Friday, 18th October 2024

ಭಯಗಳನ್ನು ಗೆಲ್ಲುತ್ತ ಆತ್ಮವಿಶ್ವಾಸ ಬೆಳೆಸಿಕೊಳ್ಳೋಣ…

ಶ್ವೇತಪತ್ರ

shwethabc@gmail.com

ಆತ್ಮವಿಶ್ವಾಸ ಎಂದರೇನು? ನಮ್ಮ ಕೌಶಲಗಳು, ಸಾಮರ್ಥ್ಯಗಳ ಬಗ್ಗೆ ನಮಗಿರುವ ಮನೋಭಾವವನ್ನು ಆತ್ಮವಿಶ್ವಾಸ ಎನ್ನುತ್ತೇವೆ. ಈ ವ್ಯಾಖ್ಯಾನವನ್ನು ವಿಸ್ತರಿಸಿ ನೋಡುವುದಾದರೆ, ನಮ್ಮನ್ನು ನಾವಿರುವ ಹಾಗೆಯೇ ಒಪ್ಪಿಕೊಳ್ಳುವುದು, ನಮ್ಮ ಮೇಲೆ ನಾವು ನಂಬಿಕೆಯಿಡುವುದು ಮತ್ತು ಪ್ರಜ್ಞಾಪೂರ್ವಕವಾಗಿ ಬದುಕಲ್ಲಿ ಹಿಡಿತ ಇಟ್ಟುಕೊಳ್ಳುವುದು.

ನಮ್ಮ ಶಕ್ತಿ-ಸಾಮರ್ಥ್ಯಗಳೇನು, ದೌರ್ಬಲ್ಯಗಳೇನು ಎಂಬ ಅರಿವಿನ ಪ್ರಜ್ಞೆಯನ್ನು ನಮ್ಮಲ್ಲಿ ಮೂಡಿಸಿಕೊಳ್ಳುವುದು ಆತ್ಮವಿಶ್ವಾಸದ ಮುಖ್ಯ ಅಂಶ. ಈ ಅರಿವು ನಮ್ಮ ಸಾಮರ್ಥ್ಯ-ದೌರ್ಬಲ್ಯಗಳೇನು ಎಂಬುದನ್ನು ನಮಗೆ ಅರ್ಥಮಾಡಿಸುತ್ತ, ನಮ್ಮ ಬಗ್ಗೆ ನಮಗೇ ಒಂದು ಸಕಾರಾತ್ಮಕ ನಿಲುವನ್ನು ಮೂಡಿಸುತ್ತದೆ. ಆತ್ಮವಿಶ್ವಾಸವು ನಾವು ವಾಸ್ತವಿಕ ನಿರೀಕ್ಷೆ ಮತ್ತು ಗುರಿಗಳನ್ನು ಇಟ್ಟುಕೊಳ್ಳುತ್ತ, ಹೇಳಬೇಕಾದ್ದನ್ನು ಸ್ಪಷ್ಟವಾಗಿ ನೇರವಾಗಿ ಹೇಳುತ್ತ, ಟೀಕೆಗಳನ್ನೂ ಉತ್ತಮವಾಗಿ ನಿಭಾಯಿಸುವ ಒಂದು ಗುಣವೇ ಆಗಿರುತ್ತದೆ.

ನಮ್ಮಲ್ಲನೇಕರಲ್ಲಿ ಅತಿಹೆಚ್ಚು ಆತ್ಮವಿಶ್ವಾಸವಿದ್ದರೆ, ಮತ್ತೆ ಕೆಲವರಲ್ಲಿ ಅತಿಕಡಿಮೆಯಿರುತ್ತದೆ. ಕೆಲವರು ಚೆನ್ನಾಗಿ ಓದಿಕೊಂಡಿದ್ದು ಒಳ್ಳೆಯ ಸ್ಥಾನದಲ್ಲಿರುತ್ತಾರೆ; ಆದರೆ ಎಲ್ಲರ ಸಮ್ಮುಖದಲ್ಲಿ ಮಾತಾಡಬೇಕೆಂದಾಗ ಅವರಿಗೆ ಕಷ್ಟವಾಗುತ್ತದೆ. ಆದರೆ ಕೆಲವರು ಏನೂ ಓದಿಕೊಂಡಿಲ್ಲದಿದ್ದರೂ ಎಲ್ಲರೆದುರು ನಿರರ್ಗಳವಾಗಿ ಅದ್ಭುತವಾಗಿ ಮಾತಾಡುತ್ತಾರೆ. ಇಲ್ಲಿ ನಮ್ಮ
ಸೈಕಾಲಜಿ ಮೇಷ್ಟ್ರು ಶ್ರೀಧರಮೂರ್ತಿಯವರು ಹೇಳುತ್ತಿದ್ದ ಉದಾಹರಣೆಯೊಂದು ನೆನಪಾಗುತ್ತಿದೆ.

ಅದೇನೆಂದರೆ, ಪತ್ರಿಕೆಗಳಲ್ಲಿ ‘ಸಾ-ವೇರ್ ಎಂಜಿನಿಯರ್ ಆತ್ಮಹತ್ಯೆ’, ‘ಪೊಲೀಸ್ ಅಧಿಕಾರಿಯ ಆತ್ಮಹತ್ಯೆ’ ಹೀಗೆ ತುಂಬ ಓದಿಕೊಂಡಿರುವವರ, ಉನ್ನತ ಸ್ಥಾನದಲ್ಲಿರುವವರ ಆತ್ಮಹತ್ಯೆಯ ಸುದ್ದಿಗಳನ್ನು ಓದುತ್ತಿರುತ್ತೇವೆ; ಆದರೆ ‘ಮನೆಗೆಲಸದವಳ
ಆತ್ಮಹತ್ಯೆ’ ಎಂಬುದನ್ನು ಓದಿದ್ದಿದೆಯೇ? ಮನೆಗೆಲಸದಾಕೆಗೆ ಬದುಕಲ್ಲೇನಾದರೂ ಸವಾಲು-ಸಮಸ್ಯೆ ಎದುರಾದರೆ,
‘ಇನ್ನೊಂದೆರಡು ಮನೆ ಮುಸುರೆ ತಿಕ್ಕಿ ಬದುಕಬಲ್ಲೆ’ ಎಂಬ ಆತ್ಮವಿಶ್ವಾಸ ಅವಳಲ್ಲಿರುತ್ತದೆ.

ನಮಗಿರಬೇಕಾದದ್ದು ಮನೆಗೆಲಸದಾಕೆಯ ಆತ್ಮವಿಶ್ವಾಸ, ಗಟ್ಟಿತನ. ನಮ್ಮಲ್ಲಿರುವ ಆತ್ಮವಿಶ್ವಾಸ ಹೆಚ್ಚಿದೆಯೋ ಕಡಮೆ ಯಿದೆಯೋ ಎಂಬುದು ಮುಖ್ಯವಲ್ಲ. ನಮ್ಮ ನಿಜ ಸಾಮರ್ಥ್ಯಕ್ಕೂ ಆತ್ಮವಿಶ್ವಾಸಕ್ಕೂ ಅಸಲಿಗೆ ಸಂಬಂಧವೇ ಇಲ್ಲ. ಏಕೆಂದರೆ, ನಮ್ಮಲ್ಲಿನ ಆತ್ಮವಿಶ್ವಾಸ ಹೆಚ್ಚೇ ಇರಲಿ ಕಡಿಮೆಯೇ ಇರಲಿ, ಅವೆರಡೂ ಅವಲಂಬಿತವಾಗಿರುವುದು ನಮ್ಮ ಗ್ರಹಿಕೆಯ ಮೇಲೆ. ಗ್ರಹಿಕೆ ಎಂದರೇನು? ಪಂಚೇಂದ್ರಿಯಗಳ ಮೂಲಕ ಹೊರಜಗತ್ತಿನಿಂದ ಸಿಗುವ ವಿಚಾರಗಳನ್ನು ಪ್ರತ್ಯೇಕಿಸಿ, ವಿಶ್ಲೇಷಿಸಿ, ಅದು ಸರಿಯೇ ತಪ್ಪೇ ಎಂದು ಅರ್ಥೈಸುವ ಪ್ರಕ್ರಿಯೆಯನ್ನು ಪ್ರತ್ಯಕ್ಷಾನುಭವ/ಗ್ರಹಿಕೆ ಎನ್ನುತ್ತೇವೆ.

ಹೀಗೆ ಒಂದು ವಿಚಾರವನ್ನು ಹೇಗೆ ಗ್ರಹಿಸುತ್ತೇವೆ ಎಂಬುದನ್ನು ಆಧರಿಸಿ ನಮ್ಮ ಆಲೋಚನೆಗಳು ಮೂಡುತ್ತವೆ. ಈ ಆಲೋಚನೆಗಳನ್ನಾಧರಿಸಿ ವ್ಯಕ್ತಿಯ ಆತ್ಮವಿಶ್ವಾಸವು ಹೆಚ್ಚಿನದ್ದೇ ಕಡಿಮೆಯದ್ದೇ ಎಂಬುದು ನಿರ್ಧಾರವಾಗುತ್ತದೆ. ವ್ಯಾಪಾರೋ ದ್ಯಮಿಯೊಬ್ಬನಿಗೆ ತುಂಬ ನಷ್ಟವಾಗಿತ್ತು. ಸಾಲ ಜಾಸ್ತಿಯಾಯಿತು, ದುಡ್ಡು ಕೊಡೋರು ಯಾರೂ ಕೊಡುತ್ತಿರಲಿಲ್ಲ. ಹತಾಶನಾದ ಆತ ಅದೇ ಬೇಸರದಲ್ಲಿ ಒಮ್ಮೆ ಉದ್ಯಾನದ ಬೆಂಚಿನ ಮೇಲೆ ಕುಳಿತಿದ್ದ. ಅಲ್ಲಿಗೆ ಬಂದ ವಯೋವೃದ್ಧನೊಬ್ಬ ಈ ಉದ್ಯಮಿಯನ್ನು ನೋಡಿ, ‘ನಿಮಗೇನೋ ತೊಂದರೆಯಾಗಿದೆ ಅನ್ನಿಸ್ತಿದೆ.

ಸಮಸ್ಯೆಯೇನು?’ ಎಂದು ಕೇಳಿದಾಗ ಉದ್ಯಮಿ ತನ್ನ ಕಷ್ಟಗಳನ್ನೆಲ್ಲ ಹೇಳಿಕೊಂಡ. ಆಗ ಆ ವಯೋವೃದ್ಧನು ಈ ಉದ್ಯಮಿಯ
ಹೆಸರು ಕೇಳಿ, ತನ್ನ ಜೇಬಿನಿಂದ ಚೆಕ್ ತೆಗೆದು ಬೃಹತ್ ಮೊತ್ತವನ್ನು ಅದರಲ್ಲಿ ನಮೂದಿಸಿ ಉದ್ಯಮಿಗೆ ನೀಡಿದ. ಅಚ್ಚರಿಗೊಂಡ ಉದ್ಯಮಿ ‘ನೀವು ಯಾರು?’ ಎಂದು ಕೇಳಿದಾಗ ಆ ವಯೋವೃದ್ಧ ತನ್ನ ಹೆಸರು ಹೇಳಿದ. ಆತ ಆ ಊರಿನ ದೊಡ್ಡ ಶ್ರೀಮಂತನೇ ಆಗಿದ್ದ. ‘ಇನ್ನು ೧ ವರ್ಷವಾದ ಮೇಲೆ ಇದೇ ಜಾಗದಲ್ಲಿ ಇದೇ ಸಮಯಕ್ಕೆ ಸಿಗುತ್ತೇನೆ. ಆಗ ನೀನು ನನಗೆ ಈ ದುಡ್ಡನ್ನು ಹಿಂದಿರುಗಿಸಿದರಾಯಿತು’ ಎಂದು ಹೇಳಿ ಆ ಶ್ರೀಮಂತ ಅಲ್ಲಿಂದ ನಿರ್ಗಮಿಸಿದ.

ನಷ್ಟಕ್ಕೊಳಗಾಗಿದ್ದ ಉದ್ಯಮಿ ಆ ಶ್ರೀಮಂತ ಕೊಟ್ಟಿದ್ದ ದುಡ್ಡಿನಿಂದ ತನ್ನ ಸಾಲವನ್ನೆಲ್ಲ ತೀರಿಸಿಕೊಳ್ಳಬಹುದಿತ್ತು. ಆದರೆ ಆತ, ‘ಈ ವೃದ್ಧ ದುಡ್ಡಿನ ಬದಲು ನನ್ನೊಳಗೆ ಒಂದಿಷ್ಟು ಧೈರ್ಯ ತುಂಬಿದ್ದಿದ್ದರೆ ಈಗಿನ ದುಸ್ಥಿತಿಯಿಂದ ಹೊರಬರುತ್ತಿದ್ದೆ’ ಎಂದುಕೊಂಡ. ನಂತರ ಆತ, ‘ಇಲ್ಲ, ಈ ಚೆಕ್‌ನಲ್ಲಿರುವ ಹಣವನ್ನು ನಾನು ಡ್ರಾ ಮಾಡಿಕೊಳ್ಳುವುದಿಲ್ಲ. ನಾನು ಯಾರಿಗೆಲ್ಲ ದುಡ್ಡು ಕೊಡಬೇಕಿದೆಯೋ ಅವರಲ್ಲಿ ನನ್ನ ಪರಿಸ್ಥಿತಿ ಹೇಳಿಕೊಂಡು ವಿನಂತಿಸುತ್ತೇನೆ.

ಒಂದೊಮ್ಮೆ ಪ್ರಯೋಜನವಾಗದಿದ್ದರೆ ಕೊನೆಗೆ ಈ ಚೆಕ್ಕನ್ನು ಡ್ರಾ ಮಾಡುತ್ತೇನೆ’ ಎಂದು ಆಲೋಚಿಸಿ ಅಲ್ಲಿಂದ ಹೊರಟ. ಈ
ಧೈರ್ಯ ಮೂಡುತ್ತಿದ್ದಂತೆ, ‘ಎಲ್ಲ ಕಷ್ಟಗಳಿಂದ ಆಚೆ ಬರುತ್ತೇನೆ, ಇನ್ನೂ ಕಷ್ಟಪಟ್ಟು ದುಡಿಯುತ್ತೇನೆ’ ಎನ್ನುತ್ತ ಹುಮ್ಮಸ್ಸು
ಹೆಚ್ಚಿಸಿಕೊಂಡ. ತಾನು ದುಡ್ಡು ಕೊಡಬೇಕಿದ್ದವರೊಂದಿಗೆ ಮಾತನಾಡಿದಾಗ ಎಲ್ಲರೂ ಒಪ್ಪಿಕೊಂಡರು. ನಂತರ ಆತ ಮತ್ತೆ
ಕೆಲಸ ಶುರುಮಾಡಿದ. ಕೆಲದಿನಗಳಲ್ಲೇ ಉದ್ಯಮ ಹಳಿಗೆ ಬಂದು ಅವನ ಕೈಹಿಡಿಯಿತು. ಆರು ತಿಂಗಳಲ್ಲಿ ಸಾಲಗಳನ್ನೆಲ್ಲ ತೀರಿಸಿದ.

ಒಂದು ವರ್ಷವೂ ಕಳೆಯಿತು. ಆಗ ಅದೇ ಉದ್ಯಾನಕ್ಕೆ ಅದೇ ಸಮಯಕ್ಕೆ ಹೋದಾಗ, ಆ ಶ್ರೀಮಂತನೂ ಅಲ್ಲಿಗೆ ಬಂದ.
ಇನ್ನೇನು ಅವನಿಗೆ ಹಣ ಮರಳಿಸಬೇಕು ಎನ್ನುವಷ್ಟರಲ್ಲಿ, ಒಬ್ಬ ನರ್ಸ್ ಮತ್ತು ಆಸ್ಪತ್ರೆಯ ಸಿಬ್ಬಂದಿ ಓಡಿಬಂದು ಆ ಶ್ರೀಮಂತ ನನ್ನು ಹಿಡಿದುಕೊಂಡು ಆಸ್ಪತ್ರೆಯ ವ್ಯಾನ್‌ನೊಳಗೆ ಸೇರಿಸಿದರು. ಗೊಂದಲಗೊಂಡ ಉದ್ಯಮಿ, ‘ಈ ಊರಿಗೇ ದೊಡ್ಡ ಶ್ರೀಮಂತರು ಅವರು, ಅವರನ್ಯಾಕೆ ಹೀಗೆ ಹಿಡಿದು ಕರೆದೊಯ್ಯುತ್ತಿದ್ದೀರಿ?’ ಎಂದು ಕೇಳಿದಾಗ ಆ ನರ್ಸು, ‘ಅಯ್ಯೋ, ಅವರು ನಮ್ಮ ಆಸ್ಪತ್ರೆಯಿಂದ ತಪ್ಪಿಸಿಕೊಂಡು ತಿರುಗುತ್ತಿದ್ದ ಒಬ್ಬ ಮಾನಸಿಕ ರೋಗಿ.

ತನಗೆ ಯಾರೇ ಸಿಕ್ಕರೂ ಈ ಊರಿನ ಶ್ರೀಮಂತ ಎಂದು ಪರಿಚಯಿಸಿಕೊಂಡು ದೊಡ್ಡ ಮೊತ್ತದ ಚೆಕ್ ಬರೆದುಕೊಡೋದು ಅವರ ಚಾಳಿ’ ಎಂದು ಹೇಳಿ ಅಲ್ಲಿಂದ ನಿರ್ಗಮಿಸಿದಳು! ಹಾಗಿದ್ದರೆ, ಹತಾಶ ಉದ್ಯಮಿಯ ಬದುಕಲ್ಲಿ ಪವಾಡವಾಗಿದ್ದಾದರೂ ಹೇಗೆ? ಆ ವಯೋವೃದ್ಧ ಕೊಟ್ಟಿದ್ದ ಚೆಕ್ಕನ್ನು ನಗದು ಮಾಡಿಸಿಕೊಳ್ಳುವ ಹಪಹಪಿ ತೋರದ ಉದ್ಯಮಿಯಲ್ಲಿ ಸುರಿಸಿದ, ‘ಹೇಗಿದ್ದರೂ ನನ್ನ ಬಳಿ ದೊಡ್ಡ ಮೊತ್ತದ ಚೆಕ್ ಇದೆ’ ಎಂಬ ಆತ್ಮವಿಶ್ವಾಸವೇ ಅವನನ್ನು ಕೈಹಿಡಿದು ಯಶಸ್ಸಿನ ಹಾದಿಯಲ್ಲಿ ನಡೆಸಿತ್ತು.

ಮೊದಲಿಗಿಂತ ದುಪ್ಪಟ್ಟು ಉತ್ಸಾಹದಲ್ಲಿ ತನ್ನ ಕೆಲಸದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿತ್ತು! ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಯಾವಾಗ ನಾವು ನಮ್ಮನ್ನು ನಂಬುತ್ತಾ ಹೋಗುತ್ತೇವೋ, ನಮ್ಮ ಬದುಕೂ ಬದಲಾಗುತ್ತ ಹೋಗುತ್ತದೆ. ನಮ್ಮೊಳಗಿನ ನಂಬಿಕೆ ನಮ್ಮ ಆತ್ಮವಿಶ್ವಾಸವನ್ನು ಎತ್ತರಿಸುತ್ತದೆ. ಅದುವೇ ಮ್ಯಾಜಿಕ್‌ನಂತೆ ಕೆಲಸ ಮಾಡತೊಡಗುತ್ತದೆ.
ಇದು ೭೦೦ ವರ್ಷ ಹಿಂದಿನ ನೈಜಕಥೆ. ಸ್ಕಾಟ್ಲೆಂಡ್ ರಾಜ ರಾಬರ್ಟ್ ಬ್ರೂಸ್ ಇದರ ಹೀರೋ. ದೇಶಕ್ಕೆ ಬ್ರಿಟಿಷರಿಂದ
ಸ್ವಾತಂತ್ರ್ಯ ತಂದುಕೊಡಬೇಕೆಂದು ಪಣತೊಟ್ಟು ಆತ ಬ್ರಿಟಿಷರ ವಿರುದ್ಧ ಸಮರ ಸಾರಿದ.

ದುರದೃಷ್ಟವಶಾತ್ ಬ್ರಿಟಿಷರ ಸೇನೆ ದೊಡ್ಡದಿತ್ತು, ಅವರಲ್ಲಿ ಪರಿಣಾಮಕಾರಿ ಶಸ್ತ್ರಾಸ್ತ್ರಗಳಿದ್ದವು. ಹೀಗಾಗಿ ಬ್ರೂಸ್ ಸೇನೆಯನ್ನು ಬ್ರಿಟಿಷರು ಸುಲಭವಾಗಿ ಸೋಲಿಸಿಬಿಟ್ಟರು. ಅವರಿಂದ ತಪ್ಪಿಸಿಕೊಂಡ ಬ್ರೂಸ್ ಕಾಡಿನ ಗುಹೆಯೊಂದರಲ್ಲಿ ಅವಿತ. ಕೊರೆವ ಚಳಿ, ಯುದ್ಧದ ಆಯಾಸ, ಗಾಯದ ರಕ್ತಸ್ರಾವಗಳಿಂದಾಗಿ ಹತಾಶನಾಗಿಬಿಟ್ಟ. ಜತೆಗೆ ಸೋಲಿನ ಅವಮಾನ. ಹೀಗಾಗಿ ‘ಮತ್ತೆಂದಿಗೂ ದೇಶಕ್ಕೆ ಮರಳಬಾರದು’ ಎಂದು ಆಲೋಚಿಸತೊಡಗಿದ. ಹೀಗೇ ಮಲಗಿರುವಾಗ ಜೇಡವೊಂದು ಬಲೆ ಹೆಣೆಯುತ್ತಿರುವುದು ಅವನಿಗೆ ಕಂಡಿತು. ಬಲೆ ಹೆಣೆಯುವುದು ಜೇಡಕ್ಕೆ ಸುಲಭದ ಕೆಲಸವಾಗಿರಲಿಲ್ಲ.

ಒಂದು ಕಡೆಯಿಂದ ಹೆಣೆದುಕೊಂಡು ಬಂದಂತೆ ಎಲ್ಲಿಂದಲೋ ಗಾಳಿಬೀಸಿ ಹೆಣಿಗೆಗಳೆಲ್ಲ ಕಿತ್ತುಹೋಗುತ್ತಿದ್ದವು. ಆದರೂ ಪಟ್ಟುಬಿಡದ ಜೇಡ ಬಲೆಯನ್ನು ಹೊಸದಾಗಿ ಕಟ್ಟುತ್ತಲೇ ಇತ್ತು. ಗಾಳಿಯನ್ನು ಸೋಲಿಸಿ ತನ್ನ ಕಾರ್ಯಭಾರ ಮುಗಿಸುವಲ್ಲಿ ಅದು ಕೊನೆಗೂ ಯಶಸ್ವಿಯಾಯಿತು. ಈ ಕಸರತ್ತನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಬ್ರೂಸ್, ‘ಪುಟ್ಟಜೀವಿಯೊಂದು ಸತತ ಯತ್ನದಿಂದ ಗಾಳಿಯನ್ನು ಸೋಲಿಸಿ ಯಶಸ್ವಿಯಾಗಬೇಕಾದರೆ, ಮನುಷ್ಯನಾದ ತನಗೇಕೆ ಅದು ಸಾಧ್ಯವಾಗಬಾರದು?’ ಎಂದು ಪ್ರಶ್ನಿಸಿಕೊಂಡು ಸಂಕಲ್ಪಿಸಿದ.

ಗಾಯ ಮಾಗಿಸಿಕೊಂಡು ಮತ್ತೆ ಸೈನ್ಯ ಕಟ್ಟಿ, ೮ ವರ್ಷಗಳ ನಂತರ ಬ್ರಿಟಿಷರ ವಿರುದ್ಧ ಹೋರಾಡಿ ಗೆದ್ದ. ಹೀಗೆ ಯುದ್ಧ
ಗೆಲ್ಲಬಹುದೆಂದು ಸ್ವತಃ ಬ್ರೂಸ್‌ಗೂ ಗೊತ್ತಿರಲಿಲ್ಲ. ಇಲ್ಲಿ ಕೆಲಸ ಮಾಡಿದ್ದು ಆತನ ಬದ್ಧತೆ. ಏರಿಳಿತಗಳ ನಡುವೆಯೂ ಪಯಣ
ಮುಂದುವರಿಸುವುದಿದೆಯಲ್ಲಾ, ಅದು ನಮ್ಮನ್ನು ಎತ್ತರಕ್ಕೇರಿಸುತ್ತದೆ, ನಮ್ಮಲ್ಲಿ ಆತ್ಮವಿಶ್ವಾಸವನ್ನು ತುಂಬುತ್ತದೆ.

ಆತ್ಮವಿಶ್ವಾಸದ ಮಟ್ಟಕ್ಕೂ ಆಲೋಚನಾ ಕ್ರಮಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದು ಈ ಕಥೆಗಳಿಂದ ಅರ್ಥವಾಗುತ್ತದೆ. ಯಾರ ಆಲೋಚನೆಗಳು ಗಟ್ಟಿಯಾಗಿರುತ್ತವೋ ಅವರಲ್ಲಿ ಹೆಚ್ಚಿನ ಆತ್ಮವಿಶ್ವಾಸವಿರುತ್ತದೆ. ಆಲೋಚನೆಗಳು ದುರ್ಬಲ ವಾಗಿದ್ದಲ್ಲಿ, ಆತ್ಮವಿಶ್ವಾಸವೂ ಕುಸಿದಿರುತ್ತದೆ. ಇಂಥ ಕುಗ್ಗಿದ ಆತ್ಮವಿಶ್ವಾಸಕ್ಕೆ ನಮ್ಮ ಆಲೋಚನೆಗಳು ಮಾತ್ರವಲ್ಲದೆ
ನಾವು ಬೆಳೆದ ಪರಿಸರ, ಬೆಂಬಲವಿಲ್ಲದ ಮನೆಯ ವಾತಾವರಣ, ಸದಾ ಎರಗುವ ಟೀಕೆಗಳು, ಸ್ವತಃ ಕಠಿಣವಾಗಿ ಜಡ್ಜ್
ಮಾಡಿಕೊಳ್ಳುವಿಕೆ, ಸೋಲಿನ ಭಯ ಇವೆಲ್ಲವೂ ಕಾರಣವಾಗುತ್ತವೆ.

ಬದುಕಲ್ಲಿ ಆತ್ಮವಿಶ್ವಾಸ ಮುಖ್ಯವೇಕೆ? ಅದು ನಮ್ಮಲ್ಲಿ ಹೆಚ್ಚಿನ ಸಾಧನೆಯ ಪ್ರಜ್ಞೆ ಮೂಡಿಸಿ, ಬದುಕು ಸಂಪೂರ್ಣವೆನ್ನುವ ಅನುಭವವನ್ನು ಕಟ್ಟಿಕೊಡುತ್ತದೆ. ನಮ್ಮ ಮೇಲಿನ ನಮ್ಮ ನಂಬಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತ ಹೋಗುತ್ತದೆ. ‘ಈ ಕೆಲಸವನ್ನು ಮಾಡಬಲ್ಲೆ’ ಎಂದು ನಮ್ಮನ್ನೇ ಪ್ರೇರೇಪಿಸಿಕೊಳ್ಳುವಂತೆ ಮಾಡುತ್ತದೆ, ಮಾತಾಡುವಾಗ ಧೈರ್ಯ ನೀಡುತ್ತದೆ, ಕನಸುಗಳನ್ನು ಬೆನ್ನತ್ತುವ ‘ಇಚ್ಛಾಶಕ್ತಿ’ಯನ್ನು ಕಟ್ಟಿಕೊಡುತ್ತದೆ. ಆತ್ಮವಿಶ್ವಾಸದಿಂದಾಗಿ ಬದುಕಲ್ಲಿ ಪ್ರಗತಿಯ ಪ್ರಖರ ಬೆಳಕು ಮೂಡತೊಡಗುತ್ತದೆ.

ಆತ್ಮವಿಶ್ವಾಸ ನಮ್ಮ ವ್ಯಕ್ತಿತ್ವದ ಬೆಳವಣಿಗೆಗೆ ಪೂರಕವಾಗುತ್ತದೆ. ಆತ್ಮವಿಶ್ವಾಸ ಹೆಚ್ಚುತ್ತ ಹೋದಂತೆ ಅನುದಿನವೂ ನಮ್ಮನ್ನು ಸುಧಾರಿಸಿಕೊಳ್ಳುತ್ತ, ಉತ್ತಮವಾಗಿಸಿಕೊಳ್ಳುತ್ತ ಹೋಗುತ್ತೇವೆ. ಹೀಗಾಗಿ ನಮ್ಮೊಳಗಿನ ಉತ್ತಮಿಕೆಗಳನ್ನು ಹೊರತೆಗೆಯಲು
ಸಾಧ್ಯವಾಗುತ್ತದೆ. ನಮ್ಮಲ್ಲಿನ ಕಲಿಕಾಸಕ್ತಿಯನ್ನು ವೃದ್ಧಿಸುವ ಆತ್ಮವಿಶ್ವಾಸ, ಬದುಕಿನ ಪಯಣದಲ್ಲಿ ಅನುದಿನವೂ ನಮ್ಮನ್ನು
ಬೆಳೆಸುತ್ತ ಹೋಗುತ್ತದೆ.

ಹೀಗೆ ದಿನವೂ ಬೆಳೆಯುವುದು ಹೇಗೆ? ವಿವಿಧ ವಿಚಾರಗಳ ಜ್ಞಾನ ಪಡೆಯುತ್ತ, ಪುಸ್ತಕಗಳನ್ನು ಓದುತ್ತ, ಸಾಕ್ಷ್ಯಚಿತ್ರ ಮತ್ತು ಅರ್ಥಪೂರ್ಣ ವಿಡಿಯೋಗಳನ್ನು ನೋಡುತ್ತ, ಇತರರೊಂದಿಗೆ ಸಂವಹಿಸುತ್ತಲೇ ನಮ್ಮ ದೌರ್ಬಲ್ಯಗಳತ್ತ ಗಮನ ನೀಡಿ, ವ್ಯಕ್ತಿತ್ವವನ್ನು ಮತ್ತಷ್ಟು ಉತ್ತಮವಾಗಿಸಿಕೊಳ್ಳಲು ಯತ್ನಿಸುವುದರಲ್ಲಿ ಈ ಆತ್ಮವಿಶ್ವಾಸದ ಬೆಳವಣಿಗೆಯಿರುತ್ತದೆ.

ನಮ್ಮ ಗುರಿಮುಟ್ಟಲು ಎಂದಿಗೂ ಸಹಕಾರಿಯಾಗುವ ಆತ್ಮವಿಶ್ವಾಸ, ಕನಸುಗಳನ್ನು ಬೆನ್ನತ್ತಲು ಬೇಕಾದ ಉತ್ಸಾಹವನ್ನು
ನೀಡುತ್ತದೆ. ನಮ್ಮನ್ನು ಆರಾಮದ ನೆಲೆಯಿಂದ ಹೊರತಂದು, ನಮ್ಮಲ್ಲಿ ಹರಳುಗಟ್ಟಿರುವ ಸಾಮರ್ಥ್ಯ-ದಕ್ಷತೆಯನ್ನು ನಮಗೆ
ಪರಿಚಯಿಸುತ್ತದೆ. ನಮ್ಮೊಳಗೊಂದು ಸಕಾರಾತ್ಮಕತೆ ಮೂಡಿಸುತ್ತ ಹೋಗುವ ಆತ್ಮವಿಶ್ವಾಸ, ತನ್ಮೂಲಕ ಭಯ-ಉದ್ವಿಗ್ನತೆ-
ಒತ್ತಡಗಳನ್ನು ತೊಡೆದು ಹಾಕಿ ಗೆಲ್ಲುವ ಉತ್ಸಾಹವನ್ನು ತುಂಬುತ್ತದೆ. ಸೌಹಾರ್ದಯುತ ಸಂಬಂಧಗಳನ್ನು ಕಟ್ಟಿಕೊಳ್ಳಲು
ಪೂರಕವಾಗುತ್ತದೆ ಹಾಗೂ ಭಾವನೆಗಳನ್ನು ಸಮತೋಲನದಲ್ಲಿ ಇಟ್ಟುಕೊಳ್ಳುವಲ್ಲಿ ಪ್ರಮುಖಪಾತ್ರ ವಹಿಸುತ್ತದೆ.