Friday, 18th October 2024

ಸ್ಟೆಥೋಸ್ಕೋಪ್‌ನ ಉದಯ ಮತ್ತು ಬೆಳವಣಿಗೆ

ಹಿಂದಿರುಗಿ ನೋಡಿದಾಗ

ಲೆನೆಕ್ ತನ್ನ ಮೂಲ ಸ್ಟೆಥೋಸ್ಕೋಪಿನ ಸಹಾಯದಿಂದ, ವಿವಿಧ ರೋಗಿಗಳ ಹೃದಯ ಮತ್ತು ಎದೆಗೂಡಿನ ಶ್ವಾಸಚಲನೆಯ ಶಬ್ದಗಳ ಸ್ವರೂಪವನ್ನು ಆಲಿಸಿ ಗುರುತಿಸಿಕೊಂಡ. ಇವುಗಳನ್ನು ಅಧ್ಯಯನ ಮಾಡಿ ರೋಗನಿದಾನವನ್ನು (ಡಯಾಗ್ನೋಸಿಸ್) ಮಾಡಿದ. ತನ್ನ ರೋಗನಿಧಾನದ ನಿಖರತೆಯನ್ನು ತಿಳಿಯಲು ರೋಗಿಯ ರೋಗಪ್ರಗತಿಯನ್ನು ನಿರಂತರವಾಗಿ ಅಧ್ಯಯನವನ್ನು ಮಾಡಲಾರಂಬಿಸಿದ.

ನಮ್ಮ ಪೂರ್ವಜರು ಬೇಟೆಯಾಡುವಾಗ ಇಲ್ಲವೇ ಹಿಂಸ್ರಮೃಗಕ್ಕೆ ಬೇಟೆಯಾಗದಂತೆ ತಪ್ಪಿಸಿಕೊಳ್ಳುವಾಗ ಓಡಬೇಕಾಗುತ್ತದೆ. ಹಾಗೆ ಓಡುವಾಗ ಅವರ
ಗಮನಕ್ಕೆ ಎರಡು ಅಂಶಗಳು ಬಂದೇ ಇರುತ್ತವೆ. ಅವು ಏದುಸಿರು ಮತ್ತು ಹೃದಯದ ಲಬ್ ಡಬ್ ಮಿಡಿತದ ಶಬ್ದ!

ಈ ಎರಡು ಶಬ್ದಗಳು ನಮ್ಮ ಪೂರ್ವಜರಿಗೆ ಚಿರಪರಿಚಿತ ವಾಗಿದ್ದವು. ನಾವು ಉಸಿರಾಡುವಾಗ, ನಮ್ಮ ಶ್ವಾಸಕೋಶಗಳಲ್ಲಿ ಗಾಳಿಯು ಚಲಿಸುವುದನ್ನು ಗಮನಿಸಿ, ಅದು ಆರೋಗ್ಯವಂತರಲ್ಲಿ ಹೇಗೆ ಚಲಿಸುತ್ತದೆ ಹಾಗೂ ರೋಗಪೀಡಿತರಲ್ಲಿ ಹೇಗೆ ಚಲಿಸುತ್ತದೆ ಎನ್ನುವುದರ ಬಗ್ಗೆ ಮೊದಲ ಬಾರಿಗೆ ಗಮನವನ್ನು ಹರಿಸಿದವರು ಈಜಿಪ್ಷಿಯನ್ ವೈದ್ಯರು. ಕ್ರಿ.ಪೂ.೧೫೦೦ರ ಆಸುಪಾಸಿನಲ್ಲಿ ರಚನೆಯಾಗಿರಬಹುದಾದ ಈಬರ್ಸ್ ಪ್ಯಾಪಿರಸ್ ಗ್ರಂಥದಲ್ಲಿ ಈ ಬಗ್ಗೆ ಉಲ್ಲೇಖವಿದೆ. ಪ್ರಾಚೀನ
ಭಾರತೀಯ ಋಷಿಗಳು ಉಸಿರಾಟದ ಮಹತ್ವದ ಬಗ್ಗೆ ಕ್ರಮಬದ್ಧವಾಗಿ ಅಧ್ಯಯನವನ್ನು ಮಾಡಿ ಪ್ರಾಣಾಯಾಮವನ್ನು ರೂಪಿಸಿದರು.

ಹಿಪ್ಪೋಕ್ರೇಟ್ಸ್ ಸಹ ಚಿಕಿತ್ಸೆಯಲ್ಲಿ ರೋಗಿಯ ಶ್ವಾಸಚಲನೆಯನ್ನು ಅಧ್ಯಯನವನ್ನು ಮಾಡುತ್ತಿದ್ದ. ಆದರೆ ಶ್ವಾಸಕೋಶಗಳಲ್ಲಿ ವಾಯುಚಲನೆಯನ್ನು ವೈಜ್ಞಾನಿಕ ವಾಗಿ ಅಧ್ಯಯನ ಮಾಡಲು ೧೯ನೆಯ ಶತಮಾನ ದವರೆಗೆ ಕಾಯಬೇಕಾಯಿತು. ಆಧುನಿಕ ವೈದ್ಯಕೀಯದ ಅವಿಭಾಜ್ಯ ಅಂಗಗಳಲ್ಲಿ ವೈದ್ಯಕೀಯ  ಉಪಕರಣಗಳು ಬಹಳ ಮುಖ್ಯವಾದವು. ವೈದ್ಯಕೀಯ ಉಪಕರಣಗಳಲ್ಲಿ ಅತ್ಯಂತ ಮುಖ್ಯವಾದದ್ದು, ದೈನಂದಿನ ವೃತ್ತಿಯಲ್ಲಿ ಅತ್ಯುಪಯುಕ್ತವಾದದ್ದು ಹಾಗೂ
ಓರ್ವ ವೈದ್ಯನ ಲಾಂಛನ ರೂಪದಲ್ಲಿ ವಿಖ್ಯಾತವಾದದ್ದು ಸ್ಟೆಥೋಸ್ಕೋಪ್. ಸಾಮಾನ್ಯವಾಗಿ ವೈದ್ಯರು ಸ್ಟೆಥೋಸ್ಕೋಪನ್ನು ತಮ್ಮ ಕುತ್ತಿಗೆಯ ಮೇಲೆ ಹಾವಿನ ರೂಪದಲ್ಲಿ ಧರಿಸುವುದನ್ನು ನಾವು ನೋಡಬಹುದು.

ಸ್ಟೆಥೋಸ್ಕೋಪ್ ಎನ್ನುವ ಶಬ್ದ ಗ್ರೀಕ್ ಮೂಲದ್ದು. ಸ್ಟೆಥೋಸ್ ಎಂದರೆ ಎದೆ ಎಂದರ್ಥ. ಸ್ಕೋಪಿಯೆನ್ ಎಂದರೆ ಅನ್ವೇಷಣೆ, ಹುಡುಕಾಟ, ಪರೀಕ್ಷೆ ಇತ್ಯಾದಿ
ಅರ್ಥಗಳನ್ನು ಹೊಮ್ಮಿಸುವ ಶಬ್ದ. ವೈದ್ಯರು ತಮ್ಮ ಸಾಧನದ ಮೂಲಕ ಎದೆಯ ಸ್ಥಿತಿಗತಿಗಳನ್ನು ತಿಳಿಯಲು ಉಪಯೋಗಿಸುವ ಸಾಧನ ಎಂದು ಅರ್ಥೈಸ ಬಹುದು. ಕನ್ನಡದಲ್ಲಿ ಇದನ್ನು ಎದೆ ಪರೀಕ್ಷಕ ಎಂದು ಹೇಳಬಹುದು. ಆದರೆ ಇಂತಹ ಶಬ್ದ ವನ್ನು ಸೃಜಿಸುವ ಬದಲು ಕಾರು, ಬಸ್ಸು, ಲಾರಿ ಮುಂತಾದ
ಶಬ್ದಗಳನ್ನು ಒಪ್ಪಿರುವಂತೆ ಕನ್ನಡದಲ್ಲಿಯೂ ಸ್ಟೆಥೋಸ್ಕೋಪು ಎಂದೇ ಬಳಸುವುದು ಉಚಿತ.

ಸ್ಟೆಥೋಸ್ಕೋಪ್ ತತ್ವವನ್ನು ಮೊದಲ ಬಾರಿಗೆ ಗಮನಿಸಿ, ಅದನ್ನು ಪ್ರಾಯೋಗಿಕವಾಗಿ ಕಾರ್ಯರೂಪಕ್ಕೆ ತಂದವನು ಫ್ರೆಂಚ್ ವೈದ್ಯ ಹಾಗೂ ಸಂಗೀತ ತಜ್ಞ ಡಾ. ರೆನೆ ಥಿಯೋ-ಲ್ ಹಯಸಿಂಥ್ ಲೆನೆಕ್ (೧೭೮೧-೧೮೨೬). ಸೆಪ್ಟೆಂಬರ್ ೧೮೧೬ರ ಬೆಳಗಿನ ಜಾವ. ೩೫ ವರ್ಷದ ಲೆನೆಕ್ ಇಬ್ಬರು ಮಕ್ಕಳು ಆಟ
ವಾಡುವುದನ್ನು ನೋಡಿದ. ಹುಡುಗರು ಒಂದು ಉದ್ದನೆಯ ಮರದ ತುಂಡನ್ನು ಹಿಡಿದುಕೊಂಡಿದ್ದರು. ಒಬ್ಬ ಹುಡುಗ ಮರದ ತುಂಡಿನ ಒಂದು ಅಂಚಿಗೆ ತನ್ನ ಕಿವಿಯನ್ನು ಆನಿಸಿದ್ದ. ಮತ್ತೊಬ್ಬ ಹುಡುಗ ಮರದ ತುಂಡಿನ ಮತ್ತೊಂದು ತುದಿಯನ್ನು ಸೂಜಿಯಿಂದ ಕೆರೆಯುತ್ತಿದ್ದ. ಸೂಜಿಯ ಕೆರೆತದ ಅಲ್ಪಶಬ್ದವು ಮರದ ತುಂಡಿಯನ್ನು ಬಲವರ್ಧನೆಗೊಂಡು ಸಾಗಿ ಮತ್ತೊಂದು ತುದಿಯಲ್ಲಿದ್ದ ಹುಡುಗನಿಗೆ ಸ್ಪಷ್ಟವಾಗಿ ಹಾಗೂ ದೊಡ್ಡದಾಗಿ ಕೇಳಿಸುತ್ತಿತ್ತು. ಹುಡುಗರು ಸರದಿಯ
ಮೇರೆಗೆ ಶಬ್ದ ವರ್ಧನೆಯ ಸೊಗಸನ್ನು ಆಲಿಸುತ್ತ ಆಟವಾಡುತ್ತಿದ್ದರು. ಹುಡುಗರನ್ನು ನೋಡಿ ನಗುತ್ತಾ ಲೆನೆಕ್ ಮುಂದಕ್ಕೆ ಸಾಗಿದ.

ಲೆನೆಕನ ದಿನಗಳಲ್ಲಿ ಹೃದಯದ ಅಥವಾ ಶ್ವಾಸಕೋಶ ಶಬ್ದಗಳನ್ನು ಆಲಿಸಬೇಕಾದರೆ, ವೈದ್ಯರು ತಮ್ಮ ಕಿವಿಯನ್ನು ನೇರವಾಗಿ ರೋಗಿಯ ಎದೆಯ ಮೇಲಿಟ್ಟು ಆಲಿಸಬೇಕಾಗಿತ್ತು. ಇದನ್ನು ಪ್ರತ್ಯಕ್ಷ ಆಲಿಸುವಿಕೆ (ಇಮ್ಮಿಡಿಯೇಟ್ ಆಸ್ಕಲ್ಟೇಶನ್) ಎಂದು ಕರೆಯುತ್ತಿದ್ದರು. ವಾಸ್ತವದಲ್ಲಿ ವೈದ್ಯರು ಪ್ರತ್ಯಕ್ಷ ಆಲಿಸುವಿಕೆಯ ಪರೀಕ್ಷೆಯನ್ನು ಮಾಡಲು ಇಷ್ಟಪಡುತ್ತಿರಲಿಲ್ಲ. ಏಕೆಂದರೆ ರೋಗಿಯೊಬ್ಬದ ಎದೆಗೆ ಕಿವಿಯನ್ನು ಆನಿಸುವಾಗ ರೋಗಿಯ ನಿಕಟ ಸಂಪರ್ಕದ ಕಾರಣ ಸೋಂಕು ವೈದ್ಯರಿಗೆ ಅಂಟಿಕೊಳ್ಳಲು ಸಾಧ್ಯವಿತ್ತು. ಅನೇಕ ರೋಗಿಗಳು ಸ್ನಾನವನ್ನೇ ಮಾಡುತ್ತಿರಲಿಲ್ಲ. ಹಾಗಾಗಿ ಅವರ ಮೈಯಿಂದ ಬೆವರಿನ ಕಮಟುವಾಸನೆಯು ಹೊರಡುತ್ತಿತ್ತು. ಇದನ್ನು ಸಹಿಸಿಕೊಂಡು ಪರೀಕ್ಷಿಸುವುದು ಒಂದು ಕಷ್ಟವಾಗುತ್ತಿತ್ತು.

ಹದಿಹರಯದ ಹೆಣ್ಣುಮಕ್ಕಳ ಎದೆಗೆ ಕಿವಿಯನ್ನು ಹಚ್ಚಿ ಹೃದಯ ಮಿಡಿತವನ್ನು ಕೇಳುವುದೆಂದರೆ ಆ ಹೆಣ್ಣುಮಕ್ಕಳಿಗೂ ಹಾಗೂ ಯುವ ವೈದ್ಯರಿಗೂ ಮುಜುಗರದ-ಸಂಕೋಚದ ವಿಷಯವಾಗಿತ್ತು. ಓರ್ವ ಗರ್ಭವತಿಯನ್ನು ಪರೀಕ್ಷಿಸುವಂತೆ ಲೆನೆಕನಿಗೆ ಕರೆ ಬಂದಿತು. ಆಕೆ ಯುವತಿ. ಬಹಳ ದಪ್ಪಕ್ಕಿದ್ದಳು. ಅವಳಿಗೆ ಹೃದಯದ ಬೇನೆ ಇದ್ದಿತು. ಆಕೆಯನ್ನು ಪರೀಕ್ಷಿಸಬೇಕಾಗಿತ್ತು. ಹಾಗಾಗಿ ಲೆನೆಕ್ ಆಕೆಯನ್ನು ಪರೀಕ್ಷಿಸಲು ಹಿಂದೆಗೆದ. ಆಗ ಲೆನೆಕನಿಗೆ ಉದ್ದನೆಯ ಮರದ ತುಂಡಿನೊಡನೆ ಆಟವಾಡುತ್ತಿದ್ದ ಇಬ್ಬರು ಮಕ್ಕಳು ನೆನಪಾದರು. ಆ ನೋಟವು ಲೆನಕನ ಕಣ್ಣಿನ ಮುಂದೆ ಬಂದಿತು. ಕೂಡಲೇ ಲೆನೆಕ್ ಒಂದು ಹಾಳೆಯನ್ನು ತೆಗೆದುಕೊಂಡ. ಅದನ್ನು ಸುರುಳಿ ಸುತ್ತಿದ. ಒಂದು ತುದಿಯನ್ನು ಆ ಹೆಣ್ಣುಮಗಳ ಎದೆಯ ಮೇಲಿಟ್ಟ. ಮತ್ತೊಂದು ತುದಿಯನ್ನು ತನ್ನ ಕಿವಿಗಿಟ್ಟುಕೊಂಡು ಆಲಿಸಿದ! ಆಶ್ಚರ್ಯ
ವಾಯಿತು! ಲೆನೆಕನ ಪಾಲಿಗೆ ಅದು ಯುರೇಕಾ… ಕ್ಷಣವಾಯಿತು!

ಒಂದು ವೇಳೆ ಲೆನೆಕ್ ತನ್ನ ಕಿವಿಯನ್ನು ನೇರವಾಗಿ ಆ ಹೆಣ್ಣುಮಗಳ ಎದೆಯ ಮೇಲೆ ಆಲಿಸಿದ್ದರೆ, ಯಾವ ರೀತಿಯಲ್ಲಿ ಕೇಳಬಹುದಾಗಿತ್ತೋ ಅದಕ್ಕಿಂತಲೂ ಸೊಗಸಾಗಿ, ಸ್ಪಷ್ಟವಾಗಿ, ನಿಖರವಾಗಿ ಹಾಗೂ ಜೋರಾಗಿ ಆಕೆಯ ಹೃದಯ ಮಿಡಿತವು ಕೇಳಿಬರುತಿತ್ತು. ಲೆನಕನ ಸಂತೋಷಕ್ಕೆ ಪಾರವೇ ಇರಲಿಲ್ಲ! ಲೆನೆಕ್ ಮತ್ತೇ ಆಕೆಯ ಎದೆಯನ್ನು ಆಲಿಸಿದ. ಹೃದಯ ಮಿಡಿತದೊಡನೆ, ಆಕೆಯ ಶ್ವಾಸಕೋಶಗಳಲ್ಲಿ ಚಲಿಸುತ್ತಿರುವ ಗಾಳಿಯ ಅಲೆಗಳ ಅನುಭವವೂ ಅವನಿಗಾಯಿತು.
ಈ ಕ್ಷಣದಲ್ಲಿ ತಾನು ಗಮನಿಸುತ್ತಿರುವ ಈ ವಿದ್ಯಮಾನ, ಮುಂದೆ ಜಾಗತಿಕ ಸಂಚಲನವನ್ನು ಉಂಟು ಮಾಡುತ್ತದೆ ಎಂದು ಲೆನೆಕನಿಗೆ ಸ್ಪಷ್ಟವಾಯಿತು. ಈ ಬಗ್ಗೆ ಗಂಭೀರವಾಗಿ ಅಧ್ಯಯನವನ್ನು ಮಾಡಬೇಕೆಂದು ನಿರ್ಧರಿಸಿದ. ಅದು ವರೆಗೂ ಯೂರೋಪಿನ ವೈದ್ಯರು ಪ್ರತ್ಯಕ್ಷ ಆಲಿಸುವಿಕೆಯ ಬಗ್ಗೆ ಮಾತ್ರ ತಿಳಿದಿದ್ದರು. ಈಗ ಮೊದಲ ಬಾರಿಗೆ ಅವರು ಪರೋಕ್ಷ ಆಲಿಸುವಿಕೆಯ (ಮೀಡಿಯಟ್ ಆಸ್ಕಲ್ಟೇಶನ್) ಬಗ್ಗೆ ತಿಳಿಯಲಾರಂಭಿಸಿದರು.

ಲೆನೆಕನಿಗೆ ಸಂಗೀತದಲ್ಲಿ ಆಸಕ್ತಿಯಿತ್ತು. ಅವನು ಕೊಳಲನ್ನು ನುಡಿಸುತ್ತಿದ್ದ. ಅವನು ತನಗೆ ಬೇಕಾದ ಕೊಳಲನ್ನು ತಾನೇ ತಯಾರಿಸಿಕೊಳ್ಳುತ್ತಿದ್ದ. ಹಾಗಾಗಿ ಎದೆಯ ಶಬ್ದಗಳನ್ನು ಆಲಿಸಲು, ಕಾಗದದ ಸುರುಳಿಯ ಬದಲು, ಒಂದು ವಿಶೇಷ ಕೊಳವೆಯನ್ನು ತಾನೇ ಏಕೆ ತಯಾರಿಸಬಾರದು ಎಂದು ಯೋಚಿಸಿದ. ಮೂರು ವರ್ಷಗಳ ಕಾಲ ಸೂಕ್ತ ಎದೆ ಕೊಳವೆ ಯನ್ನು ರೂಪಿಸಲು ನಿರಂತರ ಪ್ರಯತ್ನವನ್ನು ನಡೆಸಿದ. ಬೇರೆ ಬೇರೆ ಮಾಧ್ಯಮವನ್ನು (ಮರ, ಬಿದಿರು, ಲೋಹ ಇತ್ಯಾದಿ)
ಬಳಸಿದ. ಶಬ್ದಗಳನ್ನು ಸಂಗ್ರಹಿಸುವುದಕ್ಕೆ, ಶಬ್ದಗಳನ್ನು ರವಾನಿ ಸುವುದಕ್ಕೆ ಹಾಗೂ ಶಬ್ದಗಳನ್ನು ಆಲಿಸುವುದಕ್ಕೆ ಸೂಕ್ತವಾದ ವಿವಿಧ ಮಾದರಿಗಳನ್ನು ರೂಪಿಸಿದ. ಈ ಮಾದರಿಗಳನ್ನು ಬಳಸಿಕೊಂಡು ರೋಗಿಗಳ ಎದೆಯ ಶಬ್ದಗಳನ್ನು ಆಲಿಸಲಾರಂಭಿಸಿದ. ಅದರಲ್ಲೂ ನ್ಯುಮೋನಿಯ ಸೋಂಕು ಪೀಡಿತರ ಎದೆಯ ಶಬ್ದಗಳನ್ನು ಸೂಕ್ಷ್ಮವಾಗಿ ಆಲಿಸಿ, ಅವರ ರೋಗ ತೀವ್ರತೆ ಹಾಗೂ ರೋಗ ಪ್ರಗತಿಯನ್ನು ತಿಳಿಯುವ ಪ್ರಯತ್ನ ವನ್ನು ಮಾಡಿದ.

ಕೊನೆಗೆ ೩.೫ ಸೆಂಮೀ ಅಗಲ ಹಾಗೂ ೨೫ ಸೆಂಮೀ ಉದ್ದದ ಮರದ ಕೊಳವೆಯನ್ನು ಅಂತಿಮವಾಗಿ ರೂಪಿಸಿದ. ಇದರಲ್ಲಿ ಮೂರು ಬಿಡಿಭಾಗಗಳಿದ್ದವು. ಶಬ್ದ
ಸಂಗ್ರಾಹಕ, ಶಬ್ದ ವಾಹಕ ಹಾಗೂ ಶಬ್ದಗ್ರಹಣ ಭಾಗ. ಇವನ್ನು ಸುಲುಭವಾಗಿ ಜೋಡಿಸಬಹುದಾಗಿತ್ತು. ಎಲ್ಲಿಗೆ ಬೇಕೆಂದರೆ ಅಲ್ಲಿಗೆ ಕೊಂಡೊಯ್ಯಬಹುದಾಗಿತ್ತು. ಈ ಮರದ ಕೊಳವೆಯೇ ಆಧುನಿಕ ಸ್ಟೆಥೋಸ್ಕೋಪಿನ ಮೂಲಮಾದರಿ ಯಾಯಿತು. ಲೆನೆಕ್ ತನ್ನ ಮೂಲ ಸ್ಟೆಥೋಸ್ಕೋಪಿನ ಸಹಾಯದಿಂದ, ವಿವಿಧ ರೋಗಿಗಳ ಹೃದಯ ಮತ್ತು ಎದೆಗೂಡಿನ ಶ್ವಾಸ ಚಲನೆಯ ಶಬ್ದಗಳ ಸ್ವರೂಪವನ್ನು ಆಲಿಸಿ ಗುರುತಿಸಿಕೊಂಡ.

ಇವುಗಳನ್ನು ಅಧ್ಯಯನ ಮಾಡಿ ರೋಗನಿದಾನವನ್ನು (ಡಯಾ ಗ್ನೋಸಿಸ್) ಮಾಡಿದ. ತನ್ನ ರೋಗನಿದಾನದ ನಿಖರತೆ ಯನ್ನು ತಿಳಿಯಲು ರೋಗಿಯ ರೋಗಪ್ರಗತಿಯನ್ನು ನಿರಂತರವಾಗಿ ಅಧ್ಯಯನವನ್ನು ಮಾಡಲಾರಂಬಿಸಿದ. ಪ್ರತಿ ಯೊಂದು ಸೂಕ್ಷ್ಮ ವಿವರಗಳನ್ನು ಗುರುತು ಹಾಕಿಕೊಳ್ಳುತ್ತಿದ್ದ. ಅಕಸ್ಮಾತ್
ರೋಗಿಯೇನಾದರೂ ಮರಣಿಸಿದರೆ, ಆ ರೋಗಿಯ ಶವವಿಚ್ಛೇದನವನ್ನು ಮಾಡಿಸುತ್ತಿದ್ದ. ತನ್ನ ರೋಗ ನಿದಾನವು ಎಷ್ಟರ ಮಟ್ಟಿಗೆ ನಿಖರವಾಗಿರುತ್ತದೆ ಎನ್ನುವುದನ್ನು ಖಚಿತ ಪಡಿಸಿಕೊಳ್ಳುತ್ತಿದ್ದ. ಹೀಗೆ ಪರೋಕ್ಷವಾಗಿ ರೋಗಪ್ರಗತಿ ಯನ್ನು ಕೇವಲ ಆಲಿಸುವುದರ ಮೂಲಕ ತಿಳಿಯಬಹುದೆಂದು ತೀರ್ಮಾನಕ್ಕೆ ಬಂದ. ತನ್ನ ಸತತ ಅಧ್ಯಯನದ ನಂತರ, ಒಂದು ಮಹಾ ಪ್ರಬಂಧವನ್ನು ಸಿದ್ಧಪಡಿಸಿದ.

ಒಬ್ಬ ಆರೋಗ್ಯ ವಂತನ ಎದೆಯಲ್ಲಿ ಯಾವ ರೀತಿಯ ಹೃದಯದ ಶಬ್ದಗಳು ಹಾಗೂ ಶ್ವಾಸಕೋಶದ ಶಬ್ದಗಳು ಕೇಳಿಬರುತ್ತವೆ ಎನ್ನುವುದನ್ನು ವಿವರಿಸಿದ. ವಿವಿಧ ಅನಾರೋಗ್ಯಗಳಲ್ಲಿ ಈ ಶಬ್ದಗಳು ಹೇಗೆ ತಮ್ಮ ಸ್ವರೂಪವನ್ನು ಬದಲಿಸುತ್ತವೆ ಎನ್ನುವುದನ್ನೂ ವಿವರಿಸಿದ. ಇದಕ್ಕಾಗಿ ಆತ ಹೊಸ ಹೊಸ ಶಬ್ದಗಳನ್ನು ಸೃಜಿಸಬೇಕಾಯಿತು. ಹಾಗಾಗಿ ಅನೇಕ ಹೊಸ ಶಬ್ದಗಳು ವೈದ್ಯಕೀಯ ವಿಜ್ಞಾನದಲ್ಲಿ ಸೇರಿಕೊಂಡವು. ರೇಲ್ಸ್, ರಾಂಕೈ, ಕ್ರೆಪಿಟನ್ಸ್, ಇಗೋ-ನಿ ಇತ್ಯಾದಿ. ಇವೆಲ್ಲವೂ ರೋಗಗ್ರಸ್ತ ಶ್ವಾಸಕೋಶಗಳು ಹೊರಡಿಸುವ ವಿವಿಧ ಸ್ವರೂಪದ ಶಬ್ದಗಳು. ಇವುಗಳನ್ನು ಆಲಿಸಿಯೇ ತಿಳಿಯಬೇಕು.

ತನ್ನ ಪ್ರಬಂಧವನ್ನು ಫ್ರೆಂಚ್ ಅಕಾಡೆಮಿ ಆಫ್ ಸೈನ್ಸಸ್ ಸಂಸ್ಥೆಗೆ ಸಲ್ಲಿಸಿದ. ನಂತರ ಆ ಪ್ರಬಂಧವನ್ನು ಬಳಸಿಕೊಂಡು ೧೮೧೯ರಲ್ಲಿ ಪರೋಕ್ಷ ಆಲಿಸುವಿಕೆಯ ಬಗ್ಗೆ (ಆನ್ ಮೀಡಿಯೇಟ್ ಆಸ್ಕಲ್ಟೇಶನ್) ಎನ್ನುವ ಗ್ರಂಥವನ್ನು ಪ್ರಕಟಿಸಿದ. ಈ ಗ್ರಂಥವು ಅಲ್ಪಕಾಲದಲ್ಲಿ ಜನಪ್ರಿಯ ವಾಯಿತು. ಹಲವು ಭಾಷೆಗಳಿಗೆ ಅನುವಾದವಾಯಿತು. ೧೮೨೦ರ ವೇಳೆಗೆ ಈ ಗ್ರಂಥವು ಫ್ರಾನ್ಸ್, ಬ್ರಿಟನ್, ಇಟಲಿ, ಜರ್ಮನಿ ದೇಶಗಳಲ್ಲಿ ಎಲ್ಲೆಡೆ ದೊರೆಯಲಾರಂಭಿಸಿತು. ನ್ಯೂ ಇಂಗ್ಲಂಡ್ ಜರ್ನಲ್ ಆಫ್ ಮೆಡಿಸಿನ್ ೧೮೨೧ರಲ್ಲಿ ಲೆನೆಕನ ಸ್ಟೆಥೋಸ್ಕೋಪಿನ ಮಹತ್ವದ ಬಗ್ಗೆ ಲೇಖನವನ್ನು ಪ್ರಕಟಿಸಿತು. ಆದರೆ ಸ್ಟೆಥೋಸ್ಕೋಪ್ ಸರ್ವಮಾನ್ಯವಾಗಲಿಲ್ಲ ಎನ್ನುವುದು ಗಮನೀಯ ವಿಚಾರ. ಅಮೆರಿಕನ್ ಹಾರ್ಟ್ ಅಸೋಸಿಯೇಶನ್ ಸ್ಥಾಪಕ ಎಲ್.ಎ.ಕಾನರ್ (೧೮೬೬-೧೯೫೦) ದೇವರು ಸೊಗಸಾದ ಕಿವಿಯನ್ನು ಕೊಟ್ಟಿರುವಾಗ, ಆ ಕಿವಿ ಯನ್ನು ನೇರವಾಗಿ ಬಳಸದೆ, ಹೇಗೆ ಪರೋಕ್ಷವಾಗಿ ಪರೀಕ್ಷಿಸುವುದು ಅನಗತ್ಯ ಹಾಗೂ ಅವೈಜ್ಞಾನಿಕ ಎಂದ.

ಜೊತೆಗೆ ತನ್ನ ಜೊತೆಯಲ್ಲಿ ಯಾವಾಗಲೂ ಒಂದು ರೇಷ್ಮೇ ಕರವಸವನ್ನು ಇಟ್ಟುಕೊಂಡಿರುತ್ತಿದ್ದ. ಅದನ್ನು ರೋಗಿಯ ಎದೆಯ ಮೇಲೆ ಹಾಕಿ, ಅದರ ಮೇಲೆ ತನ್ನ ಕಿವಿಯನ್ನಿಟ್ಟು ಎದೆ ಪರೀಕ್ಷೆಯನ್ನು ಮಾಡುವುದನ್ನು ಮುಂದುವರೆಸಿದ. ಆದರೆ ಕಾಲಕ್ರಮೇಣ ಎಲ್ಲ ಪದ್ಧತಿಗಳ ವೈದ್ಯರು ಸ್ಟೆಥೋಸ್ಕೋಪನ್ನು ಉಪಯೋಗಿ
ಸಲಾರಂಭಿಸಿದರು. ಇಂದಿಗೂ ಸರ್ವಸಾಮಾನ್ಯವಾಗಿ ಉಪಯೋಗಿಸುತ್ತಿರುವರು. ಲೆನೆಕ್ ಸ್ಟೆಥೋಸ್ಕೋಪ್ ರಚಿಸುವುದರ ಜೊತೆಗೆ ವೈದ್ಯಕೀಯ ಕ್ಷೇತ್ರಕ್ಕೆ ಮತ್ತಷ್ಟು ಸೇವೆಯನ್ನು ಸಲ್ಲಿಸಿದ. ಲೆನೆಕ್ಸ್ ಸಿರಾಸಿಸ್ ಎಂಬ ಯಕೃತ್ ನಾರುಗಟ್ಟುವಿಕೆಯ ರೋಗದ ಬಗ್ಗೆ ವಿವರಿಸಿದ. ಲೆನೆಕ್ಸ್ ಥ್ರಾಂಬಸ್ ಎನ್ನುವುದು ಪ್ರಸವಾವಧಿಯಲ್ಲಿ ತಾಯಿಯ ಹೃದಯದಲ್ಲಿ ರೂಪುಗೊಳ್ಳುವ ರಕ್ತಗರಣೆಯಾಗಿತ್ತು.

ಅದನ್ನು ಪ್ರಸ್ತಾಪಿಸಿದ. ಲೆನೆಕ್ಸ್ ಪೆರ್ಲ್ಸ್ ಎನ್ನುವುದು ಅಸ್ತಮ ರೋಗಿಗಳಲ್ಲಿ ಕಂಡುಬರುವ ಕ-. ಅದರ ಬಗ್ಗೆ ಮಾಹಿತಿಯನ್ನು ನೀಡಿದ. ಲೆನೆಕ್ ವಿದ್ಯಾರ್ಥಿಯಾಗಿರು
ವಾಗಲೆ, ಅಂದರೆ ೧೮೦೪ರಲ್ಲಿ ಮೆಲನೋಮ ಬಗ್ಗೆ ಭಾಷಣ ವನ್ನು ನೀಡಿದ. ಮೆಲನೋಮ ಎನ್ನುವುದು ಚರ್ಮದ ಕ್ಯಾನ್ಸರ್. ಕ್ಯಾನ್ಸರ್ ಕೋಶಗಳು ಚರ್ಮದಿಂದ ಶ್ವಾಸಕೋಶ ಗಳಿಗೆ ಗುಳೇ ಹೋಗುವ (ಮೆಟಸ್ಟಾಸಿಸ್) ಬಗೆಯನ್ನು ವಿವರಿಸಿದ. ಅಂದಿನ ದಿನಗಳಲ್ಲಿ ಕ್ಷಯವು ಮಾರಕ ರೋಗ ವಾಗಿತ್ತು. ಸ್ಟೆಥೋಸ್ಕೋಪಿನ ಮೂಲಕ ಆಲಿಸಿ ನ್ಯುಮೋನಿಯ, ಬ್ರಾಂಕಿಯೆಕ್ಟಾಸಿಸ್, ಪ್ಲ್ಯೂರಸಿ, ಎಂಫೀಸೀಮ, ನ್ಯೂಮೋ ಥೊರಾಕ್ಸ್, ಥೈಸಿಸ್ ಮುಂತಾದ ಶ್ವಾಸಕೋಶ ರೋಗಗಳ ನಿದಾನ ಮಾಡುವುದನ್ನು ತಿಳಿಸಿದ.

ಹೃದಯದಲ್ಲಿ ಮೂಡುವ ಅಸಹಜ ಶಬ್ದಗಳ ಬಗ್ಗೆ ಅಧ್ಯಯನ ಮಾಡಿದರೂ ಸಹ, ಅವನ ಹೆಚ್ಚಿನ ಗಮನವು ಶ್ವಾಸಕೋಶಗಳ ಕಡೆಗೆ ಕೇಂದ್ರೀಕೃತವಾಗಿತ್ತು.
೧೮೧೬ರಲ್ಲಿ ಲೆನೆಕ್ ರೂಪಿಸಿದ ಕೊಳವೆ ಸ್ಟೆಥೋಸ್ಕೋಪನ್ನು ೧೮೫೧ರಲ್ಲಿ ಎನ್.ಬಿ.ಮಾರ್ಶ್ ಸುಧಾರಿಸಿದ. ಅವನು ಎರಡು ಕೊಳವೆಗಳಿರುವ ಸ್ಟೆಥೋ ಸ್ಕೋಪನ್ನು ರೂಪಿಸಿದ. ೧೯೬೦ರ ದಶಕದಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದ ಡೇವಿಡ್ ಲಿಟ್ಮನ್, ಖ್ಯಾತ ಹೃದ್ರೋಗ ತಜ್ಞನು, ತನ್ನದೇ ಆದ ಸ್ಟೆಥೋ ಸ್ಕೋಪನ್ನು ರೂಪಿಸಿ, ಅದನ್ನು ತಯಾರಿಸುವ ಹಕ್ಕನ್ನು ೩ಎಂ ಸಂಸ್ಥೆಗೆ ನೀಡಿದ. ಆತ ತಯಾರಿಸುವ ಸ್ಟೆಥೋಸ್ಕೋಪ್ ಇಂದಿಗೂ ಬಳಕೆಯಲ್ಲಿದೆ. ೧೯೯೯ರಲ್ಲಿ ಟೊರಾಂಟೊ ವಿಶ್ವ ವಿದ್ಯಾಲಯದ ಡಾ.ರಿಚರ್ಡ್ ಡೆಸ್ಲಾರಿಯಸ್, ಹೃದಯ ಮತ್ತು ಶ್ವಾಸಕೋಶಗಳ ಶಬ್ದಗಳನ್ನು ಮುದ್ರಿಸುವ, ದಾಖಲಿಸುವ ಹಾಗೂ ಬೇಕೆಂದಾಗ ಅದನ್ನು ಕೇಳಿಸುವ ಹೊಸ ನಮೂನೆಯ ಡಿಜಿಟಲ್ ಸ್ಟೆಥೋಸ್ಕೋಪನ್ನು ರೂಪಿಸಿದ.

ಕೋವಿಡ್ ಕಾಲದಲ್ಲಿ ೩-ಡಿ ಮುದ್ರಿತ ಸ್ಟೆಥೋಸ್ಕೋಪುಗಳು ಬಳಕೆಗೆ ಬಂದವು. ಈಗ ನಾನಾ ನಮೂನೆಯ ಡಿಜಿಟಲ್ ಸ್ಟೆಥೋಸ್ಕೋಪುಗಳು ಮಾರುಕಟ್ಟೆಯಲ್ಲಿ ದೊರೆಯುತ್ತಿವೆ. ಲೆನೆಕ್ ಸ್ಟೆಥೋಸ್ಕೋಪನ್ನು ಬಳಸಿ ಶ್ವಾಸಕೋಶಗಳನ್ನು ಮತ್ತು ಹೃದ್ರೋಗಗಳನ್ನು ಪತ್ತೆ ಹಚ್ಚಿದ. ಈಗ ಇದೇ ಸ್ಟೆಥೋಸ್ಕೋಪನ್ನು ಬಳಸಿ ಇತರ ಅನಾರೋಗ್ಯಗಳ ಸ್ಥಿತಿ-ಗತಿ ಯನ್ನು ತಿಳಿಯಲು ಸಾಧ್ಯವಾಗಿದೆ. ಉದರದಲ್ಲಿ ಕರುಳಿನ ಚಲನೆಯ ಶಬ್ದಗಳನ್ನು ಆಲಿಸಬಹುದು. ಗರ್ಭಾಶಯದಲ್ಲಿ ಬೆಳೆಯುತ್ತಿರುವ ಶಿಶುವಿನ ಆರೋಗ್ಯವನ್ನೂ ತಿಳಿಯಬಹುದು. ರಕ್ತದೊತ್ತಡವನ್ನು ಅಳೆಯಬಹುದು. ಯಕೃತ್ ಅತಿವೃದ್ಧಿ ಯನ್ನು ಪತ್ತೆಹಚ್ಚಬಹುದು. ರಕ್ತನಾಳಗಳಲ್ಲಿ ರಕ್ತಚಲನೆಯ ಮೊರೆತವನ್ನು ಆಲಿಸಬಹುದು. ಹೀಗೆ ಸ್ಟೆಥೋಸ್ಕೋಪ್ ಬಹು-ಉಪಯೋಗಿ ವೈದ್ಯಕೀಯ ಸಾಧನವಾಗಿ ಆಧುನಿಕ ವೈದ್ಯಕೀಯದ ಅವಿಭಾಜ್ಯ ಅಂಗವಾಗಿ ಇಂದಿಗೂ ಬಳಕೆಯಲ್ಲಿದೆ.