Friday, 18th October 2024

ಇತಿಹಾಸಕಾರರಿಗೆ ಕುಮರಿಲ ಭಟ್ಟನ ಉಗ್ರ ನಿಯತ್ತು ಬೇಕು

ರಾವ್-ಭಾಜಿ

ಪಿ.ಎಂ.ವಿಜಯೇಂದ್ರ ರಾವ್‌

journocate@gmail.com

ಪ್ರತಿ ವಾರ ಸವಾಲಾಗುವುದು ಬರೆಯಲು ಕೈಗೆತ್ತಿಕೊಳ್ಳಬೇಕಾದ ವಿಷಯದ ಆಯ್ಕೆ ಮಾತ್ರವಲ್ಲ. ಯಾವ ಪುಸ್ತಕ ಮೊದಲು ಓದುವುದು ಎಂಬುದು ಮತ್ತೊಂದು ಸವಾಲು. ಒಂದಕ್ಕಿಂತ ಮತ್ತೊಂದು ಉತ್ತಮ ಪುಸ್ತಕ ಎದುರಿಗಿವೆ. ಆದಷ್ಟು ಬೇಗ, ಅವು ನನ್ನನ್ನು ಅಣಕಿಸುವುದಕ್ಕಿಂತಲೂ ಮುನ್ನ ಅವುಗಳನ್ನು ಓದಬೇಕು.

ಓದಿದರೆ ಸಾಲದು, ಅರಗಿಸಿಕೊಳ್ಳಲೂ ಬೇಕು. ಅರಗಿಸಿಕೊಂಡು ಅವುಗಳ ಬಗ್ಗೆ ಬರೆಯಲೂ ಬೇಕು. ಹಾಗೆ ಮಾಡಿದರೆ, ಈ ಅಂಕಣವನ್ನು ಪುಸ್ತಕ ವಿಮರ್ಶೆಗಾಗಿ
ಮುಡುಪಾಗಿಡಬೇಕಾಗುತ್ತದೆ. ಓದಲು ಕೈಬೀಸಿ ಕರೆಯುತ್ತಿರುವ ಪುಸ್ತಕಗಳು ಅಷ್ಟಿವೆ. ಈ ಅಂಕಣವನ್ನು ಪುಸ್ತಕ ಲೋಕವನ್ನಾಗಿ ಪರಿವರ್ತಿಸುವ ಇರಾದೆ ನನಗಿಲ್ಲ. ಸಂಪಾದಕೀಯ ಪುಟದಲ್ಲಿ ಪುಸ್ತಕ ವಿಮರ್ಶೆಯನ್ನು ಮಾಡುವುದು ಉಚಿತವೂ ಅಲ್ಲ. ಹಾಗಾಗಿ ಸದ್ಯೋಜಾತರ ಮಿಹಿರಕುಲಿಯನ್ನು ವಿಮರ್ಶೆಯ ಒರೆಗೆ
ಹಚ್ಚುತ್ತಿಲ್ಲ. ಅಂಥ ಅಪೂರ್ವ ಪುಸ್ತಕದ ವಿಮರ್ಶೆಗೆ ಈ ಅಂಕಣ ಒದಗಿಸುವ ಸ್ಥಳ ಸಾಲದು. ಇತ್ತೀಚೆಗಷ್ಟೇ ಹೊರಬಂದ ಮಿಹಿರಕುಲಿ ಅಲ್ಪ ಕಾಲದ ಎರಡು
ಮುದ್ರಣಗಳನ್ನು ಕಂಡು ಮೂರನೇ ಮುದ್ರಣಕ್ಕೆ ಧಾವಿಸಿದೆ.

ಭೈರಪ್ಪನವರ ಆವರಣ ಕಾದಂಬರಿಯನ್ನು ನೆನಪಿಸುವುದು ಪುಸ್ತಕದ ದಾಖಲೆ ಮಾರಾಟವೊಂದೇ ಅಲ್ಲ. ಮಿಹಿರಕುಲಿಯ ಕಥಾವಸ್ತುವೂ ಕೂಡ. ಲೇಖಕ
ಸದ್ಯೋಜಾತರ ಅಧ್ಯಯನಶೀಲತೆ ಭೈರಪ್ಪನವರಗಿಂತ ಕಡಿಮೆ ಇಲ್ಲ. ಫೇಸ್ಬುಕ್‌ನಲ್ಲಿ ಸದ್ಯೋಜಾತರ ಬಿಡಿ ಲೇಖನಗಳನ್ನು ಓದುವ ನನಗೆ ಮಿಹಿರಕುಲಿ, ಪ್ರಕಾಶಕ ಮಿತ್ರ ರಾಧಾಕೃಷ್ಣರ ಮೂಲಕ ಕೈಸೇರಿದಾಗ ಪುಳಕ ವಾಯಿತು. ಅದರ ಬೆನ್ನ ಮತ್ತೊಬ್ಬ ಫೇಸ್ಬುಕ್ ಮಿತ್ರರಾದ ಡಾ.ರಾಘವೇಂದ್ರ ವೈಲಾಯರ ಸರಸ್ವತಿ ನಾಗರಿಕತೆ (ಇಂಗ್ಲಿಷ್ ಮೂಲ ಮೇಜರ್ ಜನರಲ್ (ನಿ) ಜಿಡಿ ಭಕ್ಷಿ) ಕೂಡ ಬಂದು ತಲುಪಿತು.

ಮತ್ತೆ ಆಯ್ಕೆಯ ಗೊಂದಲಕ್ಕೆ ಬಿದ್ದೆ. ಪಂಚಭಕ್ಷ ಪರಮಾನ್ನದ ಎಲೆ ಮುಂದಿರುವಾಗ ಯಾವುದನ್ನು ಮೊದಲು ಬಾಯಿಗಿಡುವುದು? ಇಬ್ಬರೂ ಘಟಾನುಘಟಿ ಗಳು. ಇಬ್ಬರೂ ಅಪ್ಪಟ ರಾಷ್ಟ್ರಭಕ್ತರು. ಇಬ್ಬರೂ ಸತ್ಯಪಕ್ಷಪಾತಿಗಳು. ಹಾಗಾಗಿ, ದಿಟ್ಟರು. ಇಬ್ಬರ ಭಾಷೆಯೂ ಸೊಗಸಾಗಿದೆ. ಇವರೀರ್ವರ ಓದಿನ ಆಳವಿಸ್ತಾರಗಳು ಹುಬ್ಬೇರಿಸುವಂಥದ್ದು. ಗೊಂದಲದಿಂದ ಹೊರಬರುವಷ್ಟರಲ್ಲಿ ಡಾ.ರಾಘವೇಂದ್ರರು ಈಗಾಗಲೇ ಸರಸ್ವತಿ ನಾಗರಿಕತೆಯನ್ನು ವಿಶ್ವವಾಣಿ ಓದುಗರಿಗೆ
ಪರಿಚಯಿಸಿದ್ದಾರೆ. ಆ ಕಾರಣಕ್ಕೆ ಈ ಲೇಖನವನ್ನು ಮಿಹಿರಕುಲಿಯ ಸಂಕ್ಷಿಪ್ತ ಪರಿಚಯಕ್ಕೆ ಮೀಸಲಾಗಿಡುತ್ತೇನೆ. ಎರಡೂ ಪುಸ್ತಕಗಳನ್ನು ಓದಿಲ್ಲದಿರುವುವರು ಕೊಳ್ಳಲು ತಡಮಾಡಬೇಡಿ. ಇವರಿಬ್ಬರನ್ನು ಓದುವುದು ದೇಶಕ್ಕೆ, ಕನ್ನಡ ಭಾಷೆಗೆ ಮತ್ತು ಈ ಸರಸ್ವತಿಪುತ್ರರತ್ನದ್ವಯರಿಗೆ ನಾವೆಲ್ಲರೂ ಸಲ್ಲಿಸಬಹುದಾದ ಕನಿಷ್ಠ ಗೌರವ. ಸಂಕಷ್ಟಿ ಚತುರ್ಥಿಯಂದು ನೀವು ಬಂಗಾರ ಕೊಂಡಿರದಿದ್ದರೆ ನಿಮ್ಮ ಬದುಕೇನು ಬಡವಾಗಲಿಲ್ಲ, ಆದರೆ ಇವೆರಡು ಪುಸ್ತಕಗಳನ್ನು ಕೊಂಡು ಓದಲು ವಿಳಂಬ ಬೇಡ. ಮಕ್ಕಳಿರುವ ಮನೆಯಲ್ಲಿ, ಇಂಗ್ಲಿಷ್ ದುರ್ವ್ಯಾಮೋಹದಿಂದ ಅವರಿಗೆ ಕನ್ನಡಾಭ್ಯಾಸ ಮಾಡಿಸದ ಪೋಷಕರು ಇವೆರಡೂ ಪುಸ್ತಕಗಳನ್ನು ಓದಿದ ನಂತರ ತಮ್ಮ ತಪ್ಪಿಗೆ ಕೊರಗದಿರಲಾರರು.

ಆ ತಪ್ಪಿಗೆ ಪ್ರಾಯಶ್ಚಿತ್ತವಾಗಿ ಮಿಹಿರಕುಲಿಯನ್ನು ಕತೆ ಹೇಳುವಂತೆ ಹೇಳಿ ಮಕ್ಕಳಿಗೆ ಮನದಟ್ಟು ಮಾಡಿಸಿ. (ಮೂಲ ಸರಸ್ವತಿ ನಾಗರಿಕತೆ ಇಂಗ್ಲಿಷ್ ನಲ್ಲಿ ಲಭ್ಯ ವಿದೆ.) ಆವರಣ ಇತಿಹಾಸದ ಒಂದು ನಿರ್ದಿಷ್ಟ ಅವಽಯನ್ನಾಧರಿಸಿದ ಕಥಾಚಿತ್ರವಾದರೆ, ಮಿಹಿರಕುಲಿ ದೆಹಲಿಯ ಪುರಾಣ – ಇತಿಹಾಸಗಳಲ್ಲಿ ಕೇಂದ್ರೀಕೃತ ವಾದ ಸಾಕ್ಷ್ಯಚಿತ್ರ. ಎರಡರ ಉದ್ದೇಶವೂ ಅಜೆಂಡಾ – ಪ್ರೇರಿತ ಇತಿಹಾಸದ ಅನಾವರಣವೇ. ಅಪ್ಪನಿಂದ ಸ್ಫೂರ್ತಿಗೊಂಡು ನೈಜ ಇತಿಹಾಸದ ಅಧ್ಯಯನದತ್ತ ವಾಲುವ ಆವರಣದ ಲಕ್ಷ್ಮಿಯನ್ನು ನೆನಪಿಸುವಂತೆ ಸದ್ಯೋಜಾತರು ಅರೆಕಲಿತ ಇತಿಹಾಸಕಾರರ ಕೃತ್ರಿಮಗಳನ್ನು ಬಹಿರಂಗಗೊಳಿಸುತ್ತಲೇ ತಮ್ಮ ನಿಸ್ಪೃಹ, ನಿಯಮಬದ್ಧ ಅಧ್ಯಯನವನ್ನು ತಮ್ಮ ಸಂಶೋಧನಾ ವಿದ್ಯಾರ್ಥಿನಿ ಭಾಸ್ವತಿಯೊಂದಿಗೆ ಹಂಚಿಕೊಳ್ಳುತ್ತಾ ಹೋದಂತೆ ಓದುಗರ ಮನವನ್ನು ಆಕ್ರಮಿಸುತ್ತಾರೆ.

ಉದ್ದೇಶಪೂರ್ವಕವಾಗಿ, ನಾನಿಲ್ಲಿ ಪುಸ್ತಕದ ವಸ್ತುವಿನ ಬಗ್ಗೆ ಹೆಚ್ಚು ಮಾಹಿತಿ ನೀಡುತ್ತಿಲ್ಲ. ಮುಂದುವರಿಯುವುದಕ್ಕಿಂತ ಮುಂಚೆ ಒಂದು ಘಟನೆಯನ್ನು ನಿಮ್ಮ
ಮುಂದಿಡುತ್ತೇನೆ. ತೊಂಬತ್ತರ ದಶಕವದು. ಡೆಕ್ಕನ್ ಹೆರಾಲ್ಡ್ ದಿನಗಳು. ಒಂದೆರಡೊ ಮೂರು ದಿನ ರಜೆಯಲ್ಲಿದ್ದೆ. ವಿಶೇಷ ಕಾರಣವೇನೂ ಇರಲಿಲ್ಲ. ಸ್ನೇಹಿತ ನೊಬ್ಬನ ಫಿಯೆಟ್ ಕಾರ್ ನಲ್ಲಿ ಒಟ್ಟು ನಾಲ್ಕು ಜನ ಸ್ನೇಹಿತರು ನಾಗರಹೊಳೆಗೆ ಹೋದೆವು. ಒಂದೆರಡು ಗಂಟೆ ಸುತ್ತಾಡಿ ಕತ್ತಲಾಗುವುದರೊಳಗೆ ಕಾಡಿನಿಂದ ಹೊರಬಿದ್ದು ವಾಪಸಾಗುವುದಿತ್ತು. ಮುಸ್ಸಂಜೆ. ಹೊರಟು ಬರುವಾಗ ಕಾಡಿಗೆ ಬೆಂಕಿ ಬಿದ್ದಿತ್ತು. ನಾವು ಆ ಮುಂಚೆ ನೋಡದಂಥ ಕಾಡ್ಗಿಚ್ಚು. ಕುರುಚಲು (semi-deciduous) ಅರಣ್ಯವಾದ ಈ ಭಾಗದಲ್ಲಿ, ಕಾಡ್ಗಿಚ್ಚಿಗೆ ನೈಸರ್ಗಿಕ ಕಾರಣಗಳಿಲ್ಲ.

ಎತ್ತರದ ಮರಗಳೂ ಹೊತ್ತಿ ಉರಿಯುತ್ತಿದ್ದವು. ಫೋಟೊ ತೆಗೆಯಲು ಕ್ಯಾಮೆರಾ ಇರಲಿಲ್ಲ. ಮೊಬೈಲ್ – ಪೂರ್ವ ದಿನಗಳು. ಡಿಸಿಎಂ ಎಲ್ಲಿದ್ದಾರೆಂದು ಬೆಂಕಿಯನ್ನು ನಂದಿಸಲು ಹೆಣಗಾಡುತ್ತಿದ್ದ ಅರಣ್ಯ ಇಲಾಖೆಯ ನೌಕರನೊಬ್ಬನನ್ನು ಪ್ರಶ್ನಿಸಲಾಗಿ ಅವರೂ ಬೆಂಕಿ ಬಡಿಯಲು ಹೋಗಿದ್ದಾರೆಂದು ಉತ್ತರಿಸಿದ. ಇಡೀ ಕಾಡೇ ಉರಿದು ಭಸ್ಮವಾಗುತ್ತದೆಂಬ ಆತಂಕದಿಂದ ಕೂಡಲೇ ಮೈಸೂರಿಗೆ ಹಿಂತಿರುಗಿದೆವು. ಬೆಂಗಳೂರಿನ ಕೇಂದ್ರ ಕಚೇರಿಗೆ ಫೋನ್ ಮಾಡಿ, ನಾನು ರಜೆಯಲ್ಲಿರುವು ದರಿಂದ ಸುದ್ದಿಯನ್ನು (ಅವರು ಅಷ್ಟೇನೂ ಸಮರ್ಥರಲ್ಲದಿರುವುದರಿಂದ) ಸಹೋದ್ಯೋಗಿಯೊಬ್ಬರ ಹೆಸರಲ್ಲಿ ನಾನೇ ಕಳಿಸುವುದಾಗಿ ತಿಳಿಸಿ, ಸಹೋದ್ಯೋಗಿಯ ಅನುಮತಿಯನ್ನೂ ಪಡೆದು, ಸಿದ್ಧಪಡಿಸಿ ರವಾನಿಸಿದೆ.

ಶಾಸನ ಸಭೆ ಅಽವೇಶನದಲ್ಲಿತ್ತು. ಡೆಕ್ಕನ್ ಹೆರಾಲ್ಡ್ ವರದಿಯನ್ನಾಧರಿಸಿ ಕಾಡ್ಗಿಚ್ಚಿನ ಸುದ್ದಿ ಸದನದಲ್ಲಿ ಗುಬ್ಬಿಸಿತು. ಬೆದರಿದ ಡಿಸಿಎಂ ಕಚೇರಿಗೆ ಫೋನ್
ಮಾಡಿದರು. ಸಹೋದ್ಯೋಗಿ ನನ್ನ ಕೈಗೆ ರಿಸೀವರ್ ಕೊಟ್ಟರು. ಮೊದಲಿಗೆ, ಅನಾಹುತವನ್ನೇ ಅಲ್ಲಗಳೆದ ಡಿಸಿಎಂ, ಸಣ್ಣಪುಟ್ಟ ಬೆಂಕಿಯಾಗಿದ್ದರೆ ನಿಮ್ಮಂಥ ಹಿರಿಯ ಅಽಕಾರಿಯೇಕೆ ಅದನ್ನು ನಂದಿಸಲು ಹೋಗುತ್ತಿದ್ದಿರಿ ಎಂದು ಕೇಳಿದಾಗ ವರದಿ ನಿಜವೆಂದು ಒಪ್ಪಿಕೊಂಡರು. ಅಂದು ಸಂಜೆಯೇ ಅದೃಷ್ಟವಶಾತ್ ಬಿದ್ದ ಮಳೆಯಿಂದ ಹಾನಿಯ ಪ್ರಮಾಣ ಹೆಚ್ಚಾಗಲಿಲ್ಲ. ನಂತರ ಸ್ಥಳಕ್ಕೆ ಭೇಟಿಕೊಟ್ಟ ಇನ್ನಿತರ ಮುಖ್ಯವಾಹಿನಿ ಪತ್ರಿಕೆಗಳೆಲ್ಲವೂ ಕಾಡ್ಗಿಚ್ಚು ಬಿದ್ದೇ ಇಲ್ಲ ಎಂದು ವರದಿ ಮಾಡಿದವು.

ಬೇರೆ ಪತ್ರಿಕೆಗಳ ಮಾತು ಬಿಡಿ, ನಮ್ಮದೇ ಸಂಸ್ಥೆಯ ಪತ್ರಿಕೆಯಾದ ಪ್ರಜಾವಾಣಿ, ಎಲ್ಲಾ ತಣ್ಣಗಾದ ನಂತರ ಬೆಂಕಿ ಬಿದ್ದಿಲ್ಲವೆಂದು ಡಂಗುರ ಬಾರಿಸಿತು. ಅದಕ್ಕೆ ಪೂರಕವಾಗಿ ಬೆಂಕಿ ಬೀಳದಿದ್ದ ಜಾಗದ ಚಿತ್ರಗಳೆರಡನ್ನೂ ಮುದ್ರಿಸಿತು. ಇಲ್ಲಿ, ನಾನು ಪ್ರತ್ಯಕ್ಷದರ್ಶಿಯಾಗಿದ್ದಿದು ಆಕಸ್ಮಿಕ. ಅದು ಅಮುಖ್ಯ. ಸೂಕ್ಷ್ಮ ಅರಣ್ಯ ಪ್ರದೇಶವೊಂದಕ್ಕೆ ಹಾನಿಯಾದಾಗ ಆ ಬಗ್ಗೆ ಆತಂಕಗೊಂಡು ವಾಸ್ತವದ ಚಿತ್ರಣವನ್ನು ಓದುಗರ/ವೀಕ್ಷಕರ ಮುಂದಿಡಬೇಕಾದ್ದು ವೃತ್ತಿಪರ ಪತ್ರಕರ್ತರೆಲ್ಲರ ಕರ್ತವ್ಯ. ನನಗೆ ಸಿಗದ ಸುದ್ದಿ ಸುದ್ದಿಯೇ ಅಲ್ಲವೇ? ಸುಳ್ಳುಗಳನ್ನು ಹೇಳಲು ವರದಿಗಾರನ ಮೇಲಿರುವ ಒತ್ತಡವಾದರೂ ಏನು? ಈ ಪ್ರಕರಣದಲ್ಲಿ, ನಾನು ಕಂಡಂತೆ, ಬಹಳಷ್ಟು ವರದಿಗಾರರಿಗಿದ್ದ ಅಸ್ಥಿರತೆ.

ಸುದ್ದಿ ತಪ್ಪಿದ್ದಕ್ಕಾಗಿ ಎಲ್ಲಿ ಕೆಲಸ ಹೋದೀತೆಂಬ ಆತಂಕ. ಗಾಳಿ ನೀರಿನ ಜತೆಗೆ ವನ್ಯಸಂಪತ್ತನ್ನು ಕರುಣಿಸುವ ಪರಿಸರದ ಬಗ್ಗೆ ಕಾಳಜಿ ತೋರದ ವರದಿಗಾರರು ಅದನ್ನು ಕಾಪಾಡುವ ಹೊಣೆ ಹೊತ್ತ ವನಪಾಲಕರನ್ನು ಹೇಗೆ ತಾನೇ ಜವಾಬುದಾರರನ್ನಾಗಿಸಬಲ್ಲರು? ನೌಕರಿ ಕಳೆದುಕೊಳ್ಳುವ ಭಯಕ್ಕೆ ಒಂದು ಸಂಭವಿಸಿದ
ಘಟನೆಯನ್ನು ಇಲ್ಲವಾಗಿಸುವಬಹುದಾದರೆ, ಮೊಘಲರ ಬೀಭತ್ಸ ದುರಾಡಳಿತದಲ್ಲಿ ಜೀವ ಕಳೆದುಕೊಳ್ಳದಿರಲು ಏನೆ ಸುಳ್ಳುಗಳನ್ನು ಶತಮಾನಗಳ ಕಾಲ ಹರಿಸಿರಬಹುದು? ಆ ಸುಳ್ಳಿನ ಮಹಾನದಿಗೆ ಅದೆಷ್ಟು ಸುಳ್ಳುಗಳ ಉಪನದಿಗಳು ಬ್ರಿಟಿಷರ ಆಳ್ವಿಕೆಯಲ್ಲಿ ಉದಯಿಸಿರಬಹುದು? ಸುಳ್ಳಿನ ಸರದಾರರಾದ ಮಾರ್ಕ್ಸಿಸ್ಟರ ಕಪಿಮುಷ್ಟಿಯಲ್ಲಿರುವ ಮುಖ್ಯವಾಹಿನಿ ಮಾಧ್ಯಮ ಆ ನದಿಪಾತ್ರಕ್ಕೆ ನೀರುಣಿಸುತ್ತಲೇ ಬಂದಿದ್ದು ಅಲ್ಲಿ ಜನ್ಮ ತಳೆದ ಮತ್ಸ್ಯಕನ್ಯೆಯಲ್ಲವೇ ರೋಮಿಲಾ ಥಾಪರ್? ಶತಮಾನಗಳಿಂದ ಸೇರಿಕೊಂಡ ಈ ಕೊಚ್ಚೆ ರಾಡಿಯನ್ನು ತೆಗೆಯುವುದೆಂದರೆ ಗಂಗಾ ನದಿಯನ್ನು ಶುದ್ಧಿಗೊಳಿಸುವ ಬೃಹತ್ ಯೋಜನೆಯಂತೆ.

ಸದ್ಯೋಜಾತರು (ಮತ್ತು ವೈಲಾಯರು) ಅಂಥ ಕ್ಲಿಷ್ಟ ಸವಾಲನ್ನು ಎತ್ತಿಕೊಂಡು ಇತಿಹಾಸದ ಸುಳ್ಳಿನ ಮಾಲೆಯನ್ನು ಕಿತ್ತೆಸಿದಿದ್ದಾರೆ. ಯಾವನೇ ಬೀದಿ ಭಿಕಾರಿಯೂ ದೆಹಲಿಯಂಥ ಐತಿಹಾಸಿಕ ನಗರದ ಗದ್ದುಗೆ ಏರಬಹುದೆಂದು ಮೊದಲು ಸಾಬೀತಾಗಿದ್ದು ಕುತುಬ್ ಉದ್ದೀನ್ ಐಬಕ್ ಎಂಬ ಮೊಹಮ್ಮದ್ ಘೋರಿಯ ಗುಲಾಮನಿಗೆ ಪದವಿ ಪ್ರದಾನವಾದಾಗ. ದಂಡುಪಾಳ್ಯ ಗ್ಯಾಂಗಿಗೆ ಲೂಟಿ ಮಾಡಲು ಪರವಾನಗಿ ನೀಡಿದಂತೆ ಮೊಘಲರ ಅನಾಗರಿಕತೆಗೆ ಮೈಯೊಡ್ಡಿ ನಿಂತ ದೆಹಲಿ ತನ್ನತನವನ್ನು ಕಳೆದುಕೊಂಡು ನಜ್ಜುಗುಜ್ಜಾಯ್ತು. ದೇವಾಲಯಗಳನ್ನು ನಾಶಮಾಡಿದ ಆ ರಕ್ತಪಿಪಾಸು ಪುರಾಣಪ್ರಸಿದ್ಧ ಯಜ್ಞ ಸ್ತನ್ಭವನ್ನು ತನ್ನದೆಂದು
ಹೇಳಿಕೊಂಡದ್ದನ್ನೇ ಇತಿಹಾಸದ ಪುಟಗಳಲ್ಲಿ ದಾಖಲು ಮಾಡಿದ ನವ ಇತಿಹಾಸಕಾರರ ಬೌದ್ಧಿಕ ದಿವಾಳಿತನವನ್ನು ಬಯಲು ಮಾಡಿದ್ದಾರೆ.

ಶಕಪುರುಷರಾದ ಅಗ್ನಿವಂಶದ ವಿಕ್ರಮಾದಿತ್ಯನಂಥ ಚಕ್ರವರ್ತಿಯ ಅಸ್ತಿತ್ವದ ಬಗ್ಗೆಯೇ ಗೊಂದಲ ಸೃಷ್ಟಿಸಿ ಅವನ ಮತ್ತು ಶಾಲಿವಾಹನರ ಯುಗಗಳನ್ನೇ ತಿರುಚುವ ಪಾಶ್ಚಾತ್ಯರ ಕುತ್ಸಿತ ಯತ್ನವನ್ನು ಸದ್ಯೋಜಾತರು ದಾಖಲೆ ಸಮೇತ ಬಯಲಿಗೆಳೆದಿದ್ದಾರೆ. ಭರತವರ್ಷದ ಉಜ್ವಲ ಇತಿಹಾಸದಿಂದ 1207 ವರ್ಷ ಗಳನ್ನು ನಾಪತ್ತೆಯಾಗಿಸುವ ಅಡ್ಡಕಸುಬಿ ಇತಿಹಾಸಕಾರರ ಷಡ್ಯಂತ್ರಕ್ಕೂ ನಮ್ಮ ವರ್ತಮಾನದ ಕೆರೆಕಟ್ಟೆಗಳನ್ನೇ ಗುಳುಂ ಮಾಡಿ, ದಾಖಲೆಗಳನ್ನು ಅದೃಶ್ಯ ವಾಗಿಸುವ ವರ್ತಮಾನದ ರಾಜಕಾರಣಿಗಳಿಗೂ ಸಾಮ್ಯತೆ ಕಾಣುತ್ತದೆ.

ಹಂಚಿಹೋಗಿದ್ದ ದೇಶದ ವಿವಿಧ ಪ್ರಾಂತ್ಯಗಳನ್ನು ದಾಳಿಕೋರರು ಒಗ್ಗೂಡಿಸಿದರು ಎಂಬ ಲಜ್ಜೆಗೇಡಿ ಸುಳ್ಳನ್ನೂ ಮಿಹಿರಕುಲಿ ನಿರ್ವಿವಾದವಾಗಿಸಿದೆ. ದೇವಾಲಯ ಗಳು ರಾಮಾಯಣ ಮಹಾಭಾರತದ ಕಾಲದಿಂದಲೂ ಇದ್ದವು, ಭಾರತೀಯ ಜ್ಞಾನ ಪರಂಪರೆ ಅತ್ಯುನ್ನತವಾದದ್ದು ಮತ್ತು ಪುರಾತನವಾದದ್ದು ಎಂಬ ಅಮೂಲ್ಯ ಸತ್ಯವನ್ನು ಈ ಪುಟ್ಟ ಗ್ರಂಥ ಎತ್ತಿ ಹಿಡಿದಿದೆ. ಇತಿಹಾಸ ಬರೆಯಬೇಕಾದ್ದು ಗೆದ್ದವರಲ್ಲ, ಸತ್ಯಕ್ಕೆ ಬದ್ಧರಾದವರು ಎಂಬುದನ್ನು ಮಿಹಿರಕುಲಿ ಮತ್ತೆ ಪ್ರತಿಪಾದಿಸಿದೆ. ಸಂಸ್ಕೃತದ ಗಂಧವಿಲ್ಲವರು ಭಾರತ ಇತಿಹಾಸವನ್ನು ದಾಖಲಿಸುವ ಕೆಲಸದಿಂದ ದೂರವಿದ್ದಷ್ಟೂ ದೇಶಕ್ಕೆ ಹಿತ ಎಂಬುದೂ ಅರ್ಥವಾಗುತ್ತದೆ. ಸರ್ವ ಕಾಲದಲ್ಲೂ ಸತ್ಯಾನ್ವೇಷಣೆ ಮಾಡುವ ಹೊಣೆಗಾರಿಕೆ ಇತಿಹಾಸಕಾರರಿರಬೇಕು. ಇಸಂ ಅಂಥ ಸಾಧ್ಯತೆಯನ್ನು ದೂರಮಾಡುತ್ತದೆ. ವೇದವನ್ನು ಸಂಶಯ ದೃಷ್ಟಿಯಿಂದ ನೋಡಿದ್ದಕ್ಕೆ ಪ್ರಾಯಶ್ಚಿತ್ತವಾಗಿ ಆತ್ಮಾಹುತಿ ಮಾಡಿಕೊಳ್ಳುವ ಕುಮರಿಲ ಭಟ್ಟನಂಥ ನ್ಯಾಯಪರತೆ ಇತಿಹಾಸಕಾರನಲ್ಲಿರಬೇಕು.

ವಿವಿಧ ಕಾರಣಗಳಿಗೆ ಭಾರತದ ಇತಿಹಾಸದಲ್ಲಿ ಸುಳ್ಳುಗಳನ್ನು ಹೆಣೆದವರಿಗೆ ಕುಮರಿಲ ಭಟ್ಟನಂಥ ಹರಿತವಾದ ಪಾಪಪ್ರಜ್ಞೆಯೇನಾದರೂ ಇದ್ದಿದ್ದರೆ ಇಂದು ಅಗ್ನಿದೇವನ ಕೆನ್ನಾಲಗೆ ಮುಗಿಲನ್ನು ಮುಟ್ಟುತ್ತಿತ್ತು. ಮಿಹಿರಕುಲಿ ಸರಾಗವಾಗಿ ಓದಿಸಿಕೊಳ್ಳುತ್ತದೆ. ವಿಚಾರ ಗಹನವಾಗಿದ್ದರೂ, ಭಾಷೆ ಮತ್ತು ಶೈಲಿ ಓದುಗರನ್ನು
ಹಿಡಿದಿಡುತ್ತದೆ. ಅನೇಕ ಅಽಕೃತ ಆಕರಗಳನ್ನು ಪರಾಮರ್ಶಿಸುವುದರ ಜತೆಗೆ ಯಾವ ಮೂಲದಿಂದ ಎಷ್ಟು ತೆಗೆದುಕೊಳ್ಳಬೇಕು ಎಂಬ ವಿದ್ವತ್ – ಜನ್ಯ ವಿವೇಚನೆ ಯೂ ಸದ್ಯೋಜಾತರಲ್ಲಿ ಕಾಣಬಹುದು. ತಾನು ಹೇಳಿದ್ದೆ ವೇದವಾಕ್ಯವಲ್ಲ ಎನ್ನುವ ವಿನಯವನ್ನು ಅವರ ಪುಸ್ತಕದಲ್ಲೂ, ನಡೆನುಡಿಯಲ್ಲೂ ಕಾಣ ಬಹುದು.

ಪುರಾಣದ ಹಲವು ಆಸಕ್ತಿದಾಯಕ ಪ್ರಸಂಗಗಳನ್ನು ಪ್ರಾಸಂಗಿಕವಾಗಿ ಉಖಿಸಲಾಗಿದೆ. ಅತೀಂದ್ರಿಯ ಘಟನೆಗಳ ವಿವರಗಳು ಇವೆ. ಸುಮಾರು ಐದು ನೂರು
ವರ್ಷಗಳ ಹಿಂದೆ ಷೇಕ್ಸ್‌ಪಿಯರ್ ಬರೆದ ನಾಟಕಗಳಲ್ಲಿ ಅತಿಮಾನುಷ ಪ್ರಸಂಗ ಬಂದದ್ದನ್ನು ಯಾವ ಎಡಪಂಥೀಯನೂ, ಆಧುನಿಕ ಚರಿತ್ರಕಾರನೂ ಪ್ರಶ್ನೆ
ಮಾಡಿಲ್ಲ. ಐದು ಸಾವಿರ ವರ್ಷಗಳ ಹಿಂದೆ ನಮ್ಮ ದೇಶದಲ್ಲಿ ದಾಖಲಾದ ಪವಾಡಗಳನ್ನೇಕೆ ನಂಬಬಾರದು? ಖಿಲಾಫತ್ ಚಳವಳಿಯ ಮಾರಿಯನ್ನು ಮನೆಗೆ
ತಂದುಕೊಂಡ ಮೋಹನ್ ದಾಸ್ ಕರಮ್ ಚಂದ್ ಗಾಂಧಿಯನ್ನು ನೆನಪಿಸುವಂಥ ಒಂದು ಪ್ರಸಂಗವನ್ನು ಹೇಳಬೇಕು. ಗುಲಾಮ ದೊರೆ ಐಬಕನ ಅಳಿಯ ಆಲ್ತಮಷ್ ದೆಹಲಿಯಲ್ಲಿ ಸುಲ್ತಾನರ ಆಳ್ವಿಕೆಯ ಸ್ಥಾಪಕ ಎಂದು ಬಾಗ್ದಾದಿನ ಖಲೀಫ್ ಅವನನ್ನು ಗೌರವಿಸುತ್ತಾನೆ.

ಮಮತಾ ದೀದಿ ಬಂಗಾಳದಲ್ಲಿ ಇಂದು ನಡೆಸುತ್ತಿರುವ ಲೂಟಿಗೂ ಐತಿಹಾಸಿಕ ಹಿನ್ನೆಲೆಯಿದೆ. ಆಲ್ತಮಶ್ ಅಂದೇ ಬಂಗಾಳ ವನ್ನು ಲೂಟಿ ಮಾಡಿದ್ದ. ಭರತವರ್ಷದ
ಪುನರುತ್ಥಾನವಾಗಬೇಕಾದರೆ ಮಿಹಿರಕುಲಿ (ಮತ್ತು ಸರಸ್ವತಿ ನಾಗರಿಕತೆಯ)ಯ ಸಾರವನ್ನು ಪ್ರತಿಯೊಬ್ಬ ಭಾರತೀಯನೂ ಓದಿ ಅಂತರ್ಗತ ಮಾಡಿಕೊಳ್ಳ ಬೇಕು.