Friday, 18th October 2024

ಮೈಲೇಜ್ ಪಡೆವ ಭರದಲ್ಲಿ ಡ್ಯಾಮೇಜ್ ಮಾಡಿಕೊಂಡ ಜೆಡಿಎಸ್‌

ಅಶ್ವತ್ಥಕಟ್ಟೆ

ರಂಜಿತ್ ಎಚ್‌.ಅಶ್ವತ್ಥ

ಕರ್ನಾಟಕದಲ್ಲಿ ಎರಡನೇ ಅಲೆ ಕರೋನಾ ಇಳಿಕೆ, ಡೆಟ್ಲಾ ಪ್ಲಸ್ ಸೋಂಕು, ಕೇಂದ್ರ ಸಚಿವ ಸಂಪುಟ ವಿಸ್ತರಣೆ, ಪೆಟ್ರೋಲ್, ಡಿಸೇಲ್ ದರ ಏರಿಕೆ ಹೀಗೆ ನೂರಾರು ವಿಷಯಗಳಿದ್ದರೂ, ಕಳೆದೊಂದು ವಾರದಿಂದ ಎಲ್ಲ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ಚರ್ಚೆಯಾಗುತ್ತಿರುವುದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹಾಗೂ ಮಂಡ್ಯ ಸಂಸದೆ ಸುಮಲತಾ ಹಾಗೂ ಬೆಂಬಲಿಗರ ನಡುವಿನ ವಾಕ್ಸಮರ.

ಆರೋಪಕ್ಕೆ ಪ್ರತ್ಯಾರೋಪ, ಅಸಕ್ಕೆ ಪ್ರತಿಅಸ್ತ್ರವನ್ನು ಎರಡು ಕಡೆಯಿಂದಲೂ ನಿರಂತರವಾಗಿ ಹೂಡುತ್ತಿದ್ದಾರೆ. ಈ ಇಬ್ಬರ ಜಗಳ ತಾರ್ಕಿಕ ಅಂತ್ಯ ಕಾಣದಿದ್ದರೂ, ಬೆಂಬಲ ಮಾತ್ರ ಸುಮಲತಾ ಅವರ ಕಡೆಗೆ ಕೊಂಚ ಹೆಚ್ಚಾಗಿದೆ ಅನಿಸುತ್ತಿದೆ. ಹೌದು, ಅಂಬರೀಶ್ ನಿಧನದ ಬಳಿಕ ಸುಮಲತಾ ಮಂಡ್ಯದಿಂದ ಸ್ಪರ್ಧಿಸಲಿದ್ದಾರೆ ಎಂದು ಪ್ರಕಟ ವಾದಾಗಿನಿಂದ ಎಚ್‌ಡಿಕೆ – ಸುಮಲತಾ ನಡುವೆ ಆಗಾಗ್ಗೆ ಜಟಾಪಟಿ ನಡೆಯುತ್ತಿದೆ.

ಮಂಡ್ಯ ಲೋಕಸಭಾ ಚುನಾವಣಾ ಸಮಯದಲ್ಲಿ ಅಂತೂ, ಇಡೀ ರಾಷ್ಟ್ರದ ಗಮನ ಸೆಳೆದಿತ್ತು. ಆ ಮಟ್ಟಿಗೆ ಈ ಇಬ್ಬರ ನಡುವಿನ ವಾಕ್ಸಮರಕ್ಕೆ ರಾಜ್ಯದ ಜನರು ಸಾಕ್ಷಿಯಾಗಿದ್ದರು. ಇದಾದ ಬಳಿಕ ಚಿಕ್ಕಪುಟ್ಟ ಗಲಾಟೆಗಳು ನಡೆಯುತ್ತಿದ್ದರೂ, ಅದ್ಯಾವುದೂ ಈ ಮಟ್ಟಿಗೆ ವಿವಾದ ಸೃಷ್ಟಿಸಲಿಲ್ಲ. ಆದರೀಗ ಕೆಆರ್‌ಎಸ್ ಡ್ಯಾಂ ಬಿರುಕು, ಅಕ್ರಮ ಗಣಿಗಾರಿಕೆ ವಿಷಯದಿಂದ ಶುರುವಾದ ವಿವಾದ, ಈ ಎರಡನ್ನೂ ಮೀರಿ ವೈಯಕ್ತಿಕ ಟೀಕೆಯತ್ತ ವಾಲುತ್ತಿದೆ. ಕುಮಾರಸ್ವಾಮಿ ಅವರು ಮಂಡ್ಯ ವನ್ನು ಮರಳಿ ಜೆಡಿಎಸ್ ಭದ್ರ ಕೋಟೆಯನ್ನಾಗಿಸಿಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ಭರ್ಜರಿ ತಂತ್ರವನ್ನು ಏನೋ ಮಾಡುತ್ತಿದ್ದಾರೆ. ಆದರೆ ಪದೇ ಪದೆ ಸುಮಲತಾ ಅವರ ವೈಯಕ್ತಿಕ ಜೀವನಕ್ಕೆ ಕೈ ಹಾಕಿ, ಕ್ಷೇತ್ರ ಹಾಗೂ ರಾಜ್ಯದ ಜನರ ಮುಂದೆ ಭಾರಿ ಟೀಕೆಗೆ ಒಳಗಾಗುತ್ತಿದ್ದಾರೆ ಎಂದರೆ ತಪ್ಪಾಗುವುದಿಲ್ಲ.

ಹಾಗೆ ನೋಡಿದರೆ, ಮಾಜಿ ಮುಖ್ಯಮಂತ್ರಿಯಾಗಿರುವ ಕುಮಾರಸ್ವಾಮಿ ಅವರು ಕರೋನಾ ಎರಡನೇ ಅಲೆ ಸಮಯದಲ್ಲಿ ಬಹುತೇಕ ಸಮಯವನ್ನು ಫಾರ್ಮ್‌ ಹೌಸ್ ಅಥವಾ ಮನೆಯಲ್ಲಿಯೇ ಕಳೆದರು. ಸರಕಾರದ ವಿರುದ್ಧ ಟೀಕೆ ಮಾಡುವುದಕ್ಕೆ, ಪಕ್ಷದ ಸಂಘಟನೆ ವಿಷಯವಿರಲಿ ಎಲ್ಲವನ್ನು ತಮ್ಮ ಅಧಿಕೃತ ಟ್ವೀಟರ್ ಮೂಲಕವೇ ಹ್ಯಾಂಡಲ್ ಮಾಡಿದರು. ಕೇವಲ ಕರೋನಾವಲ್ಲ, ಜ್ವಲಂತ ಸಮಸ್ಯೆಗಳಿಗೆಲ್ಲ ಟ್ವೀಟರ್‌ನಲ್ಲಿಯೇ ಟ್ವೀಟ್ ಮಾಡಿ ಸರಕಾರವನ್ನು ಎಚ್ಚರಿಸುವ ಕೆಲಸವನ್ನು ಮಾಡುತ್ತಿದ್ದ ಕುಮಾರಸ್ವಾಮಿ, ಸುಮಲತಾ ವಿಷಯ ಬರುತ್ತಿದ್ದಂತೆ ಏಕ್‌ದಮ್ ಮಾಧ್ಯಮಗಳ ಮುಂದೆ ಕಾಣಿಸಿಕೊಂಡು, ಸಕ್ರಿಯ ರಾದರು.

ಬಳಿಕ ಸುಮಾರು ನಾಲ್ಕೈದು ದಿನ ನಿರಂತರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ಅಥವಾ ಸುಮಲತಾ ವಿರುದ್ಧ ವಾಗ್ದಾಳಿ ಮಾಡಲು ಮುಂದಾದರು. ಎರಡು ದಿನ ದಲ್ಲಿ ಮುಗಿಯಬಹುದಾಗಿದ್ದ ಈ ವಿಷಯವನ್ನು, ಬಳಿಕ ಅಂಬರೀಶ್ ಶವ ಸಂಸ್ಕಾರ, ಸುಮಲತಾ ಅವರ ವೈಯಕ್ತಿಕ ಜೀವನದ ಬಗ್ಗೆಯೂ ಮಾತನಾಡಲು ಮುಂದಾಗಿ ಜನರ ಮುಂದೆ ‘ಸಣ್ಣ’ವರಾದರು ಎಂದರೆ ತಪ್ಪಾಗುವುದಿಲ್ಲ. ಹಾಗೆ ನೋಡಿದರೆ, ಕುಮಾರಸ್ವಾಮಿ ಅವರು ಇಷ್ಟು ದೊಡ್ಡ ಧ್ವನಿಯಲ್ಲಿ ವಿರೋಧಿಸುವು ದಕ್ಕೆ ಸುಮಲತಾ ಅವರ ಹೇಳಿಕೆಯೊಂದೇ ಇರಲಿಲ್ಲ. ಕರೋನಾ ಸಂಕಷ್ಟದಲ್ಲಿರುವ ಕರ್ನಾಟಕದಲ್ಲಿ ಹಲವು ಸಮಸ್ಯೆಗಳಿದ್ದವು. ಅವುಗಳ ಬಗ್ಗೆ ‘ಬೆಳಕು ಚೆಲ್ಲುವ’ ಕೆಲಸವನ್ನು ಮಾಡಬಹುದಾಗಿತ್ತು. ಆದರೆ ಅದನ್ನು ಮಾಡುವ ಬದಲು ಒಂದು ಹೇಳಿಕೆಗೆ ಜೋತುಬಿದ್ದು ರಾಜಕಾರಣ ಮಾಡಿದ್ದು ಅವರ ಹಿನ್ನಡೆಯೇ ಆಯಿತು.

ಕುಮಾರಸ್ವಾಮಿ ಅವರು ಏನು ಮಾತನಾಡಿದರು ಎನ್ನುವ ವಿವರವನ್ನು ನೋಡುವ ಮೊದಲು, ಅವರು ಮಾಡಿದ ಮತ್ತೊಂದು “blunder’ ಬಗ್ಗೆ ಪ್ರಸ್ತಾಪಿಸ ಬೇಕಿದೆ. ಲೋಕಸಭಾ ಚುನಾವಣೆಯಲ್ಲಿ ಮಾಡಿದ್ದ ತಪ್ಪನ್ನೇ ಮತ್ತೊಮ್ಮೆ ಮಾಡಿದ್ದು ಜೆಡಿಎಸ್‌ಗೆ ಈಗ ನುಂಗಲಾರದ ತುತ್ತಾಗಿದೆ. ಈ ತಪ್ಪಿನಿಂದ ಆಗಬಹುದಾದ ‘ಡ್ಯಾಮೇಜ್’ ಊಹಿಸಿಯೇ ಜೆಡಿಎಸ್ ವರಿಷ್ಠ ದೇವೇಗೌಡರು ಮಧ್ಯಪ್ರವೇಶ ಮಾಡಿ ‘ಸುಮಲತಾ -ಎಚ್‌ಡಿಕೆ ವಿಷಯ, ಇಲ್ಲಿಗೆ ಬಿಡಿ’ ಎಂದು ಖಡಕ್ ಸಂದೇಶವನ್ನು ರವಾನಿಸಿದರು.

ಲೋಕಸಭಾ ಚುನಾವಣೆಯಲ್ಲಿ ‘ವಿಧವೆ’ ಎನ್ನುವ ಪದವನ್ನು ಜೆಡಿಎಸ್ ನಾಯಕರು ಬಳಸಿ ಸುಮಲತಾ ಅವರ ಪರ ಅನುಕಂಪವನ್ನು ಸೃಷ್ಟಿಸಿದ್ದರು. ಈಗ ಕುಮಾರ ಸ್ವಾಮಿ ಅವರು ಅಂಬರೀಶ್ ಅವರ ಸಾವಿನ ಸಮಯದಲ್ಲಿ ನಾನೇನು ಮಾಡಿದೆ ಎಂದು ಹೇಳಿ ಎಡವಟ್ಟು ಮಾಡಿಕೊಂಡರು. ಎಚ್‌ಡಿಕೆ ‘ಅಂಬರೀಶ್ ಪಾರ್ಥೀವ ಶರೀರವನ್ನು ಮಂಡ್ಯಕ್ಕೆ ತಗೆದುಕೊಂಡು ಹೋಗಿದ್ದು ನಾನೇ’ ಎಂದು ಹೇಳುತ್ತಿದ್ದಂತೆ, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ‘ಬೀದಿ ದಾಸಯ್ಯ ಸಿಎಂ
ಆಗಿದ್ದರೂ ಅದನ್ನು ಮಾಡುತ್ತಿದ್ದರು’ ಎಂದು ಹೇಳಿ ಟಾಂಗ್ ಕೊಟ್ಟರು. ಇತ್ತ ಅಂಬರೀಶ್ ಸ್ಮಾರಕ ನಿರ್ಮಾಣಕ್ಕೆಂದು ಪತ್ರ ನೀಡಿದಾಗ ಆಗ ಮುಖ್ಯಮಂತ್ರಿ ಯಾಗಿದ್ದ ಕುಮಾರಸ್ವಾಮಿ, ದೊಡ್ಡಣ್ಣ ಅವರನ್ನು ಅವಮಾನಿಸಿದ್ದನ್ನು ಬಹಿರಂಗಗೊಳಿಸಿದ್ದು, ಎಚ್‌ಡಿಕೆಗೆ ಮತ್ತೊಂದು ಹಿನ್ನಡೆಯಾಯಿತು.

ಹಳೇ ಮೈಸೂರು ಭಾಗ ಅದರಲ್ಲಿಯೂ ಮಂಡ್ಯ ಜಿಲ್ಲೆಯಲ್ಲಿ ಮಹಿಳೆಯ ವಿಚಾರದಲ್ಲಿ ಮಾತನಾಡುವಾಗ ಎಚ್ಚರಿಕೆಯಿಂದ ಇರಬೇಕು. ಅದರಲ್ಲಿಯೂ ಅಂಬರೀಶ್
ವಿಷಯವನ್ನು ಪ್ರಸ್ತಾಪಿಸುವಾಗ ಇನ್ನಷ್ಟು ಎಚ್ಚರಿಕೆಯಿಂದ ಇರಬೇಕು. ಈಗಾಗಲೇ ಚುನಾವಣಾ ಸಮಯದಲ್ಲಿ ಈ ಎರಡು ವಿಷಯವನ್ನು ಎತ್ತಿ ಭಾರಿ ಹಿನ್ನಡೆಯನ್ನು
ಅನುಭವಿಸಿದ್ದ ಜೆಡಿಎಸ್, ಈಗಲಾದರೂ ಎಚ್ಚರಿಕೆಯಿಂದ ಇರಬೇಕಿತ್ತು. ಆದರೆ ಅದನ್ನು ಮಾಡುವ ಬದಲು, ಮೈಲೇಜ್ ಪಡೆಯಲು ಹೋಗಿ ಡ್ಯಾಮೇಜ್ ಮಾಡಿಕೊಳ್ಳುವ ಸ್ಥಿತಿ ತಂದುಕೊಂಡಿದೆ.

ರಾಜ್ಯದಲ್ಲಿ ಹಲವು ಜ್ವಲಂತ ಸಮಸ್ಯೆಗಳಿದ್ದರೂ, ಆ ಎಲ್ಲವನ್ನು ಬಿಟ್ಟು ಕೆಆರ್‌ಎಸ್ ವಿಷಯವನ್ನು ಜೆಡಿಎಸ್ ಎತ್ತಿಕೊಳ್ಳಲು ಕಾರಣ ಅಲ್ಲಿನ ವೋಟ್ ಬ್ಯಾಂಕ್. ಆರಂಭದಲ್ಲಿ ಇದರಿಂದ ಜೆಡಿಎಸ್‌ಗೆ ಸಹಾಯವಾಯಿತು. ಆದರೆ ಇದಾದ ಬಳಿಕ ವಿವಾದವನ್ನು ಹ್ಯಾಂಡಲ್ ಮಾಡುವ ಭರದಲ್ಲಿ ಮೂಲ ವಿಷಯ ಬಿಟ್ಟಿದ್ದು ಡ್ಯಾಮೇಜ್‌ಗೆ ಕಾರಣ ಎಂದರೆ ತಪ್ಪಲ್ಲ. ಹಾಗೆ ನೋಡಿದರೆ ಸುಮಲತಾ ಅವರು ಎರಡು ವಿಷಯವನ್ನು ಎತ್ತಿದ್ದರು. ಅದರಲ್ಲಿ ಒಂದು ಕೆಆರ್‌ಎಸ್ ಜಲಾಶಯ ಬಿರುಕು ಬಿಟ್ಟಿರುವುದು ಹಾಗೂ ಈ ಬಿರುಕಿಗೆ ಕಾರಣ ಅಕ್ರಮ ಗಣಿಗಾರಿಕೆ ಎನ್ನುವುದಾಗಿತ್ತು.

ಮೊದಲನೇ ವಿಷಯದ ಬಗ್ಗೆ ಈಗಾಗಲೇ ಅಽಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಆದರೆ ಕುಮಾರಸ್ವಾಮಿ ಹಾಗೂ ಜೆಡಿಎಸ್ ನಾಯಕರು ಪದೇ ಪದೆ ಇದೇ ವಿಷಯವನ್ನು ಮಾತನಾಡುತ್ತಿದ್ದಾರೆ ಹೊರತು, ಸುಮಲತಾ ಅವರು ಎತ್ತಿರುವ ಅಕ್ರಮ ಗಣಿಗಾರಿಕೆ ವಿಷಯದಲ್ಲಿ ಪಕ್ಷಾತೀತವಾಗಿ ಬೆಂಬಲಿಸುವುದನ್ನು ಬಿಟ್ಟು, ಅವರನ್ನು ವಿರೋಧಿಸುತ್ತಿರುವುದು ಏಕೆ? ಎನ್ನುವ ಸಂಶಯ ಸಹಜ ವಾಗಿಯೇ ಮೂಡುತ್ತದೆ. ‘ವಿಶ್ವವಾಣಿ ಕ್ಲಬ್‌ಹೌಸ್’ನಲ್ಲಿಯೂ ಸುಮಲತಾ ಅವರು ಇದೇ ಪ್ರಶ್ನೆ ಎತ್ತಿದ್ದರು. ‘ಅಕ್ರಮ ಗಣಿಗಾರಿಕೆಯನ್ನು ಬೆಂಬಲಿಸುವ ಜನರನ್ನು ನೋಡಬಹುದು. ಆದರೆ ಅಕ್ರಮ ಗಣಿಗಾರಿಕೆಯನ್ನು ತಡೆಯಿರಿ ಎಂದು ಪ್ರಶ್ನಿಸುವುದನ್ನು ತಪ್ಪು ಎಂದು ವಾದಿಸುತ್ತಾರೆ ಎಂದರೆ ಅದರ ಅರ್ಥವೇನು?’ ಎನ್ನುವ ಮೂಲಕ, ಕುಮಾರಸ್ವಾಮಿ ಅವರಿಗೆ ಈ ಅಕ್ರಮ ಗಣಿಗಾರಿಕೆಯಿಂದ ಇರುವ ಲಾಭವೇನು? ಎಂದು ಪರೋಕ್ಷವಾಗಿ ಪ್ರಶ್ನಿಸಿದ್ದರು.

ಸ್ಥಳೀಯರ ಪ್ರಕಾರ, ಸುಮಲತಾ ಅವರು ಹೇಳುತ್ತಿರುವ ಅಕ್ರಮ ಗಣಿಗಾರಿಕೆಯ ಹಿಂದೆ ಅನೇಕ ಜೆಡಿಎಸ್ ಸ್ಥಳೀಯ ಮುಖಂಡರು ಹಾಗೂ ರಾಜ್ಯಮಟ್ಟದ ಕೆಲ ನಾಯಕರೂ ಇದ್ದಾರೆ. ಆದರೆ ಅನೇಕರಿಗೆ ಈ ಗಲಾಟೆಯ ಉಗಮ ಸ್ಥಾನ ಎನ್ನುವ ಬಗ್ಗೆ ಸ್ಪಷ್ಟತೆಯಿಲ್ಲ. ಕಳೆದೊಂದು ವಾರದಿಂದ ನಡೆಯುತ್ತಿರುವ ಈ ಗಲಾಟೆಯಲ್ಲಿ ಕುಮಾರಸ್ವಾಮಿ ಅವರು ಸುಮಲತಾ ವಿರುದ್ಧ ಮಾತನಾಡುವ ಮೊದಲು, ಈ ವಿವಾದ ಸೃಷ್ಟಿಯಾಗಿದ್ದು ಸುಮಲತಾ ಅವರು ಸಭೆಯೊಂದರಲ್ಲಿ
‘ಕೆಆರ್‌ಎಸ್ ಬಿರುಕು ಬಿಟ್ಟಿದೆ’ ಎಂದಿರುವುದು. ಮಂಡ್ಯದ ಸಂಸದೆಯಾಗಿ ಸುಮಲತಾ ಅವರು ಈ ಹೇಳಿಕೆ ನೀಡುವಾಗ ಎಚ್ಚರಿಕೆಯಿಂದ ಇರಬೇಕಿತ್ತು. ಜಲಾಶಯ ಎನ್ನುವುದು ತೀರಾ ಸೂಕ್ಷ್ಮ ಹಾಗೂ ಲಕ್ಷಾಂತರ ಜನರ ಜೀವನ ಅವಲಂಬಿತವಾಗಿರುತ್ತದೆ. ಆದ್ದರಿಂದ ಈ ಹೇಳಿಕೆಯನ್ನು ಯಾವುದೇ ವೆಬ್‌ಸೈಟ್ ಅಥವಾ ವರದಿ ನೋಡಿಕೊಂಡು ಬಹಿರಂಗ ಹೇಳಿಕೆ ನೀಡುವ ಬದಲು, ಈ ವಿಷಯ ಬರುತ್ತಿದ್ದಂತೆ ಕೆಆರ್‌ಎಸ್ ಡ್ಯಾಂ ಅಧಿಕಾರಿಗಳೊಂದಿಗೆ ಚರ್ಚಿಸಿ, ಒಂದು ವೇಳೆ ನಿಜವಾಗಿಯೂ ಬಿರುಕಾಗಿದ್ದರೆ, ಅದಕ್ಕೆ ಬೇಕಿರುವ ಕ್ರಮವಹಿಸಬಹುದಾಗಿತ್ತು. ಆದರೆ ಇದನ್ನು ಮಾಡುವ ಬದಲು ಏಕಾಏಕಿ ಸಾರ್ವಜನಿಕವಾಗಿ ಈ ರೀತಿಯ
ಗಂಭೀರ ಆರೋಪ ಹೋರಿಸುವ ಮೂಲಕ ಜನರಲ್ಲಿ ಆತಂಕ ಮೂಡಿಸಿದರು.

ಅಷ್ಟಕ್ಕೂ ಕೆಆರ್‌ಎಸ್ ವಿಷಯದಲ್ಲಿ ಏನೇ ಮಾತನಾಡಿದರೂ ಗೊಂದಲ, ವಿವಾದ, ಗಲಾಟೆ ಸಹಜ. ಅದರಲ್ಲಿಯೂ ಅಣೆಕಟ್ಟಿನ ಸುರಕ್ಷತೆ ಬಗ್ಗೆ ಮಾತನಾಡಿದರೆ
ಸಹಜವಾಗಿಯೇ ಹಳೇ ಮೈಸೂರು ಭಾಗದಲ್ಲಿ ಭಾರಿ ವಿವಾದ ಸೃಷ್ಟಿಯಾಗುತ್ತದೆ. ಏಕೆಂದರೆ ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಯ ರೈತರ ಜೀವನಾಡಿಯಾಗಿ ಕಾವೇರಿ ಕಾಣಿಸಿಕೊಂಡರೆ, ರಾಜಧಾನಿ ಬೆಂಗಳೂರಿಗೆ ಜೀವಜಲವನ್ನು ಒದಗಿಸುವುದು ಇದೇ ಕೆಆರ್‌ಎಸ್‌ನಿಂದ. ಒಂದು ರೀತಿ ಈ ಅಣೆಕಟ್ಟೆಗೆ ಏನೇ ಸಮಸ್ಯೆ ಅಥವಾ ಆಪತ್ತು ಬಂದರೆ, ಈ ಮೂರು ಜಿಲ್ಲೆಗಳು ಮುಳುಗಿ ಅಥವಾ ಕೊಚ್ಚಿ ಹೋಗುವುದು ಸುಳ್ಳಲ್ಲ. ಆದ್ದರಿಂದ ಸುಮಲತಾ ಅವರು ಅಣೆಕಟ್ಟು ಬಿರುಕಾಗಿದೆ ಎಂದು ಹೇಳುತ್ತಿದ್ದಂತೆ, ಈ ಮೂರು ಜಿಲ್ಲೆಯಲ್ಲಿ ಆತಂಕ ಸೃಷ್ಟಿಯಾಗಿದ್ದು ಸುಳ್ಳಲ್ಲ.

ಆದ್ದರಿಂದ ಈ ಮೂರು ಜಿಲ್ಲೆಗಳೇ ಜೆಡಿಎಸ್‌ನ ಟ್ರಂಪ್‌ಕಾರ್ಡ್ ಆಗಿರುವುದರಿಂದ, ತಮ್ಮ ‘ಮತಬ್ಯಾಂಕ್’ ಅನ್ನು ಉಳಿಸಿಕೊಳ್ಳುವ ಅಥವಾ ಮರಳಿ ಪಡೆಯಲು ಕುಮಾರಸ್ವಾಮಿ ಅವರು ಸುಮಲತಾ ವಿರುದ್ಧ ಮುಗಿಬಿದ್ದರು. ಸುಮಲತಾ ಅವರ ವಿರುದ್ಧ ವೈಯಕ್ತಿಕ ವಾಗ್ದಾಳಿ ಅಥವಾ ಅಂಬರೀಶ್ ಸಾವಿನ ಪ್ರಸ್ತಾಪ ಮಾಡುವ ಕುಮಾರಸ್ವಾಮಿ ಅವರದ್ದು ಮೇಲುಗೈ ಆಗಿತ್ತು. ಆದರೆ ಯಾವಾಗ ಸುಮಲತಾ ಅವರ ವೈಯಕ್ತಿಕ ವಿಷಯವನ್ನು ತಂದರೋ, ಆಗ ‘ಮಹಿಳಾ ಅನುಕಂಪ’
ಸುಮಲತಾ ಪರವಾಗಿ ನಿಂತಿತ್ತು. ಇದಾದ ಬಳಿಕ ಕುಮಾರಸ್ವಾಮಿ ಅವರು ಇನ್ನೊಂದು ಹೆಜ್ಜೆ ಮುಂದಕ್ಕೆ ಹೋಗಿ ‘ಅಂಬರೀಶ್ ಶವವವನ್ನು ಮಂಡ್ಯಕ್ಕೆ ತಂದಿದ್ದು ನಾನೇ’ ಎಂದು ಹೇಳಿ, ಸಾವಿನ ವಿಷಯದಲ್ಲಿ ರಾಜಕೀಯಕ್ಕೆ ಮುಂದಾದರೋ ಆ ಸಮಯದಲ್ಲಿ, ಅಂಬರೀಶ್ ಅಭಿಮಾನಿಗಳು ಹಾಗೂ ಮಂಡ್ಯದ ಬಹುತೇಕರು
ಸುಮಲತಾ ಮಾಡಿದ್ದ ಒಂದು ಎಡವಟ್ಟನ್ನು ಮರೆತು, ಅವರ ಬೆಂಬಲಕ್ಕೆ ನಿಂತರು.

ಕುಮಾರಸ್ವಾಮಿ ಅವರು ಇಲ್ಲೊಂದು ಸೂಕ್ಷ್ಮ ವಿಷಯವನ್ನು ಅರ್ಥಮಾಡಿಕೊಳ್ಳಬೇಕಿತ್ತು. ಸುಮಲತಾ ಅವರ ಮಾಡಿದ ತಪ್ಪನ್ನು ಸಾರ್ವಜನಿಕವಾಗಿ ಖಂಡಿಸಿದ
ಬಳಿಕ, ಕೃಷ್ಣರಾಜ ಸಾಗರ ಜಲಾಶಯದ ಕೆಲ ಅಧಿಕಾರಿಗಳು, ಎಂಜಿನಿಯರ್‌ಗಳು, ಡ್ಯಾಂನಲ್ಲಿ ಯಾವುದೇ ಬಿರುಕಿಲ್ಲ ಎಂದು ಸ್ಪಷ್ಟನೆ ನೀಡಿದರು. ಈ ಹಂತದಲ್ಲಿ ಕುಮಾರಸ್ವಾಮಿ ಅವರ ಮೇಲುಗೈ ಸಾಧಿಸಿದ್ದರು. ಅಲ್ಲಿಗೆ ವಿಷಯವನ್ನು ಬಿಟ್ಟಿದ್ದರೆ, ಸಾಕಾಗಿತ್ತು. ಆದರೆ ಈ ವಿಷಯವನ್ನು ಜಗ್ಗಾಡಿದ್ದು ಇಂದಿನ ಜೆಡಿಎಸ್ ಹಿನ್ನಡೆಗೆ ಕಾರಣ ಎಂದರೆ ತಪ್ಪಾಗಲ್ಲ.

ಈ ರೀತಿಯ ಕ್ಷುಲ್ಲಕ ವಿಚಾರಗಳನ್ನು ರಾಡಿ ಮಾಡಿಕೊಂಡು, ಅದು ಇನ್ನೊಂದು ಹಂತಕ್ಕೆ ತಗೆದುಕೊಂಡು ಹೋಗುವ ಅಗತ್ಯವೇ ಇರಲಿಲ್ಲ. ಸುಮಲತಾ ಅವರು
ಕೆಎಸ್‌ಆರ್ ಜಲಾಶಯ ಬಿರುಕು ಬಿಟ್ಟಿದೆ ಎನ್ನುವ ಹೇಳಿಕೆ ನೀಡುತ್ತಿದ್ದಂತೆ, ಕಾವೇರಿ ನಿಗಮ ನಿಯಮಿತ ಹಾಗೂ ಕೆಆರ್‌ಎಸ್ ಹೊಣೆ ಹೊತ್ತಿರುವ ಎಂಜಿನಿಯರ್‌ ಗಳಿಂದ ಸರಕಾರ ಸ್ಪಷ್ಟನೆ ಕೊಡಿಸಿತ್ತು. ಇಲ್ಲಿಗೆ ಈ ವಿಷಯವನ್ನು ಬಿಡಬಹುದಾಗಿತ್ತು. ಇಲ್ಲವೇ, ತಮ್ಮ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳಲು, ‘ಈ ರೀತಿಯ ಹೇಳಿಕೆ ಸರಿಯಲ್ಲ’ ಎನ್ನುವ ಒಂದು ಟ್ವೀಟ್ ಮಾಡಿ ಕೈಬಿಟ್ಟಿದ್ದರೆ ಈ ವಿಷಯ ವಾರಗಟ್ಟಲೇ ಚರ್ಚೆ ನಡೆಯುತ್ತಿರಲಿಲ್ಲ, ದೊಡ್ಡಗೌಡ್ರು ಮಧ್ಯಪ್ರವೇಶ ಮಾಡಬೇಕಾದ
ಅನಿವಾರ್ಯತೆಯೂ ಬರುತ್ತಿರಲಿಲ್ಲ. ಆದರೆ ಅದನ್ನು ಬಿಟ್ಟು, ಕುಮಾರಸ್ವಾಮಿ ಹಾಗೂ ಅವರ ಬೆಂಬಲಿಗರು ಕೆಆರ್‌ಎಸ್ ವಿಷಯವನ್ನು ಬಿಟ್ಟು, ಅಂಬರೀಶ್ ಸಾವು, ಸುಮಲತಾ ವಿರುದ್ಧ ವೈಯಕ್ತಿಕ ಟೀಕಾಪ್ರಹಾರ ನಡೆಸಿದ್ದರಿಂದ ಇಷ್ಟೆಲ್ಲ ಗೊಂದಲಗಳು ಮುಂದುವರಿದವು.

ಈಗಾಗಲೇ ಹೊರಬಂದಿರುವ ಮಾತುಗಳಿಗೆ ಏನೂ ಮಾಡಲು ಆಗುವುದಿಲ್ಲ. ಇನ್ನಾದರೂ, ಈ ವಿಷಯವನ್ನು ಇಲ್ಲಿಗೆ ಕೈಬಿಟ್ಟು, ‘ರಾಜ್ಯದಲ್ಲಿರುವ ಇತರ ಜ್ವಲಂತ ಸಮಸ್ಯೆ’ ಬಗ್ಗೆ ಧ್ವನಿ ಎತ್ತಲು ಪ್ರಾದೇಶಿಕ ಪಕ್ಷದ ಭವಿಷ್ಯದ ಮಾಸ್ ಲೀಡರ್ ಮುಂದಾಗಲಿ.