Friday, 18th October 2024

ಬಿಜೆಪಿ, ಕಾಂಗ್ರೆಸ್’ಗೆ ನಾಯಕತ್ವದ್ದೇ ಸವಾಲು

ವರ್ತಮಾನ

maapala@gmail.com

ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆ ಫಲಿತಾಂಶಗಳು ಮುಂದಿನ ವರ್ಷ ವಿಧಾನಸಭೆ ಚುನಾವಣೆ
ಎದುರಿಸುತ್ತಿರುವ ಕರ್ನಾಟಕದ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಹೊಸ ಟಾನಿಕ್ ನೀಡಿದೆ. ಅದರಲ್ಲೂ ಇತ್ತೀಚಿನ ಚುನಾವಣೆಗಳಲ್ಲಿ ಸೋಲುವುದನ್ನೇ ಹವ್ಯಾಸವಾಗಿಸಿಕೊಂಡಿರುವ ಕಾಂಗ್ರೆಸ್ ಪಾಲಿಗೆ ಹಿಮಚಲ ಪ್ರದೇಶದ ಫಲಿತಾಂಶ ‘ಮುಳುಗುವವನಿಗೆ ಹಲ್ಲುಕಡ್ಡಿಯ ಆಸರೆ’ ಎಂಬಂತಾ ಗಿದೆ.

ಆದರೆ, ಈ ಉತ್ಸಾಹವನ್ನು ಎರಡೂ ರಾಜಕೀಯ ಪಕ್ಷಗಳು ಯಾವ ರೀತಿ ತನ್ನ ಯಶಸ್ಸಿನ ಮೆಟ್ಟಿಲಾಗಿ ಪರಿವರ್ತಿಸಿಕೊಳ್ಳು ತ್ತದೆ ಎಂಬುದೇ ಸದ್ಯಕ್ಕೆ ಮುಂದಿರುವ ಪ್ರಶ್ನೆ. ಏಕೆಂದರೆ, ರಾಜ್ಯದಲ್ಲಿ ಚುನಾವಣೆ ಗೆಲುವಿಗೆ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ತೀವ್ರ ಜಿದ್ದಾಜಿದ್ದಿನ ಸ್ಪರ್ಧೆ ಇದೆ. ಈ ವರ್ಷ ನಡೆದ ಏಳು ರಾಜ್ಯಗಳ ವಿಧಾನಸಭಾ ಚುನಾವಣೆ ಪೈಕಿ ಆರು ರಾಜ್ಯಗಳಲ್ಲಿ ಕಾಂಗ್ರೆಸ್ ಹೀನಾಯ ಪ್ರದರ್ಶನ ನೀಡಿತ್ತಾದರೂ ಪಂಜಾಬ್ ಮತ್ತು ಹಿಮಾಚಲ ಪ್ರದೇಶ ಹೊರತುಪಡಿಸಿ ಉಳಿದ ರಾಜ್ಯ ಗಳಲ್ಲಿ ಕಾಂಗ್ರೆಸ್‌ಗೆ ಶಕ್ತಿಯೇ ಇರಲಿಲ್ಲ.

ಹೀಗಾಗಿ ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಗೆಲುವಿನ ಉತ್ಸಾಹವನ್ನು ಯಾವ ಪಕ್ಷ ಸಮರ್ಥವಾಗಿ ಬಳಸಿಕೊಳ್ಳುತ್ತದೆಯೋ ಆ ಪಕ್ಷ ಗೆಲುವಿನ ಸನಿಹ ತಲುಪುತ್ತದೆ. ಇದಕ್ಕೆ ಕಾರಣಗಳೂ ಇಲ್ಲದಿಲ್ಲ. ಉತ್ತರ ಭಾರತ ರಾಜ್ಯದಳ ಚುನಾವಣಾ ಫಲಿತಾಂಶಗಳಿಗೂ ಕರ್ನಾಟಕದ ವಿಧಾನಸಭೆ ಚುನಾವಣೆಗೂ ಯಾವುದೇ ಸಂಬಂಧ ಇಲ್ಲ. ಆ ಚುನಾವಣಾ ಫಲಿತಾಂಶಗಳು ರಾಜ್ಯದ ಮೇಲೆ ಯಾವುದೇ ಪರಿಣಾಮ ಬೀರುವುದೂ ಇಲ್ಲ.

ಆದರೆ, ಈ ಫಲಿತಾಂಶದ ಆಧಾರದ ಮೇಲೆ ಪಕ್ಷಗಳು ರಾಜ್ಯದಲ್ಲಿ ತನ್ನ ತಂತ್ರಗಾರಿಕೆಗಳನ್ನು ರೂಪಿಸಿ ಅದನ್ನು ಸಮರ್ಪಕ ವಾಗಿ ಅನುಷ್ಠಾನಕ್ಕೆ ತಂದರೆ ಆಗ ಸೋಲು-ಗೆಲುವು ನಿಶ್ಚಯವಾಗುತ್ತದೆ. ಇದಕ್ಕೆ ನಾಯಕತ್ವದ ಜತೆ ಕಾರ್ಯಕರ್ತರ ಪಡೆಯೂ ಬೇಕು. ಎರಡೂ ಪಕ್ಷಗಳಿಗೆ ಅಂತಹ ಕಾರ್ಯಕರ್ತರ ಪಡೆ ಇದೆಯಾದರೂ ನಾಯಕತ್ವದ ಕೊರತೆ ಕಾಣಿಸುತ್ತದೆ. ಬಿಜೆಪಿಯಲ್ಲಿ ಅದು ರಾಜ್ಯ ಮಟ್ಟದ ನಾಯಕರ ಕೊರತೆಯಾದರೆ, ಕಾಂಗ್ರೆಸ್‌ಗೆ ರಾಷ್ಟ್ರಮಟ್ಟದ ನಾಯಕರ ಕೊರತೆ ಇದೆ.
ರಾಜ್ಯ ಬಿಜೆಪಿಯಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ಇಳಿದ ಬಳಿಕ ಅವರಿಗೆ ಪರ್ಯಾಯವಾಗಿ ಮತ್ತೊಂದು ನಾಯಕನನ್ನು ರೂಪಿಸಲು ಬಿಜೆಪಿ ಯಿಂದ ಇದುವರೆಗೂ ಸಾಧ್ಯವಾಗಲಿಲ್ಲ.

ಯಡಿಯೂರಪ್ಪ ಅವರ ನಂತರ ವೀರಶೈವ ಲಿಂಗಾಯತ ಸಮುದಾಯದ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯ ಮಂತ್ರಿಯಾಗಿ ಮಾಡಲಾಯಿತಾದರೂ ಅವರು ಆಡಳಿತ ನಾಯಕರಾದರೇ ಹೊರತು ಪಕ್ಷದ ನಾಯಕರಾಗಿ ಇನ್ನೂ ಹೊರಹೊಮ್ಮಿಲ್ಲ. ಅದೇ ರೀತಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕೂಡ ಸಮರ್ಥ ನಾಯಕನಾಗಿ ಬೆಳೆಯಲಿಲ್ಲ. ಈಗಲೂ ಬಿಜೆಪಿಯಲ್ಲಿ ಯಡಿಯೂರಪ್ಪ ಅವರ ನೆರಳಷ್ಟೇ ಕೊಣುತ್ತಿದೆಯೇ ಹೊರತು ಆ ನೆರಳಿನಲ್ಲಿ ಬೇರೆಯವರ ಮುಖ ಕಾಣಿಸುತ್ತಿಲ್ಲ ಎಂಬಷ್ಟರ ಮಟ್ಟಿಗೆ ನಾಯಕತ್ವದ ಕೊರತೆ ಬಾಧಿಸುತ್ತಿದೆ.

ಆದರೆ, ರಾಷ್ಟ್ರಮಟ್ಟದಲ್ಲಿ ಹಾಗಲ್ಲ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಎಂಬ ತ್ರಿಮೂರ್ತಿಗಳಿದ್ದಾರೆ. ಇವರ ಜತೆ ರಾಜಕೀಯ ತಂತ್ರಗಾರಿಕೆಗಳನ್ನು ಅತ್ಯಂತ ಚಾಣಾಕ್ಷತನದಿಂದ, ಹೆಚ್ಚು ಪ್ರಬಲವಾಗಿ ರೂಪಿಸುವ ತಂಡವೇ ಇದೆ. ಹೀಗಿದ್ದರೂ ವಿಧಾನಸಭೆ ಚುನಾವಣೆ ಎಂದು ಬಂದಾಗ ಕರ್ನಾಟಕದಲ್ಲಿ ರಾಜ್ಯ ನಾಯಕರೇ ಅತ್ಯಂತ ಮುಖ್ಯವಾಗುತ್ತಾರೆ. ಯಡಿಯೂರಪ್ಪ ಅವರ ನಂತರ ಅಂತಹ ಒಬ್ಬ ನಾಯಕ ಇನ್ನೂ ಸೃಷ್ಟಿಯಾಗದೇ ಇರುವುದೇ ಬಿಜೆಪಿಯ ಸಮಸ್ಯೆ. ಹೀಗಾಗಿ ರಾಷ್ಟ್ರೀಯ ನಾಯಕರು ಏನೇ ಹವಾ ಮೂಡಿಸಿದರೂ, ಏನೇ ತಂತ್ರಗಳನ್ನು ಹೆಣೆದರೂ ಅದನ್ನು ಮತಗಳಾಗಿ ಪರಿವರ್ತಿಸುವವರ ಕೊರತೆ ಕಾಡುತ್ತಿದೆ.

ಇನ್ನು ಕಾಂಗ್ರೆಸ್ ವಿಚಾರಕ್ಕೆ ಬಂದರೆ ಹಾಗಲ್ಲ. ಇಲ್ಲಿ ರಾಜ್ಯದ ನಾಯಕತ್ವ ಪ್ರಬಲವಾಗಿದೆ. ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇದ್ದಾರೆ. ಖರ್ಗೆ ಇದೀಗ ಕಾಂಗ್ರೆಸ್ ರಾಷ್ಟ್ರಿಯ ಅಧ್ಯಕ್ಷರಾಗಿರುವುದು ರಾಜ್ಯದ ಪಾಲಿಗೆ ಪ್ಲಸ್ ಪಾಯಿಂಟ್. ಈ ಮೂವರು ಒಟ್ಟಾಗಿ ಮತ್ತು ಗಟ್ಟಿಯಾಗಿ ನಿಂತರು ಎಂದರೆ ಯಾವುದೇ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಿಕೊಂಡು ಬರುವ ಸಾಮರ್ಥ್ಯ ಅವರಲ್ಲಿದೆ. ಸಮಸ್ಯೆ ಎಂದರೆ ಮೂವರು ನಾಯಕರು ಮೂರು ದಿಕ್ಕುಗಳಂತಿದ್ದಾರೆ.

ಇದಕ್ಕೆ ವ್ಯತಿರಿಕ್ತವಾದ ಪರಿಸ್ಥಿತಿ ರಾಷ್ಟ್ರಮಟ್ಟದಲ್ಲಿದೆ. ಎಐಸಿಸಿಯಲ್ಲಿ ಚುನಾವಣೆ ಗೆಲ್ಲಿಸಿಕೊಂಡು ಬರುವ ಒಬ್ಬ ನಾಯಕರೂ ಇಲ್ಲ. ಸೋನಿಯಾ ಗಾಂಧಿ ಅವರಿಗೆ ಆರೋಗ್ಯ ಕೈಕೊಡುತ್ತಿದೆ. ರಾಹುಲ್ ಗಾಂಧಿ ಇನ್ನೂ ರಾಜಕೀಯವಾಗಿ ಪ್ರಬುದ್ಧತೆ
ಗಳಿಸಿಲ್ಲ. ಪ್ರಿಯಾಂಕಾ ವಾಧ್ರಾ ಕೂಡ ಚುನಾವಣೆ ಗಲ್ಲಿಸುವ ಶಕ್ತಿಯನ್ನು ಇನ್ನೂ ಗಳಿಸಿಲ್ಲ. ಚುನಾವಣೆಗಳು ಬಂದಾಗ ರಾಷ್ಟ್ರೀಯ ಪಕ್ಷಗಳಿಗೆ ಆ ಪಕ್ಷದ ರಾಜ್ಯ ನಾಯಕತ್ವದ ಜತೆಗೆ ರಾಷ್ಟ್ರೀಯ ನಾಯಕತ್ವವೂ ಅತ್ಯಂತ ಮಹತ್ವದ್ದಾಗುತ್ತದೆ. ಜವಹರಲಾಲ ನೆಹರು, ಇಂದಿರಾ ಗಾಂಧಿ ಅವರಂಥ ನಾಯಕರು ಬಾರದೇ ಹೋಗಿದ್ದರೆ ಕಾಂಗ್ರೆಸ್ ಇಷ್ಟೊಂದು ವರ್ಷಗಳ ಕಾಲ ರಾಜ್ಯಗಳಲ್ಲಿ ನೆಲೆಯೂರಿ ನಿಲ್ಲಲು ಸಾಧ್ಯವೇ ಆಗುತ್ತಿರಲಿಲ್ಲ.

ಇಂದಿರಾ ಗಾಂಧಿ ನಂತರ ಅಂತಹ ಪ್ರಭಾವಿ ನಾಯಕರು ಬಾರದ ಕಾರಣವೇ ವಿವಿಧ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ನಿಧಾನವಾಗಿ ತಲೆಎತ್ತುವಂತಾಯಿತು. ಅದೇ ರೀತಿ ಬಿಜೆಪಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ, ಲಾಲ್‌ಕೃಷ್ಣ ಆಡ್ವಾಣಿ
ಅವರಂಥ ನಾಯಕರು ಬಾರದೇ ಹೋಗಿದ್ದರೆ ಬಿಜೆಪಿ ರಾಜ್ಯಗಳಲ್ಲಿ ತನ್ನ ಶಕ್ತಿ ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ.
ಅವರ ಬಳಿಕ ನರೇಂದ್ರ ಮೋದಿ, ಅಮಿತ್ ಶಾ ಅವರ ನಾಯಕತ್ವ ಬಿಜೆಪಿಗೆ ಸಿಕ್ಕಿದ್ದರಿಂದಾಗಿ ಇಂದು ದೇಶದ ಬಹುತೇಕ ಭಾಗವನ್ನು ಬಿಜೆಪಿ ಆವರಿಸಿಕೊಂಡಿದೆ.

ಅದೇ ರೀತಿ ರಾಜ್ಯ ನಾಯಕತ್ವವೂ ಅಗತ್ಯ. ಕಾಂಗ್ರೆಸ್‌ನಲ್ಲಿ ಎಸ್.ನಿಜಲಿಂಗಪ್ಪ, ದೇವರಾಜ ಅರಸು, ಎಸ್.ಬಂಗಾರಪ್ಪ,
ಎಸ್.ಎಂ.ಕೃಷ್ಣ ಮುಂತಾದ ನಾಯಕರಿಂದಾಗಿ ಆ ಪಕ್ಷ ದಶಕಗಳ ಕಾಲ ಅಽಕಾರದಲ್ಲಿತ್ತು. ಈ ಮಧ್ಯೆ ರಾಮಕೃಷ್ಣ ಹೆಗಡೆ, ಎಚ್.ಡಿ.ದೇವೇಗೌಡ, ಜೆ.ಎಚ್.ಪಟೇಲ್ ಅವರಂತಹ ಸ್ಥಳೀಯ ನಾಯಕರಿಂದಾಗಿ ಮಧ್ಯೆ ಜನತಾ ಪರಿವಾರ ರಾಜ್ಯದಲ್ಲಿ ಅಽಕಾರಕ್ಕೆ ಬರುವಂತಾಯಿತು. ಎಸ್.ಎಂ.ಕೃಷ್ಣ ಅವರ ಬಳಿಕ ಸಿದ್ದರಾಮಯ್ಯ ಬರುವವರೆಗೆ ಅಂತಹ ನಾಯಕತ್ವ ಸಿಗದ ಕಾರಣ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತು.

ಆ ಸಂದರ್ಭಕ್ಕೆ ಸರಿಯಾಗಿ ಬಿಜೆಪಿಯಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ನಾಯಕತ್ವ ಬಲಗೊಂಡು ಬಿಜೆಪಿ ಅಧಿಕಾರಕ್ಕೆ ಬಂತು. ಸಿದ್ದರಾಮಯ್ಯ ಕಾಂಗ್ರೆಸ್ ಸೇರಿದ ಮೇಲೆ ಮರಳಿ ಕಾಂಗ್ರೆಸ್‌ಗೆ ಅಧಿಕಾರ ಸಿಕ್ಕಿತು. ಇದೀಗ ಕಾಂಗ್ರೆಸ್‌ನಲ್ಲಿ ಅಧಿಕಾರ ರಾಜಕಾರಣಕ್ಕೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಇದ್ದಾರಾದರೂ ಬಿಜೆಪಿಯಲ್ಲಿ ಯಡಿಯೂರಪ್ಪ ಅದರಿಂದ ಹೊರ ಬಂದಿ ದ್ದಾರೆ. ಅವರಿಗೆ ಪರ್ಯಾಯವಾಗಿ ಬೇರೊಬ್ಬರು ಬಂದಿಲ್ಲ. ಈ ಸಮಸ್ಯೆಗಳೇ ಬಿಜೆಪಿ ಮತ್ತು ಕಾಂಗ್ರೆಸ್ ಪಾಲಿಗೆ ಬಿಸಿ
ತುಪ್ಪವಾಗಿರುವುದು. ಬಿಜೆಪಿ ಏನೇ ತಂತ್ರಗಾರಿಕೆ ಮಾಡಿದರೂ ಅದನ್ನು ಎದುರಿಸಲು ರಾಜ್ಯ ಕಾಂಗ್ರೆಸ್ ಸಶಕ್ತವಾಗಿದೆ. ಅದೇ
ರೀತಿ ಕಾಂಗ್ರೆಸ್ ಏನೇ ಕಾರ್ಯತಂತ್ರ ಹೂಡಿದರೂ ಅದಕ್ಕೆ ಸೆಡ್ಡು ಹೊಡೆಯಲು ಬಿಜೆಪಿ ರಾಷ್ಟ್ರೀಯ ನಾಯಕರು ಸಮರ್ಥ ರಾಗಿದ್ದಾರೆ.

2018ರ ವಿಧಾನಸಭೆ ಚುನಾವಣೆಯಲ್ಲಿ ಇದು ಸಾಬೀತು ಕೂಡ ಆಗಿದೆ. ಬಹುಮತದೊಂದಿಗೆ ಅಧಿಕಾರದಲ್ಲಿದ್ದ ಕಾಂಗ್ರೆಸ್ 80 ಸ್ಥಾನಕ್ಕೆ ಕುಸಿಯುವಂತಾಗಿತ್ತು. ರಾಜ್ಯ ಬಿಜೆಪಿ ಸರಕಾರ ಪರಿಶಿಷ್ಟ ಜಾತಿ, ಪಂಗಡಗಳ ಮೀಸಲು ಹೆಚ್ಚಳ, ರೈತ ವಿದ್ಯಾನಿಧಿ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದ್ದರೂ ೪೦ ಪರ್ಸೆಂಟ್ ಕಮಿಷನ್ ಸರಕಾರ, ಪೇ ಸಿಎಂ ಅಭಿಯಾನ ಸೇರಿದಂತೆ ವಿವಿಧ ಹೋರಾಟಗಳ ಮೂಲಕ ಆಡಳಿತ ವಿರೋಧಿ ಅಲೆ ರೂಪಿಸುವಲ್ಲಿ ಕಾಂಗ್ರೆಸ್ ಯಶಸ್ಸು ಸಾಧಿಸಿದೆ. ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಪರಿಸ್ಥಿತಿ ಬಿಜೆಪಿಗಿಂತ ಕಾಂಗ್ರೆಸ್ ಪರವಾಗಿದ್ದಂತೆ ಕಾಣಿಸುತ್ತಿದೆ. ಆದರೆ, ಗುಜರಾತ್ ಚುನಾವಣೆ ಮುಗಿದಿದ್ದು, ಬಿಜೆಪಿ ರಾಷ್ಟ್ರೀಯ ನಾಯಕರ ದೃಷ್ಟಿ ಏನಿದ್ದರೂ ಇನ್ನು ಕರ್ನಾಟಕದ ಮೇಲೆ. ಅವರು ಬಂದು ಇಲ್ಲಿ ತಮ್ಮ ಕಾರ್ಯಾಚರಣೆ ಆರಂಭಿಸಿದರೆ ಸಹಜವಾಗಿಯೇ ಅದಕ್ಕೆ ಹೆಚ್ಚು ಪ್ರಚಾರ ಸಿಗುತ್ತದೆ.

ಇದು ಮತದಾರರ ಮೇಲೆ ಪರಿಣಾಮವನ್ನೂ ಬೀರುತ್ತದೆ. ಹೀಗಾಗಿ ರಾಜ್ಯ ಕಾಂಗ್ರೆಸ್ ನಾಯಕರಿಗೆ ರಾಜ್ಯ ಬಿಜೆಪಿಯವರಿ ಗಿಂತ ಅದರ ರಾಷ್ಟ್ರೀಯ ನಾಯಕರ ಬಗ್ಗೆಯೇ ಹೆಚ್ಚು ಆತಂಕ. ಆದರೆ, ಬಿಜೆಪಿಗೆ ಅಂತಹ ಆತಂಕ ಇಲ್ಲ. ಹೀಗಾಗಿ ವಿಧಾನಸಭೆ
ಚುನಾವಣೆಗೆ ಸಂಬಂಽಸಿದಂತೆ ಮುಂದಿನ ನಾಲ್ಕು ತಿಂಗಳು ಎರಡೂ ಪಕ್ಷಗಳಿಗೆ ಅತ್ಯಂತ ಸವಾಲಿನದ್ದಾಗಿದೆ.

ಲಾಸ್ಟ್ ಸಿಪ್: ಅಲ್ಲಿ ಗೆದ್ದ ಪಕ್ಷವನ್ನು ಇಲ್ಲಿಯೂ ಗೆಲ್ಲಿಸಲು ಏನು ಮಾಡಬೇಕೆಂದು ಯೋಚಿಸಿ ಕೆಲಸ ಮಾಡುವವನೇ
ನಿಜವಾದ ನಾಯಕ.