Friday, 13th December 2024

ಜಿಲ್ಲೆಯಲ್ಲಿ ನಾಲ್ಕು ವರ್ಷಗಳಲ್ಲಿ 1,422 ತೀವ್ರ ಅಪಘಾತ..!

ಬಾಗಲಕೋಟೆ: ಜಿಲ್ಲೆಯಲ್ಲಿ ನಾಲ್ಕು ವರ್ಷಗಳಲ್ಲಿ 1,422 ತೀವ್ರತರ ಅಪಘಾತಗಳಾಗಿದ್ದು, 1,923 ಸಾಧಾರಣ ಅಪಘಾತಗಳಾಗಿವೆ. 1,513 ಜನರು ಮೃತ ಪಟ್ಟಿದ್ದರೆ, 4,492 ಜನರು ಗಾಯಗೊಂಡಿದ್ದಾರೆ.

ಸಂಚಾರ ನಿಯಮಗಳ ಪಾಲನೆ ಸರಿಯಾಗಿ ಮಾಡದ್ದರಿಂದಾಗಿ ಮೇಲಿಂದ ಮೇಲೆ ಅಪಘಾತಗಳಾಗುತ್ತಿವೆ. ಪೊಲೀಸ್ ಇಲಾಖೆ ಹಲವಾರು ಕ್ರಮಗಳನ್ನು ಕೈಗೊಂಡ ನಂತರವೂ ಅಪಘಾತ ಹಾಗೂ ಸಾವಿನ ಪ್ರಮಾಣ ಕಡಿಮೆಯಾಗಿಲ್ಲ.

ಅಪಘಾತದಲ್ಲಿ ಸಾವಿನ ಪ್ರಮಾಣ ಕಡಿಮೆ ಮಾಡಲು ಪೊಲೀಸ್‌ ಇಲಾಖೆ, ಹೆಲ್ಮೆಟ್‌ ಕಡ್ಡಾಯವಿದ್ದ ಕಾನೂನನ್ನು ಜಾರಿಗೊಳಿಸಲಾಗಿದೆ. ಹೆಲ್ಮೆಟ್‌ ಹಾಕಬೇಕು ಎಂದು ಜಾಗೃತಿ ಮೂಡಿಸುವುದರ ಜತೆಗೆ, ದಂಡವನ್ನೂ ಹಾಕಲಾಗುತ್ತಿದೆ.

ಪೊಲೀಸ್, ಪ್ರಾದೇಶಿಕ ಸಾರಿಗೆ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೆ.ಎಂ.ಜಾನಕಿ ಸೂಚಿಸಿದ್ದಾರೆ.

ಪೊಲೀಸ್ ಇಲಾಖೆಯು ಜಿಲ್ಲೆಯಲ್ಲಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ 15, ರಾಜ್ಯ ಹೆದ್ದಾರಿಯಲ್ಲಿ 14 ಅಪಘಾತ ವಲಯ ಗುರುತಿಸಲಾಗಿದೆ. ಅಲ್ಲಿ ಅಪಘಾತಗಳಾಗದಂತೆ ಕ್ರಮ ವಹಿಸಲಾಗಿದೆ.

ಜಿಲ್ಲೆಯ ಪ್ರತಿ ಸಕ್ಕರೆ ಕಾರ್ಖಾನೆಗೆ 2 ಸಾವಿರಕ್ಕಿಂತ ಹೆಚ್ಚು ಟ್ರ್ಯಾಕ್ಟರ್‌ಗಳು ಕಬ್ಬು ಸಾಗಾಣಿಕೆ ಮಾಡುವುದರಿಂದ ಅಪಘಾತಗಳಾಗುತ್ತಿವೆ. ಆದ್ದರಿಂದ ಪ್ರತಿ ಟ್ರ್ಯಾಕ್ಟರ್‌ಗೆ ರಿಫ್ಲೆಕ್ಟರ್ ಅಳವಡಿಸಬೇಕು. ಧ್ವನಿವರ್ದಕಗಳನ್ನು ತೆಗೆಸಿ ಹಾಕಲಾಗುತ್ತಿದೆ. ಜಿಲ್ಲೆಯಲ್ಲಿ 40 ಅಪಘಾತ ವಲಯಗಳನ್ನು ಗುರುತಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠ ಅಮರನಾಥ ರೆಡ್ಡಿ ತಿಳಿಸಿದರು.

ಬಾಗಲಕೋಟೆಯಲ್ಲಿಯೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳ ಮೇಲೆ ನಿಗಾ ಇಡಲಾಗಿದೆ. ಟ್ರಾಫಿಕ್‌ ಸಿಗ್ನಲ್‌ ಅಳವಡಿಸಲಾಗಿದೆ.