Roopa Gururaj Column: ನಾಳೆ ಏನಾಗುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ ?
ನಾನೀಗ ಕಾರ್ಯಮಗ್ನನಾಗಿದ್ದೇನೆ. ನಾಳೆ ಬೆಳಿಗ್ಗೆ ಈ ಬಗ್ಗೆ ವಿಚಾರ ಮಾಡುತ್ತೇನೆ’ ಎಂದ. ಭಿಕ್ಷುಕ ತನ್ನ ಹಣೆಬರಹಕ್ಕೆ ತನ್ನನ್ನೇ ಹಳಿದುಕೊಳ್ಳುತ್ತಾ ಅಲ್ಲಿಂದ ಹೊರಟುಹೋದ. ಹತ್ತಿರದ ಇದ್ದ ಭೀಮಸೇನ ತಕ್ಷಣ ಎದ್ದು ಹೋಗಿ ನಗಾರಿಯನ್ನು ಬಾರಿಸತೊಡಗಿದ
Source : Vishwavani Daily News Paper
ರೂಪಾ ಗುರುರಾಜ್ (ಒಂದೊಳ್ಳೆ ಮಾತು)
ಒಮ್ಮೆ ಧರ್ಮರಾಯ ತನ್ನ ಅರಮನೆಯ ಮುಂಭಾಗದಲ್ಲಿ ಕುಳಿತು ರಾಜ ಕಾರ್ಯದಲ್ಲಿ ಮಗ್ನ ರಾಗಿದ್ದ. ಆಗ ಅಲ್ಲಿಗೆ ಒಬ್ಬ ಭಿಕ್ಷುಕನನ್ನು ಅವನ ಸೈನಿಕರು ಹಿಡಿದು ತಂದರು. ಪ್ರಭು ಇವನು ಅರಮನೆಯ ಮಹದ್ವಾರದ ಮುಂದೆ ಭಿಕ್ಷೆ ಬೇಡುತ್ತಿದ್ದ ಎಂದು ದೂರು ಹೇಳಿದರು.
ಆ ಭಿಕ್ಷುಕ ಸ್ವಲ್ಪವೂ ಅಳುಕದೆ ನನ್ನ ಕರ್ಮದಿಂದ ನನಗೆ ಈ ಪರಿಸ್ಥಿತಿ ಬಂದಿದೆ ನನಗೆ ಏನಾದರೂ ದಾನ ನೀಡಿ ಸಹಾಯ ಮಾಡಿ ಎಂದು ಬೇಡಿಕೊಂಡ. ಧರ್ಮರಾಯನಿಗೆ ಕೈತುಂಬ ಕೆಲಸವಿತ್ತು.
‘ನಾನೀಗ ಕಾರ್ಯಮಗ್ನನಾಗಿದ್ದೇನೆ. ನಾಳೆ ಬೆಳಿಗ್ಗೆ ಈ ಬಗ್ಗೆ ವಿಚಾರ ಮಾಡುತ್ತೇನೆ’ ಎಂದ. ಭಿಕ್ಷುಕ ತನ್ನ ಹಣೆಬರಹಕ್ಕೆ ತನ್ನನ್ನೇ ಹಳಿದುಕೊಳ್ಳುತ್ತಾ ಅಲ್ಲಿಂದ ಹೊರಟುಹೋದ. ಹತ್ತಿರದ ಇದ್ದ ಭೀಮಸೇನ ತಕ್ಷಣ ಎದ್ದು ಹೋಗಿ ನಗಾರಿಯನ್ನು ಬಾರಿಸತೊಡಗಿದ.
ನಗಾರಿಯ ಸದ್ದು ಕೇಳಿ ಧರ್ಮರಾಜ ಕೊಂಚ ಅಸಹನೆಯಿಂದಲೇ ತಮ್ಮಾ, ‘ನಿನಗೇನಾಗಿದೆ?
ನಗಾರಿ ಏಕೆ ಬಾರಿಸುತ್ತಿದ್ದೀಯ?’ ಎಂದು ಪ್ರಶ್ನಿಸಿದ.. ಭೀಮಸೇನ ‘ಅಣ್ಣಾ, ನನಗಿಂದು ಬಹಳ ಸಂತೋಷವಾಗಿದೆ. ಏಕೆಂದರೆ ನೀನು ಕಾಲವನ್ನು ಗೆದ್ದಿದ್ದೀಯ. ಏಕೆಂದರೆ ನಾಳೆ ಆ ಭಿಕ್ಷುಕನಿಗೆ ದಾನ ನೀಡುವೆನೆಂದು, ಅದನ್ನು ಸ್ವೀಕರಿಸಲು ಬರಬೇಕೆಂದು ಹೇಳಿದ್ದೀಯೆ. ಅಂದರೆ ನಾಳೆ ನೀನು ಬದುಕಿರುತ್ತೀಯೆಂದು ಭರವಸೆ ನಿನಗಿದೆ. ಹಾಗೆಯೇ ಭಿಕ್ಷುಕನೂ ಬದುಕಿರುತ್ತಾನೆಂಬ ಭರವಸೆಯೂ ನಿನಗಿದೆ.
ಅಷ್ಟೇ ಅಲ್ಲ, ಇಂದು ನೀನು ರಾಜ್ಯವನ್ನಾಳುತ್ತಿದ್ದೀಯ. ನಿನ್ನ ಕೈಯ್ಯಲ್ಲಿ ಧನಲಕ್ಷ್ಮಿ ಇದ್ದಾಳೆ. ಲಕ್ಷ್ಮಿ ಚಂಚಲೆ ಎನ್ನುತ್ತಾರೆ. ಆದರೆ ನಾಳೆಯೂ ಆ ಲಕ್ಷ್ಮಿ ನಿನ್ನನ್ನು ಬಿಟ್ಟು ಹೋಗುವುದಿಲ್ಲ ಎನ್ನುವ ನಂಬಿಕೆಯೂ ನಿನಗಿದೆ. ಆ ಭಿಕ್ಷುಕ ನಾಳೆಯೂ ಬಡವನಾಗಿದ್ದು ನಿನ್ನ ದಾನದ ನಿರೀಕ್ಷೆಯ
ಇರುತ್ತಾನೆಂಬ ನಂಬಿಕೆಯೂ ನಿನಗಿದೆ. ನಾಳೆ ನಿನ್ನ ಮತ್ತು ಭಿಕ್ಷುಕನ ಭೇಟಿಯಾಗುತ್ತದೆಂಬ ನಿನಗಿದೆ. ಅಣ್ಣಾ! ಈಗ ಹೇಳು ನೀನು ಕಾಲವನ್ನು ಗೆದ್ದಿಲ್ಲವೇ? ನಾಳೆ ಏನಾಗುತ್ತದೆಂಬುದನ್ನು ಯಾರೂ ಹೇಳಲಾಗುವುದಿಲ್ಲ ಎಂಬ ಮಾತಿದೆ. ಆದರೆ ನಾಳೆಯೂ ದಾನ ನೀಡುವ ಶಕ್ತಿ ನಿನಗಿರುತ್ತ ದೆಂಬ ಭರವಸೆ ನಿನಗಿದೆ!
ಇದು ಅದ್ಭುತವಲ್ಲವೇ? ಇದು ಆಶ್ಚರ್ಯಕರವಲ್ಲವೇ? ಣ್ಣಾ, ನಾನೀಗ ಅವಸರದಲ್ಲಿದ್ದೇನೆ. ಈ ಅದ್ಭುತ ಸುದ್ದಿಯನ್ನು ಊರಿನವರಿಗೆಲ್ಲ ನಾನು ಈ ಗಳಿಗೆಯ ತಿಳಿಸಬೇಕು. ಈ ಗಳಿಗೆ ಕೈಜಾರಿ ಹೋದರೆ ಮುಂದಿನ ಗಳಿಗೆಯಲ್ಲಿ ಹೇಳುವ ಅವಕಾಶ ನನಗೆ ಸಿಗುತ್ತದೋ ಇಲ್ಲವೋ ಗೊತ್ತಿಲ್ಲ’ ಎಂದು ಮತ್ತೆ ನಗಾರಿ ಬಾರಿಸಲು ಉದ್ಯುಕ್ತನಾದ.
ಧರ್ಮರಾಯ ಓಡೋಡಿ ಬಂದು ಭೀಮಸೇನನನ್ನು ತಡೆದು ‘ತಮ್ಮಾ, ನನ್ನಿಂದ ತಪ್ಪಾಗಿದೆ. ನಿನ್ನ ಮಾತು ಸಂಪೂರ್ಣ ಸತ್ಯ. ಈಗಿಂದೀಗಲೇ ಆ ಭಿಕ್ಷುಕನನ್ನು ಕರೆಸು. ನಾನು ಈಗಲೇ ದಾನ ಮಾಡಿ ಬಿಡುತ್ತೇನೆ. ನಾಳೆ ಏನಾಗುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ ಎಂಬ ನಿನ್ನ ಮಾತು ಸತ್ಯ’ ಎಂದು ಹೇಳಿ ತಮ್ಮನನ್ನು ಆಲಂಗಿಸಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ. ಭಿಕ್ಷುಕನನ್ನು ಕರೆದು ದಾನವನ್ನು ಕೊಟ್ಟು ಕಳುಹಿಸಿದರಂತೆ.
ಯಾರಾದರೂ ನಮ್ಮನ್ನು ಸಹಾಯ ಕೇಳಿ ಬಂದಾಗ ಮಾಡುವ ಮನಸ್ಸಿದ್ದರೆ ಆ ಕ್ಷಣದಲ್ಲಿ ಆ ಬಗ್ಗೆ ಏನಾದರೂ ನಿರ್ಧಾರ ತೆಗೆದುಕೊಳ್ಳಬೇಕು. ನಾಳೆ ಎಂದುಕೊಂಡರೆ, ಯೋಚಿಸಿ ನೋಡೋಣ ಎಂದುಕೊಂಡಾಗ, ಮತ್ತೆ ನಮಗೆ ಅದೇ ಮನಸ್ಸು ಇರುತ್ತದೆಯೋ ಇಲ್ಲವೋ ಯಾರಿಗೂ ಗೊತ್ತಿಲ್ಲ. ಇಂದಿಗೆ ಈ ಕ್ಷಣಕ್ಕೆ ಇರುವ ಒಳ್ಳೆಯದನ್ನು ಮಾಡುವ ಮನಸ್ಸು ಮತ್ತೊಂದು ಕ್ಷಣಕ್ಕೆ ಚಂಚಲ ವಾಗಿ, ಕಳೆದುಹೋಗುತ್ತದೆ. ಆದ್ದರಿಂದಲೇ ಒಳ್ಳೆಯದನ್ನು ಮಾಡಬೇಕಾದರೆ ಹೆಚ್ಚು ಯೋಚಿಸ ಬೇಡಿ.
ಭಗವಂತ ನಿಮಗೆ ಆ ಶಕ್ತಿ ಕೊಟ್ಟು ಮತ್ತು ಪರಿಕೆ ಸಹಾಯ ಮಾಡುವ ಸಾಮರ್ಥ್ಯ ಕೊಟ್ಟಿದ್ದರೆ, ಅವರು ಸಹಾಯಕ್ಕೆ ಅರ್ಹರು ಎನಿಸಿದರೆ ಆ ಕ್ಷಣವೇ ಅನಿಸಿದ್ದನ್ನು ಮಾಡಿಬಿಡಿ. ಮತ್ತೆ ಆ ಸಮಯ ಆ ಪರಿಸ್ಥಿತಿ ಎಂದಿಗೂ ಒದಗದೆ ಇರಬಹುದು.