Spying for Pakistan: ಪಾಕಿಸ್ತಾನ ಪರ ಬೇಹುಗಾರಿಕೆ; ಒಡಿಶಾ ಯುಟ್ಯೂಬರ್ ಜೊತೆಗೆ ಜ್ಯೋತಿ ಮಲ್ಹೋತ್ರಾ ನಂಟು!
ಪಾಕಿಸ್ತಾನದ ಪರವಾಗಿ ಬೇಹುಗಾರಿಕೆ ನಡೆಸಿದ ಆರೋಪದ ಮೇರೆಗೆ ಹರಿಯಾಣ ಮೂಲದ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಅವರನ್ನು ಬಂಧಿಸಿದ ಒಂದು ದಿನದ ಅನಂತರ ಒಡಿಶಾ ಪೊಲೀಸರು ಪುರಿಯಲ್ಲಿ ಆಕೆ ಸಂಪರ್ಕ ಮಾಡಿದ್ದ ಇನ್ನೊಬ್ಬ ಯೂಟ್ಯೂಬರ್ ಅವರ ಸಂಬಂಧ ಮತ್ತು ಭೇಟಿಯ ಕುರಿತಾಗಿ ಒಡಿಶಾ ಪೊಲೀಸರು (Odisha Police) ತನಿಖೆ ಆರಂಭಿಸಿದ್ದಾರೆ.


ಹರಿಯಾಣ: ಪಾಕಿಸ್ತಾನದ ಪರವಾಗಿ ಬೇಹುಗಾರಿಕೆ (Spying for Pakistan) ನಡೆಸಿದ ಆರೋಪದ ಮೇರೆಗೆ ಹರಿಯಾಣ ಮೂಲದ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ (YouTuber Jyoti Malhotra) ಬಂಧನದ ಬಳಿಕ ಆಕೆಯ ಸಂಪರ್ಕದಲ್ಲಿದ್ದ ಪುರಿಯ ಯೂಟ್ಯೂಬರ್ (Puri YouTuber) ಕುರಿತು ಒಡಿಶಾ ಪೊಲೀಸರು (Odisha Police) ತನಿಖೆ ಪ್ರಾರಂಭಿಸಿದ್ದಾರೆ. ಪುರಿಯ ಯೂಟ್ಯೂಬರ್ ನ ಅಧಿಕೃತ ಗುರುತನ್ನು ಬಹಿರಂಗ ಪಡಿಸದೆ ಪೊಲೀಸರು ಮಲ್ಹೋತ್ರಾ ಜೊತೆಗಿನ ಸಂಪರ್ಕದ ಬಗ್ಗೆ ಆಕೆಯನ್ನು ಪ್ರಶ್ನಿಸುತ್ತಿದ್ದಾರೆ. ಆನ್‌ಲೈನ್‌ನಲ್ಲಿ "ಟ್ರಾವೆಲ್ ವಿತ್ ಜೆಒ" ಎಂದೂ ಕರೆಯಲ್ಪಡುವ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾಳನ್ನು ಶನಿವಾರ ಹರಿಯಾಣದ ಹಿಸಾರ್‌ನಲ್ಲಿ ಬಂಧಿಸಲಾಗಿತ್ತು.
ಪಾಕಿಸ್ತಾನದ ಪರವಾಗಿ ಬೇಹುಗಾರಿಕೆ ನಡೆಸಿದ ಆರೋಪದ ಮೇರೆಗೆ ಹರಿಯಾಣ ಮೂಲದ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಬಂಧಿಸಿದ ಒಂದು ದಿನದ ಅನಂತರ ಒಡಿಶಾ ಪೊಲೀಸರು ಪುರಿಯಲ್ಲಿ ಆಕೆ ಸಂಪರ್ಕ ಮಾಡಿದ್ದ ಇನ್ನೊಬ್ಬ ಯೂಟ್ಯೂಬರ್ ಕುರಿತಾಗಿ ತನಿಖೆ ಆರಂಭಿಸಿದ್ದಾರೆ.
ದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್‌ನ ಸಿಬ್ಬಂದಿಗೆ ಸೂಕ್ಷ್ಮ ಮಾಹಿತಿ ರವಾನಿಸಿದ ಆರೋಪದ ಮೇರೆಗೆ ಜ್ಯೋತಿ ಮಲ್ಹೋತ್ರಾ ಅವರನ್ನು ಶನಿವಾರ ಬಂಧಿಸಲಾಗಿತ್ತು. ಜ್ಯೋತಿ ಮಲ್ಹೋತ್ರಾ ಮಾಹಿತಿ ನೀಡಿದ್ದ ಪಾಕಿಸ್ತಾನ ಹೈಕಮಿಷನ್‌ನ ಸಿಬ್ಬಂದಿಯನ್ನು ಭಾರತ ಸರ್ಕಾರವು ಮೇ 13ರಂದು ಗೂಢಚರ್ಯೆ ಆರೋಪದ ಮೇರೆಗೆ ದೇಶದಿಂದ ಹೊರಹಾಕಿತ್ತು.
2024ರ ಸೆಪ್ಟೆಂಬರ್ ತಿಂಗಳಲ್ಲಿ ಮಲ್ಹೋತ್ರಾ ಪುರಿಗೆ ಪ್ರಯಾಣಿಸಿದ್ದು, ಅಲ್ಲಿ ಸ್ಥಳೀಯ ಒಬ್ಬ ಮಹಿಳಾ ಯೂಟ್ಯೂಬರ್‌ರನ್ನು ಭೇಟಿಯಾಗಿದ್ದಳು ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಪೊಲೀಸರು ಅವರ ಅಧಿಕೃತ ಗುರುತನ್ನು ಬಹಿರಂಗಪಡಿಸದೆ ಪುರಿಯ ಯೂಟ್ಯೂಬರ್‌ಗೆ ಮಲ್ಹೋತ್ರಾಳ ಸಂಪರ್ಕ ಮತ್ತು ಕರಾವಳಿ ಪಟ್ಟಣಕ್ಕೆ ಭೇಟಿ ನೀಡಿದ ಸಮಯದಲ್ಲಿ ಅವರ ಚಟುವಟಿಕೆಗಳ ಬಗ್ಗೆ ಪ್ರಶ್ನಿಸಿದ್ದಾರೆ ಎನ್ನಲಾಗಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಪುರಿ ಪೊಲೀಸ್ ವರಿಷ್ಠಾಧಿಕಾರಿ ವಿನಿತ್ ಅಗರ್ವಾಲ್, ಕಳೆದ ವರ್ಷ ಜ್ಯೋತಿ ಮಲ್ಹೋತ್ರಾ ಪುರಿಗೆ ಭೇಟಿ ನೀಡಿದ್ದರು ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ನಾವು ಸತ್ಯವನ್ನು ಪರಿಶೀಲಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಪುರಿ ಯೂಟ್ಯೂಬರ್‌ನ ಮನೆಗೆ ಭಾನುವಾರ ಭೇಟಿ ನೀಡಿದ ಪೊಲೀಸ್ ತಂಡ ಮಲ್ಹೋತ್ರಾ ಅವರ ಭೇಟಿಯ ಬಗ್ಗೆ ಪ್ರಶ್ನಿಸಿದೆ. ಅವರು ಎಲ್ಲಿಗೆ ಹೋದರು ಮತ್ತು ಯಾರನ್ನು ಭೇಟಿಯಾದರು ಎಂಬ ವಿವರಗಳನ್ನು ಸಂಗ್ರಹಿಸಿದೆ. ಅಲ್ಲದೇ ಪುರಿ ಮೂಲದ ಯೂಟ್ಯೂಬರ್ ಇತ್ತೀಚೆಗೆ ಪಾಕಿಸ್ತಾನದ ಕರ್ತಾರ್‌ಪುರ್ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡಿರುವುದು ತಿಳಿದುಬಂದಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಯೂಟ್ಯೂಬರ್ ತಂದೆ, ಪೊಲೀಸರು ನಮ್ಮ ಮನೆಗೆ ಭೇಟಿ ನೀಡಿ ತಮ್ಮ ಮಗಳನ್ನು ಪ್ರಶ್ನಿಸಿದ್ದಾರೆ. ನನ್ನ ಮಗಳನ್ನು ಜ್ಯೋತಿ ಮಲ್ಹೋತ್ರಾ ಸಂಪರ್ಕಿಸಿದಳು. ಯಾಕೆಂದರೆ ಇಬ್ಬರೂ ಯೂಟ್ಯೂಬರ್‌ಗಳಾಗಿದ್ದರು. ಅವರ ನಡುವೆ ಸ್ನೇಹ ಬೆಳೆದಂತೆ, ಮಲ್ಹೋತ್ರಾ ಪುರಿಗೆ ಭೇಟಿ ನೀಡಿದರು. ಇದು ರಾಷ್ಟ್ರದ ಭದ್ರತೆಯ ವಿಷಯವಾಗಿರುವುದರಿಂದ ಸರಿಯಾದ ತನಿಖೆ ನಡೆಸಬೇಕು. ನಾವು ಪೊಲೀಸರೊಂದಿಗೆ ಸಹಕರಿಸುತ್ತೇವೆ ಎಂದು ಅವರು ಹೇಳಿದರು.
ಮಗಳು ಪಾಕಿಸ್ತಾನದ ಕರ್ತಾರ್‌ಪುರಕ್ಕೆ ಭೇಟಿ ನೀಡಿದ್ದು ಮಲ್ಹೋತ್ರಾ ಅವಳೊಂದಿಗೆ ಅಲ್ಲ. ಬೇರೆ ಸ್ನೇಹಿತನೊಂದಿಗೆ ಮೂರು ನಾಲ್ಕು ತಿಂಗಳ ಹಿಂದೆ ಅವರು ಅಲ್ಲಿಗೆ ತೀರ್ಥಯಾತ್ರೆಗೆ ಹೋಗಿದ್ದರು. ಮಗಳು ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲ ಮತ್ತು ಮಲ್ಹೋತ್ರಾ ಬೇಹುಗಾರಿಕೆಯ ಬಗ್ಗೆ ಆಕೆಗೆ ತಿಳಿದಿರಲಿಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Bengaluru Rain: ರಾತ್ರಿಯಿಡೀ ಧಾರಾಕಾರ ಮಳೆ, ತತ್ತರಿಸಿದ ಬೆಂಗಳೂರು, ಕೆರೆಗಳಾದ ರಸ್ತೆಗಳು
ಈ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿರುವ ಪುರಿಯ ಯೂಟ್ಯೂಬರ್, ಜ್ಯೋತಿ ನನ್ನ ಸ್ನೇಹಿತೆ ಮಾತ್ರ. ನಾನು ಯೂಟ್ಯೂಬ್ ಮೂಲಕ ಅವಳ ಸಂಪರ್ಕಕ್ಕೆ ಬಂದೆ. ಅವಳ ಮೇಲೆ ಆರೋಪ ಹೊರಿಸಲಾಗಿರುವ ಯಾವುದೇ ವಿಷಯ ನನಗೆ ತಿಳಿದಿರಲಿಲ್ಲ. ಅವಳು ಶತ್ರು ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ನಡೆಸುತ್ತಿದ್ದಾಳೆ ಎಂದು ಮೊದಲೇ ತಿಳಿದಿದ್ದರೆ ನಾನು ಅವಳೊಂದಿಗೆ ಸಂಪರ್ಕದಲ್ಲಿರುತ್ತಿರಲಿಲ್ಲ. ಯಾವುದೇ ತನಿಖಾ ಸಂಸ್ಥೆಯು ನನ್ನನ್ನು ಪ್ರಶ್ನೆ ಮಾಡಲು ಬಯಸಿದರೆ ನಾನು ಸಂಪೂರ್ಣ ಸಹಕಾರ ನೀಡುತ್ತೇನೆ. ರಾಷ್ಟ್ರ ಎಲ್ಲಕ್ಕಿಂತ ಹೆಚ್ಚು ಎಂದು ಹೇಳಿದ್ದಾರೆ. ಕುರಿತು ಯಾವುದೇ ಪ್ರಕರಣ ದಾಖಲಿಸಲಾಗಿಲ್ಲ. ಆದರೆ ತನಿಖೆ ಮುಂದುವರಿಯುತ್ತದೆ ಎಂದು ಒಡಿಶಾ ಪೊಲೀಸರು ತಿಳಿಸಿದ್ದಾರೆ.