Sunday, 10th November 2024

ಸಿದ್ದುಗೆ ಇಡೀ ಪೇಡಾ ಬೇಕು, ಉಳಿದವರಿಗೆ ಮಿಶ್ರ ಪೇಡಾ ಸಾಕು

ಮೂರ್ತಿ ಪೂಜೆ

ಆರ್‌.ಟಿ.ವಿಠ್ಠಲಮೂರ್ತಿ

ರಾಜ್ಯ ಬಿಜೆಪಿಯದ ಅಲ್ಲೋಲ-ಕಲ್ಲೋಲ ಕರ್ನಾಟಕದ ಚಿತ್ರವನ್ನೇ ಬದಲಿಸಿಬಿಟ್ಟಿದೆ. ಹೀಗೆ ಬದಲಾದ ಚಿತ್ರಕ್ಕೆ ಫ್ರೇಮು ಹಾಕಿಸಿ ಗೋಡೆಗೆ ನೇತು ಹಾಕುವ ಭಾಗ್ಯ ತಮಗೇ ದಕ್ಕುತ್ತದೆ ಅಂತ ವಿವಿಧ ಪಕ್ಷಗಳ ನಾಯಕರು ಲೆಕ್ಕ ಹಾಕುತ್ತಿರುವುದೂ ಕುತೂಹಲಕಾರಿಯಾಗಿದೆ. ಅಂದ ಹಾಗೆ ಕಾಂಗ್ರೆಸ್ ಪಕ್ಷವನ್ನೇ ತೆಗೆದುಕೊಳ್ಳಿ. ಅಲ್ಲಿ ಭವಿಷ್ಯದ ಸಿಎಂ ಆಗಲು ಪೈಪೋಟಿ ನಡೆಸಿರುವ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ತಮ್ಮದೇ ಲೆಕ್ಕಾಚಾರಗಳಲ್ಲಿ ಮುಳುಗಿದ್ದಾರೆ.

ಈ ಪೈಕಿ ಸಿದ್ದರಾಮಯ್ಯ ಅವರಿಗೆ ಬಿಜೆಪಿಯದ ಅಲ್ಲೋಲ ಕಲ ಕಾಂಗ್ರೆಸ್‌ಗೆ ಬಂಪರ್ ವರದಾನವಾಗುತ್ತದೆ ಎಂಬ ಲೆಕ್ಕಾಚಾರವಿದೆ. ಈಗಿನ ಸ್ಥಿತಿಯಲ್ಲಿ ಪ್ರಬಲ ಲಿಂಗಾಯತ ಸಮುದಾಯ ಒಡೆದು ಹೋಗಿರುವುದು ಮತ್ತು ಪರ್ಯಾಯ ಶಕ್ತಿಯ ಕಡೆ ಅದು ಪಲ್ಲಟಗೊಳ್ಳುವುದು ನಿಶ್ಚಿತ ಎಂಬುದು ಅವರ ಲೆಕ್ಕಾಚಾರ. ಲಿಂಗಾಯತ ಪ್ಲಸ್ ಅಹಿಂದ ಮತಗಳು ಕನ್ ಸಾಲಿಡೇಟ್ ಆದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಽಕಾರದ ಗದ್ದುಗೆ ಹಿಡಿಯುತ್ತದೆ ಎಂಬುದು ಅವರ ಲೆಕ್ಕಾಚಾರದ ಭಾಗ.

ಹಾಗಂತ ಲಿಂಗಾಯತ ಮತಗಳ ಒಡಕಿನಿಂದ 1989 ರ ಪರಿಸ್ಥಿತಿ ಉದ್ಬವವಾಗಿ ಬಿಡುತ್ತದೆ ಅಂತೇನಲ್ಲ. ಕಾರಣ 1989ರ ವಿಧಾನಸಭಾ ಚುನಾವಣೆಯ ಹೊತ್ತಿಗೆ ಲಿಂಗಾಯತ ಸಮುದಾಯದ ವೀರೇಂದ್ರ ಪಾಟೀಲ್ ಕೆಪಿಸಿಸಿ ಅಧ್ಯಕ್ಷರಾಗಿದ್ದರು ಮತ್ತು ಅದೇ ಕಾಲಕ್ಕೆ ಜನತಾದಳದ ಒಡಕಿನಿಂದ ಬೇಸತ್ತ ಒಕ್ಕಲಿಗ ಸಮುದಾಯ ವೂ ಕಾಂಗ್ರೆಸ್ ಅನ್ನು ಪರ್ಯಾಯ ಶಕ್ತಿ ಅಂತ ಗುರುತಿಸಿತ್ತು. ಅವತ್ತಿನ ಕಾಲಕ್ಕಾಗಲೇ ಎಚ್.ಡಿ.ದೇವೇಗೌಡರು ಒಕ್ಕಲಿಗರ ನಿರ್ವಿವಾದ ನಾಯಕ ರಾಗಿದ್ದರೂ, ಅವತ್ತು ಅವರು ಕಟ್ಟಿದ ಸಜಪ ದಿಂದ ತಮ್ಮ ಹಿತ ರಕ್ಷಣೆಯಾಗು ತ್ತದೆ ಎಂಬ ಭಾವನೆ ಒಕ್ಕಲಿಗರಲ್ಲಿ ಬಂದಿರಲಿಲ್ಲ.

ಹೀಗಾಗಿ ಅವತ್ತು ಲಿಂಗಾಯತ, ಒಕ್ಕಲಿಗ ಪ್ಲಸ್ ಅಹಿಂದ ಮತಗಳು ಸೇರಿಕೊಂಡಿದ್ದರಿಂದ ಕಾಂಗ್ರೆಸ್ ಐತಿಹಾ ಸಿಕ ಗೆಲುವು ಗಳಿಸಿತು. ಆದರೆ ಇವತ್ತಿನ ಪರಿಸ್ಥಿತಿ ಹಾಗಲ್ಲ. ಲಿಂಗಾಯತ ಸಮುದಾಯ ಅಸಮಾಧಾನಗೊಂಡಿದೆಯಾದರೂ ಬಿಜೆಪಿ ಅದಕ್ಕೆ ಸಂಪೂರ್ಣವಾಗಿ ಅಪಥ್ಯವಾಗಿಲ್ಲ. ಇದಕ್ಕೆ ಕಾರಣವೂ ಇದೆ. 2013ರ ಚುನಾವಣೆಯ ಕಾಲಕ್ಕೆ ಯಡಿಯೂರಪ್ಪ ಪಕ್ಷದಿಂದ ಹೊರಹೋಗಿದ್ದರು. ಹೀಗಾಗಿ ಲಿಂಗಾಯತ ಮತಗಳು ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ಚಲಾವಣೆ ಯಾದವು. ಮತ್ತು ಅದರ ಲಾಭವನ್ನು ಬೇರೆ, ಬೇರೆ ರಾಜಕೀಯ ಪಕ್ಷಗಳು ಪಡೆದವು. ಆದರೆ ಈಗಿನ ಅಲ್ಲೋಲ-ಕಲ್ಲೋಲದಿಂದ ಪುನಃ ಲಿಂಗಾಯತ ಮತಗಳು ಒಡೆದಿವೆಯಾದರೂ ಅದರ ತೀವ್ರತೆ ಹಿಂದಿನಷ್ಟಿಲ್ಲ. ಬಿಜೆಪಿ ಹೈಕಮಾಂಡ್ ತೆಗೆದುಕೊಂಡ ಮುನ್ನೆಚ್ಚರಿಕೆ ಇದಕ್ಕೆ ಕಾರಣ.

ಇದನ್ನು ಗಮನದಲ್ಲಿಟ್ಟುಕೊಂಡೇ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಲಿಂಗಾಯತ ನಾಯಕ ಎಂ.ಬಿ.ಪಾಟೀಲರನ್ನು ತರುವ ಸಿದ್ದರಾಮಯ್ಯ ಕಸರತ್ತು ಮುಂದುವರಿದೇ ಇದೆ. ಆದರೆ ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ? ಅಂತ ಈಗಲೇ ಹೇಳಲು ಸಾಧ್ಯವಿಲ್ಲ. ಆದ್ದರಿಂದ ಲಿಂಗಾಯತ ಸಮುದಾಯ ತೀರಾ ದೊಡ್ಡ ಮಟ್ಟದಲ್ಲಿ ಕೈ ಪಾಳೆಯದ ಕಡೆ ಬರದಿದ್ದರೂ ಗಣನೀಯ ಪ್ರಮಾಣದಲ್ಲಿ ಬರುತ್ತದೆ ಎಂಬುದು ಸಿದ್ದರಾಮಯ್ಯ ಲೆಕ್ಕಾಚಾರ.

ಲಿಂಗಾಯತರ ವಲಸೆ ಪ್ರಮಾಣ ಶೇಕಡಾ ಮೂವತ್ತರಷ್ಟಾದರೂ ಸಾಕು. ಕಳೆದ ಚುನಾವಣೆಯಲ್ಲಿ ಪಡೆದ ಮತಗಳಿಗೆ ಪ್ಲಸ್ ಆಗಿ ನೂರಿಪ್ಪತ್ತರಷ್ಟು ಕ್ಷೇತ್ರಗಳನ್ನು ಕಾಂಗ್ರೆಸ್ ಗೆಲ್ಲಲಿದೆ ಎಂಬುದು ಅವರ ಭಾವನೆ. ಹೀಗೆ ಪಕ್ಷ ಸ್ವಯಂಬಲದ ಮೇಲೆ ಅಧಿಕಾರ ಹಿಡಿದರೆ ತಾವು ಮರಳಿ ಸಿಎಂ ಆಗುವುದನ್ನು ಯಾರೂ ತಪ್ಪಿಸ ಲಾರರು ಎನ್ನುವುದು ಅವರ ಯೋಚನೆ. ಏಕೆಂದರೆ ಡಿ.ಕೆ.ಶಿವಕುಮಾರ್ ಏನೇ ಮಾಡಲಿ, ಪಕ್ಷದ ಶಾಸಕಾಂಗದಲ್ಲಿ ತಮಗಿರುವ ಬಲವೇ ಹೆಚ್ಚು ಎಂಬುದು ಅವರಿಗೆ ಗೊತ್ತಿದೆ. ಅಂದ ಹಾಗೆ ಕಾಂಗ್ರೆಸ್ ವರಿಷ್ಠರೀಗ ಲಕೋಟೆ ಸಂಸ್ಕೃತಿಯನ್ನು ನೆಚ್ಚಿಕೊಳ್ಳುವ ಸ್ಥಿತಿಯಿಲ್ಲ.

ಇಂದಿರಾ, ರಾಜೀವ್ ಗಾಂಧಿಯ ಜಮಾನ ಬೇರೆ. ಈಗಿನ ಜಮಾನ ಬೇರೆ ಎಂಬುದು ಅದಕ್ಕೂ ಗೊತ್ತಿದೆ. ಹೀಗಾಗಿ ಕರ್ನಾಟಕದಲ್ಲಿ ಯಾರಿಗೆ ಹೆಚ್ಚು ಶಾಸಕ ಬಲವಿದೆಯೋ?ಅವರಿಗದು ಮಣೆ ಹಾಕುತ್ತದೆ. ಹೀಗಾಗಿ ಮುಂದಿನ ವಿಧಾನಸಭಾ ಚುನಾವಣೆಯ ನಂತರ ಅದು ಹಾಕುವ ಮಣೆಯ ಮೇಲೆ ತಾವಲ್ಲದೆ ಬೇರೆ
ಯಾರೂ ಕೂರಲಾಗದು ಎಂಬುದು ಸಿದ್ದರಾಮಯ್ಯ ಅವರ ವಿಶ್ವಾಸ. ಆದರೆ ಅದೇ ಕಾಲಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ತಮ್ಮದೇ ಗ್ರಾಫ್ ಪುಸ್ತಕ ಹಿಡಿದು ಗೆರೆ ಎಳೆಯತೊಡಗಿದ್ದಾರೆ. ಬಿಜೆಪಿಯ ವಿದ್ಯಮಾನಗಳು ಕಾಂಗ್ರೆಸ್‌ಗೆ ನೆರವು ನೀಡುವುದು ನಿಶ್ಚಿತವಾದರೂ, ಅದರ ರೂಪ ಭರ್ಜರಿಯಾಗಿರುವು ದಿಲ್ಲ ಎಂಬುದು ಅವರ ಲೆಕ್ಕಾಚಾರ.

ಕಾರಣ? ಈಗಿನ ಸ್ಥಿತಿಯಲ್ಲಿ ಯಾವ ಪಕ್ಷಕ್ಕೂ ಸಾಲಿಡ್ಡು ಮತಬ್ಯಾಂಕುಗಳಿಲ್ಲ. ಅದು ಒಕ್ಕಲಿಗ, ಲಿಂಗಾಯತ ಮತ ಬ್ಯಾಂಕೇ ಇರಬಹುದು ಅಥವಾ ಅಹಿಂದ ಮತಬ್ಯಾಂಕೇ ಇರಬಹುದು. ಈ ಮತ ಬ್ಯಾಂಕುಗಳು ಒಡೆದು ಹೋಗಿರುವುದರಿಂದ ಮುಂದಿನ ಚುನಾವಣೆಯಲ್ಲಿ ಯಾವ ಪಕ್ಷವೂ ಬಹುಮತ ಪಡೆಯಲು ಸಾಧ್ಯ ವಿಲ್ಲ. ಆದರೆ ಇದ್ದುದರ ಮತ ಬ್ಯಾಂಕುಗಳ ಷೇರುಗಳು ಕಾಂಗ್ರೆಸ್‌ಗೆ ಹೆಚ್ಚಾಗಿ ದಕ್ಕುವುದರಿಂದ ಅದು ಅತ್ಯಂತ ದೊಡ್ಡ ಶಕ್ತಿಯಾಗಿ ಹೊರಹೊಮ್ಮುತ್ತದೆ ಅಂತ ಡಿ.ಕೆ.ಶಿವಕುಮಾರ್ ಭಾವಿಸಿದ್ದಾರೆ. ಅಂದ ಹಾಗೆ ಅವರಿಗೆ ಕಾಂಗ್ರೆಸ್ ಏಕಾಂಗಿಯಾಗಿ ಅಧಿಕಾರಕ್ಕೆ ಬರುವುದಕ್ಕಿಂತ ಅತ್ಯಂತ ದೊಡ್ಡ ಶಕ್ತಿಯಾಗಿ ಹೊರಹೊಮ್ಮು ವುದು ಬೇಕಾಗಿದೆ.

ಒಂದು ವೇಳೆ ಸ್ವಯಂ ಬಲದ ಮೇಲೆ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಹುದ್ದೆಗಾಗಿ ಸಿದ್ದರಾಮಯ್ಯ ಅವರ ಜತೆ ಕದನಕ್ಕಿಳಿಯಬೇಕು. ಹೀಗೆ ಕದನಕ್ಕಿಳಿಯು ವುದು ಎಂದರೆ ತಮಗಿರುವ ಶಾಸಕ ಬಲವನ್ನು ತೋರಿಸುವುದು ಅಂತಲೇ ಅರ್ಥ. ಹಾಗೇನಾದರೂ ಶಾಸಕರ ಬಲದ ಆಟಕ್ಕೆ ಮುಂದಾದರೆ ಸಿದ್ದರಾಮಯ್ಯ ತಮಗಿಂತ ಮುಂದೆ ನಿಂತಿರುತ್ತಾರೆ ಎಂಬುದು ಅವರಿಗೆ ಗೊತ್ತು. ಆದರೆ ಪಕ್ಷ ಅತ್ಯಂತ ದೊಡ್ಡ ಶಕ್ತಿಯಾಗಿ ಹೊರಹೊಮ್ಮಿದರೆ ಅನುಮಾನವೇ ಬೇಡ. ಮೈತ್ರಿ
ಸರಕಾರದ ಕಸರತ್ತು ಅನಿವಾರ್ಯವಾಗುತ್ತದೆ. ಹಾಗೇನಾದರೂ ಆದರೆ ಸಿಎಂ ಹುದ್ದೆಯ ರೇಸಿನಿಂದ ಸಿದ್ದರಾಮಯ್ಯ ಹಿಂದೆ ಸರಿಯಲೇಬೇಕಾಗುತ್ತದೆ.

ಏಕೆಂದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಮೈತ್ರಿ ಅಂತೇನಾದರೂ ಮಾಡಿಕೊ ಳ್ಳುವುದಿದ್ದರೆ ಅದಕ್ಕಿರುವುದು ಒಂದೇ ಅವಕಾಶ. ಅದು ಜೆಡಿಎಸ್. ಹಾಗೆಯೇ ಜೆಡಿಎಸ್ ಕೂಡಾ ಮೈತ್ರಿಯ ವಿಷಯ ಬಂದರೆ ಸಿದ್ದರಾಮಯ್ಯ ಬೇಕಿಲ್ಲ ಅಂತ ಕಾಂಗ್ರೆಸ್ ಗೆ ಷರತ್ತು ವಿಧಿಸುತ್ತದೆ. ಆಗ ಸಿದ್ದರಾಮಯ್ಯ ಅನಿವಾರ್ಯವಾಗಿಯಾ ದರೂ ಹಿಂದೆ ಸರಿಯಲೇಬೇಕು. ಪರಿಸ್ಥಿತಿ ಹಾಗಾದಾಗ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಲ್ಲಿ ಪಾಲು ಪಡೆಯುವುದು ತಾವೇ ಎಂಬುದು ಡಿಕೆಶಿ ಯೋಚನೆ. ಅದೇ ರೀತಿ ಮೈತ್ರಿ ಸರಕಾರದಲ್ಲಿ ಮೊದಲು ತಾವೇ ಸಿಎಂ ಆಗದೆ ಇರಬಹುದು, ಆದರೆ ಎರಡೂವರೆ ವರ್ಷಗಳ ನಂತರ ತಮಗೆ ಅವಕಾಶ ಸಿಗುತ್ತದೆ ಎಂಬುದು ಡಿಕೆಶಿ ಯೋಚನೆ. ಹೀಗೆ ರಾಜ್ಯ ಬಿಜೆಪಿ ಯದ ಅಲ್ಲೋಲ-ಕಲ್ಲೋಲ ಕಾಂಗ್ರೆಸ್ ಪಾಳೆಯದಲ್ಲಿ ಭಿನ್ನ-ಭಿನ್ನ ಲೆಕ್ಕಾಚಾರಗಳಿಗೆ ಕಾರಣವಾದರೆ, ಜೆಡಿಎಸ್ ಪಕ್ಷದಲ್ಲೂ
ಅಧಿಕಾರದ ಕನಸು ಶುರುವಾಗಿದೆ.

ರಾಜ್ಯ ರಾಜಕಾರಣ ಧ್ರುವೀಕರಣದ ನೆಲೆಗೆ ಬಂದು ನಿಂತಿರುವುದರಿಂದ ಮುಂದಿನ ಚುನಾವಣೆಯಲ್ಲಿ ಅರವತ್ತು ಸೀಟುಗಳನ್ನು ಗೆಲ್ಲಲು ಯತ್ನಿಸಿದರೆ ಸಾಕು ಎಂಬುದು ಅದರ ಯೋಚನೆ. ಈವತ್ತಿನ ಸನ್ನಿವೇಶ ಯಾವುದೇ ಒಂದು ಪಕ್ಷದ ಪರವಾಗಿಲ್ಲ. ಹೀಗಾಗಿ ಯಾರೂ ಸ್ವಯಂ ಬಲದ ಮೇಲೆ ಅಧಿಕಾರ ಹಿಡಿಯಲು ಸಾಧ್ಯವಿಲ್ಲ. ಅರ್ಥಾತ್ ಮುಂದಿನ ವಿಧಾನಸಭಾ ಚುನಾವಣೆಯ ನಂತರ ಅತಂತ್ರ ಫಲಿತಾಂಶ ಗ್ಯಾರಂಟಿ ಎಂಬುದು ಅದರ ಲೆಕ್ಕಾಚಾರ.

ಅತಂತ್ರ ಫಲಿತಾಂಶ ಬಂದಾಗ ಬಿಜೆಪಿಯೇ ಆಗಲಿ, ಕಾಂಗ್ರೆಸ್‌ಯೇ ಆಗಲಿ. ಜೆಡಿಎಸ್ ಕಡೆ ನೋಡಲೇಬೇಕು. ಹೀಗಾಗಿ ಹೊಂದಾಣಿಕೆ ಎಲ್ಲಿ ಸುಲಭವೋ? ಅಲ್ಲಿ ನೆಲೆಯಾದರೆ ಮುಗಿಯಿತು. ಯಾವ ಪಕ್ಷದ ಜತೆ ಕೈಗೂಡಿಸಿದರೂ ಸಿಎಂ ಹುದ್ದೆ ಜೆಡಿಎಸ್ ಪಕ್ಷಕ್ಕೆ ದಕ್ಕುತ್ತದೆ ಎಂಬುದು ಅದರ ಲೆಕ್ಕಾಚಾರ. ಉಳಿದಂತೆ ಬಿಜೆಪಿ ಪಾಳೆಯದಲ್ಲೂ ನಂಬಿಕೆಯ ಗ್ರಾಫ್ ಕಡಿಮೆಯಾಗಿದೆ. ಏಕೆಂದರೆ ಮೊದಲನೆಯದಾಗಿ ರಾಜ್ಯದಲ್ಲಿ ಬಿಜೆಪಿ ಪರವಾದ ಅಲೆ ಇಲ್ಲ. ಕಳೆದ ವಿಧಾನಸಭಾ ಚುನಾ
ವಣೆಯಲ್ಲಿ ಅಲೆ ಇದ್ದೂ, 104 ಸ್ಥಾನ ಗಳಿಸುವಷ್ಟಕ್ಕೆ ಸುಸ್ತಾಗ ಬೇಕಾಯಿತು. ಈ ಸಲ ಅಲೆ ಇಲ್ಲ, ಹಾಗಂತ 2013 ರಲ್ಲಿದ್ದಷ್ಟು ಕೆಟ್ಟ ಸ್ಥಿತಿಯೂ ಇಲ್ಲ. ಹೀಗಾಗಿ ಅರವತ್ತರಿಂದ ಅರವತ್ತೈದರಷ್ಟು ಸ್ಥಾನಗಳಿಸಿದರೆ ಲಕ್ಕು ಎಂಬುದು ಅದರ ಯೋಚನೆ.

ಅದೇ ರೀತಿ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರ ಇರುವುದರಿಂದ ಜೆಡಿಎಸ್ ಪಕ್ಷ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಮುಂದಾಗು ತ್ತದೆ ಎಂಬುದು ಅದರ ನಂಬಿಕೆ. ಹೀಗೆ ಒಂದು ಅಲ್ಲೋಲ-ಕಲ್ಲೋಲ ಕರ್ನಾಟಕದ ರಾಜಕೀಯ ಚಿತ್ರವನ್ನೇ ಬದಲಿಸಿರುವುದು ಕುತೂಹಲಕಾರಿ.