Friday, 20th September 2024

ವರ್ಣಚಿತ್ರಗಳ ಹಿಂದಿನ ’ವಿ-ಚಿತ್ರ’ ಎಕನಾಮಿಕ್ಸ್

ಶಿಶಿರ ಕಾಲ

ಶಿಶಿರ್‌ ಹೆಗಡೆ, ನ್ಯೂಜೆರ್ಸಿ

shishirh@gmail.com

ರವಿವರ್ಮನ ಕುಂಚದ ಕಲೆಯೇ ಬಲೆ ಸಾಕಾರವು.. ಪಿ.ಬಿ. ಶ್ರೀನಿವಾಸ್ ಹಾಡಿದ ಈ ಗೀತೆ ಕೇಳಿದಾಗಲೆಲ್ಲ ಹದಿನೈದು ವರ್ಷ ಹಿಂದೆ ನೋಡಿದ ತಿರುವನಂತ ಪುರದಲ್ಲಿರುವ ರಾಜಾ ರವಿವರ್ಮನ ವರ್ಣಚಿತ್ರಗಳು – ಹಾಲು ಮಾರುವ ಹೆಂಗಸು, ಶಾಕುಂತಲೆ, ಹಂಸ ದಮಯಂತಿ, ಅಹಲ್ಯಾ, ತಿರುವಾಂಕೂರ್‌ನ ರಾಣಿ, ಬೇಸರ ಮುಖದ ಹೆಣ್ಣು, ತಾರಾ ದೇವಿ, ದ್ರೌಪದಿ ಹೀಗೊಂದಿಷ್ಟು ಪೇಂಟಿಂಗ್ ಗಳು ಕಣ್ಣೆದುರಿಗೆ ಧುತ್ತನೆ ಬಂದು ನಿಲ್ಲುತ್ತವೆ.

ರವಿವರ್ಮನ ಪೇಂಟಿಂಗ್‌ನ ಶಕ್ತಿ ಎಷ್ಟು ಎಂದರೆ ಅದರ ಎದುರಿಗೆ ಒಂದೈದು ನಿಮಿಷ ನಿಂತರೆ ಈ ಪೇಂಟಿಂಗ್‌ಗಳು ನಮ್ಮನ್ನು ಟೈಮ್ ಮಷಿನ್‌ನಲ್ಲಿ ಕೂರಿಸಿ ಆ ಕಾಲಕ್ಕೆ ಅನಾಮತ್ತು ಎತ್ತಿಕೊಂಡು ಹೋಗಿಬಿಡುತ್ತವೆ. ಇವೆಲ್ಲ ಚಿತ್ರಗಳನ್ನು ಸುಮ್ಮನೆ ಮೊಬೈಲ್ ನಲ್ಲಿ ಹುಡುಕಿ ನೋಡಿದರೂ ಅಂಥದ್ದೇ ಅನುಭವ ಆಗಲಾರದು. ಖುದ್ದು ಹೋಗಿಯೇ ನೋಡಬೇಕು. ಕಣ್ಣಿನಿಂದ ಮನಸ್ಸಿನಲ್ಲಿ ತುಂಬಿಸಿಕೊಂಡು ಬರಬೇಕು.

ರವಿವರ್ಮನ ಈ ಚಿತ್ರಗಳು ಅದೆಷ್ಟು ಆಯಾಸ್ಕಾಂತೀಯ ಎಂದರೆ ಅವು ಮನಸ್ಸಿನಲ್ಲಿ ಬಹುಕಾಲ ಅಚ್ಚೊತ್ತಿ ನಿಂತುಬಿಡುತ್ತವೆ. ಅಲ್ಲಿ ನಿಂತಾಗ ಪ್ರಪಂಚದ ಎಲ್ಲ ಆಗುಹೋಗುಗಳು ಸ್ತಬ್ಧವಾಗಿಬಿಡುತ್ತದೆ. ರಾಜಾ ರವಿವರ್ಮನ ಪ್ರತಿಯೊಂದು ಪೇಂಟಿಂಗ್‌ನಲ್ಲಿಯೂ ಒಂದೊಂದು ಭಾವ ಪ್ರಾಮುಖ್ಯತೆ. ನೋಡಿದಾಗ ಅದೇ ಭಾವ ಮನಸ್ಸಿ ನಲ್ಲುಂಟಾದಂತನಿಸುತ್ತದೆ, ಮನಸ್ಸನ್ನು ಕಲಕುತ್ತದೆ. ಹಂಸ ದಮಯಂತಿ ಚಿತ್ರದಲ್ಲಿ ಅವಳ ಸೌಂದರ್ಯವನ್ನೂ ಮೀರಿ ಕಾಣಿಸುವುದು ಮುಖದಲ್ಲಿ ಹದವಾಗಿ ವ್ಯಕ್ತವಾದ ವಿರಹ – ಬೇಸರ. ಅದರ ಪಕ್ಕದಲ್ಲಿಯೇ ಇರುವ ಯಶೋದಾ ಕೃಷ್ಣನ ಚಿತ್ರ. ಅದರಲ್ಲಿ ಕೃಷ್ಣನ ಮುದ್ದುತನ, ಯಶೋದೆಯ ಮಮತೆ, ಮಾತೃವಾತ್ಸಲ್ಯ ನಿಮಿಷ ವೆರಡರ ಹಿಂದೆ ಮನಸ್ಸಿನಲ್ಲುಂಟಾದ ಶೋಕ ಭಾವವನ್ನು ಮರೆಸಿಬಿಡುತ್ತದೆ.

ನಂತರದ ಚಿತ್ರ ಕೀಚಕ ಮತ್ತು ದ್ರುಪದನ ಮಗಳು ಸೈರೇಂದ್ರಿಯದು. ಅಲ್ಲಿ ದ್ರೌಪದಿಯ ಜೀವನದ ಎಲ್ಲ ನೋವು ಗಳು, ಕೀಚಕನ ಸೋಗಿನ, ಕಾಡುವ ಬುದ್ಧಿ ಕಟ್ಟಿ ನಿಲ್ಲುತ್ತದೆ. ಚಿತ್ರವೊಂದು ಸಾವಿರ ಶಬ್ಧವನ್ನು ಹೇಳುತ್ತದೆ ಎನ್ನುವ ಮಾತಿದೆಯಲ್ಲ, ರವಿವರ್ಮನ ಚಿತ್ರಗಳು ಲಕ್ಷ ಶಬ್ಧವನ್ನು ಹೇಳುತ್ತವೆ ಎಂದರೆ ಅದು ಉತ್ಪ್ರೇಕ್ಷೆಯೇ ಅಲ್ಲ. ಒಂದಿಷ್ಟು ಪುರಾಣ ಕಥೆ ಓದಿಕೊಂಡು, ಮನಸ್ಸಿನ ಚಿತ್ರ ಕಲ್ಪನೆಗಳನ್ನು ಕೊಟ್ಟುಕೊಂಡು ಈ ಮ್ಯೂಸಿಯಂಗೆ ಹೋದರೆ ಒಂದೊಂದು ಚಿತ್ರದೆದುರೂ ನಿಂತಾಗಲೂ ಒಂದೊಂದು ಭಾವ ಉತ್ಕಟವಾಗಿ ಅನನ್ಯ ಅನುಭವವನ್ನು ಕಟ್ಟಿ ಕೊಡುತ್ತದೆ. ಈ ಮ್ಯೂಸಿಯಂ ಅನ್ನು ಹೊಕ್ಕಿ ಹೊರಬಿದ್ದಾಗ ಅಲ್ಲಿ ಕಾಣುವ, ಕಾಡುವ ಚಿತ್ರಗಳು ಮನಸ್ಸಿನಲ್ಲಿ ಓದಿನಿಂದ ರೂಪಗೊಂಡ ಪುರಾಣ ಪಾತ್ರಗಳಿಗೊಂದು ಮೂರ್ತ ರೂಪ ಹುಟ್ಟಿ, ಮನಸ್ಸಿನಲ್ಲಿ ಈ ಹಿಂದೆ ಹುಟ್ಟಿದ ರೂಪ ಕ್ರಮೇಣ ಮರೆತುಹೋಗುತ್ತದೆ. ಇಲ್ಲಿ ಯಾವುದೂ ಉತ್ಪ್ರೇಕ್ಷೆಯಲ್ಲ.

ಮೈಸೂರು ಅರಮನೆಯ ಕಲಾಕೃತಿಗಳಿರಬಹುದು ಅಥವಾ ಕೊಲ್ಕತ್ತಾ, ದೆಹಲಿಯ ಆರ್ಟ್ ಮ್ಯೂಸಿಯಂನಲ್ಲಿರುವ ಕಲಾಕೃತಿಗಳಿರಬಹುದು. ಅವು ರಾಜಾ ರವಿವರ್ಮನ ಕಲಾಕೃತಿಗಳಷ್ಟು ಕಾಡುವುದಿಲ್ಲ, ಅಥವಾ ಅವು ಕಾಡುವ ರೀತಿಯೇ ಬೇರೆ ತೆರನಾದದ್ದು. ಹಾಗಂತ ಇಲ್ಲಿ ಅದು ಹೆಚ್ಚು – ಇದು ಕಡಿಮೆ, ಅದು ಮೇಲೆ
– ಇದು ಕೆಳಗೆ ಎಂದು ಹೋಲಿಕೆ ಮಾಡುತ್ತಿಲ್ಲ. ಹಾಗೆ ಕಲಾಕೃತಿಗಳನ್ನು ಅಥವಾ ಯಾವುದೇ ಕಲೆಯನ್ನು ಹೋಲಿಸಿ ತೂಗುವುದು ಸರಿಯೂ ಅಲ್ಲ. ಇನ್ನೊಂದು ಇದೇ ರೀತಿಯ ಕಾಡುವ ಚಿತ್ರಗಳನ್ನು ಹೊಂದಿರುವ ಮ್ಯೂಸಿಯಂ – ನ್ಯೂಯಾರ್ಕ್‌ನ ಮ್ಯೂಸಿಯಂ ಆಫ್ ಕಾಂಟೆಪರರಿ ಆರ್ಟ್. ಇಲ್ಲಿರುವುದು ಸಮಕಾಲೀನ ಚಿತ್ರಗಳು. ರವಿವರ್ಮನ ಚಿತ್ರಗಳ ರೀತಿಯೇ ಬೇರೆ, ಇಲ್ಲಿರುವ ಚಿತ್ರ ಪ್ರಭೇದಗಳೇ ಬೇರೆ.

ರವಿವರ್ಮನ ಚಿತ್ರಗಳಲ್ಲಿ ತಪ್ಪು ಅಥವಾ ಸರಿಯಲ್ಲ ಎನ್ನುವ ಯಾವುದೇ ಚಿಕ್ಕ ಲೋಪವೂ ಕಾಣುವುದಿಲ್ಲ. ಸಮಕಾಲೀನ ಚಿತ್ರಗಳಲ್ಲಿ ಲೋಪ ಹುಡುಕಿ ಹೋಗ ಲಾಗುವುದಿಲ್ಲ. ಸಮಕಾಲೀನ ಚಿತ್ರಗಳಲ್ಲೂ ರವಿವರ್ಮನ ಚಿತ್ರಗಳಂತೆ ಭಾವಗಳನ್ನು ಕದಡುವ ತಾಕತ್ತು ಅಡಗಿದೆ. ಕೆಲವೊಮ್ಮೆ ಒಂದೇ ಚಿತ್ರ ಒಬ್ಬೊಬ್ಬರಲ್ಲಿ ಒಂದೊಂದು ಭಾವ ಹುಟ್ಟಿಸಬಹುದು. ಇಲ್ಲವೇ ಒಂದೇ ಚಿತ್ರ ಒಬ್ಬರಲ್ಲಿಯೇ ಒಂದಕ್ಕಿಂತ ಜಾಸ್ತಿ ಭಾವವನ್ನು ಕೂಡ ಹುಟ್ಟಿಸಬಲ್ಲದು. ಇದಕ್ಕೆ ಬೇರೆಯೇ ತರಹದ ಗ್ರಾಹ್ಯ ಶಕ್ತಿ ಬೇಕು, ಅಥವಾ ನಾವು ಗ್ರಹಿಸಿದಂತೆ ಇವು ಗ್ರಾಹ್ಯವಾಗುತ್ತವೆ.

ಅದೊಂದು ರೀತಿ ಹಿಂದೂಸ್ತಾನಿ ಸಂಗೀತ ಕೇಳಿದಂತೆ. ಕ್ರಮೇಣ ಕೇಳುತ್ತ ಕೇಳುತ್ತ ಹೋದಹಾಗೆ ಆ ಸಂಗೀತದ ಮಜಕೂರು ಹತ್ತುವಂತೆ ಈ ಸಮಕಾಲೀನ
ಚಿತ್ರಗಳು. ಕ್ರಮೇಣ ನೋಡುತ್ತ ನೋಡುತ್ತ ಹೋದಂತೆ; ಮೊದಲೆರಡು ಚಿತ್ರಗಳು ಅರ್ಥವಾಗಲು ವಿವರಣೆಯ ಅವಶ್ಯಕತೆ ಬೀಳಬಹುದು. ಆದರೆ ಒಂದು ಹಿಡಿತ ಸಿಕ್ಕಿದ ಮೇಲೆ ಬೇರೆ ರೀತಿಯಲ್ಲಿ ಈ ಚಿತ್ರಗಳು ರುಚಿಸಲು ಶುರುವಾಗುತ್ತವೆ. ಕುಮಾರ ಗಂಧರ್ವರ ಹಾಡು ಮೊದಲು ಕೇಳಿದಾಗ ಕೂಗಿದಂತೆ, ವಿಕಾರವೆನ್ನಿಸುವ ಸ್ವರದಂತೆ ಕೇಳಿಸಬಹುದು – ಆದರೆ ಆಮೇಲೆ ಹೇಗೆ ಅದು ಎಲ್ಲಿಲ್ಲದಂತೆ ಇಷ್ಟವಾಗುವಂತೆ ಈ ಸಮಕಾಲೀನ ಚಿತ್ರಗಳು – ಮೊದಲು ನೋಡಿದಾಗ ಅಸಂಭದ್ದ ಎಂದೆನಿಸಿದರೂ ಆಮೇಲೆ ಅದು ಕೊಡುವ ಮಜವೇ ಬೇರೆ.

ಕೆಲವು ಚಿತ್ರಗಳು ಕನ್ನಡಿಯಂತೆ – ನಮ್ಮ ಮನಸ್ಸಿನಲ್ಲಿನ ಆಗಿನ ಭಾವವನ್ನೇ ಉದ್ರೇಕಿಸುತ್ತವೆ. ಇನ್ನು ಕೆಲವು ಕನ್ನಡಿಯ ಪ್ರತಿಬಿಂಬದಂತೆ, ಮನಸ್ಸಿನಲ್ಲಿ ಅಂದು ಆಗ ಇರುವ ಭಾವದ ಉಲ್ಟಾ ಭಾವವನ್ನು ಹುಟ್ಟಿಸುತ್ತವೆ. ಈ ಎಲ್ಲ ಚಿತ್ರಗಳಿಗೂ ಬೆಲೆ ಕಟ್ಟುವುದು ಸಾಧುವಲ್ಲ. ಆದರೂ ಇದೆಲ್ಲದಕ್ಕೊಂದು ಲೆಕ್ಕಕ್ಕೆ ಸಿಗದ ಬೆಲೆ ಕಟ್ಟುವುದು, ಅದನ್ನು ಹರಾಜಿಗೆ ಹಾಕುವುದು, ಅದನ್ನು ಖರೀದಿಸುವುದು, ಅಂತ್ ಪಾರ್ ಹತ್ತದ ಬೆಲೆಗೆ ಮಾರಾಟವಾಗುವುದು ಇವೆಲ್ಲವೂ ಒಂದು ಆಸಕ್ತಿದಾಯಕ ವಿಚಾರ.

ಮಾರ್ಕ್ ರೋತ್ಕೋ 1950ರಲ್ಲಿ ಬಿಡಿಸಿದ ಚಿತ್ರದ ಹೆಸರು ವೈಟ್ ಸೆಂಟರ್. ಆಯತಾಕಾರದ, ಮೇಲ್ಭಾಗದಲ್ಲಿ ಹಳದಿ, ಮಧ್ಯದಲ್ಲಿ ಬಿಳಿ, ಕೆಳಗಡೆ ಗುಲಾಬಿ ಬಳಿದ, ಮಧ್ಯದಲ್ಲಿ ದೃಷ್ಟಿಬೊಟ್ಟಿನಂತೆ ಎಳೆದ ಲ್ಯಾವೆಂಡರ್ ಬಣ್ಣದ ಒಂದು ಚಿಕ್ಕ ಸ್ಟ್ರಿಪ್ ಇರುವ ಚಿತ್ರ ಅದು. ಅಂದು ಆಕೃತಿ ಅಂತೇನು ಇಲ್ಲ, ಅಂತಹ ಹೇಳಿ ಕೊಳ್ಳಬಹುದಾದ ಸಂಕೀರ್ಣತೆ ಕೂಡ ಇದರಲ್ಲಿಲ್ಲ. ತೀರಾ ಸರಳವೆನ್ನಿಸುವ ವರ್ಣಚಿತ್ರ – ಒಂದಿಷ್ಟು ಬಣ್ಣ ಬಳಿದಿಟ್ಟಂತೆ. ಇದಕ್ಕಿಂತ ಸರಳ ಚಿತ್ರ ಇನ್ನೊಂದಿರ ಲಿಕ್ಕಿಲ್ಲ ಎಂಬಷ್ಟು. ಆ ಚಿತ್ರ 2007 ರಲ್ಲಿ ಹರಾಜಿಗೆ ಹಾಕಿದಾಗ ಅದು ಮಾರಾಟವಾದದ್ದು ಬರೋಬ್ಬರಿ 72 ಮಿಲಿಯನ್ ಅಮೆರಿಕನ್ ಡಾಲರ್‌ಗೆ. ಅಂದಿನ ಡಾಲರ್ ಇಂದಿನ ಲೆಕ್ಕದಲ್ಲಿ ೫೪೧ ಕೋಟಿ ರುಪಾಯಿ.

ಹೀಗೆ ಜಗತ್ತಿನ ಅತ್ಯಂತ ಆರ್ಥಿಕ ಹಿನ್ನೆಲೆಯಲ್ಲಿ ಬೆಲೆಬಾಳುವ, ಮಾರಾಟವಾದ ಒಂದೊಂದು ಚಿತ್ರಗಳ ಲೆಕ್ಕಾಚಾರವೂ ಅಷ್ಟೇ ಆಶ್ಚರ್ಯವನ್ನು ಹುಟ್ಟಿಹಾಕುತ್ತವೆ.
ವೈಟ್ ಆನ್‌ವೈಟ್ ಎನ್ನುವ ಕಲಾಕೃತಿ ಇದೆ. ಬಿಳಿಯ ಕ್ಯಾನ್ವಾಸ್ ಮೇಲೆ ಬಿಳಿಯ ಚೌಕವನ್ನು ಸೊಟ್ಟವಾಗಿ ಚಿತ್ರಿಸಿದ ಪೇಂಟಿಂಗ್ ಇದು. ಈ ಚಿತ್ರ ನೋಡಿ ಅದು ಹಾಗೆ, ಇದು ಹೀಗೆ, ಇದರಿಗಿಂತ ವಾಸಿ ಕಾಗೆ ಎನ್ನುವವರು ಎಷ್ಟೇ ಮಂದಿ ಇದ್ದರೂ 1918ರಲ್ಲಿ ಕಾಜಿಮಿರ್ ರಚಿಸಿದ ಈ ಕಲಾಕೃತಿಯನ್ನು ಹರಾಜಿಗಿಟ್ಟರೆ ನೂರು ಮಿಲಿಯನ್ ಡಾಲರ್‌ಗೆ ಮಾರಾಟವಾಗಬಹುದು ಎನ್ನಲಾಗುತ್ತದೆ.

ಅದೆಲ್ಲ ಅರ್ಥವೇ ಆಗುವುದಿಲ್ಲ. ಇದನ್ನು ಶ್ರೀಮಂತರ ಹುಚ್ಚು, ಖಯಾಲಿ ಅನ್ನಬೇಕೋ ಅಥವಾ ಇನ್ನೇನನ್ನಬೇಕೋ ಎಂದು. ಇದೆಲ್ಲದರ ಆಂತರ್ಯ, ಹಿಂದಿನ ಎಕನಾಮಿಕ್ಸ್ ತಿಳಿಯದಿದ್ದರೆ ಅದು ಪ್ರಶ್ನೆಯಾಗಿಯೇ ಉಳಿಯುತ್ತದೆ. ಪೇಂಟಿಂಗ್‌ನ ಬೆಲೆಯನ್ನು ನಿರ್ದೇಶಿಸುವುದರಲ್ಲಿ ಅದನ್ನು ರಚಿಸಿದವರು ಯಾರು ಎನ್ನುವುದು ಮುಖ್ಯವಾಗುತ್ತದೆ ಎನ್ನುವುದರಲ್ಲಿ ದೂಸ್ರಾ ಮಾತಿಲ್ಲ. ಅದು ಎಲ್ಲದಕ್ಕಿಂತ ಅಗ್ರ ಕಾರಣ. ಪಿಕಾಸೋ ಹೆಸರು ಕೇಳಿಯೇ ಇರುತ್ತೀರಿ. ಪಿಕಾಸೋ ಬಿಡಿಸಿದ ಎಲ್ಲ ಚಿತ್ರಗಳು ನೂರಕ್ಕಿಂತ ಹೆಚ್ಚಿನ ಮಿಲಿಯನ್ ಡಾಲರಿಗೆ ಹರಾಜಾಗುತ್ತವೆ. ಒಂದು ಘಟನೆ ಹೇಳ್ತೀನಿ ಕೇಳಿ.

ಪಿಕಾಸೋ ತನ್ನ ಐವತ್ತನೇ ವಯಸ್ಸಿನಲ್ಲಿ ಆತನ 22ರ ಹರೆಯದ ಗೆಳತಿಯನ್ನು ಬಿಡಿಸಿದ ಅಮೂರ್ತ ಚಿತ್ರ ಅದು. ಈ ಚಿತ್ರದ ಹೆಸರು ಲೆ ರೆವೆ – ಎಂದರೆ ದಿ ಡ್ರೀಮ್ – ಕನಸು. ಈ ಚಿತ್ರ 2006ರ ಸಮಯದಲ್ಲಿ ಸ್ಟೀವ್ ವಿನ್ ಸ್ವತ್ತಾಗಿತ್ತು. ಆತ ಇದನ್ನು ಹರಾಜಿಗೆ ಹಾಕಿದ. ಇದು ಹರಾಜಾಗಿ ಮಾರಾಟವಾಗಿತ್ತು. ಮಾರನೇ ದಿನ ಅದನ್ನು ಖರೀದಿಸಿದ ಸಾಹುಕಾರ ಒಯ್ಯುವವನಿದ್ದ. ಸ್ಟೀವ್ ಇದನ್ನು ಖರೀದಿಸಿದ್ದು 60 ಮಿಲಿಯನ್ ಡಾಲರ್ ಕೊಟ್ಟು. ಈಗ ಹರಾಜಿಗೆ ಮಾರಾಟವಾದ ಮೊತ್ತ 139 ಮಿಲಿಯನ್ ಡಾಲರ್‌ಗೆ. ಒಂದು ಮಿಲಿಯನ್ ಡಾಲರ್ ಎಂದರೆ ಏಳು ಕೋಟಿ ಎಂದು ಲೆಕ್ಕ ಹಾಕಿಕೊಳ್ಳಿ. ಮಾರಾಟವಾದ ಖುಷಿಗೆ ಆ ದಿನ ಸಂಜೆ ತನ್ನ ಆಪ್ತ ಸ್ನೇಹಿತರ ಜತೆ ಸ್ಟೀವ್ ಪೇಂಟಿಂಗ್ ನ ಎದುರು ನಿಂತು ಮಾತನಾಡುತ್ತಿದ್ದ.

ಆಗ ಮೊದಲೇ ಅತಿಯೆನಿಸುವ ಹಾವ ಭಾವದಿಂದ ಮಾತನಾಡುವ ಸ್ಟೀವ್‌ನ ಮೊಣಕೈ ಪೇಂಟಿಂಗ್ ಗೆ ತಾಗಿ ಆರು ಇಂಚಿನ ರಂಧ್ರವಾಗಿ ಬಿಡುತ್ತದೆ. ಅದೊಂದು
ಅಯ್ಯಯ್ಯೋ ಸಂದರ್ಭ. ನಂತರದಲ್ಲಿ ಆ ವರ್ಣಚಿತ್ರದ ಯಥಾ ಸ್ಥಾಪನೆಯಾಗುತ್ತದೆ. ಇದೆಲ್ಲ ಆದ ನಂತರ ಅದರ ಬೆಲೆ ಕಡಿಮೆಯಾಗುತ್ತದೆ ಎಂದೆಂದುಕೊಂಡರೆ ಹಾಗಲ್ಲ. ಆಮೇಲೆ ಅದೇ ಕಲಾಕೃತಿ ಬರೋಬ್ಬರಿ 155 ಮಿಲಿಯನ್ ಡಾಲರ್‌ಗೆ (ಸುಮಾರು ಒಂದು ಸಾವಿರ ಕೋಟಿ ರುಪಾಯಿ) ಗೆ ಮತ್ತೆ ಮಾರಾಟವಾಗುತ್ತದೆ. ಇದೆಲ್ಲ ಬೆಲೆಯನ್ನು ನಿರ್ದೇಶಿಸಿದ್ದು ಪಿಕಾಸೋ ಎನ್ನುವ ಒಂದು ಹೆಸರು, ಫೇಮ. ಕಲಾಕಾರನ ಹೆಸರು ಹೇಗೆ ಒಂದು ವರ್ಣಚಿತ್ರದ ಬೆಲೆಯನ್ನು ನಿರ್ಧರಿಸುತ್ತದೆ ಎನ್ನುವುದಕ್ಕೆ ಇದಿಷ್ಟು ಸಾಕು.

ಕಲಾಕಾರ, ಆತನ ಕಾಲ, ಇತಿಹಾಸ, ಆತ ಬಿಡಿಸಿದ ಸಮಯ, ಸಂದರ್ಭ, ಹಿನ್ನೆಲೆ ಇವೆಲ್ಲವೂ ವರ್ಣಚಿತ್ರದ ಬೆಲೆಯನ್ನು ನಿರ್ಧರಿಸುತ್ತವೆ. ಅಂದು ಹಿನ್ನೆಲೆಯಲ್ಲಿ
ಕಥೆಯಿದ್ದು ಹೋದರಂತೂ ಅದಕ್ಕೆ ಇನ್ನಷ್ಟು ಡಾಲರ್. ಹಾಗಂತ ಕೇವಲ ಕಲಾಕಾರನ ಹೆಸರಿನಿಂದಲೇ ವರ್ಣಚಿತ್ರವೊಂದರ ಬೆಲೆ ನಿರ್ಧರಿತವಾಗುತ್ತದೆ ಯೆಂದೇನೂ ಇಲ್ಲ. ಇದರ ಜತೆ ಇನ್ನೊಂದಿಷ್ಟು ವಿಚಾರಗಳು ಕೂಡ ಥಳಕುಹಾಕಿಕೊಳ್ಳುತ್ತವೆ. ಒಂದಂತೂ ನಿಜ – ಪೇಂಟಿಂಗ್‌ನ ಬೆಲೆಯ ಮೇಲೆ ಪೇಂಟಿಂಗ್ ಅನ್ನು ಅಳೆಯುವಂತಿಲ್ಲ. ಅತಿ ಹೆಚ್ಚು ಬೆಲೆಗೆ ಹರಾಜಾಯಿತು ಎಂದಾಕ್ಷಣ ಅದೇ ಅತ್ಯುನ್ನತ ಕಲಾಕೃತಿಯೆನ್ನುವಂತೆಯೂ ಇಲ್ಲ.

ಆದರೆ ದುಡ್ಡು ದುಡ್ಡೇ. ಚಿತ್ರಜಗತ್ತಿನಲ್ಲಿ ‘”Provenance ಎನ್ನುವ ಶಬ್ದದ ಬಳಕೆಯಿದೆ. ಈ ಶಬ್ದದ ಅರ್ಥ ಮೂಲ ಯಾವುದು’ ಎಂದಾದರೂ ಕಲಾ ಜಗತ್ತಿನಲ್ಲಿ ಇದನ್ನು ಬಳಸಲ್ಪಡುವುದು ವರ್ಣಚಿತ್ರದ ಮಾಲೀಕತ್ವದ ಇತಿಹಾಸ’ ಎಂಬರ್ಥದಲ್ಲಿ. ಒಂದು ಕಲಾಕೃತಿಯ ಬೆಲೆ, ಕಲಾಕೃತಿಯಲ್ಲಿ ಅಡಗಿರುವ ಕಲೆ ಮತ್ತು ಕಲಾಕಾರನನ್ನು ಮಿಗಿಲಾಗಿ ಈ ಹಿಂದೆ ಯಾರ‍್ಯಾರು ಈ ಕಲಾಕೃತಿಯ ಮಾಲೀಕರಾಗಿದ್ದರು ಎನ್ನುವುದರ ಮೇಲೆಯೇ ಹೆಚ್ಚು ಅವಲಂಬಿತವಾಗಿರುತ್ತದೆ.

ಪೇಂಟಿಂಗ್ ನಲ್ಲಿರುವ ಕಲೆಯ ಬೆಲೆ ಅದರ ಇತಿಹಾಸ ಮತ್ತು ಮಾಲೀಕತ್ವದ ಇತಿಹಾಸದಿಂದ ಕೂಡಿಕೊಳ್ಳುವ ಬೆಲೆಗೆ ಹೋಲಿಸಿದರೆ ತೀರಾ ಗೌಣ. ಮೊದಲು ಪ್ರಸ್ತಾಪಿಸಿದ ತೀರಾ ಸಿಂಪಲ್ ಎನ್ನಿಸುವ ರೋತ್ಕೋನ ವೈಟ್ ಸೆಂಟರ್ ಚಿತ್ರವಿದೆಯಲ್ಲ, ಅದಕ್ಕೆ ಅಷ್ಟು ಬೆಲೆ ಬರಲು ಮೂಲ ಕಾರಣ ಆ ಚಿತ್ರವಾಗಲಿ ಅಥವಾ ಕಲಾಕಾರನಾಗಲಿ ಅಲ್ಲ. ಬದಲಿಗೆ ಅದನ್ನು ಹಿಂದೆ ಹೊಂದಿದ್ದ ವ್ಯಕ್ತಿಯಿಂದಾಗಿ. ಈ ಪೇಂಟಿಂಗ್ ಒಂದು ಜಮಾನದಲ್ಲಿ ರೋಕಫೆಲ್ಲರ್ ಮತ್ತು ನಂತರದಲ್ಲಿ ಆತನ ಕುಟುಂಬದ ಸ್ವತ್ತಾಗಿತ್ತು.

ರೋಕಫೆಲ್ಲರ್ ಎಂದರೆ ಆತ ಅಮೆರಿಕದ ನ್ಯೂಯಾರ್ಕ್‌ನ ಧೀರೂಭಾಯ್ ಅಂಬಾನಿ. ಅಂತಹ ಐತಿಹಾಸಿಕ ವ್ಯಕ್ತಿ ಈ ಪೇಂಟಿಂಗ್‌ನ ಮಾಲೀಕನಾಗಿದ್ದ
ಎನ್ನುವುದೇ ಈ ಪೇಂಟಿಂಗ್‌ಗೆ ಈ ಪರಿಯ ಡಾಲರ್ ಬೆಲೆ ಬರಲು ಕಾರಣವಾದದ್ದು. ಈ ಪೇಂಟಿಂಗ್‌ಗೆ ಕಲೆ, ಕಲಾಕಾರನನ್ನೂ ಮೀರಿ ಇದನ್ನು ಒಂದು ಕಾಲದಲ್ಲಿ
ರೋಕಫೆಲ್ಲರ್ ಮಾಲೀಕನಾಗಿದ್ದ ಎಂಬ ವಿಚಾರಕ್ಕಾಗಿ ಈ ಬೆಲೆ ಬಂದೊದಗಿದ್ದು. ಹೀಗೆ ಪೇಂಟಿಂಗ್ ಒಂದರ ಇತಿಹಾಸದ ಜತೆ ಜತೆ ಅದರ ಹಿಂದಿನ ಮಾಲೀಕನ ಇತಿಹಾಸ ಕೂಡ ಬೆಲೆಯನ್ನು ನಿರ್ಧರಿಸುವುದಿದೆ. ಇದನ್ನು ಆ ದಿನ ಹರಾಜಿನಲ್ಲಿ ಖರೀದಿಸಿದ್ದು ಕತಾರ್‌ನ ರಾಜಮನೆತನದ ಶೇಕ್ ಹಮಾದ್ ಬಿನ್ ಖಲೀಫ್ ಅಲ್-ತಾನಿ. ಹಾಗಾದಾಗ ಅಲ್ಲಿ ರೋಕ ಫೆಲ್ಲರ್‌ನ ಇತಿಹಾಸದ ಜತೆಗೆ ಪೇಂಟಿಂಗ್ ಗೆ ಸಂಬಂಧವೇ ಇಲ್ಲದ ಕತಾರ್‌ನ ರಾಜಮನೆತನದ ಇತಿಹಾಸವೂ ಥಳಕು ಹಾಕಿಕೊಳ್ಳುತ್ತದೆ.

ಆಗ ಅದರ ಬೆಲೆ ಇನ್ನಷ್ಟು ಹೆಚ್ಚುತ್ತದೆ. ಕತಾರ್‌ನ ರಾಜನ ಬದಲಿಗೆ ಅದ್ಯಾರೋ ಹೆಸರಿಲ್ಲದ- ಇತಿಹಾಸ ಅಥವಾ ಫೇಮ್ ಇಲ್ಲದ ವ್ಯಕ್ತಿ ಇದನ್ನು ಖರೀದಿಸಿದರೆ ಆ ಬೆಲೆ ಬಿದ್ದು ಹೋಗಬಹುದು ಅಥವಾ ಮುಂದೊಂದು ದಿನ ಮಾರಾಟವಾಗಿ ಹಸ್ತಾಂತರವಾದಾಗ ಖರೀದಿಸಿದ ಬೆಲೆಗೆ ಕೂಡ ಹೋಗದಿರಹುದು. ಒಂದು ಚಿತ್ರ ಹಿಂದೆ ಅಂಬಾನಿ ಮಾಲೀಕತ್ವದಲ್ಲಿತ್ತು ಅಥವಾ ಬೊರಿವಿಲ್ಲಿಯ ಗೋವಿಂದನ ಹತ್ತಿರವಿತ್ತು ಎನ್ನುವುದರ ಮೇಲೆ ಅದರ ಬೆಲೆ ನಿರ್ಧರಿತವಾದಂತೆ. ಹೀಗೆ ಮಾಲೀಕನ ಇತಿಹಾಸ ವರ್ಣಚಿತ್ರದೊಂದಿಗೆ ಥಳುಕುಹಾಕಿಕೊಳ್ಳುತ್ತ, ಸಂಬಂಧವೇ ಇಲ್ಲದ ಇತಿಹಾಸಗಳು ಜತೆಯಾಗುತ್ತ ಅದಕ್ಕನುಗುಣವಾಗಿ ಬೆಲೆ ಕೂಡ ಬೆಳೆಯುತ್ತ ಹೋಗುತ್ತದೆ.

ಹಾಗಾಗಿಯೇ ಹೇಳಿದ್ದು ಇದೊಂದು ಶ್ರೀಮಂತರ ವ್ಯವಹಾರ, ವ್ಯಾಪಾರ ಎಂದು. ಇಲ್ಲಿ ಇತಿಹಾಸ, ಫೇಮ್ ಕೂಡ ಒಂದು ಸರಕು. ಹೀಗೆ ಹರಾಜಿನಲ್ಲಿ ಮಾರಾಟ ವಾಗುವ ಫೇಮಸ್ ವರ್ಣಚಿತ್ರಗಳು ಕೆಲವೊಮ್ಮೆ ಅಜ್ಞಾತವಾಗಿ ಹೋಗುವುದಿದೆ. ಇಂತಹ ಹರಾಜಿನಲ್ಲಿ ಸಾಮಾನ್ಯವಾಗಿ ಖರೀದಿ ಮಾಡುವವರೇ ಬಂದು ಕೂತು ಬೆಲೆ ಕೂಗುವುದಿಲ್ಲ. ಆರ್ಟ್ ಅಕ್ಷನರ್ ಎನ್ನುವುದೇ ಒಂದು ಉದ್ಯೋಗ. ಇದಕ್ಕೆ ಲೈಸೆನ್ಸ್ ಎಲ್ಲ ಪಡೆದಿರಬೇಕಾಗುತ್ತದೆ. ಅಲ್ಲದೇ ಆ ಹರಾಜು ಕೂಗುವವರ ಹಿನ್ನೆಲೆ, ಮುನ್ನೆಲೆ ಎಲ್ಲವನ್ನೂ ಪರೀಕ್ಷಿಸಿಯೇ ಒಳಮನೆಗೆ, ಹರಾಜಿನ ಮನೆಯೊಳಕ್ಕೆ ಬಿಟ್ಟುಕೊಳ್ಳಲಾಗುತ್ತದೆ.

ಈ ಹರಾಜು ಕೂಗುವವರು ಕೇವಲ ಒಬ್ಬ ಖರೀದಿಮಾಡುವವನ ಜತೆಯಷ್ಟೇ ಕಾಂಟ್ರಾಕ್ಟ್ ಮಾಡಿಕೊಂಡಿರಬೇಕು. ಆ ಖರೀದಿ ಮಾಡುವವನು ಇಷ್ಟಪಟ್ಟಲ್ಲಿ ತನ್ನ ಹೆಸರು, ಮಾಹಿತಿ ಎಲ್ಲವನ್ನೂ ಗೌಪ್ಯವಾಗಿ ಇಡಬಹುದು. ಹೀಗೆ ಬಂದು ಹರಾಜು ಕೂಗುವವರಿಗೆ ಇಷ್ಟೆ ಹಿನ್ನೆಲೆ ಪರಾಮರ್ಶಿಸಿದ ನಂತರ ಒಂದು ಲ್ಯಾಂಡ್ ಲೈನ್ ಫೋನ್ ಅನ್ನು ಕೂತಲ್ಲಿಯೇ ಕೊಡಲಾಗುತ್ತದೆ. ಇವರು ಖರೀದಿ ಮಾಡುವವರ ಜತೆ ಮಾತನಾಡುತ್ತ – ಹೆಚ್ಚಿನ ಬೆಲೆಯನ್ನು ಕೂಗುತ್ತ ಹೋಗುತ್ತಾರೆ. ಹಾಗೆ
ನೋಡಿದರೆ ಅತ್ಯಂತ ಕ್ಲಿಷ್ಟ, ಜವಾಬ್ದಾರಿಯ ಕೆಲಸ ಇದು.

ಹರಾಜು ಗೆದ್ದ ನಂತರ ಅಷ್ಟಕ್ಕೇ ನಿಲ್ಲಿವುದಿಲ್ಲ. ಹಣ ರವಾನೆಯಿಂದ ಹಿಡಿದು ಈ ವರ್ಣಚಿತ್ರವನ್ನು ಮಾಲೀಕರಿಗೆ ತಲುಪಿಸುವವರೆಗಿನ ಎಲ್ಲ ಕೆಲಸ ಈ ಹರಾಜು ಕೂಗುವವರ ಕೆಲಸ. ಕೆಲವೊಮ್ಮೆ ಈ ವರ್ಣ ಚಿತ್ರ ತೀರಾ ಬೆಲೆಯುಳ್ಳದ್ದಾದರೆ ಅದನ್ನು ಸಾಗಿಸಿ ತಲುಪಿಸಲೆಂದೇ ವಿಶೇಷ ವಿಮಾನ ವ್ಯವಸ್ಥೆ ಮಾಡಲಾಗುತ್ತದೆ. ವಿಮಾನ ನಿಲ್ದಾಣಕ್ಕೆ ಹರಾಜು ಮನೆಯಿಂದ ಸಾಮಾನ್ಯವಾಗಿ ವಿಶೇಷ ಭಧ್ರತೆಯ ಹೆಲಿಕಾಪ್ಟರ್‌ನಲ್ಲಿ ಈ ವರ್ಣಚಿತ್ರವನ್ನು ಸಾಗಿಸಲಾಗುತ್ತದೆ. ಹೀಗೆ ಖರೀದಿಸಿದ ವ್ಯಕ್ತಿ ಪ್ರಪಂಚದ ಇನ್ಯಾವುದೋ ಒಂದು ಮೂಲೆಯಲ್ಲಿರುತ್ತಾನೆ. ಇನ್ನು ಕೆಲವೊಮ್ಮೆ ಈ ಮಾಲೀಕ ಈ ವರ್ಣ ಚಿತ್ರವನ್ನು ತನ್ನ ಮನೆಗೆ ಒಯ್ಯುವುದೇ ಇಲ್ಲ. ಇದನ್ನು ಅದೇ ದೇಶದಲ್ಲಿ ಭಧ್ರವಾಗಿಟ್ಟು ಇನ್ವೆಸ್ಟ್‌ಮೆಂಟ್ ರೀತಿಯಲ್ಲಿ ಅದನ್ನು ವರ್ಷಗಳು ಅಥವಾ ದಶಕ ಕಳೆದ ನಂತರ ಮತ್ತೆ ಹರಾಜಿಗೆ ಬಿಡುತ್ತಾನೆ.

ಹೀಗೆ ವರ್ಣಚಿತ್ರದ ಜತೆ ಆತನ ಮಾಲೀಕತ್ವದ ಹೆಸರು, ಇತಿಹಾಸ ಥಳುಕು ಹಾಕಿಕೊಳ್ಳುತ್ತದೆಯಾದರೂ ಅಸಲಿಗೆ ಅದರ ಮಾಲೀಕ ಅದನ್ನು ಕಣ್ಣಾರೆ ಒಮ್ಮೆಯೂ
ನೋಡದೇ ಇರಬಹುದು. ಖಾಸಗಿ ವ್ಯಕ್ತಿಗಳು ಹೀಗೆ ಖರೀದಿ ಮಾರಾಟದ ವ್ಯವಹಾರ ವ್ಯಾಪಾರ ಮಾಡುವುದು ಒಂದು ಕಡೆಯಾದರೆ ಚೀನಾ, ರಷ್ಯಾ ಮೊದಲಾದ ದೇಶಗಳು – ಅಲ್ಲಿನ ಸರಕಾರಗಳೂ ಕೂಡ ಇಂತಹ ದಂಧೆಗೆ ಇಳಿದ, ಅವರನ್ನು ತಡೆದು ನಿಲ್ಲಿಸಿದ ಉದಾಹರಣೆಗಳೂ ಇವೆ. ಒಟ್ಟಾರೆ ಈ ವರ್ಣಚಿತ್ರ ವ್ಯವಹಾರ ಸ್ಟಾಟಿಸ್ಟಾ ಅಂಕಿಅಂಶದ ಪ್ರಕಾರ ಸುಮಾರು 50 ಬಿಲಿಯನ್ ಡಾಲರ್ (3.7 ಲಕ್ಷ ಕೋಟಿ ರು.)ನ ವಾರ್ಷಿಕ ವ್ಯವಹಾರ.

ದಿನಗಳೆದಂತೆ ಈ ವ್ಯವಹಾರದಲ್ಲಿನ ಹಣದ ಮೊತ್ತ ಹೆಚ್ಚುತ್ತಲೇ ಇದೆ. ಜಗತ್ತಿನ ಅತ್ಯಂತ ಬೆಲೆಬಾಳುವ ವರ್ಣಚಿತ್ರಗಳ ಪೈಕಿ ಸುಮಾರು ಶೇ.95 ವರ್ಣಚಿತ್ರ ಗಳು ಮ್ಯೂಸಿಯಂನಲ್ಲಿ, ಸರಕಾರಿ ಸ್ವಾಮ್ಯದಲ್ಲಿದ್ದು ಈ ಎಲ್ಲ ವ್ಯವಹಾರ ಕೇವಲ ಉಳಿದ ಐದು ಪ್ರತಿಶತ ವರ್ಣಚಿತ್ರಗಳದ್ದು. ಮೂಲದಲ್ಲಿ ಸಂವಹನಕ್ಕೆ, ಅಭಿವ್ಯಕ್ತಿ ಗೆಂದು ಹುಟ್ಟಿಕೊಂಡು ನಾಗರಿಕತೆಯ ಮುನ್ನಡೆಯ ಪ್ರತೀಕವಾಗಿದ್ದ ವರ್ಣಚಿತ್ರಗಳು ಇಂದು ಈ ಎಲ್ಲ ಎಕನಾಮಿಕ್ಸ್ ಜತೆ ಜೋಡಿಸಿಕೊಂಡಿರುವುದು ಯಾವತ್ತೂ ಒಂದಿಷ್ಟು ಆಶ್ಚರ್ಯವನ್ನು, ಶ್ರೇಷ್ಠ ವರ್ಣಚಿತ್ರಗಳು ಹುಟ್ಟಿಹಾಕುವಂತೆ ಒಂದಿಷ್ಟು ವಿಚಿತ್ರ ಭಾವಗಳನ್ನು ಹುಟ್ಟಿಹಾಕುವುದು ಸೋಜಿಗವೇ ಸರಿ. ಅಲ್ಲವೇ?