ಇದೇ ಅಂತರಂಗ ಸುದ್ದಿ
ವಿಶ್ವೇಶ್ವರ ಭಟ್
ಪಿಕೋ ಇಯೆರ್ ನನಗೆ ಇಷ್ಟವಾದ ಲೇಖಕ. ಅದರಲ್ಲೂ ಅವರ ಪ್ರವಾಸ ಪುಸ್ತಕಗಳನ್ನು ಬಹಳ ಇಷ್ಟಪಡುತ್ತೇನೆ. ಆರು ದೇಶಗಳ ಪ್ರವಾಸವನ್ನು ಆಧರಿಸಿದ ಅವರ Falling Off The Map ಪುಸ್ತಕ ಓದಿ ಬೆರಗಾಗಿದ್ದೆ. ಆ ಆರು ದೇಶಗಳ ಪೈಕಿ ನಾನೂ ಎರಡು ದೇಶಗಳಿಗೆ ಭೇಟಿ ನೀಡಿದ್ದೆ. ಅವರ ಒಳನೋಟ, ದೇಶವನ್ನು ಸೂಕ್ಷ್ಮವಾಗಿ ಗಮನಿಸುವ ಗ್ರಹಿಕೆ ಬಹಳ ಇಷ್ಟವಾಗಿತ್ತು. ಅವರಿಗೆ ದಕ್ಕಿದ ಸಂಗತಿಗಳು ನನ್ನ ಗ್ರಹಿಕೆಗೂ ಬಂದಿರಲಿಲ್ಲ. ಅಂದಿನಿಂದ ನಾನು ಅವರ ಬರಹದ ಜಾಡನ್ನು ಅನುಸರಿಸುತ್ತಾ ಬಂದಿದ್ದೇನೆ.
ನಾನು ಜಪಾನಿಗೆ ಹೋಗುವ ಮುನ್ನ ಅವರು ಆ ದೇಶದ ಬಗ್ಗೆ ಬರೆದ Autumn Light ಪುಸ್ತಕವನ್ನು ಓದಿದ್ದೆ. ಹಾಗೆ ಅವರು ಜಪಾನಿನ ಬಗ್ಗೆ ಬರೆದ ಪುಟ್ಟ ಪುಟ್ಟ ಟಿಪ್ಪಣಿಗಳನ್ನು ಓದಿದ್ದೆ. ಜಪಾನಿನಲ್ಲಿ ಓಡಾಡುವಾಗ ಪಿಕೋ ಬರೆದ ಅನೇಕ ಸಾಲುಗಳು ನೆನಪಾಗುತ್ತಿದ್ದವು. ಅವರ ಗ್ರಹಿಕೆ ವಾಸ್ತವಕ್ಕೆ ತೀರಾ ಹತ್ತಿರ ಎಂದೆನಿಸುತ್ತಿತ್ತು. ಅಂದ ಹಾಗೆ, ಆಕ್ಸ್ ಫರ್ಡಿನಲ್ಲಿ ಓದಿದ, ದಲೈ ಲಾಮಾ ಜತೆಗೆ ವರ್ಷಾನುಗಟ್ಟಲೆ ಸುತ್ತಿದ ಪಿಕೋ ಇಯೆರ್ ಕಳೆದ ೩೭ ವರ್ಷಗಳಿಂದ ಜಪಾನಿನ ಕ್ಯೋಟೋ ನಗರದ ಸನಿಹದ ಒಂದು ಪುಟ್ಟ ಹಳ್ಳಿಯಲ್ಲಿ ತಮ್ಮ ಜಪಾನಿ ಪತ್ನಿಯ (ಹೀರೋಕೋ) ಜತೆ ವಾಸಿಸುತ್ತಿದ್ದಾರೆ.
ಮೂರು ವರ್ಷದ ಹುಡುಗಿ ಜಪಾನಿ ಭಾಷೆ ಮಾತಾಡುವಂತೆ ಪಿಕೋ ಇಯೆರ್ ಆ ಭಾಷೆಯನ್ನೂ ಮಾತಾಡುತ್ತಾರೆ. ಅವರು ವಾಸವಿರುವ ಆ ಹಳ್ಳಿಯಲ್ಲಿ ಯಾರೂ ಇಂಗ್ಲಿಷ್ ಮಾತಾಡುವುದಿಲ್ಲ. ಹೀಗಾಗಿ ಅವರಿಗೆ ಇಂಗ್ಲಿಷ್ ಮಾತಾಡುವ ಪ್ರಸಂಗವೇ ಉದ್ಭವವಾಗಿಲ್ಲ. ಪತ್ನಿ ಮತ್ತು ಮಕ್ಕಳು
ಸಹ ಜಪಾನಿ ಭಾಷೆಯಲ್ಲಿಯೇ ಮಾತಾಡುತ್ತಾರೆ. ಆದರೂ ಅವರಿಗೆ ಭಾಷೆಯ ಸಮಸ್ಯೆ ಎದುರಾಗಿಲ್ಲ.
‘ಜಪಾನಿನಲ್ಲಿ ಭಾಷೆಯ ಹಂಗಿಲ್ಲದೇ, ದರ್ದು ಇಲ್ಲದೇ ಅನೇಕ ಸಂಗತಿಗಳು ಜರುಗುತ್ತವೆ’ ಎನ್ನುವ ಪಿಕೋ, ಜಪಾನಿನ ಬಗ್ಗೆ ಮಾರ್ಮಿಕವಾಗಿ ಇನ್ನೊಂದು ಮಾತನ್ನು ಹೇಳಿದ್ದಾರೆ- ‘ನಾನು ಜಪಾನಿಗೆ ಬಂದ ಆರಂಭದಲ್ಲಿ ಆ ದೇಶದ ಬಗೆಗಿನ ಎಲ್ಲ ಸಂಗತಿಗಳು ಬಹು ಬೇಗ ಅರ್ಥವಾಗು ತ್ತಿತ್ತು. ನಾನೂ ಹೆಚ್ಚು ತಿಳಿದುಕೊಂಡಿದ್ದೇನೆ ಅಂದುಕೊಂಡಿದ್ದೆ. ಆದರೆ ಮೂರೂವರೆ ದಶಕಗಳ ಕಾಲ ಜಪಾನಿನಲ್ಲಿ ಉಳಿದ ಬಳಿಕ ನಾನು ತಿಳಿದುಕೊಂಡಿದ್ದು ಬಹಳ ಕಡಿಮೆ ಅನಿಸುತ್ತಿದೆ ಮತ್ತು ನನಗೆ ಅರ್ಥವಾಗದ ಜಪಾನ್ ಹೆಚ್ಚು ಎಂದು ಅನಿಸುತ್ತಿದೆ’.
ನಿಜ, ಜಪಾನ್ ಮೊದಲ ನೋಟಕ್ಕೆ ಬಹುಬೇಗ ಎಲ್ಲರಿಗೂ ಅರ್ಥವಾಗುತ್ತದೆ. ಆದರೆ ಕ್ರಮೇಣ ಅಲ್ಲಿನ ಜೀವನ ಸಂಕೀರ್ಣವಾಗುತ್ತಾ ಹೋಗುತ್ತದೆ. ಕ್ಯೋಟೋದ ದೇವಾಲಯಗಳಲ್ಲಿ ಬರೆದಂತೆ The opposite of a great truth is also true in Japan ಎಂಬ ಸಾಲು ನಿಜಜೀವನದಲ್ಲಿ ಅನುಭವಕ್ಕೆ ಬರುತ್ತಾ ಹೋಗುತ್ತದೆ. ಜಪಾನ್ ಬುದ್ಧಿವಂತರ ದೇಶವಿರಬಹುದು. ಆದರೆ ಅವರೂ ದಡ್ಡತನ ಪ್ರದರ್ಶಿಸುತ್ತಾರೆ ಎಂಬುದನ್ನು ಮರೆಯಬಾರದು. ಅದಕ್ಕಾಗಿ ಜಪಾನಿ ಭಾಷೆಯಲ್ಲಿ ಒಂದು ಮಾತಿದೆ- ‘ಸರು ಮೊ ಕಿ ಕರಾ ಒಚಿರು’. ಅದರ ಅರ್ಥ- ‘ಮಂಗಗಳು ಕೂಡ ಮರದಿಂದ ಬೀಳುತ್ತವೆ’.
‘37 ವರ್ಷಗಳ ಕಾಲ ಜಪಾನಿನ ಜೀವನ ಏನನ್ನು ಕಲಿಸಿದೆ?’ ಎಂದು ಪಿಕೋ ಇಯೆರ್‌ರನ್ನು ಕೇಳಿದರೆ, ಅವರು ಹೇಳುವುದಿಷ್ಟೇ- ‘ನಾನು I think ಎಂದು ಹೇಳುವಾಗಲೆಲ್ಲ I wonder ಎಂದು ಹೇಳುತ್ತೇನೆ. ನನ್ನ ಯೋಚನೆಯ ಬಹುಭಾಗ wonder ನಿಂದಲೇ ಕೂಡಿರುತ್ತದೆ. ಭಾರತೀಯ ರಿಗೂ, ಜಪಾನಿಯರಿಗೂ ಏನು ವ್ಯತ್ಯಾಸ ಎಂಬ ಪ್ರಶ್ನೆಗೆ ಪಿಕೋ ನೀಡುವ ಉತ್ತರ- ‘ಭಾರತೀಯರಿಗೆ ಹೂಗುಚ್ಛ ಕೊಟ್ಟರೆ, ಅದನ್ನು ನೀಡಿದ ವ್ಯಕ್ತಿಯ ಮುಖ ನೋಡುತ್ತಾರೆ, ಆದರೆ ಜಪಾನಿಯರಿಗೆ ಅದನ್ನು ಕೊಟ್ಟರೆ, ಎರಡೂ ಕೈಗಳಿಂದ ಸ್ವೀಕರಿಸಿ, ಹೂಗಳನ್ನು ನೋಡುತ್ತಾರೆ’.
ಯಾವುದೇ ದೇಶ ಮತ್ತು ಅಲ್ಲಿನ ಜನರನ್ನು ಅರ್ಥಮಾಡಿಕೊಳ್ಳಲು ಅಲ್ಲಿನ ಗಾದೆಮಾತು ಮತ್ತು ನುಡಿಗಟ್ಟುಗಳನ್ನು ಓದಬೇಕಂತೆ. ಜಪಾನಿನಲ್ಲಿ ಒಂದು ಗಾದೆಯಿದೆ- ‘ಕಲ್ಲು ಬಂಡೆಯ ಮೇಲೆ ಕುಳಿತುಕೊಳ್ಳುವುದು ಸಹ ಹಿತವೆನಿಸುತ್ತದೆ, ಆದರೆ ಅದರ ಮೇಲೆ ಮೂರು ವರ್ಷ ಕುಳಿತುಕೊಳ್ಳ ಬೇಕಷ್ಟೆ’. ಪಿಕೋ ಇಯೆರ್ ಆಗಾಗ ‘ಟೈಮ’ ಮ್ಯಾಗಜಿನ್‌ಗೂ ಬರೆಯುತ್ತಾರೆ. 1999ರಲ್ಲಿ ಆ ಪತ್ರಿಕೆ ಅವರಿಗೆ ಒಂದು ಅಸೈನ್ ಮೆಂಟ್ ನೀಡಿತ್ತು. ಕರೋಕೆ ಕಂಡುಹಿಡಿದವ ಎನ್ನಲಾದ ವ್ಯಕ್ತಿಯನ್ನು ‘ಈ ಶತಮಾನದ ಪ್ರಭಾವಿ ನೂರು ಏಷ್ಯನ್ ಸಾಧಕರು’ ಪಟ್ಟಿಯಲ್ಲಿ ಸೇರಿಸಿತ್ತು. ಆ ವ್ಯಕ್ತಿಯನ್ನು ಸಂದರ್ಶಸುವಂತೆ ಪತ್ರಿಕೆ ಪಿಕೋ ಇಯೆರ್‌ರಿಗೆ ಸೂಚಿಸಿತ್ತು. ಆ ವ್ಯಕ್ತಿಯನ್ನು ಪಿಕೋ ಭೇಟಿಯಾದಾಗ, ಆತ ತನ್ನ ಬಿಜಿನೆಸ್ ಕಾರ್ಡನ್ನು ನೀಡುತ್ತಾ- ‘ನೀವು ಯಾವ ವಿಷಯದ ಬಗ್ಗೆ ಚರ್ಚಿಸಲು ಬಂದಿದ್ದೀರೋ, ಅದರ ಬಗ್ಗೆ ನಂತರ ಮಾತಾಡೋಣ. ಸದ್ಯ ನಾನು ನಾಯಿಗಳಿಗೆ ತರಬೇತಿ ಕೊಡುತ್ತಿದ್ದೇನೆ. ಈ ವಿಷಯ ನಿಮಗೆ ಗೊತ್ತಿಲ್ಲದಿರಬಹುದು. ನೀವು ಆ ವಿಷಯದ ಬಗ್ಗೆಯೂ ಕೇಳಬಹುದು’ ಎಂದು ಹೇಳಿದನಂತೆ.
ಇದು ಟಿಪಿಕಲ್ ಜಪಾನಿಯರ ಮೆಂಟಾಲಿಟಿ. ಅವರು ತಮ್ಮ ಸಾಧನೆಯ ವೈಭವದಲ್ಲಿಯೇ ಕಳೆದುಹೋಗುವುದಿಲ್ಲ. ನಿನ್ನೆಯ ಹೆಮ್ಮೆಗಿಂತ ಇಂದಿನ ಹೊಣೆಗಾರಿಕೆ ಅವರನ್ನು ಹೆಚ್ಚು ಕಾಡುತ್ತದೆ. ಅವರು ಯಾವತ್ತೂ ತಮ್ಮ ಸದ್ಯದ ಕೆಲಸ, ಸಾಧನೆಗೆ ಒತ್ತು ನೀಡುತ್ತಾರೆ. ಆತನಿಗೆ ತಾನು ಕಂಡು ಹಿಡಿದ ಕರೋಕೆ ಸಂಗೀತದ ಬಗ್ಗೆ ಮಾತಾಡುವುದರ ಜತೆಗೆ ಸದ್ಯತಾನು ಮಾಡುತ್ತಿರುವ ಶ್ವಾನ ತರಬೇತಿಯ ಬಗ್ಗೆಯೂ ಹೇಳುವ ಜರೂರು ಇತ್ತು. ಪಿಕೋ ಇಯೆರ್ ತಮ್ಮ ಪತ್ನಿ ಹೇಳಿದ ಒಂದು ಪ್ರಸಂಗವನ್ನು ಒಂದೆಡೆ ಪ್ರಸ್ತಾಪಿಸಿದ್ದಾರೆ: ‘ನನ್ನ ಜಪಾನಿ ಸ್ನೇಹಿತೆ ಪ್ರತಿದಿನ ಮೇಕಪ್ ಮಾಡಿಕೊಳ್ಳುವುದಕ್ಕೆ ಎರಡು ತಾಸು ತೆಗೆದುಕೊಳ್ಳುತ್ತಾಳೆ’ ಎಂದು ಪಿಕೋ ಪತ್ನಿ ಒಂದು ದಿನ ಹೇಳಿದರಂತೆ.
ಅದಕ್ಕೆ ಪಿಕೋ, ‘ಎಲ್ಲರೂ ತನ್ನನ್ನು ನೋಡಲಿ ಎಂದು ಅವಳು ಅಷ್ಟು ಜೋರಾಗಿ ಮೇಕಪ್ ಮಾಡಿಕೊಳ್ಳುತ್ತಿರಬಹುದಾ?’ ಎಂದು ಕೇಳಿದರಂತೆ. ಅದಕ್ಕೆ ಪಿಕೋ ಪತ್ನಿ ಹೇಳಿದರಂತೆ- ‘ತನ್ನನ್ನು ಯಾರೂ ನೋಡಬಾರದೆಂದು ಆಕೆ ಹಾಗೆ ಮೇಕಪ್ ಮಾಡಿಕೊಳ್ಳುತ್ತಾಳೆ’. ಪಿಕೋ ಹೇಳಿದ ಮಾತು ಮತ್ತು ಅವರ ಪುಸ್ತಕವನ್ನು ಓದಿದ ಬಳಿಕ ನನಗೆ ಅನಿಸಿದ್ದು- ‘ಜಪಾನ್ ಬಗ್ಗೆ ಯಾರಾದರೂ ಅಧಿಕಾರವಾಣಿಯಿಂದ ಮಾತಾಡಿದರೆ ಗಮನವಿಟ್ಟು ಕೇಳಬೇಕು ಮತ್ತು ಅದು ಪೂರ್ತಿ ನಿಜ ಎಂದು ನಂಬಬಾರದು!’
ರೂಲ್ಸ್ ಅಂದ್ರೆ ರೂಲ್ಸ್ !
ಜಪಾನಿಯರು ಕಟ್ಟಾ ನಿಯಮಪಾಲಕರು. ಅವರಿಗೆ ನಿಯಮ ರೂಪಿಸುವುದು ಮತ್ತು ಅದನ್ನು ಕಟ್ಟುನಿಟ್ಟಾಗಿ ಪಾಲಿಸುವುದಷ್ಟೇ ಗೊತ್ತು.
ಭಾರತೀಯರಂತೆ ನಿಯಮಗಳನ್ನು ಮುರಿಯುವುದು ಅರ್ಥಾತ್ ಉಲ್ಲಂಘಿಸುವುದು ಗೊತ್ತಿಲ್ಲ. ಯಂತ್ರಗಳು ತಮಗೆ ಹೇಳಿದಷ್ಟನ್ನೇ ಮಾಡುತ್ತವೆ.
ನಿಯಮವನ್ನು ಪಾಲಿಸುವ ವಿಷಯದಲ್ಲಿ ಜಪಾನಿಯರು ಪಕ್ಕಾ ಯಂತ್ರಗಳಂತೆ. ಈ ವಿಷಯದಲ್ಲಿ ಅವರು ಯಾವ ಕಾರಣಕ್ಕೂ ರಾಜಿ ಆಗುವುದಿಲ್ಲ. ಹಾಗಂತ ನಮ್ಮ ಜತೆಗಿದ್ದ ಭಾರತೀಯ ಮೂಲದ, ಕಳೆದ 24 ವರ್ಷಗಳಿಂದ ಜಪಾನಿನಲ್ಲಿ ನೆಲೆಸಿರುವ ಗೈಡ್ ಮೀನಾ ಹೇಳಿದಳು.
ಸಮಯವನ್ನು ಸೆಕೆಂಡುಗಳಲ್ಲಿ ಲೆಕ್ಕ ಹಾಕುವ ಮತ್ತು ಅದರಂತೆ ಜೀವಿಸುವ ಜಪಾನಿಯರು, ನಿಯಮಗಳ ವಿಷಯದಲ್ಲೂ ಅಷ್ಟೇ ಕಟ್ಟುನಿಟ್ಟು ಇದ್ದಿರಬಹುದು ಎಂಬ ಬಗ್ಗೆ ನನಗೆ ಯಾವ ಸಂದೇಹವೂ ಇರಲಿಲ್ಲ. ಒಮ್ಮೆ ತನಗಾದ ಅನುಭವವನ್ನು ಮೀನಾ ಹೇಳಿದಾಗ, ನಿಯಮಗಳನ್ನು ಪಾಲಿಸುವ ವಿಷಯದಲ್ಲಿ ಇದ್ಯಾಕೋ ಅತಿಯಾಯ್ತು ಅಂತ ಅನಿಸಿದ್ದು ಸುಳ್ಳಲ್ಲ. ಕೆಲ ವರ್ಷಗಳ ಹಿಂದೆ, ಮೀನಾ ಗುಜರಾತಿನಿಂದ ಜಪಾನಿಗೆ
ಆಗಮಿಸಿದ ತನ್ನ ತಂದೆ-ತಾಯಿಯೊಂದಿಗೆ ಟೋಕಿಯೋಕ್ಕೆ ಹೋಗಿದ್ದಳಂತೆ. ಬೆಳಗ್ಗೆ ಹತ್ತು ಗಂಟೆಯಾದರೂ ಉಪಾಹಾರ ಸೇವಿಸಿರಲಿಲ್ಲ. ಕಾಫಿ ಶಾಪ್‌ನಲ್ಲಿ ಉಪಾಹಾರ ಸೇವಿಸಲೆಂದು ಅಲ್ಲಿಗೆ ಹೋದರೆ, ‘ಬೆಳಗ್ಗೆ ಹತ್ತು ಗಂಟೆಗೆ ಶಾಪ್ ಓಪನ್ ಮಾಡಲಾಗುವುದು’ ಎಂದು ಬೋರ್ಡ್ ಹಾಕಿದ್ದರಂತೆ. ಆಗ ಹತ್ತು ಗಂಟೆ ಆಗಲು ಇನ್ನೂ ಆರು ನಿಮಿಷ ಬಾಕಿ ಇತ್ತಂತೆ. ಆದರೂ ಕಾಫಿ ಶಾಪ್ ಕೌಂಟರ್ ಸನಿಹ ಹೋದ ಮೀನಾ,
ಮೂರು ಸ್ಯಾಂಡ್‌ವಿಚ್ ಮತ್ತು ಕಾಫಿ ನೀಡುವಂತೆ ಹೇಳಿದಾಗ, ಟರ್‌ನಲ್ಲಿದ್ದಾತ, ‘ಮೇಡಂ, ನಮ್ಮ ಶಾಪ್ ಓಪನ್ ಆಗಲು ಇನ್ನೂ ಆರು ನಿಮಿಷಗಳಿವೆ. ಅಲ್ಲಿ ತನಕ ನೀವು ಕಾಯುವುದು ಅನಿವಾರ್ಯ. ನೋಡಿ, ಅಲ್ಲಿ ಬೋರ್ಡಿನಲ್ಲಿ ಹತ್ತು ಗಂಟೆಗೆ ಶಾಪ್ ಅನ್ನು ಓಪನ್ ಮಾಡಲಾ ಗುವುದು ಎಂದು ಬೋರ್ಡ್ ಹಾಕಿದ್ದೇವೆ’ ಎಂದು ಮುಲಾಜಿಲ್ಲದೇ ಹೇಳಿದನಂತೆ.
‘ಇನ್ನೂ ಆರು ನಿಮಿಷ ಕಾಯಲು ಸಾಧ್ಯವಿಲ್ಲ. ನನ್ನ ತಂದೆ- ತಾಯಿ ಹಸಿದಿದ್ದಾರೆ. ನಾವು ಮುಂದಿನ ಅಂಗಡಿಗೆ ಹೋಗುತ್ತೇವೆ. ಆಗ ನಿನಗೆ ಗಿರಾಕಿಗಳು ತಪ್ಪಿಹೋಗುತ್ತಾರೆ. ಹಾನಿಯಾಗುವುದು ನಿನಗೇ. ಅದಕ್ಕೆ ನಿನಗೆ ಏನೂ ಅನಿಸುವುದಿಲ್ಲವಾ?’ ಎಂದು ಕೇಳಿದಳಂತೆ. ‘ಗಿರಾಕಿಗಳು ತಪ್ಪಿ ಹೋಗುತ್ತಾರೆ ಎಂದು ನನಗೆ ಅನಿಸುತ್ತದೆ, ಆದರೆ ಆ ಕಾರಣಕ್ಕೆ ನಾನು ನಿಯಮವನ್ನು ಉಲ್ಲಂಘಿಸುವುದಿಲ್ಲ’ ಎಂದು ಖಡಾಖಡಿ ಆತ ಹೇಳಿದನಂತೆ. ಆತನ ನಿಯತ್ತು ಮೀನಾಗೆ ಬಹಳ ಇಷ್ಟಾವಾಯಿತಂತೆ. ಹತ್ತು ಗಂಟೆ ಆಗುವ ತನಕ ಕಾದು, ಅಲ್ಲಿಯೇ ಉಪಾಹಾರ ಸೇವಿಸಿ ಮುಂದೆ ತೆರಳಿದಳಂತೆ. ಜಪಾನಿನಲ್ಲಿ ಓಡಾಡುವಾಗ ನಿಯಮ ಪಾಲಿಸುವ ವಿಷಯ ಬಂದಾಗ, ಇಂಥ ಅನುಭವಗಳಿಗೆ
ಕೊರತೆಯಾಗುವುದಿಲ್ಲ.
ಫೋಟೋ ಕ್ಲಿಕ್ಕಿಸುವಾಗ ಎಚ್ಚರ
ನೀವು ಜಪಾನಿನಲ್ಲಿ ಮೊಬೈಲ್ ಖರೀದಿಸಲು ಬಯಸಿದರೆ, ಒಂದು ಸಂಗತಿಯನ್ನು ಜ್ಞಾಪಕದಲ್ಲಿಟ್ಟುಕೊಳ್ಳಬೇಕು. ಅಲ್ಲಿನ ಮೊಬೈಲ್‌ನಲ್ಲಿ ಫೋಟೋ ಕ್ಲಿಕ್ಕಿಸಿದರೆ, ಕೆಮರಾದಲ್ಲಿ ಫೋಟೋ ತೆಗೆಯುವಾಗ ಬರುವಷ್ಟೇ ಸದ್ದು ಬರುತ್ತದೆ. ಈ ಮಾತು ಐಫೋನ್‌ಗೂ ಅನ್ವಯ. ಮೊಬೈಲ್‌ನಲ್ಲಿ ಡಿಫಾಲ್ಟ್ ಸೆಟ್ಟಿಂಗ್ ಆ ರೀತಿ ಇರುವುದು ಗಮನಾರ್ಹ.
ಅಂದರೆ ಯಾರೇ ಮೊಬೈಲಿನಲ್ಲಿ ಫೋಟೋ ಕ್ಲಿಕ್ಕಿಸಲಿ ಅದು ಅಕ್ಕ-ಪಕ್ಕದಲ್ಲಿದ್ದವರಿಗೆ ಗೊತ್ತಾಗುವಷ್ಟು ಜೋರಾಗಿ ಕೇಳಿಸುತ್ತದೆ. ಈ ಸೆಟ್ಟಿಂಗ್ ಅನ್ನು ಬದಲಿಸುವುದು ಸಾಧ್ಯವಿಲ್ಲ. ಇದಕ್ಕೆ ಕಾರಣ, ಅನುಮತಿ ಇಲ್ಲದೇ ಯಾರ ಫೋಟೋವನ್ನೂ ತೆಗೆಯುವಂತಿಲ್ಲ. ಒಂದು ವೇಳೆ ಬೇರೆಯ ವರಿಗೆ ಗೊತ್ತಾಗದಂತೆ ಫೋಟೋ ಕ್ಲಿಕ್ಕಿಸುವ ಪ್ರಯತ್ನ ಮಾಡಿದರೆ, ಕ್ಲಿಕ್ ಸದ್ದಿನಿಂದ ಅದು ಅವರಿಗೆ ಗೊತ್ತಾಗುತ್ತದೆ. ಅದರಲ್ಲೂ ಹೆಂಗಸರ ಮತ್ತು ಮಕ್ಕಳ ಫೋಟೋ ತೆಗೆಯುವಾಗ ಅವರ ಅನುಮತಿ ಅತ್ಯಗತ್ಯ.
ಅವರಿಗೆ ಗೊತ್ತಿಲ್ಲದಂತೆ ಫೋಟೋ ಕ್ಲಿಕ್ಕಿಸಿದರೆ, ಮುಜುಗರಕ್ಕೊಳಗಾಗಬೇಕಾದೀತು. ನಿಮ್ಮ ಸ್ನೇಹಿತನದೋ, ಸ್ನೇಹಿತೆಯದೋ ಫೊಟೋವನ್ನು ಮೊಬೈಲಿನಲ್ಲಿ ಕ್ಲಿಕ್ಕಿಸುವಾಗ, ಹಿಂಬದಿಯಲ್ಲಿ ಯಾರಾದರೂ ಇದ್ದರೆ, ಫೋಟೋದಲ್ಲಿ ಅವರು ಬರದಂತೆ ತೆಗೆಯುವುದು ವಾಸಿ. ಒಂದು ವೇಳೆ ಅವರು ಬಂದರೆ, ಅದಕ್ಕೆ ಅವರು ಆಕ್ಷೇಪಿಸಬಹುದು. ಮೊಬೈಲ್ ಅಂಗಡಿಯಲ್ಲಿ ಅದನ್ನು ಖರೀದಿಸುವಾಗ, ಅಲ್ಲಿಟ್ಟ ಸ್ಯಾಂಪಲ್ ಪೀಸ್ ಅನ್ನು ನೋಡುವುದು, ಅದರಿಂದ ಫೋಟೋ ತೆಗೆಯುವುದು ಸಾಮಾನ್ಯ. ಹಾಗೆ ಅವರು ತೆಗೆದ ಫೋಟೋವನ್ನು, ಸಾಮಾನ್ಯವಾಗಿ ಎಲ್ಲರೂ ಡಿಲೀಟ್
ಮಾಡುತ್ತಾರೆ. ಒಂದು ವೇಳೆ ಡಿಲೀಟ್ ಮಾಡಲು ಅವರಿಗೆ ಮರೆತುಹೋದರೆ, ಅಂಗಡಿಯವರು ಅದನ್ನು ಕಡ್ಡಾಯ ಡಿಲೀಟ್ ಮಾಡುತ್ತಾರೆ. ಡಿಸ್‌ಪ್ಲೇ ಮೊಬೈಲಿನಲ್ಲೂ ಬೇರೆಯವರ ಫೋಟೋ ಇರದಂತೆ ನೋಡಿಕೊಳ್ಳುತ್ತಾರೆ. ಮೊಬೈಲ್ ವಾರಸುದಾರನ ಅನುಮತಿ ಇಲ್ಲದೇ ಯಾರೂ
ಮೊಬೈಲ್ ಮುಟ್ಟುವುದಿಲ್ಲ. ಈ ಮಾತು ಗಂಡ-ಹೆಂಡತಿಗೂ ಅನ್ವಯ. ಈ ಸಂಪ್ರದಾಯ ಭಾರತದಲ್ಲೂ ಜಾರಿಗೆ ಬಂದಿದ್ದರೆ, ಮೊಬೈಲ್ ತಪಾಸಣೆ ಕಾಟದಿಂದ ಅವೆಷ್ಟೋ ಗಂಡಂದಿರು ಬಚಾವ್ ಆಗಿ, ಅವೆಷ್ಟೋ ಸಂಸಾರಗಳು ಒಡೆದು ಚೂರಾಗುವು ದಾದರೂ ತಪ್ಪುತ್ತಿತ್ತು. ಸಾರ್ವಜನಿಕ ಸ್ಥಳಗಳಲ್ಲಿ ಮೊಬೈಲ್‌ನಲ್ಲಿ ಫೋಟೋ ಕ್ಲಿಕ್ಕಿಸುವಾಗ ನಮ್ಮ ಮೊಬೈಲ್‌ಗಳೇ ವಾಸಿ.
ಫೈವ್ ಪಿಎಂ ಬೆಲ್
ಟೋಕಿಯೋ ನಗರದಲ್ಲಿ ಓಡಾಡುವಾಗ, ಸಾಯಂಕಾಲ ಐದು ಗಂಟೆಯಾಗುತ್ತಿದ್ದಂತೆ ಹಿತವಾದ ಗಂಟೆಯ ಸದ್ದು (Chime) ಕೇಳಿಸುತ್ತದೆ. ಆ ಸದ್ದು ಕೇಳಿಸಿದರೆ, ಸಾಯಂಕಾಲ ಐದು ಗಂಟೆ ಆಯಿತೆಂದರ್ಥ. ಇದು ‘5 PM Bell’ ಎಂದೇ ಪ್ರಸಿದ್ಧ. ಟೋಕಿಯೋ ನಗರವೊಂದೇ ಅಲ್ಲ, ಜಪಾನಿನ ಬೇರೆ ನಗರ, ಊರುಗಳಲ್ಲಿಯೂ ಸಾಯಂಕಾಲ ಐದಕ್ಕೆ ಆ ಸದ್ದು ಕೇಳಿಸುತ್ತದೆ. ಈ ರೀತಿ ಸಂಪ್ರದಾಯ ಬೇರೆ ದೇಶಗಳ ನಗರ ಗಳಲ್ಲೂ ಇವೆಯಾ, ಗೊತ್ತಿಲ್ಲ. ಈ ಗಂಟೆ ಸದ್ದು ಕೇಳಿದರೆ ಆ ದಿನದ ಕಚೇರಿ ಸಮಯ ಮುಗಿಯಿತು ಎಂದರ್ಥ. ಆದರೆ ಜಪಾನಿಯರು ಕೆಲಸದ ವಿಷಯದಲ್ಲಿ ರಾಕ್ಷಸರು. ಅವರು ರಾತ್ರಿ, ತಡರಾತ್ರಿಯವರೆಗೂ ಆಫೀಸಿನಲ್ಲಿ ಕೆಲಸಮಾಡುತ್ತಾರೆ. ಹೀಗಿರುವಾಗ ಸಾಯಂಕಾಲ ಐದಕ್ಕೆ ಗಂಟೆ ಸದ್ದು ಹೊಮ್ಮುವುದು ವಿಶೇಷವೇ.
ಜಪಾನಿನಲ್ಲಿ ಭೂಕಂಪ ಮತ್ತು ಪ್ರಾಕೃತಿಕ ವಿಕೋಪಗಳು ಆಗಾಗ ಸಂಭವಿಸುತ್ತಿರುತ್ತವೆ. ಅಂಥ ಘಟನೆ ಸಂಭವಿಸಿದಾಗ, ಸಾರ್ವಜನಿಕರಿಗೆ ಸ್ಪೀಕರ್ ಸಿಸ್ಟಮ್ ಮೂಲಕ ಸೂಚನೆಗಳನ್ನು ನೀಡಲಾಗುತ್ತದೆ. ಎಷ್ಟೋ ಸಂದರ್ಭಗಳಲ್ಲಿ ಅವಶ್ಯಕತೆ ಇದ್ದಾಗಲೇ ಧ್ವನಿವರ್ಧಕಗಳು ಕೆಟ್ಟು ಹೋಗಿರುತ್ತವೆ. ಇದನ್ನು ನಿತ್ಯವೂ ಪರೀಕ್ಷಿಸಲೆಂದೇ ಪ್ರತಿದಿನ ಸಾಯಂಕಾಲ ಐದು ಗಂಟೆಗೆ ಸದ್ದು ಮಾಡುವ ಸಂಪ್ರದಾಯ ಜಾರಿಗೆ
ಬಂದಿರಬಹುದು.
ಮಕ್ಕಳಿಗೆ ದಿನದ ಕೊನೆಯಲ್ಲಿ ಆಟ ಮುಗಿಸಿ ಮನೆಗೆ ಹೋಗುವ ಸೂಚನೆಯೂ ಇದಾಗಿರಬಹುದು. ಮಕ್ಕಳು, ಮಹಿಳೆಯರು ಮತ್ತು ಪಾಲಕರಿಗೆ ರಾತ್ರಿ ಸಮಯ ಶುರುವಾಗುವುದರ ಸೂಚನೆಯೂ ಇದಾಗಿರಬಹುದು. ಕೆಲವು ಪಟ್ಟಣಗಳಲ್ಲಿ ತುರ್ತು ಪ್ರಕಟಣೆ ಅಥವಾ ತುರ್ತು ಸ್ಥಳೀಯ
ಮಾಹಿತಿಯನ್ನು ಹಂಚಲು ಸುರಕ್ಷತೆಗಾಗಿ ಇದನ್ನು ಬಳಸುವುದುಂಟು. ಕೆಲವು ಕಡೆ ಜನಪ್ರಿಯ ಚೈಮ್ಸ ಟ್ಯೂನ್ ಗಳು ಅಥವಾ ಪ್ರಾದೇಶಿಕ ಹಾಡುಗಳು ಮೊಳಗುವುದುಂಟು. ‘ಫೈವ್ ಪಿಎಂ ಬೆಲ್’ ಪದ್ಧತಿಯಿಂದ ಜನರಿಗೆ ಸಮಯದ ಅರಿವು ಮೂಡಿಸಲು ಮತ್ತು ಅವರು ತಮ್ಮ ತಮ್ಮ ಕಾರ್ಯಗಳಲ್ಲಿ ನಿರ್ದಿಷ್ಟ ವ್ಯವಸ್ಥೆ ಮಾಡಿಕೊಳ್ಳಲು ಅನುಕೂಲವಾಗುತ್ತದೆ. ಇದು ಪಕ್ಕಾ ಜಪಾನಿ ಪದ್ಧತಿ ಎನ್ನಬಹುದು.
ಟಿಪ್ಸ್ ಸಂಸ್ಕೃತಿ
ಭಾರತದಲ್ಲಿ ಹೆಜ್ಜೆ ಹೆಜ್ಜೆಗೆ ಟಿಪ್ಸ್ ನೀಡಬೇಕು. ಸ್ಟಾರ್ ಹೋಟೆಲಿನಲ್ಲಿ ನಿಮ್ಮ ಕಾರಿನ ಬಾಗಿಲು ತೆಗೆಯುವ ಸ್ವಾಗತಕಾರನ ಕೈಯಲ್ಲಿ ಐವತ್ತೋ, ನೂರೋ ನೋಟನ್ನು ಇಡಬೇಕು. ಇಡದಿದ್ದರೆ ಆತ ವಾರೆಗಣ್ಣಿನಿಂದ ನೋಡುತ್ತಾನೆ. ಕೆಲವರು ಅಷ್ಟಕ್ಕೇ ಐನೂರು, ಸಾವಿರ ರುಪಾಯಿಯನ್ನು ಕೊಡುವುದುಂಟು. ಏನೂ ಕೊಡದೇ ಬಂದರೆ, ಅಪರಾಧ ಭಾವ ಮೂಡಿದರೂ ಆಶ್ಚರ್ಯವಿಲ್ಲ. ಆದರೆ ಜಪಾನ್ ದೇಶದಲ್ಲಿ ಟಿಪಿಂಗ್ ಅಥವಾ ಟಿಪ್ಸ್ ಕೊಡುವ ಸಂಸ್ಕೃತಿಯೇ ಇಲ್ಲ ಅಂದರೆ ಆಶ್ಚರ್ಯವಾದೀತು. ಹಾಗಂತ ಅಲ್ಲಿ ಸೇವೆಯ ಗುಣಮಟ್ಟ ಅತ್ಯುತ್ತಮವಾಗಿರುತ್ತದೆ. ಆದರೆ ಸೇವೆಗೆ ಬೆಂಬಲವಾಗಿ ಟಿ ನೀಡಲು ಜನರು ನಿರೀಕ್ಷೆ ಮಾಡುವುದಿಲ್ಲ. ಟಿಪ್ಸ್ ನೀಡುವುದು ಕೆಲವೊಮ್ಮೆ ಅಮಾನ್ಯ ಅಥವಾ ಅಪಮಾನಕಾರಿ ಎಂದು ಭಾವಿಸುವುದುಂಟು. ಇದು ಜನರ ಕೆಲಸದ ಹಿರಿಮೆ ಮತ್ತು ಸೇವಾ ತತ್ವಕ್ಕೆ ನೀಡುವ ಗರಿಷ್ಠ ಒತ್ತನ್ನು ತೋರಿಸುತ್ತದೆ.
ಜಪಾನ್ ದೇಶದಲ್ಲಿ ಕೆಲಸವನ್ನು ಪ್ರಾಮಾಣಿಕವಾಗಿ ಮತ್ತು ಸಂಪೂರ್ಣ ಶ್ರದ್ಧೆಯೊಂದಿಗೆ ಮಾಡುವ ಕಾಯಕ ತತ್ವವನ್ನು ಬಲವಾಗಿ ಪ್ರತಿಪಾದಿಸ ಲಾಗಿದೆ. ತಮ್ಮ ಕೆಲಸವೇ ಪ್ರತಿಫಲ ಎಂದು ಅಲ್ಲಿ ಜನರು ಭಾವಿಸುತ್ತಾರೆ. ಹೆಚ್ಚಿನ ಹೋಟೆಲ್ ಅಥವಾ ರೆಸ್ಟೋರೆಂಟ್‌ನಲ್ಲಿ ಸೇವಾ ಶುಲ್ಕ (Service Charge) ವನ್ನೇ ಬಿಲ್ ಜತೆಗೆ ಸೇರಿಸಲಾಗುತ್ತದೆ, ಆದ್ದರಿಂದ ಹೆಚ್ಚಿನ ಜಾಗದಲ್ಲಿ ಟಿಪ್ಸ್ ನೀಡಬೇಕಾದ ಅವಶ್ಯಕತೆ ಇಲ್ಲ. ಟಿಪ್ಸ್ ನೀಡುವುದು ವಿದೇಶಿ ಸಂಸ್ಕೃತಿಯಿಂದ ಬಂದ ಸಂಪ್ರದಾಯ ಎಂದು ಜಪಾನಿಯರು ಭಾವಿಸಿದ್ದಾರೆ ಮತ್ತು ತಮ್ಮ ಸಂಸ್ಕೃತಿಗೆ ಇದು ಪೂರಕವಲ್ಲ ಎಂಬುದು ಅವರ ಧೋರಣೆ. ಎಲ್ಲ ಗ್ರಾಹಕರಿಗೆ ಸಮಾನ ಸೇವೆ ನೀಡುವುದು ಪ್ರಮುಖ ಎಂದು ಅಲ್ಲಿ ಗಮನಹರಿಸಲಾಗುತ್ತದೆ. ಹೀಗಾಗಿ, ನೀವು ಜಪಾನ್‌ಗೆ ಹೋದರೆ, ಟಿಪ್ಸ್ ಕೊಡುವುದು ಅವಶ್ಯಕವಿಲ್ಲ. ಅದರ ಬದಲಿಗೆ, ‘ಅರಿಗಾತೋ ಗೋಜೈಮಸು’ (ಧನ್ಯವಾದಗಳು) ಎಂದು ಹೇಳುವುದೇ ಅವರ ಸೇವೆಗೆ ಅತ್ಯುತ್ತಮ ಕೃತಜ್ಞತೆ ಎಂದು ಪರಿಗಣಿಸಲಾಗುತ್ತದೆ. ಇಷ್ಟಾಗಿಯೂ, ಕೆಲವೊಮ್ಮೆ ವಿದೇಶಿ ಪ್ರವಾಸಿಗರಿಗೆ ಅಲ್ಲಿನ ಸಂಸ್ಕೃತಿ ಗೊತ್ತಿಲ್ಲದೆ ಟಿಪ್ಸ್ ನೀಡಲು ಮುಂದಾದರೆ, ಹೋಟೆಲ್ ಸಿಬ್ಬಂದಿ ಅದನ್ನು ನಯವಾಗಿ ನಿರಾಕರಿಸುತ್ತಾರೆ ಅಥವಾ ಅದನ್ನು ಮರಳಿ ನೀಡುತ್ತಾರೆ.
ಕ್ಯೋಟೋ ಬಚಾವಾಗಿದ್ದು ಹೇಗೆ?
ಜಪಾನಿನ ಕ್ಯೋಟೋ ಅಥವಾ ಕ್ಯೋತೋ ನಗರ ಐತಿಹಾಸಿಕ ಮತ್ತು ಪುರಾತನ ನಗರಗಳಂದು. ಇದು ದೇಶದ ಸಂಸ್ಕೃತಿ, ಪರಂಪರೆ ಮತ್ತು ಇತಿಹಾಸದ ಕೇಂದ್ರವಾಗಿಯೂ ಹೆಸರುವಾಸಿಯಾಗಿದೆ. 794ರಲ್ಲಿ ಸ್ಥಾಪಿತವಾದ ಕ್ಯೋಟೊ 1868ರ ತನಕ ಸುಮಾರು 1000 ವರ್ಷಗಳ ಕಾಲ ಜಪಾನ್‌ನ ರಾಜಧಾನಿಯಾಗಿ ಇತ್ತು. ಕ್ಯೋಟೊದಲ್ಲಿ 1600ಕ್ಕೂ ಹೆಚ್ಚು ಬೌದ್ಧ ಮಂದಿರಗಳು ಮತ್ತು 400 ಶಿಂಟೋ ದೇವಾಲಯಗಳಿವೆ.
ಅದರಲ್ಲಿ ಕಿಂಕಾಕುಜೀ (ಗೋಲ್ಡನ್ ಪೆವಿಲಿಯನ್) ಮತ್ತು ಕಿಯೋಮಿಜು-ದೆರಾ ಅತ್ಯಂತ ಪ್ರಸಿದ್ಧವಾಗಿವೆ. ಗೀಶಾಗಳ ಸಂಸ್ಕೃತಿ ಇನ್ನೂ ಕ್ಯೋಟೊ ದಲ್ಲಿ ಜೀವಂತವಾಗಿದೆ. ಪ್ರತಿ ವರ್ಷ ಚೆರ್ರಿ ಹೂವುಗಳು ಬಿಟ್ಟು, ನಗರವನ್ನು ಸುಂದರವಾಗಿ ಹೊಳೆಯುವಂತೆ ಮಾಡುತ್ತವೆ. ಈ ಸಮಯದಲ್ಲಿ ಕ್ಯೋಟೊ ಪ್ರವಾಸಿಗರಿಗೆ ಅಚ್ಚಳಿಯದ ಅನುಭವ ನೀಡುತ್ತದೆ. ಕ್ಯೋಟೋದಲ್ಲಿ 17 ಯುನೆಸ್ಕೊ ವಿಶ್ವ ಪರಂಪರೆ ಸ್ಥಳಗಳಿವೆ. ಕ್ಯೋಟೊದಲ್ಲಿ ಮ್ಯಾಚಾ (ಹಸಿರು ಚಹಾ) ಅತ್ಯಂತ ಜನಪ್ರಿಯ. ಕ್ಯೋಟೋ ಮೇಲೆ ಅಣುಬಾಂಬ್ ದಾಳಿ ನಡೆದಿಲ್ಲ. ಇದರಿಂದ ಅದರ ಐತಿಹಾಸಿಕ ಕಟ್ಟಡ ಗಳು ಮತ್ತು ಪರಂಪರೆ ಉಳಿಯಲು ಸಾಧ್ಯವಾಯಿತು.
ಇತ್ತೀಚಿನ ಕಾಲದಲ್ಲಿಯೂ ಕ್ಯೋಟೊ ತನ್ನ ಪರಂಪರೆಯನ್ನು ಉಳಿಸಿಕೊಂಡು ತಂತ್ರeನ ಮತ್ತು ಆಧುನಿಕತೆಗೆ ಒಗ್ಗಿಕೊಂಡಿದೆ. ಈ ನಗರ ಎರಡನೇ ಮಹಾಯುದ್ಧದಲ್ಲಿ ಅಣುಬಾಂಬ್ ದಾಳಿಗೆ ತುತ್ತಾಗಲಿಲ್ಲ. ಕಾರಣ ಆಗ ಅಮೆರಿಕ ಅಧ್ಯಕ್ಷರಾಗಿದ್ದ ಹ್ಯಾರಿ ಟ್ರೂಮನ್ ಈ ಊರಿಗೆ ಮಧುಚಂದ್ರಕ್ಕೆ ಬಂದಿದ್ದರಂತೆ. ಆ ನೆನಪನ್ನು ಹಸಿರಾಗಿಡಲು ಅಣುಬಾಂಬ್ ದಾಳಿಗೆ ಅನುಮತಿ ನೀಡಲಿಲ್ಲ. ಹೀಗಾಗಿ ಕ್ಯೋಟೋ ಬಚಾವ್ ಆಯಿತು. ನಾಗಾಸಾಕಿ ಮತ್ತು ಹಿರೋಷಿಮಾಕ್ಕೆ ಆದ ದುರ್ಗತಿ ಕ್ಯೋಟೊಕ್ಕೆ ಆಗಲಿಲ್ಲ.
ಇದನ್ನೂ ಓದಿ: @vishweshwarbhat