Friday, 20th September 2024

ಮಲಪ್ರಭೆಗೆ ಮತ್ತೆ ಕರುಣಿಸಬೇಕಿದೆ ವೈಭವ

ಅವಲೋಕನ

ಸುರೇಶ ಗುದಗನವರ

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ದೊಡ್ಡ ಹಂಪಿಹೊಳಿ ಬಳಿ ಹರಿಯುವ ಮಲಪ್ರಭಾ ನದಿಯ ಅಗಲ 150 ಮೀಟರ್ ಇರಬೇಕಾದದ್ದು ಅದು ಈಗ ಕೇವಲ 10 ಮೀಟರ್ ಇದೆ.

ಬದಾಮಿ ತಾಲೂಕಿನ ಗೋವನಕೊಪ್ಪ ಬಳಿ 200 ಮೀಟರ್‌ನಿಂದ 14 ಮೀಟರ್‌ಗೆ ರೂಪಾಂತರಗೊಂಡಿದೆ. ನ ದಿಗಳು ಪರಿಸರದ ಅವಿಭಾಜ್ಯ ಅಂಗ ವಾಗಿರುವುದರ ಜೊತೆಗೆ ನಮ್ಮ ಸಂಸ್ಕೃತಿ ಹಾಗೂ ನಾಗರೀಕತೆಯ ತೂಗುತೊಟ್ಟಿಲು ಕೂಡ. ಮಲಪ್ರಭೆ ಇತ್ತೀಚೆಗೆ ಎಲ್ಲರ ಗಮನ ಸೆಳೆಯುತ್ತಿದ್ದಾಳೆ. ಬೆಳಗಾವಿ ಜಿಲ್ಲೆೆಯ ಖಾನಾಪೂರ ತಾಲೂಕಿನ ಕಣಕುಂಬಿಯಲ್ಲಿ ಹುಟ್ಟುವ ಮಲಪ್ರಭೆ ಅಂದಾಜು 306 ಕಿ.ಮೀಗಳಷ್ಟು ಹರಿದು ಕೂಡಲ ಸಂಗಮದ ಕೃಷ್ಣಾ ನದಿಯಲ್ಲಿ ಲೀನವಾಗುತ್ತಾಳೆ.

ಮಲಪ್ರಭಾ ನದಿಯನ್ನು ಸಂಗಮಿಸುವ ಹಲಾತ್ರಿ, ಬೆಣ್ಣೆೆಹಳ್ಳ, ಹಿರೆಹಳ್ಳ, ತುಪರಿಹಳ್ಳ ಮತ್ತು ತಾಸಹಳ್ಳ  ಮುಂತಾದವು ಪ್ರಮುಖ ಹಳ್ಳಿಗಳಾಗಿವೆ. 1980ರ ದಶಕಕ್ಕೂ ಮೊದಲ ಮಲಪ್ರಭೆಯ ವೈಭವ ವರ್ಣಾತೀತ ವಾದುದು. 1972ರಲ್ಲಿ ನೀರಾವರಿ ಯೋಜನೆಯಿಂದ ರೈತರಿಗೆ ಅನುಕೂಲವಾಗಲು ಇಂದಿರಾಗಾಂಧಿಯವರು ಮಲಪ್ರಭಾ ನದಿಗೆ ಅಡ್ಡಲಾಗಿ ಸವದತ್ತಿ ತಾಲೂಕಿನ ನವಿಲುತೀರ್ಥದಲ್ಲಿ ‘ರೇಣುಕಾ ಜಲಾಶಯ’ವನ್ನು ನಿರ್ಮಿಸಿದರು. ಈ ಜಲಾಶಯವು 154.53 ಮೀಟರ್ ಉದ್ದವಿದ್ದು 40.23 ಮೀಟರ್ ಎತ್ತರವಿದೆ. ಅಣೆಕಟ್ಟಿನ ಸಂಗ್ರಹ ಸಾಮರ್ಥ್ಯವು 30.26 ಘನ ಮೀಟರ್ ಗಳಷ್ಟಿದೆ. ಅಲ್ಲದೇ ಅಣೆಕಟ್ಟಿನ ಹಿನ್ನೀರಿನಲ್ಲಿ 13578 ಹೆಕ್ಟೇರ್‌ ಗಳಷ್ಟು ಪ್ರದೇಶವು ಮುಳುಗಡೆ ಯಾಗಿದೆ. ಅಣೆಕಟ್ಟಿನ ಎಡದಂಡೆಯ ಕಾಲುವೆಯು 150 ಕಿ. ಮೀ. ಉದ್ದವಿದ್ದು ಇದರಿಂದ 53136 ಹೆಕ್ಟೇರ್ ಜಮೀನಿಗೆ ನೀರಾವರಿಯಾಗುತ್ತದೆ. ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳ ರೂವಾರಿ ಯಾದ ಎಂಜನಿಯರ್ ಎಸ್.ಜಿ ಬಾಳೆಕುಂದ್ರಿಯವರ ಗೌರವಾರ್ಥ ಈ ಕಾಲುವೆಗೆ ಬಾಳೆಕುಂದ್ರಿ ಕಾಲುವೆ ಎಂದು ಕರೆಯುತ್ತಾರೆ.

ಅಲ್ಲದ ಬಲದಂಡೆಯು 142 ಕಿ.ಮೀ. ಉದ್ದವಿದ್ದು 139921 ಹೆಕ್ಟೇರ್ ಭೂಮಿಗೆ ನೀರಾವರಿಯಾಗುತ್ತದೆ. ನವಿಲುತೀರ್ಥ ಜಲಾಶಯ ನಿರ್ಮಿಸಿದ ನಂತರ ಕೆಳಪ್ರದೇಶಗಳಲ್ಲಿ ನೀರು ಹರಿಯುವುದು ನಿಂತಿತು. ಅಲ್ಲದೇ ಹುಬ್ಬಳ್ಳಿ – ಧಾರವಾಡ ಅವಳಿ ನಗರಗಳಿಗೆ ಇದೇ ಜಲಾಶಯದಿಂದ ಕುಡಿಯುವ ನೀರು ಪೂರೈಸುವ ಯೋಜನೆ ಹಾಕಿಕೊಳ್ಳುತ್ತಿದ್ದಂತೆಯೇ ನೀರು ಹರಿವು ಮತ್ತಷ್ಟು ಕಡಿಮೆಯಾಯಿತು. ಹಾಗಾಗಿ ಬತ್ತಿ ಹೋದ ಮಲಪ್ರಭೆ ಯಲ್ಲಿ ಉಸುಕು ಸಂಗ್ರಹಿಸಿ ಮಾರಾಟ ಮಾಡತೊಡಗಿದರು. ನದಿ ಪಾತ್ರದಲ್ಲಿ ಬರೀ ಹೂಳು ಉಳಿಯಿತು. ಇದರಿಂದ ಆಪು ಬೆಳೆಯತೊಡಗಿತು. ಇದೇ ಸಂದರ್ಭವನ್ನು ಉಪಯೋಗಿಸಿಕೊಂಡು ನದಿ ಪಾತ್ರದ ರೈತರು ಆಪನ್ನು ಕತ್ತರಿಸಿ ತಮ್ಮ ಜಮೀನನ್ನು ವಿಸ್ತರಿಸಿದರು.

ರೈತರ ಒತ್ತುವರಿಯಿಂದ ನದಿಯ ಅಗಲ ಕಡಿಮೆಯಾಯಿತು. ಧಾರವಾಡದ ಕರ್ನಾಟಕ ನೀರಾವರಿ ನಿಗಮದ ಮಲಪ್ರಭಾ ಯೋಜನಾ ವಲಯದ ತಾತ್ಕಾಲಿಕ ವರದಿಯನ್ನು ಗೂಗಲ್ ಅರ್ಧ ನಕ್ಷೆಯ ಮೂಲಕ ಹಾಗೂ ಟೋಪೋಶೀಟ್‌ನಲ್ಲಿನ ನದಿಯ ಅಳತೆಯ ವಾಸ್ತವ ಚಿತ್ರಣವನ್ನು ಸರಕಾರಕ್ಕೆ ಸಲ್ಲಿಸಿದೆ. ಅದರ ಪ್ರಕಾರ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ದೊಡ್ಡ ಹಂಪಿಹೊಳಿ ಬಳಿ ಹರಿಯುವ ಮಲಪ್ರಭಾ ನದಿಯ ಅಗಲ 150 ಮೀಟರ್ ಇರಬೇಕಾದದ್ದು ಅದು ಈಗ ಕೇವಲ 10 ಮೀಟರ್ ಇದೆ.

ಬದಾಮಿ ತಾಲೂಕಿನ ಗೋವನಕೊಪ್ಪ ಬಳಿ 200 ಮೀಟರ್‌ನಿಂದ 14 ಮೀಟರ್‌ಗೆ ರೂಪಾಂತರ ಗೊಂಡಿದೆ. ಅಲ್ಲದೇ ಗದಗ ಜಿಲ್ಲೆ ನರಗುಂದ ತಾಲೂಕಿನ ಕೊಣ್ಣುರ ರಸ್ತೆ ಸೇತುವೆ ಬಳಿ 100 ಮೀಟರ್ ಅಗಲವಿದ್ದ ಮಲಪ್ರಭೆ 11ಮೀಟರ್‌ಗೆ ಕುಗ್ಗಿರುವುದು ದುರಂತ. ಆಶ್ಚರ್ಯವೆಂದರೆ ಟೋಪೋಶೀಟ್ ಪ್ರಕಾರ ಮಲಪ್ರಭೆ ಕನಿಷ್ಠ 50 ಮೀಟರ್‌ನಿಂದ ಗರಿಷ್ಠ 200 ಮೀಟರ್ ವರೆಗೆ ಅಗಲವಿದೆ. ಆದರೆ ಈಗ ಬಹುತೇಕ ಕಡೆಗೆ 20 ಮೀಟರ್‌ಗಿಂತ ಕಡಿಮೆ ಆಗಿರುವುದು ವಿಪರ್ಯಾಸ. ರೇಣುಕಾ ಜಲಾಶಯದ ಕೆಳಭಾಗದ ಸವದತ್ತಿ, ರಾಮ ದುರ್ಗ, ಬದಾಮಿ, ರೋಣ, ಹುನಗುಂದ ಹಾಗೂ ನರಗುಂದ ತಾಲೂಕುಗಳಲ್ಲಿ ಅತೀ ಹೆಚ್ಚು ನದಿಯ ಪ್ರದೇಶ ಒತ್ತುವರಿ ಆಗಿದೆಯೆಂದು ನೀರಾವರಿ ನಿಗಮ ಗುರುತಿಸಿದೆ. ಹೀಗೆಯೇ ಒತ್ತುವರಿ ಮುಂದುವರಿದರೆ ನದಿಯ ಅಸ್ತಿತ್ವಕ್ಕೆ ಧಕ್ಕೆಯಾಗುವ ಅಪಾಯವಿದೆ ಎಂಬುದನ್ನು ವರದಿಯಲ್ಲಿ ಉಲ್ಲೇಖಿಸಿದೆ.

1998ರಲ್ಲಿ ಪೂರ್ಣಿಮಾ ಅಶೋಕ ಗೌರೋಜಿಯವರು ಮಲಪ್ರಭೆಯ ತೀರದಲ್ಲಿರುವ ನಿಂಗಾಪುರ ಪೇಟೆಯಲ್ಲಿ ದವಾಖಾನೆ ಪ್ರಾರಂಭಿಸಿದ್ದು, ಚಿಕಿತ್ಸೆಗೆ ಬರುವ ಮಹಿಳೆಯರು, ಮಕ್ಕಳು ಅತಿಸಾರ, ಭೇದಿ, ಕಾಲರಾದಂಥ ಕಾಯಿಲೆಯಿಂದ ಬಳಲುತ್ತಿದ್ದರು. ಅವರಿಗೆ ಚಿಕಿತ್ಸೆ ನೀಡುತ್ತಲೇ, ಇದಕ್ಕೆಲ್ಲ ಮೂಲಕಾರಣ ಮಲಪ್ರಭೆಯ ಕಲುಷಿತ ನೀರು ಎನ್ನುವ ಸತ್ಯವನ್ನು ಮನಗಾಣುತ್ತಾರೆ. ಮಲಪ್ರಭೆಯ ನೀರು ಕುಡಿಯಲು ಯೋಗ್ಯವಲ್ಲ ಎಂಬ ತೀರ್ಮಾನಕ್ಕೆ ಬಂದು ಹೋರಾಟಕ್ಕಿಳಿಯಲು ಸಂಕಲ್ಪ ಮಾಡಿಕೊಳ್ಳುತ್ತಾಾರೆ. 2003ರಲ್ಲಿ ಆಗಿನ ಜಿಲ್ಲಾ ಆಡಳಿತ ಮತ್ತು ಮುಖ್ಯಮಂತ್ರಿ ವಿರುದ್ಧ ಪ್ರಕರಣ ದಾಖಲಿಸಿ ಸಾರ್ವಜನಿಕ ಹಿತಾಸಕ್ತ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ನಲ್ಲಿ ಪಿ.ಇ.ಎಲ್ ಸಂಖ್ಯೆ 13606/2003 ಸಲ್ಲಿಸುತ್ತಾರೆ.

ಆಗಿನ ಮುಖ್ಯ ನ್ಯಾಯಮೂರ್ತಿಗಳಾದ ಎನ್.ಕೆ.ಜೈನ್ ಅವರು ಸರಕಾರಕ್ಕೆೆ ತಾಕೀತು ಮಾಡಿದರು. ತದನಂತರ 2017ರಲ್ಲಿ ಸುಪ್ರೀಂಕೋರ್ಟಿನ ನ್ಯಾಯಮೂರ್ತಿಗಳಾದ ಗೋಪಾಲಗೌಡರು ಸರಕಾರಗಳ ವಾಗ್ದಾನಗಳ ಕುರಿತು ನೀಡಿದ್ದ ಹೇಳಿಕೆ ಆಧರಿಸಿ ಡಾ.ಪೂರ್ಣಿಮಾ ಪುನಃ ಹೋರಾಟಕ್ಕೆ ಇಳಿದಾಗ ಸರಕಾರವು ರಾಮದುರ್ಗ ವ್ಯಾಪ್ತಿಯಲ್ಲಿ 7ಕಿ.ಮೀ. ಅಂತರದ ಮಲಪ್ರಭೆಯ ಸ್ವಚ್ಛತೆ ಕೆಲಸ ಮಾಡಿತು. ಅವರ ಹೋರಾಟದ ಫಲದಿಂದ ಶುದ್ಧ ಕುಡಿಯುವ ನೀರು ಮತ್ತು ಮಲಪ್ರಭಾ ನದಿ ಅಗಲೀಕರಣವಾಗಿ ಕಂಗೊಳಿಸುತ್ತದೆ. ಅಲ್ಲದೇ ಸವದತ್ತಿಯ ನವಿಲುತೀರ್ಥ ಜಲಾಶಯದಿಂದ ಕೂಡಲಸಂಗಮದವರೆಗೆ 172 ಕಿ. ಮೀ. ಉದ್ದದ ಒತ್ತುವರಿ ವಿಷಯದಲ್ಲಿ ಅವರು ಇಂದಿಗೂ ಕಾನೂನಾತ್ಮಕವಾಗಿ ಹೋರಾಟ ಮುಂದುವರಿಸಿದ್ದಾರೆ.

ಹೀಗಾಗಿ ಜುಲೈ 16, 2020ರ ಪ್ರಾದೇಶಿಕ ಆಯುಕ್ತರ ಕಾರ್ಯಾಲಯ ಬೆಳಗಾವಿಯವರು ಕರ್ನಾಟಕ ಲೋಕಾ ಯುಕ್ತರಿಗೆ ಡಾ.ಪೂರ್ಣಿಮಾ ರವರ ದೂರನ್ನು ಉಲ್ಲೇಖಿಸಿ, ನದಿಯ ಮೂಲ ಸ್ವರೂಪ ಮತ್ತು ಪರಿಸರ ಸಂರಕ್ಷಣೆಗೆ ಸಂಬಂಧ ಪಟ್ಟಂತೆ ಮಲಪ್ರಭೆಯ ಅತಿಕ್ರಮಣ ತೆರವುಗೊಳಿಸುವ ಕುರಿತು ಬೆಳಗಾವಿ, ಗದಗ, ಬಾಗಲಕೋಟೆ ಜಿಲ್ಲಾಾಧಿಕಾರಿಗಳಿಗೆ ಕ್ರಮ ಜರುಗಿಸಲು ಸೂಚಿಸಿದ್ದಾರೆ. ಮಲಪ್ರಭಾ ನದಿಗೆ ಅಲ್ಲಲ್ಲಿ ಕಟ್ಟಿರುವ ಸೇತುವೆಗಳೇ ಪ್ರವಾಹಕ್ಕೆ ಎಡೆ ಮಾಡಿಕೊಟ್ಟಿವೆ ಎಂದು ಅಧಿಕಾರಿಗಳು ಸಲ್ಲಿಸಿರುವ ತಾಂತ್ರಿಕ ವರದಿಗಳು ಅಭಿಪ್ರಾಯಪಟ್ಟಿವೆ. ಹುಬ್ಬಳ್ಳಿ – ವಿಜಯಪುರನ್ನು ಸಂಪರ್ಕಿಸುವ ಹೆದ್ದಾರಿಗೆ ಹೊಂದಿಕೊಂಡಂತೆ ಕೊಣ್ಣೂರ ಬಳಿ ಇರುವ ಕೊಣ್ಣೂರ ಸೇತುವೆ ಅವೈಜ್ಞಾನಿಕವಾಗಿದೆ. ಬೆಣ್ಣಿಹಳ್ಳಕ್ಕೆೆ ನಿರ್ಮಿಸಿರುವ ಸೇತುವೆಯಲ್ಲಿ ತೂಬುಗಳು ಅಗಲ ಕಡಿಮೆ ಆಗಿರುವುದರಿಂದ ನೀರು ಸರಾಗವಾಗಿ ಹೋಗುವು ದಿಲ್ಲ.

ಕೂಡಲಸಂಗಮದಿಂದ 5 ಕಿ.ಮೀ. ಹಿಂದಗಡೆ ಇರುವ ತಂಗಡಗಿ ಸೇತುವೆ ತೂಬುಗಳು ಹೂಳಿನಿಂದಾಗಿ 12 ಮೀಟರ್‌ನಿಂದ ಕೇವಲ 4 ಮೀಟರ್ ಎತ್ತರಕ್ಕಿಳಿದಿವೆ. ಚಿತ್ರದುರ್ಗ – ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 50ರಲ್ಲಿ ಬೆಳಗಲ್ ಸೇತುವೆ ತೂಬುಗಳೂ ಕೆಳಮಟ್ಟದಲ್ಲಿದ್ದು, ಇದೂ ಕೂಡಾ ಹೂಳು ಸಂಗ್ರಹಕ್ಕೆ ಕಾರಣ ವಾಗಿದೆ. ಕೆಲವು ತೂಬುಗಳು ಸಂಪೂರ್ಣವಾಗಿ ಮುಚ್ಚಿದ್ದು, ಮಲಪ್ರಭೆಯಿಂದ ಹೆಚ್ಚಿನ ನೀರು ಹರಿಬಿಟ್ಟಿದ್ದ ರಿಂದ ಪ್ರವಾಹ ಉಲ್ಭಣಿಸಿತು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

ಮಲಪ್ರಭೆಯ ನದಿಯ ಪಾತ್ರದಲ್ಲಿ 2007, 2009 ಹಾಗೂ 2019ರಲ್ಲಿ ಪ್ರವಾಹ ಬಂದಿದ್ದು, ಅಲ್ಲದೇ ಈ ವರ್ಷದಲ್ಲಿಯೂ ಪ್ರವಾಹದಿಂದ ಲಕ್ಷಾಂತರ ಹೆಕ್ಟೇರ್ ಬೆಳೆ ಹಾನಿಯಾಗಿದೆ. ಆದ್ದರಿಂದ ಸರಕಾರಕ್ಕೆ ಮೇಲಿಂದ ಮೇಲೆ ಪ್ರವಾಹದಿಂದ ಕೋಟಿ ಕೋಟಿ ಹಣ ಖರ್ಚು ಬರುತ್ತದೆ. ಆದರೆ, ನದಿಗೆ ಪ್ರವಾಹ ಬರದಂತೆ ಒತ್ತುವರಿ ತೆರವುಗೊಳಿಸಿದರೆ ಈ ಕೋಟ್ಯಂತರ ರು. ಖರ್ಚು ಮಾಡುವುದು ಬರುತ್ತದೆ. ಆದರೆ, ನದಿಗೆ ಪ್ರವಾಹ ಬರದಂತೆ ಒತ್ತುವರಿ ತೆರವುಗೊಳಿಸಿದರೆ ಈ ಕೋಟ್ಯಂತರ ರು. ಖರ್ಚು ಮಾಡುವ ಅಗತ್ಯವೇ ಬರುವುದಿಲ್ಲ.

ಅಲ್ಲದೇ ಸರಕಾರಕ್ಕೆ ಹಣ ಉಳಿತಾಯವಾಗುವ ಜತೆಗೆ ಜನ-ಜಾನುವಾರುಗಳ ಜೀವಹಾನಿ ತಪ್ಪಿಸಬಹುದು. ಮಂಬರುವ ದಿನಗಳಲ್ಲಿ ಕಳಸಾಬಂಡೂರಿ ತಿರುವು ಯೋಜನೆಯ ಅನುಷ್ಠಾನದಿಂದ ಮಲಪ್ರಭೆಗೆ ಸೇರುವ ನೀರಿನಿಂದಾಗಿ ನವಿಲುತೀರ್ಥ ಜಲಾಶಯ ದಿಂದ ಇನ್ನೂ ಹೆಚ್ಚಿನ ನೀರನ್ನು ಮಲಪ್ರಭೆಗೆ ಬಿಡುವುದು ಅನಿವಾರ್ಯವಾಗುತ್ತದೆ. ಆದ್ದರಿಂದ ಕಳಸಾ ಬಂಡೂರಿ ತಿರುವು ಯೋಜನೆಯ ಅನುಷ್ಠಾಾನ ದ ಮೊದಲೇ ಮಲಪ್ರಭೆಯ ಅತಿಕ್ರಮಣದ ತೆರವು ಕಾರ್ಯಾಚರಣೆ ನಡೆಸುವುದು ಅನಿವಾರ್ಯ ಎಂದು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯ ಅಧ್ಯಕ್ಷ ಅಶೋಕ್ ಚಂದರಗಿ ಸರಕಾರಕ್ಕೆ ಒತ್ತಾಯಿಸಿದ್ದಾರೆ. ಇತ್ತೀಚೆಗೆ ಆಡಳಿತ ಪಕ್ಷ, ವಿರೋಧಪಕ್ಷದ ಮುಖಂಡರುಗಳೆಲ್ಲ ನದಿತೀರದ ಒತ್ತುವರಿ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ತಡವಾಗಿಯಾದರೂ ರಾಜ್ಯ ಸರಕಾರ ಮಲಪ್ರಭೆಯ ಸಂರಕ್ಷಣೆಯ ಕುರಿತು ಯೋಚಿಸು ತ್ತರುವುದು ಶ್ಲಾಘನೀಯವಾದುದು.

ಎರಡು ದಶಕಗಳ ಹಿಂದಿನ ಹೋರಾಟ ಇಂದು ರಾಜಕೀಯ ಆಂದೋಲನವಾಗಿ, ಜನಪ್ರತಿನಿಧಿಗಳಿಂದ ರಾದರೂ ಮಲಪ್ರಭೆ ಪರಿಸರ ಸುಂದರವಾಗಲಿ. ಅಲ್ಲದೇ ಮಹಾದಾಯಿ, ಕಳಸಾ -ಬಂಡೂರಿ ಯೋಜನೆಗಳು ಅನುಷ್ಠಾಾನಗೊಂಡ ಬಳಿಕ ಮಲಪ್ರಭೆಗೆ ಹೆಚ್ಚಿನ ಪ್ರವಾಹ ಸಾಧ್ಯತೆ ಇರುವುದರಿಂದ ಕೂಡಲೇ ಸರಕಾರ ತುರ್ತು ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯತೆ ಇದೆ. ಹಾಗೆಯೇ ನದಿ ಪಾತ್ರದ ರೈತರು ಸಹಕರಿಸಿ ಮಲಪ್ರಭೆ ಯನ್ನು ಮೊದಲಿನಂತೆಯೇ ನದಿಯ ವೈಭವವನ್ನು ತರುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಪ್ರಯತ್ನಿಸ ಬೇಕಾಗಿದೆ.