Thursday, 14th November 2024

ಯಾವ ಪಾಪಕ್ಕೆ… ಯಾವ ಶಿಕ್ಷೆ ಇದೆ ಗೊತ್ತೆ ?

ಪ್ರಾಣೇಶ್ ಪ್ರಪಂಚ

ಗಂಗಾವತಿ ಪ್ರಾಣೇಶ್‌

ನನ್ನ ಕರೋನಾ ದುರ್ಬರ ದಿನಗಳಲ್ಲಿ ನಾನು ಮಾಡಿದ ಕೆಲಸವೆಂದರೆ ಓದು, ಓದು, ಓದು. ಹೀಗೆ ನಾನು ನನ್ನ ವಿದ್ಯಾರ್ಥಿ ದಿನಗಳಲ್ಲಿ ನನ್ನ ಪಠ್ಯ ಪುಸ್ತಕಗಳನ್ನು ಓದಿದ್ದರೆ, ನಾನೂ ಇಂದೊಬ್ಬ ಐ.ಎ.ಎಸ್ ಅಧಿಕಾರಿಯಾಗುತ್ತಿದ್ದೆನೋ ಏನೋ, ಹಾಗಾಗಲಿಲ್ಲ ಎಂಬ ಸಮಾಧಾನವೂ ನನಗಿದೆ.

ಕಾರಣ ಐ.ಎ.ಎಸ್ ಅಧಿಕಾರಿಯಾಗಿ, ದಡ್ಡ ಎಂ.ಎಲ್.ಎ, ದಡ್ಡ ಮಂತ್ರಿಗಳ ಹಿಂದೆ ತಿರುಗುತ್ತಾ, ನನಗೆ ಮರೆಯದೆ, ಅವರಿಗೆ ಜ್ಞಾನ ಬರದೆ ನಿತ್ಯ ನರಕ ಅನುಭವಿಸಬೇಕಾಗಿತ್ತು. ಅದಕ್ಕೆ ಆದದ್ದೆಲ್ಲ ಒಳಿತೇ ಆಯಿತು. ಶ್ರೀಹರಿ ಒಲುಮೆಗೆ ಸಾಧನವಾಯಿತು
ಎಂಬುದೇ ದಿವ್ಯಮಂತ್ರ ಅನಿಸುತ್ತಿದೆ.

ಇರಲಿ, ಕರೋನಾ ಗೃಹಬಂಧನ ಸಮಯದಲ್ಲಿ ನಾನು ನಮ್ಮ ಹದಿನೆಂಟು ಪುರಾಣಗಳನ್ನು ಕನ್ನಡ ಅವತರಣಿಕೆಯಲ್ಲಿ ಓದಿದೆ.
(ಲೇಖಕರು: ಪಂ. ಪಂಡರೀನಾಥಾಚಾರ್ ಗಲಗಲಿ) ನಿಜಕ್ಕೂ ಉಪಯುಕ್ತ ಓದು. ಆಗಿನ ಶಾಲೆ, ಕಾಲೇಜು ಅಂದರೆ ಗುರುಕುಲ ಗಳಲ್ಲಿ ಇಂಥವುಗಳನ್ನು ಓದಿಸುತ್ತಿದ್ದರಿಂದಲೇ ಮಹಾತ್ಮರು, ತಪಸ್ವಿಗಳು, ಸಹೃದಯರು ಹುಟ್ಟಿಕೊಂಡರು ಎನಿಸಿದೆ.

ಕೃಷ್ಣ – ಸುಧಾಮ ಒಂದೇ ಗುರುಕುಲದಲ್ಲಿ ಓದಿದರೂ ಬಾಳಿದ ರೀತಿ, ಸಾಧಿಸಿದ ಕೀರ್ತಿ, ಪಡೆದ ಫಲ ಬೇರೆ ಬೇರೆಯಾದರೂ ಇಂದಿಗೂ ಅವರು ಆದರ್ಶಪ್ರಾಯರೇ, ಇಬ್ಬರನ್ನೂ ಸ್ವೀಕರಿಸುವ, ಸ್ವೀಕರಿಸಿದ ಜನರಿದ್ದಾರೆ ಅಲ್ಲವೆ? ಆ ಕಾಲ ಅಂಥದು. ಧರ್ಮ – ಅಧರ್ಮಗಳ, ಒಳಿತು – ಕೆಡುಕಿನ, ಪಾಪ – ಪುಣ್ಯಗಳ ಕಲ್ಪನೆಯಿದ್ದ ಯುಗ ಅದು. ಈಗೇನಿದೆ? ಹಣ, ಅಧಿಕಾರ, ಅಜ್ಞಾನ, ಹಠ, ಕ್ರೋಧ, ಹಿಂಸೆಗಳಿರುವವರೇ ಶ್ರೇಷ್ಠರೆನಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣ ಅವರ ಪೂರ್ವಜನ್ಮದ ಕಾರ್ಯಗಳೆ.‘ನಾವು ಏನು ಮಾಡಿದರೂ ನಡೆಯುತ್ತದೆ, ನಾವು ಏನು ಮಾಡಿದರೂ ಕೇಳುವವರಿಲ್ಲ, ಏನು ತಿಂದರೂ ಅರಗಿಸಿಕೊಳ್ಳುತ್ತೇವೆ, ನಾವು ಮಾಡಿದ್ದೇ ಸರಿ, ಪಾಪ, ಪುಣ್ಯ, ಸ್ವರ್ಗ, ನರಕ ಎಲ್ಲಾ ಸುಳ್ಳು ಕಲ್ಪನೆ, ಈ ಬ್ರಾಹ್ಮಣರು ಹೊಟ್ಟೆ ಹೊರೆಯಲು ಹೊಸೆದ ಕಥೆಗಳಿವು ಎನ್ನುವವ ರಿಗೆ ಜ್ಞಾನಿಗಳು ಉತ್ತರ ಕೊಡುವುದಿಲ್ಲ, ಏಕೆಂದರೆ ಅವರ ಗತಿ ಏನಾಗುತ್ತದೆಂಬುದು ಜ್ಞಾನಿಗಳಿಗೆ ಗೊತ್ತಿರುತ್ತದೆ, ಕೇವಲ ಒಮ್ಮೆ ನಕ್ಕು ಸುಮ್ಮನಾಗುತ್ತಾರೆ.

ಅವರು ಸುಮ್ಮನಾದದ್ದೆ ತಮ್ಮ ಜಯವೆಂದು ಈ ಪ್ರತಿವಾದಿ ಭಯಂಕರರು, ಬುದ್ಧಿಜೀವಿಗಳು ಬೀಗುತ್ತಾರೆ. ಇಂಥವುಗಳಿಗೆ ‘ಸ್ಕಂದ ಪುರಾಣ’ದಲ್ಲಿ ಉತ್ತರಗಳಿವೆ. ಸ್ಕಂದ ಪುರಾಣದ ಮೂವತ್ತಾರನೆ ಅಧ್ಯಾಯವು ಯಾವ ಪಾಪಕ್ಕೆ ಯಾವ ಶಿಕ್ಷೆ, ಯಾವ ಪಾಪಕ್ಕೆ ಯಾವ ಜನ್ಮ ಎಂಬುದನ್ನು ಮನಮುಟ್ಟುವಂತೆ, ಬೆಚ್ಚಿ ಬೀಳುವಂತೆ ತಿಳಿಸಿ ಹೇಳುತ್ತದೆ. ನಮಗೆ ಕಚ್ಚುವ ನಾಯಿ, ತಿಗಣೆ, ಸೊಳ್ಳೆ ಯಾಕೆ ಕಚ್ಚುತ್ತವೆ ಎಂಬುವುದರಿಂದ ಹಿಡಿದು, ನಮಗೆ ಬರುವ ರೋಗಗಳು ಕೂಡ ಹಿಂದಿನ ಜನ್ಮದ, ನಾವು ಮಾಡಿದ ನಮ್ಮ ಪಾಪ, ನಮ್ಮ ದ್ರೋಹಗಳೇ ಎಂದು ಸಾರಿ ಹೇಳುತ್ತವೆ.

ಇದಕ್ಕೆ ಕಮಠ ವ್ಯಾಖ್ಯಾನ ಎನ್ನುತ್ತದೆ ಸ್ಕಂದ ಪುರಾಣ. ಆರಿಸಿದ ಕೆಲವು ವಿಷಯಗಳನ್ನು ಓದಿ ನೋಡಿ.’ ನೀನು ಹೇಳಿದ ಪರಲೋಕದಲ್ಲಿಯ ಮಾನವನ ಸ್ಥಿತಿಗತಿಗಳ ವಿವರಣೆ ಶಾಸೋಕ್ತವಾಗಿದೆ, ಸರಿಯಾಗಿದೆ. ಇದರಲ್ಲಿ ಸಂದೇಹವಿಲ್ಲ. ಆದರೆ ನಾಸ್ತಿಕರಿಗೂ ದುರ್ಬುದ್ಧಿ ಗಳಿಗೂ ಹಾಗೂ ಮಂದಬುದ್ಧಿಯ ಮಾನವರಿಗೂ ಸಂದೇಹ ನಿವೃತ್ತಿ ಆಗುವುದಿಲ್ಲ. ಅದಕ್ಕಾಗಿ ನೀನು ಶುಭಾಶುಭ ಕರ್ಮಗಳ ಫಲ, ಪರಿಣಾಮಗಳನ್ನು ನಿರೂಪಿಸು.

ಯಾವ ಪಾಪ ಕರ್ಮಗಳಿಂದ ಎಂಥ ಘೋರ ಪರಿಣಾಮ ಹಾಗೂ ದುಷಲವನ್ನು ಜೀವನ ಅನುಭವಿಸಬೇಕಾಗುವುದು ಎಂಬುದನ್ನು ವಿವರಿಸಿ ಹೇಳು. ವೃದ್ಧ ಬ್ರಾಹ್ಮಣ ರೂಪದಿಂದ ಬಂದ ಪುಣ್ಯಾತ್ಮ ನಾದ ಅತಿಥಿಯೇ, ಈ ವಿಷಯದಲ್ಲಿ ನಮ್ಮ ತಂದೆಯು ನನಗೆ ಉಪದೇಶ ಮಾಡಿದಂತೆ ನಾನು ನಿಮಗೆ ವಿಷಯವನ್ನು ನಿರೂಪಿಸುತ್ತೇನೆ, ಸ್ಥಿರಚಿತ್ತದಿಂದ ಆಲಿಸಿರಿ. ಬ್ರಹ್ಮಹತ್ಯಾ ಮಾಡಿದ ಪಾಪಿಗಳು ಭಯಂಕರ ಕ್ಷಯರೋಗದಿಂದ ಪೀಡಿತರಾಗುವರು, ಶೆರೆ ಕುಡಿಯುವುದರಿಂದ ಹಲ್ಲುಗಳು ಕಪ್ಪಾಗುವವು. ಬಂಗಾರ ಕಳವು ಮಾಡಿದವನ ಉಗುರುಗಳು ಕೆಟ್ಟಿರುವವು.

ಗುರುಪತ್ನಿಯ ದೇಹ ಸಂಪರ್ಕ ಮಾಡಿದವನ ಧರ್ಮವು ದ್ರೂಪವಾಗುವುದು. ಮಡಿ, ಮೈಲಿಗೆ ವಿಚಾರವಿಲ್ಲದೇ ದುಷ್ಟ ಜನರೊಡನೆ ಸಂಪರ್ಕ ಮಾಡುವ ಜನರ ದೇಹದಲ್ಲಿ ಎಲ್ಲ ರೋಗಗಳು ಮನೆ ಮಾಡುವವು. ಇವು ಪಂಚ ಮಹಾಪಾಪಗಳು ಎನಿಸುವವು. ಬ್ರಹ್ಮಹತ್ಯೆ, ಸುರಾಪಾನ, ಗುರು ಪತ್ನೀಗಮನ ಇವು ನಾಲ್ಕು ಮಹಾಪಾತಕಗಳು. ಈ ನಾಲ್ಕು ಮಹಾಪಾಪ ಮಾಡಿದ ಮಹಾಪಾಪಿಗಳ ಸಂಪರ್ಕ, ಸಹವಾಸ ಮಾಡುವುದು ಐದನೇಯ ಮಹಾಪಾಪ. ಇದನ್ನು ಮಾಡಿದವನು ಐದನೇಯ ಮಹಾ ಪಾಪಿ. ಈ ಪಂಚಮ ಮಹಾ ಪಾಪಗಳನ್ನು ಮಾಡಿದವನಿಗೆ ಘೋರ ನರಕ ತಪ್ಪಿದ್ದಲ್ಲ, ಇದಕ್ಕೆ ಹಿಂದಿನದಕ್ಕೆ ಜ್ಞಾಪಕ, ಮುಂದಿನದಕ್ಕೆ ಸೂಚಕ ಎನ್ನುತ್ತಾರೆ.

ಇದರಂತೆ ಮುಂದೆ ನಾನು ಹೇಳುವ ಘೋರ ಪರಿಣಾಮಗಳು ಹಾಗೂ ಕಟುಫಲಗಳು ಆ ಪಾಪಗಳ ಪರಿಪಾಠದಿಂದ ಉಂಟಾಗುತ್ತವೆ ಮತ್ತು ಮುಂದೆ ಆಗುವ ದುರಂತ ಪರಿಣಾಮ ಗಳನ್ನು ಈಗಲೇ ಸೂಚಿಸುತ್ತವೆ ಹಾಗೂ ಹಿಂದೆ ಮಾಡಿದ ಘೋರ ಪಾಪಗಳ ಜ್ಞಾಪಕವೂ ಆಗಿರುತ್ತವೆ. ಈಗ ಮಹಾತ್ಮರ ಹಾಗೂ ಭಗವದ್ಭಕ್ತರ ನಿಂದೆಯನ್ನು ಆನಂದದಿಂದ ಕುಳಿತು ಕೇಳಿದವನು ಮುಂದೆ ಕೆಪ್ಪ, ಕಿವುಡ ಆಗುವನು. ಈಗ ಕಿವುಡನಾದವನು ಹಿಂದಿನ ಜನ್ಮದಲ್ಲಿ ಮಹಾಪುರುಷರ ನಿಂದೆಯನ್ನು ಕೇಳಿದ್ದಾನೆ ಎಂದು
ಅರ್ಥ.

ಹೀಗೆ ಈಗ ನಮಗೆ ಪ್ರತ್ಯಕ್ಷವಾಗಿ ಕಾಣುವ ಮಾನವರ ಅಂಗಹೀನತೆ, ದುಃಖ – ದುರವಸ್ಥೆಗಳು ಹಿಂದಿನ ಆ ಜೀವದ ದುಷ್ಕರ್ಮಗಳಿಗೆ ಜ್ಞಾಪಕವೂ ಆಗಿರುತ್ತವೆ. ಆದ್ದರಿಂದ ಅಂಥ ದೈನ್ಯ, ದುರವಸ್ಥೆ, ದುಷ್ಪರಿಣಾಮಗಳು ಆಗಬಾರದೆಂದು ಬಯಸುವ ಮಾನವರು ಈ ಪಾಪಗಳನ್ನು ಮುಂದೆ ಮಾಡಬಾರದು ಎನ್ನುವ ಭವಿಷ್ಯ ಕೇವಲ ಭವಿಷ್ಯವಲ್ಲ, ಅದು ಕರ್ತವ್ಯ ಸೂಚಕವೂ ಆಗಿರುತ್ತವೆ.

ಜನರೆದುರು ಯಾವಾಗಲೂ ತನ್ನದೇ ಆತ್ಮ ಪ್ರಶಂಸೆ ಮಾಡಿಕೊಳ್ಳುವ, ಬಡಾಯಿಕೊಚ್ಚಿಕೊಳ್ಳುವ ಮಾನವನು ಮುಂದೆ ಮೂಕ ನಾಗುತ್ತಾನೆ. ಗುರು ಹಿರಿಯರ ಅಪಮಾನ ಮಾಡಿದವನು ಕ್ರಿಮಿ – ಕೀಟನಾಗುತ್ತಾನೆ. ಸಾಧು – ಸಜ್ಜನರ ಹಣವನ್ನು ಕದಿಯು ವವನು ಕುಂಟನಾಗುವನು. ಸಿಟ್ಟಿನಿಂದ ಪೂಜ್ಯ ಪುರುಷರ ಮನಸ್ಸನ್ನು ನೋಯಿಸಿದವನು, ಭಯಂಕರ ತಲೆಶೂಲೆಯಿಂದ
ನರಳುವನು. ರಜಸ್ವಲಾ ಸೀಯರ ಸಹವಾಸ ಮಾಡಿದವನು ಚಂಡಾಲನಾಗುವನು.

ಬಟ್ಟೆಗಳನ್ನು ಕದಿಯುವವನು ಕುಷ್ಠರೋಗಿ ಆಗುವನು. ಬೆಳ್ಳಿಯನ್ನು ಕದ್ದರೆ ಹಾಗೂ ಸುಳ್ಳು ಸಾಕ್ಷಿ ಹೇಳಿದರೆ ಮುಖರೋಗ, ಪರಸೀಯರನ್ನು ಪಾಪದೃಷ್ಟಿಯಿಂದ ನೋಡಿದರೆ ನೇತ್ರರೋಗ, ದಾನಕೊಡುತ್ತೇನೆಂದು ವಚನ ಕೊಟ್ಟು ಕೊಡದೇ ಇದ್ದರೆ ಆಯುಷ್ಯ ಕ್ಷೀಣವಾಗುತ್ತದೆ. ತನ್ನ ಒಡೆಯನ ಹಣವನ್ನು ಅವನು ಕೆಲಸ ಮಾಡದೇ ತಿಂದು ಹಾಕಿದರೆ ಜಲೋದರರೋಗ,
ಬಲಿಷ್ಠನಾದರೂ ದುಷ್ಟರಿಂದ ಸಜ್ಜನರನ್ನು ರಕ್ಷಿಸದಿದ್ದರೆ ಅಂಗಹೀನ.

ಅನ್ನ ಕದ್ದವನಿಗೆ ಉದರರೋಗ, ವ್ಯವಹಾರದಲ್ಲಿ ಪಕ್ಷಪಾತ ಮಾಡಿದರೆ ಜಿಹ್ವಾರೋಗ, ಧರ್ಮಕಾರ್ಯದಲ್ಲಿ ವಿಘ್ನವನ್ನುಂಟು
ಮಾಡುವವನಿಗೆ ಅಕಾಲದಲ್ಲಿ ಪತ್ನಿಯ ಮರಣ. ಮಾಡಿದ ಅಡುಗೆಯನ್ನು ಇನ್ನೊಬ್ಬರಿಗೆ ಕೊಡದೇ ತಾನೇ ಉಣ್ಣುವವನಿಗೆ
ಗಂಟಲು ರೋಗವು ಬರುವುದು. ದೇವ ಯಜ್ಞ, ಪಿತೃಯಜ್ಞ, ಋಷಿಯಜ್ಞ, ಅತಿಥಿಯಜ್ಞ ಹಾಗೂ ಭೂತಯಜ್ಞ. ಇವು ಐದು
ಪಂಚ ಮಹಾಯಜ್ಞ ಎನಿಸಿಕೊಳ್ಳುವವು.

ದೇವರು ಕೊಟ್ಟ ಅನ್ನವನ್ನು ಇನ್ನೊಬ್ಬರಿಗೆ ನೀಡದೇ ಮನೆಯ ಜನರನ್ನೂ ಕೂಡ ಬಿಟ್ಟು ತಾನೊಬ್ಬನೇ ತಿಂದರೆ, ಮಡದಿ, ಮಕ್ಕಳಿಗೆ ಅರೆಹೊಟ್ಟೆ ಹಾಕಿದರೆ, ಮುಂದಿನ ಜನ್ಮದಲ್ಲಿ ಹಂದಿಯಾಗಿ ಹೊಲಸನ್ನು ತಿನ್ನುತ್ತಾ, ಹೊಲಸಿ ನಲ್ಲಿಯೇ ಹೊರಳಾಡುತ್ತಾನೆ. ಹೀಗೆ ನಮ್ಮ ಕಣ್ಣಿಗೆ ಕಾಣುವ ಹಂದಿಗಳು ಜನ್ಮಾಂತರದಲ್ಲಿ ಪಂಚಯಜ್ಞಗಳನ್ನು ಮಾಡದೆ ತಮ್ಮ ಹೊಟ್ಟೆಯನ್ನು ಮಾತ್ರ ತುಂಬಿಸಿಕೊಂಡವುಗಳು.

ಪರ್ವ ದಿನಗಳಲ್ಲಿ ಸ್ತ್ರೀ ಸಂಗ ಮಾಡಿದರೆ ಗನೋರಿಯಾ ಮುಂತಾದ ರೋಗಗಳು ಬರುವುವು. ತನ್ನ ಬಂಧು – ಬಳಗ ದವರು ಉಪವಾಸ ಬಿದ್ದಿದ್ದರೂ ಅವರನ್ನು ನೋಡದೆ ತಾನೊಬ್ಬನೇ ಉಂಡುಟ್ಟು ಮೆರೆದರೆ ಅವನು ಮುಂದಿನ ಜನ್ಮದಲ್ಲಿ ಮನೆ, ಮನೆ
ತಿರುಗಿ ಬೇಡುವ ಭಿಕ್ಷುಕನಾಗಿ ಹುಟ್ಟುತ್ತಾನೆ. ತಂದೆ – ತಾಯಿ, ಗುರುಗಳು ಹಾಗೂ ತನ್ನ ಯಜಮಾನನ ಸೇವೆ ಮಾಡುವನು
ಮುಂದಿನ ಜನ್ಮದಲ್ಲಿ ಕಷ್ಟಪಟ್ಟು ಧನವನ್ನು ಗಳಿಸಿ ಅದನ್ನು ಅನ್ಯರ ಪಾಲಾಗಿಸಿ ಆ ದುಃಖದಲ್ಲಿ ಬೇಯುತ್ತಾನೆ.

ದುರ್ಬಲವಾದ ಎತ್ತನ್ನು ಗಾಡಿಗೆ ಕಟ್ಟುವವನು, ಉಳುಮೆಗೆ ಬಳಸುವವನು ಸೊಂಟಗಳ ನೋನಿಂದ ಬಳಲುವನು. ಸಭೆಯಲ್ಲಿ ಪಕ್ಷಪಾತದಿಂದ ನಿರ್ಣಯ ಕೊಡುವವನು ಗಂಡಮಾಲೆ ಎಂಬ ಗಂಟಲು ರೋಗ ವನ್ನು ಹೊಂದುವನು. ಯಾವಾಗಲೂ ಸಿಟ್ಟಿಗೇಳುವ ಮುಂಗೋಪಿ ಯೂ ಚಾಂಡಾಲನಾಗಿ ಹುಟ್ಟುವನು. ಲಂಚ ತಿನ್ನುವವನು ಬಾಯಿದುರ್ಗಂಧ ರೋಗದಿಂದ ಬಳಲು ತ್ತಾನೆ. ಶಾಸಗಳನ್ನು ಓದಿ ಯಾರಿಗೂ ಹೇಳದೇ ಇರುವವನು ಬ್ರಹ್ಮರಾಕ್ಷಸನಾಗುವನು. ಕೆರೆ, ಬಾವಿ, ಉದ್ಯಾನಗಳನ್ನು ನಾಶ ಮಾಡುವವನು ಕೈಕಾಲು ಕಳೆದು ಕೊಂಡು ಊನ ಮನುಷ್ಯನಾಗುವನು.

ವೈದ್ಯಶಾಸ್ತ್ರವನ್ನು ಓದದೇ ಔಷಧ ಕೊಡುವ ನಕಲಿ ಡಾಕ್ಟರ್ ಮುಂದಿನ ಜನ್ಮದಲ್ಲಿ ವಾತರೋಗಿಯಾಗಿ ಹುಟ್ಟುವನು. ಮಾಡಿದ ಉಪಕಾರವನ್ನು ನೆನೆಯದವನು ಬರುವ ಜನ್ಮದಲ್ಲಿ ತನ್ನ ಎಲ್ಲ ವ್ಯವಹಾರಗಳಲ್ಲೂ ಮೋಸವನ್ನೇ ಅನುಭವಿಸುವನು. ಒಬ್ಬರನ್ನು ಬೆದರಿಸಿ, ಹಿಂಸಿಸಿ, ಅವರಿಂದ ವಿದ್ಯೆ, ಜ್ಞಾನ ವನ್ನು ಕಿತ್ತುಕೊಂಡವನು ಬರುವ ಜನ್ಮದಲ್ಲಿ ಹುಚ್ಚನಾಗಿ, ಬುದ್ಧಿಭ್ರಮಣ ವಾಗಿ ತಿರುಗುವನು. ಸದಾ ಇನ್ನೊಬ್ಬರನ್ನು ಹಿಂಸಿಸುವ ವ್ಯಕ್ತಿಯು ಮುಂಬರುವ ಜನ್ಮಗಳಲಿ ದಾರಿದ್ರ್ಯ ದಿಂದ ಕಂಗೆಟ್ಟು ಕಂಡವರ ಮುಂದೆ ಕೈಚಾಚುತ್ತಾ ಭಿಕ್ಷೆಬೇಡುತ್ತಲೇ ಜೀವನ ಕಳೆಯುವನು.

ಓದಿದಿರಿ ತಾನೆ? ಕಂಡವರಾರು? ನೋಡಿದವರಾರು? ಎಂದು ನಿಮಗೆ ಹುಸಿನಗೆ ಬಂದಿರಬಹುದು. ಆದರೆ ಇದು ನೂರಕ್ಕೆ ನೂರು
ಸತ್ಯ. ಎಡ್ಗರ್ ಕೇಸಿ ಎಂಬ ಮನೋ ವಿಜ್ಞಾನಿ ಕೂಡಾ ಇದನ್ನು ಪ್ರತ್ಯಕ್ಷ ಕಂಡು ಅನುಭವಿಸಿ ತಿಳಿಸಿದ್ದಾನೆ. ಗತಜನ್ಮ, ಪುನರ್ಜನ್ಮ,
ಋಣಿ ವಿಶೇಷಗಳಿವೆ ಎಂಬುದನ್ನು ಆತ ಸಾವಿರಾರು ರೋಗಿಗಳ ಔಷಧಿಗಳಿಂದ ವಾಸಿಯಾಗದ ರೋಗಗಳನ್ನು ತನ್ನ ಸುಪ್ತ ಶಕ್ತಿಗಳಿಂದ ಗತಲೋಕಕ್ಕೆ ತೆರಳಿ ಅವರ ರೋಗಕ್ಕೆ ಅವರು ಮಾಡಿದ ಪಾಪಗಳೇ ಕಾರಣವೆಂದು ಹೇಳಿರುವುದು ನಮ್ಮ ಈ ಪುರಾಣ ಗಳಿಂದ ನಮಗೆ ವ್ಯಕ್ತವಾಗುತ್ತದೆ.

ಪಾಪಿಗಳನ್ನು ಜೀವಾವಽ ಶಿಕ್ಷೆ, ಗಲ್ಲು, ಗುಂಡಿಟ್ಟು ಕೊಲ್ಲುವುದರ ಮೂಲಕ ಸುಧಾರಣೆ ಮಾಡುವುದು ಸಾಧ್ಯವಿಲ್ಲ. ಪಾಪಿ ಗಳನ್ನು ಉಪದೇಶದಿಂದ ತಿದ್ದುವುದು, ಪಾಪಪ್ರಜ್ಞೆಗಳಿಂದ ಬಿಡುಗಡೆಗೊಳಿಸುವುದು ಸಮಂಜಸವಾದುದು. ಮಹರ್ಷಿ ವಾಲ್ಮೀಕಿ, ಅಂಗೂಲಿಮಾಲ, ಬೇಡರ ಕಣ್ಣಪ್ಪ ಇತ್ಯಾದಿ ಪುರಾಣ ವ್ಯಕ್ತಿಗಳ ಕಥೆಗಳ ಉದಾಹರಣೆ ಇವೆ.

ಇದಲ್ಲದೇ ಪಾಪಿಗಳ ಲೋಕದಲ್ಲಿ, ಭೂಗತ ಪ್ರಪಂಚ ಎಂಬ ಇತ್ತೀಚಿನ ಪುಸ್ತಕಗಳಿಂದಲೂ ರೌಡಿಗಳ, ಗೂಂಡಾಗಳ ಜೀವನ ಪರಿವರ್ತನೆಯಿಂದಲೂ ನಾವು ಇವುಗಳನ್ನು ನಂಬ ಬಹುದಾಗಿದೆ. ನಾನು ಆಗಾಗ ನನ್ನ ಭಾಷಣದಲ್ಲಿ ಹೇಳುವ ಮಾತೊಂದಿದೆ. ಅದೆಂದರೆ, ಇಂತಹ ಪುಸ್ತಕಗಳನ್ನು ಮುಪ್ಪಿಗೆ ಓದುವ ಬದಲು ಇವುಗಳನ್ನು ನಮ್ಮ ಶಿಕ್ಷಣ ಇಲಾಖೆಯು ಶಾಲಾ ಪಠ್ಯಪುಸ್ತಕ ಗಳನ್ನಾಗಿ ಮಾಡಿದಲ್ಲಿ ಬಾಲ್ಯ, ಯೌವನದಲ್ಲಿಯೇ ಇವನ್ನು ಮಕ್ಕಳು ಓದುವುದರಿಂದ ಅವರು ಬೆಳೆಯುವ ಹೊತ್ತಿಗೆ ಅವರಲ್ಲಿ ದಯೆ, ಅನುಕಂಪ, ಪಾಪಪ್ರಜ್ಞೆ ಇವುಗಳು ಹುಟ್ಟಿಕೊಂಡಿರುತ್ತವೆ.

ಹೀಗಾದಲ್ಲಿ ಪೊಲೀಸ್ ಸ್ಟೇಷನ್, ನ್ಯಾಯಾಲಯಗಳು ತಾವೇ ಮುಚ್ಚುತ್ತವೆ. ಆದರೆ ಓದದೇ, ಚರ್ಚಿಸದೇ ಕೇವಲ ನಾವು ವಿಚಾರವಂತರು ಎಂದು ಪುರಾಣ ಎಂಬುದು ಪುಂಡರ ಗೋಷ್ಠಿ ಎಂದು ಕೂಗುತ್ತಾ, ಭಗವದ್ಗೀತೆ, ಮನುಸ್ಮೃತಿಗಳನ್ನು ಸುಡುತ್ತಿದ್ದರೆ ಅವುಗಳ ಬೆಂಕಿಯಲ್ಲಿ ಬೇಯುವುದು ಅವನ್ನು ಸುಟ್ಟ ನಾವೇ ಹೊರತು ಅದರಲ್ಲಿರುವ ಸತ್ಯವಲ್ಲ.