Sunday, 10th November 2024

hari paraak column: ಕಂಗನಾ ಎಮರ್ಜೆನ್ಸಿ ಬ್ರೇಕ್‌

kangana Ranaut

ತುಂಟರಗಾಳಿ

ಸಿನಿಗನ್ನಡ

ಡಾ.ರಾಜ್‌ಕುಮಾರ್ ಕುಟುಂಬದ ಕುಡಿ ವಿನಯ್ ರಾಜ್ ಕುಮಾರ್ ಹೊಸತನಕ್ಕೆ ತೆರೆದುಕೊಂಡಿರುವ ಚಿತ್ರ ‘ಪೆಪೆ’. ಆದರೆ ಈ ಸಿನಿಮಾಗೆ ಪ್ರೇಕ್ಷಕ ತನ್ನನ್ನು ತಾನು ಹೇಗೆ ತೆರೆದುಕೊಳ್ಳುತ್ತಾನೆ ಅನ್ನೋ ಕುತೂಹಲ
ಎಲ್ಲರಿಗೂ ಇದ್ದೇ ಇತ್ತು. ಮೇಲ್ನೋಟಕ್ಕೆ ‘ಪೆಪೆ’ ಚಿತ್ರದ ಕಥೆಯನ್ನು ಮಾಮೂಲಿ ಸೇಡಿನ ಕಥೆ ಅಂತ ಸುಲಭವಾಗಿ ಹೇಳಿಬಿಡಬಹುದು. ಊರಿನ ಪ್ರಮುಖ ಭಾಗವಾದ ಒಂದು ತೊರೆ, ಈ ಚಿತ್ರದಲ್ಲಿ ಕೂಡಾ ಪ್ರಮುಖ ಪಾತ್ರ ವಹಿಸಿದೆ.

ಈ ತೊರೆ ಚಿತ್ರದಲ್ಲಿ ಒಂದು ಪ್ರತಿಷ್ಠೆಯ ವಿಷಯವಾಗಿ ಕಾಣಿಸಿಕೊಂಡಿದೆ. ಇಲ್ಲಿನ ಪಾತ್ರಗಳು ಅದನ್ನೇ ಸೇಡಿನ ಮೂಲವಾಗಿಸಿಕೊಂಡಿವೆ. ‘ತೊರೆದು ಜೀವಿಸಲಾರೆ ಸೇಡು’ ಅನ್ನೋ ಭಾವವನ್ನು ಈ ಚಿತ್ರದ ಪಾತ್ರ
ಗಳು ಕೊನೆಯವರೆಗೂ ಶ್ರದ್ಧೆಯಿಂದ ಮುಂದುವರಿಸಿವೆ. ನಿರ್ದೇಶಕ ಶ್ರೀಲೇಶ್ ನಾಯರ್ ಈ ತೊರೆಯ ಸುತ್ತಲೇ ಇಡೀ ಚಿತ್ರದ ಕಥೆ ಹೆಣೆದು ‘ತೊರೆಯ ನೀರನು ತೆರೆಗೆ ಚೆಲ್ಲಿ’ ಎನ್ನುವಂಥ ಕಥೆ-ಚಿತ್ರಕಥೆ ಮಾಡಿದ್ದಾರೆ. ತೆರೆಮರೆಯಲ್ಲಿ ಇನ್ನೊಬ್ಬರನ್ನು  ಕೊಲ್ಲುವ ಸೇಡಿನ ಭಾವನೆಯನ್ನೇ ಜೀವಿಸುವ ಪಾತ್ರಗಳ ನಡುವೆ ಇಡೀ ಚಿತ್ರದ ಕಥೆ ಈ ತೊರೆ ಮರೆಯ ಸಾಗುತ್ತದೆ. ಚಿತ್ರದ ವಸ್ತು ಮತ್ತು ನಿರೂಪಣೆಯ ವಿಷಯಕ್ಕೆ ಬಂದ್ರೆ
ನಿರ್ದೇಶಕರು ಇಲ್ಲಿ ತೊರೆಯ ನೀರಿನ ಸೇಡಿನ ಕಮರ್ಷಿಯಲ್ ಎನಿಸಬಹುದಾದ ‘ಪೆಪೆ’ಯ ಕಥೆಗೆ ಆರ್ಟ್ ಸಿನಿ ಮಾದ ನಿರೂಪಣೆಯನ್ನ ಮಿಕ್ಸ್ ಮಾಡಿ‌ ತೇಪೆ ಹಾಕಿದ್ದಾರೆ. ಆದರೆ ಅದರಿಂದಲೇ ಕೆರೆಯ ನೀರಿನಂತೆ ಸಿನಿಮಾ ಕೂಡಾ ಕಲುಷಿತ ಆಗಿದೆ ಅಂತ ಹೇಳೋಕಾಗಲ್ಲ.

ಆದರೆ, ಈ ತೊರೆಯ ನೀರಿನ ಕಥೆಯಲ್ಲಿ ಗಟ್ಟಿತನ ಇಲ್ಲ ಅನ್ನಿಸಿದರೆ, ‘ನೀರಿ ನ ಕಥೆ ಅಲ್ವಾ, ಗಟ್ಟಿ ಇರೋಕೆ ಹೆಂಗೆ ಸಾಧ್ಯ?’ ಅಂತ ಅದಕ್ಕೆ ಸಮರ್ಥನೆ ಕೊಡಬಹುದು. ಆ ಲೆಕ್ಕದಲ್ಲಿ ಈ ಚಿತ್ರ ಒಂಥರಾ ಹಾರ್ಡ್ ವಾಟರ್. ಚಿತ್ರದ ಕೊನೆಯಲ್ಲಿ, ‘ನೀನು ಕಥೆ ಮುಂದುವರಿಸು ಪೆಪೆ’ ಅಂತ ಚಿತ್ರದ ಪಾತ್ರಗಳು ಹೇಳಿದಾಗ, ‘ದಯವಿಟ್ಟು ಬೇಡ’ ಅನ್ನೋ ಗಾಂಧಿ ಕ್ಲಾಸ್ ಪ್ರೇಕ್ಷಕನ ಕೂಗು ನಿರ್ದೇಶಕರ ಕಿವಿ ಮುಟ್ಟುತ್ತದೆ. ಚಿತ್ರದಲ್ಲಿ ಹಿಂಸೆ ಜಾಸ್ತಿ ಇದ್ದರೂ ಗಾಂಧಿ ಅಹಿಂಸೆ ಬೋಧಿಸಿದರು ಅನ್ನೋ ಕಾರಣಕ್ಕೋ ಏನೋ ತೀರಾ ಗಾಂಧಿ ಕ್ಲಾಸ್ ಪ್ರೇಕ್ಷಕ ಕೂಡಾ ಅದನ್ನು ಎಂಜಾಯ್ ಮಾಡೋದಿಲ್ಲ. ಈ ಎಲ್ಲ ಕಾರಣಗಳಿಗಾಗಿ ‘ಪೆಪೆ’ ಕೇವಲ ಒಂದು ವರ್ಗದ ಪ್ರೇಕ್ಷಕರಿಗೆ ಇಷ್ಟ ಆಗುವ ಸಿನಿಮಾ ಆಗಿಬಿಟ್ಟಿದೆ ಅನ್ನಿಸಿದರೆ ತಪ್ಪಿಲ್ಲ. ಆದರೆ ಅದು ಯಾವ ವರ್ಗ ಅಂತ ಹೇಳೋದು ಸ್ವಲ್ಪ ಕಷ್ಟವೇ.

ಲೂಸ್‌ ಟಾಕ್‌- ಕಂಗನಾ ರನೌತ್
ಏನ್ರೀ, ನಿಮ್ಮ ‘ಎಮರ್ಜೆನ್ಸಿ’ ಸಿನಿಮಾ ಸೆಪ್ಟೆಂಬರ್ ೬ಕ್ಕೆ ರಿಲೀಸ್ ಅಂತೆ?
– ಹೌದು. ಸೆಪ್ಟೆಂಬರ್ ೫ ಟೀಚರ್ಸ್ ಡೇ ಅಲ್ವಾ? ಸಿನಿಮಾ ಗೆದ್ರೆ ದುಡ್ಡು ಬರುತ್ತೆ, ಸೋತ್ರೆ ಟೀಚರ್ಸ್ ಡೇ ಕಾರಣಕ್ಕೆ ಬುದ್ಧಿನಾದ್ರೂ ಬರುತ್ತೆ ಅಂತ.

ಸಿನಿಮಾಗೆ ‘ಎಮರ್ಜೆನ್ಸಿ’ ಅಂತ ಹೆಸರಿಟ್ಟಿದ್ದೀರಿ. ಥಿಯೇಟರ್ ಗಳಲ್ಲಿ ಇಂಟರ್ವಲ್ ಟೈಮಿಗೆ ಎಮರ್ಜೆನ್ಸಿ ಬ್ರೇಕ್ ಇರುತ್ತಾ ಇಲ್ವಾ?
– ಅಯ್ಯೋ, ಮೊದ್ಲು ನನಗೆ ಒಂದು ಬ್ರೇಕ್ ಸಿಗ್ಲಿ, ಆಮೇಲೆ ಪ್ರೇಕ್ಷಕರಿಗೆ ಬ್ರೇಕ್ ಕೊಡೋದ್ರ ಬಗ್ಗೆ ನೋಡೋಣ.

ಅದೂ ಕರೆಕ್ಟೇ. ಆದ್ರೆ ಸೆನ್ಸಾರ್ ಆಗದೇನೇ ಸಿನಿಮಾ ರಿಲೀಸ್ ಡೇಟ್ ಅನೌ ಮಾಡಿದ್ದೀರಲ್ಲ. ನೀವೇನಾದ್ರೂ ಕನ್ನಡ ಇಂಡಸ್ಟ್ರಿಯಲ್ಲಿ ಇದ್ದಿದ್ರೆ ನಿಮ್ಮನ್ನ ಬ್ಯಾನ್ ಮಾಡ್ತಾ ಇದ್ರು ಗೊತ್ತಾ?
– ಅಯ್ಯೋ, ಸುಮ್ನಿರಿ, ನನ್ನ ಸಿನಿಮಾಗಳು ಯಾವುದೂ ಗೆಲ್ತಾ ಇಲ್ಲ. ದೇಶದ ಪ್ರೇಕ್ಷಕರೇ ನನ್ನ ಬ್ಯಾನ್ ಮಾಡಿಬಿಟ್ಟಿದ್ದಾರೆ ಅಂತ ನಾನಿದ್ರೆ… ನಿಮ್ಮದೊಂದು.

ಅದ್ ನಿಜ. ಹೋಗ್ಲಿ, ನೀವೇ ಪ್ರೊಡ್ಯೂಸರ್ರು, ನೀವೇ ನಟಿ, ಏನ್ ಸಮಾಚಾರ?
– ಅದೇ ಭಯ ಕಣ್ರೀ. ನನಗೆ ನಾನೇ ಮಾಡಿಕೊಂಡ ಸಿನಿಮಾ. ಸೋತ್ರೆ ಯಾರನ್ನೂ ಟೀಕೆ ಮಾಡೋಕಾಗಲ್ಲ. ‘ಕಂಗನಾ ರನ್ ಔಟ್’ ಅಂತ ಜನ ಗೇಲಿ ಮಾಡ್ತಾರೆ.

ಸರಿ, ನಿಮ್ಮ ಹಳೇ ಬಾಯ್ ಫ್ರೆಂಡ್ ಅಧ್ಯಯನ್ ಸುಮನ್ ನಿಮ್ಮ ಮೇಲೆ ಅಸಹ್ಯಕರ ಆರೋಪಗಳನ್ನ ಮಾಡ್ತಾ ಇದ್ದಾರಲ್ಲ?

– ಅದಕ್ಕೇ ಹೇಳೋದು, ಸರಿಯಾದ ಅಧ್ಯಯನ ಇಲ್ಲದೇ ಸಂದರ್ಶನ ಮಾಡೋಕೆ ಬರಬಾರದು ಅಂತ. ಅವನು ಮಾಡ್ತಿರೋದು ಆರೋಪ ಅಲ್ಲ, ಇರೋ ವಿಷಯ ಹೇಳ್ತಾ ಇದ್ದಾನೆ ಅಷ್ಟೇ.
(ಕಾಲ್ಪನಿಕ ಸಂದರ್ಶನ)

ನೆಟ್ ಪಿಕ್ಸ್

ಖೇಮು ಒಂದ್ಸಲ ಟ್ರೈನ್‌ನಲ್ಲಿ ದೂರ ಪ್ರಯಾಣ ಮಾಡ್ತಾ ಇದ್ದ. ಟ್ರೈನ್‌ ತುಂಬಾ ರಷ್ ಇತ್ತು. ಖೇಮುಗೆ ಹೆಂಗೋ ಒಂದು ಬೋಗಿಯಲ್ಲಿ ಸೀಟು ಸಿಕ್ತು. ಬೋಗಿ ತುಂಬಾ ರಷ್ ಇತ್ತು. ಜನ ನಿಂತ್ಕೊಂಡು ಪ್ರಯಾಣ ಮಾಡ್ತಾ ಇದ್ರು. ಸರಿ, ಲಾಂಗ್ ಜರ್ನಿ ಆದ್ರಿಂದ ಕತ್ತಲಾಗುವ ಹೊತ್ತಿಗೆ ಎಲ್ಲರೂ ಮಲಗೋ ಸಿದ್ಧತೆ ಮಾಡ್ಕೊತಾ ಇದ್ರು. ಆದ್ರೆ ಅವರಲ್ಲಿ ಹಾಡು ಹೇಳೋ ಚಟ ಇರೋ ಒಬ್ಬ ಮಧ್ಯವಯಸ್ಕ ಇದ್ದ. ಅವನ ಜತೆ ಒಂದಿಬ್ಬರು ಗೆಳೆಯರು. ಆ ವ್ಯಕ್ತಿ ಅವರ ಜತೆ ಸೇರಿಕೊಂಡು ಹಾಡು ಹೇಳ್ತಾ ಎಲ್ಲರಿಗೂ ಡಿಸ್ಟರ್ಬ್ ಮಾಡ್ತಾ ಇದ್ದ. ಜತೆಗೆ ಅವನ ಹಾಡು, ಕಂಠ ಕರ್ಕಶವಾಗಿತ್ತು. ಆದರೆ, ಅದಕ್ಕೆ ಅವನ ಗೆಳೆಯರ ಎನ್‌ಕರೇಜ್
ಮೆಂಟು. ಜತೆಗೆ ಪ್ರತಿ ಹಾಡು ಹಾಡಿದ ಮೇಲೂ ಪಕ್ಕದಲ್ಲಿದ್ದ ಇತರ ಪ್ರಯಾಣಿಕರನ್ನ, ‘ಹೆಂಗಿತ್ತು ಹಾಡು, ಚೆನ್ನಾಗ್ ಹಾಡ್ತೀನಾ?’ ಅಂತ ಕೇಳಿ ಕಿರಿಕಿರಿ ಮಾಡ್ತಾ ಇದ್ದ.

ಅವರೂ, ಪಾಪ ಇವನಿಗೆ ಯಾಕೆ ಬೇಜಾರು ಮಾಡೋದು ಅಂತ ‘ಹ್ಞೂ’ ಅಂತಿದ್ರು. ಇದು ಹಿಂಗೇ ನಡೀತಾ ಇತ್ತು. ಎಲ್ಲರಿಗೂ ಕಿರಿಕಿರಿ ಆಗ್ತಾ ಇದ್ರೂ ಯಾರೂ ಅವನಿಗೆ ‘ಹಾಡಬೇಡ ನಿಲ್ಸಪ್ಪ, ಕೆಟ್ಟದಾಗಿ ಹಾಡ್ತೀಯಾ’ ಅಂತ ಹೇಳೋಕೆ ಧೈರ್ಯ ಮಾಡಲಿಲ್ಲ. ಖೇಮು ಕೂಡ ತುಂಬಾ ಹೊತ್ತಿನವರೆಗೂ ಅವನ ಹಾಡು ಕೇಳಿ, ತಲೆ ಕೆಡಿಸಿಕೊಂಡಿದ್ದ. ಕೊನೆಗೊಮ್ಮೆ ತಡೆಯಲಾರದೆ ಹಾಡುತ್ತಿದ್ದ ಆ ವ್ಯಕ್ತಿಯನ್ನ ಮಾತಾಡಿಸಿ ಕೇಳೇಬಿಟ್ಟ ‘ಏನ್ ಸರ್, ನೀವ್ಯಾಕೆ ರೇಡಿಯೋದಲ್ಲಿ ಹಾಡಬಾರದು?’. ತಗೊಳ್ಳಿ, ಮಂಗನಿಗೆ ಹೆಂಡ ಕುಡಿಸಿದಷ್ಟೇ ಸಂತೋಷ ಆಗಿ ಆ ವ್ಯಕ್ತಿ, ‘ಸರ್, ಅಷ್ಟೊಂದ್ ಚೆನ್ನಾಗ್ ಹಾಡ್ತೀನಾ ನಾನು?’ ಅಂತ ಕೇಳಿದ. ಅದಕ್ಕೆ ಖೇಮು ಹೇಳಿದ
‘ಹಂಗೇನಿಲ್ಲ, ರೇಡಿಯೋ ಆಗಿದ್ರೆ ಆಫ್ ಮಾಡಬೋದಿತ್ತು’.

ಲೈನ್ ಮ್ಯಾನ್
ಸಿನಿಮಾಗಳಿಗೆ ಹೊಸ ರೀತಿಯ ಬರಹಗಾರರು ಬೇಕು ಅಂದ್ರೆ ಏನ್ ಮಾಡಬೇಕು?
– ‘ನ್ಯೂ ಟೈಪ್- ರೈಟರ್’ ತರಬೇಕು‌

ಲೇಡೀಸ್ ಟೈಲರ್‌ಗಳಿಗೆ ಒಂದು ಹೆಸರು
– ‘ಹುಕ್ಕಿನ’ ಮನುಷ್ಯ

ಇನ್ನೊಬ್ಬರನ್ನ ಕನ್ವಿನ್ಸ್ ಮಾಡೋ ಕೆಲಸಕ್ಕೆ ಬಹುಮಾನ ಕೊಟ್ಟರೆ ಅದಕ್ಕೆ ಏನಂತಾರೆ?
– ‘ಸಮಾಧಾನಕರ’ ಬಹುಮಾನ‌

ಹೊಸದಾಗಿ ಕಿವಿಗೆ ಶ್ರವಣ ಸಾಧನ ಹಾಕಿಸಿಕೊಂಡವರಿಗೆ ಏನಂತ ಹೇಳಬೇಕು?
– ಹ್ಯಾಪಿ ನ್ಯೂ ‘ಇಯರ್’

ಯಲ್ಲಮ್ಮನ ದೇವಸ್ಥಾನದ ಹುಂಡಿ ಕಳ್ಳತನ: ಸುದ್ದಿ
– ಯಲ್ಲಮ್ಮನ್ ದುಡ್ಡು, ಯಾರ‍್ದೋ ಜಾತ್ರೆ!

ರಸ್ತೆ ಅಡವಿಟ್ಟು ಸಾಲ ಪಡೆದ ಪಾಕಿಸ್ತಾನ
– ಜೀವ್ನ ರೋಡಿಗ್ ಬರೋದು ಅಂದ್ರೆ ಇದೇನಾ?

ಸಂಸ್ಕೃತ ವಿವಿಯಲ್ಲಿ ಸ್ನಾತಕೋತ್ತರ ಪದವಿಗೆ ಏನಂತಾರೆ?
– ‘ಅಯ್ಯರ್’ ಎಜುಕೇಷನ್ ಯಾರಿಗೋ ಸರಿಯಾಗಿ ಹೊಡೆದು ಅರೆ ಆದ ಕನ್ನಡ ಹೋರಾಟಗಾರನ ಇಷ್ಟದ ಸಾಲುಗಳು
– ‘ಬಾರಿಸು’ ಕನ್ನಡ ಡಿಂಡಿಮವ.
– ಕನ್ನಡಕ್ಕಾಗಿ ‘ಕೈ ಎತ್ತು’, ನಿನ್ನ ಕೈ ಕಲ್ಪವೃಕ್ಷವಾಗುತ್ತದೆ.

ರೈತರ ಜೀವನದ ಸ್ಲೋಗನ್
– ‘ಹೊಲವೆ’ ಜೀವನ ಸಾಕ್ಷಾತ್ಕಾರ

ಮುದುಕ ಮುದುಕಿಯರು ತಮ್ಮ ಯೌವನದ ಸೌಂದರ್ಯವನ್ನು ನೆನಪಿಸಿಕೊಳ್ಳೋದು ಹೇಗೆ ?
– ‘ಅಂದ’ ಕಾಲತ್ತಿಲ್ ನಾನೂ ಸುಂದರವಾಗಿದ್ದೆ.