ಅಶ್ವತ್ಥಕಟ್ಟೆ
ರಂಜಿತ್ ಎಚ್.ಅಶ್ವತ್ಥ
‘ಕರ್ನಾಟಕ ಆಕ್ರಮಿತ ಪ್ರದೇಶ ವಾಪಸು ಪಡೆಯುತ್ತೇವೆ’ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಹೇಳಿದರೆ, ‘ಕರ್ನಾಟಕದ
ಒಂದಿಂಚೂ ನೆಲವನ್ನು ಬಿಟ್ಟುಕೊಡುವುದಿಲ್ಲ’ ಎಂದು ಕರ್ನಾಟಕದ ಮುಖ್ಯಮಂತ್ರಿಗಳು ಪ್ರತ್ಯುತ್ತರ ನೀಡುತ್ತಾರೆ.
ಮುಖ್ಯಮಂತ್ರಿಗಳಾದವರ ಬಾಯಲ್ಲಿಯೇ ಈ ಮಾತು ಬಂದರೆ, ಇನ್ನು ಜನಸಾಮಾನ್ಯರು, ಪಕ್ಷದ ಕಾರ್ಯಕರ್ತರು ಏನೆಲ್ಲ ಮಾತನಾಡಿರಬಹುದು ಎಂದು ಯೋಚಿಸಿ. ಹೌದು ಕಳೆದ ವಾರ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೀಡಿದ ‘ಕರ್ನಾಟಕ ಆಕ್ರಮಿತ ಪ್ರದೇಶ ವಾಪಸು ಪಡೆಯುತ್ತೇವೆ’ ಈ ಹೇಳಿಕೆ ಕರ್ನಾಟಕ – ಮಹಾರಾಷ್ಟ್ರದಲ್ಲಿ ಸಂಚಲನವನ್ನು ಮೂಡಿಸಿತ್ತು. ಠಾಕ್ರೆಯ ಈ ಮಾತು ಹೊರಬರುತ್ತಿದ್ದಂತೆ, ಬೆಳಗಾವಿ ಹಾಗೂ ಸುತ್ತಮುತ್ತಲಿನ ಗಡಿ ಜಿಲ್ಲೆಗಳಲ್ಲಿ ಪ್ರತಿಭಟನೆ, ಟೈರ್ಗೆ ಬೆಂಕಿ, ಗಡಿ ಬಂದ್ಗಳು ಶುರುವಾದವು.
ಠಾಕ್ರೆ ಹೇಳಿಕೆಗೆ ಪ್ರತಿಯಾಗಿ ಕರ್ನಾಟಕದ ಒಂದಿಂಚೂ ಭೂಮಿಯನ್ನು ಮಹಾರಾಷ್ಟ್ರಕ್ಕೆ ಬಿಟ್ಟುಕೊಡುವುದಿಲ್ಲ ಎಂದು ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪ ವೀರಾವೇಶದ ಮಾತುಗಳನ್ನು ಆಡಿದರು. ಇನ್ನು ಕೆಲ ಸಚಿವರು ಮಹಾಜನ್
ವರದಿಯೇ ಅಂತಿಮ. ಆದ್ದರಿಂದ ನಾವು ಯಾವುದೇ ಜಾಗ ನೀಡುವುದಿಲ್ಲ. ಮಹಾರಾಷ್ಟ್ರದ ಕೆಲ ಭಾಗ ಕರ್ನಾಟಕಕ್ಕೆ
ಸೇರಬೇಕು. ಅದಕ್ಕೆ ಪ್ರಯತ್ನಿಸುತ್ತೇವೆ ಎನ್ನುವ ಮಾತನ್ನು ಆಡಿದರು.
ಈ ರೀತಿ ಹೇಳಿಕೆ ನೀಡುತ್ತಿರುವ ನಾಯಕರಿಗೆ ಮಹಾಜನ್ ವರದಿಯಲ್ಲಿ ಏನಿದೆ ಎನ್ನುವುದನ್ನು ಮೊದಲು ತಿಳಿಸುವ
ಅನಿವಾರ್ಯತೆಯಿದೆ. ಈಗಾಗಲೇ ಮಹಾಜನ್ ವರದಿ ಸರಿಯಿಲ್ಲವೆಂದು ಮಹಾರಾಷ್ಟ್ರ ಸರಕಾರ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದೆ. ಈ ವಿಚಾರಣೆಯಲ್ಲಿ ಎರಡೂ ರಾಜ್ಯಗಳಿಗೂ ಆಸಕ್ತಿ ಇಲ್ಲ ಎನ್ನುವ ಕಾರಣಕ್ಕೋ ಏನೋ ಸುಮಾರು ಏಳು ವರ್ಷದ ಹಿಂದೆ ‘ಯಥಾಸ್ಥಿತಿ’ ಕಾಯ್ದುಕೊಳ್ಳುವಂತೆ ಸುಪ್ರೀಂ ಸೂಚನೆ ನೀಡಿರುವುದು ಬಿಟ್ಟರೆ ಯಾವುದೇ ಅಪ್ಡೇಟ್ಸ್ ಇಲ್ಲಿಯವರೆಗೆ ಇಲ್ಲ.
ಮಹಾಜನ್ ವರದಿ ಕರ್ನಾಟಕ – ಮಹಾರಾಷ್ಟ್ರದ ಪ್ರಮುಖ ವಿಷಯವಾದರೂ, ದಶಕಗಳ ಹಿಂದಿನ ವರದಿಯಾಗಿರುವುದರಿಂದ, ಕರ್ನಾಟಕ – ಮಹಾರಾಷ್ಟ್ರ – ಕೇರಳ ಗಡಿ ಹಂಚಿಕೆಗೆ ಸಂಬಂಽಸಿದ ವರದಿ ಎಂದು ಗೊತ್ತಿದ್ದರೂ ಅದರಲ್ಲಿರುವ ಸೂಕ್ಷ್ಮ ವಿಷಯ ಗಳ ಬಗ್ಗೆ ಮಾಹಿತಿಯ ಕೊರತೆಯಿದೆ. ಮಹಾಜನ್ ಸಮಿತಿಯ ವರದಿಯಲ್ಲಿ ಏನಿದೆ ಎನ್ನುವುದನ್ನು ಹೇಳುವ ಮೊದಲು, ಈ ಸಮಿತಿ ಯಾವ ಕಾರಣಕ್ಕೆ ಅಸ್ತಿತ್ವಕ್ಕೆ ಬಂತು ಎನ್ನುವುದನ್ನು ನೋಡಬೇಕಿದೆ.
ದೇಶದ ಸ್ವಾತಂತ್ರ್ಯ ಪಡೆದ ಬಳಿಕ ರಾಜ್ಯಗಳನ್ನು ಭಾಷೆಯ ಆಧಾರದಲ್ಲಿ ವಿಂಗಡಿಸಲು ಹಾಗೂ ಗಡಿ ನಿರ್ಣಯ ಮಾಡಲು 1953 ರಲ್ಲಿ ಕೇಂದ್ರ ಸರಕಾರ ಫಝಲ್ ಅಲಿ ಅವರ ನೇತೃತ್ವದಲ್ಲಿ ರಾಜ್ಯಗಳ ಪುನರ್ ವಿಂಗಡಣಾ ಆಯೋಗವನ್ನು ರಚನೆ ಮಾಡಿತು. ಕರ್ನಾಟಕ, ಆಂಧ್ರ ಪ್ರದೇಶ, ಮಹಾರಾಷ್ಟ್ರ, ಕೇರಳ ಸೇರಿ ಒಟ್ಟು 14 ರಾಜ್ಯ ಹಾಗೂ 6 ಕೇಂದ್ರಾಡಳಿತ ಪ್ರದೇಶಗಳ ಗಡಿ ನಿರ್ಣಯ ಮಾಡುವ ಜವಾಬ್ದಾರಿಯನ್ನು ಈ ಸಮಿತಿಗೆ ವಹಿಸಲಾಯಿತು.
ಈ ವರದಿಯ ಪ್ರಕಾರ ಆಗಿನ ಬಾಂಬೆ ಪ್ರಾಂತ್ಯದ ಭಾಗವಾಗಿದ್ದ ಬೆಳಗಾವಿ ಕರ್ನಾಟಕಕ್ಕೆ ಸೇರಿತು. ಅಂದಿನಿಂದ ಆರಂಭವಾದ ಈ ಗಡಿ ವಿವಾದ ಇಂದಿಗೂ ಜೀವಂತವಾಗಿದೆ. ಈ ಬಾಂಬೆ ಪ್ರಾಂತ್ಯದಿಂದ ಕರ್ನಾಟಕ್ಕೆ ಬರಲು ಪ್ರಮುಖ ಕಾರಣವೆಂದರೆ, ವರದಿಯ ಸಮಯದಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಸುಮಾರು 8.81 ಲಕ್ಷ ಜನಸಂಖ್ಯೆಯಿತ್ತು. ಅದರಲ್ಲಿ ಶೇ.65ಕ್ಕಿಂತ ಹೆಚ್ಚು ಮಂದಿ ಕನ್ನಡ ಮಾತನಾಡುವವರು ಇದ್ದರು.
ಇನ್ನುಳಿದ 25ರಷ್ಟು ಮಂದಿ ಮರಾಠಿಗರಿದ್ದರು. ಆದ್ದರಿಂದ ಬೆಳಗಾವಿಯನ್ನು ಕರ್ನಾಟಕಕ್ಕೆ ಸೇರಿಸಲಾಯಿತು. ಅಂದಿನಿಂದ ಶುರುವಾಗಿರುವ ಕಿತ್ತಾಟಕ್ಕೆ ಕೊನೆಯಿಲ್ಲವಾಗಿದೆ. ಬೆಳಗಾವಿ ನಮಗೆ ಬೇಕು ಎಂದು ಒತ್ತಡ ಶುರುವಾಗಿದ್ದು, ಮಹಾರಾಷ್ಟ್ರ ಸೇನಾಪತಿ ಬಾಪಟ್ ಅವರಿಂದ. ಮಹಾರಾಷ್ಟ್ರದ ಒತ್ತಾಯಕ್ಕೆ ಮಣಿದ ಕೇಂದ್ರ ಸರಕಾರ 1966ರ ಅಕ್ಟೋಬರ್ನಲ್ಲಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮೆಹೆರ್ ಚಂದ್ ಮಹಾಜನ್ ಅವರ ನೇತೃತ್ವದಲ್ಲಿ ತಜ್ಞರ ಸಮಿತಿ ರಚನೆ ಮಾಡಿತು. ಆದ್ದರಿಂದಲೇ ಸಮಿತಿ ಮಹಾಜನ್ ಎನ್ನುವ ಹೆಸರು ಬಂದಿತ್ತು. ಈ ಸಮಿತಿ ರಚನೆಯಾಗುತ್ತಿದ್ದಂತೆ ಮಹಾರಾಷ್ಟ್ರದ ಅಂದಿನ ಸಿಎಂ ವಿ.ಪಿ ನಾಯಕ್, ವರದಿಯಲ್ಲಿ ಏನೇ ಹೇಳಿದ್ದರೂ ಅದನ್ನು ಮಹಾರಾಷ್ಟ್ರ ಒಪ್ಪಿಕೊಳ್ಳಲಿದೆ ಎಂದು ಹೇಳಿದ್ದರು.
ಇದಾದ ಬಳಿಕ ಒಂದು ವರ್ಷಗಳ ಕಾಲ ಅಧ್ಯಯನ ನಡೆಸಿದ ಈ ತಂಡ 1967ರ ಆಗಸ್ಟ್ನಲ್ಲಿ ತನ್ನ ವರದಿ ಸಲ್ಲಿಸಿತು. ವರದಿ ಯನ್ನು ನೋಡಿದರೆ ಕರ್ನಾಟಕಕ್ಕೆ ಸ್ವಲ್ಪ ಸಿಹಿಯೊಂದಿಗೆ ಕಹಿಯೂ ಇದೆ ಎಂದರೆ ತಪ್ಪಾಗುವುದಿಲ್ಲ. ಮಹಾರಾಷ್ಟ್ರ ಸರಕಾರ ತನ್ನ ಹಕ್ಕು ಸ್ಥಾಪಿಸುತ್ತಿದ್ದ 247 ಹಳ್ಳಿಗಳು ಕರ್ನಾಟಕದ್ದು, ಬೆಳಗಾವಿಯೂ ಕರ್ನಾಟಕದ್ದು. ಇದಿಷ್ಟೇ ಅಲ್ಲದೇ ದಕ್ಷಿಣ ಸೋಲಾಪುರದ 65 ಹಳ್ಳಿಗಳು, ಅಕ್ಕಲಕೋಟೆ ತಾಲೂಕು, ಜತ್ತ ತಾಲೂಕಿನ 44 ಹಳ್ಳಿಗಳು, ಗಡಹಿಂಗ್ಲಜ ತಾಲೂಕಿನ 15 ಹಳ್ಳಿಗಳು ಕರ್ನಾಟಕಕ್ಕೆ ಸೇರಬೇಕು ಎಂದು ಸಮಿತಿ ಶಿಫಾರಸು ಮಾಡಿತು.
ಈ ಲಾಭ ಮಾತ್ರವಲ್ಲದೇ, ಕರ್ನಾಟಕಕ್ಕೆ ನಷ್ಟವೂ ಇದೆ ಎನ್ನುವುದನ್ನು ಮರೆಯಬಾರದು. ಬೆಳಗಾವಿ ತಾಲೂಕಿನ 12 ಹಳ್ಳಿಗಳು,
ಖಾನಾಪುರ ತಾಲೂಕಿನ 152 ಹಳ್ಳಿಗಳು, ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲೂಕಿನ 41 ಹಳ್ಳಿಗಳು, ಹುಕ್ಕೇರಿ ತಾಲೂಕಿನ 9 ಹಳ್ಳಿ ಗಳು, ಇತಿಹಾಸ ಪ್ರಸಿದ್ಧ ನಂದಗಡ, ರಕ್ಕಸಕೊಪ್ಪ ಜಲಾಶಯ ಇವೆ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಶಿಫಾರಸ್ಸಿನಲ್ಲಿ ಹೇಳಲಾ ಗಿತ್ತು. ಇದಿಷ್ಟೇ ಅಲ್ಲದೇ ಮಹಾಜನ್ ವರದಿಯನ್ನು ಯಥಾವತ್ತಾಗಿ ಜಾರಿಗೆ ತಂದರೆ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾ ಲಯವೂ ಮಹಾರಾಷ್ಟ್ರದಲ್ಲಿಯೇ ಇರಬೇಕು !
ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದು ಎನ್ನುವ ಅಂಶ ವರದಿಯಲ್ಲಿ ಬರುತ್ತಿದ್ದಂತೆ, ಮಹಾರಾಷ್ಟ್ರ ಸರಕಾರ ಪುನಃ ತಕರಾರು ಶುರು ಮಾಡಿತ್ತು. ಅಲ್ಲಿಂದ ಸರಿಸುಮಾರು ಐದು ದಶಕ ಕಳೆಯುತ್ತಾ ಬಂದರೂ, ಈ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಈಗಲೂ ಮಹಾ ರಾಷ್ಟ್ರದಲ್ಲಿರುವ ಸೋಲಾಪುರ, ಜತ್ತ, ಅಕ್ಕಲಕೋಟೆಯ ಶೇ.60ಕ್ಕೂ ಹೆಚ್ಚು ಜನರ ಕರ್ನಾಟಕಕ್ಕೆ ತಮ್ಮ ಪ್ರದೇಶವನ್ನು ಸೇರಿಸ ಬೇಕು ಎನ್ನುವ ವಾದವನ್ನು ಒಪ್ಪುತ್ತಿದ್ದಾರೆ.
ಇದಕ್ಕೆ ಕಾರಣ, ಮಹಾರಾಷ್ಟ್ರ ಸರಕಾರದಿಂದ ಈ ಗಡಿ ನಾಡ ಹಳ್ಳಿಗಳನ್ನು ನಿರ್ಲಕ್ಷ್ಯ ಮಾಡಿರುವುದು. ಕೇವಲ ಚುನಾವಣಾ ಸಮಯದಲ್ಲಿ ಈ ಪ್ರದೇಶಗಳನ್ನು ನೆನಪಿಸಿಕೊಳ್ಳುವ ಅಲ್ಲಿನ ರಾಜಕೀಯ ಪಕ್ಷಗಳು, ಚುನಾವಣೆಯಾಗುತ್ತಿದ್ದಂತೆ, ಈ ಊರು ಗಳನ್ನು ಮರೆತುಬಿಡುತ್ತಾರೆ. ಆದರೆ ತತ್ವಿರುದ್ಧ ಎನ್ನುವ ರೀತಿಯಲ್ಲಿ ಕರ್ನಾಟಕ ಮಹಾರಾಷ್ಟ್ರಕ್ಕೆ ಸೇರಬೇಕಿರುವ ಹಳ್ಳಿಗಳನ್ನು ಅಭಿವೃದ್ಧಿಪಡಿಸಿವೆ.
ಆದ್ದರಿಂದಲೇ ಕರ್ನಾಟಕ ತನ್ನ ಹಳ್ಳಿಗಳನ್ನು ಮಹಾರಾಷ್ಟ್ರಕ್ಕೆ ಬಿಟ್ಟುಕೊಡಲು ಸಿದ್ಧವಿಲ್ಲ. ಮಹಾಜನ್ ವರದಿ ಮಂಡನೆ ಯಾದಾಗ, ಈ ಹಳ್ಳಿಗಳು ಅಭಿವೃದ್ಧಿ ಹೊಂದಿರಲಿಲ್ಲ. ಆದ್ದರಿಂದ ಒಂದು ಹಂತಕ್ಕೆ ಕೆಲ ಹಳ್ಳಿಗಳನ್ನು ಮಹಾರಾಷ್ಟ್ರಕ್ಕೆ ನೀಡಿ, ಅಲ್ಲಿನ ಗ್ರಾಮಗಳನ್ನು ಕರ್ನಾಟಕಕ್ಕೆ ಪಡೆಯಲು ಸಿದ್ಧರಿದ್ದರು. ಆದರೀಗ ಗ್ರಾಮಗಳ ಅಭಿವೃದ್ಧಿಗೆ ಕೋಟ್ಯಂತರ ರುಪಾಯಿ ಖರ್ಚು ಮಾಡಲಾಗಿದ್ದು, ಇದೀಗ ಹಳ್ಳಿಗರು ಮಹಾರಾಷ್ಟ್ರಕ್ಕೆ ಸೇರ್ಪಡೆಗೊಳ್ಳಲು ಒಲ್ಲೆ ಎನ್ನುತ್ತಿದ್ದಾರೆ.
ಸುಮಾರು 54 ವರ್ಷಗಳ ಹಿಂದೆ ಸಿದ್ಧಗೊಂಡಿರುವ ವರದಿಯ ಬಗ್ಗೆ ಅನೇಕರಿಗೆ ಮಾಹಿತಿಯಿಲ್ಲ. ರಾಜಕೀಯ ಭಾಷಣದ ವೇಳೆ, ಮಹಾಜನ್ ವರದಿ ಜಾರಿಗೆ ಎನ್ನುವ ಬಹುತೇಕರಿಗೆ, ಇದರಿಂದ ಆಗಬಹುದಾದ ಅನಾಹುತದ ಮಾಹಿತಿಯಿಲ್ಲ. ಒಂದು ವೇಳೆ ಮಹಾಜನ್ ವರದಿಯ ಪ್ರಕಾರ ಹಳ್ಳಿಗಳು ಹಂಚಿಕೆಯಾದರೆ, ಕರ್ನಾಟಕ ಸರಕಾರ ಇಷ್ಟು ದಿನ ಅಭಿವೃದ್ಧಿ ಪಡಿಸಿರುವ ಹಳ್ಳಿ ಗಳನ್ನು ಮಹಾರಾಷ್ಟ್ರಕ್ಕೆ ನೀಡಿ, ಅಭಿವೃದ್ಧಿ ಕಾಣದೇ ಇರುವ ಹಳ್ಳಿಗಳನ್ನು ನಾವು ಪಡೆಯಬೇಕಾಗುತ್ತದೆ. ಆದ್ದರಿಂದ ಮಹಾ ರಾಷ್ಟ್ರ ಗಡಿ ವಿಚಾರವಾಗಿ ಮಾತನಾಡುವಾಗ ಭಾವನಾತ್ಮಕವಾಗಿ ಮಾತನಾಡದೇ ವಸ್ತುಸ್ಥಿತಿ ಏನಿದೆ ಎನ್ನುವುದನ್ನು ನೋಡ ಬೇಕಿದೆ.
ಮಹಾರಾಷ್ಟ್ರದ ಪುಂಡರು ಅಲ್ಲಿನ ರಾಜಕೀಯ ಪರಿಸ್ಥಿತಿಗೆ ಬೆಳಗಾವಿ ನಮ್ಮದು ಎಂದಾಗ, ಕರ್ನಾಟಕದವರು ಮಹಾಜನ್ ವರದಿಯನ್ನು ತೋರಿಸುವ ಬದಲು, ಸುಪ್ರೀಂ ಕೋರ್ಟ್ನಲ್ಲಿರುವ ಪೆಂಡಿಂಗ್ ಕೇಸ್ಗೆ ಶಕ್ತಿ ನೀಡುವ ಕೆಲಸವನ್ನು ಮಾಡಬೇಕಾ ಗಿದೆ. ಅದನ್ನು ಬಿಟ್ಟು ಅವರಂತೆ, ಕರ್ನಾಟಕದ ನಾಯಕರು ಭಾವನಾತ್ಮಕವಾಗಿ ಮಾತನಾಡುವುದರಿಂದ ಒಂದೆರೆಡು ದಿನ ಸುದ್ದಿಯಾಗುತ್ತದೆ ಹೊರತು, ಇನ್ಯಾವ ಸಾಧನೆಯೂ ಆಗುವುದಿಲ್ಲ.
ಇನ್ನು ಎಂಇಎಸ್ ಹಾಗೂ ಶಿನಸೇನೆಯ ನಾಯಕರು ಪ್ರಚಾರಕ್ಕಾಗಿಯೇ ಬೆಳಗಾವಿಯ ವಿಷಯವನ್ನು ಎತ್ತುತ್ತಾರೆ. ಆದರೆ ಜವಾಬ್ದಾರಿಯುತ ಸ್ಥಾನದಲ್ಲಿರುವ, ರಾಜ್ಯವನ್ನು ಮುನ್ನಡೆಸುತ್ತಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬೆಳಗಾವಿ ವಿಷಯ ಎತ್ತಿದ್ದಾಗ ಗಲಾಟೆ ಜೋರಾಯಿತು. ಮಹಾರಾಷ್ಟ್ರದ ರಾಜಕೀಯ ನಾಯಕ ರಿಂದ ಈ ರೀತಿಯ ಹೇಳಿಕೆಗಳು ಬರು ತ್ತಿದ್ದಂತೆ, ಬೆಳಗಾವಿ ಪ್ರಕ್ಷುಬ್ಧವಾಗುತ್ತದೆ. ಒಂದಷ್ಟು ಗಲಾಟೆ, ಪ್ರತಿಭಟನೆ, ಗಡಿ ಬಂದ್ ನಡೆಯುತ್ತದೆ.
ಬಳಿಕ ವಾರ ಅಥವಾ ಎರಡು ವಾರದ ಬಳಿಕ ಈ ವಿವಾದ ಅಲ್ಲಿಯೇ ನಿಂತು ಹೋಗುತ್ತದೆ. ಕಳೆದ ನಾಲ್ಕೈದು ದಶಕಗಳಿಂದ ಬೆಳಗಾವಿ ಗಡಿ ಸಮಸ್ಯೆ ಎದುರಾದಾಗಲೆಲ್ಲ ನಡೆದುಕೊಂಡು ಬಂದಿರುವ ಪರಿಪಾಠ ಇದೆ ಆಗಿದೆ. ಆದರೆ ಎರಡು ಸರಕಾರಗಳು ಇಲ್ಲಿಯವರೆಗೆ ಈ ವಿಷಯವನ್ನು ತಾತ್ವಿಕ ಅಂತ್ಯಕ್ಕೆ ತಗೆದುಕೊಂಡು ಹೋಗಬೇಕು ಎನ್ನುವ ಬಗ್ಗೆ ಗಂಭೀರ ಚಿಂತನೆ ನಡೆಸಿಲ್ಲ.
ಕೇವಲ ರಾಜಕೀಯ ಮೈಲೇಜ್ಗೆ ಪಡೆಯಲು, ವಿಷಯಾಂತರ ಮಾಡುವುದಕ್ಕಾಗಿಯೇ ಮಹಾರಾಷ್ಟ್ರದ ರಾಜಕಾರಣಿಗಳು ಬೆಳಗಾವಿ ಗಡಿ ಕ್ಯಾತೆಯನ್ನು ಪ್ರಸ್ತಾಪಿಸುತ್ತಿದ್ದಾರೆ.
ಈ ರೀತಿ ಆಗಾಗ್ಗೆ ಗಡಿ ವಿಷಯ ಪ್ರಸ್ತಾಪ ಮಾಡುವುದರಿಂದ ಎರಡು ರಾಜ್ಯಗಳ ನಡುವಿನ ಸಾಮರಸ್ಯ ಕ್ಕೆ ಧಕ್ಕೆಯಾಗುವುದಲ್ಲದೇ ಮತ್ತೇನು ಆಗುತ್ತಿಲ್ಲ. ಮಹಾರಾಷ್ಟ್ರದಲ್ಲಿ ಎದುರಾಗುವ ಉಪಚುನಾವಣೆ, ರಾಜಕೀಯ ತಲ್ಲಣಗಳನ್ನು ಸೈಡ್ಲೈನ್ ಮಾಡುವು ದಕ್ಕೆ ಅಲ್ಲಿನ ರಾಜಕಾರಣಿಗಳಿಗೆ ಸಿಗುವ ಏಕೈಕ ಅಸವೆಂದರೆ ಬೆಳಗಾವಿ ಗಡಿ ತಂಟೆ. ಮೊದಲಿಗೆ ಶಿವಸೇನೆಗಿಂತ ಹೆಚ್ಚು ಎಂಇಎಸ್ ಈ ಬಗ್ಗೆ ಪುಂಡಾಟ ಮಾಡುತ್ತಿತ್ತು. ಆದರೆ ಕಳೆದ ವಾರ ಸ್ವತಃ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ‘ಕರ್ನಾಟಕ ಆಕ್ರಮಿತ ಪ್ರದೇಶ’ವೆಂದು ಹೇಳಿರುವುದು ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಂತಾಗಿದೆ.
ಈ ರೀತಿ ಪದೇ ಪದೆ ಬೆಳಗಾವಿ ಗಡಿ ಹಂಚಿಕೆ ಬಗ್ಗೆ ಮಾತನಾಡುವ ಮಹಾರಾಷ್ಟ್ರಕ್ಕೆ ಕರ್ನಾಟಕದಿಂದ ಕೇವಲ ವಾಗ್ಬಾಣಗಳು ಹೋಗುತ್ತಿವೆ ಹೊರತು, ಆಡಳಿತಾತ್ಮಕವಾಗಿ ಅಥವಾ ಲಿಖಿತ ರೂಪದಲ್ಲಿ ಯಾವುದೇ ಸಂದೇಶ ರವಾನೆಯಾಗುತ್ತಿಲ್ಲ. ಹಾಗೆ ನೋಡಿದರೆ, ಕರ್ನಾಟಕ – ಮಹಾರಾಷ್ಟ್ರ ಗಡಿ ಹಂಚಿಕೆ ಪ್ರಕರಣ ಸುಪ್ರೀಂ ಕೋರ್ಟ್ ನಲ್ಲಿರುವುದರಿಂದ, ಕಾನೂನಿನ ಪ್ರಕಾರ ಈ ವಿಷಯವಾಗಿ ಎರಡೂ ರಾಜ್ಯದವರು ಮಾತನಾಡುವಂತಿಲ್ಲ. ಆದರೆ ಮಹಾರಾಷ್ಟ್ರದವರು ಈ ವಿಷಯವನ್ನು ಎತ್ತುತ್ತಿರುವುದ
ರಿಂದ, ಪ್ರಕರಣ ಇತ್ಯರ್ಥವಾಗುವ ತನಕ, ಯಾರೂ ಮಾಡನಾಡುವಂತಿಲ್ಲ ಎನ್ನುವ ಮಧ್ಯಂತರ ಆದೇಶವನ್ನು ಸುಪ್ರೀಂ ಕೋರ್ಟ್ನಿಂದ ಕೊಡಿಸಬಹುದಾಗಿದೆ.
ಕರ್ನಾಟಕ ಸರಕಾರ, ಗಡಿ ಅಭಿವೃದ್ಧಿ ಪ್ರಾಧಿಕಾರಿಗಳು ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕಿದೆ. ಈಗಾಗಲೇ ಪ್ರಕರಣ ಸುಪ್ರೀಂ
ಕೋರ್ಟ್ ಮುಂದೆ ಇರುವಾಗ, ಒಪ್ಪುವುದು – ಬಿಡುವುದು ಎರಡನೇ ಮಾತು. ಆದರೆ ಗಡಿ ವಿಷಯವನ್ನೇ ಪ್ರಸ್ತಾಪಿಸಬಾರದು ಎಂದು ಸೂಚನೆ ನೀಡುವಂತೆ ಸುಪ್ರೀಂ ಕೋರ್ಟ್ ಕರ್ನಾಟಕದ ವತಿಯಿಂದ ಅರ್ಜಿ ಸಲ್ಲಿಸಬಹುದು. ಆದರೆ ಈ ವಿಷಯವಾಗಿ ಇಲ್ಲಿಯವರೆಗೆ ಕರ್ನಾಟಕ ಸರಕಾರ ಗಂಭೀರವಾಗಿ ತಗೆದುಕೊಂಡಂತೆ ಕಾಣುತ್ತಿಲ್ಲ. ಮಹಾರಾಷ್ಟ್ರದವರು ಕೂಗಾಡಿದಾಗ, ನಮ್ಮವರು ಅರಚಾಡಿ ಜನರ ಮುಂದೆ ಹಿರೋಗಳಾಗಲು ಪ್ರಯತ್ನಿಸುತ್ತಿದ್ದಾರೆ ಹೊರತು, ಈ ವಿಷಯ ತಾತ್ವಿಕ ಅಂತ್ಯ ಕಾಣಬೇಕು ಎನ್ನುವ ನಿಟ್ಟಿನಲ್ಲಿ ಯಾವುದೇ ರೀತಿಯ ಗಂಭೀರ ಕ್ರಮಕ್ಕೂ ಸರಕಾರಗಳು ಮುಂದಾಗದಿರುವುದು ಅಚ್ಚರಿಯ ವಿಷಯ.
ಹಾಗೆ ನೋಡಿದರೆ, ಅನೇಕರು ಹೇಳುತ್ತಿರುವಂತೆ ಮಹಾಜನ್ ವರದಿಯನ್ನು ಕೇಂದ್ರ ಸರಕಾರ ಸಂಸತ್ನಲ್ಲಿ ಮಂಡಿಸುವುದು ಸದ್ಯಕ್ಕೆ ಸುಲಭವಿಲ್ಲ. ಮಂಡಿಸಿದರೂ, ಯಾರು ಈ ಕಾಯಿದೆಯ ಪರ – ವಿರೋಧ ನಿಲ್ಲುತ್ತಾರೆ ಎನ್ನುವುದನ್ನು ನೋಡಬೇಕು. ಈ ಹಿಂದೆ 1970ರಲ್ಲಿ ಮಂಡನೆಯಾದ ಮಹಾಜನ್ ವರದಿ ಏನಾಯಿತು ಎನ್ನುವುದೇ ಬಹುತೇಕರಿಗೆ ತಿಳಿದಿಲ್ಲ.
ಇದೀಗ ಪುನಃ ಮಹಾಜನ್ ವರದಿಯನ್ನು ಮಂಡಿಸಬೇಕು ಎನ್ನುವ ವಿಷಯ ಬಂದರೆ ಏನಾಗಲಿದೆ ಎನ್ನುವ ಕುತೂಹಲ ಅನೇಕ ರಲ್ಲಿದೆ. ಕೇಂದ್ರದಲ್ಲಿ ಬಿಜೆಪಿ, ಕರ್ನಾಟಕದಲ್ಲಿ ಬಿಜೆಪಿ ಸರಕಾರವಿದ್ದು, ಮಹಾರಾಷ್ಟ್ರದಲ್ಲಿ ಶಿನಸೇನೆ – ಕಾಂಗ್ರೆಸ್ – ಎನ್ಸಿಪಿಯ ಮೈತ್ರಿ ಸರಕಾರವಿದೆ. ರಾಜ್ಯದ ಗಡಿ ವಿಷಯ ಬಂದಾಗ ಕರ್ನಾಟಕದ ಎಲ್ಲ ಸಂಸದರು ಸಹಜ ವಾಗಿಯೇ ವಿರೋಧಿಸುತ್ತಾರೆ. ಇನ್ನು ರಾಷ್ಟ್ರೀಯ ಪಕ್ಷ ವಾಗಿರುವ ಬಿಜೆಪಿ ಹಾಗೂ ಕಾಂಗ್ರೆಸ್ ಈ ವಿಷಯದಲ್ಲಿ ಯಾವುದೋ ಒಂದು ರಾಜ್ಯದ ಪರ ನಿಲುವು ಪಡೆಯುವುದು ತೀರಾ ಕಡಿಮೆ.
ಅದರಲ್ಲಿಯೂ ಇತರ ರಾಜ್ಯಗಳಿಗೆ ಹೋಲಿಸಿದರೆ, ಕಾಂಗ್ರೆಸ್ನ ಅಸ್ತಿತ್ವ ಕರ್ನಾಟಕದಲ್ಲಿ ಹೆಚ್ಚಿರುವುದರಿಂದ ಸಹಜವಾಗಿಯೇ ಕರ್ನಾಟಕ ಹಳ್ಳಿಗಳನ್ನು ಬಿಟ್ಟುಕೊಡುವ ನಿರ್ಣಯಕ್ಕೆ ಒಪ್ಪುವ ಅಥವಾ ವಿರೋಧಿಸುವ ಬದಲು, ತಟಸ್ಥ ನಿಲುವು ತಗೆದುಕೊಳ್ಳುವ ಸಾಧ್ಯತೆಯೇ ಹೆಚ್ಚು. ಆದ್ದರಿಂದ ಆರಿದ ಬೆಂಕಿಗೆ ಮತ್ತೆ ತುಪ್ಪ ಹಾಕಿ ಬೆಂಕಿ ಹಚ್ಚುವ ಕೆಲಸವನ್ನು ಕೇಂದ್ರ ಸರಕಾರವಂತೂ ತಯಾರಿಲ್ಲ.
ಎರಡು ರಾಜ್ಯಗಳ ಪೈಕಿ ಒಂದು ರಾಜ್ಯ ಈ ಸಂಬಂಧ ರಿಟ್ ಅರ್ಜಿ ಸಲ್ಲಿಸಿದರೆ, ಅದು ಪುನಃ ವಿಚಾರಣಾ ಹಂತದಿಂದ ಶುರುವಾಗಿ, ಮತ್ತೊಂದು ಸಮಿತಿ ರಚಿಸಿ ಆ ಸಮಿತಿಯ ಶಿಫಾರಸುಗಳನ್ನು ಸಲ್ಲಿಕೆಯಾಗಿ ಅದು ಜಾರಿಯಾಗಲು ಮತ್ತೆ ಕೆಲವು ದಶಕಗಳು ಕಳೆಯುವುದರಲ್ಲಿ ಅನುಮಾನವಿಲ್ಲ. ಆದ್ದರಿಂದ ಕೇವಲ ರಾಜಕೀಯ ಮೈಲೇಜ್ ಪಡೆಯುವುದಕ್ಕೆ ಈ ರೀತಿ ಆಗಾಗ್ಗೆ ಬೆಳಗಾವಿ
ನಮ್ಮದ್ದು ಎಂದು ಹೇಳಿಕೆ ನೀಡುವುದನ್ನು ಬಿಟ್ಟು, ಮಹಾರಾಷ್ಟ್ರ ನೆಲದಲ್ಲಿಯೇ ಇರುವ ಗಡಿ ಗ್ರಾಮ, ಪಟ್ಟಣಗಳನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸಲಿ.
ಕೇಂದ್ರ ಸರಕಾರವೂ ಈ ಗಡಿ ಕ್ಯಾತೆಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ನೆರೆ ರಾಜ್ಯಗಳು ಈ ರೀತಿ ವಾಕ್ಸಮರದಿಂದ ಕೇವಲ ರಾಷ್ಟ್ರ ಮಟ್ಟದಲ್ಲಿ ಮಾತ್ರವಲ್ಲದೇ, ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಮುಜುಗರಕ್ಕೆ ಸಿಲುಕುವ ವಿಷಯವಾಗುತ್ತಿದೆ. ಆದ್ದರಿಂದ ಕೇಂದ್ರ ಸರಕಾರ ಎರಡೂ ರಾಜ್ಯದವರನ್ನು ಕೂರಿಸಿ ಒಂದು ಸಮನ್ವಯತೆ ಸಾಧಿಸಬೇಕಾದ ಅನಿವಾರ್ಯತೆಯಿದೆ. ಅಷ್ಟಕ್ಕೂ ‘ಕರ್ನಾಟಕ – ಮಹಾರಾಷ್ಟ್ರ ನಡುವಿನ ಗಡಿ ಅಂತಾರಾಜ್ಯ ಗಡಿಯೇ ವಿನಾ ಭಾರತ ಪಾಕಿಸ್ತಾನ ಗಡಿ ಸಮಸ್ಯೆಯಲ್ಲ ವಲ್ಲ’.