನ್ನು ಹೆಚ್ಚಾಗಿ ಸೇವಿಸುವ ಜನರಲ್ಲಿ ಕ್ಯಾನ್ಸರ್ ಕಂಡು ಬಂದಿರುವುದು. ಕ್ಯಾನ್ಸರ್‌ಗೆ ಕಾರಣ ವಾಗಬಲ್ಲ ಅಂಶಗಳು ಇಂತಹ ಕೆಂಪು ಮಾಂಸದಲ್ಲಿ ಇರುವ ಬಗ್ಗೆ ಅನುಮಾನ ಗಳಿರುವುದರಿಂದ ಈ ಗುಂಪಿಗೆ ಸೇರಿಸಲಾಗಿದೆ.

ಸಂಸ್ಕರಿಸಲಾದ ಮಾಂಸವನ್ನು ಒಂದನೇ ಗುಂಪಿಗೆ ಸೇರಿಸಲಾಗಿದೆ. ಒಂದನೇ ಗುಂಪು ಎಂದರೆ ಕ್ಯಾನ್ಸರ್‌ಕಾರಕ ವಸ್ತುಗಳು. ಇದರಲ್ಲಿ ಇರುವುದು ದೃಢಪಟ್ಟಿರುವುದು. ಇಂತಹ ಮಾಂಸಗಳನ್ನು ಸೇವಿಸುವ ಜನರಲ್ಲಿ ದೊಡ್ಡ ಕರುಳಿನ, ಪ್ಯಾಂಕ್ರಿಯಾಸ್ ಮತ್ತು ಪ್ರೋಸ್ಟೇಟ್ ಗ್ರಂಥಿಗಳು ಹೆಚ್ಚಾಗಿರುವುದು ಕಂಡು ಬಂದಿದೆ. ಹೆಚ್ಚಿನ ಕೆಂಪು ಮಾಂಸ ಸೇವನೆ ಮಾಡುವರಲ್ಲಿ ಹೃದಯ ಸಂಬಂಧಿ ಕಾಯಿಲೆ ಮತ್ತು ಡೈಯಾಬಿಟೀಸ್ ಹೆಚ್ಚಾಗಿ ಕಂಡು ಬರಬಹುದು.

ಅಷ್ಟೇ ಅಲ್ಲದೇ ಸುಮಾರು ಶೇಕಡಾ 25-30ರಷ್ಟು ಉತ್ಪಾದನೆಯಾಗುವ ಆಹಾರ ನಷ್ಟವಾಗುತ್ತಿದೆ. ಒಂದುಕಡೆ ಈಗಾಗಲೇ ಉತ್ಪಾದಿಸಿದ ಆಹಾರ ಗ್ರೀನ್ ಹೌಸ್ ಅನಿಲ ಉತ್ಪಾದನೆ ಮಾಡಿರುವುದು ಅಲ್ಲದೆ, ನಷ್ಟವಾಗಿರುವ ಆಹಾರ ಮರುತ್ಪಾದನೆ ಒತ್ತಡವನ್ನು ತರುತ್ತದೆ. ಬದಲಾವಣೆ ಎಂಬುದು ಮೊದಲು ನಮ್ಮಿಂದ ಪ್ರಾರಂಭವಾಗುತ್ತದೆ. ನಾವು, ವೈಯಕ್ತಿಕ ಮಟ್ಟದಲ್ಲಿ, ಎಷ್ಟು ಗ್ರೀನ್ ಹೌಸ್ ಅನಿಲವನ್ನು ಕಡಿಮೆ ಮಾಡಲು ಕೊಡುಗೆ ನೀಡುತ್ತಿದ್ದೇವೆ ಮಾಪನ ಮಾಡಲು ಒಂದು ಉಚಿತ ಮೊಬೈಲ್ ಆಪ್ ಲಭ್ಯವಿದೆ.

ಇದರ ಹೆಸರು ‘ಕೂಲ್ ದಿ ಗ್ಲೋಬ್‌’ (cooltheglobe). ಇದನ್ನು ಮೊಬೈಲ್‌ನಲ್ಲಿ ಡೌನ್ಲೋಡ್ ಮಾಡಿಕೊಂಡರೆ ನೀವು ‘ಒಂದು ಲೈಟ್ ಅಥವಾ ಟಿವಿ ನಿಲ್ಲಿಸಿದರೆ ಎಷ್ಟು ಗ್ರೀನ್ ಹೌಸ್ ಅನಿಲ್‌ ಕಡಿಮೆಯಾಗುತ್ತದೆ, ಒಂದು ದಿನ ಸ್ವಂತ ವಾಹನ ಬಿಟ್ಟು ಬಸ್ಸಿನಲ್ಲಿ ಹೋದರೆ ಎಷ್ಟು ಪರಿಸರ ಮಾಲಿನ್ಯ ಕಡಿಮೆಯಾಯಿತು, ಸೈಕಲ್‌ನಲ್ಲಿ ಪ್ರಯಾಣ ಮಾಡಿದರೆ ಎಷ್ಟು ಪರಿಸರ ಕಡಿಮೆ ಯಾಯಿತು, ನೀವು ತಿನ್ನುವ ಆಹಾರದಲ್ಲಿ ಎಷ್ಟು ಮಾಂಸಾಹಾರ ಕಡಿಮೆ ಮಾಡಿದರೆ ಎಷ್ಟು ಮಾಲಿನ್ಯ ಕಡಿಮೆ ಯಾಯಿತು’
ಎಂಬುದನ್ನು ತಿಳಿಯಬಹುದು.

ನಿಮ್ಮ ಶಕ್ತಾನುಸಾರ ಶೇಕಡಾ 10, 20 ಅಥವಾ 30ರಷ್ಟು ಮಾಲಿನ್ಯ ಕಡಿಮೆ ಮಾಡುತ್ತೇನೆ ಎಂದು ಗುರಿ ಇಟ್ಟುಕೊಂಡು, ಆ ಗುರಿ ತಲುಪಿದೆಯೋ ಇಲ್ಲವೋ ಎಂದು ಆಪ್ ಮೂಲಕ ತಿಳಿದುಕೊಳ್ಳ ಬಹುದು. ‘ಈ ದೇಶ ಹಾಳಾಗಿರುವುದು ಮಾಂಸ ತಿಂದವ ರಿಂದ ಅಲ್ಲ, ತುಪ್ಪ ತಿಂದವರಿಂದ’ ಎಂದು ಸ್ವಾಮೀಜಿಯೊಬ್ಬರು ಆರೋಪ ಮಾಡಿದ್ದರು. ಆದರೆ ಇಂದು ಪರಿಸರ ಉಳಿಸಿ ಕೊಳ್ಳಲು ಮಾಂಸದ ಬದಲು, ಹೆಚ್ಚು ಸಸ್ಯಹಾರ ತಿನ್ನಬೇಕಿದೆ.