ಸಂದರ್ಶನ: ನಾಡೋಜ ಮಹೇಶ್ ಜೋಶಿ, ಕಸಾಪ ಅಧ್ಯಕ್ಷ ಸ್ಥಾನದ ವಿಜೇತ ಅಭ್ಯರ್ಥಿ
ಸಂದರ್ಶಕ: ರಂಜಿತ್ ಎಚ್.ಅಶ್ವತ್ಥ
ಕೇಂದ್ರದ ಪರೀಕ್ಷೆಗಳು ಕನ್ನಡದಲ್ಲಿ ನಡೆಸಲು ಕ್ರಮ
ಇಷ್ಟು ದೊಡ್ಡ ಪ್ರಮಾಣದಲ್ಲಿ ಗೆಲ್ಲುವ ವಿಶ್ವಾಸವಿತ್ತು
ಕಸಾಪ ನೂತನ ಅಧ್ಯಕ್ಷ ಮಹೇಶ್ ಜೋಶಿ ವಿಶ್ವಾಸ
ನಿರೀಕ್ಷೆಯಂತೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನದಲ್ಲಿ ಗೆಲವು ಖಚಿತ ವಾಗಿದೆ. ಅಧಿಕೃತ ಘೋಷಣೆಯೊಂದೇ ಬಾಕಿಯಿದೆ. ಅಧಿಕಾರ ವಹಿಸಿಕೊಂಡ ಮರುಗಳಿಗೆ ಕನ್ನಡ ಶಾಲೆಗಳನ್ನು ಉಳಿಸುವ, ಗಡಿ ಭಾಗದ ಶಾಲೆಗಳು ಮುಚ್ಚ ದಂತೆ ಎಚ್ಚರವಹಿಸುವ ಹಾಗೂ ಕನ್ನಡವನ್ನು ಅನ್ನದ ಭಾಷೆಯನ್ನಾಗಿಸುವುದು ಆದ್ಯತೆಯ ಕೆಲಸವಾಗಿರಲಿದೆ ಎಂದು ಕಸಾಪ ಅಧ್ಯಕ್ಷ ಸ್ಥಾನದ ವಿಜೇತ ಅಭ್ಯರ್ಥಿ ನಾಡೋಜ ಮಹೇಶ್ ಜೋಶಿ ಹೇಳಿದ್ದಾರೆ. ಭಾನುವಾರ ನಡೆದ ಕನ್ನಡ ಸಾಹಿತ್ಯ ಪರಿಷತ್ನ ಚುನಾವಣೆಯಲ್ಲಿ 46 ಸಾವಿರ ಅಂತರ ಪಡೆದುಕೊಂಡಿರುವ ಮಹೇಶ್ ಜೋಶಿ ಅವರ ಗೆಲವು ಖಚಿತವಾಗಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಯಿದೆ. ಈ ಹಿನ್ನಲೆಯಲ್ಲಿ ವಿಶ್ವವಾಣಿಯೊಂದಿಗೆ ಮಾತ ನಾಡಿದ ಅವರು, ಚುನಾ ವಣೆ, ಗೆಲವು ಸೇರಿದಂತೆ ಹಲವು ವಿಷಯದ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನದ ಪೂರ್ಣಪಾಠ ಇಲ್ಲಿದೆ.
ಇಷ್ಟು ದೊಡ್ಡ ಅಂತರ ನಿರೀಕ್ಷಿತವೇ?
106 ವರ್ಷಗಳ ಇತಿಹಾಸದಲ್ಲಿ 46 ಸಾವಿರ ಮತಗಳ ಅಂತದಲ್ಲಿ ಮುನ್ನಡೆ ಕಾಯ್ಡುಕೊಂಡಿರುವುದು ಇದೇ ಮೊದಲು.
ಆದ್ದರಿಂದ ಈ ಚುನಾವಣೆಯ ಮೂಲಕ ಇತಿಹಾಸವನ್ನು ಸೃಷ್ಟಿಸಿದ್ದೇವೆ. ಚುನಾವಣೆಗೆ ಸೇವಾರ್ಥಿಯಾಗಿ ಸ್ಪರ್ಧಿಸಿದ ದಿನದಿಂದ ಇಡೀ ರಾಜ್ಯವನ್ನು ಸುತ್ತಿದ್ದೇನೆ. ಇದ್ದ 21 ಅಭ್ಯರ್ಥಿಗಳ ಪೈಕಿ ಇಡೀ ರಾಜ್ಯವನ್ನು ಸುತ್ತಿದ, 252 ತಾಲೂಕುಗಳಿಗೆ ಭೇಟಿ ನೀಡಿ, ಸುಮಾರು 80 ಸಾವಿರ ಮತದಾರರನ್ನು ಭೇಟಿಯಾದವನು ನಾನೊಬ್ಬನೆ.
ಪ್ರತಿ ತಾಲೂಕಿಗೆ ಭೇಟಿ ನೀಡಿದಾಗಲೂ, ಮತದಾರರು ನನ್ನ ಬಗ್ಗೆ ಅಭಿಮಾನದ ಮಾತನ್ನು ಆಡುತ್ತಿದ್ದರು. ಎಲ್ಲರೂ ನನ್ನ ಮೇಲೆ ವಿಶ್ವಾಸವಿಟ್ಟಿದ್ದರು. ದೂರದರ್ಶನದಲ್ಲಿದ್ದಾಗ ನನಗೆ ಇದ್ದ ಕನ್ನಡದ ಕಳಕಳಿ, ಅಭಿಮಾನವನ್ನು ನೋಡಿದ್ದೇವೆ. ಆದ್ದರಿಂದ ನೀವು ದಾಖಲೆಯಿಂದ ಗೆಲ್ಲುತ್ತೀರಾ ಎನ್ನುವ ಅಭಿಮಾನದ ಮಾತನ್ನು ಹೇಳುತ್ತಿದ್ದರು. ಇದೀಗ ಅದು ಸಾಬೀತಾಗಿದೆ. ಆ ಮೂಲಕ ನನ್ನ ಮಾತನ್ನು ಉಳಿಸಿಕೊಂಡಿದ್ದೇನೆ.
ಚುನಾವಣೆಯಲ್ಲಿ ಗೆಲವು ಸಾಧಿಸಿದ್ದು ಏನನಿಸುತ್ತದೆ?
ಭಾನುವಾರ ಮತದಾನ ಪೂರ್ಣ ಗೊಂಡಿದ್ದು, ನಾನು 46 ಸಾವಿರ ಅಂತರದ ಮುನ್ನಡೆಯನ್ನು ಕಾಯ್ಡುಕೊಂಡಿದ್ದೇನೆ. ಆದರೆ ಇನ್ನು ಎರಡೂವರೆ ಸಾವಿರದಷ್ಟು ನೆರೆ ರಾಜ್ಯಗಳ ಮತದಾನ ಬಾಕಿಯಿದೆ. ಅದೇನೇ ಆದರೂ, ಚುನಾವಣೆಯ ಫಲಿತಾಂಶ ಬದಲಾಗುವುದಿಲ್ಲ. ಗೋವಾ, ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳಲ್ಲಿರುವ ಬಾಕಿ ಮತದಾನದಲ್ಲಿಯೂ
ಹೆಚ್ಚು ಮತಗಳು ನನಗೆ ಸಿಗುವುದು ಖಚಿತ. ಆದ್ದರಿಂದ ರಾಜ್ಯದ ಜನರಿಗೆ ನಾನು ಧನ್ಯವಾದ ಸಲ್ಲಿಸಲು ಬಯಸುವೆ.
ಈ ಚುನಾವಣೆಯಲ್ಲಿ ಯಾವ ಸಂದೇಶ ರವಾನಿಸಿದ್ದೀರಾ?
ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಈ ಬಾರಿ ಜಾತಿ, ಪಂಥ, ಹಣ, ಉಡುಗೊರೆ, ಆಮಿಶ, ಪ್ರಾದೇಶಿಕ ಮಾತುಗಳು, ಸುಳ್ಳು ಸುದ್ದಿಗಳು ಭಾರಿ ಪ್ರಮಾಣದಲ್ಲಿ ಓಡಾಡಿದ್ದವು. ಆದರೆ ಈ ಎಲ್ಲದ್ದಕ್ಕೂ ಮತದಾರ ಉತ್ತರ ಕೊಟ್ಟಿದ್ದಾರೆ. ನನ್ನ ಮೇಲೆ ನಿರೀಕ್ಷೆ ಇಟ್ಟಿದ್ದಾರೆ. ಬದಲಾವಣೆ ಮಾಡುವ ವಿಶ್ವಾಸವಿದೆ. ಆದ್ದರಿಂದ ಅವರೆಲ್ಲ ವಿಶ್ವಾಸವನ್ನು ಗೌರವಿಸುವೆ. ಯಾವುದನ್ನು ಸುಳ್ಳು ಮಾಡುವುದಿಲ್ಲ ಹಾಗೂ ಅವರಿಟ್ಟಿರುವ ವಿಶ್ವಾಸಕ್ಕೆ ದ್ರೋಹ ಮಾಡುವುದಿಲ್ಲ. ಕಸಾಪದಲ್ಲಿ ಕ್ರಾಂತಿಕಾರಕ
ಬದಲಾವಣೆಯನ್ನು ತರುತ್ತೇನೆ.
ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಯೋಜನೆ ಏನು?
ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಒಂದಲ್ಲ ಎರಡು ವಿಷಯವನ್ನು ಆದ್ಯತಾ ವಿಷಯವಾಗಿ ಪರಿಗಣಿಸುವೆ. ಮೊದಲನೇ ಯದ್ದಾಗಿ, ಕನ್ನಡ ಶಾಲೆಗಳು ಮುಚ್ಚದಂತೆ ಎಚ್ಚರವಹಿಸುವೆ. ಅದರಲ್ಲಿಯೂ ಗಡಿನಾಡ ಭಾಗದಲ್ಲಿ ಕನ್ನಡ ಶಾಲೆ ಗಳಿಗೆ ಧಕ್ಕೆ ಯಾಗದಂತೆ ನೋಡಿಕೊಳ್ಳುವೆ. ಇದರೊಂದಿಗೆ ಅಲ್ಲಿರುವ ಶಿಕ್ಷಕರಿಗೆ ಅಗತ್ಯ ಸೌಕರ್ಯಕ್ಕೆ ಸರಕಾರದೊಂದಿಗೆ ಸಮನ್ವಯತೆ ಸಾಧಿಸುತ್ತೇನೆ. ಕನ್ನಡವನ್ನು ಅನ್ನದ ಭಾಷೆಯನ್ನಾಗಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸುವೆ. ಅದರಲ್ಲಿ ಪ್ರಮುಖ ವಾಗಿ, ಕೇಂದ್ರ ಸರಕಾರದಿಂದ ನಡೆಯುವ ಎಲ್ಲ ಪರೀಕ್ಷೆಗಳು ಕನ್ನಡದಲ್ಲಿ ಬರೆಯಲು ಅವಕಾಶವಿದೆ. ಇದನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸಲು ಪ್ರಯತ್ನಿಸುತ್ತೇನೆ. ಈ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರಕಾರದೊಂದಿಗೆ ಸೌರ್ಹಾದಯುತ ವಾಗಿ ಚರ್ಚಿ ಸುವೆ. ಅಗತ್ಯವಿದ್ದರೆ ಆಡಳಿತಾತ್ಮಕ ಹೋರಾಟ ಹಾಗೂ ಕಾನೂನಿನ ಹೋರಾಟಕ್ಕೂ ಅಣಿಯಾಗುವೆ.
ನಿಂತು ಹೋಗಿರುವ ಸಮ್ಮೇಳನ ಆರಂಭವಾಗುವುದೇ?
ಕರೋನಾ ಕಾರಣದಿಂದಾಗಿ ಕಳೆದ ಎರಡು ವರ್ಷದಿಂದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿಲ್ಲ. ಆದರೆ ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಕಸಾಪ ಅಧ್ಯಕ್ಷ ಸ್ಥಾನದ ಚುನಾವಣೆ ಬಳಿಕ, ಈ ಬಗ್ಗೆ ಚರ್ಚಿಸುವು ದಾಗಿ ಹೇಳಿದ್ದಾರೆ. ಆದ್ದರಿಂದ ಅಧಿಕಾರ ಸ್ವೀಕರಿಸಿದ ಬಳಿಕ ಬೊಮ್ಮಾಯಿ ಅವರೊಂದಿಗೆ ಚರ್ಚಿಸಿ ದಿನಾಂಕ ನಿಗದಿಪಡಿಸುತ್ತೇನೆ. ನಾವಿಬ್ಬರೂ ಒಂದೇ ಜಿಲ್ಲೆಯವರು ಹಾಗೂ ಶಿಶುನಾಳ ಷರೀಫ ಟ್ರಸ್ಟ್ನಲ್ಲಿದ್ದೇನೆ. ಆದ್ದರಿಂದ ಇಬ್ಬರು ಸೇರಿಕೊಂಡು ಅತ್ಯುತ್ತಮ ರೀತಿಯಲ್ಲಿ ಸಮಾವೇಶನವನ್ನು ಮಾಡುತ್ತೇವೆ ಎನ್ನುವ ವಿಶ್ವಾಸವಿದೆ.