ಸತತ ಮಳೆಯಿಂದ ಕೊಳೆಯುತ್ತಿದೆ ತರಕಾರಿ
ಗ್ರಾಹಕರ ಕೈಸುಡುತ್ತಿದೆ ಟೊಮೇಟೊ ಬೆಲೆ
ವಿಶೇಷ ವರದಿ: ವೆಂಕಟೇಶ್ ಆರ್. ದಾಸ್ ಬೆಂಗಳೂರು
ಒಂದು ವಾರದಿಂದ ಹೊರಗೆ ಬರದೆ ಚಳಿಯನ್ನು ಶಪಿಸುತ್ತಿದ್ದ ನಗರದ ಜನರಿಗೆ ತರಕಾರಿಗಳ ಬೆಲೆ ಏರಿಕೆ ಬಿಸಿ ಮುಟ್ಟಿಸಿದೆ.
ಟೊಮೇಟೊ, ಈರುಳ್ಳಿ ಸೇರಿದಂತೆ ಪ್ರಮುಖ ತರಕಾರಿಗಳು ಸೆಂಚುರಿ ಭಾರಿಸಿವೆ.
ಟೊಮೇಟೊ, ಈರುಳ್ಳಿ, ಬೀ ಮಾತ್ರ ನೂರರ ಗಡಿ ದಾಟುತ್ತಿದ್ದಂತಹವು. ಇದೇ ಮೊದಲ ಬಾರಿಗೆ ಬೆಂಡೆಕಾಯಿ, ಹೀರೇಕಾಯಿ, ಬದನೆಕಾಯಿ, ತೊಗರಿಕಾಯಿಯಂತಹ ಹಲವು ತರಕಾರಿಗಳು ಸೆಂಚುರಿ ಬಾರಿಸಿವೆ. ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ದೊಡ್ಡ ಪ್ರಮಾಣ ದಲ್ಲಿ ತಟ್ಟಿದೆ.
ಡೊಣ್ಣಮೆಣಸಿನಕಾಯಿ(ಕ್ಯಾಪ್ಸಿಕಂ), ನುಗ್ಗೆಕಾಯಿ ಮತ್ತಿತರ ಕೆಲವು ತರಕಾರಿಗಳು ಗ್ರಾಹ ಕರ ಕೈಗೆಟುಕದಷ್ಟು ದುಬಾರಿಯಾಗಿವೆ. ಮಳೆಯಿಂದ ಈರುಳ್ಳಿ ಬೆಲೆಯಿಂದ ಮಾತ್ರ ಫಜೀತಿಗೀಡಾಗುತ್ತಿದ್ದ ಗ್ರಾಹಕರು, ಈಗ ಎಲ್ಲ ರೀತಿಯ ತರಕಾರಿ, ಸೊಪ್ಪುಗಳ ದರ ಏರಿಕೆ ಬಿಸಿ ಅನುಭವಿ ಸುವಂತಾಗಿದೆ. ಇನ್ನೂ ಒಂದು ತಿಂಗಳು ಇದೇ ರೀತಿ ಬೆಲೆ ಏರಿಕೆ ಮುಂದು ವರಿಯುವ ಮುನ್ಸೂಚನೆ ವ್ಯಕ್ತವಾಗಿದೆ.
ರಾಜ್ಯಾದ್ಯಂತ ಸುರಿಯುತ್ತಿರುವ ನಿರಂತರ ಮಳೆಯಿಂದ ತೋಟ, ಹೊಲಗಳಲ್ಲಿ ಸಾಕಷ್ಟು ನೀರು ನಿಂತಿದೆ. ತೋಟದ ಬೆಳೆಗಳು ಕೊಳೆಯುತ್ತಿವೆ. ಇದರಿಂದ ಟೊಮೇಟೊ ಮಾತ್ರ ವಲ್ಲದೆ, ಈರುಳ್ಳಿ, ನುಗ್ಗೆಕಾಯಿ, ಬೆಂಡೆಕಾಯಿ, ತೊಂಡೆಕಾಯಿ, ಕ್ಯಾರಟ್, ಕ್ಯಾಪ್ಸಿಕಂ ಹೀಗೆ ನಾನಾ ಬೆಳೆಗಳು ಹಾಳಾಗಿವೆ. ಹೀಗಾಗಿ, ಮಾರುಕಟ್ಟೆಯಲ್ಲಿ ಉತ್ತಮ ತರಕಾರಿ ಮತ್ತು ಸೊಪ್ಪು ಸಿಗುತ್ತಿಲ್ಲ. ಹಾಗೆಯೇ ದರವೂ ದುಬಾರಿಯಾಗಿದೆ.
ಬಂಗಾಳಕೊಲ್ಲಿಯ ವಾಯುಭಾರ ಕುಸಿತದಿಂದ ರಾಜ್ಯಾದ್ಯಂತ ಭಾರೀ ಮಳೆಯಾಗಿದೆ. ಮೋಡ ಕವಿದ ವಾತಾವರಣ ಮುಂದು ವರಿದಿದ್ದು, ನಿರಂತರ ಮಳೆ ಸುರಿಯುತ್ತಿದೆ. ಹೊಲ, ತೋಟಗಳಲ್ಲಿ ನೀರು ತುಂಬಿಕೊಂಡು ಬೆಳೆ ನಾಶವಾಗಿದೆ. ಕಟಾವಿಗೆ ಬಂದಿ ರುವ ಫಸಲು ರೈತರ ಕೈಸೇರದಂತಾಗಿದೆ. ಮಳೆಯಿಂದ ಪ್ರಮುಖವಾಗಿ ತರಕಾರಿಗೆ ಹೆಚ್ಚು ಹಾನಿಯಾಗಿದೆ. ಇದರ ಪರಿಣಾಮ ರೈತರಿಗೆ ನಷ್ಟದ ಜತೆಗೆ ಗ್ರಾಹಕರಿಗೆ ತರಕಾರಿ ಬೆಲೆ ಹೆಚ್ಚಳದ ಬಿಸಿ ತಟ್ಟಿದೆ.
ಕಳೆದ ತಿಂಗಳಿನ ದರಗಳಿಗೂ, ಈ ತಿಂಗಳ ದರಗಳಿಗೆ ಹೋಲಿಸಿದರೆ ದರ ಎರಡರಿಂದ ನಾಲ್ಕು ಪಟ್ಟು ಏರಿಕೆಯಾಗಿದೆ. ದುಡ್ಡು ಕೊಟ್ಟರೂ ಗುಣಮಟ್ಟದ ತರಕಾರಿ ಸಿಗುತ್ತಿಲ್ಲ. ಕಾರ್ತೀಕ ಮಾಸದ ಹಿನ್ನೆಲೆ ಎಡೆ ಮದುವೆ, ಗೃಹಪ್ರವೇಶ, ದೇವಾಲಯಗಳಲ್ಲಿ ಪೂಜೆ ಕಾರ್ಯಗಳು ನಡೆಯುತ್ತಿದ್ದು, ತರಕಾರಿಗೆ ಹೆಚ್ಚಿನ ಬೇಡಿಕೆಯಿದೆ.
ಅತಿವೃಷ್ಟಿಯಿಂದ ಬೆಳೆಹಾನಿ: ಕೇವಲ ಮೂರ್ನಾಲ್ಕು ತಿಂಗಳ ಹಿಂದೆ ಮಳೆಯ ಅಭಾವದಿಂದಾಗಿ ತರಕಾರಿ ಬೆಲೆ ಏರಿಕೆ ಯಾಗಿತ್ತು. ಈಗ ಅತಿಯಾದ ಮಳೆ ತರಕಾರಿಯನ್ನು ದುಬಾರಿಯಾಗಿಸಿದೆ. ಕೈಗೆ ಬರಬೇಕಿದ್ದ ಬೆಳೆ ಗಿಡದ ಕೊಳೆತುಹೋಗಿದೆ. ಕಳೆದ ವಾರ ತರಕಾರಿ ಬೆಲೆ ಎರಡು ಬಾರಿ ಏರಿಕೆ ಕಂಡಿದ್ದು, ಇದೇ ಪರಿಸ್ಥಿತಿ ಮುಂದುವರಿದರೆ ಬೆಲೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಗಳಿವೆ. ರಾಜ್ಯದ ದಕ್ಷಿಣದ ಜಿಲ್ಲೆ ಗಳಲ್ಲಿ ಅನಿರೀಕ್ಷಿತ ಹಾಗೂ ನಿರಂತರವಾಗಿ ಸುರಿದ ಮಳೆ, ಮೋಡ ಮುಸುಕಿದ ವಾತಾವರಣದಿಂದಾಗಿ ಮಾರುಕಟ್ಟೆಯಲ್ಲಿರಬೇಕಿದ್ದ ಬೆಳೆ ಹೊಲದ ಉಳಿದಿದೆ. ಕೆಲವೆಡೆ ಗಿಡಗಳಲ್ಲಿ ಬಿಟ್ಟ ಹೂವು, ಪಿಂದೆಗಳು ಕೂಡ ಉದುರುತ್ತಿವೆ. ಹೀಗಾಗಿ, ಬೇಡಿಕೆಗೆ ತಕ್ಕಂತೆ ತರಕಾರಿ ಪೂರೈಕೆಯಾಗುತ್ತಿಲ್ಲ.
ಈರುಳ್ಳಿ ಬೆಲೆ ಮತ್ತಷ್ಟು ಏರಿಕೆ ಸಾಧ್ಯತೆ: ಮಾರುಕಟ್ಟೆಯಿಂದ ಈರುಳ್ಳಿ ಖರೀದಿಸಿ ತಂದರೂ ಮೇಲ್ಭಾಗದಲ್ಲಿ ನೋಡಲು
ಚೆನ್ನಾಗಿರುತ್ತವೆ. ಆದರೆ ಒಂದೆರಡು ದಿನದ ಅವು ಕೊಳೆಯಲಾರಂಭಿಸುತ್ತವೆ. ಯಾಕೆಂದರೆ ಮಳೆಯಲ್ಲಿ ನೆಂದಿರುವುದರಿಂದ
ಈರುಳ್ಳಿ ಒಳ ಪದರು ಮತ್ತು ಬುಡ, ಕೊನೆಯ ಭಾಗದಲ್ಲಿ ಕೊಳೆತು ಇಡೀ ಈರುಳ್ಳಿ ಹಾಳಾಗುತ್ತಿದೆ. ಈಗಾಗಲೇ ಈರುಳ್ಳಿ ದರ
50-60 ರು. ತಲುಪಿದೆ. ಅಷ್ಟು ಕೊಟ್ಟರೂ ಗುಣಮಟ್ಟವನ್ನು ಹೊಂದಿರುವುದಿಲ್ಲ. ಮುಂದುವರಿದ ಮಳೆಯಿಂದಾಗಿ ಈರುಳ್ಳಿ
ಬೆಲೆಯೂ ನೂರು ರು. ತಲುಪುವ ಸಾಧ್ಯತೆಯಿದೆ ಎನ್ನುತ್ತಾರೆ ಎಪಿಎಂಸಿ ಮಾರುಕಟ್ಟೆ ವ್ಯಾಪಾರಿಗಳು.
ಸೇಬನ್ನು ಸೈಡ್ ಹೊಡೆದ ಟೊಮ್ಯಾಟೋ: ಕೋಲಾರ ಎಪಿಎಂಸಿಯಲ್ಲಿ ಟೊಮೇಟೊ ಭರ್ಜರಿ ವ್ಯಾಪಾರವಾಗುತ್ತಿದೆ. 15 ಕೆ.ಜಿ. ಬಾಕ್ಸ್ಗೆ 1500 ರು. ರಿಂದ 2 ಸಾವಿರಕ್ಕೆ ಮಾರಾಟವಾಗುತ್ತಿದೆ. ಇಳುವರಿ ಕಡಿಮೆಯಾಗಿರುವ ಹಿನ್ನೆಲೆ ಭರ್ಜರಿ ಬೆಲೆಯಲ್ಲಿ ಮಾರಾಟವಾಗುತ್ತಿದೆ. ಒಂದು ಕೆ.ಜಿ. ಟೊಮೇಟೊ ಬೆಲೆ ಬರೋಬ್ಬರಿ 140 ರು. ಆಗಿದೆ. ಕಳೆದ ಒಂದು ತಿಂಗಳಿನಿಂದ ತೇವಾಂಶ ಹೆಚ್ಚಾಗಿ ಟೊಮೇಟೊ ಸೇರಿ ಇನ್ನಿತರೆ ತರಕಾರಿಗಳಿಗೆ ರೋಗಬಾಧೆ ಎದುರಾಗಿತ್ತು. ಇಳುವರಿಯಲ್ಲಿ ತೀವ್ರ ಕುಸಿತ ಮತ್ತು ಎಡೆ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ತರಕಾರಿ ಹಾನಿಹಾನಿಯಾಗಿದೆ. ಹೀಗಾಗಿ ತರಕಾರಿ ಬೆಲೆಯಲ್ಲಿ ಏರಿಕೆ ಕಂಡಿದೆ. ಟೊಮೇಟೊ ಬೆಲೆ ಏರಿಕೆ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಸಾರಸ್ಯಕರ ಚರ್ಚೆಯೂ ನಡೆದಿದ್ದು, ಸೇಬು ಮತ್ತು ಟೊಮೇಟೊ ನಡುವೆ ನಡೆದ ಕಾಲ್ಪನಿಕ ಸಂಭಾಷಣೆ ಬರೆದಿರುವ ಕೆಲವು ನೆಟ್ಟಿಗರು ‘ನಾನು ನಿನಗಿಂತ ಡಿಮ್ಯಾಂಡ್ ಆಗಿದ್ದೇನೆ. ನಿನಗಿಂತ ಸ್ವಲ್ಪ ಸಣ್ಣ ಅನ್ನೋದು ಬಿಟ್ಟರೆ, ಕಲರ್ನಲ್ಲೂ ನಾನೇನು ಕಡಿಮೆಯಿಲ್ಲ. ನಿನ್ನ ಸಮಕ್ಕೆ ಬರುವುದೇನು, ನಿನ್ನನ್ನು ಸೈಡ್ಗೆ ಹಾಕ್ತೇನೆ ನೋಡ್ತಿರು’ ಎಂದು ಟೊಮೇಟೋ ಸೇಬಿಗೆ ಕಿಚಾಯಿಸಿದೆ ಎಂದು ಬರೆದುಕೊಂಡಿದ್ದಾರೆ.
***
ಕಳೆದ ತಿಂಗಳಿಗೆ ಹೋಲಿಕೆ ಮಾಡಿದರೆ ಸೀಮೆ ಬದನೆಕಾಯಿ, ಬೀಟ್ರೂಟ್ ಹೊರತುಪಡಿಸಿ, ಇತರೆ ಎಲ್ಲ ತರಕಾರಿಗಳು ಶೇ.60- 70ರಷ್ಟು ಏರಿಕೆಯಾಗಿವೆ. ಅದರಲ್ಲೂ 15 ಕೆ.ಜಿ. ಟೊಮೇಟೊ ಬಾಕ್ಸ್ ಕಳೆದ ತಿಂಗಳು 400-450 ರು. ಇದ್ದುದು ಇದೀಗ 1200-1500 ರು. ವರೆಗೆ ತಲುಪಿದೆ. ನಾಸಿಕ್ನಿಂದ ಬರುತ್ತಿದ್ದ ಟೊಮೇಟೊ ಮಳೆಯಿಂದಾಗಿ ಬರುತ್ತಿಲ್ಲ.
-ಕೇಶವಮೂರ್ತಿ, ಸಗಟು ಮಾರಾಟಗಾರರು, ಯಶವಂತಪುರ ಎಪಿಎಂಸಿ