Friday, 18th October 2024

ರಾಜ್ಯ ಬಿಜೆಪಿಯಲ್ಲಿ ಮತ್ತೆ ಬಿಎಸ್’ವೈ ಹವಾ !

ವರ್ತಮಾನ

maapala@gmail.com

ಕೇಂದ್ರ ಗೃಹ ಸಚಿವ ಅಮಿತ್ ಶಾ ಮೊನ್ನೆ ಮೊನ್ನೆ ಬೆಂಗಳೂರಿಗೆ ಬಂದು ಹೋದ ಮೇಲೆ ರಾಜ್ಯ ಬಿಜೆಪಿ ಅದೆಷ್ಟು ಮೈಕೊಡವಿ ಕುಳಿತುಕೊಂಡಿದೆಯೋ ಗೊತ್ತಿಲ್ಲ. ಆದರೆ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತ್ರ ಸಂಪೂರ್ಣ ಕ್ರಿಯಾಶೀಲ ರಾಗಿದ್ದಾರೆ.

ರಾಜ್ಯಾದ್ಯಂತ ಸುತ್ತಾಡಿ 2023 ರಲ್ಲಿ ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವುದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲ, ಮಂತ್ರಾಲಯಕ್ಕೆ ಹೋಗಿ ಶ್ರೀ ಗುರುರಾಯರ ಬೃಂದಾವನದ ಮುಂದೆ ಈ ಕುರಿತು ಸಂಕಲ್ಪ ಮಾಡಿ ಬಂದಿದ್ದು, ಶೀಘ್ರದಲ್ಲೇ ರಾಜ್ಯ ಪ್ರವಾಸ ಆರಂಭಿಸುವುದಾಗಿ ಹೇಳಿದ್ದಾರೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಕೆಲವು ಸಚಿವರು ಯಡಿಯೂರಪ್ಪ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಪಕ್ಷಕ್ಕೆ
ಚುರುಕುಮುಟ್ಟಿಸುವ ಕೆಲಸಕ್ಕೆ ಚಾಲನೆ ಸಿಕ್ಕಿದ ಲಕ್ಷಣ ಕಾಣಿಸುತ್ತಿದೆ.

ಹೌದು, ಕಳೆದ ಆರೇಳು ತಿಂಗಳಿನಿಂದ ಹಿಜಾಬ್, ಹಲಾಲ್, ಆಜಾನ್, ದೇವಸ್ಥಾನಗಳ ಬಳಿ ಅನ್ಯ ಧರ್ಮೀಯರಿಗೆ ವ್ಯಾಪಾರಕ್ಕೆ ಅವಕಾಶ ನಿರಾಕರಣೆ ಇತ್ಯಾದಿ ಧರ್ಮಕ್ಕೆ ಸಂಬಂಧಿಸಿದ ವಿಷಯಗಳ ಸುತ್ತ ಸುಳಿದಾಡುತ್ತಾ ತಳಮಟ್ಟದಿಂದ ಸಂಘಟನೆ ಬಲಪಡಿಸುವ ಕೆಲಸಕ್ಕೆ ವಿರಾಮ ಹೇಳಿದ್ದ ಬಿಜೆಪಿ ಮೈಕೊಡವಿ ಎದ್ದುನಿಲ್ಲುತ್ತಿದೆ. ಇದಕ್ಕೆ ಯಡಿಯೂರಪ್ಪ ಅವರೇ ನಾಂದಿ ಹಾಡುವುದು ಬಹುತೇಕ ಖಚಿತವಾಗಿದೆ. ಸದ್ಯದಲ್ಲೇ ಯಡಿಯೂರಪ್ಪ ಅವರ ‘ಮಾರ್ಗದರ್ಶನ’ದಲ್ಲಿ

ರಾಜ್ಯ ನಾಯಕರ ಪ್ರವಾಸಕ್ಕೆ ದಿನಾಂಕವೂ ನಿಗದಿಯಾಗಲಿದ್ದು, ಕಾಂಗ್ರೆಸ್‌ನ ಸಿದ್ದರಾಮೋತ್ಸವದ ಶಕ್ತಿ ಪ್ರದರ್ಶನಕ್ಕೆ
ಸಂಘಟನೆ ಮೂಲಕ ಉತ್ತರ ನೀಡಲು ಬಿಜೆಪಿ ಸಜ್ಜಾಗುತ್ತಿದೆ. ಇತ್ತೀಚೆಗೆ ಬೆಂಗಳೂರಿಗೆ ಆಗಮಿಸಿದ್ದ ಅಮಿತ್ ಶಾ, ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಸುಮಾರು ಅರ್ಧ ಗಂಟೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದರು. ನಾವು ಪ್ರಸ್ತುತ
ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚಿಸಿದ್ದೇವೆ ಎಂದು ಯಡಿಯೂರಪ್ಪ ಅವರು ಹೇಳಿದ್ದರು. ಆದರೆ, ಒಳಗೆ ನಡೆದ
ನಿಜವಾದ ಮಾತುಕತೆಗಳು ಏನು ಎಂಬುದು ಅಮಿತ್ ಶಾ ಮತ್ತು ಯಡಿಯೂರಪ್ಪ ಅವರನ್ನು ಹೊರತುಪಡಿಸಿ ಬೇರೆ
ಯಾರಿಗೂ ಗೊತ್ತಿಲ್ಲ.

ಆದರೆ, ಪಕ್ಷ ಸಂಘಟನೆ ವಿಚಾರದಲ್ಲಿ ಯಡಿಯೂರಪ್ಪ ತೋರುತ್ತಿರುವ ಆಸಕ್ತಿ ಗಮನಿಸಿದರೆ, ಅವರಿಬ್ಬರ ಮಧ್ಯೆ ಪ್ರಸ್ತುತ ರಾಜಕೀಯ ವಿದ್ಯಮಾನಗಳ ಹೊರತಾಗಿ ಇನ್ನೇನೋ ಗಹನ ಸಮಾಲೋಚನೆ ನಡೆದಿದೆ ಎಂಬುದು ಸ್ಪಷ್ಟವಾಗುತ್ತದೆ. ಅದು ಬಿಜೆಪಿ ರಾಜ್ಯ ನಾಯಕರ ಅರಿವಿಗೂ ಬಂದಿದೆ. ಹೀಗಾಗಿ ಪದೇ ಪದೇ ಮುಂಬರುವ ಚುನಾವಣೆಯನ್ನು ಯಡಿಯೂರಪ್ಪ ಅವರ ‘ಮಾರ್ಗ ದರ್ಶನ’ದಲ್ಲಿ ಎದುರಿಸಲಾಗುವುದು ಎಂದು ಹೇಳುತ್ತಿದ್ದಾರೆ.

ಚುನಾವಣಾ ರಾಜಕಾರಣದಿಂದ ಹಿಂದೆ ಸರಿದ ಯಡಿಯೂರಪ್ಪ ಅವರು ಇನ್ನು ಯಾವುದೇ ಸ್ಥಾನಮಾನ ಬಯಸುವುದಿಲ್ಲ ಎನ್ನುವುದು ಸ್ಪಷ್ಟ. ಹಾಗೆಂದು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಅವರು ಇಷ್ಟೊಂದು ಕ್ರಿಯಾ ಶೀಲರಾಗುವುದೂ ಇಲ್ಲ ಎಂಬುದೂ ಗೊತ್ತಿರುವ ಸಂಗತಿ. ಏಕೆಂದರೆ, 2021ರ ಜುಲೈನಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ, ಇನ್ನು ಮುಂದೆ ರಾಜ್ಯಾದ್ಯಂತ ಓಡಾಡಿ ಪಕ್ಷ ಸಂಘಟಿಸುತ್ತೇನೆ ಎಂದು ಘೋಷಣೆ ಮಾಡಿದ್ದರು.

ಇದಾಗಿ ಒಂದು ವರ್ಷ ಕಳೆದರೂ ರಾಜ್ಯ ಪ್ರವಾಸ ಆರಂಭವಾಗಿಲ್ಲ. ರಾಜ್ಯ ಪ್ರವಾಸ ಆರಂಭಿಸಲು ಪಕ್ಷದ ನಾಯಕರಿಂದ ಸಹಕಾರ ಸಿಕ್ಕಿಲ್ಲ ಎಂಬುದು ಇದಕ್ಕೆ ಯಡಿಯೂರಪ್ಪ ಅವರ ಆಪ್ತರ ಕಡೆಯಿಂದ ಬರುವ ಸ್ಪಷ್ಟನೆಯಾದರೂ ಅದರಲ್ಲಿ
ಪೂರ್ಣ ಸತ್ಯ ಇಲ್ಲ. ಏಕೆಂದರೆ, ಯಡಿಯೂರಪ್ಪ ರಾಜ್ಯ ಪ್ರವಾಸ ಮಾಡಿ ಪಕ್ಷ ಸಂಘಟಿಸುತ್ತೇನೆ ಎಂದು ಪಟ್ಟು ಹಿಡಿದು
ಹೊರಟರೆ ಅದಕ್ಕೆ ಅಡ್ಡಿಪಡಿಸುವ ಧೈರ್ಯವನ್ನು ವರಿಷ್ಠರೂ ಸೇರಿದಂತೆ ಯಾರೂ ತೋರುವುದಿಲ್ಲ.

ಆದರೆ, ಈಗ ಅಮಿತ್ ಶಾ ಅವರ ಬಳಿ ಪ್ರತ್ಯೇಕವಾಗಿ ಸಮಾಲೋಚಿಸಿದ ಬಳಿಕ ಯಡಿಯೂರಪ್ಪ ದಿಡೀರ್ ತಮ್ಮ ವರಸೆ ಬದಲಿಸಿ ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ. ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತಂದು ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ ಬಿಜೆಪಿಯ ಋಣ ತೀರಿಸುತ್ತೇನೆ ಎಂಬುದಾಗಿ ಹೇಳುತ್ತಾರೆ ಎಂದರೆ ಅದರ ಹಿಂದೆ ಅವರು ಪಕ್ಷದಿಂದ ಏನನ್ನೋ
ಬಯಸಿದ್ದರು. ಆ ಬಯಕೆಗೆ ಅಮಿತ್ ಶಾ ಅವರಿಂದ ಸಹಮತಿ ಸಿಕ್ಕಿದೆ ಎಂಬ ಅನುಮಾನ ಮೂಡುವುದಂತೂ ಸಹಜ.
ತಮ್ಮ ಪುತ್ರ ಬಿ.ವೈ.ವಿಜಯೇಂದ್ರ ಅವರನ್ನು ವಿಧಾನ ಪರಿಷತ್ತಿಗೆ ಆಯ್ಕೆ ಮಾಡಿ, ಮುಖ್ಯಮಂತ್ರಿ ಬಸವರಾಜ
ಬೊಮ್ಮಾಯಿ ಅವರ ಸಂಪುಟದಲ್ಲಿ ಅವಕಾಶ ಕಲ್ಪಿಸಬೇಕು ಎಂಬುದು ಯಡಿಯೂರಪ್ಪ ಅವರ ಬಯಕೆಯಾಗಿತ್ತು.

ಆದರೆ, ಅದು ಈಡೇರಲಿಲ್ಲ. ಇದಾದ ನಂತರ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಸಂದರ್ಭದಲ್ಲಿ, ಇದುವರೆಗೆ ತಾವು ಪ್ರತಿನಿಽಸುತ್ತಿದ್ದ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಕ್ಷೇತ್ರದಿಂದ ವಿಜಯೇಂದ್ರ ಸ್ಪರ್ಧಿಸಲಿದ್ದಾರೆ ಎಂದು ಹೇಳಿದ್ದರು. ಆದರೆ, ತಮ್ಮ ಹೇಳಿಕೆ ವಿವಾದವಾಗಬಹುದು ಎಂದು ಗೊತ್ತಾಗುತ್ತಿದ್ದಂತೆ, ಅದು ನನ್ನ ಸಲಹೆ ಮಾತ್ರ. ನಿರ್ಧಾರ ಹೈಕಮಾಂಡ್‌ಗೆ ಬಿಟ್ಟಿದ್ದು ಎಂದು ಸಮಜಾಯಿಷಿ ನೀಡಿದ್ದರು. ಈ ಎರಡಕ್ಕಿಂತ ಮುಖ್ಯವಾಗಿ ಅವರಲ್ಲೊಂದು ಕೊರಗು
ಇತ್ತು. ಅವರು ಕೆಜೆಪಿ ಕಟ್ಟಿದ ಬಳಿಕ ರಾಜ್ಯದಲ್ಲಿ 2013ರಲ್ಲಿ ಬಿಜೆಪಿ ಸೋತಿತ್ತು. ನಂತರ ಮತ್ತೆ ಅವರು ಬಿಜೆಪಿಗೆ ಸೇರಿ
ದ್ದರಿಂದ 2018ರಲ್ಲಿ ಮತ್ತೆ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತಲ್ಲದೆ, 2019ರಲ್ಲಿ ಅಧಿಕಾರ ಹಿಡಿಯುವಂತಾಗಿತ್ತು.
ಆಗ ಬಿಜೆಪಿ ಅಽಕಾರಕ್ಕೆ ಬರಲು ಯಡಿಯೂರಪ್ಪ ಅವರ ತಂತ್ರಗಾರಿಕೆ ಕಾರಣವಾಯಿತೇ ಹೊರತು ಬೇರೇನೂ ಅಲ್ಲ.
ಆದರೆ, 2021ರಲ್ಲಿ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಬಳಿಕ ಪಕ್ಷ ಅವರನ್ನು ಸರಿಯಾಗಿ ನಡೆಸಿಕೊಳ್ಳಲೇ ಇಲ್ಲ.

ಅವರ ಸಾಮರ್ಥ್ಯವನ್ನೂ ಬಳಸಿಕೊಳ್ಳಲಿಲ್ಲ. ಕೇವಲೇ ಇಬ್ಬರೇ ಶಾಸಕರಿದ್ದಂತಹ ಒಂದು ಪಕ್ಷವನ್ನು ಅಧಿಕಾರಕ್ಕೆ ಬರುವಷ್ಟರಮಟ್ಟಿಗೆ ಬೆಳೆಸಿದ ತಮ್ಮನ್ನು ಪಕ್ಷ ನಡೆಸಿಕೊಂಡ ರೀತಿ ಅವರಲ್ಲಿ ಬೇಸರ ತರಿಸಿತ್ತು. ಹೀಗಾಗಿಯೇ ಅವರು ತಮ್ಮ ಪಾಡಿಗೆ ತಣ್ಣಗೆ ಕುಳಿತಿದ್ದರು. ಆದರೆ, ಈಗ ಸಂಘಟನೆ ವಿಚಾರದಲ್ಲಿ ಅವರ ಆತುರ ನೋಡಿದಾಗ ಅಮಿತ್ ಶಾ ಆ ಕೊರಗು ನಿವಾರಿಸಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಇದರ ಜತೆಗೆ ವಿಜಯೇಂದ್ರ ವಿಚಾರದಲ್ಲೂ ಪಕ್ಷದ ವರಿಷ್ಠರು ಮೃದುವಾಗಿದ್ದಾರೆ ಎಂಬುದು ಕಾಣಿಸುತ್ತದೆ.

ಇನ್ನು ಇಷ್ಟು ದಿನ ಯಡಿಯೂರಪ್ಪ ಅವರನ್ನು ನಿರ್ಲಕ್ಷಿಸಿದ್ದ ಬಿಜೆಪಿ ನಾಯಕರು ಕೂಡ ತಣ್ಣಗಾಗಲು ಕಾರಣಗಳು ಇಲ್ಲದೇ
ಇಲ್ಲ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ಬಳಿಕ ಸಾಕಷ್ಟು ಉತ್ತಮ ಕಾರ್ಯಕ್ರಮಗಳನ್ನು ನೀಡಿದ್ದರೂ ಅವರ ಸರಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಸೇರಿದಂತೆ ಸಾಕಷ್ಟು ಆರೋಪಗಳು ಬಂದವು. ಬಿಜೆಪಿ ನಡೆಸಿದ ಆಂತರಿಕ ಸಮೀಕ್ಷೆಗಳು ಮತ್ತೆ ಪಕ್ಷ ಅಧಿಕಾರಕ್ಕೆ ಬರುವುದು ಅನುಮಾನ ಎಂದು ಹೇಳಿದವು. ಮತ್ತೊಂದೆಡೆ ಪ್ರವೀಣ್ ನೆಟ್ಟಾರು ಹತ್ಯೆ ಬಳಿಕ ಪಕ್ಷ ಮತ್ತು ಪಕ್ಷದ ಸರಕಾರದ ವಿರುದ್ಧ ಕರಾವಳಿಯಲ್ಲಿ ಹೊತ್ತಿದ ಬೆಂಕಿ ರಾಜ್ಯವ್ಯಾಪಿ ವಿಸ್ತರಣೆಯಾಯಿತು.

ಮತ್ತೊಂದೆಡೆ ಆಂತರಿಕ ಕಚ್ಚಾಟದ ಮಧ್ಯೆಯೂ ಕಾಂಗ್ರೆಸ್ ತನ್ನ ಶಕ್ತಿಯನ್ನು ಹೆಚ್ಚಿಸಿಕೊಳ್ಳಲಾರಂಭಿಸಿತು. ಸಿದ್ದರಾಮೋತ್ಸವದ ಮೂಲಕ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮತ್ತೊಮ್ಮೆ ತಾವೊಬ್ಬ ಜನಪ್ರಿಯ ನಾಯಕ. ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂಬುದನ್ನು ತೋರಿಸಿಕೊಟ್ಟರು. ಒಂದೊಮ್ಮೆ ಸಿದ್ದರಾಮಯ್ಯ ಯಶಸ್ವಿಯಾದರೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ.

ಬಿಜೆಪಿ ಪ್ರತಿಪಕ್ಷದಲ್ಲಿ ಕುಳಿತುಕೊಳ್ಳಬೇಕಾಗುತ್ತದೆ ಎಂಬುದು ಪಕ್ಷದ ವರಿಷ್ಠರಿಗೆ ಸ್ಪಷ್ಟವಾಯಿತು. ಆದರೆ, ಕೇವಲ ಸಂಘಟನೆ ಮಾತ್ರದಿಂದಲೇ ಇದಕ್ಕೆ ತಿರುಗೇಟು ನೀಡುತ್ತೇವೆ ಎಂದು ಹೊರಟರೆ ವಿಧಾನಸಭೆ ಚುನಾವಣೆ ವೇಳೆ ಅದು ಸಾಧ್ಯವಾಗುತ್ತದೆ ಎಂದು ಭಾವಿಸುವಂತಿಲ್ಲ. ಏಕೆಂದರೆ, ವಿಧಾನಸಭೆ ಚುನಾವಣೆಗೆ ಹೆಚ್ಚು ಸಮಯ ಇಲ್ಲ. ಹೀಗಿರುವಾಗ ವ್ಯಕ್ತಿ ರಾಜಕಾರಣಕ್ಕೆ ಮಾರುತ್ತರ ಕೊಡಬೇಕಾದರೆ ಅದಕ್ಕೆ ಅಷ್ಟೇ ಸಾಮರ್ಥ್ಯದ ಅಥವಾ ಅದಕ್ಕಿಂತ ಹೆಚ್ಚು ಸಾಮರ್ಥ್ಯದ ವ್ಯಕ್ತಿಯನ್ನು ಮುಂದೆ
ಬಿಡಲೇ ಬೇಕಾಗುತ್ತದೆ. ಪ್ರಸ್ತುತ ಬಿಜೆಪಿಯಲ್ಲಿ ಯಡಿಯೂರಪ್ಪ ಅವರಿಗೆ ಮಾತ್ರ ಆ ತಾಕತ್ತು ಇದೆ ಎಂಬುದು ವರಿಷ್ಠರಿಗೆ
ಸ್ಪಷ್ಟವಾಗಿತ್ತು. ಹೀಗಾಗಿಯೇ ಯಡಿಯೂರಪ್ಪ ಅವರ ಬೇಡಿಕೆಗಳಿಗೆ ವರಿಷ್ಠರು ಸ್ಪಂದಿಸಿದ್ದಾರೆ.

ಆ ಮೂಲಕ ಪಕ್ಷದಲ್ಲಿ ಅವರಿಗೆ ಆದ್ಯತೆ ನೀಡಿ ಅವರ ‘ಮಾರ್ಗದರ್ಶನ’ದಲ್ಲಿ ಚುನಾವಣೆ ಎದುರಿಸಲು ನಿರ್ಧರಿಸಿದ್ದಾರೆ. ಆದರೆ, ಯಡಿಯೂರಪ್ಪ ಅವರ ಬೇಡಿಕೆ ಏನಾಗಿತ್ತು ಎಂಬುದು ಮುಂದಿನ ದಿನಗಳಲ್ಲಷ್ಟೇ ಹೊರಬರಬೇಕಾಗಿದೆ.

ಲಾಸ್ಟ್ ಸಿಪ್: ಹಾಳೂರಿಗೆ ಉಳಿದವನೇ ನಾಯಕ ಎಂದಲ್ಲದೇ ಇದ್ದರೂ ಊರು ಹಾಳಾಗದಂತೆ ನೋಡಿಕೊಳ್ಳಲು
ಒಬ್ಬ ನಾಯಕನ ಅನಿವಾರ್ಯತೆ ಇದ್ದೇ ಇದೆ.