Friday, 18th October 2024

ಆಳುವರ ಚಾಣಾಕ್ಷತನಕ್ಕೆ ಮಂಕಾದ ಕಾಂಗ್ರೆಸ್

BJP and Congress

ವರ್ತಮಾನ

maapala@gmail.com

ರಾಜ್ಯ ವಿಧಾನಮಂಡಲದ ಮಳೆಗಾಲದ ಅಧಿವೇಶನ ಆರಂಭವಾಗಿ ಒಂದು ವಾರದ ಕಲಾಪಗಳು ಮುಗಿದಿವೆ. ಇನ್ನೂ ಐದು ದಿನ ಅಧಿವೇಶನ ನಡೆಯಲಿದೆ. ವಿಧಾನಸಭೆ ಚುನಾವಣೆಗೆ ಏಳೆಂಟು ತಿಂಗಳು ಮಾತ್ರ ಬಾಕಿ ಇರುವುದರಿಂದ ಆಡಳಿತ
ಮತ್ತು ಪ್ರತಿಪಕ್ಷಗಳಿಗೆ ಈ ಅಧಿವೇಶನ ಅತ್ಯಂತ ಮಹತ್ವದ್ದಾಗಿದೆ.

ಏಕೆಂದರೆ, ಇನ್ನು ಚಳಿಗಾಲದ ಅಧಿವೇಶನ, ವರ್ಷದ ಮೊದಲ ಅಧಿವೇಶನ, ಬಜೆಟ್ ಅಧಿವೇಶನ ನಡೆಯುತ್ತದೆಯಾದರೂ ಆಗ ಶಾಸಕರಲ್ಲಿ ಚುನಾವಣೆ ಗುಂಗು ಆವರಿಸಿರುತ್ತದೆ. ಹೀಗಾಗಿ ಅಧಿವೇಶನದ ಲಾಭ ಪಡೆಯಲು ಆಡಳಿತ ಮತ್ತು ಪ್ರತಿಪಕ್ಷ ಗಳು ಜಿದ್ದಿಗೆ ಬಿದ್ದಿದ್ದು, ವಿಧಾನಸಭೆ ಮತ್ತು ವಿಧಾನ ಪರಿಷತ್ತಿ ನಲ್ಲಿ ಕಲಾಪ ಕಾವು ಪಡೆದುಕೊಳ್ಳುತ್ತಿದೆ. ಅದರಲ್ಲೂ ವಿಧಾನ ಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ಪ್ರತಿಷ್ಠೆಗೆ ಬಿದ್ದು ಸರಕಾರದ ವಿರುದ್ಧ ಹೋರಾಟಕ್ಕೆ ಇಳಿದಿದ್ದಾರೆ.

ಜೆಡಿಎಸ್‌ನಲ್ಲಿ ಅಷ್ಟೊಂದು ಹುರುಪು ಕಾಣಿಸುತ್ತಿಲ್ಲ. ಮತ್ತೊಂದೆಡೆ ಆಡಳಿತಾ ರೂಢ ಬಿಜೆಪಿ ಸದಸ್ಯರು ಅದೇಕೋ ಅತ್ಯಂತ ತಾಳ್ಮೆಯಿಂದ ವರ್ತಿಸುತ್ತಿರು ವಂತೆ ಕಾಣಿಸುತ್ತಿದೆ. ಹೌದು, ಕಳೆದ ಐದು ದಿನಗಳ ಕಲಾಪ ಗಮನಿಸಿದಾಗ ಕಾಂಗ್ರೆಸ್ ಸದಸ್ಯರು ಸರಕಾರದ ವಿರುದ್ಧ ಮುಗಿಬೀಳುವಲ್ಲಿ ಅಗತ್ಯಕ್ಕಿಂತ ಹೆಚ್ಚು ಉತ್ಸಾಹ, ಆಕ್ರಮಣಕಾರಿ ನೀತಿ ತೋರಿಸುತ್ತಿದ್ದಾರೆ. ಆದರೆ, ಬಿಜೆಪಿ ಯವರು ಮಾತ್ರ ಹಿಂದೆಂದಿಗಿಂತ ಹೆಚ್ಚು ತಾಳ್ಮೆ ಪ್ರದರ್ಶನ ಮಾಡುತ್ತಿದ್ದಾರೆ.

ಇದಕ್ಕೆ ಕಾರಣಗಳೂ ಇಲ್ಲದಿಲ್ಲ. ಸರಕಾರಕ್ಕೆ ಕೆಲವೊಂದು ತುರ್ತು ವಿಧೇಯಕಗಳನ್ನು ಉಭಯ ಸದನಗಳಲ್ಲಿ ಅಂಗೀಕರಿಸ ಬೇಕಿದೆ. ಇದರಲ್ಲಿ ಎರಡು ಭಾವನಾತ್ಮಕವಾಗಿ ಜನರನ್ನು ಹಿಡಿದಿಟ್ಟುಕೊಳ್ಳುವಂತಹದ್ದು. ಉಳಿದವು ಚುನಾವಣೆಗೆ ಸಂಬಂಧಿ ಸಿದ್ದು. ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವ ಕಾನೂನಿನ ಅವಧಿ ಮುಗಿಯುವುದರಿಂದ ವಿಧೇಯಕಗಳನ್ನು ಅಂಗೀಕರಿಸಿ ಅವುಗಳಿಗೆ ಕಾಯಿದೆಯ ಸ್ವರೂಪ ನೀಡುವ ಅನಿವಾರ್ಯತೆ ಸರಕಾರಕ್ಕಿದೆ.

ಹೀಗಾಗಿ ಸರಕಾರದ ವಿರುದ್ಧ ಮುಗಿಬಿದ್ದಿರುವ ಪ್ರತಿಪಕ್ಷಗಳು ಒಂದೊಂದೇ ಅಸಗಳನ್ನು ಹೊರಗೆಳೆದು ಬಿಡಲಾರಂಭಿಸಿದರೂ ಆಡಳಿತ ಪಕ್ಷದವರು ಸಹನೆಯಿಂದಲೇ ಎಲ್ಲವನ್ನೂ ಎದುರಿಸುತ್ತಿದ್ದಾರೆ. ಪ್ರತ್ಯಸಗಳನ್ನು ಸಿದ್ಧಪಡಿಸಿಕೊಂಡಿದ್ದರೂ ಅದನ್ನು ಪ್ರಯೋಗಿಸಲು ಆಸಕ್ತಿ ತೋರುತ್ತಿಲ್ಲ. ಮಳೆಹಾನಿ ಮತ್ತು ಪಿಎಸ್‌ಐ ನೇಮಕ ಅಕ್ರಮ ಕುರಿತಂತೆ ಕಾಂಗ್ರೆಸ್ ನಿಯಮ ೬೦ರಡಿ ನಿಲುವಳಿ ಸೂಚನೆ ಮಂಡಿಸಲು ನೋಟಿಸ್‌ಗಳನ್ನು ನೀಡಿದಾಗ ಅವುಗಳನ್ನು ಚಾಣಾಕ್ಷತನದಿಂದ ‘ಮ್ಯಾನೇಜ್’ ಮಾಡಿ ಹೆಚ್ಚು ಗದ್ದಲವಾಗಿ ತಾಸುಗಟ್ಟಲೆ ಕಲಾಪ ಹಾಳಾಗದಂತೆ ನೋಡಿಕೊಂಡಿತು.

ಪ್ರತಿಪಕ್ಷ ಸದಸ್ಯರು ಇನ್ನಷ್ಟು ಅತಿರೇಕಕ್ಕೆ ಹೋಗದಂತೆ ಎಚ್ಚರಿಕೆ ವಹಿಸಿತು. ಆಡಳಿತ ಪಕ್ಷದ ಚಾಣಾಕ್ಷ ನಡೆ ಮುಂದೆ ಪ್ರತಿಪಕ್ಷ ಕಾಂಗ್ರೆಸ್ ಮಂಕಾಯಿತೇ ಎಂಬ ಪ್ರಶ್ನೆ ಉದ್ಭವವಾಗುವಂತಾಯಿತು. ಪ್ರಸಕ್ತ ಅಧಿವೇಶನದಲ್ಲಿ ಎರಡು ವಿಧೇಯಕಗಳು
ಬಿಜೆಪಿಯ ಪಾಲಿಗೆ ಅತಿ ಮುಖ್ಯವಾಗಿರುವಂತಹದ್ದು. ಅದರಲ್ಲಿ ಮೊದಲನೆಯದ್ದು ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ (ಬಲವಂತದ ಮತಾಂತರ ನಿಷೇಧ). ಅದನ್ನು ಗುರುವಾರ ಮೇಲ್ಮನೆಯಲ್ಲಿ ಅಂಗೀಕರಿಸಿದ್ದೂ ಆಯಿತು. ಹಿಂದುತ್ವದ ರಕ್ಷಣೆಯಲ್ಲಿರುವ ಬಿಜೆಪಿಗೆ ಇದು ಅನಿವಾರ್ಯವೂ ಹೌದು.

ಈಗಾಗಲೇ ವಿಧಾನಸಭೆಯಲ್ಲಿ ಅಂಗೀಕೃತ ರೂಪದಲ್ಲಿದ್ದ ಈ ವಿಧೇಯಕ ವಿಧಾನ ಪರಿಷತ್ತಿನಲ್ಲಿ ಸಂಖ್ಯಾಬಲದ ಕೊರತೆಯಿಂದ ಮಂಡಿಸಲು ಸಾಧ್ಯವಾಗಿರಲಿಲ್ಲ. ಈ ಮಧ್ಯೆ ಸುಗ್ರೀವಾಜ್ಞೆ ಮೂಲಕ ಬಲವಂತದ ಮತಾಂತರ ನಿಷೇಧ ಕಾನೂನು ಜಾರಿ ಗೊಳಿಸಿದೆಯಾದರೂ ಸುಗ್ರೀವಾಜ್ಞೆಯ ಆರು ತಿಂಗಳು ಅವಧಿ ಮುಗಿಯುತ್ತಿದೆ. ಇಂತಹ ಮಹತ್ವದ ವಿಷಯಗಳಲ್ಲಿ ಸುಗ್ರೀವಾಜ್ಞೆ
ವಿಸ್ತರಿಸುವುದು ಕಾನೂನು ತೊಡಕಿಗೆ ಕಾರಣವಾಗಬಹುದು.

ಹೀಗಾಗಿ ಪ್ರಸಕ್ತ ಅಧಿವೇಶನದಲ್ಲೇ ವಿಧೇಯಕಕ್ಕೆ ಅನುಮೋದನೆ ಪಡೆಯುವ ಉದ್ದೇಶದಿಂದ ಸರಕಾರ ಪ್ರತಿಪಕ್ಷಗಳ
ಆಕ್ರೋಶಕ್ಕೆ ತಣ್ಣನೆಯ ಪ್ರತಿಕ೩ಇಯೆ ನೀಡುತ್ತಿತ್ತು. ಇದೀಗ ವಿಧಾನಪರಿಷತ್ತಿನಲ್ಲೂ ಸಂಖ್ಯಾಬಲ ಬಂದಿರುವುದರಿಂದ ಈ
ವಿಧೇಯಕಕ್ಕೆ ಅನುಮೋದನೆ ಪಡೆಯಲಾಗಿದೆ. ಆ ಮೂಲಕ ಮತಾಂತರ ನಿಷೇಧ ಕಾಯಿದೆ ಜಾರಿಗೊಳಿಸುವುದಾಗಿ ಹೇಳಿ
ಹಿಂದೂಗಳನ್ನು ಸಮಾಧಾನಪಡಿಸಿದ್ದ ಬಿಜೆಪಿ ಈಗ ಆ ಮಾತನ್ನು ಉಳಿಸಿಕೊಂಡಿದೆ.

ಇನ್ನೊಂದು ರಾಜ್ಯದಲ್ಲಿ ಕನ್ನಡ ಕಡ್ಡಾಯಕ್ಕೆ ಕಾನೂನಾತ್ಮಕ ಶಕ್ತಿ ನೀಡುವ ವಿಧೇಯಕ. ಕನ್ನಡ ಕಡ್ಡಾಯಗೊಳಿಸಲು ಕಾಯಿದೆ ರೂಪಿಸಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದ ಇದ್ದರೂ ಆಡಳಿತ ನಡೆಸಿದವರು ಇಚ್ಛಾಶಕ್ತಿ ತೋರಿಸಿರಲಿಲ್ಲ. ಈ ಮಧ್ಯೆ ಆಡಲಿತಾರೂಢ ಬಿಜೆಪಿಗೆ ಕನ್ನಡ ಭಾಷೆಯೇ ದೊಡ್ಡ ಸವಾಲಾಗಿತ್ತು. ಕೇಂದ್ರದ ಬಿಜೆಪಿ ನೇತೃತ್ವದ ಸರಕಾರ ಹಿಂದಿ ಭಾಷೆಗೆ ಆದ್ಯತೆ ನೀಡುತ್ತಿದೆ.

ಹಿಂದಿ ದಿವಸ್ ಆಚರಿಸುವ ಮೂಲಕ ಅದನ್ನು ರಾಷ್ಟ್ರೀಯ ಭಾಷೆ ಎಂಬಂತೆ ಬಿಂಬಿಸುತ್ತಿದೆ. ಇದರ ಪರಿಣಾಮ ಬಿಜೆಪಿ ಕನ್ನಡ ವಿರೋಧಿ ಎಂಬ ಭಾವನೆ ಜನರಲ್ಲಿ ಬರುವಂತಾಗಿದೆ. ಹಾಗೆ ಹೇಳುವುದಕ್ಕಿಂತಲೂ ಅಂತಹ ಭಾವನೆ ಬರುವಂತೆ ಪ್ರತಿಪಕ್ಷ ಗಳು ನೋಡಿಕೊಂಡಿವೆ. ಇದಕ್ಕೆ ಕನ್ನಡಪರ ಸಂಘಟನೆಗಳೂ ಕೈಜೋಡಿಸಿವೆ. ಇಂತಹ ಪರಿಸ್ಥಿತಿ ಮುಂದಿನ ಚುನಾವಣೆಯಲ್ಲಿ
ಬಿಜೆಪಿಗೆ ಕೊಂಚ ಮಟ್ಟಿಗೆ ಪ್ರತೀಕೂಲ ಪರಿಣಾಮವನ್ನೂ ಬೀರುವ ಆತಂಕ ಕಾಣಿಸಿಕೊಂಡಿದೆ.

ಹೀಗಾಗಿ ತಾನು ಕನ್ನಡ ವಿರೋಧಿ ಎಂಬ ಹಣೆಪಟ್ಟಿಯಿಂದ ಹೊರಬರಲು ಸರಕಾರ ಈಗ ಕನ್ನಡವನ್ನು ಕಾನೂನಾತ್ಮಕವಾಗಿ ಕಡ್ಡಾಯ ಮಾಡಲು ವಿಧೇಯಕ ಮಂಡಿಸಲು ಮುಂದಾಗಿದೆ. ಈ ಅಧಿವೇಶನದಲ್ಲೇ ಅದನ್ನು ಮಂಡಿಸಲಿದ್ದು, ವಿಧೇಯಕ ಎರಡೂ ಸದನಗಳಲ್ಲಿ ಯಾವುದೇ ವಿರೋಧವಿಲ್ಲದೆ ಅಂಗೀಕಾರಗೊಳ್ಳುವಂತೆ ನೋಡಿಕೊಳ್ಳಬೇಕಾಗಿದೆ. ವಿಧೇಯಕ ಅಂಗೀ ಕಾರಗೊಂಡರೆ ಕನ್ನಡಿಗರ ಅಸಮಾಧಾನ ಕಡಿಮೆಯಾಗಿ ಒಂದಷ್ಟು ಮತಗಳು ಸೃಷ್ಟಿಯಾಗುವುದು ಖಚಿತ ಎಂಬುದು
ಬಿಜೆಪಿ ಲೆಕ್ಕಾಚಾರ.

ಹೀಗಾಗಿ ಕನ್ನಡವನ್ನು ಕಾನೂನಾತ್ಮಕವಾಗಿ ಕಡ್ಡಾಯಗೊಳಿಸುವ ವಿಧೇಯಕವನ್ನು ಮುಂದಿನ ವಾರ ಮಂಡಿಸಿ ಅನುಮೋದನೆ ಪಡೆಯಲು ಮುಂದಾಗಿರುವ ಸರಕಾರ, ನಂತರ ಪ್ರತಿಪಕ್ಷಗಳ ವಿರುದ್ಧ ತಿರುಗಿ ಬೀಳಲು ಸಿದ್ಧವಾಗಬಹುದು ಎಂದು ಹೇಳಲಾ ಗುತ್ತಿದೆ. ಸರಕಾರ ನಡೆಸುತ್ತಿಲ್ಲ, ‘ಮ್ಯಾನೇಜ್’ ಮಾಡುತ್ತಿದ್ದೇವೆ ಎಂದು ಹೇಳಿ ವಿವಾದಕ್ಕೆ ಕಾರಣವಾಗಿದ್ದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಮೊದಲ ವಾರ ‘ಮ್ಯಾನೇಜ್’ ಮಾಡಿದ್ದರಿಂದಲೇ ಸರಕಾರ
ಮುಜುಗರದಿಂದ ಪಾರಾಯಿತು.

ಮಾಧುಸ್ವಾಮಿ ಇಂತಹ ಕೇಳಿಕೆ ನೀಡಿದಾಗ ಆಡಳಿತ ಪಕ್ಷದ ಕೆಲ ಸದಸ್ಯರೇ ಅಸಮಾಧಾನ ವ್ಯಕ್ತಪಡಿಸಿ, ಇರಲು ಸಾಧ್ಯ ವಿಲ್ಲದಿದ್ದರೆ ರಾಜೀನಾಮೆ ನೀಡಿ ಹೊರಹೋಗಲಿ ಎಂದಿದ್ದರು. ಆದರೆ, ಈ ಹಿಂದಿನ ಅಧಿವೇಶನಗಳಂತೆ ಈ ಅಧಿವೇಶನ ದಲ್ಲೂ ಅವರು ಪ್ರತಿಪಕ್ಷಗಳ ಸವಾಲು, ಟೀಕೆಗಳನ್ನು ‘ಮ್ಯಾನೇಜ್’ ಮಾಡಿ ಸರಕಾರವನ್ನು ಅಪಾಯದಿಂದ ಪಾರು ಮಾಡಿದರು.

ಪ್ರತಿಪಕ್ಷಗಳು ನಿಲುವಳಿ ಸೂಚನೆ ಪ್ರಸ್ತಾಪ ಮಾಡುವುದು, ಸರಕಾರ ಅದನ್ನು ಒಪ್ಪದೇ ಇರುವುದು, ಈ ವಿಚಾರದಲ್ಲಿ ಗದ್ದಲ ಹೆಚ್ಚಾಗಿ ಕಲಾಪದ ಸಮಯ ಹಾಳಾಗುವುದು ಸಾಮಾನ್ಯ. ಆದರೆ, ಈ ಬಾರಿ ಅದಕ್ಕೆ ಅವಕಾಶವಾಗದಂತೆ ನೋಡಿಕೊಳ್ಳ ಲಾಯಿತು. ಮಳೆಹಾನಿ ಕುರಿತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಿಲುವಳಿ ಸೂಚನೆ ಪ್ರಸ್ತಾಪ ಮಂಡಿಸಿದಾಗ, ನಿಲುವಳಿ ಸೂಚನೆಯಾದರೆ ನೋಟಿಸ್‌ನಲ್ಲಿ ಸಹಿ ಮಾಡಿದವರು ಮಾತ್ರ ಮಾತನಾಡಬೇಕು.

ಅದರ ಬದಲು ನಿಯಮ 69ರಡಿ ಈ ವಿಷಯ ಕೈಗೆತ್ತಿಕೊಂಡರೆ ಎಲ್ಲಾ ಸದಸ್ಯರಿಗೂ ಮಾತನಾಡಲು ಅವಕಾಶ ಸಿಗುತ್ತದೆ
ಎಂದು ಹೇಳಿ ಪ್ರತಿಪಕ್ಷ ಸದಸ್ಯರನ್ನೂ ಸುಮ್ಮನಾಗಿಸಿದರು. ಪಿಎಸ್‌ಐ ನೇಮಕ ಅಕ್ರಮ ಕುರಿತ ನಿಲುವಳಿ ಸೂಚನೆ
ಪ್ರಸ್ತಾಪ ಬಂದಾಗ, ಎಲ್ಲರೂ ಮಾತನಾಡಬೇಕು ಎಂಬ ಅಂಶದ ಜತೆಗೆ, ನೋಟಿಸ್‌ನಲ್ಲಿ ಸಚಿವರು, ಶಾಸಕರ ಪ್ರಸ್ತಾಪ
ಮಾಡಿರುವುದರಿಂದ ಇದು ಹಕ್ಕುಚ್ಯುತಿ ವ್ಯಾಪ್ತಿಗೆ ಬರುತ್ತದೆ ಎಂದು ಹೇಳಿ ನಿಯಮಗಳ ಮೂಲಕ ಪ್ರತಿಪಕ್ಷವನ್ನು
ಕಟ್ಟಿಹಾಕಿದರು.

ಅದೇ ರೀತಿ ಬಳ್ಳಾರಿಯ ವಿಜಯನಗರ ವಿಜ್ಞಾನ ಸಂಸ್ಥೆ (ವಿಮ್ಸ್)ನಲ್ಲಿ ವಿದ್ಯುತ್ ಸಮಸ್ಯೆಯಿಂದ ತೀವ್ರ ನಿಗಾ ಘಟಕದಲ್ಲಿ ಮೂವರು ಮೃತಪಟ್ಟ ಪ್ರಕರಣದಲ್ಲಿ ಪ್ರತಿಪಕ್ಷಗಳು ಸರಕಾರದ ವಿರುದ್ಧ ಮುಗಿಬಿದ್ದಾಗ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೀಡಿದ್ದ ನೋಟಿಸ್‌ನಲ್ಲಿ ಇದ್ದ ‘ಸರಕಾರಿ ಪ್ರಾಯೋಜಿತ ಹತ್ಯೆ’ ಎಂಬ ಪದವನ್ನೇ ಆಧಾರವಾಗಿಟ್ಟುಕೊಂಡು ಚರ್ಚೆಯ ಗತಿಯನ್ನೇ ಬದಲಿಸಿದರು.

ಇದರಿಂದ ಸರಕಾರ ಇಕ್ಕಟ್ಟಿಗೆ ಸಿಲುವುಕುವುದು ತಪ್ಪಿತ್ತು. ಇನ್ನು ಮೇಲ್ಮನೆಯಲ್ಲಿ ಮತಾಂತರ ನಿಷೇಧ ವಿಧೇಯಕದ ಮೇಲಿನ ಚರ್ಚೆ ಸಂದರ್ಭದಲ್ಲೂ ಸರಕಾರದ ನೆರವಿಗೆ ಬಂದಿದ್ದು ಇದೇ ಮಾಧುಸ್ವಾಮಿ. ಒಟ್ಟಿನಲ್ಲಿ ಈ ಬಾರಿಯ ಅಽವೇಶನದಲ್ಲಿ ಆಡಳಿತಾರೂಢ ಬಿಜೆಪಿ ಬಹುತೇಕ ಸಂದರ್ಭದಲ್ಲಿ ಪ್ರತಿಪಕ್ಷಗಳನ್ನು ‘ಮ್ಯಾನೇಜ್’ ಮಾಡುವಲ್ಲಿ ಯಶಸ್ಸು ಗಳಿಸಿದ್ದಂತೂ ಹೌದು.

ಆದರೆ, ಇದು ಮುಂದುವರಿಯುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ತನ್ನ ಉದ್ದೇಶ ಈಡೇರಿದ ಬಳಿಕವೂ ತಾಳ್ಮೆ ವಹಿಸಿ
ದರೆ ರಾಜಕೀಯವಾಗಿ ನಷ್ಟ ಅನುಭವಿಸಬೇಕಾಗುತ್ತದೆ. ಭ್ರಷ್ಟಾಚಾರ, ನೇಮಕ ಅಕ್ರಮ, 40 ಪರ್ಸೆಂಟ್ ಕಮಿಷನ್
ಸರಕಾರ ಎಂಬಿತ್ಯಾದಿ ಗಂಭೀರ ಆರೋಪಗಳು ಬಂದಾಗ ಅದಕ್ಕೆ ಅಷ್ಟೇ ತೀಕ್ಷ್ಣವಾದ ತಿರುಗೇಟು ನೀಡಲೇ ಬೇಕಾಗುತ್ತದೆ. ಇಲ್ಲವಾದಲ್ಲಿ ಸರಕಾರ ಸೋಲೊಪ್ಪಿಕೊಂಡಂತೆ. ಇದರ ಪರಿಣಾಮ ಪಕ್ಷದ ಮೇಲೆ ಬೀಳಲಿದೆ.

ಹೀಗಾಗಿ ಮುಂದಿನ ವಾರದ ಆರಂಭದಲ್ಲೇ ಅಗತ್ಯ ವಿಧೇಯಕಗಳನ್ನು ಉಭಯ ಸದನಗಳಲ್ಲಿ ಅಂಗೀಕಾರವಾಗುವಂತೆ ನೋಡಿಕೊಂಡು ಪ್ರತಿಪಕ್ಷಗಳ ವಿರುದ್ಧ ತಿರುಗಿ ಬೀಳುವ ಉಮೇದಿನಲ್ಲಿ ಬಿಜೆಪಿ ಇರುವುದಂತೂ ಖಚಿತ.

ಲಾಸ್ಟ್ ಸಿಪ್: ಇನ್ನೊಬ್ಬರು ಮಾಡುವ ತಪ್ಪಿನಲ್ಲಿ ತಾವು ಹೇಗೆ ಲಾಭ ಪಡೆಯಬಹುದು ಎಂಬುದನ್ನು ಸಚಿವ ಮಾಧುಸ್ವಾಮಿ ಅವರಿಂದ ಕಲಿಯಬೇಕು.