Wednesday, 19th June 2024

ಮುಗ್ಗರಿಸುತ್ತಿದೆಯೇ ಚೀನಾದ ಆರ್ಥಿಕತೆ?

-ಜಿ.ಎಂ.ಇನಾಂದಾರ್

ಚೀನಾ ಇತ್ತ ಕಮ್ಯುನಿಸ್ಟ್ ವಿಚಾರಧಾರೆಯಂತೆಯೂ ನಡೆಯುತ್ತಿಲ್ಲ ಅಥವಾ ಬಂಡವಾಳಶಾಹಿ ವ್ಯವಸ್ಥೆಯಂತೆಯೂ ನಡೆಯುತ್ತಿಲ್ಲ. ಅಲ್ಲಿಯ ಅಪಾರದರ್ಶಕ ವ್ಯವಸ್ಥೆ ಸಂಶಯ ಮೂಡಿಸುತ್ತಿದೆ. ಕೋವಿಡ್‌ನಲ್ಲಿ ಮುಗ್ಗರಿಸಿದ ಚೀನಾ ಆರ್ಥಿಕತೆ ಇದುವರೆಗೂ ಮೇಲೇಳುವ ಲಕ್ಷಣಗಳು ಕಾಣುತ್ತಿಲ್ಲ. 

ಚೀನಾದಲ್ಲಿ ಏನು ನಡೆದಿದೆ ಎಂದು ತಿಳಿಯುವುದೇ ಕಷ್ಟ. ಚೀನಾದ ಕಮ್ಯುನಿಸ್ಟ್ ಪಾರ್ಟಿ ಫೋಷಿಸಿದ್ದನ್ನೇ ನಾವು ಸತ್ಯ ಎಂದು ನಂಬಬೇಕು ಎಂದು ಚೀನಾ ಭಾವಿಸುತ್ತದೆ. ಆದರೆ, ಜಗತ್ತು ಚೀನಾದ ಅಂಕಿ-ಅಂಶಗಳನ್ನು ಸಂಶಯದಿಂದಲೇ ನೋಡುತ್ತದೆ. It takes Chinese News with a bowl of salt. ಚೀನಾ ನ್ಯೂಸ್ ಕ್ಲಿಕ್‍ನಂಥ ಮಾಧ್ಯಮಗಳ ಮೂಲಕ ತನ್ನ ತುತ್ತೂರಿ ಊದುತ್ತಲೇ ಇರುತ್ತದೆ. ಚೀನಾದ ಆರ್ಥಿಕತೆ ಮುಗ್ಗರಿಸುತ್ತಿದೆಯೇ? ಜಗತ್ತಿನ ಆದ್ಯಂತ ವಿವಿಧ ಆರ್ಥಿಕತೆ ತಜ್ಞರು ಈ ನಿಟ್ಟಿನಲ್ಲಿ ಕೆಂಪು ದೀಪ ತೋರಿಸುತ್ತಲೇ ಇದ್ದಾರೆ. ಇತ್ತೀಚೆಗೆ, ಚೀನಾದ “ಎವರ್ ಗ್ರಾಂಡ್” ರಿಯಲ್ ಎಸ್ಟೇಟ್ ಕಂಪನಿಯು ನ್ಯೂಯಾರ್ಕ್‍ನಲ್ಲಿ  ‘ದಿವಾಳಿ’ ಎಂದು
ಘೋಷಿಸಿಕೊಂಡಿತು. ಚಾಪ್ಟರ್ ೧೫ರ ಅನ್ವಯ ವಿದೇಶಿ ಕಂಪನಿಗಳು ತಮ್ಮ ಸಾಲಗಳನ್ನು ತುಂಬಲಾಗದೆ ನಮ್ಮ ಹತ್ತಿರ ಹಣ ಇಲ್ಲ ಎಂದು ಹೇಳುವ ವಿಧಾನ.

ಇನ್ನೊಂದು, ಚೀನಾದ ರಿಯಲ್ ಎಸ್ಟೇಟ್ ಕಂಪನಿ ‘ಕಂಪನಿ ಗಾರ್ಡನ್’ನ ಷೇರುಗಳು ‘ಎವರ್ ಗ್ರಾಂಡ್’ ದಿವಾಳಿಗಿಂತ ಮುಂಚೆಯೇ ತಳ ಕಾಣದಂತೆ ಕುಸಿದವು. ‘ಎವರ್ ಗ್ರಾಂಡ್’ ಇನ್ನಿತರ ಕಂಪನಿಗಳಾದ ಟಯಾಂಜಿ, ಹೋಲ್ಡಿಂಗ್ಸ್ ಸೀನರಿ ಜರ್ನಿ ಕೂಡ ದಿವಾಳಿ ಎಂದು ಘೋಷಿಸಿಕೊಂಡಿವೆ. ಕಂಟ್ರಿಗಾರ್ಡ್‌ನ ರಿಯಲ್ ಎಸ್ಟೇಟ್ ಕಂಪನಿಯಲ್ಲಿ ೩೦೦,೦೦೦ ಜನ ಕೆಲಸ ಮಾಡುತ್ತಿದ್ದು, ಅಂತಾರಾಷ್ಟ್ರೀಯ ರೇಟಿಂಗ್ ಏಜೆನ್ಸಿ ’ಮೂಡಿಸ್’ ಕಂಟ್ರಿಗಾರ್ಡ್‌ನ ಸಾಲವನ್ನು Very high risk  ಎಂದು ವರ್ಗೀಕರಿಸಿದೆ.  ಚೀನಾ ಇತ್ತ ಪೂರ್ತಿ ಕಮ್ಯುನಿಸ್ಟ್ ವಿಚಾರಧಾರೆಯಂತೆಯೂ ನಡೆಯುತ್ತಿಲ್ಲ ಅಥವಾ ಪೂರ್ತಿ ಬಂಡವಾಳಶಾಹಿ ವ್ಯವಸ್ಥೆಯಂತೆಯೂ ನಡೆಯುತ್ತಿಲ್ಲ. ಅಲ್ಲಿಯ ಅಪಾರ ದರ್ಶಕ ವ್ಯವಸ್ಥೆ ಮತ್ತಷ್ಟು ಸಂಶಯ ಮೂಡಿಸುತ್ತಿದೆ.

ಕೋವಿಡ್‌ನಲ್ಲಿ ಮುಗ್ಗರಿಸಿದ ಚೀನಾ ಆರ್ಥಿಕತೆ  ಇದುವರೆಗೂ ಮೇಲೇಳುವ ಲಕ್ಷಣಗಳು ಕಾಣುತ್ತಿಲ್ಲ. ಚೀನಾ ಸರಕಾರ ಬಿಡುಗಡೆ ಮಾಡುವ ಅಂಕಿ-ಅಂಶಗಳು ಒಂದ ಕ್ಕೊಂದು ತಾಳೆಯಾಗುತ್ತಿಲ್ಲ. ಆದರೆ, ಚೀನಾ ಮಾತ್ರ ಎಲ್ಲ ಚೆನ್ನಾಗಿಯೇ ಇದೆ ಎಂದು ಹೇಳುತ್ತಲೇ ಬಂದಿದೆ. ರಿಯಲ್ ಎಸ್ಟೇಟ್ ವಲಯವು ಚೀನಾದ ಜಿಡಿಪಿಯ ಶೇ.೩೫ರಷ್ಟಿದೆ. ‘ಎವರ್ ಗ್ರಾಂಡ್’ ನ ಸಾಲ ೪೦೦ ಬಿಲಿಯನ್ ಡಾಲರ್. ಇತ್ತೀಚೆಗೆ ಚೀನಾದ ಶಾಡೋ ಬ್ಯಾಂಕ್ ಒಂದು ಕೈ ಎತ್ತಿದೆ. ಈ ಎರಡೇ ಘಟನೆಗಳಿಂದ ಚೀನಾಕ್ಕೆ ೧೦೦೦ ಬಿಲಿಯನ್ ಡಾಲರ್ ನಷ್ಟು ಹೊಡೆತ ಬಿದ್ದಿದೆ. ಔದ್ಯಮಿಕ ವಲಯವು ಒಂದ ಕ್ಕೊಂದು ಅವಲಂಬಿತವಾಗಿದ್ದು, ಇದರ ಪರಿಣಾಮ ಇತರ ಬ್ಯಾಂಕುಗಳು ಹಾಗೂ ಉದ್ಯಮ ವಲಯದ ಮೇಲೆ ಕೂಡ ಬೀಳಲಿದೆ. ಅಮೆರಿಕದಲ್ಲಿ ದಿವಾಳಿ ಎದ್ದ ಬ್ಯಾಂಕು ಗಳ ತರಹ ೫ ಚೀನಿ ಬ್ಯಾಂಕುಗಳು ದಿವಾಳಿ ಏಳುವ ಹಂತದಲ್ಲಿವೆ. ಚೀನಾದ ಕುಸಿಯುತ್ತಿರುವ ಆರ್ಥಿಕತೆಯಲ್ಲಿ ರಿಯಲ್ ಎಸ್ಟೇಟ್ ವಲಯವನ್ನು ಎತ್ತಿ ಹಿಡಿಯುವ ಸಲುವಾಗಿ ಈ ಬ್ಯಾಂಕುಗಳಿಗೆ ಸಾಲ ನೀಡಲು ಸರಕಾರದಿಂದ ಒತ್ತಡ ಹೇರಲಾಗುತ್ತಿತ್ತು. ಇದಲ್ಲದೆ, ಸ್ಥಾನೀಯ ಸರಕಾರಿ ಸಂಸ್ಥೆಗಳಿಗೆ ವೇತನ ನೀಡಲು ಕೂಡ ಈ ಬ್ಯಾಂಕುಗಳು ಸಾಲ ನೀಡುತ್ತಿದ್ದವು.

ಈ ಎಲ್ಲ ಬೆಳವಣಿಗೆಗಳ ಮಧ್ಯೆ ಚೀನಾ ‘ಯುವಾನ್’ ಬೀಳಬಾರದು ಎಂದು ಡಾಲರ್ ಮಾರಾಟ ಮಾಡಿ ‘ಯುವಾನ್’ ಅನ್ನು ಸ್ಥಿರವಾಗಿಸುವ ಪ್ರಯತ್ನಕ್ಕೆ ಕೈಹಾಕಿದೆ. ಚೀನಾದ ಆರ್ಥಿಕತೆಯ ಕುಸಿತ ಹಾಗೂ ಮೇಲ್ಕಾಣಿಸಿದಂಥ ಬೆಳವಣಿಗೆಯ ಒಟ್ಟು ಪರಿಣಾಮ, ಜಗತ್ತಿನ ಆರ್ಥಿಕತೆಯ ಮೇಲೆ ಆಗಲಿದೆ. ಇದರ ಪರಿಣಾಮಗಳು ಚೀನಾದಲ್ಲಿ ಹೂಡಿಕೆ ಮಾಡಿರುವ ಅಮೆರಿಕ, ಯುರೋಪ್, ಸಿಂಗಾಪುರ ಮುಂತಾದ ರಾಷ್ಟ್ರಗಳ ಮೇಲೆ ಆಗಲಿದೆ. ಅಮೆರಿಕದ ೨೪ ಟ್ರಿಲಿಯನ್ ಆರ್ಥಿಕತೆ ಇದರಿಂದ ಹೆಚ್ಚು ಘಾಸಿಗೊಳ್ಳಲಾರದು. ಆದರೆ, ಮೊದಲೇ ಕಷ್ಟದಲ್ಲಿರುವ ಯುರೋಪ್‌ಗೆ ಹೆಚ್ಚಿನ ಹೊಡೆತ ಬೀಳಲಿದೆ. ಸಿಂಗಾಪುರ ಕೂಡ ಹೆಚ್ಚಿನ ಹೂಡಿಕೆಯನ್ನು ಚೀನಾದಲ್ಲಿ ಮಾಡಿದ್ದು, ಅದು ಕೂಡ ಘಾಸಿಗೊಳ್ಳಲಿದೆ. ಅದೃಷ್ಟವಶಾತ್, ಭಾರತವು ಚೀನಾ ದಲ್ಲಿ ಹೂಡಿಕೆ ಮಾಡಿಲ್ಲದಿರುವುದರಿಂದ ಬಚಾವಾಗಲಿದೆ. ಭಾರತೀಯ ಬ್ಯಾಂಕುಗಳು ೨೦೧೩ರಲ್ಲಿ, ೮೦,೦೦೦ ಕೋಟಿ ರು. ನಷ್ಟದಿಂದ ಸುಧಾರಿಸಿ, ಈಗ ೧,೦೦,೦೦೦ ಕೋಟಿ ರೂಪಾಯಿ ಲಾಭ ಘೋಷಿಸಿಕೊಂಡಿವೆ. ಭಾರತವು ಜಗತ್ತಿನ ೫ನೇ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ. ಹೀಗಾಗಿ, ಭಾರತದ ಅರ್ಥ ವ್ಯವಸ್ಥೆ ಸದೃಢವಾಗಿದ್ದು, ಆಗಲಿರುವ ಆರ್ಥಿಕ ತಲ್ಲಣದಿಂದ ಹೆಚ್ಚು ಘಾಸಿಗೊಳ್ಳದು.

‘ಚಂದ್ರಯಾನ-೩’ರ ಯಶಸ್ಸಿನ ನಂತರ ಭಾರತದ ಮೇಲೆ ಹೂಡಿಕೆದಾರರ ವಿಶ್ವಾಸ ಹೆಚ್ಚಾಗಲಿದೆ. ಸದೃಢ ಪ್ರಜಾತಂತ್ರ, ಸ್ಥಿರ ಸರಕಾರ ಹಾಗೂ ೧೪೦ ಕೋಟಿ ಜನಸಂಖ್ಯೆಯುಳ್ಳ ಭಾರತವು ಜಗತ್ತಿನ ಹೂಡಿಕೆದಾರರಿಗೆ ಆಕರ್ಷಕವಾಗಿ ಕಾಣುವುದರಲ್ಲಿ ಅನುಮಾನವಿಲ್ಲ. ಚೀನಾದ ಈ ಆರ್ಥಿಕ ಕುಸಿತಕ್ಕೆ ಅನೇಕ ಕಾರಣಗಳಿವೆ. ಕೋವಿಡ್‌ನ ಕಾಲಘಟ್ಟ ಜಗತ್ತಿನ ಆರ್ಥಿಕ ಕುಸಿತಕ್ಕೆ ಕಾರಣವಾಗಿದ್ದು, ಚೀನಾ ಕೂಡ ಈ ಆರ್ಥಿಕ ಹೊಡೆತದಿಂದ ತಪ್ಪಿಸಿಕೊಂಡಿಲ್ಲ. ಜಗತ್ತಿನ ಎಲ್ಲ ದೇಶಗಳು ಚೀನಾದ ಮೇಲೆ ತಮ್ಮ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಳ್ಳುತ್ತಿವೆ. ಭಾರತ ಹಾಗೂ ಇನ್ನಿತರ ದೇಶಗಳಲ್ಲಿ ತಮ್ಮ ಉತ್ಪಾದನಾ ಘಟಕಗಳನ್ನು ಸ್ಥಾಪಿಸುತ್ತಿವೆ. ಚೀನಾಕ್ಕೆ ಹರಿದು ಬರುತ್ತಿದ್ದ ಹೊರ ದೇಶಗಳ ಬಂಡವಾಳ ೨೫ ವರ್ಷಗಳಲ್ಲಿ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಚೀನಾದ ಬಹಳಷ್ಟು ಪ್ರದೇಶಗಳಲ್ಲಿ ಪ್ರವಾಹ ಸಾಕಷ್ಟು ಹಾನಿ ಮಾಡಿದೆ.

ಚೀನಾದ ಆಯಾತ-ನಿರ್ಯಾತ ಗಳೆರಡೂ ಗಣನೀಯವಾಗಿ ಕುಸಿದಿವೆ. ಹಾಗಾದರೆ ಚೀನಾ ಏನು ಮಾಡಲಿದೆ? ಚೀನಾ ಹಾಗೂ ಪಾಕಿಸ್ತಾನ ಎರಡೂ ದೇಶಗಳಿಗೆ ಒಂದು ಚಾಳಿ ಇದೆ. ತಮ್ಮಲ್ಲಿನ ವೈಫಲ್ಯಗಳಿಗೆ ಬೇರೆಯವರನ್ನು ದೂರುವುದು ಹಾಗೂ ಸಮಸ್ಯೆಯಿಂದ ಬೇರೆ ಕಡೆ ದೃಷ್ಟಿ ಹರಿಸಲು ಯುದ್ಧದಂಥ ಕಿತಾಪತಿಗಳನ್ನು ಮಾಡುವುದು. ತೈವಾನ್ ಹಾಗೂ ಭಾರತ ಈ ನಿಟ್ಟಿನಲ್ಲಿ ಕಟ್ಟೆಚ್ಚರ ವಹಿಸುವುದು ಸಮಯದ ಅವಶ್ಯಕತೆಯಾಗಿದೆ. ಭಾರತ ಈ ನಿಟ್ಟಿನಲ್ಲಿ ಆಗಲೇ ಆತ್ಮರಕ್ಷಣೆಗಾಗಿ ತಯಾರಿ ಮಾಡಿಕೊಂಡು ಸನ್ನದ್ಧವಾಗಿದೆ. ಇತ್ತೀಚೆಗೆ ಬಂದ ಅತ್ಯಾಧುನಿಕ ಇಸ್ರೇಲಿ ಹೆರೋನ್ ಡ್ರೋನ್‌ಗಳನ್ನು ಚೀನಾ ಹಾಗೂ ಪಾಕ್ ಗಡಿಗಳಲ್ಲಿ
ನಿಯೋಜಿಸಿದೆ. ಜಗತ್ತಿನ ಈ ಆರ್ಥಿಕ ವ್ಯವಸ್ಥೆಯ ಮೇಲೆ ಚೀನಾದ ಕುಸಿತದ ಈ ಬೆಳವಣಿಗೆ ದೂರಗಾಮಿ ಪರಿಣಾಮಗಳನ್ನು ಬೀರಲಿದೆ.

Leave a Reply

Your email address will not be published. Required fields are marked *

error: Content is protected !!