Friday, 18th October 2024

ಕುಬ್ಜ ಮಾನವನೂ, ಕುಬ್ಜ ಆನೆಯೂ…

ಹಿಂದಿರುಗಿ ನೋಡಿದಾಗ

ಇಂದಿಗೆ ಸುಮಾರು ೧೦-೧೫ ಲಕ್ಷ ವರ್ಷಗಳ ಹಿಂದಿನ ಮಾತು. ಆಫ್ರಿಕಾದ ವಂಡರ್ ವರ್ಕ್ ಪ್ರದೇಶದ ಗುಹೆಗಳಲ್ಲಿ ಮಾನವ ಪೂರ್ವಜರು ವಾಸವಾಗಿದ್ದರು. ಅವರು ಮೊದಲ ಬಾರಿಗೆ ಬೆಂಕಿಯನ್ನು ನಿಯಂತ್ರಿಸುವುದನ್ನು ಕಲಿತುಕೊಂಡರು. ಬೆಂಕಿ ಎನ್ನುವ ಮಹಾನ್ ಅಸ ಕೈಗೆ ದೊರೆಯುತ್ತಿದ್ದ ಹಾಗೆ ಅವರು ಮೊದಲು ಮರದಿಂದ ಕೆಳಕ್ಕೆ ಇಳಿದರು. ನೆಲದ ಮೇಲೆ ಬದುಕಲು ಆರಂಭಿಸಿದರು. ಅಲ್ಲಿ ಅವರಿಗೆ ಹೆಚ್ಚಿನ ಆಹಾರವು ದೊರೆಯಿತು. ಇರುಳನ್ನು ಗುಹೆಗಳಲ್ಲಿ ಕಳೆಯಲಾರಂಭಿಸಿದರು.

ಬೆಂಕಿಯನ್ನು ಪ್ರಜ್ವಲಿಸಿ ಗುಹೆಗಳನ್ನು ಬೆಳಗಿದರು. ಬೆಂಕಿಯ ಕಾರಣ ಹಿಂಸ್ರಪಶುಗಳು ಗುಹೆಗಳಿಂದ ದೂರ ಉಳಿದವು. ಹೀಗಾಗಿ ಪೂರ್ವಜರು ಮೊದಲಬಾರಿಗೆ ನೆಮ್ಮದಿಯಿಂದ ನಿದ್ರೆ ಮಾಡಿದರು. ಅವರು ಬೆಂಕಿಯ ನೆರವಿನಿಂದ ಆಹಾರ ಬೇಯಿಸಿಕೊಳ್ಳುವುದನ್ನು ಕಲಿತರು. ಒಂದು ಆಲೂಗಡ್ಡೆಯನ್ನು ಹಸಿಯಾಗಿ ತಿನ್ನುವು ದಕ್ಕಿಂತ ಬೇಯಿಸಿಕೊಂಡು ತಿಂದರೆ ಮೃದುವಾಗಿರುತ್ತದೆ, ಅಗಿಯುವುದು ಸುಲಭ ಹಾಗೂ ಹೆಚ್ಚು ರುಚಿ ಯಾಗಿರುತ್ತದೆ ಎನ್ನುವ ಸತ್ಯವನ್ನು ಮನಗಂಡರು. ಬೆಂದ ಆಲೂಗಡ್ಡೆಯು ಹೆಚ್ಚಿನ ಪೋಷಕಾಂಶ ಗಳನ್ನು ಒದಗಿಸಿತು. ಅದನ್ನು ಮನುಷ್ಯರ ದೇಹವು ಸುಲಭವಾಗಿ ಹೀರಿತು. ಹಸಿ ಆಲೂಗಡ್ಡೆಯನ್ನು ಅಗಿಯುವುದೂ ಜೀರ್ಣಿಸಿಕೊಳ್ಳುವುದೂ ಕಷ್ಟ ಹಾಗೂ ಪೋಷಕಾಂಶ ಗಳೂ ದೊರೆಯುತ್ತಿರಲಿಲ್ಲ.

ಹೆಚ್ಚು ಹೆಚ್ಚು ಆಹಾರವನ್ನು ಸೇವಿಸಬೇಕಾಗಿತ್ತು. ದಿನದ ಬಹುಭಾಗವನ್ನು ಆಹಾರದ ಅನ್ವೇಷಣೆಯಲ್ಲೇ ಕಳೆಯಬೇಕಾಗುತ್ತಿತ್ತು. ಜತೆಗೆ ಹಸಿ ಗಡ್ಡೆ ಗೆಣಸನ್ನು, ಹಸಿಮಾಂಸವನ್ನು ತಿನ್ನುವುದರಿಂದ ನಾನಾ ರೋಗಗಳು ಬರುತ್ತಿದ್ದವು. ಆಹಾರವನ್ನು ಬೇಯಿಸುವುದರಿಂದ ಈ ಎಲ್ಲ ಸಮಸ್ಯೆಗಳು ಒಮ್ಮೆಲೇ ನಿವಾರಣೆ ಯಾದವು. ಸಿಡಿಲು, ಕಾಡ್ಗಿಚ್ಚು, ಅಗ್ನಿಪರ್ವತಗಳು ಆಗ ಬೆಂಕಿಯ ಮೂಲಗಳಾಗಿದ್ದವು. ಆದರೆ ತಮ್ಮ ವೀಕ್ಷಣೆ, ವಿಶ್ಲೇಷಣೆ ಹಾಗೂ ಪ್ರಯೋಗಶೀಲತೆ ಯಿಂದ ಚಕಮಕಿ ಕಲ್ಲು, ಮರಗಳ ಘರ್ಷಣೆಯಿಂದ ಬೆಂಕಿಯನ್ನು ಉತ್ಪಾದಿಸುವುದನ್ನು ಕಲಿತರು. ಉತ್ಪಾದಿಸಿದ ಬೆಂಕಿಯನ್ನು ದೀರ್ಘಕಾಲ ತಮ್ಮ ತಮ್ಮ ಗುಹೆಗಳಲ್ಲಿ ಕಾಪಿಟ್ಟುಕೊಂಡರು.

ಬೇಕೆನಿಸಿದಾಗ ತಮ್ಮ ಆಹಾರವನ್ನು ಬೇಯಿಸಿಕೊಂಡು ತಿನ್ನುತ್ತಿದ್ದರು. ಈ ಒಂದು ಕ್ರಿಯೆಯು ಮನುಷ್ಯರನ್ನು ಬುದ್ಧಿವಂತರನ್ನಾಗಿ ಮಾಡಿ, ಚಂದ್ರನ ಅಂಗಳಕ್ಕೆ ಹೆಜ್ಜೆಯಿಟ್ಟು, ಮಂಗಳನ ಅಂಗಳಕ್ಕೆ ನೆಗೆಯುವ ಬುದ್ಧಿಶಕ್ತಿಯನ್ನು ಕೊಟ್ಟಿತು ಎಂದರೆ ನಂಬಲು ಕಷ್ಟವಾಗುತ್ತದೆ. ಹಸಿ ಆಹಾರವನ್ನು ಸೇವಿಸುವಾಗ ಹಲ್ಲುಗಳು ದೊಡ್ಡದಾಗಿದ್ದವು. ಜಠರವು ವಿಶಾಲವಾಗಿತ್ತು. ಹಸಿ ಪದಾರ್ಥಗಳನ್ನು ತಿಂದಾಗ ಹೆಚ್ಚು ಶಕ್ತಿ ದೊರೆಯುತ್ತಿರಲಿಲ್ಲ. ಹಾಗಾಗಿ ಹೆಚ್ಚು ಹೆಚ್ಚು ಆಹಾರವನ್ನು ಸೇವಿಸ ಬೇಕಾಯಿತು. ಇಡೀ ದಿನವು ಆಹಾರಾನ್ವೇಷಣೆಯಲ್ಲಿ ಕಳೆದುಹೋಗುತ್ತಿತ್ತು. ಆಹಾರವನ್ನು ಬೇಯಿಸಿ ತಿನ್ನಲು ಆರಂಭಿಸಿದ ಮೇಲೆ ಹಲವು ಮಹತ್ತರ
ಬದಲಾವಣೆಗಳು ತಲೆದೋರಿದವು.

ಬೇಯಿಸಿದ ಆಹಾರವು ಮೃದುವಾಗಿದ್ದ ಕಾರಣ, ಹಲ್ಲುಗಳಿಗೆ ಶ್ರಮವು ಕಡಿಮೆಯಾಗಿ ಅವು ಗಾತ್ರದಲ್ಲಿ ಚಿಕ್ಕದಾದವು. ಕೋರೆಹಲ್ಲುಗಳು ತಮ್ಮ  ಮೊನಚನ್ನು ಕಳೆದುಕೊಂಡವು. ದವಡೆಹಲ್ಲುಗಳು ಪ್ರಧಾನವಾಗಿ ಬೆಳೆದವು. ಬೇಯಿಸಿದ ಆಹಾರವನ್ನು ಸ್ವಲ್ಪ ತಿಂದರೆ ಸಾಕಾಗುತ್ತಿದ್ದ ಕಾರಣ, ಬೃಹತ್ತಾಗಿದ್ದ ಜಠರ ಮತ್ತು
ಜೀರ್ಣಾಂಗ ವ್ಯೂಹವು ಗಾತ್ರದಲ್ಲಿ ಕುಗ್ಗಿತು. ಬೇಯಿಸಿದ ಆಹಾರದಲ್ಲಿರುವ ಪೋಷಕಾಂಶಗಳನ್ನು ಕರುಳು ಸುಲಭ ವಾಗಿ ಹೀರಿತು. ಹಾಗಾಗಿ ಶರೀರದಲ್ಲಿ ಶಕ್ತಿಯು ವಿಪುಲವಾಗಿ ಸಂಗ್ರಹವಾಯಿತು. ಜತೆಗೆ ನಮ್ಮ ಪೂರ್ವಜರ ಬಳಿ ಹೇರಳ ಸಮಯ ಉಳಿಯಿತು. ಹೆಚ್ಚುವರಿ ಶಕ್ತಿಯನ್ನು ನಮ್ಮ ಪೂರ್ವಜರ ಮಿದುಳು ಪ್ರಧಾನ ವಾಗಿ ಬಳಸಿಕೊಂಡಿತು. ಗಾತ್ರದಲ್ಲಿ ಹಾಗೂ ಕಾರ್ಯಸಾಮರ್ಥ್ಯದಲ್ಲಿ ದೊಡ್ದದಾಗಿ ಬೆಳೆಯಲಾರಂಬಿಸಿತು.

ಈ ಹಂತಕ್ಕೆ ವಿಕಾಸವಾದ ಪೂರ್ವಜರು, ಅವರ ಪೂರ್ವಜರಿಗಿಂತ ಖಂಡಿತ ಬುದ್ಧಿವಂತರಾಗಿದ್ದರು. ಆಯುಧ ಗಳನ್ನು ಮಾಡುವುದನ್ನು, ಬೆಂಕಿಯನ್ನು ನಿಯಂತ್ರಿ ಸುವುದನ್ನು ಅರಿತಿದ್ದರು. ತಮ್ಮ ಆಯುಧಗಳ ನೆರವಿನಿಂದ ಒಂದಷ್ಟು ಸಸ್ಯಾಹಾರಿ ಪ್ರಾಣಿಗಳನ್ನು ಬೇಟೆಯಾಡುತ್ತಿದ್ದರು. ಆಹಾರವನ್ನು ಬೇಯಿಸಿ ತಿನ್ನುತ್ತಿದ್ದು ದರಿಂದ ಅವರ ಒಡಲಿ ನಲ್ಲಿ ಹೆಚ್ಚು ಶಕ್ತಿ ಸಂಚಯವಾಯಿತು, ಸ್ನಾಯುಗಳು ಬಲವಾದವು. ಬುದ್ಧಿಶಕ್ತಿಯೂ ಹೆಚ್ಚಿತ್ತು. ಇಷ್ಟೆಲ್ಲ ಆದರೂ ಅವರು ಇನ್ನೂ ಪ್ರಾಣಿಗಳ ಮಟ್ಟದಲ್ಲೇ ಇದ್ದರು ಎನ್ನಬೇಕಾಗುತ್ತದೆ.

ಕುಬ್ಜ ಮಾನವ

ಇಂಡೋನೇಷ್ಯಾದ ಬಳಿ ಫ್ಲಾರೆಸ್ ಎಂಬ ದ್ವೀಪವಿದೆ. ಇದು ಇವತ್ತಿಗೆ ಸುಮಾರು ೧೦ ಲಕ್ಷ ವರ್ಷಗಳ ಹಿಂದಿನ ಕಥೆ. ಇವತ್ತು ಫ್ಲಾರೆಸ್ ದ್ವೀಪದ ಸುತ್ತಮುತ್ತಲೂ ಎಷ್ಟು ನೀರಿದೆಯೋ ಅಷ್ಟು ಅಂದಿರಲಿಲ್ಲ. ಸಮುದ್ರದ ಮಟ್ಟ ತುಂಬಾ ಕೆಳಗೆ ಇದ್ದುದರಿಂದ ಭೂಭಾಗವು ಅಧಿಕವಾಗಿತ್ತು, ಹಾಗಾಗಿ ಇಂಡೋನೇಷ್ಯಾದ ಮುಖ್ಯ ಭೂಭಾಗಕ್ಕೆ ಹತ್ತಿರ ವಾಗಿತ್ತು. ನಡುವೆ ಇದ್ದ ನೀರಿನ ಭಾಗವು ಅಷ್ಟು ಆಳವಾಗೇನೂ ಇರಲಿಲ್ಲ. ಹಾಗಾಗಿ ಕೆಲವು ಆನೆಗಳು ಹಾಗೂ ಪೂರ್ವಜರು ಸ್ವಲ್ಪ ನೀರನ್ನು ದಾಟಿ ದ್ವೀಪಕ್ಕೆ ಹೋದರು.

ಬಹುಶಃ ಆಲ್ಲಿ ಆಹಾರವು ಧಾರಾಳವಾಗಿ ದೊರೆಯುತ್ತಿತ್ತು ಎನಿಸುತ್ತದೆ. ಆ ಆನೆಗಳು ಮತ್ತು ಮಾನವ ಪೂರ್ವಜರು ಲಕ್ಷಾಂತರ ವರ್ಷಗಳ ಕಾಲ ಅಲ್ಲೇ ಉಳಿದರು. ಆಮೇಲೆ ನೀರಿನ ಮಟ್ಟ ಹೆಚ್ಚಿತು. ದ್ವೀಪದ ಬಹುಭಾಗ ನೀರಿನಲ್ಲಿ ಮುಳುಗಿತು. ಮುಖ್ಯ ಭೂಭಾಗ ಹಾಗೂ ದ್ವೀಪದ ನಡುವೆ ಆಳವಾದ ಹಾಗೂ ವಿಶಾಲವಾದ ಸಮುದ್ರವು ರೂಪುಗೊಂಡಿತು. ಹಾಗಾಗಿ ದ್ವೀಪದಲ್ಲಿ ಜನರು ಹಾಗೂ ಆನೆಗಳು ಮುಖ್ಯ ಭೂಭಾಗಕ್ಕೆ ಬರಲು ಸಾಧ್ಯವಾಗಲೇ ಇಲ್ಲ. ಸಮುದ್ರಮಟ್ಟವು ಹೆಚ್ಚಿದ್ದ ರಿಂದ ಹಾಗೂ ಭೂಭಾಗವು ಚಿಕ್ಕದಾದುದರಿಂದ ಅಲ್ಲಿದ್ದ ಆನೆಗಳಿಗೆ ಮತ್ತು ಮನುಷ್ಯರಿಗೆ ಹೊಟ್ಟೆ ತುಂಬಾ ಆಹಾರವು ದೊರೆಯುತ್ತಿರಲಿಲ್ಲ. ಹಾಗಾಗಿ ದೊಡ್ದ ದೊಡ್ಡ ಆನೆಗಳು ಹಾಗೂ ಬಲಶಾಲಿಗಳಾಗಿದ್ದ ಮನುಷ್ಯರು ಸಾಯಲಾರಂಭಿಸಿದರು. ಎಲ್ಲ ಆನೆಗಳು ಹಾಗೂ ಮನುಷ್ಯರು ಏಕರೂಪವಾಗಿರಲಿಲ್ಲ, ಹಾಗಾಗಿ ಗಾತ್ರದಲ್ಲಿ ಚಿಕ್ಕದಾಗಿದ್ದ ಆನೆಗಳು ಹಾಗೂ ಮನುಷ್ಯರು ಹೇಗೋ ಬದುಕುಳಿದರು.

ಹಾಗೆ ಉಳಿದ ಆನೆಗಳಲ್ಲಿ ಮತ್ತು ಮನುಷ್ಯರಲ್ಲಿ ಮತ್ತಷ್ಟು ಚಿಕ್ಕ ಗಾತ್ರದವು ಬದುಕುಳಿದವು, ಮಿಕ್ಕವು ಸತ್ತವು. ಈ ಪ್ರಕ್ರಿಯೆಯು ಹಲವು ತಲೆ ಮಾರುಗಳವರೆಗೆ ನಿರಂತರವಾಗಿ ಮುಂದುವರಿಯಿತು. ಮಾನವ ಪೂರ್ವಜರು ಎಷ್ಟು ಕುಬ್ಜರಾದರು ಎಂದರೆ, ವಯಸ್ಕ ಗಂಡಸಿನ ಎತ್ತರವು ಸುಮಾರು ೩.೫ ಅಡಿ ಎತ್ತರ ಹಾಗೂ ತೂಕವು ೨೫ ಕೆ.ಜಿ.ಗಿಂತ ಕಡಿಮೆಯಾಯಿತು. ಆದರೆ ಅವರು ಬುದ್ಧಿವಂತರಾಗಿದ್ದರು. ಆಯುಧಗಳನ್ನು ರೂಪಿಸಿಕೊಂಡು, ಗಾತ್ರದಲ್ಲಿ ಚಿಕ್ಕದಾಗಿದ್ದ ಆನೆಗಳನ್ನೂ
ಬೇಟೆಯಾಡಬಲ್ಲವರಾದರು. ದಿನೇ ದಿನೆ ಆನೆಗಳು ಮತ್ತು ಮನುಷ್ಯರು ಚಿಕ್ಕವರಾಗುತ್ತಾ ಹೋದದ್ದು ಜೀವವಿಕಾಸ ಪಥದ ಒಂದು ಮುಖವನ್ನು ನಮಗೆ ತೋರಿಸುತ್ತದೆ.

ಆಫ್ರಿಕಾದಲ್ಲಿ ಇಂಥದ್ದೇ ಪ್ರಕ್ರಿಯೆಯು ಮತ್ತೊಂದು ರೀತಿಯಲ್ಲಿ ನಡೆಯಿತು. ಸಸ್ಯಾಹಾರಿ ಪ್ರಾಣಿಗಳೆಲ್ಲ ನೆಲಮಟ್ಟದಲ್ಲಿದ್ದ ಗಿಡಮರಗಳ ಎಲೆಗಳನ್ನು ತಿಂದು ಖಾಲಿ ಮಾಡಿದವು. ಜಿರಾಫೆಗಳು ಈ ಸಸ್ಯಾಹಾರಿಗಳ ಜತೆಯಲ್ಲಿ ಸ್ಪರ್ಧಿಸಿ ಉಳಿಯಬೇಕಾಗಿತ್ತು. ಹಾಗಾಗಿ ಎತ್ತರದ ಮರಗಳ ಎಲೆಗಳನ್ನು ತಿನ್ನಲು ಜಿರಾಫೆಗಳು ತಮ್ಮ ಕುತ್ತಿಗೆಯನ್ನು ಚಾಚಿ ದವು. ಅವುಗಳ ಕುತ್ತಿಗೆಯು ತಲೆಮಾರಿನಿಂದ ತಲೆಮಾರಿಗೆ ಉದ್ದವಾಗುತ್ತಾ ಹೋಯಿತು. ಯಾವ ಜಿರಾಫೆಯು ತನ್ನ ಕತ್ತನ್ನು ಹೆಚ್ಚು ಉದ್ದ ಮಾಡಿ ಹೆಚ್ಚು ಮರದೆಲೆಗಳನ್ನು ತಿನ್ನಲಾರಂಭಿಸಿತೋ, ಆ ಜಿರಾಫೆಯು ಹೆಚ್ಚು ಹೆಚ್ಚು ಮರಿಗಳನ್ನು ಹಾಕಲಾರಂಭಿಸಿತು. ಆ ಮರಿಗಳ ಕುತ್ತಿಗೆಯೂ ತಾಯಿಯ
ಉದ್ದ ಕುತ್ತಿಗೆಯ ಹಾಗೆ ಉದ್ದವಾಗಿದ್ದವು. ಹಾಗಾಗಿ ಹೆತ್ತವರ ಮುಖ್ಯ ಹಾಗೂ ಉಪಯುಕ್ತ ಗುಣಲಕ್ಷಣಗಳು ತಮ್ಮ ಸಂತಾನಕ್ಕೂ ವರ್ಗಾವಣೆಯಾಗಲಾ ರಂಭಿಸಿತು. ನೀವು ಜೀವವಿಕಾಸದ ಈ ವಿವರಣೆಯನ್ನು ಕೆಲವು ಸಾಲು ಗಳಲ್ಲಿ ಓದಿ ಮುಗಿಸಿದಿರಿ. ಆದರೆ ಇಂಥ ಬದಲಾವಣೆಗಳು ಲಕ್ಷಾಂತರ ವರ್ಷಗಳ ಅವಽಯಲ್ಲಿ ಹಲವು ತಲೆಮಾರುಗಳಲ್ಲಿ ಕ್ರಮವಾಗಿ ಕಂಡುಬರುತ್ತಾ ಹೋಯಿತು ಎನ್ನುವುದನ್ನು ನೆನಪಿನಲ್ಲಿಡಬೇಕು.

ಫ್ಲಾರೆಸ್ ದ್ವೀಪದಲ್ಲಿ ಪ್ರತಿ ತಲೆ ಮಾರಿನ ಆನೆಗಳು ಮತ್ತು ಮನುಷ್ಯರು ಗಾತ್ರದಲ್ಲಿ ಚಿಕ್ಕ ಚಿಕ್ಕದಾಗುತ್ತಾ ಹೋದರೆ, ಆಫ್ರಿಕಾದಲ್ಲಿ ಜಿರಾಫೆಗಳ ಕುತ್ತಿಗೆಯು ಉದ್ದ ಉದ್ದವಾಗುತ್ತಾ ಹೋದವು. ಪ್ರತಿ ತಲೆಮಾರುಗಳಲ್ಲಿ ಕಂಡುಬರುವ ಸಣ್ಣ ಸಣ್ಣ ಬದಲಾವಣೆಗಳು, ಹಲವು ತಲೆಮಾರುಗಳ ನಂತರ ಒಂದು ದೊಡ್ಡ ಬದಲಾ
ವಣೆಯಾಗಿ ಪರಿವರ್ತಿತವಾಗಿ, ಆ ಜೀವಿಯು ಯಶಸ್ವಿಯಾಗಿ ಬದುಕಲು ನೆರವಾಗುತ್ತದೆ. ಇಂಥ ಪರಿವರ್ತನೆ ಯನ್ನು ಜೀವವಿಕಾಸದಲ್ಲಿ ಮಾತ್ರವಲ್ಲ, ಪ್ರಕೃತಿಯ ಇತರ ವಿದ್ಯಮಾನಗಳಲ್ಲಿಯೂ ಗಮನಿಸಬಹುದು.

ಕಲ್ಲು ಬಂಡೆಯು ಬಲಶಾಲಿಯಾದದ್ದು. ಹರಿಯುವ ನೀರು ಅದಕ್ಕೇನೂ ಮಾಡದು. ಆದರೆ ಈ ವಿಚಾರ ಎಲ್ಲ ಸಂದರ್ಭಗಳಲ್ಲಿ ನಿಜವಾಗಲಾರದು. ನಯಾಗರ ಜಲಪಾತದಲ್ಲಿ ನೀರಿನ ರಭಸ ಮತ್ತು ಪ್ರಮಾಣವು ಎಷ್ಟಿರುತ್ತದೆ ಎಂದರೆ, ಪ್ರತಿವರ್ಷವೂ ನಯಾಗರ ಜಲಪಾತದ ಬಂಡೆಗಳು ಸುಮಾರು ಒಂದಡಿ ಸವೆಯುತ್ತವೆ. ಹಾಗಾಗಿ ಜಲಪಾತವು ಸುಮಾರು ಪ್ರತಿವರ್ಷ ಒಂದೊಂದು ಅಡಿಯಂತೆ ಹಿಂದೆ ಹಿಂದೆ ಸರಿಯುತ್ತಿದೆ. ನಮ್ಮ ಜೋಗ ಜಲಪಾತವೂ ಹೀಗೆಯೇ ಹಿಂದೆ ಹಿಂದೆ ಸರಿಯುತ್ತಿದೆ ಎನ್ನುತ್ತಾರೆ. ಇಂಥ ಬದಲಾವಣೆಗಳನ್ನು ಕಣ್ಣಾರೆ ನೋಡುವುದು ಕಷ್ಟ.

ಎಳೆಗರು ಎತ್ತಾಗಲು, ನ್ಯಗ್ರೋಧ ಬೀಜವು ಬೆಳೆದು ಹೆಮ್ಮರವಾಗಲು ಹಲವು ವರ್ಷಗಳೇ ಬೇಕಾಗುತ್ತದೆಯಲ್ಲವೆ! ಹಾಗೆಯೇ ಜೀವವಿಕಾಸದ ಬದಲಾವಣೆಗಳು ಹಲವು ಲಕ್ಷ ವರ್ಷಗಳ ಅವಧಿಯ, ಅಸಂಖ್ಯ ತಲೆಮಾರುಗಳ ಕಾಲಮಾನದಲ್ಲಿ ಸ್ವಲ್ಪ ಸ್ವಲ್ಪವೇ ನಡೆಯುತ್ತಾ ಹೋಗುತ್ತವೆ. ನಮ್ಮ ಭೂಮಿಯ ಮೇಲೆ ಹಲವು ಕಡೆ ರೂಪುಗೊಂಡ ಹಲವು ಪೂರ್ವಜ ಪ್ರಭೇದಗಳು ಇಂದಿಗೆ ಸುಮಾರು ೧,೦೦,೦೦೦-೫೦,೦೦೦ ವರ್ಷಗಳ ಹಿಂದೆ, ಕಾಲನ ಹೊಡೆತಲ್ಲೆ ಸಿಕ್ಕಿ ನಾಶವಾದ ಹಾಗೆ, ಫ್ಲಾರೆಸ್ ಮಾನವನೂ (ಹೋಮೋ -ರೆನ್ಸಿಸ್) ಸಹ ನಾಮಾವಶೇಷವಾದ. ೨೦೦೩ರಲ್ಲಿ ಆಸ್ಟ್ರೇಲಿಯಾ ಮತ್ತು ಇಂಡೋನೇಷ್ಯಾದ ವಿಜ್ಞಾನಿಗಳು ಏಷ್ಯಾ
ಖಂಡದಿಂದ ಪೂರ್ವಜರ ವಲಸೆ ಯಾವ ಕಡೆಯಿಂದ ಆಸ್ಟ್ರೇಲಿಯ ಕಡೆಗೆ ಹೋಗಿರಬಹುದು ಎಂದು ಅಧ್ಯಯನ ವನ್ನು ಮಾಡುತ್ತಿದ್ದರು. ಅವರು ಲಿಯಾಂಗ್ ಬುವ ಎನ್ನುವ ಗುಹೆಯಲ್ಲಿ ಶೋಽಸುತ್ತಿದ್ದಾಗ ೯ ಅಸ್ಥಿಪಂಜರಗಳು ದೊರೆತವು.

ಈ ಸಂಶೋಧನೆಯು ಪೂರ್ಣವಾದ ಮೇಲೆ ಫ್ಲಾರೆಸ್ ಕುಬ್ಜ ಮಾನವ ಪೂರ್ವಜನಿದ್ದ ಎಂಬ ವಿಷಯವು ಮೊದಲ ಬಾರಿಗೆ ತಿಳಿದುಬಂದಿತು. ಇವನ ಕುಬ್ಜತನಕ್ಕೆ ಆಹಾರ ಪದಾರ್ಥಗಳ ಕೊರತೆಯೇ ಕಾರಣ ಎಂದು ಹೇಳಲಾಗಿದ್ದರೂ, ಒಳ ಸಂತಾನ ವರ್ಧನೆಯ ಕಾರಣ ಸಂಭವಿಸುವ ಲೋರೆನ್ ಸಿಂಡ್ರೋಮ್ ಅವರ ಕುಬ್ಜತನಕ್ಕೆ ಕಾರಣವಾಗಿರ ಬಹುದು ಎಂದು ಕೆಲವರು ಹೇಳಿದರೆ, ಉಳಿದವರು ತೀವ್ರ ಸ್ವರೂಪದ ಅಯೋಡಿನ್ ಕೊರತೆಯಿಂದ ಅವರು ಕುಬ್ಜರಾಗಿರಬಹುದು ಎಂದು ವಾದಿಸುವುದೂ ಇದೆ. ಇಂಡೋನೇಷ್ಯಾದ ದಂತಕಥೆಗಳಲ್ಲಿ ಇಂದಿಗೂ ಕುಬ್ಜಮಾನವನು ದಟ್ಟ ಕಾಡಿನ ನಡುವೆ ವಾಸವಾಗಿದ್ದಾನಂತೆ!